Thursday, April 26, 2012

ನನ್ನೊಳಗೆ ಇಬ್ಬರು.

ಅವಳ ಮುಂದೆ
ನಾ ನಿಂತಾಗ
ನಾನೊಬ್ಬನೆ ಆದರೂ
ನನ್ನೊಳಗೆ ಇಬ್ಬರು,
ಭಾವದ ನೆರಳು ಬೆಳಕಿನಾಟ.

ಅದುಮಿಟ್ಟ ಮಾತುಗಳು
ನನ್ನೊಳಗೆ ಪಿಸುಗುಡುವಾಗ
ತುಟಿಯು ಕದವಿಕ್ಕಿ ಬೀಗಜಡಿದು
ಅಂಚಿಗೆ ಬಂದ ನುಡಿಗಳನ್ನ
ಮತ್ತೆ ನನ್ನೊಳಗೆ ದೂಡುತ್ತಲಿತ್ತು
ಮುಖದಿ ನಸುನಗೆಯ ಚೆಲ್ಲಿ.

ಆ ಕ್ಷಣದಲಿ ನಾನು ನನ್ನೊಳು
ಹೊರಗೊಬ್ಬ ಒಳಗೊಬ್ಬ.

ನಾನು?ಅಂದರಾರು?
ಕೇಳುತ್ತಲಿದ್ದ ಒಳಗಿನಾತ
ಅದರ ಗ್ರಹಿಕೆ ಇದ್ದಂತಿರಲಿಲ್ಲ ನನಗೆ
ನಸುನಗುತ್ತಲೆ ಮಾತರಳಿಸುತಿದ್ದೆ
ಒಂದಕ್ಕೊಂದು ಸಂಬಂಧವೆ ಇಲ್ಲದ
ಶಬ್ದಗಳ ಹಾರವ ಪೋಣಿಸುತ.

ನಾನೆಂದರೆ ಎರಡೆ
ಅಥವಾ ಅವೆರಡು ಸೇರಿ ನಾನೆ?

ನಾ ಮನದ ಸಪ್ತಸಾಗರವ ದಾಟಬೇಕು,
ಸೂತ್ರ ಹರಿದ ಪಟದಂತೆ ನಭಕ್ಕೆ ನೆಗೆಯಬೇಕು
ಮನದೊಳಗೆ ಒತ್ತಿಟ್ಟ ಮಾತುಗಳ
ಅವಳಿಗೊಪ್ಪಿಸಿ ಮೌನವಾಗಬೇಕು
ನನ್ನೆರಡು ಒಂದಾಗಿ ನಾನು ನಾನಾಗಬೇಕು.

ಒಳಗಿನಾತ ಪಿಸುಗುಡುತಿದ್ದ

ನೀ ಮನದ ನೆರಳ ನೀಗಿ
ಬೆಳಕ ಎದುರುಗೊಂಡೀಯೆ?
ಅಂದುಕೊಂಡೆ ಬಿಸುಟ ದೇಹವ
ಸಡಿಲಿಸಿ ನುಡಿಯೊಪ್ಪಿಸಿ ಹಗುರಾಗಿಸಬೇಕು
ನಾನೊಂದಾಗಿ ಅವಳೊಡೆ ಸೇರಿ
ಮತ್ತೆರಡಾಗಿ ಒಂದಾಗಬೇಕೆಂದು.

1 comment:

  1. ಮನದ ದ್ವಂದಗಳ ಮೇಲೆ ಬೆಳಕು ಚೆಲ್ಲಿದಂತಿದೆ ಗೆಳೆಯ ನಿಮ್ಮ ಕವಿತೆ. ಆಸ್ವಾದಿಸಿದೆ ಪದಗಳ ಮೋಡಿಯನ್ನು.

    ReplyDelete