Tuesday, October 25, 2011

ಈ ಅನಿಷ್ಟ ಪದ್ಧತಿ ಇಲ್ಲಿಗೆ ಕೊನೆಯಾಗಲಿ.

ಕೋಲಾರದ ಕೆ ಜಿ ಎಫ್  ಚಿನ್ನದ ಗಣಿ ಹೊತ್ತಿರುವ ಊರು.ಒಂದು ಕಾಲದಲ್ಲಿ ಇಲ್ಲಿ ದುಡಿಯುತಿದ್ದ ಒಂದಷ್ಟು ದಲಿತ ಮಂದಿ ರಾಶಿ ರಾಶಿ ಚಿನ್ನ ಹೊರತೆಗೆಯುತಿದ್ದರು ಹಾಗು ಗಣಿಯಾಳದಲ್ಲಿ ಅದಿರನ್ನು ಲೋಡ್ ಮಾಡುವ ಕಾಯಕವು ಇವರದಾಗಿತ್ತು.ಇದೆಲ್ಲದರ ಜೊತೆ ಜೊತೆಗೆ ಇವರನ್ನು ಅವತ್ತಿನಿಂದಲೇ ಪಾಯಿಖಾನೆ ಕ್ಲೀನ್ ಮಾಡುವ ಕೆಲಸಕ್ಕೂ ತೊಡಗಿಸಲಾಗುತಿತ್ತು.ಯಾವಾಗ ಚಿನ್ನದ ಗಣಿ ಮುಚ್ಚಲ್ಪಟ್ಟಿತು ಆವಾಗ ಈ ಜನಗಳಿಗೆ ಒಳಚರಂಡಿ ವ್ಯವಸ್ಥೆ ಹೊಂದಿರದ ಕೆ ಜಿ ಎಫ್ ಪಟ್ಟಣದಲ್ಲಿ ಜೀವನಕ್ಕೆ ಆಧಾರ ದುಡಿಮೆಯಾಗಿದ್ದು ಮಲಹೊರುವ ಪದ್ಧತಿ ಒಂದೆ.ತೋಟಿಗರು ಎಂದು ಕರೆಯಲ್ಪಡುವ ಈ ಜನಗಳಿಗೆ ಬೇರೆ ಉದ್ಯೋಗ ಮಾಡಲು ಅವಕಾಶವೇ ಇಲ್ಲದಂತೆ ವ್ಯವಸ್ಥೆ ನಿರ್ಮಾಣವಾಗಿದೆ.ಈ ವ್ಯವಸ್ಥೆ  ಇಂದ ಅದೆಷ್ಟೋ ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ.ಹಲವಷ್ಟು ಜನ ಪ್ರಾಣ ಕಳಕೊಂಡಿದ್ದಾರೆ,ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ, ಸರ್ಕಾರಕ್ಕೂ,ಸ್ಥಳೀಯ  ಆಡಳಿತ ವ್ಯವಸ್ಥೆಗೂ ಈ ವಿಷಯದಲ್ಲಿ ಮಾಹಿತಿಗಳಿವೆ,ಸುಧಾರಿಸುವ ನಿಟ್ಟಿನಲ್ಲಿ ಅವಘಡಗಳು ನಡೆಯದಂತೆ ಎಚ್ಚರವಹಿಸುವ ಹಾಗು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ  ಹಲವು ಭರವಸೆ ದೊರಕಿದ್ದರು ಅವುಗಳು ಭರವಸೆಗಷ್ಟೇ ಸೀಮಿತವಾಗಿದೆ ಅನ್ನುವದನ್ನು ನಿನ್ನೆ  ನಡೆದ ಘಟನೆ ಸಾಕ್ಷ ಒದಗಿಸುತ್ತಿದೆ.

ಹೌದು ಈ ವಿಷ ವ್ಯವಸ್ಥೆಗೆ ನಿನ್ನೆ ಮೂವರ ಬಲಿ ಆಗಿದೆ. ನಿನ್ನೆ ಬಲಿ ಆದವರು ಕೆ.ಜಿ.ಎಫ್ ನಲ್ಲಿ ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿಯ ನಾಯಕರಾದ ಪ್ರಸಾದ್(ಕುಟ್ಟಿ) ನರೇಂದ್ರ ಕುಮಾರ್ ಮತ್ತು ರವಿ . ಇವರುಗಳು ಮಲಗುಂಡಿಯನ್ನು ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಮಲದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವುದು.ಈ ಘಟನೆ ಹಿನ್ನಲೆಯಲ್ಲಿ ಈ ಹಿಂದೆ  ಆಗಸ್ಟ್ ೨೯ ರಂದು ಕೆಜಿಎಫ್‌ನ ಅಧ್ಯಕ್ಷ ಪಿ. ದಯಾನಂದ್ ಹಾಗೂ ಆಯುಕ್ತ ಬಾಲಚಂದರ್ ಸೇರಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಕೆಜಿಎಫ್‌ನಲ್ಲಿ ಮಲಹೊರುವ ಪದ್ಧತಿ ಇದೆ ಎಂದು ಮಾಧ್ಯಮಗಳು ಹೇಳುತ್ತಿರುವುದೆಲ್ಲಾ ಸುಳ್ಳು ಎಂದೂ ಅವು ಅಮಾಯಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದೂ ಹೇಳಿದ್ದನ್ನು ನೆನಪಿಸಿಕೊಳ್ಳೋಣ.ಹಾಗೆ ನೋಡಿದಲ್ಲಿ ಇದು ಮೊದಲ ಬಾರಿಯ ಅವಘಡ ಅಲ್ಲ. ಕೆಲವು ತಿಂಗಳುಗಳ ಹಿಂದೆ ಸಕಲೇಶಪುರದಲ್ಲಿ ಮಹಾದೇವ ಮತ್ತು ಅರ್ಜುನ ಎಂಬುವವರು,ಕೋಲಾರದ ನಾಗರಾಜು ಮತ್ತು ಬಾಬು ಹೀಗೆ ಬಳಷ್ಟು ಪಟ್ಟಿಯನ್ನು ಮಾಡಬಹುದು.ಈ ಘಟನೆಗಳೆಲ್ಲ ನಡೆದಾಗ ಒಂದಷ್ಟು ಪರಿಹಾರ, ಪುನರ್ವಸತಿ ಎಂದು  ಮಾತನಾಡುವ ಆಡಳಿತ ಮಂದಿ ಈ ನಿಟ್ಟಿನಲ್ಲಿ ಕಾನುಬಹಿರವಾಗಿ ನಡೆಯುವ ಇಂತಹ ಚಟುವಟಿಕೆಗಳಿಗೆ ಇತಿಶ್ರೀ ಹಾಡುವಲ್ಲಿ ಮುಂದಾಗದಿರುವದು ವಿಪರ್ಯಾಸ.

1993ರಲ್ಲಿ ಜಾರಿಗೆ ಬಂದ ಸಫಾಯಿ ಕರ್ಮಾಚಾರಿಗಳ ಉದ್ಯೋಗ ಹಾಗೂ ಒಣಪಾಯಖಾನೆ (ನಿಷೇಧ) ಕಾಯ್ದೆಯು ಮಲಹೊರುವ ಪದ್ಧತಿಯನ್ನು ನಿಷೇಧಿಸಿದೆ.ಯಾರು ಈ ಕೆಲಸ ಮಾಡಿಸುತ್ತಾರೋ ಅಂತವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಆದರೆ ಈ ಕಾಯ್ದೆ ಜಾರಿಗೊಳಿಸಿ ೧೮ ವರ್ಷಗಳಾದರೂ ಈ ಕಾನೂನಿನಡಿ ಒಬ್ಬನೇ ಒಬ್ಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿರುವುದಾಗಲೀ, ಶಿಕ್ಷೆ ವಿಧಿಸಿರುವುದಾಗಲೀ ಇಲ್ಲ. ಈ ಕಾಯ್ದೆಯ ಪ್ರಕಾರ ಒಣಪಾಯಖಾನೆಗಳನ್ನು ಇಟ್ಟುಕೊಳ್ಳುವುದಾಗಲೀ ನಡೆಸುವುದಾಗಲೀ ಶಿಕ್ಷಾರ್ಹ ಅಪರಾಧ. ಹಾಗೆಯೇ ಮಲವನ್ನು ಪಾಯಖಾನೆಗಳಿಂದ ನೇರವಾಗಿಯಾಗಲೀ, ಗುಂಡಿಗಳಿಂದ ಸಾಗಿಸುವುದಾಗಲೀ ಅಪರಾಧ ಎನಿಸಿಕೊಳ್ಳುತ್ತದೆ. ಒಳಚರಂಡಿ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಪಾಯಖಾನೆಗಳನ್ನು ಸೆಪ್ಟಿಕ್ ಟ್ಯಾಂಕ್‌ಗಳಿಗೆ ಜೋಡಿಸಿರತಕ್ಕದ್ದು. ಇದರಿಂದ ಹೀರುಯಂತ್ರಗನ್ನು ಬಳಸಿ (ಸಕಿಂಗ್ ಮಷೀನ್) ಮಲವನ್ನು ತೆಗೆಯಲು ಸಾಧ್ಯವಾಗುತ್ತದೆ ಎನ್ನುವ ಆಶಯ ಕಾಯ್ದೆಯಲ್ಲಿದೆ.ಆದರೆ ಈ ಕಾಯ್ದೆಯ ಒಂದು ಅಂಶ  ಕೂಡ ಜಾರಿಯಾಗದಿರುವದು ವಿಪರ್ಯಾಸ.ಎಲ್ಲ ಕ್ಷೇತ್ರದಲ್ಲೂ ತಂತ್ರಜ್ಞಾನ ಬೆಳೆಯುತ್ತಿದೆ,ಆದರು ಈ ವಿಷಯದಲ್ಲಿ ಇನ್ನು ಕೂಡ ಮಾನವ ಶಕ್ತಿ ಬಳಕೆ ಹಿಂದಿನಂತೆ ನಡೆಯುತ್ತಿದೆ ಎಂಬುದು ಸತ್ಯ. ಸಿಲಿಕಾನ್ ಸಿಟಿ ಅಂತ ತಂತ್ರಜ್ಞಾನ ನಿಟ್ಟಿನಲ್ಲಿ ಹೆಸರು ಪಡೆದ ಬೆಂಗಳೂರಿಗೆ ತಾಗಿ ಕೊಂಡೆ ಇರುವ ಕೆ ಜಿ ಎಫ್ ನಲ್ಲೂ ಇಂತದ್ದು ನಡೆಯುತ್ತಿದೆ ಎಂದರೆ ವ್ಯವಸ್ತೆಗೆ ಸಲ್ಲುವ ನಾಚಿಕೆಗೇಡು. ಹಾಗೆ ನೋಡಿದಲ್ಲಿ ಇದು ಬರಿಯ ಕೆ ಜಿ ಎಫ್ ಗೆ ಸಿಮೀತವಾಗಿದ್ದಲ್ಲ , ಬಹಳ ದಿನಗಳಿಂದ ಗೆಳೆಯ ದಯಾನಂದ್ ಮತ್ತು ಬಳಗ ದವರು ಈ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಈ ಪದ್ಧತಿ ಜೀವಂತ ವಿದೆ ಎಂಬುದನ್ನು ಪುರಾವೆ ಸಮೇತ ತೋರಿಸುತಿದ್ದಾರೆ.ಈ ಅನಿಷ್ಟ ಪದ್ದತಿಗಳು ಸಂಪೂರ್ಣ  ತೊಲಗಲೇ ಬೇಕಾಗಿದೆ, ಇಲ್ಲದಲ್ಲಿ ನಮ್ಮನ್ನು ನಾವು ಅಸಹ್ಯಿಸಿಕೊಂಡು ಸಮಾಜದ ಒಂದು ವರ್ಗ ತುಳಿತಕ್ಕೆ ಒಳಗಾಗುವದನ್ನು ನೋಡುತ್ತಾ ಕೈ ಕಟ್ಟಿ ಕುತಿರುವದು ಕಷ್ಟ.

ದೀಪಾವಳಿಯ ಈ ದಿನದಂದು ಏನಾದರು ವಿಶೇಷ ಬರೆಯಬೇಕೆಂದಿದ್ದೆ. ಸಾವಿನ ಸುದ್ದಿ ಬರೆಯಬೇಕಾಗಿ ಬಂದಿದೆ. ಅಷ್ಟಕ್ಕೂ ದೀಪದಿಂದ ದೀಪ ಹಚ್ಚಿ ಮಾನವೀಯತೆ ಮೆರೆಯುವ ಹಬ್ಬ ,ಹೀಗೆ ಭಾವಿಸಿ ದೀಪಾವಳಿ ಆಚರಿಸುತ್ತಿರುವ ನನಗೆ  ಇದೆ ಸರಿ ಅಂದುಕೊಂಡು ಬರೆದಿದ್ದೇನೆ ಅನ್ನುವದಕ್ಕಿಂತ ಮಾಹಿತಿಗಳನ್ನ ನಮೂದಿಸಿದ್ದೇನೆ.ಇನ್ನಾದರೂ ಸರ್ಕಾರ ಕಣ್ಣು ತೆರೆಯಲಿ ಆ ಮೂಲಕ ಈ ಪದ್ಧತಿ ಇಂದ ಶೋಷಣೆಗೊಳಗಾದವರ ಬಾಳಿನಲ್ಲಿ ಬೆಳಕು ಮೂಡಲಿ. ಆ ಮೂಲಕ ಸತ್ತವರ ಸಾವುಗಳು ಚಿರಾಯುವಾಗಲಿ,ಈ ಅನಿಷ್ಟ ತೊಲಗಿಸುವ ಬಗ್ಗೆ ದುಡಿಯುತ್ತಿರುವ ಎಲ್ಲರಿಗೂ ಸಫಲತೆ ಸಿಗಲಿ ಎಂಬುದನ್ನು ಬಯಸೋಣ.
( ಮಾಹಿತಿಗಳನ್ನು ಸಂಡೆ ಇಂಡಿಯನ್ ಪತ್ರಿಕೆ ಇಂದಲೂ ಪಡೆದು ಇಲ್ಲಿ ಬಳಸಿಕೊಂಡಿರುವೆ,ಈ ಮೂಲಕ ಅವರಿಗೆ ನನ್ನದೊಂದು ಕೃತಜ್ಞತೆ ಇದ್ದೆ ಇರುತ್ತದೆ )
ನಿಮ್ಮವ..................
ರಾಘವೇಂದ್ರ ತೆಕ್ಕಾರ್ 

No comments:

Post a Comment