Friday, October 21, 2011

ಅಂಗಡಿ ರಂಗ

ಸಹೋದರ ವಿಘ್ನೇಶ್ ತೆಕ್ಕಾರ್ ಲೇಖನಿ ಇಂದ ಮೂಡಿಬಂದ ಸಣ್ಣ ಕಥೆ:-

ಗಾಜಿನ ಡಬ್ಬದ ತಳದಲ್ಲಿ ನಾಲ್ಕಾರು ಸಕ್ಕರೆ ಮಿಟಾಯಿಗಳು,ಪಕ್ಕದ ಡಬ್ಬದಲ್ಲಿ ಹರುಕು ಮುರುಕು ಅಂದ ಕಳೆದುಕೊಂಡ ಚಕ್ಕುಲಿಗಳು , ಮತ್ತೊಂದು ಡಬ್ಬದಲ್ಲಿ ಎಂದೋ ತಂದಿಟ್ಟ ಬಣ್ಣ ಕಳೆದುಕೊಂಡ ಪೆಪ್ಪರ್ ಮಿಟಾಯಿಗಳು , ಸೂರಿನ ಅಡ್ಡಕ್ಕೆ ತೂಗಿಟ್ಟ ಬಾಳೆ ಗೊನೆಯಲ್ಲಿ ನೇಣು ಹಾಕಿಕೊಂಡ ಒಂದು,ಎರಡು ಮತ್ತು ಮತ್ತೊಂದು ,ಒಟ್ಟು ಮೂರೂ ಕದಳಿ ಹಣ್ಣುಗಳು,ಹಿಂದಿನ ಗೋಡೆಗೆ ಮೊಳೆಹೊಡೆದು ಕಟ್ಟಿದ ಹಗ್ಗದಲ್ಲಿ ಹಿಡಿದ ದೂಳಿನಲ್ಲೂ ಮಿರ ಮಿರ ಮಿಂಚುವ ಪಾನ್ ಪರಾಗ್ , ಗುಟ್ಕಾ ಮಾಲೆಗಳು , ಒಂದು ಕಾಲು ಮುರಿದ ಟೇಬಲಿನ ಮೂಲೆಯಲ್ಲಿನ ಪೆಟ್ಟಿಗೆ ಯಲ್ಲಿ ಇನ್ನೇನು ಚಲಾವಣೆಯ ಕೊನೆ ಅಂಚಿನಲ್ಲಿರುವ ಒಂದೆರಡು ನಾಣ್ಯಗಳು , ಪೆಟ್ಟಿಗೆ ಪಕ್ಕದಲ್ಲಿಟ್ಟ ಬಾಕ್ಸಿನಲ್ಲಿ ತುಟಿಗೆ ಚುಂಬಿಸಿ ಮೋಕ್ಷಪಡೆಯಲು ಹಪಹಪಿಸುವ ಗಣೇಶ ಬೀಡಿಗಳು,ಇನ್ನೊಂದು ಮೂಲೆಯಲ್ಲಿ ದಶಕಗಳಿಂದ ಮುಕ್ತಿ ಪಡೆಯದೇ ಬಿದ್ದ ಗೋಲಿ ಸೋಡಾ ಬಾಟಲಿಗಳು , ಇವೆಲ್ಲದರ ನಡುವೆ ಮುತ್ತಾತನ ಕಾಲದ ಮರದ ಕುರ್ಚಿಯಲ್ಲಿ ವಿರಾಜಮಾನನಾಗಿರುವ ಅದರುವ ಅದರಗಳ ರಂಗಜ್ಜ.ಕ್ಷಮಿಸಿ ,ಕ್ಷಮಿಸಿ , ಎಪ್ಪತೈದು ವರ್ಷ ಪ್ರಾಯದ ನವ ತರುಣ ರಂಗ. ಅಯ್ಯೋ ಇದೇನಿದು ಈ ಹಣ್ಣು ಹಣ್ಣು ಮುದುಕನನ್ನು ಸರಿ ವಿರೋದ ಶಬ್ದಗಳಿಂದ ಪರಿಚಿಸುವದು ನಿಮಗಿಷ್ಟವಾಗಿರಲಿಕ್ಕಿಲ್ಲ..ಆದರೆ ರಂಗನಿಗಂತೂ ಆನಂದವಾದಿತು.ಇದು ನಮ್ಮೂರು ಹರಿಪುರದಲ್ಲಿ ಮೂರೂ ದಶಕಗಳಿಗಿಂತಲೂ ಹೆಚ್ಚು ವರುಷಗಳಿಂದ ನೆಲೆ ನಿಂತಿದ್ದ ವ್ಯಾಪಾರಿ ರಂಗನ ಚಿತ್ರಣ.
                
ಅದೊಂದು ಮುಸ್ಸಂಜೆ ನಾನು ನನ್ನೂರು ಹರಿಪುರದ ಮನೆಯಲ್ಲಿ ಏನೋ ಗಿಚುತ್ತಾ ಕೂತಿದ್ದೆ . ನನಗಂತೂ ಕಥೆ.ಕವನಗಳನ್ನು ಬರೆಯುವ ಹುಚ್ಚು.ಕೈಗೆ ಸಿಕ್ಕಿದ ಕಾಗದ ಚೂರಿನಲ್ಲೊಂದು ಶಾಸನ ಬರೆದಿಡುವ ಕೆಟ್ಟ ಬುದ್ದಿ ಎಂದು ನೀವೆ೦ದರೂ, ಒಳ್ಳೆಯ ಹವ್ಯಾಸ ನನ್ನದು.ಆ ದಿನವೂ ನನ್ನ ಮೇಜಿನ ಅಂಚಿನಲ್ಲಿದ್ದ ಕಾರ್ಡ್ ನಲ್ಲೊಂದು ಕವನ ಬರೆಯುವ ಮನಸ್ಸಾಯಿತು. ಮುಗಿಲಿನ ಬಗ್ಗೆ ಕವನ ಜೀವ ತಳೆಯಲು ಆರಂಭಿಸಿದಾಗ ಪಕ್ಕನೆ ಕಾರ್ಡ್ ಅನ್ನು ತಿರುಗಿಸಿ ನೋಡುತ್ತೇನೆ, ಅದು ನಮ್ಮೂರು ವ್ಯಾಪಾರಿ ಪುಣ್ಯತಿಥಿಯ ಆಮಂತ್ರಣ ಪತ್ರಿಕೆ.ರಂಗ ತೀರಿಕೊಂಡ ಎಂಬುದಾಗಿ ಕೆಲ ವಾರದ ಹಿಂದಷ್ಟೇ ಮನೆ ಇಂದ ಫೋನಿನ ಮೂಲಕ ತಿಳಿದಾಗಲೇ ಮನಸ್ಸಿಗೆ ಬೇಸರವಾಗಿತ್ತು.ರಂಗನ ಜೀವನವನ್ನು ಹತ್ತಿರದಿಂದ ನೋಡಿದವರಿಗೆ ಆತನ ಮರಣ ಖಂಡಿತ ಬೇಸರವನ್ನುಂಟು ಮಾಡುತ್ತದೆ.ರಂಗ ಬದುಕಿದ್ದ ರೀತಿ ಹಾಗಿತ್ತು.ಆತ ಅನುಭವಿಸಿದ ನೋವು,ಆತನ ದೇಶ ಭಕ್ತಿ , ಸ್ವಾವಲಂಬನೆ ಎಂತವರನ್ನು ಸೆಳೆಯುವಂತದ್ದು.ನನ್ನ ಮನದ ಮೂಲೆಯಲ್ಲಿ ರಂಗನ ಪುಣ್ಯ ತಿಥಿಯ ಕಾರ್ಡಿನ ಮೇಲೆ ಕವನ ಗೀಚಿದ್ದಕ್ಕೆ ಖಿನ್ನತೆ ಎನಿಸಿದರೂ, ಆತನ ಜೀವನ ಕಥೆಯನ್ನು ನಿಮ್ಮ ಮುಂದಿಡುವ ಯೋಚನೆ ಹುಟ್ಟಿದ್ದು ಆ ಕ್ಷಣದಲ್ಲೇ.
                    
ಹರಿಪುರ ಎಂಬ ಹೆಸರು ನಮ್ಮೂರಿನ ದೇವರಾದ ಹರಿಹರೇಶ್ವರ ನೆಲೆ ನಿಂತ ತಾಣವಾದ್ದರಿಂದ ಬಂದಿದೆ ಎಂಬುದು ಪ್ರತೀತಿ.ಅತ್ತ ಕರಾವಳಿಯು ಅಲ್ಲ, ಮಲೆನಾಡು ಅಲ್ಲ,ಎಂಬಂತೆ ಭೌಗೋಳಿಕವಾಗಿ ರೂಪಿತವಾದ ಐನೂರರಿಂದ ಆರುನೂರರವರೆಗೆ ಜನಸಂಖ್ಯೆಯಿಂದ ಕೂಡಿದ ಹಳ್ಳಿ. ಭತ್ತದ ಗದ್ದೆಗಳು, ಮುಗಿಲೆತ್ತರಕ್ಕೆ ಎದ್ದು ನಿಂತ ಅಡಿಕೆ ತೋಟಗಳು, ಅಲ್ಲಲ್ಲಿ ತೊಂಡೆಕಾಯಿ ಚಪ್ಪರಗಳು,ಕುಂಬಳಕಾಯಿ,ಹಾಗಲಕಾಯಿ ಬೀಳುಗಳು,ಗೆಣಸು,ಮರಗೆಣಸುಗಳ ಸಾಲುಗಳು,ವೀಳ್ಯದೆಲೆ ಬೀಳುಗಳನ್ನು ಮೈಯೆಲ್ಲಾ ಸುತ್ತಿಕೊಂಡು ಆಕಾಶದೆಡೆಗೆ ದಿಟ್ಟವಾಗಿ ನಿಂತ ಕೋಲುಗಳು ಹಳ್ಳಿಗರ ಕೃಷಿ ಆಧಾರಿತ ಜೀವನವನ್ನು ಬಿಂಬಿಸುತ್ತದೆ.ಹಲವು ಸಾಧಕರಿಗೆ ಶಿಕ್ಷಣವನ್ನಿತ್ತ ಅನುದಾನಿತ ಖಾಸಗಿ ಶಾಲೆಯೊಂದು ಸುಮಾರು ಅರವತ್ತು ವರ್ಷಗಳಿಂದ ಹರಿಹರಪುರದ ವಿದ್ಯಾದೇಗುಲವಾಗಿದೆ.ಕಾಡುಗಲ್ಲುಗಳನ್ನೋಳಗೊಂಡ ಪಕ್ಕಾ ಮಣ್ಣಿನ ರಸ್ತೆಯಲ್ಲಿ ತೆವಳುತ್ತಾ ಕೆಂಪು ದಟ್ಟ ದೂಳನ್ನೆಬ್ಬಿಸುತ್ತ ದಿನಕ್ಕೆರಡು ಬಾರಿ ಬಂದು ಹೋಗುವ ಶ್ರೀ ವೀರಭದ್ರ ಟ್ರಾವೆಲ್ಸ್ ಹರಿಹರಪುರದ ಜನರನ್ನು,ತರಕಾರಿ ಮೂಟೆಗಳನ್ನೂ, ಆಡು ಕುರಿ ಕೋಳಿಗಳನ್ನು ಸಾಗಿಸುವ ಏಕೈಕ ಸಾರಿಗೆ.ಮಲೆನಾಡ ಕೊರಕಲುಗಳಲ್ಲಿ ಹುಟ್ಟಿ ಹರಿಹರಪುರದ ಮೂಲಕ ಹರಿಯುವ ತೊರೆಯೊಂದು ಜನ-ದನಕರುಗಳ ಬಾಯಾರಿಕೆ ತಣಿಸುವ ಜಲ ಸಂಪನ್ಮೂಲ. ಯುವಕ ಯುವತಿಯರ ಪ್ರಗತಿಯ ಸಲುವಾಗಿ ಒಂದೆರಡು ಮಂಡಳಿಗಳು ನಮ್ಮ ಹರಿಹರಪುರದಲ್ಲಿವೆ.ವರ್ಷಕ್ಕೊಮ್ಮೆ ನಡೆಯುವ ನಾಟಕ, ಯಕ್ಷಗಾನಗಳು ಮಂಡಳಿಗಳು ಜೀವಂತವಾಗಿರುವದಕ್ಕೆ ಸಾಕ್ಷಿಗಳಾಗಿವೆ.ಹೀಗೆ ಹರಿಹರಪುರದ ಅಲ್ಪ ಸೌಲಭ್ಯಗಳ ನಡುವೆ ಪಕ್ಕನೆ ಮನೆಗೆ ನೆಂಟರು, ಬಂಧುಗಳು ಬಂದರೆ ಬೇಕಾಗುವ ಸಕ್ಕರೆ, ಚಾ ಪುಡಿ, ಉಪ್ಪು,ಎಣ್ಣೆ,ಸಿಗರೇಟು,ಗುಟ್ಕಾಗಳನ್ನೂ ಒದಗಿಸುವದು ನಮ್ಮ ರಂಗನ ಅಂಗಡಿ.
                          
ಶಾಲೆಯ ಮೆಟ್ಟಿಲನ್ನು ಹತ್ತಿದವನಲ್ಲ ರಂಗ. ಬದಲಾಗಿ ಊರ ಮಕ್ಕಳೆಲ್ಲ ದೂರದ ಊರುಗಳಿಗೆ ಕಲಿಕೆಗಾಗಿ ಹೊರಟಾಗ ರಂಗ ಕಾಡು ಮೇಡುಗಳಲ್ಲಿ ಅಲೆಯುತ್ತಾ ಕಾಡು ಪಾರಿವಾಳ,ಅಳಿಲು,ಕೋತಿ ಮರಿಗಳನ್ನು ಶಿಕಾರಿ ಮಾಡುತಿದ್ದ. ತಂದೆ ಚಿಂಕ್ರನಿಗಂತೂ ಮಗನ ಶಿಕಾರಿಯಿಂದ ದಿನವೂ ಒದಗುವ ಬಗೆ ಬಗೆಯ ಮಾಂಸದಿಂದಾಗಿ ತನ್ನ ಮಗನು ಇತರರಂತೆ ಓದಬೇಕು , ಉದ್ಯೋಗ ಹಿಡಿಬೇಕೆಂಬ ಕನಸೂ ಬೀಳಲಿಲ್ಲ.ಬಾಲ್ಯವನ್ನು ಹೀಗೆ ಕಳೆದ ರಂಗನಿಗೆ ಯವ್ವನದಲ್ಲಿ ಬದುಕಿನ ಆಸರೆಯಾದ ತಂದೆ ಚಿಂಕ್ರನ ವೃತ್ತಿಯಾದ ಗಾರೆ ಕೆಲಸವನ್ನು ಮಾಡಿದವನಲ್ಲ.ಬದಲಾಗಿ ಆಗೆಲ್ಲಾ ಕ್ರಾಂತಿ ಹುಟ್ಟಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮಹದಾಸೆ ರಂಗನಲ್ಲಿ ಮೂಡಿತ್ತು .ಬಿಸಿರಕ್ತದ ರಂಗ ಹರಿಹರಪುರದ ಗಾಂಧೀಯಾಗಿ ಪೋಲಿ -ಪುಡಾರಿಗಳನ್ನೆಲ್ಲ ಒಗ್ಗೂಡಿಸಿ ನಡೆಸಿದ ಸತ್ಯಾಗ್ರಹದಲ್ಲಿ ಪೋಲೀಸರ ಏಟು ತಿಂದ ಸಾಧನೆ ಆತನದ್ದು.ಲಾಟಿ ಏಟು ತಿಂದ ರಂಗನ ಗಾಂಧೀಗಿರಿ ಅಲ್ಲಿಗೆ ಕೊನೆಗೊಂದು ತೋಟದ ಕೆಲಸ , ಗದ್ದೆ ಕೊಯುಲುನ ಸಂದರ್ಭದಲ್ಲಿ ಕೆಲಸ ಹೀಗೆ ಸಣ್ಣ ಪುಟ್ಟ ಕೆಲಸ ಮಾಡುತಿದ್ದನಾದರು ಯಾವ ಕ್ಷೇತ್ರದಲ್ಲೂ ಶಾಶ್ವತನಾಗಲಿಲ್ಲ.ರಂಗನ ವೃತ್ತಿಗಳೆಲ್ಲವು ಕೈ ಸುಟ್ಟುಕೊಂಡವುಗಳೇ, ಅಂತಹ ಕೆಲವು ವೃತ್ತಿಗಳ ಬಗ್ಗೆ ನಿಮಗೆ ಹೇಳಲೇ ಬೇಕು.
                        
ಕೆಲಕಾಲ ರಂಗ ಹರಿಹರಪುರದ ಜನತೆಗೆ ಕಂಕಣ ಭಾಗ್ಯವನ್ನು ಕಲ್ಪಿಸಿಕೊಡುವ ಮಾಡುವೆ ದಲ್ಲಾಳಿಯಾಗಿ ಮೆರೆದ.ಆದರೆ ದಲ್ಲಾಳಿಯಲ್ಲಿ ಮದುವೆಯಾದ ಗಂಡಸರಂತು ತಮ್ಮ ಗಂಡುಬೀರಿ ಹೆಂಡತಿಯರ ಕಾಟ ತಾಳಲಾರದೆ ಸೊಂಟದಲ್ಲೇ ಚೂರಿ ಸಿಕ್ಕಿಸಿಕೊಂಡು ರಂಗನಿಗಾಗಿ ಹರಿಹರಪುರದಲ್ಲಿ ಸುಳಿದಾಡಲು ಶುರು ಮಾಡಿದಂದಿನಿಂದ ಸುಮಾರು ಆರು ವರ್ಷ ಆತನ ಮುಖ ನೋಡಿದ ನೆನಪು ಹರಿಹರಪುರದ ಜನತೆಗೆ ಇಲ್ಲ.
ಮತ್ತೊಂದು ದಿನ ಮುಂಜಾನೆ ಆಗಿನ ಕಾಲದ ಫ್ಯಾಶನ್ ಆಗಿದ್ದ ಕಣ್ಣಿಗೆ ಕಪ್ಪು ಗ್ಲಾಸ್ , ಬಕೇಟು ಪ್ಯಾಂಟು , ಫುಲ್ ಸ್ಲೀವ್ ಶರ್ಟ್ ತೊಟ್ಟು ಹರಿಹರಪುರದ ಬಸ್ ಸ್ಟಾಂಡಿನಲ್ಲಿ ಪ್ರತ್ಯಕ್ಷನಾದ ಎಂದು ನನ್ನ ಶಿಕ್ಷಕರಾದ ರಾಮಕೃಷ್ಣ ಮಾಷ್ಟ್ರು ಹೇಳಿದ ನೆನಪಿದೆ.ಮಾಸ್ಟ್ರೆ, ನಂಗೆ ಮುಂಬೈಯಲ್ಲಿ ದೊಡ್ಡ ಕಂಪೆನಿಯಲ್ಲಿ ಕೆಲಸ ದೊರೆತಿದೆ,ರಜಾದಲ್ಲಿ ನಿಮ್ಮನ್ನೆಲ್ಲ ನೋಡಿಕೊಂಡು ಹೋಗೋಣಾ ಅಂತ ಹೊರಟು ಬಂದೆ ಎಂದು ರಾಮಕೃಷ್ಣ ಮಾಸ್ಟರಿಗೆ ಬಾಲ್ ಪೆನ್ ಒಂದನ್ನು ಕೊಡುಗೆಯಾಗಿ ನೀಡಿದ್ದನಂತೆ. ಪೆನ್ ಕೊಟ್ಟಿದ್ದರಿಂದಲೋ ಏನೋ ಅ ಆ ಇ ಈ ಬಾರದ ರಂಗನಿಗೆ ಕಂಪೆನಿಯಲ್ಲಿ ಉದ್ಯೋಗ ಹೇಗೆ ದೊರಕಿತು ಎಂಬ ವಿಚಾರ ಮಾಸ್ಟರಿಗೆ ಆ ಕ್ಷಣದಲ್ಲಿ ಹೊಳೆಯದಿದ್ದರೂ, ತಿಂಗಳು ಮೂರಾದರು ಊರಲ್ಲೇ ಜಾಂಡ ಹೂಡಿರುವ ರಂಗನನ್ನು ನೋಡಿ ಬೊಂಬಾಯಿ ಕಂಪೆನಿಯ ಬಗ್ಗೆ ವಿಚಾರಿಸಿದ ಮಾಸ್ತರಿಗೆ ತಿಳಿದ ಸತ್ಯವೇನೆಂದರೆ, ರಂಗ ಮಂಗಳೂರಿನ ಹೋಟೆಲೊಂದರಲ್ಲಿ ಕ್ಲೀನರ್ ಆಗಿದ್ದ ಎಂಬುದಾಗಿ.ಆತ ಕೊಟ್ಟ ಪೆನ್ ಕೂಡ ಹೋಟೆಲ್ ಮಾಲಿಕನದ್ದು ಎಂದು ಮಾಸ್ಟ್ರು ನಗುತ್ತಾ ನನ್ನಲ್ಲಿ ಹೇಳಿದ್ದರೊಮ್ಮೆ.
                               
ಹೀಗೆ ಬಹುಕಾಲ ಅದು ಇದು ಎಂದು ಹೊಟ್ಟೆ ಹೊರೆಯಲು ಪ್ರಯತ್ನ ಪಟ್ಟ ರಂಗನಿಗೆ ಕೊನೆಗೆ ಹೊಳೆದದ್ದು ಹರಿಹರಪುರದಲ್ಲೊಂದು ದಿನಸಿ ಅಂಗಡಿ.ಆಗಿನ ಕಾಲದಲ್ಲಿ ತೊರೆದಾಟಿ ನಾಲ್ಕು ಮೈಲು ದೂರದ ರಾಂಪುರದಲ್ಲಿದ್ದ ಕರಿಯ ಶೆಟ್ರ ಮನೆಯಲ್ಲಿದ್ದ ಅಂಗಡಿಗೆ ಸಣ್ಣ ಪುಟ್ಟ ಸಾಮನುಗಳಿಗೂ ಓಡಾಡಬೇಕಾದ ಪರಿಸ್ಥಿತಿ ಹರಿಹರಪುರದಲ್ಲಿತ್ತು.ಮಳೆಗಾಲದಲ್ಲಂತೂ ತೊರೆ ದಾಟಲಾಗದ ಪರಿಸ್ಥಿತಿಯಲ್ಲಿ ಜನರು ಮಳೆಗಾಲದ ಮೊದಲೇ ಮೂರೂ ನಾಲಕ್ಕು ತಿಂಗಳಿಗಾಗುವಷ್ಟು ದಿನ ನಿತ್ಯದ ಸಾಮಾನುಗಳನ್ನು ತಂದಿದಬೇಕಾಗಿತ್ತು . ಈ ಎಲ್ಲಾ ಕಷ್ಟಗಳ ನಡುವೆ ಬೆಳೆದ ರಂಗನ ಯೋಚನೆಗೆ ಊರ ಕೆಲವರ ಪ್ರೋತ್ಸಾಹ ದೊರೆತಾಗ ತನ್ನ ಮನೆಯ ಜಗುಲಿಯನ್ನು ಅಂಗಡಿಯನ್ನಾಗಿ ಪರಿವರ್ತಿಸುವ ನಿರ್ಧಾರಕ್ಕೆ ಬಂದ ರಂಗ.ಬಂಡವಾಳಕ್ಕಾಗಿ ತನ್ನ ತಂದೆಗೆ ಮಡಿಕೆ ಸರಾಯಿ ಕುಡಿಸಿ ಒಂದು ಎಕರೆ ಭೂಮಿ ಮಾರಿ ರಂಗನ ಅಂಗಡಿಯಂತು ಶುರು ಆಯಿತು. 
                              
ಅಂದಿನಿಂದ ಹರಿಹರಪುರದಲ್ಲಿ ಪ್ರಥಮ ದಿನಸಿ ಅಂಗಡಿ ಪ್ರಾರಂಭ ಮಾಡಿ ಜನರ ಕಷ್ಟ ಕಡಿಮೆ ಮಾಡಿದ ರಂಗ ಎಲ್ಲರ ಅಚ್ಚು ಮೆಚ್ಚಿನ ವ್ಯಕ್ತಿಯಾದ. ಸೋಮಾರಿ ಎಂದು ಮೂದಲಿಸುತಿದ್ದವರೆಲ್ಲ ರಂಗನ ಒಡನಾಡಿಗಳಾದರು. ಸುಮಾರು ಆರೇಳು ವರ್ಷಗಳು  ಚೆನ್ನಾಗಿಯೇ ವ್ಯಾಪಾರ ಮಾಡಿದ ರಂಗನಿಗೆ ತನ್ನ ತಂದೆ ಇಂದಲೋ, ಗೆಳೆಯರಿಂದಲೋ , ಏನೋ ಗೊತ್ತಿಲ್ಲ ಸಾರಾಯಿ ಕುಡಿಯುವ ಚಟ ಅಂಟಿಕೊಂಡಿತು.ಅದೇ ಆತನ ಅಳಿವಿನ ಆರಂಭ ಎಂದರು ತಪ್ಪಾಗಲಾರದು.ಸಾರಾಯಿ ಅಮಲಿನಲ್ಲಿಯೇ ಬಂದ ಗಿರಾಕಿಗಳಿಗೆ ಐನೂರು ಗ್ರಾಂ ಬದಲು ಒಂದು ಕೆ ಜಿ , ಒಂದು ಕೆ ಜಿ ಕೇಳಿದವರಿಗೆ ಐನೂರು ಗ್ರಾಂ ತೂಗಿ ಕೊಡುವ ಮಟ್ಟಕ್ಕೆ ಹೋದ ರಂಗ.
ವಾಡಿಕೆಯಂತೆ ಮದುವೆ ಮಾಡಿದರೆ ಸರಿ ಹೋದಾನು ಎಂಬುದಾಗಿ ಎಂಬುದಾಗಿ ಊರಿನವರೇ ಅಲ್ಪ ಸ್ವಲ್ಪ ಹಣ ಒಟ್ಟು ಹಾಕಿ ಮದುವೆಯನ್ನು ಮಾಡಿದರು.ರಂಗನೇನೋ ಕುಡಿತ ಕಡಿಮೆ ಮಾಡಿ ಸಮಯಕ್ಕೆ ಸರಿಯಾಗಿ ಮನೆಗೆ ತಲುಪುತಿದ್ದ. ಆದರೆ ಗಯ್ಯಾಳಿ ಹೆಂಡತಿ ಕಮಲನ ದೆಸೆ ಇಂದ ರಂಗ ಸಂಸಾರದ ಜಂಜಾಟದಲ್ಲಿ ನಲುಗಿ ಹೋದ. ಪ್ರತಿ ದಿನವೂ ಮನೆ ರಣರಂಗವಾಗಿರುತಿತ್ತು.ರಂಗನ ಮನಸ್ಸು ಚನಿಯನ ಸಾರಾಯಿ ಅಂಗಡಿಯತ್ತ ಎಳೆಯಲ್ಪಟ್ಟು ಪುನಹಃ ಕುಡಿತದ ದಾಸನಾದ.ಮದುವೆಯಾಗಿ ವರ್ಷ ಪೂರ್ತಿಯಾಗುವ ಮೊದಲೇ ಕಮಲ ಸಾರಾಯಿ ಅಂಗಡಿ ಚನಿಯನೊಡನೆ ಪರಾರಿಯಾಗಿದ್ದಾಳೆ ಎಂಬ ಸುದ್ದಿ ರಂಗನನ್ನು ಇನ್ನಷ್ಟು ದುರ್ಭಲಗೊಳಿಸಿತು. ಅಂಗಡಿಯ ಸ್ಥಿತಿಯೋ ಹೇಳುವಂತಿರಲಿಲ್ಲ.ತಂದು ಹಾಕಿದ ಮಾಲುಗಳು ಕೊಳೆತರು ಅರಿವಾಗುತ್ತಿರಲಿಲ್ಲ ರಂಗನಿಗೆ. ಗಾಯಕ್ಕೆ ಉಪ್ಪು ಸುರಿವಂತೆ ಹರಿಹರಪುರದಲ್ಲಿ ಇಬ್ರಾಹಿಮ್ ಬ್ಯಾರಿ ಶುರು  ಮಾಡಿದ ಆಲ್ ಮದಿನಾ ಸ್ಟೋರ್ಸ್.ನಮ್ಮ ರಂಗ ಎಂಬ ಪ್ರೀತಿ, ವಿಶ್ವಾಸದಿಂದ ಅಂಗಡಿಗೆ ಬರುತಿದ್ದವರು ಕೂಡ ಇಬ್ರಾಹಿಮ್ ಬ್ಯಾರಿಯ ಅಂಗಡಿ ಕಡೆ ದಾರಿ ಬದಲಾಯಿಸಿದರು.ಹೊಟ್ಟೆಗೆ ಎಣ್ಣೆ ಸುರಿಯಲಾದರು ಸಿಗುತಿದ್ದ ಆದಾಯಕ್ಕೂ ಕುತ್ತು ಬಿತ್ತು.
                                    
ತಂದೆ ಚಿಂಕ್ರನ ಮರಣ ರಂಗನ ಬದುಕಿನಲ್ಲಿ ಮತ್ತೊಮ್ಮೆ ಎದ್ದ ಬಿರುಗಾಳಿ.ತಂದೆಯ ಆಸ್ತಿಯನ್ನು ಮೋಸದಿಂದ ಮಾರಿ ಅಂಗಡಿ ಇಟ್ಟಾಗ ಬೆನ್ನು ಬಗ್ಗಿಸಿ ಹೊಡೆದಾಗ ಕತ್ತಿ  ಹಿಡಿದು ತಂದೆಯನ್ನೇ ಕೊಲ್ಲಲು ಮುಂದಾದ ರಂಗ ಚಿಂಕ್ರ ಸತ್ತಾಗ ಹೆಣದ ಮುಂದೆ ತಲೆ ಬಗ್ಗಿಸಿ ದಿನವಿಡಿ ಕೂತಿದ್ದ.ಆತನನ್ನು ಸಮಾಧಾನ ಪಡಿಸಲು ಮುಂದಾದ ರಾಮಕೃಷ್ಣ ಮಾಸ್ಟ್ರಲ್ಲಿ, ಮಾಷ್ಟ್ರೆ , ಅಪ್ಪ ನನ್ನ ಕೊಂದು, ಬದುಕಿ ಬಿಟ್ಟ, ಎಂದು ಮಂಜಾದ ಕಣ್ಣಿಂದ ಆಕಾಶ ದಿಟ್ಟಿಸುತ್ತಾ ನುಡಿದಿದ್ದನಂತೆ. ಸಾಲು ಸಾಲು ಸೋಲುಗಳಿಂದ ಜರ್ಜರಿತನಾದ ರಂಗ ಕೊನೆವರೆಗೂ ಒಬ್ಬಂಟಿಗನಾಗಿ ಬದುಕಿದ.ಬೆಳಿಗ್ಗೆ ಅಂಗಡಿ ಬಾಗಿಲು ತೆರೆದು ಕೂರುತಿದ್ದ. ಕತ್ತಲಾಗುವವರೆಗೆ ಸುಮ್ಮನೆ ಕೂತೂ ಕಾಲ ದೂಡುತಿದ್ದ, ಗಿರಾಕಿಗಳು ಬಂದು ಯಾವುದಾದರು ಸಾಮಗ್ರಿ ಕೇಳಿದಾಗ ತನಗೆ ಮನಸ್ಸಿದ್ದರೆ ಎದ್ದು ಕೊಡುತಿದ್ದ.ಒಂದು ವೇಳೆ ಮನಸಿಲ್ಲದಿದ್ದರೆ ಯಾವುದಾದರೊಂದು ದಿಕ್ಕಿನತ್ತ ದೃಷ್ಟಿಸುತ್ತಾ ಕುರುತಿದ್ದಾ.ಗಿರಾಕಿಗಳು ಬೊಬ್ಬೆ ಹೊಡೆದು ರಂಪಾಟ ಮಾಡಿದರು ಕದಲುತ್ತಿರಲಿಲ್ಲ.ಒಮ್ಮೊಮ್ಮೆ ರಂಗ ಕೇಳಿದ ಸಾಮಗ್ರಿಗಳ ಬದಲು ತನಗೆ ಕೈಗೆ ಸಿಕ್ಕಿದ ಸಾಮಗ್ರಿಯನ್ನೇ ಗಿರಾಕಿಯ ಮುಖಕ್ಕೆ ಎಸೆಯುತಿದ್ದ.ಒಮ್ಮೆ ಜೀಪಿನಲ್ಲಿ ಯಾವುದೋ ಊರಿಂದ ಬಂದ ಕುಟುಂಬದ ಪುಟ್ಟ ಹುಡುಗಿಯೊಬ್ಬಳು ರಂಗನ ಅಂಗಡಿಗೆ ಬಂದು ಪೆಪ್ಪರ ಮಿಟಾಯಿ ಕೇಳಿದಾಗ ಆ ಹುಡುಗಿಯ ಬೆನ್ನು ಬಗ್ಗಿಸಿ ನಾಲ್ಕು ಗುದ್ದಿದ್ದ.ಅಲ್ಲೇ ಜೀಪಿನ ಬಳಿ ಇದ್ದ ಹುಡುಗಿಯ ಕುಟುಂಬಿಕರು ಹಿಗ್ಗಾ ಮುಗ್ಗ ಹೊಡೆದಿದ್ದರು ಒಂದು ತೊಟ್ಟು ಕಣ್ಣೀರಿಟ್ಟವನಲ್ಲ ರಂಗ.ಹಸಿವಾದರೆ ಅನ್ನ ಬೇಯಿಸಿಕೊಂಡು ತಿನ್ನುತಿದ್ದ.ಇಲ್ಲವಾದರೆ ಪಕ್ಕದ ವಾರಿಜಕ್ಕನ ಅಡುಗೆ ಮನೆಯಲ್ಲಿ ತಿನ್ನಲು ಏನಾದರು ಕೊಡುವವರೆಗೆ ಕುಕ್ಕರುಗಾಲಿನಲ್ಲಿ ಕೂತು ಬಿಡುತಿದ್ದ. 
                                
ಈ ರೀತಿ ಬದುಕಿನುದ್ದಕ್ಕೂ ಎಲ್ಲವನ್ನು ಸೋಲಿನಿಂದಲೇ ಎದುರಿಸಿದ ರಂಗನನ್ನು ನೋಡಿ ಮಾನಸಿಕ ಅಸ್ತಿತ್ವವನ್ನು ಕಳೆದುಕೊಂಡ ಹುಚ್ಚ ಎಂದು ನಾನೆಂದು ಹೇಳಲಾರೆ. ಏಕೆಂದರೆ ರಂಗನ ಬದುಕಿನ ಒಂದೆರಡು ರೋಚಕ ವಿಚಾರಗಳನ್ನು ನೀವು ಕೂಡ ತಿಳಿದರೆ ರಂಗನನ್ನು ಹುಚ್ಚ ಎನ್ನಲು ತಡವರಿಸುತ್ತೀರಿ.ರಂಗ ಬದುಕಿದ್ದಷ್ಟು ವರ್ಷ ಆಗಷ್ಟ್ ಹದಿನೈದರ ಸ್ವಾತಂತ್ರ್ಯೋತ್ಸವ ದಿನದಂದು ಶಾಲಾ ಮಕ್ಕಳಿಗೆ ಪೆಪ್ಪರ್ ಮಿಟಾಯಿ ಹಂಚುವದನ್ನು ಮರೆತವನಲ್ಲ.ದಿನಾ ಬೆಳಿಗ್ಗೆ ರೇಡಿಯೋ ದಲ್ಲಿ ಪ್ರಸರವಾಗುತಿದ್ದ ವಾರ್ತೆಗಳನ್ನು ರಂಗ ತಪ್ಪದೆ ಕೇಳುತಿದ್ದ, ಇನ್ನೊಂದು ರೋಚಕ ಸಂಗತಿ ಎಂದರೆ ರಂಗನನ್ನು ಮಕ್ಕಳೇನಾದರು ರಂಗಜ್ಜ ಎಂದು ಕರೆದರೆ ಸಿಡುಕುತ್ತಾ,ನಾನೇನೂ ಅಜ್ಜನಲ್ಲ ಎಂದು ಕೈಗೆ ಸಿಕ್ಕ ವಸ್ತುವನ್ನು ಎಸೆಯುತಿದ್ದ.ಅದ್ದರಿಂದ ನಾನಾಗಲೇ ರಂಗನನ್ನು ತರುಣ ಎಂದು ಪರಿಚಯಿಸಿದ್ದು.
                          
ರಂಗನು ಕೂಡ ವಿದಿಯಾಟದಲ್ಲಿ ಪುನಹಃ ಸೋತ.ಈ ಸೋಲು ರಂಗನ ದೃಷ್ಟಿಯಲ್ಲಿ ಗೆಲುವು.ತಂದೆ ತೀರಿಕೊಂಡಾಗ ಬದುಕಿ ಬಿಟ್ಟೆ ಎಂದ ರಂಗ ಅದೊಂದು ದಿನ ತಾನು ಕೂಡ ಅಂಗಡಿಯ ಗಲ್ಲಾದ ಮೇಲೆ ಬದುಕಿಬಿಟ್ಟ.ಹಿಂದೂ ಮುಂದೂ ಇಲ್ಲದ ರಂಗನ ಮದುವೆ ಮಾಡಿಸಿ ಕೂಪಕ್ಕೆ ದೂಡಿದ ಊರವರ ನೇತ್ರತ್ವದಲ್ಲಿ ಆತನ ಅಂತಿಮ ಕ್ರಿಯೆಗಳು ನಡೆದವು. ಇವತ್ತಿಗೂ ನನಗೆ ಹರಿಹರಪುರದ ಬಸ್ ಸ್ಟ್ಯಾಂಡ್ ನತ್ತ ನಡೆಯುವಾಗ ರಸ್ತೆ ಬದಿಯಲ್ಲಿ ರಂಗನ ನೆನಪಿಗಾಗಿ ಉಳಿದಿರುವ ಅಂಗಡಿಯ ಕಟ್ಟಡ ಆತನ ಬದುಕಿನ ಪುಟಗಳನ್ನೂ ತೆರೆದಿಟ್ಟಂತೆ ಭಾಸವಾಗುತ್ತದೆ,ನಾನೊಮ್ಮೆ ರಂಗನನ್ನು ರಂಗಜ್ಜ ಎಂದಾಗ ಕೈಯಲ್ಲಿದ್ದ ಕೋಲನ್ನು ನನ್ನತ್ತ ಎಸೆದಾಗ ಓಡಿ ಕೆಸರು ಗುಂಡಿಯಲ್ಲಿ ಬಿದ್ದ ನೆನಪು ಚಿಗುರೊಡೆಯುತ್ತದೆ.ಮತ್ತೊಮ್ಮೆ ರಂಗನೆ ಕೋಲು ಹಿಡಿದುಕೊಂಡು ನನ್ನ ಅಟ್ಟಿಸಿಕೊಂಡು ಬಂದಂತೆ ಭಾಸವಾಗುವದು ಸುಳ್ಳಲ್ಲ.

******************************************

No comments:

Post a Comment