Tuesday, October 25, 2011

ಈ ಅನಿಷ್ಟ ಪದ್ಧತಿ ಇಲ್ಲಿಗೆ ಕೊನೆಯಾಗಲಿ.

ಕೋಲಾರದ ಕೆ ಜಿ ಎಫ್  ಚಿನ್ನದ ಗಣಿ ಹೊತ್ತಿರುವ ಊರು.ಒಂದು ಕಾಲದಲ್ಲಿ ಇಲ್ಲಿ ದುಡಿಯುತಿದ್ದ ಒಂದಷ್ಟು ದಲಿತ ಮಂದಿ ರಾಶಿ ರಾಶಿ ಚಿನ್ನ ಹೊರತೆಗೆಯುತಿದ್ದರು ಹಾಗು ಗಣಿಯಾಳದಲ್ಲಿ ಅದಿರನ್ನು ಲೋಡ್ ಮಾಡುವ ಕಾಯಕವು ಇವರದಾಗಿತ್ತು.ಇದೆಲ್ಲದರ ಜೊತೆ ಜೊತೆಗೆ ಇವರನ್ನು ಅವತ್ತಿನಿಂದಲೇ ಪಾಯಿಖಾನೆ ಕ್ಲೀನ್ ಮಾಡುವ ಕೆಲಸಕ್ಕೂ ತೊಡಗಿಸಲಾಗುತಿತ್ತು.ಯಾವಾಗ ಚಿನ್ನದ ಗಣಿ ಮುಚ್ಚಲ್ಪಟ್ಟಿತು ಆವಾಗ ಈ ಜನಗಳಿಗೆ ಒಳಚರಂಡಿ ವ್ಯವಸ್ಥೆ ಹೊಂದಿರದ ಕೆ ಜಿ ಎಫ್ ಪಟ್ಟಣದಲ್ಲಿ ಜೀವನಕ್ಕೆ ಆಧಾರ ದುಡಿಮೆಯಾಗಿದ್ದು ಮಲಹೊರುವ ಪದ್ಧತಿ ಒಂದೆ.ತೋಟಿಗರು ಎಂದು ಕರೆಯಲ್ಪಡುವ ಈ ಜನಗಳಿಗೆ ಬೇರೆ ಉದ್ಯೋಗ ಮಾಡಲು ಅವಕಾಶವೇ ಇಲ್ಲದಂತೆ ವ್ಯವಸ್ಥೆ ನಿರ್ಮಾಣವಾಗಿದೆ.ಈ ವ್ಯವಸ್ಥೆ  ಇಂದ ಅದೆಷ್ಟೋ ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ.ಹಲವಷ್ಟು ಜನ ಪ್ರಾಣ ಕಳಕೊಂಡಿದ್ದಾರೆ,ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ, ಸರ್ಕಾರಕ್ಕೂ,ಸ್ಥಳೀಯ  ಆಡಳಿತ ವ್ಯವಸ್ಥೆಗೂ ಈ ವಿಷಯದಲ್ಲಿ ಮಾಹಿತಿಗಳಿವೆ,ಸುಧಾರಿಸುವ ನಿಟ್ಟಿನಲ್ಲಿ ಅವಘಡಗಳು ನಡೆಯದಂತೆ ಎಚ್ಚರವಹಿಸುವ ಹಾಗು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ  ಹಲವು ಭರವಸೆ ದೊರಕಿದ್ದರು ಅವುಗಳು ಭರವಸೆಗಷ್ಟೇ ಸೀಮಿತವಾಗಿದೆ ಅನ್ನುವದನ್ನು ನಿನ್ನೆ  ನಡೆದ ಘಟನೆ ಸಾಕ್ಷ ಒದಗಿಸುತ್ತಿದೆ.

ಹೌದು ಈ ವಿಷ ವ್ಯವಸ್ಥೆಗೆ ನಿನ್ನೆ ಮೂವರ ಬಲಿ ಆಗಿದೆ. ನಿನ್ನೆ ಬಲಿ ಆದವರು ಕೆ.ಜಿ.ಎಫ್ ನಲ್ಲಿ ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿಯ ನಾಯಕರಾದ ಪ್ರಸಾದ್(ಕುಟ್ಟಿ) ನರೇಂದ್ರ ಕುಮಾರ್ ಮತ್ತು ರವಿ . ಇವರುಗಳು ಮಲಗುಂಡಿಯನ್ನು ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಮಲದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವುದು.ಈ ಘಟನೆ ಹಿನ್ನಲೆಯಲ್ಲಿ ಈ ಹಿಂದೆ  ಆಗಸ್ಟ್ ೨೯ ರಂದು ಕೆಜಿಎಫ್‌ನ ಅಧ್ಯಕ್ಷ ಪಿ. ದಯಾನಂದ್ ಹಾಗೂ ಆಯುಕ್ತ ಬಾಲಚಂದರ್ ಸೇರಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಕೆಜಿಎಫ್‌ನಲ್ಲಿ ಮಲಹೊರುವ ಪದ್ಧತಿ ಇದೆ ಎಂದು ಮಾಧ್ಯಮಗಳು ಹೇಳುತ್ತಿರುವುದೆಲ್ಲಾ ಸುಳ್ಳು ಎಂದೂ ಅವು ಅಮಾಯಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದೂ ಹೇಳಿದ್ದನ್ನು ನೆನಪಿಸಿಕೊಳ್ಳೋಣ.ಹಾಗೆ ನೋಡಿದಲ್ಲಿ ಇದು ಮೊದಲ ಬಾರಿಯ ಅವಘಡ ಅಲ್ಲ. ಕೆಲವು ತಿಂಗಳುಗಳ ಹಿಂದೆ ಸಕಲೇಶಪುರದಲ್ಲಿ ಮಹಾದೇವ ಮತ್ತು ಅರ್ಜುನ ಎಂಬುವವರು,ಕೋಲಾರದ ನಾಗರಾಜು ಮತ್ತು ಬಾಬು ಹೀಗೆ ಬಳಷ್ಟು ಪಟ್ಟಿಯನ್ನು ಮಾಡಬಹುದು.ಈ ಘಟನೆಗಳೆಲ್ಲ ನಡೆದಾಗ ಒಂದಷ್ಟು ಪರಿಹಾರ, ಪುನರ್ವಸತಿ ಎಂದು  ಮಾತನಾಡುವ ಆಡಳಿತ ಮಂದಿ ಈ ನಿಟ್ಟಿನಲ್ಲಿ ಕಾನುಬಹಿರವಾಗಿ ನಡೆಯುವ ಇಂತಹ ಚಟುವಟಿಕೆಗಳಿಗೆ ಇತಿಶ್ರೀ ಹಾಡುವಲ್ಲಿ ಮುಂದಾಗದಿರುವದು ವಿಪರ್ಯಾಸ.

1993ರಲ್ಲಿ ಜಾರಿಗೆ ಬಂದ ಸಫಾಯಿ ಕರ್ಮಾಚಾರಿಗಳ ಉದ್ಯೋಗ ಹಾಗೂ ಒಣಪಾಯಖಾನೆ (ನಿಷೇಧ) ಕಾಯ್ದೆಯು ಮಲಹೊರುವ ಪದ್ಧತಿಯನ್ನು ನಿಷೇಧಿಸಿದೆ.ಯಾರು ಈ ಕೆಲಸ ಮಾಡಿಸುತ್ತಾರೋ ಅಂತವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಆದರೆ ಈ ಕಾಯ್ದೆ ಜಾರಿಗೊಳಿಸಿ ೧೮ ವರ್ಷಗಳಾದರೂ ಈ ಕಾನೂನಿನಡಿ ಒಬ್ಬನೇ ಒಬ್ಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿರುವುದಾಗಲೀ, ಶಿಕ್ಷೆ ವಿಧಿಸಿರುವುದಾಗಲೀ ಇಲ್ಲ. ಈ ಕಾಯ್ದೆಯ ಪ್ರಕಾರ ಒಣಪಾಯಖಾನೆಗಳನ್ನು ಇಟ್ಟುಕೊಳ್ಳುವುದಾಗಲೀ ನಡೆಸುವುದಾಗಲೀ ಶಿಕ್ಷಾರ್ಹ ಅಪರಾಧ. ಹಾಗೆಯೇ ಮಲವನ್ನು ಪಾಯಖಾನೆಗಳಿಂದ ನೇರವಾಗಿಯಾಗಲೀ, ಗುಂಡಿಗಳಿಂದ ಸಾಗಿಸುವುದಾಗಲೀ ಅಪರಾಧ ಎನಿಸಿಕೊಳ್ಳುತ್ತದೆ. ಒಳಚರಂಡಿ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಪಾಯಖಾನೆಗಳನ್ನು ಸೆಪ್ಟಿಕ್ ಟ್ಯಾಂಕ್‌ಗಳಿಗೆ ಜೋಡಿಸಿರತಕ್ಕದ್ದು. ಇದರಿಂದ ಹೀರುಯಂತ್ರಗನ್ನು ಬಳಸಿ (ಸಕಿಂಗ್ ಮಷೀನ್) ಮಲವನ್ನು ತೆಗೆಯಲು ಸಾಧ್ಯವಾಗುತ್ತದೆ ಎನ್ನುವ ಆಶಯ ಕಾಯ್ದೆಯಲ್ಲಿದೆ.ಆದರೆ ಈ ಕಾಯ್ದೆಯ ಒಂದು ಅಂಶ  ಕೂಡ ಜಾರಿಯಾಗದಿರುವದು ವಿಪರ್ಯಾಸ.ಎಲ್ಲ ಕ್ಷೇತ್ರದಲ್ಲೂ ತಂತ್ರಜ್ಞಾನ ಬೆಳೆಯುತ್ತಿದೆ,ಆದರು ಈ ವಿಷಯದಲ್ಲಿ ಇನ್ನು ಕೂಡ ಮಾನವ ಶಕ್ತಿ ಬಳಕೆ ಹಿಂದಿನಂತೆ ನಡೆಯುತ್ತಿದೆ ಎಂಬುದು ಸತ್ಯ. ಸಿಲಿಕಾನ್ ಸಿಟಿ ಅಂತ ತಂತ್ರಜ್ಞಾನ ನಿಟ್ಟಿನಲ್ಲಿ ಹೆಸರು ಪಡೆದ ಬೆಂಗಳೂರಿಗೆ ತಾಗಿ ಕೊಂಡೆ ಇರುವ ಕೆ ಜಿ ಎಫ್ ನಲ್ಲೂ ಇಂತದ್ದು ನಡೆಯುತ್ತಿದೆ ಎಂದರೆ ವ್ಯವಸ್ತೆಗೆ ಸಲ್ಲುವ ನಾಚಿಕೆಗೇಡು. ಹಾಗೆ ನೋಡಿದಲ್ಲಿ ಇದು ಬರಿಯ ಕೆ ಜಿ ಎಫ್ ಗೆ ಸಿಮೀತವಾಗಿದ್ದಲ್ಲ , ಬಹಳ ದಿನಗಳಿಂದ ಗೆಳೆಯ ದಯಾನಂದ್ ಮತ್ತು ಬಳಗ ದವರು ಈ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಈ ಪದ್ಧತಿ ಜೀವಂತ ವಿದೆ ಎಂಬುದನ್ನು ಪುರಾವೆ ಸಮೇತ ತೋರಿಸುತಿದ್ದಾರೆ.ಈ ಅನಿಷ್ಟ ಪದ್ದತಿಗಳು ಸಂಪೂರ್ಣ  ತೊಲಗಲೇ ಬೇಕಾಗಿದೆ, ಇಲ್ಲದಲ್ಲಿ ನಮ್ಮನ್ನು ನಾವು ಅಸಹ್ಯಿಸಿಕೊಂಡು ಸಮಾಜದ ಒಂದು ವರ್ಗ ತುಳಿತಕ್ಕೆ ಒಳಗಾಗುವದನ್ನು ನೋಡುತ್ತಾ ಕೈ ಕಟ್ಟಿ ಕುತಿರುವದು ಕಷ್ಟ.

ದೀಪಾವಳಿಯ ಈ ದಿನದಂದು ಏನಾದರು ವಿಶೇಷ ಬರೆಯಬೇಕೆಂದಿದ್ದೆ. ಸಾವಿನ ಸುದ್ದಿ ಬರೆಯಬೇಕಾಗಿ ಬಂದಿದೆ. ಅಷ್ಟಕ್ಕೂ ದೀಪದಿಂದ ದೀಪ ಹಚ್ಚಿ ಮಾನವೀಯತೆ ಮೆರೆಯುವ ಹಬ್ಬ ,ಹೀಗೆ ಭಾವಿಸಿ ದೀಪಾವಳಿ ಆಚರಿಸುತ್ತಿರುವ ನನಗೆ  ಇದೆ ಸರಿ ಅಂದುಕೊಂಡು ಬರೆದಿದ್ದೇನೆ ಅನ್ನುವದಕ್ಕಿಂತ ಮಾಹಿತಿಗಳನ್ನ ನಮೂದಿಸಿದ್ದೇನೆ.ಇನ್ನಾದರೂ ಸರ್ಕಾರ ಕಣ್ಣು ತೆರೆಯಲಿ ಆ ಮೂಲಕ ಈ ಪದ್ಧತಿ ಇಂದ ಶೋಷಣೆಗೊಳಗಾದವರ ಬಾಳಿನಲ್ಲಿ ಬೆಳಕು ಮೂಡಲಿ. ಆ ಮೂಲಕ ಸತ್ತವರ ಸಾವುಗಳು ಚಿರಾಯುವಾಗಲಿ,ಈ ಅನಿಷ್ಟ ತೊಲಗಿಸುವ ಬಗ್ಗೆ ದುಡಿಯುತ್ತಿರುವ ಎಲ್ಲರಿಗೂ ಸಫಲತೆ ಸಿಗಲಿ ಎಂಬುದನ್ನು ಬಯಸೋಣ.
( ಮಾಹಿತಿಗಳನ್ನು ಸಂಡೆ ಇಂಡಿಯನ್ ಪತ್ರಿಕೆ ಇಂದಲೂ ಪಡೆದು ಇಲ್ಲಿ ಬಳಸಿಕೊಂಡಿರುವೆ,ಈ ಮೂಲಕ ಅವರಿಗೆ ನನ್ನದೊಂದು ಕೃತಜ್ಞತೆ ಇದ್ದೆ ಇರುತ್ತದೆ )
ನಿಮ್ಮವ..................
ರಾಘವೇಂದ್ರ ತೆಕ್ಕಾರ್ 

Sunday, October 23, 2011

ತಮ್ಮ ಐಡೆ೦ಟಿಟಿ ಡಾಕುಮೆಂಟ್ ಸಮಸ್ಯೆ ನೀಗಿಸುವಲ್ಲಿ ಅಧಾರ ಆಗಬಲ್ಲುದೇ -ಆಧಾರ್ ಕಾರ್ಡ್ ಯೋಜನೆ?

ನಮ್ಮಲ್ಲಿ ನಮ್ಮ ಜನನ ಪ್ರಮಾಣ ಪತ್ರ ಪಡೆಯಲು ,ಚಾಲನ ಪರವಾನಿಗೆಯನ್ನು ಪಡೆಯಲು,ರೇಶನ್ ಕಾರ್ಡ್ ಪಡೆಯಲು,ಮತದಾನದ ಕಾರ್ಡ್ ಪಡೆಯಲು ,ಪಾಸ್ ಪೋರ್ಟ್ ಮುಂತಾದವುಗಳನ್ನು ಪಡೆದು ಇದನ್ನೇ ನಮ್ಮ ಐಡೆ೦ಟಿಟಿ ಯನ್ನಾಗಿ ಬಳಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನೂ ಪಡೆಯುವಲ್ಲಿ ಎಷ್ಟೊಂದು ವೇಳೆ , ಹಣ ಮತ್ತು ಕಿರಿ ಕಿರಿ ಯನ್ನು ಅನುಭವಿಸುತಿದ್ದೆವಲ್ಲ? ಜೀವನವೇ ಈ ಐಡೆ೦ಟಿಟಿ ಡಾಕುಮೆಂಟ್ ಗಳ ಮೇಲೆ ನಿಂತಿದೆಯಲ್ಲ ? ಇವು ಯಾವುದು ಇಲ್ಲದೆ ನಾವು ಬದುಕುವದೆ ದುಸ್ಥರ ಅನ್ನೋ ಈ ದಿನಗಳಲ್ಲಿ ಇದನ್ನು ಪಡೆಯುವಲ್ಲಿ ವ್ಯವಸ್ಥೆಗಳು ಸುಲಭವಾದಲ್ಲಿ ಜನಸಾಮಾನ್ಯನಿಗೆ ಅನುಕೂಲ ಹೆಚ್ಚು. ಸ್ವಾಮಿ ಎಲ್ಲವೂ ಮನೆ ಬಾಗಿಲಿಗೆ ಬರಲು ಸಾಧ್ಯವೇ? ಸ್ವಲ್ಪ ಕಷ್ಟ ಪಡಬೇಕು ಅನ್ನುವವರು ಇರಬಹುದು. ಇಂದಿನ ಜನರಿಗೆ ಮೂಲಭೂತವಾಗಿ ಅವಶ್ಯವಾಗಿರುವ ಈ ವ್ಯವಸ್ಥೆ ಇನ್ನು ಸರಳಿಕೃತವಾಗಿ ಎಲ್ಲರಿಗೂ ಸುಲಭದಲ್ಲಿ ದೊರಕುವಂತೆ ಆಗಲಿ ಅನ್ನುವದನ್ನ ಅಷಿಸುವದು ತಪ್ಪಲ್ಲ ಅಂದುಕೊಂಡೆ ಈ ಲೇಖನ ಬರೆಯಲು ಶುರು ಹಚ್ಚಿಕೊಂಡಿದ್ದೇನೆ.
ನೀವೇ ಅನ್ನುವದಕ್ಕೆ ಡಾಕುಮೆಂಟ್ ಒದಗಿಸಬೇಕು.

ನಾವು ಒಂದು ಊರಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ನಿಮಿತ್ತ ಬೇರೆ ಊರುಕಡೆ ಅಥವಾ ಉದ್ಯೋಗದಲ್ಲಿ ಇದ್ದು ಕೊಂಡು ಬೇರೆ ಊರು ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಬೇಕಾದದ್ದು ಇವತ್ತಿನ ಅನಿವಾರ್ಯತೆ. ಅವಾಗ ನಮ್ಮ ಈ ಐಡೆ೦ಟಿಟಿ ಡಾಕುಮೆಂಟ್ ಗಳಲ್ಲಿ ಯುನಿಫಾರ್ಮಿಟಿ ಕಾಯ್ದು ಕೊಳ್ಳೋದು ಕಷ್ಟ ಸಾಧ್ಯವೇ ಸರಿ.ಅದಕ್ಕಾಗಿ ಬೆಂಗಳೂರು ಅಂತ ನಗರ ಜನತೆ (ಬೆಂಗಳೂರು ಉದಾಹರಣೆ ನಿಮಿತ್ತ ಮಾತ್ರ)ತಮ್ಮನ್ನು ತಾವು ಅಂತ ನಿರುಪಿಸಬಹುದಾದ ಸ್ಥಳೀಯ ಡಾಕುಮೆಂಟ್ ರೂಪಿಸಿಕೊಳ್ಳಲು ಪಡುವ ಪರಿಪಾಟಲು ಸಣ್ಣದೇನಲ್ಲ.ಅಂತಹ ಅದೆಷ್ಟೋ ಸಂದರ್ಭ ನನಗು ಕೆಲವು ವರುಷಗಳ ಹಿಂದೆ ಒದಗಿ ಬಂದುದರಿಂದ ಆ ದಿನಗಳಲ್ಲಿ ಯಪ್ಪಾ ಈ ಡಾಕುಮೆಂಟ್ ರುಪಿಸಿಕೊಳ್ಳುವದರಲ್ಲಿ ಇಸ್ಟೊಂದು ಕಷ್ಟ ಪಡಬೇಕೆ? ಇದರ ಪ್ರೋಸಿಜರ್ ಇನ್ನಷ್ಟು ಸುಲಭ ಗೊಳಿಸುವಲ್ಲಿ ಸಾದ್ಯತೆಗಳು ಇದ್ದಾಗ್ಯೂ ಕೂಡ ಯಾರು ಮನಸ್ಸು ಮಾಡಿಲ್ಲ ಹಾಗು ಮಾಡದಿರುವದು ಏಕೆ? ಅನ್ನೋ ಪ್ರಶ್ನೆಗಳು ಕಾಡಿದ್ದು ಸಹಜ. ನಾವಿನ್ನು ಹಳೆಯ ಓಬಿರಾಯನ ಕಾಲದ ಪ್ರೋಸಿಜರ್ ಮೂಲಕ ಈ ಡಾಕುಮೆಂಟ್ ಪಡೆದುಕೊಳ್ಳಬೇಕಾಗಿರುವುದು ೨೧ನೆ ಶತಮಾನದ ಸತ್ಯ.ಈ ವ್ಯವಸ್ಥೆಯಲ್ಲಿ ಈ ಐಡೆ೦ಟಿಟಿ ಡಾಕುಮೆಂಟ್ ಪಡೆಯುವಲ್ಲಿ ಅನುಭವಿಸುವ ಕಷ್ಟ ಅನಿವಾರ್ಯತೆಗಳನ್ನು ನನ್ನ ಅನುಭವಕ್ಕೆ ಬಂದಂತೆ ಕೆಲವೊಂದನ್ನು ದಾಖಲಿಸುತ್ತೇನೆ ನೋಡಿ.

ಒಂದು ಗ್ಯಾಸ್ ಕನೆಕ್ಷನ್ ನಾನು ಪಡೆಯಬೇಕು, ಅದಕ್ಕಾಗಿ ನನಗೆ ಇಲ್ಲಿ ಒಂದು ಲೋಕಲ್ ಅಡ್ರೆಸ್ಸ್ ಪ್ರೂಫ್ ಬೇಕು,ಬೆಂಗಳುರಂತ ಮಹಾ ನಗರದಲ್ಲಿ ಒಂದಷ್ಟು ಮಂದಿ ಒಟ್ಟಾಗೆ ಒಂದು ಮನೆ ಹಿಡಿದು ಜೀವನ ನಡೆಸುತ್ತಿರಬೇಕಾದರೆ ಪ್ರತಿಯೊಬ್ಬರೂ ಈ ಅಡ್ರೆಸ್ಸ್ ಪ್ರೂಫ್ ಗಾಗಿ ರೆಂಟ್ ಅಗ್ರಿಮೆಂಟ್ ಉತ್ಪತ್ತಿ ಮಾಡುವದು ಎಲ್ಲಿಂದ??? ಇನ್ನು ಇಲ್ಲಿಯದೇ ವಿಳಾಸ ಹೊಂದಿದ  ಮತದಾನ ಕಾರ್ಡ್ ಪಡೆಯಲು ಲೋಕಲ್ ಅಡ್ರೆಸ್ಸ್ ಪ್ರೂಫ್ ಬೇಕು, ಇಲ್ಲಿಯದೇ ಮತದಾನ ಪತ್ರವು ಗ್ಯಾಸ್ ಕನೆಕ್ಷನ್ ಪಡೆಯುವಲ್ಲಿ ಅನಿವಾರ್ಯ ಹಾಗಿದ್ದಲ್ಲಿ ಅವನಿಗೆ ಅಗತ್ಯವಿರುವ ಈ ಸೌಲಬ್ಯ ಪಡೆಯುವುದು ಎಂತು? ಸರಿ ನನ್ನಲ್ಲಿ ಲೋಕಲ್ ಅಡ್ರೆಸ್ಸ್ ಪ್ರೂಫ್ ಇದೆ ಆದರೆ ರೇಷನ್ ಕಾರ್ಡ್ ಸೌಲಬ್ಯ ಪಡೆಯಲು ತನ್ನ ಊರಿನಿಂದ ತನ್ನ ಮೂಲ ರೇಷನ್ ಕಾರ್ಡ್ನಲ್ಲಿರುವ ತನ್ನ ಹೆಸರನ್ನು ತೆಗೆಸುವ ಮೂಲಕ ಪ್ರೋಸಿಜರ್ ಶುರು ಹಚ್ಚಿಕೊಳ್ಳಬೇಕು,ದುಡಿಯುದಕ್ಕಾಗೆ ನಗರ ಸೇರಿರುವ ಮಂದಿಗೆ ಇವಿಷ್ಟು ವೇಳೆ ಸಿಗಲಾರದು ? ಇನ್ನು ಒಂದು ಬ್ಯಾಂಕ್ ಅಕೌಂಟ್ ತೆರೆಯಬೇಕು,ಒಂದು ಬ್ರಾಡ್ ಬ್ಯಾಂಡ್ ಕನೆಕ್ಷನ್ ಹಾಕಿಸಿಕೊಳ್ಳಬೇಕು ಹೀಗೆ ಇನ್ನು ಮುಂತಾದ ಕೆಲಸಗಳಲ್ಲಿ ಈ ತಾಪತ್ರಯ ನಾವು ಅನಿವಾರ್ಯವಾಗಿ ಪಡೆಯಲೇ ಬೇಕು.ಇಸ್ಟೆಲ್ಲಾ ಕಷ್ಟ ಪಡುವ ಬದಲು ಜನ ಒಂದಷ್ಟು ಲಂಚ ಎಸೆಯುತ್ತಾರೆ,ಪೋರ್ಜರಿ ದಾಖಲೆಗಳನ್ನು ತನ್ನ ಐಡೆ೦ಟಿಟಿ ಡಾಕುಮೆಂಟ್ ಪಡೆಯುವ ನಿಟ್ಟಿನಲ್ಲಿ ರೆಡಿ ಮಾಡಿಕೊಳ್ಳುತ್ತಾರೆ, ಆ ಮೂಲಕ ಬ್ರಷ್ಟಾಚಾರಕ್ಕೆ ತಮಗೆ ಅನಿವಾರ್ಯ ಎಂಬೋ ನಿಟ್ಟಲ್ಲಿ ಕೊಡುಗೆ ಕೊಡುತ್ತಾ ಸಾಗುತ್ತಾರೆ, ಹಾಗಿದ್ದಲ್ಲಿ ನಾವು ಕಟ್ಟಿಕೊಂಡ ವ್ಯವಸ್ಥೆಯು ಬ್ರಷ್ಟಾಚಾರ ನಿರ್ಮೂಲನೆ ಮಾಡುವದಕ್ಕೆ ಬದಲಾಗಬೇಕಿದೆ ಅಲ್ಲವೇ?ಅದಕ್ಕಾಗೆ ನಾನಾಗಲೇ ಅಂದಿದ್ದು ವ್ಯವಸ್ಥೆ ಸರಳಿಕೃತ ಆಗಬೇಕು ಆ ಮೂಲಕ ಜನರೆಲ್ಲರಿಗೂ ಸುಲಭದಲ್ಲಿ ಮೂಲಭೂತ ಅವಶ್ಯ ಐಡೆ೦ಟಿಟಿ ಡಾಕುಮೆಂಟ್ ಸಿಗುವಂತೆ ಆಗಬೇಕು ಅಂದಿದ್ದು.ಈ ಬಗ್ಗೆ ಇನ್ನು ಕೆಲವೊಂದು ಆಯಾಮಗಳನ್ನು ನೋಡೋಣ.

ಒಂದು ಪಾನ್ ಕಾರ್ಡ್ ಪಡೆಯಬೇಕು ಅಂತಿಟ್ಟುಕೊಳ್ಳಿ, ನಿಮ್ಮ ಚಾಲನ ಅನುಮತಿ ಪತ್ರ(ಬೆಂಗಳೂರ್ ವಿಳಾಸದ್ದು) ಹಾಗು ನಿಮ್ಮ ವೋಟರ್ ಕಾರ್ಡನ್ನು(ನಿಮ್ಮ ಊರ ವಿಳಾಸದ್ದು) ಪ್ರೊಫ್ ಗಾಗಿ ಬಳಸುತ್ತಿರಿ,ಇದಕ್ಕಾಗಿ ಅಡ್ರೆಸ್ಸ್ ಅನ್ನು ನಿಮ್ಮ ಕಂಪನಿ ವಿಳಾಸ ಕೊಡುತ್ತಿರಿ ಅಂತಾದರೆ ಖಂಡಿತವಾಗಿಯೂ ನಿಮಗೆ ಆಗ ಪಾನ್ ಕಾರ್ಡ್ ಐಡೆ೦ಟಿಟಿ ಕಾರ್ಡ್ ಗಳ ಯುನಿಫಾರ್ಮಿಟಿ ಕೊರತೆ ಇದೆ ಎಂಬ ನಿಟ್ಟಿನಲ್ಲಿ ನಿಮಗೆ ದೊರಕಲಾರದು.ನೀವುಯಾವುದೇ ಪೋರ್ಜರಿ ಮಾಡಿಲ್ಲ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಅನುಕೂಲವಾಗುವದು ಎಂಭ ನಿಟ್ಟಲ್ಲಿ ನಿಮ್ಮ ಕಂಪನಿ ವಿಳಾಸ ಕೊಟ್ಟಿದ್ದರು ಕೂಡ ಪ್ರೋಸಿಜರ್ ಪ್ರಕಾರ ಸರಿ ಹೊಂದಿಕೆ ಬರದೆ ತಿರಸ್ಕರಿಸಲ್ಪಡುತ್ತದೆ.

ನಮ್ಮಲ್ಲಿ ಪಾಸ್ ಪೋರ್ಟ್ ಇದೆ ,ನಾವೀಗ ಯು ಎಸ್ ಹೋಗಬೇಕೆಂದು ವಿಸಾಕ್ಕೆ ಅಪ್ಲೈ ಮಾಡುತ್ತೇವೆ ಅಂತಿಟ್ಟುಕೊಳ್ಳಿ.ನಮ್ಮ ತಂದೆ ಹಳ್ಳಿಗರು ಅವರಲ್ಲಿ ಜನನ ಪ್ರಮಾಣ ಪತ್ರ ಇಲ್ಲ.ಇದರಿಂದಾಗಿ ನಮ್ಮ ತಂದೆಯ ಹೆಸರು ನಮ್ಮ ಬ್ಯಾಂಕ್ ಪಾಸ್ ಬುಕ್ ಮತ್ತು ಪಾಸ್ ಪೋರ್ಟ್ ನಲ್ಲಿ ಒಂದಕ್ಷರ ವ್ಯತ್ಯಾಸವಾಗಿದೆ ಅಂತಿಟ್ಟುಕೊಳ್ಳಿ .ಹೀಗಿರುವಾಗ ಇದೊಂದೇ ಕಾರಣದಿಂದ ನಾವು ಅಪ್ಲೈ ಮಾಡಿದ ವಿಸಾ ನಿರಾಕರಣೆ ಆಗಬಹುದು.ಯು ಎಸ್ ಹೋಗಬೇಕಾದವ್ರು ನಾವು ನಮಗಡ್ಡಿಯಾಗುವದು ಡಾಕುಮೆಂಟ್ ನಲ್ಲಿ ವಿಬಿನ್ನವಾಗಿ ನಮೂದಾಗಿರುವ ನಮ್ಮ ತಂದೆಯ ಹೆಸರು.ಇಲ್ಲಿ ನಾನು ಹೇಳಿರುವದು ಕೆಲವು ಆಯಾಮಗಳಷ್ಟೇ ಇಂಥ ಹಲವಷ್ಟು ಬೇರೆ ಬೇರೆ ಅನುಭವಗಳು ನಮಗಿದೆ ಅಲ್ಲವೇ?

ಮೊದಲಿನ ಹಾಗೆ ಈಗ ಜನ ಯಾವುದೇ ಒಂದು ಪಟ್ಟಣ ಹಳ್ಳಿಯನ್ನು ನಗರವನ್ನು(ಕೆಲವರನ್ನು ಬಿಟ್ಟು)ಅವಲಂಭಿಸಿ ಇಲ್ಲ.ಹಾಗಿರಬೇಕಾದರೆ ಅಡ್ರೆಸ್ಸ್ ಪ್ರೂಫ್ ಅನ್ನುವದು ಕೂಡ ಒಂದು ಅನಿಶ್ಚಯತೆ ಇಂದ ಕೂಡಿದ್ದು ಅಲ್ಲವೇ.ಹಾಗಿದ್ದಲ್ಲಿ ಈ ಐಡೆ೦ಟಿಟಿ ಡಾಕುಮೆಂಟ್ ಪಡೆಯುವಲ್ಲಿ ಮತ್ತು ಆ ಮೂಲಕ ಸೌಲಭ್ಯ ಗಳನ್ನೂ ಪಡೆಯುವಲ್ಲಿ ವ್ಯವಸ್ಥೆಗಳು ಸರಳಿಕೃತ ಆಗಬೇಕು.ಇಲ್ಲದಿದ್ದಲ್ಲಿ ಈ ವ್ಯವಸ್ಥೆ ಕೂಡ ಬ್ರಷ್ಟಚಾರಕ್ಕೆ ತನ್ನದೇ ಆದ ಕೊಡುಗೆಯನ್ನು ಹಿಂದೆಯೂ ನೀಡಿದಂತೆ ಮುಂದೆಯೂ ನೀಡಬಲ್ಲುದು.ಹೀಗಿರುವಾಗ ದೇಶದೆಲ್ಲಡೆ ಬಳಕೆಯಾಗಬಲ್ಲ ಐಡೆ೦ಟಿಟಿ ವ್ಯವಸ್ಥೆ ಬೇಕು,ಈ ನಿಟ್ಟಲ್ಲಿ ಆಧಾರ್ ಕಾರ್ಡ್ ಒಂದು ದಾರಿಯಾಗ ಬಹುದು ಎಂಬ ಆಶಯ ನನ್ನದು.ಆದರೆ ಇದ ಪಡೆಯುವಲ್ಲಿ ಕೂಡ ಪ್ರೋಸಿಜರ್ ಸುಲಭವಾಗಬೇಕಾದ ಅಗತ್ಯ ಇದೆ. ಖಾಸಗಿ ಸಂಸ್ಥೆಗಳ ಸಹಬಾಗಿತ್ವ ದೊಂದಿಗೆ ಇದ ಜನರಿಗೆ ತಲುಪಿಸುವಲ್ಲಿ ಪ್ರಯತ್ನ ಇನ್ನು ಮುಂದೆ ನಡೆಯುತ್ತದೆ ಅಂಬುದನ್ನು ಕೇಳ್ಪಟ್ಟೆ.ಹಾಗಾದಲ್ಲಿ ಉತ್ತಮ ಅನ್ನುವದು ನನ್ನ ಅಭಿಪ್ರಾಯ.ಒಟ್ಟಿನಲ್ಲಿ ಈ ವ್ಯವಸ್ತೆ ಒಳಿತನ್ನು ಮಾಡಲಿ ಅನ್ನುವ ಕಳಕಳಿಯೊಂದಿಗೆ ಭಾರತೀಯ ಪ್ರತಿಯೊಬ್ಬನಿಗೆ ಸುಲಭದಲ್ಲಿ ಈ ವ್ಯವಸ್ಥೆ ದೊರಕಲಿ ಎಂಬುದಷ್ಟೇ ನನ್ನ ಹಾರೈಕೆ.

ನಿಮ್ಮವ .............
ರಾಘವೇಂದ್ರ ತೆಕ್ಕಾರ್

Friday, October 21, 2011

ಅಂಗಡಿ ರಂಗ

ಸಹೋದರ ವಿಘ್ನೇಶ್ ತೆಕ್ಕಾರ್ ಲೇಖನಿ ಇಂದ ಮೂಡಿಬಂದ ಸಣ್ಣ ಕಥೆ:-

ಗಾಜಿನ ಡಬ್ಬದ ತಳದಲ್ಲಿ ನಾಲ್ಕಾರು ಸಕ್ಕರೆ ಮಿಟಾಯಿಗಳು,ಪಕ್ಕದ ಡಬ್ಬದಲ್ಲಿ ಹರುಕು ಮುರುಕು ಅಂದ ಕಳೆದುಕೊಂಡ ಚಕ್ಕುಲಿಗಳು , ಮತ್ತೊಂದು ಡಬ್ಬದಲ್ಲಿ ಎಂದೋ ತಂದಿಟ್ಟ ಬಣ್ಣ ಕಳೆದುಕೊಂಡ ಪೆಪ್ಪರ್ ಮಿಟಾಯಿಗಳು , ಸೂರಿನ ಅಡ್ಡಕ್ಕೆ ತೂಗಿಟ್ಟ ಬಾಳೆ ಗೊನೆಯಲ್ಲಿ ನೇಣು ಹಾಕಿಕೊಂಡ ಒಂದು,ಎರಡು ಮತ್ತು ಮತ್ತೊಂದು ,ಒಟ್ಟು ಮೂರೂ ಕದಳಿ ಹಣ್ಣುಗಳು,ಹಿಂದಿನ ಗೋಡೆಗೆ ಮೊಳೆಹೊಡೆದು ಕಟ್ಟಿದ ಹಗ್ಗದಲ್ಲಿ ಹಿಡಿದ ದೂಳಿನಲ್ಲೂ ಮಿರ ಮಿರ ಮಿಂಚುವ ಪಾನ್ ಪರಾಗ್ , ಗುಟ್ಕಾ ಮಾಲೆಗಳು , ಒಂದು ಕಾಲು ಮುರಿದ ಟೇಬಲಿನ ಮೂಲೆಯಲ್ಲಿನ ಪೆಟ್ಟಿಗೆ ಯಲ್ಲಿ ಇನ್ನೇನು ಚಲಾವಣೆಯ ಕೊನೆ ಅಂಚಿನಲ್ಲಿರುವ ಒಂದೆರಡು ನಾಣ್ಯಗಳು , ಪೆಟ್ಟಿಗೆ ಪಕ್ಕದಲ್ಲಿಟ್ಟ ಬಾಕ್ಸಿನಲ್ಲಿ ತುಟಿಗೆ ಚುಂಬಿಸಿ ಮೋಕ್ಷಪಡೆಯಲು ಹಪಹಪಿಸುವ ಗಣೇಶ ಬೀಡಿಗಳು,ಇನ್ನೊಂದು ಮೂಲೆಯಲ್ಲಿ ದಶಕಗಳಿಂದ ಮುಕ್ತಿ ಪಡೆಯದೇ ಬಿದ್ದ ಗೋಲಿ ಸೋಡಾ ಬಾಟಲಿಗಳು , ಇವೆಲ್ಲದರ ನಡುವೆ ಮುತ್ತಾತನ ಕಾಲದ ಮರದ ಕುರ್ಚಿಯಲ್ಲಿ ವಿರಾಜಮಾನನಾಗಿರುವ ಅದರುವ ಅದರಗಳ ರಂಗಜ್ಜ.ಕ್ಷಮಿಸಿ ,ಕ್ಷಮಿಸಿ , ಎಪ್ಪತೈದು ವರ್ಷ ಪ್ರಾಯದ ನವ ತರುಣ ರಂಗ. ಅಯ್ಯೋ ಇದೇನಿದು ಈ ಹಣ್ಣು ಹಣ್ಣು ಮುದುಕನನ್ನು ಸರಿ ವಿರೋದ ಶಬ್ದಗಳಿಂದ ಪರಿಚಿಸುವದು ನಿಮಗಿಷ್ಟವಾಗಿರಲಿಕ್ಕಿಲ್ಲ..ಆದರೆ ರಂಗನಿಗಂತೂ ಆನಂದವಾದಿತು.ಇದು ನಮ್ಮೂರು ಹರಿಪುರದಲ್ಲಿ ಮೂರೂ ದಶಕಗಳಿಗಿಂತಲೂ ಹೆಚ್ಚು ವರುಷಗಳಿಂದ ನೆಲೆ ನಿಂತಿದ್ದ ವ್ಯಾಪಾರಿ ರಂಗನ ಚಿತ್ರಣ.
                
ಅದೊಂದು ಮುಸ್ಸಂಜೆ ನಾನು ನನ್ನೂರು ಹರಿಪುರದ ಮನೆಯಲ್ಲಿ ಏನೋ ಗಿಚುತ್ತಾ ಕೂತಿದ್ದೆ . ನನಗಂತೂ ಕಥೆ.ಕವನಗಳನ್ನು ಬರೆಯುವ ಹುಚ್ಚು.ಕೈಗೆ ಸಿಕ್ಕಿದ ಕಾಗದ ಚೂರಿನಲ್ಲೊಂದು ಶಾಸನ ಬರೆದಿಡುವ ಕೆಟ್ಟ ಬುದ್ದಿ ಎಂದು ನೀವೆ೦ದರೂ, ಒಳ್ಳೆಯ ಹವ್ಯಾಸ ನನ್ನದು.ಆ ದಿನವೂ ನನ್ನ ಮೇಜಿನ ಅಂಚಿನಲ್ಲಿದ್ದ ಕಾರ್ಡ್ ನಲ್ಲೊಂದು ಕವನ ಬರೆಯುವ ಮನಸ್ಸಾಯಿತು. ಮುಗಿಲಿನ ಬಗ್ಗೆ ಕವನ ಜೀವ ತಳೆಯಲು ಆರಂಭಿಸಿದಾಗ ಪಕ್ಕನೆ ಕಾರ್ಡ್ ಅನ್ನು ತಿರುಗಿಸಿ ನೋಡುತ್ತೇನೆ, ಅದು ನಮ್ಮೂರು ವ್ಯಾಪಾರಿ ಪುಣ್ಯತಿಥಿಯ ಆಮಂತ್ರಣ ಪತ್ರಿಕೆ.ರಂಗ ತೀರಿಕೊಂಡ ಎಂಬುದಾಗಿ ಕೆಲ ವಾರದ ಹಿಂದಷ್ಟೇ ಮನೆ ಇಂದ ಫೋನಿನ ಮೂಲಕ ತಿಳಿದಾಗಲೇ ಮನಸ್ಸಿಗೆ ಬೇಸರವಾಗಿತ್ತು.ರಂಗನ ಜೀವನವನ್ನು ಹತ್ತಿರದಿಂದ ನೋಡಿದವರಿಗೆ ಆತನ ಮರಣ ಖಂಡಿತ ಬೇಸರವನ್ನುಂಟು ಮಾಡುತ್ತದೆ.ರಂಗ ಬದುಕಿದ್ದ ರೀತಿ ಹಾಗಿತ್ತು.ಆತ ಅನುಭವಿಸಿದ ನೋವು,ಆತನ ದೇಶ ಭಕ್ತಿ , ಸ್ವಾವಲಂಬನೆ ಎಂತವರನ್ನು ಸೆಳೆಯುವಂತದ್ದು.ನನ್ನ ಮನದ ಮೂಲೆಯಲ್ಲಿ ರಂಗನ ಪುಣ್ಯ ತಿಥಿಯ ಕಾರ್ಡಿನ ಮೇಲೆ ಕವನ ಗೀಚಿದ್ದಕ್ಕೆ ಖಿನ್ನತೆ ಎನಿಸಿದರೂ, ಆತನ ಜೀವನ ಕಥೆಯನ್ನು ನಿಮ್ಮ ಮುಂದಿಡುವ ಯೋಚನೆ ಹುಟ್ಟಿದ್ದು ಆ ಕ್ಷಣದಲ್ಲೇ.
                    
ಹರಿಪುರ ಎಂಬ ಹೆಸರು ನಮ್ಮೂರಿನ ದೇವರಾದ ಹರಿಹರೇಶ್ವರ ನೆಲೆ ನಿಂತ ತಾಣವಾದ್ದರಿಂದ ಬಂದಿದೆ ಎಂಬುದು ಪ್ರತೀತಿ.ಅತ್ತ ಕರಾವಳಿಯು ಅಲ್ಲ, ಮಲೆನಾಡು ಅಲ್ಲ,ಎಂಬಂತೆ ಭೌಗೋಳಿಕವಾಗಿ ರೂಪಿತವಾದ ಐನೂರರಿಂದ ಆರುನೂರರವರೆಗೆ ಜನಸಂಖ್ಯೆಯಿಂದ ಕೂಡಿದ ಹಳ್ಳಿ. ಭತ್ತದ ಗದ್ದೆಗಳು, ಮುಗಿಲೆತ್ತರಕ್ಕೆ ಎದ್ದು ನಿಂತ ಅಡಿಕೆ ತೋಟಗಳು, ಅಲ್ಲಲ್ಲಿ ತೊಂಡೆಕಾಯಿ ಚಪ್ಪರಗಳು,ಕುಂಬಳಕಾಯಿ,ಹಾಗಲಕಾಯಿ ಬೀಳುಗಳು,ಗೆಣಸು,ಮರಗೆಣಸುಗಳ ಸಾಲುಗಳು,ವೀಳ್ಯದೆಲೆ ಬೀಳುಗಳನ್ನು ಮೈಯೆಲ್ಲಾ ಸುತ್ತಿಕೊಂಡು ಆಕಾಶದೆಡೆಗೆ ದಿಟ್ಟವಾಗಿ ನಿಂತ ಕೋಲುಗಳು ಹಳ್ಳಿಗರ ಕೃಷಿ ಆಧಾರಿತ ಜೀವನವನ್ನು ಬಿಂಬಿಸುತ್ತದೆ.ಹಲವು ಸಾಧಕರಿಗೆ ಶಿಕ್ಷಣವನ್ನಿತ್ತ ಅನುದಾನಿತ ಖಾಸಗಿ ಶಾಲೆಯೊಂದು ಸುಮಾರು ಅರವತ್ತು ವರ್ಷಗಳಿಂದ ಹರಿಹರಪುರದ ವಿದ್ಯಾದೇಗುಲವಾಗಿದೆ.ಕಾಡುಗಲ್ಲುಗಳನ್ನೋಳಗೊಂಡ ಪಕ್ಕಾ ಮಣ್ಣಿನ ರಸ್ತೆಯಲ್ಲಿ ತೆವಳುತ್ತಾ ಕೆಂಪು ದಟ್ಟ ದೂಳನ್ನೆಬ್ಬಿಸುತ್ತ ದಿನಕ್ಕೆರಡು ಬಾರಿ ಬಂದು ಹೋಗುವ ಶ್ರೀ ವೀರಭದ್ರ ಟ್ರಾವೆಲ್ಸ್ ಹರಿಹರಪುರದ ಜನರನ್ನು,ತರಕಾರಿ ಮೂಟೆಗಳನ್ನೂ, ಆಡು ಕುರಿ ಕೋಳಿಗಳನ್ನು ಸಾಗಿಸುವ ಏಕೈಕ ಸಾರಿಗೆ.ಮಲೆನಾಡ ಕೊರಕಲುಗಳಲ್ಲಿ ಹುಟ್ಟಿ ಹರಿಹರಪುರದ ಮೂಲಕ ಹರಿಯುವ ತೊರೆಯೊಂದು ಜನ-ದನಕರುಗಳ ಬಾಯಾರಿಕೆ ತಣಿಸುವ ಜಲ ಸಂಪನ್ಮೂಲ. ಯುವಕ ಯುವತಿಯರ ಪ್ರಗತಿಯ ಸಲುವಾಗಿ ಒಂದೆರಡು ಮಂಡಳಿಗಳು ನಮ್ಮ ಹರಿಹರಪುರದಲ್ಲಿವೆ.ವರ್ಷಕ್ಕೊಮ್ಮೆ ನಡೆಯುವ ನಾಟಕ, ಯಕ್ಷಗಾನಗಳು ಮಂಡಳಿಗಳು ಜೀವಂತವಾಗಿರುವದಕ್ಕೆ ಸಾಕ್ಷಿಗಳಾಗಿವೆ.ಹೀಗೆ ಹರಿಹರಪುರದ ಅಲ್ಪ ಸೌಲಭ್ಯಗಳ ನಡುವೆ ಪಕ್ಕನೆ ಮನೆಗೆ ನೆಂಟರು, ಬಂಧುಗಳು ಬಂದರೆ ಬೇಕಾಗುವ ಸಕ್ಕರೆ, ಚಾ ಪುಡಿ, ಉಪ್ಪು,ಎಣ್ಣೆ,ಸಿಗರೇಟು,ಗುಟ್ಕಾಗಳನ್ನೂ ಒದಗಿಸುವದು ನಮ್ಮ ರಂಗನ ಅಂಗಡಿ.
                          
ಶಾಲೆಯ ಮೆಟ್ಟಿಲನ್ನು ಹತ್ತಿದವನಲ್ಲ ರಂಗ. ಬದಲಾಗಿ ಊರ ಮಕ್ಕಳೆಲ್ಲ ದೂರದ ಊರುಗಳಿಗೆ ಕಲಿಕೆಗಾಗಿ ಹೊರಟಾಗ ರಂಗ ಕಾಡು ಮೇಡುಗಳಲ್ಲಿ ಅಲೆಯುತ್ತಾ ಕಾಡು ಪಾರಿವಾಳ,ಅಳಿಲು,ಕೋತಿ ಮರಿಗಳನ್ನು ಶಿಕಾರಿ ಮಾಡುತಿದ್ದ. ತಂದೆ ಚಿಂಕ್ರನಿಗಂತೂ ಮಗನ ಶಿಕಾರಿಯಿಂದ ದಿನವೂ ಒದಗುವ ಬಗೆ ಬಗೆಯ ಮಾಂಸದಿಂದಾಗಿ ತನ್ನ ಮಗನು ಇತರರಂತೆ ಓದಬೇಕು , ಉದ್ಯೋಗ ಹಿಡಿಬೇಕೆಂಬ ಕನಸೂ ಬೀಳಲಿಲ್ಲ.ಬಾಲ್ಯವನ್ನು ಹೀಗೆ ಕಳೆದ ರಂಗನಿಗೆ ಯವ್ವನದಲ್ಲಿ ಬದುಕಿನ ಆಸರೆಯಾದ ತಂದೆ ಚಿಂಕ್ರನ ವೃತ್ತಿಯಾದ ಗಾರೆ ಕೆಲಸವನ್ನು ಮಾಡಿದವನಲ್ಲ.ಬದಲಾಗಿ ಆಗೆಲ್ಲಾ ಕ್ರಾಂತಿ ಹುಟ್ಟಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮಹದಾಸೆ ರಂಗನಲ್ಲಿ ಮೂಡಿತ್ತು .ಬಿಸಿರಕ್ತದ ರಂಗ ಹರಿಹರಪುರದ ಗಾಂಧೀಯಾಗಿ ಪೋಲಿ -ಪುಡಾರಿಗಳನ್ನೆಲ್ಲ ಒಗ್ಗೂಡಿಸಿ ನಡೆಸಿದ ಸತ್ಯಾಗ್ರಹದಲ್ಲಿ ಪೋಲೀಸರ ಏಟು ತಿಂದ ಸಾಧನೆ ಆತನದ್ದು.ಲಾಟಿ ಏಟು ತಿಂದ ರಂಗನ ಗಾಂಧೀಗಿರಿ ಅಲ್ಲಿಗೆ ಕೊನೆಗೊಂದು ತೋಟದ ಕೆಲಸ , ಗದ್ದೆ ಕೊಯುಲುನ ಸಂದರ್ಭದಲ್ಲಿ ಕೆಲಸ ಹೀಗೆ ಸಣ್ಣ ಪುಟ್ಟ ಕೆಲಸ ಮಾಡುತಿದ್ದನಾದರು ಯಾವ ಕ್ಷೇತ್ರದಲ್ಲೂ ಶಾಶ್ವತನಾಗಲಿಲ್ಲ.ರಂಗನ ವೃತ್ತಿಗಳೆಲ್ಲವು ಕೈ ಸುಟ್ಟುಕೊಂಡವುಗಳೇ, ಅಂತಹ ಕೆಲವು ವೃತ್ತಿಗಳ ಬಗ್ಗೆ ನಿಮಗೆ ಹೇಳಲೇ ಬೇಕು.
                        
ಕೆಲಕಾಲ ರಂಗ ಹರಿಹರಪುರದ ಜನತೆಗೆ ಕಂಕಣ ಭಾಗ್ಯವನ್ನು ಕಲ್ಪಿಸಿಕೊಡುವ ಮಾಡುವೆ ದಲ್ಲಾಳಿಯಾಗಿ ಮೆರೆದ.ಆದರೆ ದಲ್ಲಾಳಿಯಲ್ಲಿ ಮದುವೆಯಾದ ಗಂಡಸರಂತು ತಮ್ಮ ಗಂಡುಬೀರಿ ಹೆಂಡತಿಯರ ಕಾಟ ತಾಳಲಾರದೆ ಸೊಂಟದಲ್ಲೇ ಚೂರಿ ಸಿಕ್ಕಿಸಿಕೊಂಡು ರಂಗನಿಗಾಗಿ ಹರಿಹರಪುರದಲ್ಲಿ ಸುಳಿದಾಡಲು ಶುರು ಮಾಡಿದಂದಿನಿಂದ ಸುಮಾರು ಆರು ವರ್ಷ ಆತನ ಮುಖ ನೋಡಿದ ನೆನಪು ಹರಿಹರಪುರದ ಜನತೆಗೆ ಇಲ್ಲ.
ಮತ್ತೊಂದು ದಿನ ಮುಂಜಾನೆ ಆಗಿನ ಕಾಲದ ಫ್ಯಾಶನ್ ಆಗಿದ್ದ ಕಣ್ಣಿಗೆ ಕಪ್ಪು ಗ್ಲಾಸ್ , ಬಕೇಟು ಪ್ಯಾಂಟು , ಫುಲ್ ಸ್ಲೀವ್ ಶರ್ಟ್ ತೊಟ್ಟು ಹರಿಹರಪುರದ ಬಸ್ ಸ್ಟಾಂಡಿನಲ್ಲಿ ಪ್ರತ್ಯಕ್ಷನಾದ ಎಂದು ನನ್ನ ಶಿಕ್ಷಕರಾದ ರಾಮಕೃಷ್ಣ ಮಾಷ್ಟ್ರು ಹೇಳಿದ ನೆನಪಿದೆ.ಮಾಸ್ಟ್ರೆ, ನಂಗೆ ಮುಂಬೈಯಲ್ಲಿ ದೊಡ್ಡ ಕಂಪೆನಿಯಲ್ಲಿ ಕೆಲಸ ದೊರೆತಿದೆ,ರಜಾದಲ್ಲಿ ನಿಮ್ಮನ್ನೆಲ್ಲ ನೋಡಿಕೊಂಡು ಹೋಗೋಣಾ ಅಂತ ಹೊರಟು ಬಂದೆ ಎಂದು ರಾಮಕೃಷ್ಣ ಮಾಸ್ಟರಿಗೆ ಬಾಲ್ ಪೆನ್ ಒಂದನ್ನು ಕೊಡುಗೆಯಾಗಿ ನೀಡಿದ್ದನಂತೆ. ಪೆನ್ ಕೊಟ್ಟಿದ್ದರಿಂದಲೋ ಏನೋ ಅ ಆ ಇ ಈ ಬಾರದ ರಂಗನಿಗೆ ಕಂಪೆನಿಯಲ್ಲಿ ಉದ್ಯೋಗ ಹೇಗೆ ದೊರಕಿತು ಎಂಬ ವಿಚಾರ ಮಾಸ್ಟರಿಗೆ ಆ ಕ್ಷಣದಲ್ಲಿ ಹೊಳೆಯದಿದ್ದರೂ, ತಿಂಗಳು ಮೂರಾದರು ಊರಲ್ಲೇ ಜಾಂಡ ಹೂಡಿರುವ ರಂಗನನ್ನು ನೋಡಿ ಬೊಂಬಾಯಿ ಕಂಪೆನಿಯ ಬಗ್ಗೆ ವಿಚಾರಿಸಿದ ಮಾಸ್ತರಿಗೆ ತಿಳಿದ ಸತ್ಯವೇನೆಂದರೆ, ರಂಗ ಮಂಗಳೂರಿನ ಹೋಟೆಲೊಂದರಲ್ಲಿ ಕ್ಲೀನರ್ ಆಗಿದ್ದ ಎಂಬುದಾಗಿ.ಆತ ಕೊಟ್ಟ ಪೆನ್ ಕೂಡ ಹೋಟೆಲ್ ಮಾಲಿಕನದ್ದು ಎಂದು ಮಾಸ್ಟ್ರು ನಗುತ್ತಾ ನನ್ನಲ್ಲಿ ಹೇಳಿದ್ದರೊಮ್ಮೆ.
                               
ಹೀಗೆ ಬಹುಕಾಲ ಅದು ಇದು ಎಂದು ಹೊಟ್ಟೆ ಹೊರೆಯಲು ಪ್ರಯತ್ನ ಪಟ್ಟ ರಂಗನಿಗೆ ಕೊನೆಗೆ ಹೊಳೆದದ್ದು ಹರಿಹರಪುರದಲ್ಲೊಂದು ದಿನಸಿ ಅಂಗಡಿ.ಆಗಿನ ಕಾಲದಲ್ಲಿ ತೊರೆದಾಟಿ ನಾಲ್ಕು ಮೈಲು ದೂರದ ರಾಂಪುರದಲ್ಲಿದ್ದ ಕರಿಯ ಶೆಟ್ರ ಮನೆಯಲ್ಲಿದ್ದ ಅಂಗಡಿಗೆ ಸಣ್ಣ ಪುಟ್ಟ ಸಾಮನುಗಳಿಗೂ ಓಡಾಡಬೇಕಾದ ಪರಿಸ್ಥಿತಿ ಹರಿಹರಪುರದಲ್ಲಿತ್ತು.ಮಳೆಗಾಲದಲ್ಲಂತೂ ತೊರೆ ದಾಟಲಾಗದ ಪರಿಸ್ಥಿತಿಯಲ್ಲಿ ಜನರು ಮಳೆಗಾಲದ ಮೊದಲೇ ಮೂರೂ ನಾಲಕ್ಕು ತಿಂಗಳಿಗಾಗುವಷ್ಟು ದಿನ ನಿತ್ಯದ ಸಾಮಾನುಗಳನ್ನು ತಂದಿದಬೇಕಾಗಿತ್ತು . ಈ ಎಲ್ಲಾ ಕಷ್ಟಗಳ ನಡುವೆ ಬೆಳೆದ ರಂಗನ ಯೋಚನೆಗೆ ಊರ ಕೆಲವರ ಪ್ರೋತ್ಸಾಹ ದೊರೆತಾಗ ತನ್ನ ಮನೆಯ ಜಗುಲಿಯನ್ನು ಅಂಗಡಿಯನ್ನಾಗಿ ಪರಿವರ್ತಿಸುವ ನಿರ್ಧಾರಕ್ಕೆ ಬಂದ ರಂಗ.ಬಂಡವಾಳಕ್ಕಾಗಿ ತನ್ನ ತಂದೆಗೆ ಮಡಿಕೆ ಸರಾಯಿ ಕುಡಿಸಿ ಒಂದು ಎಕರೆ ಭೂಮಿ ಮಾರಿ ರಂಗನ ಅಂಗಡಿಯಂತು ಶುರು ಆಯಿತು. 
                              
ಅಂದಿನಿಂದ ಹರಿಹರಪುರದಲ್ಲಿ ಪ್ರಥಮ ದಿನಸಿ ಅಂಗಡಿ ಪ್ರಾರಂಭ ಮಾಡಿ ಜನರ ಕಷ್ಟ ಕಡಿಮೆ ಮಾಡಿದ ರಂಗ ಎಲ್ಲರ ಅಚ್ಚು ಮೆಚ್ಚಿನ ವ್ಯಕ್ತಿಯಾದ. ಸೋಮಾರಿ ಎಂದು ಮೂದಲಿಸುತಿದ್ದವರೆಲ್ಲ ರಂಗನ ಒಡನಾಡಿಗಳಾದರು. ಸುಮಾರು ಆರೇಳು ವರ್ಷಗಳು  ಚೆನ್ನಾಗಿಯೇ ವ್ಯಾಪಾರ ಮಾಡಿದ ರಂಗನಿಗೆ ತನ್ನ ತಂದೆ ಇಂದಲೋ, ಗೆಳೆಯರಿಂದಲೋ , ಏನೋ ಗೊತ್ತಿಲ್ಲ ಸಾರಾಯಿ ಕುಡಿಯುವ ಚಟ ಅಂಟಿಕೊಂಡಿತು.ಅದೇ ಆತನ ಅಳಿವಿನ ಆರಂಭ ಎಂದರು ತಪ್ಪಾಗಲಾರದು.ಸಾರಾಯಿ ಅಮಲಿನಲ್ಲಿಯೇ ಬಂದ ಗಿರಾಕಿಗಳಿಗೆ ಐನೂರು ಗ್ರಾಂ ಬದಲು ಒಂದು ಕೆ ಜಿ , ಒಂದು ಕೆ ಜಿ ಕೇಳಿದವರಿಗೆ ಐನೂರು ಗ್ರಾಂ ತೂಗಿ ಕೊಡುವ ಮಟ್ಟಕ್ಕೆ ಹೋದ ರಂಗ.
ವಾಡಿಕೆಯಂತೆ ಮದುವೆ ಮಾಡಿದರೆ ಸರಿ ಹೋದಾನು ಎಂಬುದಾಗಿ ಎಂಬುದಾಗಿ ಊರಿನವರೇ ಅಲ್ಪ ಸ್ವಲ್ಪ ಹಣ ಒಟ್ಟು ಹಾಕಿ ಮದುವೆಯನ್ನು ಮಾಡಿದರು.ರಂಗನೇನೋ ಕುಡಿತ ಕಡಿಮೆ ಮಾಡಿ ಸಮಯಕ್ಕೆ ಸರಿಯಾಗಿ ಮನೆಗೆ ತಲುಪುತಿದ್ದ. ಆದರೆ ಗಯ್ಯಾಳಿ ಹೆಂಡತಿ ಕಮಲನ ದೆಸೆ ಇಂದ ರಂಗ ಸಂಸಾರದ ಜಂಜಾಟದಲ್ಲಿ ನಲುಗಿ ಹೋದ. ಪ್ರತಿ ದಿನವೂ ಮನೆ ರಣರಂಗವಾಗಿರುತಿತ್ತು.ರಂಗನ ಮನಸ್ಸು ಚನಿಯನ ಸಾರಾಯಿ ಅಂಗಡಿಯತ್ತ ಎಳೆಯಲ್ಪಟ್ಟು ಪುನಹಃ ಕುಡಿತದ ದಾಸನಾದ.ಮದುವೆಯಾಗಿ ವರ್ಷ ಪೂರ್ತಿಯಾಗುವ ಮೊದಲೇ ಕಮಲ ಸಾರಾಯಿ ಅಂಗಡಿ ಚನಿಯನೊಡನೆ ಪರಾರಿಯಾಗಿದ್ದಾಳೆ ಎಂಬ ಸುದ್ದಿ ರಂಗನನ್ನು ಇನ್ನಷ್ಟು ದುರ್ಭಲಗೊಳಿಸಿತು. ಅಂಗಡಿಯ ಸ್ಥಿತಿಯೋ ಹೇಳುವಂತಿರಲಿಲ್ಲ.ತಂದು ಹಾಕಿದ ಮಾಲುಗಳು ಕೊಳೆತರು ಅರಿವಾಗುತ್ತಿರಲಿಲ್ಲ ರಂಗನಿಗೆ. ಗಾಯಕ್ಕೆ ಉಪ್ಪು ಸುರಿವಂತೆ ಹರಿಹರಪುರದಲ್ಲಿ ಇಬ್ರಾಹಿಮ್ ಬ್ಯಾರಿ ಶುರು  ಮಾಡಿದ ಆಲ್ ಮದಿನಾ ಸ್ಟೋರ್ಸ್.ನಮ್ಮ ರಂಗ ಎಂಬ ಪ್ರೀತಿ, ವಿಶ್ವಾಸದಿಂದ ಅಂಗಡಿಗೆ ಬರುತಿದ್ದವರು ಕೂಡ ಇಬ್ರಾಹಿಮ್ ಬ್ಯಾರಿಯ ಅಂಗಡಿ ಕಡೆ ದಾರಿ ಬದಲಾಯಿಸಿದರು.ಹೊಟ್ಟೆಗೆ ಎಣ್ಣೆ ಸುರಿಯಲಾದರು ಸಿಗುತಿದ್ದ ಆದಾಯಕ್ಕೂ ಕುತ್ತು ಬಿತ್ತು.
                                    
ತಂದೆ ಚಿಂಕ್ರನ ಮರಣ ರಂಗನ ಬದುಕಿನಲ್ಲಿ ಮತ್ತೊಮ್ಮೆ ಎದ್ದ ಬಿರುಗಾಳಿ.ತಂದೆಯ ಆಸ್ತಿಯನ್ನು ಮೋಸದಿಂದ ಮಾರಿ ಅಂಗಡಿ ಇಟ್ಟಾಗ ಬೆನ್ನು ಬಗ್ಗಿಸಿ ಹೊಡೆದಾಗ ಕತ್ತಿ  ಹಿಡಿದು ತಂದೆಯನ್ನೇ ಕೊಲ್ಲಲು ಮುಂದಾದ ರಂಗ ಚಿಂಕ್ರ ಸತ್ತಾಗ ಹೆಣದ ಮುಂದೆ ತಲೆ ಬಗ್ಗಿಸಿ ದಿನವಿಡಿ ಕೂತಿದ್ದ.ಆತನನ್ನು ಸಮಾಧಾನ ಪಡಿಸಲು ಮುಂದಾದ ರಾಮಕೃಷ್ಣ ಮಾಸ್ಟ್ರಲ್ಲಿ, ಮಾಷ್ಟ್ರೆ , ಅಪ್ಪ ನನ್ನ ಕೊಂದು, ಬದುಕಿ ಬಿಟ್ಟ, ಎಂದು ಮಂಜಾದ ಕಣ್ಣಿಂದ ಆಕಾಶ ದಿಟ್ಟಿಸುತ್ತಾ ನುಡಿದಿದ್ದನಂತೆ. ಸಾಲು ಸಾಲು ಸೋಲುಗಳಿಂದ ಜರ್ಜರಿತನಾದ ರಂಗ ಕೊನೆವರೆಗೂ ಒಬ್ಬಂಟಿಗನಾಗಿ ಬದುಕಿದ.ಬೆಳಿಗ್ಗೆ ಅಂಗಡಿ ಬಾಗಿಲು ತೆರೆದು ಕೂರುತಿದ್ದ. ಕತ್ತಲಾಗುವವರೆಗೆ ಸುಮ್ಮನೆ ಕೂತೂ ಕಾಲ ದೂಡುತಿದ್ದ, ಗಿರಾಕಿಗಳು ಬಂದು ಯಾವುದಾದರು ಸಾಮಗ್ರಿ ಕೇಳಿದಾಗ ತನಗೆ ಮನಸ್ಸಿದ್ದರೆ ಎದ್ದು ಕೊಡುತಿದ್ದ.ಒಂದು ವೇಳೆ ಮನಸಿಲ್ಲದಿದ್ದರೆ ಯಾವುದಾದರೊಂದು ದಿಕ್ಕಿನತ್ತ ದೃಷ್ಟಿಸುತ್ತಾ ಕುರುತಿದ್ದಾ.ಗಿರಾಕಿಗಳು ಬೊಬ್ಬೆ ಹೊಡೆದು ರಂಪಾಟ ಮಾಡಿದರು ಕದಲುತ್ತಿರಲಿಲ್ಲ.ಒಮ್ಮೊಮ್ಮೆ ರಂಗ ಕೇಳಿದ ಸಾಮಗ್ರಿಗಳ ಬದಲು ತನಗೆ ಕೈಗೆ ಸಿಕ್ಕಿದ ಸಾಮಗ್ರಿಯನ್ನೇ ಗಿರಾಕಿಯ ಮುಖಕ್ಕೆ ಎಸೆಯುತಿದ್ದ.ಒಮ್ಮೆ ಜೀಪಿನಲ್ಲಿ ಯಾವುದೋ ಊರಿಂದ ಬಂದ ಕುಟುಂಬದ ಪುಟ್ಟ ಹುಡುಗಿಯೊಬ್ಬಳು ರಂಗನ ಅಂಗಡಿಗೆ ಬಂದು ಪೆಪ್ಪರ ಮಿಟಾಯಿ ಕೇಳಿದಾಗ ಆ ಹುಡುಗಿಯ ಬೆನ್ನು ಬಗ್ಗಿಸಿ ನಾಲ್ಕು ಗುದ್ದಿದ್ದ.ಅಲ್ಲೇ ಜೀಪಿನ ಬಳಿ ಇದ್ದ ಹುಡುಗಿಯ ಕುಟುಂಬಿಕರು ಹಿಗ್ಗಾ ಮುಗ್ಗ ಹೊಡೆದಿದ್ದರು ಒಂದು ತೊಟ್ಟು ಕಣ್ಣೀರಿಟ್ಟವನಲ್ಲ ರಂಗ.ಹಸಿವಾದರೆ ಅನ್ನ ಬೇಯಿಸಿಕೊಂಡು ತಿನ್ನುತಿದ್ದ.ಇಲ್ಲವಾದರೆ ಪಕ್ಕದ ವಾರಿಜಕ್ಕನ ಅಡುಗೆ ಮನೆಯಲ್ಲಿ ತಿನ್ನಲು ಏನಾದರು ಕೊಡುವವರೆಗೆ ಕುಕ್ಕರುಗಾಲಿನಲ್ಲಿ ಕೂತು ಬಿಡುತಿದ್ದ. 
                                
ಈ ರೀತಿ ಬದುಕಿನುದ್ದಕ್ಕೂ ಎಲ್ಲವನ್ನು ಸೋಲಿನಿಂದಲೇ ಎದುರಿಸಿದ ರಂಗನನ್ನು ನೋಡಿ ಮಾನಸಿಕ ಅಸ್ತಿತ್ವವನ್ನು ಕಳೆದುಕೊಂಡ ಹುಚ್ಚ ಎಂದು ನಾನೆಂದು ಹೇಳಲಾರೆ. ಏಕೆಂದರೆ ರಂಗನ ಬದುಕಿನ ಒಂದೆರಡು ರೋಚಕ ವಿಚಾರಗಳನ್ನು ನೀವು ಕೂಡ ತಿಳಿದರೆ ರಂಗನನ್ನು ಹುಚ್ಚ ಎನ್ನಲು ತಡವರಿಸುತ್ತೀರಿ.ರಂಗ ಬದುಕಿದ್ದಷ್ಟು ವರ್ಷ ಆಗಷ್ಟ್ ಹದಿನೈದರ ಸ್ವಾತಂತ್ರ್ಯೋತ್ಸವ ದಿನದಂದು ಶಾಲಾ ಮಕ್ಕಳಿಗೆ ಪೆಪ್ಪರ್ ಮಿಟಾಯಿ ಹಂಚುವದನ್ನು ಮರೆತವನಲ್ಲ.ದಿನಾ ಬೆಳಿಗ್ಗೆ ರೇಡಿಯೋ ದಲ್ಲಿ ಪ್ರಸರವಾಗುತಿದ್ದ ವಾರ್ತೆಗಳನ್ನು ರಂಗ ತಪ್ಪದೆ ಕೇಳುತಿದ್ದ, ಇನ್ನೊಂದು ರೋಚಕ ಸಂಗತಿ ಎಂದರೆ ರಂಗನನ್ನು ಮಕ್ಕಳೇನಾದರು ರಂಗಜ್ಜ ಎಂದು ಕರೆದರೆ ಸಿಡುಕುತ್ತಾ,ನಾನೇನೂ ಅಜ್ಜನಲ್ಲ ಎಂದು ಕೈಗೆ ಸಿಕ್ಕ ವಸ್ತುವನ್ನು ಎಸೆಯುತಿದ್ದ.ಅದ್ದರಿಂದ ನಾನಾಗಲೇ ರಂಗನನ್ನು ತರುಣ ಎಂದು ಪರಿಚಯಿಸಿದ್ದು.
                          
ರಂಗನು ಕೂಡ ವಿದಿಯಾಟದಲ್ಲಿ ಪುನಹಃ ಸೋತ.ಈ ಸೋಲು ರಂಗನ ದೃಷ್ಟಿಯಲ್ಲಿ ಗೆಲುವು.ತಂದೆ ತೀರಿಕೊಂಡಾಗ ಬದುಕಿ ಬಿಟ್ಟೆ ಎಂದ ರಂಗ ಅದೊಂದು ದಿನ ತಾನು ಕೂಡ ಅಂಗಡಿಯ ಗಲ್ಲಾದ ಮೇಲೆ ಬದುಕಿಬಿಟ್ಟ.ಹಿಂದೂ ಮುಂದೂ ಇಲ್ಲದ ರಂಗನ ಮದುವೆ ಮಾಡಿಸಿ ಕೂಪಕ್ಕೆ ದೂಡಿದ ಊರವರ ನೇತ್ರತ್ವದಲ್ಲಿ ಆತನ ಅಂತಿಮ ಕ್ರಿಯೆಗಳು ನಡೆದವು. ಇವತ್ತಿಗೂ ನನಗೆ ಹರಿಹರಪುರದ ಬಸ್ ಸ್ಟ್ಯಾಂಡ್ ನತ್ತ ನಡೆಯುವಾಗ ರಸ್ತೆ ಬದಿಯಲ್ಲಿ ರಂಗನ ನೆನಪಿಗಾಗಿ ಉಳಿದಿರುವ ಅಂಗಡಿಯ ಕಟ್ಟಡ ಆತನ ಬದುಕಿನ ಪುಟಗಳನ್ನೂ ತೆರೆದಿಟ್ಟಂತೆ ಭಾಸವಾಗುತ್ತದೆ,ನಾನೊಮ್ಮೆ ರಂಗನನ್ನು ರಂಗಜ್ಜ ಎಂದಾಗ ಕೈಯಲ್ಲಿದ್ದ ಕೋಲನ್ನು ನನ್ನತ್ತ ಎಸೆದಾಗ ಓಡಿ ಕೆಸರು ಗುಂಡಿಯಲ್ಲಿ ಬಿದ್ದ ನೆನಪು ಚಿಗುರೊಡೆಯುತ್ತದೆ.ಮತ್ತೊಮ್ಮೆ ರಂಗನೆ ಕೋಲು ಹಿಡಿದುಕೊಂಡು ನನ್ನ ಅಟ್ಟಿಸಿಕೊಂಡು ಬಂದಂತೆ ಭಾಸವಾಗುವದು ಸುಳ್ಳಲ್ಲ.

******************************************

ಕಟ್ಟೆ ಮಂದಿಯ ರಾಜಕೀಯ ಒಗ್ಗರಣೆ

ಕಟ್ಟೆ ಪುರಾಣಕ್ಕೆ ಕೊನೆ ಎಲ್ಲಿ ??? ಬೇಡವೆಂದರೂ ಮಾತಾಡಕ್ಕೆ ವಿಷಯವಾಗಬಲ್ಲ  ಹಾಳು ಹರಟೆ ಸುದ್ದಿಗಳಿಗೆ ಬರವಿಲ್ಲ. ಹಳ್ಳಿಗರು ಆದರು ರಾಜಕೀಯ ಸುದ್ದಿಗಳಿಗೆ ಚರ್ಚೆಗಳು ತಮ್ಮದೇ ರೀತಿಯಲ್ಲಿ ಒಕ್ಕಣೆಗಳನ್ನು ಒಪ್ಪಿಸೋ ಮಂದಿ ಬಹಳ.ಇಂತಿಪ್ಪ ಹಳ್ಳಿಯ  ಕಟ್ಟೆ ಮೇಲೆ ಇದೀಗ ಯಡಿಯೂರಪ್ಪ, ಕಟ್ಟಾ , ಕುಮಾರ ಹೀಗೆ ರಾಜ್ಯ ನಾಯಕರುಗಳದೆ ಸುದ್ದಿ.

ಊರ ಅಜ್ಜ ಅಂತು ಬ್ರಷ್ಟರೆಲ್ಲ ಜೈಲು ಕಡೆ ಮುಖ ಮಾಡ್ತಾವ್ರಲ್ಲ, ಎಲ್ಲರ ಒಳಗುಟ್ಟುಗಳು ಬಯಲಗ್ತಾ ಇದ್ದವಲ್ಲ, ಇನ್ನಾದರೂ ಸರ್ಕಾರ ನಡೆಸಲು ಒಳ್ಳೆ ಮಂದಿ ಬಂದು ನಮ್ಮ ಹಳ್ಳಿ ಕಡೆ ನೋಡ್ ಬಹುದವು ಅಲ್ವೇ ಸಿದ್ದ? ಅಂತ ಪ್ರಶ್ನೆ ಇಟ್ಟಿತ್ತು.ಹೂಂ ಅಜ್ಜ ಈ ಪರಿ ಜೈಲ್ ಕಡ ಹೊಂಟಾರಲ್ಲ ನಮ್ಮ ರಾಜಕೀಯ ಮಂದಿ ತಪ್ಪು ಮಾಡಿದವರು  ತಪ್ಪನ್ನ ಎಷ್ಟು ದಿನ ಮುಚ್ಚಿ ತೆಪ್ಪಗೆ ಕುತ್ಕೊಳ್ಳಕಗುತ್ತೆ ಅಜ್ಜ, ಇನ್ನೇನಿದ್ದರೂ ಈ ಮಂದಿಯದ್ದು  ಜೈಲಿಗ್  ಬನ್ನಿರೋ ಗೆಳೆಯರಾ   ಅನ್ನೋ ಹೊಸ ಕಾರ್ಯಕ್ರಮನೆ!!!! ಒಳ್ಳೆದಾತು  ಬಿಡಜ್ಜ ನಮ್ಮ ಹಣ ಎಷ್ಟು ಅಂತ ತಿಂದು ತೆಗಿದ್ರೋ ನಾ ಕಾಣೆ, ಮುದ್ದೆ ಮುರಿದು ಅರಗಿಸ್ಲಿ ಬಿಡಜ್ಜ ಅಂದ ಸಿದ್ದ. ಅಲ್ಲಲೇ ಸಿದ್ದ ಈ ಮಂದಿಗೆ ಜೈಲ್ ಸೇರುತಿದ್ದಂಗೆ ಬರಬಾರದ ರೋಗ ಅಂಟಿಕೊತದಲ್ಲ ಸುಮ್ಮನೆ ಹಿಂಗ್ ಮಾಡ್ತಾರೆ ಅಂತ ಎಲ್ಲರಿಗೂ ಗೊತ್ತಾಗುತ್ತೆ ಅನ್ನೋ ನಾಚಿಕೆ ಮಾನ  ಇವಕ್ಕೆ ಬೇಡ್ವೆನ್ಲ ಸಿದ್ದ ಎಂಬೋ  ಪ್ರಶ್ನೆ ಎಸೆದ ರಾಘ್ಯ.ಏನೋಪ್ಪ ಅದು ಸರಿ ಬಿಡಲೇ, ಆದ್ರೆ ಈ ಸರಿ ಈ ಡಾಕ್ಟರೆಲ್ಲ ಸೇರಿ ಇದಕ್ಕೆ ಮದ್ದು ಅರೆದನ್ಗಿದೆ,ಮಂಚ ಎಲ್ಲ ತಿಗಣೆ ಬಿಟ್ಟವರಂತೆ, ಹೊರಗೆ ತಿರ್ಗಾಡಕ್ಕೆ ಹೊಂಟ್ರೆ ಮಾದ್ಯಮದವರಿಗೆ  ಸುದ್ದಿ ಮುಟ್ಟಿಸ್ತವ್ರಂತೆ , ಬಿಸಿ ನೀರು ಕೊಡಕಿಲ್ವಂತೆ, ಟಿ ವಿನಾಗೆ ಕಡ್ಡಿ ಆಂಟೆನಾ ದೊಂದಿಂಗೆ ದೂರದರ್ಶನ ಮಾತ್ರ ಕೊಡು ವ್ಯವಸ್ಥೆ  ಮಾಡಿದ್ದರಂತೆ, ಘಂಟೆಗೆ ಘಂಟೆಗೆ ಬಿಸಿ ನೀರು ತುಂಬಿಸಿದ ಇ೦ಜೆಕ್ಶನ್ ದನಕ್ಕೆ ಕೊಟ್ಟಂಗೆ ಸುಮ್ಮನೆ ಕೊಟ್ಟು ಕಾಡಿಸ್ತವ್ರಂತೆ, ಒಟ್ಟಲ್ಲಿ ಜೈಲಿಗಿಂತ ಕಡೆ ಅಸ್ಪತ್ರೆನಾ ಇವರಿಗಾಗಿ  ಮಾಡವ್ರಂತೆ ರೋಗ ಅಂತ ಸುಳ್ಳು ಹೇಳಿ ಬಂದೊವ್ರು ನಿಜವಾದ ರೋಗ ಅಂಟಿಸ್ಕೊಂಡು ಹೊರ ನಡೆಯೋ  ಹಂಗೆ ಮಾಡವ್ರಂತೆ. ಎಲೆ!! ಎಲೆ !!ಎಲೆ!! ನಿನ್ಗೆನ್ಗೆ ಗೊತ್ತಲ ಇವೆಲ್ಲ ಅಂದ ರಾಘ್ಯ ಸಿದ್ದನನ್ನೇ ಬಿಟ್ಟ ಬಾಯಿ ಮುಚ್ಚದೇ ಹಂಗೆ  ನೋಡುತ್ತಾ.!!! ಏ ನಿಂಗೆ ಅಷ್ಟು ಗೊತ್ತಗಲ್ವೇನ್ಲಾ !!!!! ಹಿಂಗೆ ತನ್ನ ಪ್ರಮಾತಿತಾ ಶಿಷ್ಯ ಕಟ್ಟಾ ಹೇಳಿದ್ದಕ್ಕೆ ಅಲ್ವೆನ್ಲಾ ಎಡ್ಡಿ ಕಚ್ಚೆ ಎತ್ತಿ ಜೈಲು ಕಡೆ ಹೊಂಟಿದ್ದು , ಇದಕ್ಕಿಂತ ದೊಡ್ಡ ಪುರಾವೆ ಬೇಕೆನ್ಲಾ ನಿಂಗೆ.

ಹಿಂಗೆ ವಿಸಿಯ ಮುಂದುವರಿತಿರಬೇಕಾದರೆ  ಕಟ್ಟೆ ಪಕ್ಕ ಕಟ್ಟಿದ್ದ ವಾರಿಜಳ ನಾಯಿ ಗೂಳಿಡ ಪ್ರಾರಂಬಿಸಿತು , ವಾರಿಜ ಥೂ.....!!! ಇದ್ಯಾಕೆ ಹಿಂಗೆ ಅರಚುತ್ತೆ ಎಂದು ಚಿರಿ ಪಿರಿ ಗುಟ್ಟುತ್ತಲೇ ತನ್ನ ಬುಟ್ಟಿ ಮೊಡೆಯಲು ತಂದ ಕಾಡು   ಬೀಳ ಹೊರೆಯನ್ನು ದಬಾರಂತ  ನೆಲಕ್ಕೆ ಒಗೆದಿದ್ದಳು, ಅಲ್ಲೇ ಪಕ್ಕದಲ್ಲೇ ಹೂಜಿಯಲ್ಲಿ ತುಂಬಿಸಿ ಇಟ್ಟಿದ್ದ ನೀರನ್ನು ಗುಟುಕರಿಸಿ ತನ್ನ ಸೀರೆ ಸೆರಗಿಂದ ಗಾಳಿ ಬೀಸುತ್ತಾ  ಕಟ್ಟೆ ಮಂದಿ ಚರ್ಚೆ ಆಲಿಸ ತೊಡಗಿದಳು.ಇದೇನ್ಲೆ ಸಿದ್ದ  ನಮ್ಮ ಕುಮಾರನ್ಗೆ ಭೊಮಿ ಗುಳುಂ ಮಾಡಿದ ಆರೋಪದೊಂದಿಗೆ ಬುಡಕ್ಕೆ ತಂದಿಡುವ ಕೇಸು ಒಂದು ತಗುಲಿ ಹಾಕೊಂಡಿದೆಯಲ್ಲ  ಅಂದ ವೆಂಕ. ಸಿದ್ದ ಯಾಕೋ ಸಿರಿಯಸ್ ಆಗಿ ನಮಗ್ಯಾಕಲೆ ಹೋಗ್ ಬರೋ ಅವ್ರ ಉಸಾಬರಿ, ಏನಾರ ಮಾಡ್ಕೊಳ್ಳಿ ಪಾಪ ಮಗು ಐತೆ ಅದ್ರ ಬಗ್ಗೆ ಯೋಚನೆ ಮಾಡ್ಲ. ವಿಸಿಯ ಸಿಕ್ತು ಅಂತ ಹೆಂಗೆಂಗೋ ಮತೊಡಿದು ಯಾಕ್ಲ, ಬಿಟ್ಟಾಕಲ ಏನಾರ ಮಾಡ್ಕೊಳ್ಳಿ ,ಅವರವರ ಸಂಸಾರ , ಮಗ ಸೊಸೆ ಇಬ್ಬರು ಜೈಲಿಗೆ ಹೋದ್ರೆ ದೊಡ್ಡ ಗೌಡ್ರ ನೋಡ್ಕೋಳ್ಳಕ್ಕೆ   ಒಂದು ಜನ ಆಯಿತು ಅಂತ ಸಂತೋಷ ಪಡ್ಲ, ಥುಕ್ಕ್.....!! ಅಂತ ಎಲೆ ಅಡಿಕೆ ಉಗಿದು ಸೆರಗಿಂದ ಬಾಯಿ ಒರೆಸಿಕೊಂಡಿದ್ಲು ವಾರಿಜ.ನೋಡ್ರಲೇ( ಕಟ್ಟೆ ಮಂದಿಯನ್ನು ಉದ್ದೇಶಿಸಿ ) ಜೈಲಿಗೆ ಹೋಗೋ ಲಿಸ್ಟ್ ಬಹಳ ದೊಡ್ದದಿದಿಯಂತೆ ಅದಕ್ಕೆ ವಿದಾನ ಸೌಧದಿಂದ ಒಂದು ಬಸ್  ಟ್ರಿಪ್ ಹಾಕೊತ್ತರಂತೆ ಹಂಗೆ ಕೆಲವರಿಗೆ ಅಲ್ಲೇ ಸೆಟ್ಟಲ್ ಆಗಕ್ಕೆ ಹೊಗವ್ರು ಹಾಗು ಅಲ್ಲಿರುವವರನ್ನು ವಿಚಾರಿಸಿಕೊಂಡು ಬರೋವರಿಗೂ ಅನುಕೂಲ ಅಗ್ಲಿಂತ .ಒಟ್ಟಲ್ಲಿ ತಿಹಾರ್,ಚಂಚಲಗುಡು,ಪರಪ್ಪನ ಅಗ್ರಹಾರ ಹೊಸ ಆಕರ್ಷಣಿಯ ಸ್ಥಳಗಳಾಗಿವೆ ನೋಡ್ರಿ ಅಂದ ಸಿದ್ದ .ಈ ನಡುವೆ ಈ ಬಿ ಜೆ ಪಿ ಪಕ್ಷದ ಹಿರಿಯ ರಥ ಹೊಂಟ್ಸನಲ್ಲ ಯಾಕ ಬೇಕಿತ್ತು ಇವಂಗೆ ,ನನ್ನಗೆ ಅರಾಂಸೆ ಕೂತ್ಕೋ ಬಹುದಿತ್ತು, ಸಿವನೇ ಏನೆಲ್ಲ ನೋಡಬೇಕೋ ಅಂತ ನಿಟ್ಟುಸಿರು ಬಿಟ್ಟಿತು ಊರ ಹಿರಿಯ ಅಜ್ಜ ಕಟ್ಟೆ ಮರಕ್ಕೆ ಒರಗುತ್ತಾ.......... 

Thursday, October 20, 2011

ಶಂಕರ್ ನಾಗ್ ಕನಸು ನನಸಾದ ದಿನ - ನಮ್ಮ ಮೆಟ್ರೋ ಇಂದು ಜನತೆಗೆ.


ನನ್ನ ಬೆಂಗಳೂರಿನ ಜನ ಮೆಟ್ರೋದಲ್ಲಿ ಓಡಾಡಬೇಕು , ಆದರೆ ಇದರಿಂದ ನನ್ನ ಬೆಂಗಳೂರಿನ ಸೌಂದರ್ಯ ಹಾಳಾಗಬಾರದು,ಯಾವುದೇ ಕಟ್ಟಡಗಳಿಗೂ ಹಾನಿಯಾಗಬಾರದು,ಮೆಟ್ರೋ ಏನಿದ್ದರು  ಸುರಂಗ ಮಾರ್ಗದಲ್ಲೇ ಸಂಚರಿಸಬೇಕು,ಮೆಟ್ರೋದಲ್ಲಿ ಸಂಚರಿಸುವ ಪಾದಚಾರಿಗಳು ಅಷ್ಟೇ ಸುರಂಗ ಮಾರ್ಗದಲ್ಲೇ ಸಂಚಾರ ವ್ಯವಸ್ಥೆ ಅವರಿಗೆ ಕಲ್ಪಿಸಬೇಕು.ಅದರಿಂದಾಗಿ ಇತರ ಟ್ರಾಫಿಕ್ ವ್ಯವಸ್ಥೆಗಳಿಗೆ  ತೊಂದರೆ ಆಗಬಾರದು. ಇಂಥ ಪ್ರಥಮ ಬೆಂಗಳೂರು ಮೆಟ್ರೋ ಕನಸನ್ನು ಕಂಡವರು ದಿವಂಗತ ಮೆಚ್ಚಿನ ನಟ ಶಂಕರ್ ನಾಗ್ , ೧೯೮೭ ರಲ್ಲಿ ತನ್ನ ಮಾಲ್ಗುಡಿ ಡೇಸ್ ಪ್ರದರ್ಶನಕ್ಕೆ ಲಂಡನ್ ಗೆ ಹೋದಾಗ ಅಲ್ಲಿನ ಮೆಟ್ರೋ ನೋಡಿ ತನ್ನ ಬೆಂಗಳುರಿಗೂ ಇಂತದ್ದೊಂದು ಸಂಚಾರ ವ್ಯವಸ್ಥೆ ಬೇಕು ಅನ್ನೋ ಕನಸು ಕಂಡಿದ್ದ ಶಂಕರ್.ಅದಕ್ಕಾಗಿ ತನ್ನ ಸ್ವಂತ ಹಣದಿಂದ ಜರ್ಮನ್ ಮತ್ತು ಜಪಾನ್ ನಿಂದ ೨ ತಂಡವನ್ನು ಕರೆಸಿ ಸರ್ವೇ ಮಾಡಿಸಿದ್ದ. ಆಗಿನ ಕಾಲದಲ್ಲಿ ಈ ಕಾರ್ಯಕ್ಕೆ ಶಂಕರ್ ಗೆ  ತಗುಲಿದ ವೆಚ್ಚ ಬರೋಬ್ಬರಿ ೮ ಲಕ್ಷ ರುಪೈಗಳು.ಹೀಗೆ ನಡೆಸಿದ ಸರ್ವೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು ಆಗಿನ ಸರ್ಕಾರ ಈ ಬಗ್ಗೆ ಕಾಳಜಿ ತೋರಿಸದ ಕಾರಣ ಅದು ಮೂಲೆಗುಂಪು  ಆಗಿತ್ತು.ಇಲ್ಲದಿದ್ದಲ್ಲಿ ೧೫-೨೦ ವರುಷಗಳ ಹಿಂದೆಯೇ ಬೆಂಗಳೂರಿಗೆ ಮೆಟ್ರೋ ದೊರಕುತ್ತಿತ್ತು. ಶಂಕರ್ ನಾಗ್ ಪ್ಲಾನ್ ಪ್ರಕಾರ ಸಂಪೂರ್ಣ ಮೆಟ್ರೋ ಕಾಮಗಾರಿ ಸಂಪೂರ್ಣ ಬೆಂಗಳೂರು ನಗರಕ್ಕೆ ಸಿಗುವಂತೆ ೩ ವರುಷಗಳಲ್ಲಿ ಪೂರ್ಣ ಗೋಳ್ಳುತಿತ್ತು.೧೩-೧೪ ಸಾವಿರಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಇಂದಿನ ಮೆಟ್ರೋಗು ಶಂಕರ್ ಕನಸಿದ ಮೆಟ್ರೋಗು ವ್ಯವಸ್ತೆಯಲ್ಲಾಗಲಿ, ಖರ್ಚಲ್ಲಾಗಲಿ ಅಜಗಜಾಂತರ ವ್ಯತ್ಯಾಸವಿದೆ.ಆದ್ರೆ ಇಂದಿನ ಪರಿಸ್ತಿತಿಯಲ್ಲಿ ಇದು ಅನಿವಾರ್ಯ, ಬೆಂಗಳೂರಿನ ವ್ಯಾಪ್ತಿ ದೊಡ್ಡದಾಗಿದೆ, ಬಹಳಷ್ಟು ಅಭಿವೃದ್ದಿ ಹೊಂದಿದೆ, ಖರ್ಚು ವೆಚ್ಚಗಳು ಜಾಸ್ತಿಯಾಗಿದೆ,ಶಂಕರ್ ಕನಸಿದಂತೆ ಎಲ್ಲ ಕಡೆ ಸುರಂಗ ಮಾರ್ಗ ನಿರ್ಮಿಸಿದಲ್ಲಿ ವೆಚ್ಚ ದ್ವಿಗುಣ ಗೊಳ್ಳುತ್ತದೆ,ಈ ನಡುವೆ ಕಾಣದ ರಾಜಕೀಯ(ಅ)ಇಚ್ಚಾಶಕ್ತಿ ಕೂಡ ಕೆಲಸ ಮಾಡಿರಬಹುದೇ ಗೊತ್ತಿಲ್ಲ ,ಈ ಎಲ್ಲ ನಿಟ್ಟಿನಲ್ಲಿ ಯೋಚಿಸಿದಾಗ ಶಂಕರ್ ನಾಗ್ ಮೆಟ್ರೋ ಕನಸು ಅವ ಕನಸಿದಂತೆ ಅಲ್ಲದಿದ್ದರೂ ಬೇರೆ ರೂಪದಲ್ಲಾದರೂ ಸಾಕಾರಗೊಳ್ಳುತ್ತಿದೆಯಲ್ಲ ಎಂದು ಖುಷಿ ಪಡಲು ಅಡ್ಡಿ ಇಲ್ಲ. 

ಇವತ್ತು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅತ್ಯಾದುನಿಕ ಸೌಲಭ್ಯ ಹೊಂದಿದ ಹೈಸ್ಪೀಡ್ ಮೆಟ್ರೋ ರೈಲು ಸಂಪರ್ಕ ಬೆಂಗಳೂರಲ್ಲಿ ಕೇಂದ್ರ ನಗರಾಬಿವ್ರುದ್ದಿ ಸಚಿವ ಕಮಲನಾಥ್ , ಕೇಂದ್ರ ರೈಲ್ವೆ ಸಚಿವ ದಿನೇಶ್ ದ್ವಿವೇದಿ,ಹಾಗು ರಾಜ್ಯದ ಮುಖ್ಯಮಂತ್ರಿ ಡಿ, ವಿ , ಸದಾನಂದ ಗೌಡ ಅವರ ನೇತ್ರತ್ವದಲ್ಲಿ ಉದ್ಘಾಟನೆ ಗೊಳ್ಳಲಿದೆ.ಆ ಮೂಲಕ ಶಂಕರ್ ನಾಗ್ ಕಂಡಿದ್ದ ಕನಸು ನನಸಾಗುತ್ತಿದೆ.ಸಂಜೆ ೪ ಘಂಟೆಯ ನಂತರ ಸಾರ್ವಜನಿಕರಿಗೆ ಈ ಸೇವೆ ಲಭ್ಯವಾಗಲಿದೆ.ನಮ್ಮ ಮೆಟ್ರೋ ನಿರ್ದೇಶಕ ಕೆ ಏನ್ ಶ್ರೀವಾಸ್ತವ್,ವಿ . ಮಧು ,ದಿಲ್ಲಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಇ ಶ್ರೀಧರನ್ ಈ ಯೋಜನೆಯ ಆರಂಭಿಕ ರೂವಾರಿಗಳು.ಹಾಲಿ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಏನ್ . ಶಿವ ಶೈಲಂ ಹಾಗು ಅವರ ಟೀಂ , ೨೦೦೪ ರಿಂದ ಕರ್ತವ್ಯ ಮೆರೆದ ಎಲ್ಲ ರಾಜಕಾರಣಿಗಳು ಹಾಗು ಸಂಭದಪಟ್ಟ ಸರ್ಕಾರಗಳು , ಅಪಾರ ಸಂಖ್ಯೆಯ ಕಾರ್ಮಿಕ ವರ್ಗ ,ಟ್ರಾಫಿಕ್ ಕಿರಿ ಕಿರಿ ಯನ್ನು ನಮ್ಮ ಮೆಟ್ರೋ ಸಲುವಾಗಿ ಆತ್ಮೀಯತೆ ಇಂದಲೇ ಅನಿವಾರ್ಯವಾಗಿ ಸ್ವೀಕರಿಸಿದ ಬೆಂಗಳೂರು ಜನತೆ, ಸಾವಿರಾರು ಜನರು  ಮೆಟ್ರೋ ಕಾಮಗಾರಿಗಾಗಿ ತಮ್ಮ ಆಸ್ತಿ ಪಾಸ್ಥಿಯನ್ನು ಅನಿವಾರ್ಯವಾಗಿ ಒಪ್ಪಿಯೋ,ಒಪ್ಪದೆಯೋ ಕಳಕೊಂಡವರು  ಎಲ್ಲರೂ ಈ ನಿಟ್ಟಿನಲ್ಲಿ ಅಭಿನಂದನೆಗೆ ಅರ್ಹರು.ಈ ಸಂದರ್ಬದಲ್ಲಿ ಸುಮಾರು ೨೦ ವರುಷಗಳ ಹಿಂದೇನೆ ಈ ಬಗ್ಗೆ ಕನಸು ಕಂಡ ಶಂಕರ್ ನಾಗ್ ನೆನಪಾಗುತಿದ್ದಾನೆ,ಅವನ ದೂರ ದೃಷ್ಟಿ ಮೆಚ್ಚುವಂತದ್ದು, ಈ ದಿನ ಇದ್ದರೆ ಅದೆಷ್ಟು ಸಂತಸ ಪಡುತಿದ್ದನೋ......!!!!!!!!! ಅಥವಾ ಈ ಪರಿ ರಾದ್ದಾಂತ ಕಾಮಗಾರಿ , ಉದ್ಘಾಟನೆ ಗೆಂದು ನಡೆವ ದುಂದುವೆಚ್ಚ , ೪೬  ಕಿಲೋ ಮೀಟರ್ ಪೂರ್ಣಗೊಳ್ಳಬೇಕಿರುವ ಮೆಟ್ರೋ ಬರಿಯ ೬ ಕಿಮಿ ಪೂರ್ಣಗೊಂಡು ಅದ ಉದ್ಘಾಟನೆ ನಡೆಸುತ್ತಿರುವದನ್ನು ನೋಡಿ ಮರುಕ ಪಡುತಿದ್ದನೋ !!!!!!! ಗೊತ್ತಿಲ್ಲ.

ಸಂಪೂರ್ಣ ಬೆಂಗಳೂರು  ಮೆಟ್ರೋ ಪಡೆಯಲು ಇನ್ನು ೪-೫ ವರುಷ ಬೇಕಾಗಬಹುದು.ಅಲ್ಲದೆ ಮೆಟ್ರೋದಿಂದ ಸಂಪೂರ್ಣ ಟ್ರಾಫಿಕ್ ಕಂಟ್ರೋಲ್ ಆಗಬಹುದು ಎಂಬುದನ್ನು ನಿರೀಕ್ಷಿಸಲು ಸಾದ್ಯವಿಲ್ಲ.  ಅದೇನೇ ಇರಲಿ ಈ ಮೂಲಕ ಕರ್ನಾಟಕ ಒಂದು ಹಿರಿಮೆಯನ್ನು ತನ್ನ ಮುಡಿಗೇರಿಸಿಕೊಂಡಿದೆ  ಶುಭವಾಗಲಿ.

Tuesday, October 18, 2011

ವ್ಯವಸ್ಥೆಯ ಬಾಹುಬಂದನದಲ್ಲಿ ಬಂದಿಯಾಗಿರುವ ಮಾನವೀಯತೆ.


ಮನುಕುಲದ ಸಂಸ್ಕೃತಿ ಏನು?ಎಲ್ಲ ಧರ್ಮಗಳನ್ನು ಮೀರಿದ ಆ ಸಂಸ್ಕೃತಿಯ ಅರಿವು ನಮಗೆ ಇರುವದಿಲ್ಲ ಯಾಕೆ? ನಾವು ಇನ್ನೊಬ್ಬನನ್ನು ಗುರುತಿಸಬೇಕಾದರೆ ಅವನ ಜಾತಿ ಧರ್ಮದ ಆಧಾರದಲ್ಲೇ ಗುರುತಿಸತೋಡಗುತ್ತೆವಲ್ಲ , ಅವನು ತನ್ನಂತೆ ಒಬ್ಬ ಮಾನವ, ಮೊದಲು ಆ ದೃಷ್ಟಿಯಲ್ಲಿ ಇನ್ನೊಬ್ಬರನ್ನು ನೋಡುವದಿಲ್ಲ ಯಾಕೆ?ಜಾತಿ-ಮತ-ಕುಲ-ಪಂಥಗಳ ಎಲ್ಲೆಗಳನ್ನು ಮೀರಿ ಸಮಾಜಮುಖಿಯಾಗಿ ಮುನ್ನಡೆಯುವ ನಿಜವಾದ ಮಾನವ ಅಂತಃಸತ್ವ ಅಡಗಿರುವ ಸುಖ ನಮ್ಮದಾಗುವದಿಲ್ಲ ಏಕೆ? ಯಾರಾದರು ಮಾನವತೆಯತ್ತ ನಡೆಯೋಣ ಎಂಭ ಸಲಹೆ ಇಟ್ಟಾಗ ಅವ ಧರ್ಮಗಳ ದ್ವೇಷಿ ಆಗುತ್ತಾನೋ? ನಾನಿಲ್ಲಿ ಎತ್ತಿರುವ ಪ್ರಶ್ನೆಗಳು ವಿಚಿತ್ರ ಅನಿಸಬಹುದಲ್ವೆ !!!!!! ಇತ್ತೀಚಿಗೆ ಕಾಡುತ್ತಿರುವ ಬಹಳಷ್ಟು ಪ್ರಶ್ನೆಗಳಲ್ಲಿ ಮೇಲಿನವುಗಳು ಕೆಲವೊಂದು ಅಷ್ಟೇ.ಸಮಾಜದ ವಿವಿದ ಸ್ಥರಗಳಲ್ಲಿ ನನ್ನಂತೆ ಯೋಚಿಸಬಲ್ಲ ಹಲವು ಮಂದಿಗಳಿಗೆ ಎದುರಾಗುವ ಪ್ರಶ್ನೆಗಳು ಇವು.

ಹಾಗಾದರೆ ಮೇಲಿನ ಪ್ರಶ್ನೆಗಳಿಗೆ ಉತ್ತರ ಇಲ್ಲವೇ ಖಂಡಿತ ಇದೆ.ಆದರೆ ಅವನ್ನು ಹೇಳುವದರಲ್ಲಿ ಆಗುವ ಒಳಿತಿಗಿಂತ ಹೇಳಲು ಹೊರಟ ವ್ಯಕ್ತಿಗೆ ಅಪವಾದ ಎದುರಾಗುವದೆ ಹೆಚ್ಚು.ಹುಟ್ಟಿನಿಂದಲೇ ಧರ್ಮ ಆಚಾರಗಳು ನಮ್ಮದಾಗಿರುವದಿಲ್ಲ, ಅವನ್ನು ಬೆಳೆಯುತ್ತ ಪಡೆಯುತ್ತೇವೆ ಯಾಕೆಂದರೆ ಉತ್ತಮ ವ್ಯಕ್ತಿಯಾಗಿ ರುಪಿತವಗುವದಕ್ಕೆ ಮತ್ತು ಜೀವನಕ್ಕೆ ಒಂದು ನೀತಿ ನಿಯಮದ ಅನುಸ್ಟಾನಕ್ಕೆ ಮಾರ್ಗದರ್ಶಿ  ಆಗುವದಕ್ಕೆ!!!! ಅನ್ನೋದು ಕೆಲವೊಂದು ಧರ್ಮ ವಿದ್ವಾಂಸರಲ್ಲಿ ಹೀಗೆ ಕೆಲವೊಂದು ಚರ್ಚೆ ನಡೆಸುತ್ತಾ ಕೇಳಿ ತಿಳಿದುಕೊಂಡೆ.,ಹಾಗಾದರೆ ಧರ್ಮಗಳನ್ನು  ಆ ನಿಟ್ಟಿನಲ್ಲಿ ನಾವು  ಎಷ್ಟು ಜನ ಅರ್ತೈಸಿಕೊಂಡಿದ್ದೇವೆ?ಹೀಗೆ ಹೇಳುವ ವಿದ್ವಾಂಸರನ್ನು ಒಳಗೂಡಿ, ರಾಜಕೀಯ ಕ್ಷೇತ್ರದಿಂದ ಹಿಡಿದು ಬಯೋತ್ಪಾದನೆಯೋರಗೆ ಧರ್ಮ ವಿಚಾರಗಳು ಹಬ್ಬಿದೆಯಲ್ಲ ಇದಕ್ಕೆಲ್ಲ ಹಾಗಾದರೆ ಕಾರಣ ನಾವೇ ಅಲ್ಲವೇ?? ಧರ್ಮಗಳು  ಉತ್ತಮ ವ್ಯಕ್ತಿಯಾಗಿ ರುಪಿತವಗುವದಕ್ಕೆ ಮತ್ತು ಜೀವನಕ್ಕೆ ಒಂದು ನೀತಿ ನಿಯಮದ ಅನುಸ್ಟಾನಕ್ಕೆ ಮಾರ್ಗದರ್ಶಿ  ಅನ್ನುವದೇ ಸತ್ಯವಾದರೆ ಅದನ್ನು ನಾವು ಅಳವಡಿಸಿಕೊಂಡಿದ್ದೆ ನಿಜವಾದಲ್ಲಿ ಧರ್ಮದ ಹೆಸರಲ್ಲಿ ಅನಾಚಾರ ರುಪಿತಗೊಂಡಿದ್ದನ್ನು ನೋಡಿದಲ್ಲಿ ಇದನ್ನು ಎಲ್ಲರೂ ಸರಿಯಾಗಿ ಅರ್ತಯೇಸಿಲ್ಲ ಅನ್ನುವ ನಿರ್ಧಾರವೇ ಸರಿ ಅನ್ನೋದು ನನ್ನ ಅನಿಸಿಕೆ.ಇಷ್ಟಕ್ಕೂ ಧರ್ಮವಿಚಾರ ಬೇಕೇ ಬೇಡವೇ ಅನ್ನೋದು ಇನ್ನೊಂದು ತೆರನಾದ ತರ್ಕ. ಪರಸ್ಪರ ವ್ಯಕ್ತಿಗೌರವವೇ ಮಾನವತೆಯ ಮೊದಲ ಪಾಠ , ಇದೆ ಸಾಮಾಜಿಕ ನ್ಯಾಯದ ಮೊದಲ ಮೈಲಿಗಲ್ಲು ಆದುದರಿಂದ ಧರ್ಮ ನಿಟ್ಟಿನಲ್ಲಿ ಸಾಗುವವರು ಹಾಗು ತನ್ನದೇ ಅತ್ಮಬಲದ ಮೂಲಕ ಸಾಗುವವರು ಯಾರನ್ನು ದೂರಲು ಆ ಅರ್ಹತೆ ಯಾರಿಗೂ ಇಲ್ಲ.

ನಾನು ಕಂಡು ಕೊಂಡಂತೆ ಭಯೋತ್ಪಾದನೆಯು ರಾಜಕೀಯ ಲಾಭಕ್ಕಾಗಿ ನೆಡೆಸುವ ಹಿಂಸೆಯ ಪ್ರಯೋಗ. ಸಾಮಾನ್ಯವಾಗಿ ಯುದ್ಧಗಳಲ್ಲಿರುವಂತೆ ಯಾವುದೂ ನೀತಿ ನಿಯಮಗಳು ಭಯೋತ್ಪಾದನೆಯಲ್ಲಿರುವುದಿಲ್ಲ. ಇದರಿಂದಾಗಿ ಯಾವುದೇ ಸಮಾಜದ ನೀತಿ ನಿಯಮಗಳನ್ನು ಧಿಕ್ಕರಿಸಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ವ್ಯವಸ್ಥಿತವಾಗಿ ನೆಡೆಸಲ್ಪಡುವ ಕ್ರಿಯೆ.
ಭಯೋತ್ಪದಕರ ಧಾಳಿಯು ಸಮಾಜದ ಎಲ್ಲ ವರ್ಗ ಮತ್ತು ಪಂಗಡಗಳನ್ನು ಭೇದ ಭಾವವಿಲ್ಲದೆ ನಾಶಪಡಿಸುವುದರಿಂದ "ಭಯೋತ್ಪಾದನೆ" ಎಂಬ ಪದವು, "ಅನ್ಯಾಯ", "ಅನೀತಿ", "ದೋಷಪೂರಿತ", "ವಿತಂಡ", "ಹೇಯ" ಮತ್ತು "ಹಿಂಸಾತ್ಮಕ" ಎಂಬ ಅರ್ಥ ಕೊಡುವ ಎಲ್ಲ ಪದಗಳ ಜೊತೆ ತಾಳೆ ಹೊಂದುತ್ತದೆ. ವಿಶ್ವದ ಸರ್ಕಾರಿ, ಅಸರ್ಕಾರಿ ಸಂಸ್ಥೆಗಳು ಮತ್ತು ವಿದ್ವಾಂಸರು "ಭಯೋತ್ಪಾದನೆ ಅಥವಾ ಭಯೋತ್ಪಾದಕ" ಎಂಬ ಪದವನ್ನು ವಿಶ್ವ ಮಾನ್ಯತೆ ಹೊಂದದ ಸೈನಿಕ ಶಕ್ತಿ ಎಂದೇ ಪರಿಗಣಿಸುತ್ತಾರೆ. ಯಾಕೆಂದರೆ ವಿಶ್ವದ ಎಲ್ಲ ದೇಶಗಳ ಸೈನ್ಯ ಸಂಸ್ಥೆಗಳು ವಿಶ್ವಸಂಸ್ಥೆಯ ಸಾಮಾನ್ಯ ಸೈನಿಕ ನಿಯಮಗಳಿದೆ ಬಧ್ಧರಾಗಿರುತ್ತಾರೆ. ಆದ್ಧರಿಂದ ಭಯೋತ್ಪಾದಕರು ಯಾವಾಗಲೂ ವಿಶ್ವದ ಖಂಡನೆಗೆ ಒಳಗಾಗುವ "ದುರ್ಜನರು".ಹೀಗಿರಬೇಕಾದರೆ ಧರ್ಮಗಳು ರಾಜಕೀಯ  ಮತ್ತು  ಬಯೋತ್ಪಾದನೆ ಜೊತೆಗೆ ತಳುಕು ಹಾಕಿಕೊಳ್ಳುತ್ತವಲ್ಲ ಯಾಕೆ?ಎಲ್ಲರಿಗೂ ತಮ್ಮ ನಿಲುಕಿಗೆ ಸಿಗುವ ವಿಚಾರ ಆಗಿದ್ದರು ಕೂಡ ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅನಿವಾರ್ಯತೆ ಇವತ್ತಿನ ದಿನಗಳಲ್ಲಿ  ಇದೆ.

ರಾಜಕಿಯತೆಗೆ ಧರ್ಮ ಜಾತಿ ಯಾಕೆಂದರೆ ವೋಟ್ ಬ್ಯಾಂಕ್ ರಚಿಸಿಕೊಳ್ಳುವದಕಷ್ಟೇ.ಆದರೆ ನಮ್ಮ ಹಲವಷ್ಟು ರಾಜಕಾರಣಿಗಳಿಗೆ ಸಮಾಜದಲ್ಲಿ ಈ ಮೂಲಕ ಒಡಕನ್ನು ಬಿತ್ತುತಿದ್ದೇವೆ ಅನ್ನುವದು  ಗೊತ್ತಿಲ್ಲ ಅಂತ ಅಲ್ಲ ,ತಮ್ಮ ಸ್ವಾರ್ಥಕ್ಕಾಗಿ ಈ ವಿಚಾರ ಅವರಿಗೆ ಗೌಣ.ಇದಕ್ಕೆ ಪ್ರಜೆಗಳು ಆದ ನಮ್ಮದು ಬಹಳಷ್ಟು ಪಾಲು ಇದೆ.ನಾವಿನ್ನು ಪಕ್ಷಾತೀತವಾಗಿ ಯೋಚನೆ ಮಾಡುವದನ್ನು ರೂಡಿಸಿಕೊಂಡೆ  ಇಲ್ಲ.ಕಾರಣ ಇಷ್ಟೇ ನಾವು ಮೊದಲು ಮಾನವ ಅನ್ನುವ ದೃಷ್ಟಿಕೋನವೇ ನಮ್ಮಲ್ಲಿ ಇಲ್ಲ. ನಾವು ಜಾತಿ ಧರ್ಮ ಹೆಸರಿನಲ್ಲೇ ಗುರುತಿಸಿಕೊಳ್ಳಲು ಇಚ್ಛೆ ಪಡುತ್ತೇವೆ ಆದುದರಿಂದ ನಮ್ಮ ಈ ತನವನ್ನು ರಾಜಕಾರಣಿಗಳು  ಸುಲಬದಲ್ಲಿ  ತಮ್ಮ ಸ್ವಾರ್ಥಕ್ಕಾಗಿ  ಬಳಸಲು ನಾವೇ ಅನುವು ಮಾಡಿಕೊಟ್ಟಿದ್ದೇವೆ.ಹೀಗಿದ್ದಾವಾಗ ರಾಜಕಾರಣಿಗಳನ್ನು ದೂರುವದು ಎಂತು?ಈ ರೀತಿಯಲ್ಲಿ ಮೂಲವನ್ನು ಅವಲೋಕಿಸುತ್ತಾ ನಡೆದಲ್ಲಿ ಸಮಾಜ ಒಡೆಯುವ ಕೆಲಸದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ಪಾತ್ರವಗಿದ್ದ್ದೇವೆ ಅಂದರು ತಪ್ಪಿಲ್ಲ ಅಲ್ಲವೇ?
ಬಯೋತ್ಪಾದನೆ ಎಂಬುದು ಒಬ್ಬ ವ್ಯಕ್ತಿ ಇಂದ ರೂಪುಗೊಳ್ಳಲು ಸಾಧ್ಯವೇ ಇಲ್ಲ , ಅದಕ್ಕೊಂದು ಸಂಘಟನೆ ಬೇಕು ಅದರ ಕ್ರಿಯೆಯನ್ನು ಜಾರಿಗೊಳಿಸಲು ಒಂದಷ್ಟು ಸಾವಿರ ಮಂದಿ ಅವರಿಗೆ ಬೇಕು.ಸಾಮಾಜಿಕ  ಸಮಾನತೆ ಎಂಬೋ ನಿಟ್ಟಿನ ಹಿಂಸಾ  ರೂಪಕ!! ಬಯೋತ್ಪದನೆಯ ಒಂದು ಮುಖವಾದರೆ ಧರ್ಮ ನ್ಯಾಯ!!ಅನ್ನುವದು ಇದರ  ಇನ್ನೊಂದು ಹಿಂಸಾ ಮುಖ.ಇವೆರಡು ಕ್ರಿಯೆಗಳು ಮೇಲೆ ಹೇಳಿದಂತೆ "ಅನ್ಯಾಯ", "ಅನೀತಿ", "ದೋಷಪೂರಿತ", "ವಿತಂಡ", "ಹೇಯ" ಮತ್ತು "ಹಿಂಸಾತ್ಮಕ" ಎಂಬ ಅರ್ಥ ಕೊಡುವ ಎಲ್ಲ ಪದಗಳ ಜೊತೆ ತಾಳೆ ಹೊಂದುವ ಭಯೋತ್ಪಾದನೆ ಕ್ರಿಯೆಯೇ.ಧರ್ಮದ ಹೆಸರು ತೆಗೆದು ಒಂದಷ್ಟು ಜನರನ್ನು ಒಟ್ಟುಗೂಡಿಸುವದು ಬಹಳ ಸುಲಭದ ದಾರಿ.ಆ ಮೂಲಕ ತನ್ನ ಕ್ರಿಯೆಯನ್ನು ಜಾರಿಗೆ ತರುವಾಗ ಎಲ್ಲ ಧರ್ಮಿಕರನ್ನು ಸೇರಿಸಿಯೇ ಕೊಲ್ಲುತ್ತಾರಲ್ಲವೇ ಈ ಬಯೋತ್ಪಾದಕರು ಅಂದರೆ ಅವರು ಧರ್ಮದ ಹೆಸರನ್ನು ಬಳಸುವದು ತಮ್ಮ ಸ್ವಾರ್ಥಕ್ಕೆ ಬಳಸುವದು.ತಮ್ಮ ರಾಜಕೀಯ ಇತರ ಉದ್ದೇಶಗಳ ಯಶಸ್ವಿಯಾಗಿ ಧರ್ಮದ ಹೆಸರನ್ನು ಅವಲಂಭಿಸಿ ಮಾಡುವ ಹೇಯ ಕೃತ್ಯ.ಇವರು ಯಾವ ಜಾತಿ ಧರ್ಮಕ್ಕೂ ಸೇರಿದವರಲ್ಲ ಇವರ ಜಾತಿ ಧರ್ಮ ಒಂದೇ ಅದು ರಕ್ತ ಪಿಪಾಸುತನ.ಅಂದರೆ ಭಯೋತ್ಪಾದನೆಗೆ ಸಂಸ್ಕೃತಿಯೂ ಇರುವುದಿಲ್ಲ. ಸಂವೇದನೆ ಇರುವುದಿಲ್ಲ. ಮಾನವತೆಗೆ ಅಲ್ಲಿ ಅವಕಾಶವಿರುವುದಿಲ್ಲ. ಏಕೆಂದರೆ ಭಯೋತ್ಪಾದನೆಯ ಮೂಲ ತಳಹದಿ ದ್ವೇಷ, ಅಸಹನೆ, ಹಿಂಸೆ, ಮತ್ಸರ, ಮತಾಂಧತೆ, ಸಮರಶೀಲತೆ ಮತ್ತು ಮಹತ್ವಾಕಾಂಕ್ಷೆ ಈ ಅರಿಷಡ್ವರ್ಗಗಳನ್ನು ಹೊಂದಿರುವ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ,ಮತ್ತೆ ಇದರ ಮೂಲವನ್ನು ಕೆದಕುತ್ತಾ ಸಾಗಿದಲ್ಲಿ ನಮಗೆ ಅರಿವಾಗುವದು ನಮ್ಮಲ್ಲಿ ಮಾನವೀಯತೆ ,  ಮನುಕುಲ ಸಂಸ್ಕೃತಿ ಮರೆ ಅದುದೇ ಕಾರಣ ಅನ್ನುವದು ಸ್ಪಷ್ಟ ಅಲ್ಲವೇ?


ಇಂದಿನ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಮೂಢ ಆಚರಣೆಗಳನ್ನು ಕಾಣಬಹುದು , ಇದು ಉತ್ತಮ ಸಮಾಜಕ್ಕೆ ಖಂಡಿತ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲ  ಬದಲಾಗಿ ಜಾತಿ ವೈಷಮ್ಯಗಳಿಗೆ ನಾಂದಿ ಹಾಡಿದೆ.ಪರಸ್ಪರ ಅಪನಂಬಿಕೆಗಳು ಸಂಶಯ ದೃಷ್ಟಿಗಳು ಜಾತಿ ವ್ಯವಸ್ತೆಯ ಮೂಲಕ ಮೆರೆದಿದೆ.ಮಾನವೀಯ ಸಂವೆದನನೆಗಳು ಅಪರೂಪವಾಗುತ್ತಿದೆ ,ಹಾಗೆ ನೋಡಿದಲ್ಲಿ ನಮ್ಮೆಲ್ಲ ಜ್ವಲಂತ ಸಮಸ್ಯೆಗಳನ್ನು ಪರಹರಿಸಿಕೊಳ್ಳುವಲ್ಲಿ ನಮ್ಮ ಮನುಕುಲ ಸಂಸ್ಕೃತಿಯನ್ನು ಎಲ್ಲರೂ ಮೆರೆದರೆ ಅದೇ ದೊಡ್ಡ ಪರಿಹಾರ ಆಗಬಲ್ಲುದು. ದೇಶ ಗಡಿ ದಾಟಿ ಮಾನವ ಕುಲಕೋಟಿಗಳು  ಇದ ಅರ್ತೈಸಿಕೋಳ್ಳಬೇಕಿದೆ , ಹರಿಯುವ ನೀರು ಯಾವತ್ತು ಕೊಳದಲ್ಲಿ ತುಂಬಿರುವ ನೀರಿಗಿಂತ ಸ್ವಚ್ಹ. ಧರ್ಮಗಳಿಗೆ ಅಂಟಿಕೊಂಡಾದರು ಸರಿ, ಧರ್ಮಬಾದಿತರಾಗಿ ಇಲ್ಲದಿದ್ದರೂ ಸರಿ. ಅದೆಲ್ಲದವನ್ನು ಮೀರಿ ಪರಸ್ಪರ ಮಾನವ ಮಾತ್ರರಿಂದ ವ್ಯಕ್ತಿಗಳನ್ನು ಗುರುತಿಸೋಣ,ಪರಸ್ಪರ ವ್ಯಕ್ತಿ ಗೌರವಗಳು ಮೆರೆಯಲಿ. ಆ ಮೂಲಕ ಸಮಾಜದ ಮೂಲ ವಾಹಿನಿಯಲ್ಲಿ ನಿಂತು ಒಂದಷ್ಟು ನಮಗಾಗುವ ಸಮಾಜಮುಕಿ ಕೆಲಸಗಳಲ್ಲಿ ತೊಡಗೋಣ.ಆ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ. ಇದು ಇವತ್ತಿಂದ ನಾಳೆಗೆ ಬದಲಾವಣೆ ತರುತ್ತದೆಂದಲ್ಲ, ಆದರೆ ಇದಕ್ಕಿಂತ ಸೂಕ್ತ ದಾರಿಗಳು ಬೇರೆ ಕಾಣುತ್ತಿಲ್ಲ. ಧರ್ಮ ಪಂಡಿತರು , ವಿವಿದ ಧರ್ಮದ ಶ್ರ್ಹದ್ದಾ ಕೇಂದ್ರಗಳು ಧರ್ಮ ಬೊದನೆ ಜೊತೆ ಜೊತೆಗೆ ಮಾನವೀಯ ಸಂವೇದನೆ ಕಾರ್ಯಗಳನ್ನು ಹಮ್ಮಿಕೊಳ್ಳಲಿ.ಈ ಕಾರ್ಯಗಳು ಸಕಲ ಮಾನವ ಜೀವರಾಶಿಗೂ ಸಿಗಲಿ.ಆ ಮೂಲಕ ಮಾನವ ಜನ್ಮದ ಸುಖಾಮೃತ ನಮ್ಮೆಲ್ಲರದ್ದಾಗಲಿ.
ನಿಮ್ಮವ ..................
ರಾಘವೇಂದ್ರ ತೆಕ್ಕಾರ್