Sunday, April 1, 2012

ಮೊದಲ ಚಾರಣ ಅನುಭವ ಉಣಿಸಿದ ಕುಮಾರಪರ್ವತ

ಕಾಡ ಪ್ರವೇಶಿಸಿದ ದಿನದ ಬೆಳಗು ಪ್ರಕರ ಬಿಸಿಲ್ಲನ್ನೇನು ಹೊತ್ತುಕೊಂಡಿರಲಿಲ್ಲ, ಬಿಸಿಲೇರುವ ಮೊದಲೆ ಕಾಡು ಸೇರಿದ್ದರಿಂದ ಜನವರಿಯ ಬಿಸಿಲ ಪ್ರಕರತೆ ಮೈತಾಕಿರಲಿಲ್ಲ, ಒತ್ತಟ್ಟಿಗೆ ಬೆಳೆದ ಮರದಕೊಂಬೆಗಳ ಹಸಿರೆಲೆಯೊಂದಿಗಿನ ಹಂದರ ಬಿಸಿಲಿಂದ ನಮ್ಮ ಕಾಯ್ದಿತ್ತು, ಒಂದಷ್ಟು ದೂರ ಸಾಗುತ್ತಿದ್ದಂತೆ ಕಾಲ ಹೆಜ್ಜೆ ಸಪ್ಪಳ ಸ್ಪಷ್ಟವಾಗಿ ನಮಗೆ ಕೇಳುವಷ್ಟು ಸನಿಹ, ಅದೇನೊ ಗೋಯ್ ಅನ್ನೊ ಮೌನದೊಂದಿಗಿನ ಸದ್ದು, ಕಾಲ ಕೆಳಗೆ ಸಿಲುಕಿದ ತರಗೆಲೆಗಳ ನುಲುಕಾಟದೊಂದಿಗಿನ ಸದ್ದು,ಮಂಗಗಳ ಮರಕೋತಿಯಾಟದ ನಡುವೆ ಅವುಗಳು ಮಾಡುತಿದ್ದ ಕ್ರೀ ಸದ್ದು,ಅದೆಲ್ಲಿಂದಲೊ ಕೇಳಿಬರುತಿದ್ದ ಹಕ್ಕಿಗಳ ಚಿಲಿಪಿಲಿಯೊಂದಿಗಿನ ಕ್ಷೀಣ ಸದ್ದು, ದೂರದ ತೊರೆಯೊಂದರ ನೀರ ಸದ್ದು, ಒಂದೆರಡು ಭಾರಿ ಹಾವುಗಳು ತರಗೆಲೆ ಮೇಲೆ ತರಚಿಕೊಂಡು ಓಡಾಡುವ ಸದ್ದುಗಳು,ನಮ್ಮೊದೊಂದಿಷ್ಟು ಮಾತುಗಳು ಇವೆಲ್ಲದರ ನಡುವೆಯೂ ಕಾಡು ತನ್ನ ಘಂಭೀರತೆಯನ್ನು ತೋರಿಸುತ್ತಾ ನಿಶ್ಯಬ್ದದೊಂದಿಗೆ ಬಾಹ್ಯದಿಂದ ನಮ್ಮನ್ನು ಕೊಂಚ ಕೊಂಚನೆ ದೂರಾಗಿಸುತಿತ್ತು.ದಣಿವು ಒತ್ತರಿಸಿ ಬಂದರು ನೀವಾರಿಸಿಕೊಳ್ಳಲು ಕಾಡ ನೆಲದ ಹಾಸಿಗೆ,ಅಲ್ಲಲ್ಲಿ ಸಿಗುವ ನೀರ ಝರಿ, ಅದುಣಿಸುವ ತಂಪು ತಣಿಪ ನೀರು ನಮ್ಮ ನೀರಡಿಕೆಯನ್ನು, ಕೈಯಲ್ಲಿರು ವಾಟರ್ ಬಾಟಲ್ ನನ್ನೂ ತುಂಬುತಿತ್ತು.ದಾರಿಯೆಂದು ಹೆಸರಿರ್ಪ ದಾರಿಯೆಂದುಕೊಳ್ಳದ ದಾರಿಯ ನಡುವೆ ಈ ಸಾಮಿಪ್ಯದೊಂದಿಗಿನ ನಮ್ಮ ಪಯಣ ಕೈಯಲ್ಲೊಂದು ದಂಟೆ ಹಿಡಿದು, ಬೆನ್ನಿಗೊಂದು ದೊಡ್ಡ ಬ್ಯಾಗೇರಿಸಿ ಸಾಗಿದ್ದು ಸುಬ್ರಮಣ್ಯದ ಬಲಭಾಗದ ರಸ್ತೆಯಲ್ಲಿ ಕೊಂಚ ದೂರ ನಡೆದು ಕಾಡ ಹಾದಿ ಹಿಡಿದ ಅದೊಂದು ದಿನ.ಇಂತಿಪ್ಪ ಕುಮಾರ ಪರ್ವತದ ಮೊದಲ ಕೆಲ ಘಂಟೆಗಳ ಈ ಚಾರಣ ಹಾದಿ ನಮ್ಮನ್ನು ಒಲವಿನಿಂದಲೆ ಸ್ವೀಕರಿಸಿ ತನ್ನ ತೆಕ್ಕೆಗೆ ತೆಗೆದುಕೊಂಡಾಗಿತ್ತು.

ಏರು ಮುಖವಾಗಿ ಸಾಗಿದ ದಾರಿ ಒಂದು ಹಂತಕ್ಕೆ ಬಂದು ನಿಲ್ಲಬೇಕಾದರೆನೆ ದಟ್ಟ ಕಾಡು ತನ್ನ ಕೆಲಸ ಮುಗಿಯಿತೆಂದು ನಮ್ಮ ತೊರೆದಿದ್ದು, ಎದುರಿಗೆ ಕುರುಚಲು ಗಿಡ ತುಂಬಿದ, ಹುಲ್ಲು ಬೆಳೆದ ಹಸಿರಸಿರು ದಿಣ್ಣೆಗಳು, ಜೊತೆಗೆ ಅಲ್ಲಲ್ಲಿ ಕಂಡು ಬರುವ ಮರಗಳು ಆ ಮರಗಳ ಜೊತೆಗೆ ಸಾಕಷ್ಟು ಬೆಳೆದಿದ್ದ ಚೇಪೆ ಕಾಯಿ, ನೆಲ್ಲಿ ಕಾಯಿ ಮರಗಳು.ಬಿಡಲಾದೀತೆ? ಸಾಕಷ್ಟು ಹೊಟ್ಟೆಗಿಳಿಸಿ ,ದಾರಿ ಖರ್ಚಿಗಿರಲೆಂದು ಬ್ಯಾಗ್ ಕೂಡ ಸೇರಿತ್ತು ಇವು. ಹರಳು ಕಲ್ಲು ತುಂಬಿದ ಏರು ದಾರಿ ನಮ್ಮಗಳ ಕಾಲಲ್ಲಿದ್ದ ಹೆಸರಾಂತ ಕಂಪೆನಿಗಳ ಶೂಗಳಿಗು ಚಾಲೆಂಜ್ ಎಸಿಯಲು ನಿಂತಿತ್ತು, ಕೆಲವೊಮ್ಮೆ ಅವುಗಳ ಸೋಲುವಿಕೆ ನಮ್ಮನ್ನು ಜಾರಿ ಬೀಳಿಸುತಿದ್ದವು.ಬಿಸಿಲೆ ಕಾಣದೆ ಸಾಗಿದ ಮೊದಲ ಕೆಲ ಹೊತ್ತಿನ ಪಯಣ ಬಿಸಿಲಿಗೆ ಬೀಳಿಸಿ ನಮ್ಮ ಸಾಗುವಿಕೆಗೂ ನಮಗು ಕಾವೇರಿಸತೊಡಗಿತ್ತು.ಇದೆಲ್ಲವನ್ನೂ ದಾಟಿ ಮುಂದಡಿಯಿಟ್ಟಾಗಲೆ ಕಾಣಿಸಿದ್ದು ವಿಶಾಲ ಬಯಲಿನಂತ ಹಸಿರು ಹುಲ್ಲುತುಂಬಿದ ಪ್ರದೇಶ.ಎದುರಿಗೆ ಕಾಣುತಿದ್ದ ಪರ್ವತ ಸಾಲುಗಳ, ಇವುಗಳ ಮಧ್ಯೆ ನಾವು ತುದಿ ತಲುಪಬೇಕಾದ ಪರ್ವತ ಯಾವುದೂ? ಎಂಬ ಎಣಿಕೆಗಳಿಗೆ ಉತ್ತರವೆ ಸಿಗುತ್ತಿರಲಿಲ್ಲ.ಕತ್ತಲು ತುಂಬಿದ ಪಿಕ್ಚರ್ ಹಾಲ್ ನಲ್ಲಿ ಪರದೆ ಮೇಲೆ ಪ್ರಕರ ಬೆಳಕಿನೊಂದಿಗೆ ಚಿತ್ರ ಮೂಡಿದಂತೆ ಪರ್ವತ ಸಾಲು ಹಾಗು ಅದರ ರಮಣೀಯತೆ ಕಾಣ ಸಿಗುವ ಜಾಗ ತಲುಪಿ ಕಣ್ಣಿಗೆ ಪ್ರಕೃತಿ ನೀಡುವ ಹಬ್ಬವನ್ನ ಸವಿಯುತ್ತ ನಿಂತಿದ್ದು, ವಿರಮಿಸಿ ಮತ್ತೆ ಬ್ಯಾಗನ್ನು ಬೆನ್ನಿಗೇರಿಸಿದ್ವಿ ದೂರದ ಬೆಟ್ಟದ ತುದಿಯರಸಿ.

ಕಿಚ್ಚು ತರಿಸಿದ್ದು ಬೆಟ್ಟದಲ್ಲೊಂದು ಮನೆಯ ಮಾಡಿ ನಿಸರ್ಗದೊಂದಿಗೆ ಆಕಳು ಕರುಗಳೊಂದಿಗೆ ಬದುಕುವ ಭಟ್ಟರ ಮನೆಯಂಗಳದಲ್ಲಿ ನಿಂತಾಗ.ವರುಷ ಪೂರ್ತಿ ಬತ್ತದೆ ಇರುವ ನೀರ ಝರಿಗೆ ಪೈಪ್ ತೊಡಿಸಿ ಮನೆ ಮುಂದೆ ಸದಾ ನೀರು ಹರಿಯುವಂತೆ ಮಾಡಿದ ಭಟ್ಟರ ಕಾರ್ಯ ಅದರಿಂದಲೆ ಬೆಳೆಯುವ ಬೆಳೆ, ದಿವಸಲು ಹಾಲು ಕೊಡಲು ಸುಬ್ರಮಣ್ಯ ನಗರಕ್ಕಿಳಿದು ಹಾಲು ಕೊಟ್ಟು ಮತ್ತೆ ನಾವೇನು ಸಾಹಸ ಮಾಡಿ ಹತ್ತಿ ಬಂದಿದ್ವೊ ಅದೆ ದಾರಿ ಹತ್ತಿ ಬಂದು ತನ್ನ ಕೆಲಸ ಕಾರ್ಯದಲ್ಲಿ ತೊಡಗುವ ಭಟ್ಟರೆದುರು ನಮ್ಮ ಏದುಸಿರು ಅದಾಗೆ ನಿಂತಿತ್ತು, ಮನೆಯಂಗಳದಲ್ಲೆ ಬೆಳೆದ ನಿಂಬೆ ಹಣ್ಣನ್ನು ಕೊಯ್ದು ಭಟ್ಟರೆ ಮಾಡಿ ಕೊಟ್ಟ ಜ್ಯೂಸನ್ನು ಕುಡಿದು ದಾರಿ ಹಾಗು ರಾತ್ರಿ ಉಳಕೊಳ್ಳಲು ಮಾಡಬೇಕಾದ ಮುಂಜಾಗ್ರತೆ ಕ್ರಮಗಳನ್ನು ಕೇಳಿಕೊಂಡು ಹೊರಟಾಗ ನಗು ಮುಖದಿಂದಲ್ಲೆ ಭಟ್ಟರು ನಮ್ಮ ತಂಡವ ಬೀಳ್ಕೊಟ್ಟಿದ್ದರು.ಮುಂಚಿತವಾಗಿ ತಿಳಿಯಪಡಿಸಿದ್ದರೆ ಊಟದ ವ್ಯವಸ್ಥೆ ಅಲ್ಲಿಯೆ ಆಗುತಿತ್ತು ಆದರೆ ಮದ್ಯಾಹ್ನದ ಊಟಕ್ಕೆ ಬೇಕಾದ ರೆಡಿ ಪುಡ್ ಬ್ಯಾಗಲ್ಲೆ ರೆಡಿ ಇದ್ದುದರಿಂದ ಸಮಸ್ಯೆ ಇರಲಿಲ್ಲ.ಹಾಗೆ ಅಲ್ಲಿಂದ ಹೊರಟ ನಾವುಗಳು ಒಂದರ್ಧ ಗಂಟೆ ಸಾಗಿ ಕಲ್ಲು ಮಂಟಪದ ಬಳಿ ಸಾಗಿದ್ದೆವು, ಪಕ್ಕದಲ್ಲೆ ತೊರೆ ಇತ್ತು, ತೆಕ್ಕಿನ ಮರದ ತೆಕ್ಕಿನೆಲೆ ಊಟದ ಬಟ್ಟಲಾಗಿ,ಪ್ರತಿ ಬ್ಯಾಗಲ್ಲು ಶೇರ್ ಮಾಡಿ ಇಟ್ಟುಕೊಂಡ ಮಧ್ಯಾಹ್ನದೂಟವ ಹೊರತೆಗೆದು ಹೊಟ್ಟೆ ಹಸಿವನ್ನು ನೀಗಿಸಿದ್ವಿ.ಪ್ರಕೃತಿ ಮಡಿಲಿನೂಟ ಅದೇಕೊ ಅವತ್ತು ಬಹಳ ರುಚಿಯಾಗಿ ಕಂಡಿತ್ತು.

ಮತ್ತೆ ಸಾಗಿತ್ತು ಏರು ಪಯಣ.ವಿಸ್ಮಯ ಸುಂದರತೆಯ ಜೀವಂತ ದೃಶ್ಯಗಳು ಕಣ್ಣೋಟದ ಪರಿವೆ ದಾಟಿ ಎದುರೆ ನಿಂತಿದ್ದಾವಾಗ ನಡು ನೆತ್ತಿಯ ಸೂರ್ಯನ ತಾಪವು ಬೀಸು ಗಾಳಿಯೊಡೆ ತೇಲುತಿತ್ತು.ಬೀಸು ನಡಿಗೆ ಕೊನೆಗೊಂಡು ದೇಹ ತನ್ನೊಳಗಿನ ಕಸುವ ತೊರ್ಪಡಿಕೆಗೆ ಮೊದಲ್ಗೊಂಡಿತ್ತು.ದಾರಿ ಮಧ್ಯದ ವಿರಮಿಕೆಗಳು, ಹರಟೆಗಳು ಮತ್ತದೆ ಹುರುಪುಗಳನ್ನು ತಂದುಕೊಡುತಿತ್ತು, ಆಳ ಪ್ರಪಾತಗಳು ಅಲ್ಲಿಂದೇಳುವ ಮೋಡಗಳು, ಮೋಡದ ಮೇಲೆ ನಾವು ನಿಂತಿದ್ದೇವೆ ಅನ್ನೊ ನಮ್ಮ ಭ್ರಮೆಗಳು, ಆ ದೃಶ್ಯಗಳ ಸವಿ, ತುದಿ ಮೊದಲಿಲ್ಲದೆ ಸಾಗಿತ್ತು.ಹೀಗೆ ಸಾಗಿದ ಪಯಣ ಸಂಜೆಯ ಅನಿರೀಕ್ಷಿತ ಬೆಳವಣಿಗೆಗೆ ಎದುರುಗೊಳ್ಳಬೇಕಾಯಿತು. ಸಂಜೆ 4 ರ ಸಮಯ ಇರಬಹುದು.ಇದ್ದಕ್ಕಿಂದ್ದಂತೆ ವಾತಾವರಣ ಮಬ್ಬಾಗತೊಡಗಿತು.ಗಾಳಿ ಜೋರಾಗಿ ಬೀಸಿದಾಗ ಮಬ್ಬು ಸರಿಯೋದು ಮತ್ತೆ ಮಬ್ಬು ಕವಿಯೋದು ಈ ಕಣ್ಣಾಮುಚ್ಚಾಲೆ ಮಧ್ಯೆ ನಮ್ಮ ಪಯಣ ಸಾಗಿತ್ತು.ಈ ಸನ್ನಿವೇಷ ವಾಹನದ ವೈಪರ್ ಹಾಗು ಮಳೆಯನ್ನು ನೆನಪಿಸಿದ್ದು, ಅದಾಕೋ ಏನೋ ಶಕ್ತಿಯನ್ನೆಲ್ಲ ಒಟ್ಟಾಗಿಸಿ ಕೂಗಿದ್ವಿ, ಸಿಕ್ಕಿದ ಸಂತೋಷವನ್ನು ಮನ ತುಂಬಿಸಿಕೊಳ್ಳಲು ಮನದೊಳಗೆ ಜಾಗವೆ ಸಾಲದೆ ಕೂಗಿನ ರೂಪದಲ್ಲಿ ಹೊರಹಾಕುತಿದ್ದೆವೊ? ತಿಳಿಯೆ.ಮಗದೊಂದು ಘಂಟೆಯಲ್ಲಿ ಮಂಜು ಅದೆಷ್ಟು ಕವಿದಿತ್ತೆಂದರೆ ನಡೆಯೊ ದಾರಿ ಅಸ್ಪಷ್ಟ,ಪರಸ್ಪರ ಬೆನ್ನಿಗಂಟಿ ಒಬ್ಬರಿಗೊಬ್ಬರ ಶರ್ಟ್ ಹಿಡಿದು ಮುಂದಡಿ ಇಟ್ಟಿದ್ವಿ.ಮುಂದೆ ಸಾಗಲಾಗದು ಎಂಭ ಪರಿಸ್ಥಿತಿಯ ಎದುರುಗೊಂಡ ನಾವು ಏರು ದಾರಿಯ ಮುಗಿಸಿ ಸಮತಟ್ಟಾದ ಜಾಗಕ್ಕೆ ತಲುಪಲೆಬೇಕಾದ ಅನಿವಾರ್ಯತೆಯನ್ನ ತಂದೊಡ್ಡಿತು.ಸ್ವಲ್ಪ ಹೊತ್ತಿಗೆ ಮುಂಚೆ ಮುದ ನೀಡಿದ್ದ ಮಂಜು ಭಯ ಹುಟ್ಟಿಸತೊಡಗಿತ್ತು.ಅಂತೂ ಇಂತೂ ಸಣ್ಣಗಿನ ಸಮತಟ್ಟು ಜಾಗಕ್ಕೆ ಬಂದು ತಲುಪಿದ್ವಿ.ಸರಂಜಾಮುಗಳನ್ನು ಹೊತ್ತು ಹಾಕಿ,ಕೆಲವರು ಟೆಂಟ್ ಕಟ್ಟಲು ಶುರು ಮಾಡಿದರೆ , ಕೆಲವರು ಅಡುಗೆಗೆ ನೀರರಸಿ ಮತ್ತು ಶೀಘ್ರವಾಗಿ ಬೆಂಕಿ ಹಾಕುವ ಅನಿವಾರ್ಯತೆ ಇದ್ದುದರಿಂದ ಕಟ್ಟಿಗೆಗಾಗಿ ಕಾಡೊಳಗೆ ಇಳಿದಿದ್ದರು.

ಮಂಜಿನೊಡನೆ ಸಮರಕ್ಕೆ ಬಿದ್ದ ನಾವು ಕ್ಯಾಂಪ್ ಫಯರ್ ಅಸ್ತ್ರಕ್ಕೆ ಮೊರೆಹೋಗಿದ್ವಿ, ಒಂದಷ್ಟು ಬೆಳಕು ಮೂಡಿದ್ದೇ ಆವಾಗ, ಮೂರು ಕಲ್ಲು ಜೋಡಿಸಿ ನಡುವೆ ಬೆಂಕಿ ಹಾಕಿ ಅರೆ ಬೆಂದ ಅನ್ನ ಮಾಡಿ, ಒಂದೆರಡು ಟೊಮೇಟೊ ಕಿವುಚಿ ಮಾಡಿದ ಸಾರಿನ ಜೊತೆ ನೆಂಚಿಕೊಂಡು ತಿನ್ನಬೇಕಾದರೆ ಪರಮಾನಂದ, ಒಂದಷ್ಟು ಹಾಡು ನೃತ್ಯಗೊಳೊಳಗೆ ನಿದ್ದೆಗೆ ಆ ದಿನ ಜಾರಿದ್ವಿ,ಬೆಳಿಗಿನ ಜಾವ 4 ಕ್ಕೆಲ್ಲ ಮಂಜು ಸರಿದಿತ್ತು.ಆವಾಗಲೆ ಎದುರಿಗಿದ್ದ ಕುಮಾರ ಪರ್ವತ ಕಂಡಿದ್ದು ಹಾಗು ನಮ್ಮ ಯಡವಟ್ಟು ಗೋಚರಿಕೆಗೆ ಬಂದಿದ್ದು. ಸ್ಥಳ ಪರಿಚಯ ಸರಿಯಾಗಿ ಇಲ್ಲದೆ ನಾವು ಟೆಂಟ್ ಹಾಕಿದ ಜಾಗದ ಹಿಂಬದಿ 10 ಹೆಜ್ಜೆ ನಡೆದರೆ ಆಳ ಪ್ರಪಾತ.ಹೌದು ನಾವು ಉಳಿದುಕೊಂಡಿದ್ದು ಶೇಷ ಪರ್ವತದ ತುದಿ.ಚಾರಣದಲ್ಲಿ ಶಿಸ್ತನ್ನ ಹೊಂದಿದ್ದ ನಮ್ಮ ತಂಡ ಮಧ್ಯಪಾನ ಇಂತ ಚಟಗಳಿಗೆ ಮಾರುಹೋಗುವಂತದ್ದಾಗಿರಲಿಲ್ಲ, ಪ್ರಕೃತಿ ರಮಣೀಯತೆ ಹಾಗೆ ಇರಬೇಕೆಂದು ಬಯಸುವವರಾದ್ದರಿಂದ ಪ್ಲಾಷ್ಟಿಕ್,ಬಾಟಲಿಗಳಿಗೆ ನಿಷೇಧ ಹೇರಿದ್ವಿ, ಬಹುಶಃ ಅದಕ್ಕೆ ಇರಬೇಕೇನೊ ಪ್ರಕೃತಿ ಏನೊಂದು ಅವಘಡ ಸಂಭವಿಸದಂತೆ ನಮ್ಮ ಆ ದಿನ ಕಾಯ್ದಿದ್ದು.ಒಂದು ಬಿಸಿ ಚಹಾ ಕಾಯ್ಸಿ ಹಿಗ್ಗಿ ಸರಂಜಾಮುಗಳನ್ನ ಹೇರಿಕೊಂಡು ಆ ಜಾಗ ಬಿಟ್ಟಿದ್ವಿ.

ಶೇಷಪರ್ವತ ಮತ್ತು ಕುಮಾರಪರ್ವತವನ್ನು ಬೇರ್ಪಡಿಸುತಿದ್ದುದು ಕಾಡು, ಶೇಷ ಪರ್ವತದಿಂದ ಕಾಡೊಳಗೆ ಇಳಿದು ಮತ್ತೆ ಹತ್ತಬೇಕಿತ್ತು,ಬಹಳ ದೂರವಿಲ್ಲದಿದ್ದರು ಕಾಡು ಮುಗಿಸಿ ಹತ್ತಲು ಶುರು ಮಾಡುತಿದ್ದಂತೆ ರಾಕ್ ಕ್ಲೈಬಿಂಗ್ ನ ಸಣ್ಣ ಅನುಭವ ದೊರಕೋದು ಈ ಚಾರಣದ ಹೊಸ ತೆರ.ಪಾಚಿ ಹಿಡಿದ ಜಾರು ಬಂಡೆ ಒಡ್ಡಿದ ಕಷ್ಟ ಊಫ್...........!!!! ಜಾರೋದು, ಹತ್ತೊದು, ಜಾರಿದವರನ್ನ ಹಿಡಿದೆಳೆಯೋದು, ಕೊನೆಗೆ ಒಂದಿಬ್ಬರನ್ನು ಮೇಲೆಳೆಯಲು ರೋಫ್ ಕೂಡ ಬಳಸಿದ ನೆನಪು.ಆಮೇಲೆ ಸುಲಭದ ಪಯಣ, ನಡೆದಿದ್ವಿ ಅನ್ನೋದಕ್ಕಿಂತ ಓಡೋಡಿನೆ ತಲುಪಿದ್ವಿ ಕುಮಾರ ಪರ್ವತದ ತುದಿ. ಏನೊ ಗೆದ್ದ ಸಾಧನೆಗೈದ ಅನುಭವ, ವಿಶಾಲ ಬಯಲನ್ನು ಹೊಂದಿದ ಪರ್ವತದ ತುದಿಯಿಂದ ಕಣ್ಣು ತುಂಬಿಸಿಕೊಂಡ ಪ್ರಕೃತಿ ಸೌಂದರ್ಯವನ್ನು ನಾ ಮಾತಿನಲ್ಲಿ ಪಟ್ಟಿಯಾಗಿಸಿ ಅಕ್ಷರವಾಗಿಸಿ ಇಲ್ಲಿ ಹೇಳಲಾರೆ,ಸುಮ್ಮನೆ ಓಡುತಿದ್ವಿ, ಕೇಕೆ ಹಾಕುತಿದ್ವಿ, ಕುಣಿಯುತಿದ್ವಿ ಯಾಕೆ ಹೀಗಾಡುತಿದ್ವಿ? ಉಹೂಂ ಆ ಅನುಭವಗಳು ಹೀಗೆಯೆ ಇತ್ತು ಅನ್ನೊದನ್ನು ವಿವರಿಸಲಾರೆ, ಬಹುಶಃ ಈ ತೆರನಾಗಿ ಇಂಥ ಅನುಭವ ನಿಲುಕಿದವರಿಗೆಲ್ಲ ಇದು ವೇದ್ಯ.

ಅಂದ ಹಾಗೆ ಇದು ನನ್ನ 18 ವರುಷದ ಹಿಂದಿನ ಮೊದಲ ಚಾರಣ ಅನುಭವ,ಈ ಅನುಭವ ನನ್ನಲ್ಲಿ ಚಾರಣ ಆಸಕ್ತಿಯನ್ನು ಬೆಳೆಸಲು ನೀರೆರೆದಿದ್ದು.ಸುಮಾರು 40-45 ಚಾರಣಗಳನ್ನು ಮುಗಿಸಿದ್ದರೂ ಕೂಡ ನನ್ನ ಮೊದಲ ಚಾರಣದ ನೆನಪುಗಳು ಮರೆಯಾಗಿಲ್ಲ. ಇದೆ ಕುಮಾರ ಪರ್ವತಕ್ಕೆ ಒಟ್ಟು ಸುಮಾರು 12 ಭಾರಿ ಚಾರಣ ಗೈದಿದ್ದರು ಪ್ರತಿ ಸಲವು ಹೊಸ ಅನುಭವಗಳನ್ನು ತುಂಬಿಕೊಂಡೆ ಮರಳಿದ್ದೇವೆ,ಮೊದಲ ಚಾರಣ ಸುಬ್ರಮಣ್ಯದಿಂದ ಮತ್ತಲ್ಲಿಗೆ ಮರಳಿದುದಾದರು ಆಮೇಲಿನದ್ದೆಲ್ಲ ಕುಮಾರ ಪರ್ವತದ ಚಾರಣಗಳು ಮಡಿಕೇರಿ ಜೊತೆಗೆ ತಳುಕು ಹಾಕಿಕೊಂಡಿತ್ತು, ಮಡಿಕೇರಿ ಕಡೆಯಿಂದ ಅಥವಾ ಸುಬ್ರಮಣ್ಯದಿಂದ ಪ್ರಾರಂಭಗೊಳ್ಳುತಿದ್ದ ಇವುಗಳು ಕೊನೆಗೊಳ್ಳುತಿದ್ದುದು ಪರಸ್ಪರ ಈ ಎರಡು ವಿರುದ್ದ ಊರೊಳಗೆ.ಚಾರಣಗಳೆ ಹಾಗೆ ಆ ಹೊತ್ತಿಗೆ ಸಾಕೆನಿಸಿದರು ದಣಿವಾರಿದ ನಂತರ ಮತ್ತೆ ನೆನಪಾಗಿ ಹೊಸತೊಂದು ಚಾರಣಕ್ಕೆ ಪ್ರೇರೇಪಿಸುವಂತದ್ದು ಎಂಬುದು ನನ್ನ ಮಟ್ಟಿಗೆ ನಿಜ.ಹೀಗೆ ಸುಮ್ಮನೆ ಮೊದಲ ಚಾರಣಗಳ ನೆನಪುಗಳನ್ನು ಅಕ್ಷರ ರೂಪಕ್ಕಿಳಿಸಿದಾಗ ಬರೆದಿದ್ದು ಇಷ್ಟು.ಇನ್ನಷ್ಟು ಮತ್ತಷ್ಟು ನೆನಪುಗಳನ್ನು ಅನುಭವಿಸಲು ಈ ಬರಹ ಕಾರಣವಾಯಿತು.ಅದಕ್ಕೆ ಅನ್ನೋದೇನೊ ನೆನಪುಗಳು ಸದಾ ಹಸಿರು. :)

2 comments:

  1. ನೆನಪುಗಳ ಹಸಿರ ಅನುಭವಗಳೊಳಗೆ ಒಂದು ಅದ್ಭುತ ಚಾರಣ ಕಥನ.

    ReplyDelete
  2. ಇಂಥ ಸುಂದರ ಚಾರಣ ಕಥನ ಹಲವಿದೆ ಪುಷ್ಪಣ್ಣ,ಚಾರಣಾಸಕ್ತಿಯನ್ನು ಬಿತ್ತಿದ್ದು ಈ ಮೊದಲ ಚಾರಣವಾದುದರಿಂದ ಈ ನೆನಪನ್ನು ಮೆಲುಕುಹಾಕಿದೆ.ನಿಮಗೆ ಇಷ್ಟವಾಗಿದ್ದು ನನಗೂ ಇಷ್ಟವಾಯಿತು, ಧನ್ಯವಾದ.

    ReplyDelete