Friday, September 9, 2011

ನನ್ನ ಸಹೋದರ ವಿಘ್ನೇಶ್ ತೆಕ್ಕಾರ್ ಬರೆದ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ ಸಣ್ಣ ಕಥೆ ನಿಮಗಾಗಿ.

ಎಲ್ಲವೂ ಬದಲಾಗಿದೆ..............!

-     ವಿಘ್ನೇಶ್ ,ತೆಕ್ಕಾರ್ 
           ಮಾರಿ ಕಣಿವೆಯ ಕಂದರದೊಳಗಿಂದ  ನವಿಲೊಂದು ಕುಯ್ಯೋ ........ ಕುಯ್ಯೋ ಎಂದು ಕೂಗಿದಾಗ ಪುಟ್ಟಪ್ಪ ಅಂಜಿ ಅಳುಕಿ ಬಿದ್ದ.ಆತ ಆಷಾಡದ ಹನಿ ಕಡಿಯದ ಮಳೆಯಲ್ಲಿ ದತ್ತ ಕಾಡಿನಲ್ಲಿ ,ನಡುರಾತ್ರಿಯಲ್ಲಿ ನಡೆಯುತಿದ್ದ ಅನ್ನುವದಕ್ಕಿಂತ ಓಡುತಿದ್ದ ಅನ್ನುವದೆ ಸಮಂಜಸ.ಗುಳಿ ಬಿದ್ದ ಕಣ್ಣುಗಳಲ್ಲಿ ಅವ್ಯಕ್ತ ಆತಂಕ,ಮೈಯಲ್ಲಿ ಸಣ್ಣಗೆ ನಡುಕ,ಮುಂದೇನು...........?ಎಂಬ ದುಗುಡ ತುಂಬಿದ ಮನ,ಕಲ್ಲು-ಮುಳ್ಳು ,ಹಾವು-ಚೇಳುಗಳನ್ನೂ ಲೆಕ್ಕಿಸದೆ ವೇಗವಾಗಿ ಓಡುವ ಕಾಲುಗಳು,ವರುಣನ ರಕ್ಷಣೆಗೆ ಕಂಬಳಿ ಹೊದ್ದು ,ಕೈಯಲ್ಲಿ ರಕ್ತ ಸಿಕ್ತ ಚಾಕುವಿನ ಜೊತೆ ಪಲಾಯನ ಗೈಯುತಿದ್ದ ಪುಟ್ಟಪ್ಪನಿಗೆ ನವಿಲ ಕೂಗೊಂದು ಯಮಲೋಕದ ರಣ ಕಹಳೆಯಂತೆ ಕೇಳಿತು.  
               ಕಾಡು ದಾಟಿ ಟಾರು ರೋಡು ತಲುಪಿದ ಪುಟ್ಟಪ್ಪ ಬಂದ ಕಾಟದ ಲಾರಿಯೋ ಅಥವಾ ಮರಳು ಸಾಗಿಸುವ ಲಾರಿಯಲ್ಲಿ ಆದಷ್ಟು ಬೇಗ ಜಾಗ ಖಾಲಿ ಮಾಡಬೇಕು ಅಂದುಕೊಳ್ಳುತ್ತಿರುವಾಗಲೇ ಸಿಂಗಾರಿ ಪೇಟೆ ಕಡೆಯ ಇಳಿಜಾರಿನಲ್ಲಿ ಲಾರಿಯೊಂದು ಬರುವ ಸದ್ದು ಕೇಳತೊಡಗಿತು.ಲಾರಿಯ ಸದ್ದು ಕಿವಿಗೆ ಬಿದ್ದ ತಕ್ಷಣ ಕೈಯಲ್ಲಿದ್ದ ಚಾಕುವನ್ನು ಅಂಗಿ ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು ಸನ್ನದ್ದನಾದ ಪುಟ್ಟಪ್ಪ.ಗಾಡ ಕತ್ತಲೆಯಲ್ಲಿ ಮಿಂಚುವ ಮಿಂಚಂತೆ ಬೆಳಕು ಬೀರುತ್ತಾ,ರಸ್ತೆಯಲ್ಲಿದ್ದ ಮಳೆ ನೀರನ್ನು ಚಿಮ್ಮಿಸುತ್ತಾ ಬಂದ ಲಾರಿಗೆ ಕೈ ಅಡ್ಡ ಹಾಕಿದ ಪುಟ್ಟಪ್ಪನನ್ನು ಕಂಡು ಸ್ವಲ್ಪ ಮುಂದೆ ಹೋಗಿ ಬುರ್ರ್ಎಂದು ನಿಂತಿತು ಲಾರಿ.ಡ್ರೈವರ್ ತಲೆ ಹೊರ ಹಾಕಿ,ಏನು ಪುಟ್ಟೇ ಗೌಡ್ರೆ ,ಯಾವ ಕಡೆ ಹೊಂಟ್ರಿ ಈ ಕತ್ತಲಾಗೆ?ಎಂದು ಕೇಳಿದ.ಮೊದಲೇ ಹೆದರಿದ್ದ ಪುಟ್ಟಪ್ಪನಿಗೆ ಯಾರಪ್ಪ ಇವನು ನನ್ನ ಪರಿಚಯ ಇರೋನು ಎಂದೆನಿಸಿ ಮನಸಿನಲ್ಲಿ ಭಯದ ಎಳೆಯೊಂದು ಚಿಗುರಿತು.ಉತ್ತರ ಬಾರದಿದ್ದಾಗ ಲಾರಿ ಡ್ರೈವರ್, ಯಾರಂತ ಗೊತ್ತಾಗಿಲ್ವಾ ಗೌಡ್ರೆ , ನಾನು ಸಿದ್ದ ಗೌಡ್ರೆ.ಸಿದ್ದ ಎಂಬ ಹೆಸರು ಕೇಳಿದ ಕೂಡಲೇ ಮನದ ಆತಂಕ ಸರಿದು, ಓ ಸಿದ್ದ ನೀನಾ..?ಯಾವ ಕಡೆ ಹೊರಟೆ ಮಾರಾಯ ..? ಎಂಬ ಮಾತು ಬಂತು ಪುಟ್ಟಪ್ಪನ ಬಾಯಲ್ಲಿ.ತಮಿಳುನಾಡು ಗೌಡ್ರೇ,ನೀವ್...ಎಲ್ಲಿಗೆ..?  ಪುಟ್ಟಪ್ಪ ತಡವರಿಸುತ್ತಾ ..ಆಂ..ಆಂ..  ಹಾಂ ಬೆಂಗಳೂರಲ್ಲಿ ಪರಿಚಯದವರೋಬ್ರು ತೀರಿಕೊಂಡರು ಅಂತ ಸುದ್ದಿ ಬಂತು.ಹಾಗಾಗಿ ಹೊರಟೆ ಕತ್ಲಲ್ಲಿ.ಹಂಗಾರೆ ಹತ್ತಿ ಗಾಡಿ ಬೇಗ, ಕಾಡು ದಾರಿ ಕಳ್ದು ಬಿಟ್ಟರೆ ಅಮ್ಯಾಗೆ ತೊಂದ್ರೆ-ಗಿಂದ್ರೆ ಏನಾಗಕಿಲ್ಲ, ಲೇ ಸರಿ ವಸಿ ಇತ್ತ ಕಡೆಗೆ ... ಎಂದು ಕ್ಲಿನರಿಗೆ ಒದರಿದ ಸಿದ್ದ. ನಿದ್ದೆ ಕಣ್ಣಿ ನಲ್ಲೂ ಬನ್ನಿ ಬನ್ನಿ ಗೌಡ್ರೇ , ಎಂದು ತನ್ನ ಕೊಳಕು ಹಲ್ಲುಗಳನ್ನು ಕಿಸಿಯುತ್ತ ಸ್ವಾಗತಿಸಿದ ಕ್ಲಿನರ್ ಪುಟ್ಟಪ್ಪನನ್ನ.ಹೊರಟಿತು ಲಾರಿ ಪುಟ್ಟಪ್ಪನ ಗುರಿ ತಪ್ಪಿದ ದಿಗಂತದೆಡೆಗೆ..!
              ಮಾರಿಬೈಲು ಮಲೆನಾಡ ದಿವ್ಯ ಸೋವ್ದರ್ಯದ ನಡುವಿನಲ್ಲಿ ಮೂವತ್ತು ನಲವತ್ತು ಮನೆಗಳ ಹಳ್ಳಿ.ಸುತ್ತಲು ಬೆಟ್ಟ-ಗುಡ್ಡ,ತೊರೆ-ಜಲಪಾತ,ಆಕಾಶದೆತ್ತರ ಬೆಳೆದು ನಿಂತ ನಿತ್ಯಹರಿದ್ವರ್ಣದ ಕಾಡು.ಬಹುತೇಕ ಹೊರ ಪ್ರಪಂಚದಿಂದ ಮುಕ್ತವಾದ ಹಳ್ಳಿ.ಜನರು ಸ್ವಲ್ಪವಾದರೂ ಅದುನಿಕತೆಯ ವ್ಯಭವ ನೋಡಲು ಸಹ ಎಂಟು ಮೈಲು ದೂರದ ಸಿನ್ಗಾರಪೇಟೆಗೆ ಹೋಗಬೇಕು.ವೆಂಕಟ ಗೌಡರು ಊರ ಮುಖಂಡರು.ಒಂದಷ್ಟು ಶಿವಳ್ಳಿ ಬ್ರಾಹ್ಮಣರು,ಗೌಡ ಸಾರಸ್ವತರು , ಘಟ್ಟದ ಕೆಳಗಿನ ಬಿಲ್ಲವರು,ಮುಸ್ಲಿಂ ಸಾಬರು,ಒಂದೆರಡು ಹರಿಜನ ಕುಟುಂಬಗಳು ಸೇರಿ ಕೊಂಡು ನೂರರಿಂದ ಇನ್ನುರರವರೆಗೆ ಜನಸಂಖ್ಯೆ.ಕೃಷಿ ,ಬೇಟೆ,ಕಾಡು ಉತ್ಪನ್ನಗಳ ಸಂಗ್ರಹ ಜನರ ಪ್ರಮುಖ ಉದ್ಯೋಗ.ಕಾಡು ಪ್ರಾಣಿಗಳಿಂದ ಬೆಳೆ ಹಾನಿ,ಕೋಮುಗಳ ಒಳಗೆ ಜಗಳ,ಆತನನ್ನು ಕಂಡರೆ ಈತನಿಗಾಗದು,ಇಂತಹ ಸನ್ನಿವೇಶಗಳು ಸರ್ವೇ ಸಾಮಾನ್ಯ.ಜೊತೆಗೆ ಬಡತನದ ಭದ್ರ ಮುಷ್ಠಿ.ಆದರು ಭಕ್ತಿಯ ಪರಕಾಷ್ಟೆತಗೆ ಒಂದು ಹನುಮನ ಗುಡಿ. ಮುಸ್ಲಿಮರ ಮಸೀದಿ ಒಂದಿತ್ತು.ಒಟ್ಟಿನಲ್ಲಿ ದಾರಿದ್ರ್ಯ ದಲ್ಲೂ ನೆಮ್ಮದಿಯ ಜೀವನ.
             ನೆಮ್ಮದಿಗೆ ಭಂಗ ಬರುವಂತೆ ಆ ರಾತ್ರಿ ಮರಿಬೈಲುನ ಜನರಲ್ಲಿ ಜೀವದ ಭಯ ಹುಟ್ಟಿತ್ತು.ಪುಟ್ಟಪ್ಪ ಗೌಡ ಊರ ಮುಖಂಡ ವೆಂಕಟ ಗೌಡರ  ಏಕೈಕ ತಮ್ಮ.ಹುಟ್ಟಿ ಬೆಳೆದು ನಿಂತ ಮೇಲೆ ಒಮ್ಮೆಯು ,ಜಮೀನು,ಗದ್ದೆಯ ಕಡೆಗೆ ಮುಖ ಹಾಕಿದವನಲ್ಲ.ಹೋಗಲಿ, ಒಂದು ದಿನ ಮನೆಯಲ್ಲಿ ತಿಂದ ತಟ್ಟೆಗೆ ನೀರು ಮುಟ್ಟಿಸಿದವನಲ್ಲ.ಕೂತು ತಿಂದು ಸಾಲ ಮಾಡಿ ಕಳೆಯುವದು ಬಿಟ್ಟು ಸಾಸಿವೆಯಷ್ಟು ಕೆಟ್ಟ ಚಾಳಿ ಇಲ್ಲ.ಒಂದೆರಡು ಬಾರಿ ಅಣ್ಣನ ಜವಾಬ್ಧಾರಿ ಎಂದು ಪುಟ್ಟಪ್ಪ ಮಾಡಿದ ಸಾಲ ತೀರಿಸಿ ಸುಸ್ತಾದ ವೆಂಕಟ ಗೌಡರು ತಮ್ಮನನ್ನು ಕರೆದು ಬುದ್ದಿ ಹೇಳಿದರು ಹುಟ್ಟು ಬುದ್ದಿ,ಹಂದಿ ಯಾವತ್ತಾದರೂ ಕೆಸರಲ್ಲಿ ಹೊರಲಾದುವದು ನಿಲ್ಲಿಸಿತೇ.....!!?ಎಂಬಂತಿದ್ದ ಪುಟ್ಟಪ್ಪ.ಮಾಡುವೆ ಮಾಡಿ, ಒಂದು ಮನೆ ಕಟ್ಟಿ ಕೊಡಿ ಸರಿ ಹೋದಾನು,ಸ್ವಲ್ಪ ಜವಾಬ್ಧಾರಿ ಬಂದೀತು,ಎಂಬ ಯಾರದ್ದೋ ಮಾತು ಕೇಳಿ ವೆಂಕಟ ಗೌಡರು ಬಯಲು ಸೀಮೆಯ ಕಮಲಿನಿ ಎಂಬ ಹೆಣ್ಣನ್ನು ತಂದು ಪುಟ್ಟಪ್ಪನಿಗೆ ಕಟ್ಟಿದರು ಆತನ ಒಳ್ಳೆ ಬುದ್ದಿ ಕಾಲು ಮುದುರಿಕೊಂಡು ಮೂಲೆಯಲ್ಲಿ ಬಿದ್ದಿತ್ತು.ಈ ಬಾರಿ ಬಡ್ಡಿ ಅಬ್ದುಲ್ಲ ಕೈ ಇಂದ ಎರಡು ಸಾವಿರ ಸಾಲ ತೆಗೊಂಡು ಜೂಜಾಡಿ ಕಳೆದಿದ್ದ ಪುಟ್ಟಪ್ಪ.ವೆಂಕಟ ಗೌಡರಿಗೆ ವಿಷಯ ತಿಳಿದಿದ್ದರೂ ಅವನ ಉಸಾಬರಿಯೇ ಬೇಡ ಎಂದು ಸುಮ್ಮನಿದ್ದರು.ಆದರೆ ಇದೆ ಸಾಲ ಪುಟ್ಟಪ್ಪನಿಗೆ ಮುಳುವಾಗಬೇಕೆ........?
            ಕೊಟ್ಟ ಸಾಲ ಹಿಂದಕ್ಕೆ ಪಡೆಯಲು ಅಬ್ಧುಲ್ಲ ಸಾಬ ವಾರಕ್ಕೆರಡು ಬಾರಿ ಪುಟ್ಟಪ್ಪನ ಮನೆ ಬಾಗಿಲು ತಟ್ಟಿದರು ಕಮಲಿನಿಯೇ ಬಾಗಿಲು ತೆರೆದು,ಅವರಿಲ್ಲ,ಸಿಂಗಾರ ಪೇಟೆಗೆ ಹೋಗಿದ್ದಾರೆ, ಎಂಬ ಉತ್ತರವೇ ಕಾದಿರುತಿತ್ತು.ಈ ಮೂರೂ ಕಾಸಿನ ಗೌಡ ಪೇಟೆಯಲ್ಲಿ ಏನು ಕಡ್ಧು ಗುಡ್ಡೆ ಹಾಕ್ತಾನೆ....?ಅನ್ನೋ ಯೋಚನೆ ಸಾಬನ ಮನಸಿನಲ್ಲಿ ಮೂಡಿದರೂ, ಇನ್ನೊದು ಸಾರಿ ಬರೋಣವೆಂದು ಹಿಂದೆ ಹೋಗಿದ್ದು ಒಂದೈವತ್ತು ಭಾರಿ ಆಗಿರಬಹುದು.ಆದರೆ ಈ ಭಾರಿ ಹಗಲು ಹೊತ್ತು ಬಿಟ್ಟು ರಾತ್ರಿ ಹೊತ್ತು ಮನೆಯಲ್ಲೇ ಇರ್ತಾನೆ ಅಂತ ಗೊತ್ತಾಗಿ ಅಬ್ದುಲ್ಲ ಸಾಬ ಆ ರಾತ್ರಿ ಪುಟ್ಟಪ್ಪನ ಮನೆ ಮುಂದೆ ಬಂದ.ಕಂಠ ಮುಟ್ಟ ಕುಡಿದು ನಿಲ್ಲಲು ಕೂರಲು ಆಗದೆ ಇನ್ನು ಮಲಗಲು ಅಟ್ಟನೆ ಮಾಡುತ್ತಿರಬೇಕಾದರೆ ಸಾಬನ ಆಗಮನವಾದದ್ದು  ಪುಟ್ಟಪ್ಪನಿಗೆ ಸರಿ ಕಾಣಲಿಲ್ಲ.ಏನು ಸಾಬರೇ..... ಹೊತ್ತು ಗೊತ್ತು ಇಲ್ವಾ ಸಾಲ ವಸೂಲಿಗೆ..........?ಹೋಗಿ ಹೋಗಿ ಹೊತ್ತರೆ ಬನ್ನಿ.ಎಂದು ಪುಟ್ಟಪ್ಪ ಜಾರಿಕೊಳ್ಳುವದರಲ್ಲಿಯೇ........ಏನು ಗೌಡ್ರೆ....?ದೊಡ್ಡ ಗೌಡ್ರ ಮುಖ ನೋಡಿ ಸಾಲ ಕೊಟ್ರೆ ನೀವ್ ಹಿಂಗಾ ಮಾಡೋದು.......?ನೋಡಿ ಗೌಡ್ರೆ.. ಇವತ್ತು ಹಣ ಕೊಡದೆ ಹೋಗಾಕಿಲ್ಲ ನಾನು.ನೀವ್ ಏನ್ ಮಾಡ್ತಿರೋ ಮಾಡಿ.ಅಂತ ತುಸು ಕೋಪದಿಂದಲೇ ಅಬ್ಬರಿಸಿದ ಸಾಬ.ನೋಡು ಸಾಬ ಇವತ್ತು ಹಣ ಇಲ್ಲ.ಇದ್ದರು ಇವತ್ತು ಕೊಡಲ್ಲ, ಎಂದು ಧಿಮಾಕಿನಿಂದಲೇ ಉತ್ತರ ಕೊಟ್ಟ ಪುಟ್ಟಪ್ಪ.ಅಬ್ದುಲ್ಲ ಸಾಬನಿಗಂತೂ ಅಲೆದು ಅಲೆದು ಬಳಲಿದ್ದರಿಂದ ಎಲ್ಲಿಲ್ಲದ ಕೋಪ ಉಕ್ಕಿ ಬಂದು , ಏನೋ ಗೌಡ...? ಒಳ್ಳೆ ಜನ ಅಂತ ಸಾಲ ಕೊಟ್ರೆ , ಹಲ್ಕಟ್ ತರ ನಂಗೆ ಧಿಮಾಕು ತೋರಿಸ್ತಿಯಾ?ಇವತ್ತು ಹಣ ಕೊಡಲೇ ಬೇಕು.ನಿನ್ನ ಮನೆನಾದ್ರು ಮಾರು,ಹೆಂಡ್ತಿನಾದ್ರು ಅಥವಾ  ಮಗಳನಾದ್ರು ಮಾರು, ಎಂದು ಆರ್ಭಟಿಸಿದ.ಸಕಲ ಚಟದ ದಾಸನಾಗಿದ್ದರು ಸಾಲಕಾಗಿ ಸಾಬ ಆಡಿದ ಮಾತುಗಳಿಂದ ಕೆಂಡಾಮಂಡಲನಾದ ಪುಟ್ಟಪ್ಪ ಅಲ್ಲೇ ಇದ್ದ ಅಡಿಕೆ ಹೆರೆಸುವ ಚಾಕು ತೆಗೆದು ಅಬ್ದುಲ್ಲ ಸಾಬನ ಕಿಬ್ಬೊಟ್ಟೆಗೆ ಇರಿದೆ ಬಿಟ್ಟ.ಹಟಾತ್ ಧಾಳಿ ಇಂದ ಸಾಬ ತತ್ತರಿಸಿ ನೆಲಕ್ಕೆ ಕುಸಿದು ಬಿದ್ದು ಅಂಗಳದ ಕೆಸರಲ್ಲಿ ಹೊರಳಾಡುತ್ತಾ , ಮರಿಬೈಲನ್ನು ನಿದ್ದೆ ಇಂದ ಏಳಿಸುವಂತೆ ಚೀರತೊಡಗಿದ.ಪುಟ್ಟಪ್ಪನಿಗೆ ತನ್ನಿಂದಾದ ಅನಾಹುತದ ಅರಿವಾಗಿ ತಲೆಗೆ ಹತ್ತಿದ್ದ ಕಳ್ಳ ಭಟ್ಟಿಯ ಅಮಲು ಜರ್ರನೆ ಇಳಿ ಇತು.ಸಾಬನ ಚಿರಾಟಕ್ಕೆ ಪಕ್ಕದ ಅಣ್ಣನ ಮನೆಯಲ್ಲಿ ದೀಪ ಹೊತ್ತಿತು.ಅಣ್ಣ ಬಂದರೆ ನನಗೆ ಉಳಿಗಾಲವಿಲ್ಲವೆಂದೆನಿಸಿ ಅಲ್ಲೇ ಕಿಟಕಿಗೆ ನೀತು ಹಾಕಿದ್ದ ಕಂಬಳಿಯನ್ನು ಹನಿ ಮಳೆಯ ರಕ್ಷಣೆಗೆ ಹೊದ್ದು ಪಕ್ಕದ ಕಾಡಲ್ಲಿ ಮಾಯವಾದ ಪುಟ್ಟಪ್ಪ.ಪುಟ್ಟಪ್ಪನ ಈ ಓಟದ ಬಗೆ ಅರಿಯದೆ ಅವನ ನಿಯತ್ತಿನ ನಾಯಿ ಕಾಳು ಸರಪಳಿ ಜಗ್ಗಿ ಬೊಗಳತೊಡಗಿತು.
     ಸಿದ್ದನ ಸಹಾಯದಿಂದ ಬೆಂಗಳೂರು ಬಂದಿಳಿದ ಪುಟ್ಟಪ್ಪನಿಗೆ ಮೊದಲಿನಿಂದಲೂ ಬೆಂಗಳುರನ್ನೊಮ್ಮೆ ನೋಡಬೇಕೆಂಬ ಆಸೆ ಇತ್ತು. ಆ ಅಸೆ ಇಂದು ಫಲಿಸಿದರೂ ಅನುಭವಿಸುವ ಸ್ಥಿತಿ ಪುಟ್ಟಪ್ಪನದ್ದಾಗಿರಲಿಲ್ಲ.ಕಿಸೆಯಲ್ಲಿ ನಯಾಪೈಸೆಗೂ ಗತಿ ಇಲ್ಲ, ಹೊಟ್ಟೆಯಲ್ಲಿ ಕದನ ವಿರಾಮ ಮುರಿದು ಹಸಿವು ಯುದ್ದ ಹೂಡಿದೆ.ಇವೆಲ್ಲದರ ನಡುವೆ ಎಲ್ಲಿ ಜೈಲು ಪಾಲಾಗುತ್ತೇನೋ ಎಂಬ ಅಂಜಿಕೆ.ರೈಲ್ವೆ ಸ್ಟೇಷನ್ ಹತ್ತಿರ ಬಂದಾಗ ಎಲ್ಲಿಗೋ ಹೊರಡುತಿದ್ದ ರೈಲು ಪುಟ್ಟಪ್ಪನ ಕಣ್ಣಿಗೆ ಬೀಳುತ್ತದೆ. ದೇವರು ನಡೆಸಿದಂತಾಗಲಿ ಎಂದು ಊರ ಹನುಮನಿಗೆ ಪ್ಲಾಟ್ ಫಾರಂನಿಂದಲೇ ಕೈ ಮುಗಿದು ಜನರಲ್ ಕಂಪಾರ್ಟ್ಮೆಂಟ್ ಗೆ ಕಾಲಿರಿಸಿದ.ಉತ್ತರ ಭಾರತದ ಕಡೆಗೆ ಹೋಗುವ ಆ ರೈಲಿನಲ್ಲಿ ಪುಟ್ಟಪ್ಪ ಮೂಕ.ಎಲ್ಲೆಡೆ ಹಿಂದಿಯದ್ದೆ ಕಾರುಬಾರು.ಎಡೆ ಸೀಳಿದರು ಅ,ಆ,ಇ,ಈ ಇಲ್ಲದ ಪುಟ್ಟಪ್ಪ ಬೆಪ್ಪನಾಗಿದ್ದ.ರೈಲಿನಲ್ಲಿ ತಿಂಡಿ, ಊಟ ಎಲ್ಲವೂ ಸಿಗುತ್ತದೆ ಎಂದು ಪುಟ್ಟಪ್ಪ ಯಾರಿಂದಲೋ ತಿಳಿದಿದ್ದ.ಆದರೆ ಅವಕ್ಕೆಲ್ಲ ಪ್ರತ್ಯೇಕ ಹಣ ತೆರಬೇಕೆಂದು ತನ್ನ ಸ್ವಂತ ಅನುಭವದಿಂದ ಇಂದು ತಿಳಿಯಿತು ಪುಟ್ಟಪ್ಪನಿಗೆ.
             ಅಂತು ಉತ್ತರ ಭಾರತದ ಪ್ರಸಿದ್ದ ತೀರ್ಥಕ್ಷೇತ್ರ ಕಾಶಿಯಲ್ಲಿ ಬಂದು ಬಿದ್ದ ಪುಟ್ಟಪ್ಪನಿಗೆ ಅಂದಿನಿಂದ ನಿಜ ಜೀವನದ ಮುಖಾಮುಖಿ.ನಾನೊಬ್ಬನಿದ್ದೇನೆ ಎಂದು ಚುರುಗುಟ್ಟುವ ಉದರ,ಖಾಲಿಯಾದ ಜೇಬಲ್ಲಿ  ಕುಣಿದಾಡುವ ದಾರಿದ್ರ್ಯ , ತನ್ನ ಪಾಡಿಗೆ ಕಾರಣವಾದ ದೇವರನ್ನು ಶಪಿಸುವ ಮನಸ್ಸು,ಮತ್ತೊಮ್ಮೆ ಕಾಪಾಡು ತಂದೆ ಎಂದು ಅದೇ ದೇವರನ್ನು ಮೊರೆಯಿಡುವ ಅದೇ ಮನಸ್ಸು. ಮಾರಿಬೈಲಿನ ಗೌಡರ ತಮ್ಮನೆಂಬ ಸ್ಥಾನ, ಅಂತಸ್ತು ಎಲ್ಲವೂ ಮಂಜಾಗಿ ಕರಗಿಹೋಯಿತು,ಸಾಲಮಾಡಿ ಮೋಜು ಮಾಡುತಿದ್ದಾಗ ಗೊತ್ತಿಲ್ಲದ ಹಣದ ಮೌಲ್ಯ ಇಂದು ಅರಿವಿಗೆ ಬರುತ್ತಿದೆ.ಹೊಟ್ಟೆಗಾಗಿ ಕಾಶಿಯಲ್ಲಿ ಭಕ್ತಾದಿಗಳು ತಮ್ಮ ಹಿರಿಯರಿಗೆ ಹಾಕಿದ ಪಿಂಡದ ಅನ್ನವನ್ನೇ ಕದ್ದು ತಿಂದು ಯೋಗಿಯಾದ ಪುಟ್ಟಪ್ಪ.ಬಯಸದೆ ವಿಧಿಯ ಬಂದಿಯಾದ.
                   ಮಾರಿಬೈಲು ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತಿದೆ.ಒಂದು ಶಾಲೆ,ಪ್ರಾಥಮಿಕ ಆರೋಗ್ಯ ಕೇಂದ್ರ, ದಿನಕ್ಕೆರಡು ಬಾರಿ ಬಂದು ಹೋಗುವ ಸರ್ಕಾರಿ ಬಸ್ಸು, ಹೀಗೆ ಮೂಲ ಸೌಕರ್ಯಗಳು  ಮರಿಬೈಲಿನತ್ತ ಮುಖ ಮಾಡುತ್ತಿವೆ.ಶೋಲಾ ಅರಣ್ಯಗಳ ತಪ್ಪಲಿನ ಮಾರಿಬೈಲಿನ ಸೌ೦ದರ್ಯಕ್ಕೆ ಮಾರುಹೋಗಿ ವಿಹಾರಕ್ಕೆ,ಚಾರಣಕ್ಕೆ ಬರುವವರು ಹೆಚ್ಚಾಗಿದ್ದಾರೆ.ಪ್ರವಾಸಿಗರನ್ನು ಸುಲಿದು ಹಣ ಮಾಡುವ ಜನರು ಹೆಚ್ಚಾಗಿದ್ದಾರೆ. ಮಾರಿಬೈಲಿನ ಆಧುನಿಕತೆಯ ಓಟದೊಡನೆ ಅಬ್ದುಲ್ಲ ಸಾಬನ ಕಿಬ್ಬೊಟ್ಟೆಯ ಗಾಯವು ಮಾಸಿದೆ.ಜೋತೆಗೆ ಕಮಲಿನಿಗೆ ಗಂಡನ ನೆನಪು ಕೂಡ.
                  ಮಾರಿಬೈಲು ಬದಲಾಗುತಿದ್ದಂತೆ ಊರು,ಸಂಬಂಧಗಳೆಲ್ಲವನ್ನು ಶಿಕ್ಷೆಗೆ ಹೆದರಿ ಓದಿ ಬಂದು ಹೊಟ್ಟೆಗಾಗಿ ಕಾವಿತೊಟ್ಟ ಪುಟ್ಟಪ್ಪನಿಗು ಊರ ನೆನಪು ಕಾಡುತ್ತಿದೆ.ಅಪರಾದಿಯಾಗಿ ಪರಾರಿಯಾದವನಿಗೆ ಕಾಶಿಯಲ್ಲಿ ನೈಜ ಜೀವನದ ಸತ್ಯ ದರ್ಶನವಾದಾಗ ತನಗೆ ನೆರವಾದ ಅಣ್ಣ ದೇವರಂತೆ ಕಾಣುತ್ತಾರೆ, ತಾನು ಕೊಟ್ಟ ಕಷ್ಟ-ದುಃಖಗಳನ್ನೂ ನುಂಗಿ ತನ್ನ ಜೊತೆ ಸಂಸಾರ ನಡೆಸಿದ ಹೆಂಡತಿ ತ್ಯಾಗಿಯಾಗಿ ಕಾಣುತ್ತಾಳೆ,ಮನೆ ಬಿಟ್ಟಾಗ ಎಂಟು ವರ್ಷದ ಮಗಳು ರಾಣಿಯ ಮುಗ್ಧವಾದ ಕಣ್ಣುಗಳು ಪುಟ್ಟಪ್ಪನನ್ನು ಪದೇ ಪದೇ ಕಾಡುತ್ತದೆ.ಒಮ್ಮೆ ಊರಿಗೆ ಹೋಗಿ ಎಲ್ಲರನ್ನು ನೋಡಿಕೊಂಡು ಬರಬೇಕೆಂಬ ಮಹದಾಸೆ ಮೊಳೆಯುತ್ತದೆ ಪುಟ್ಟಪ್ಪನಲ್ಲಿ ಕೆಲವೊಮ್ಮೆ, ಆದರೆ ಯಾವ ಮುಖ ಹೊತ್ತು, ಏನು ಸಾಧಿಸಿದವನೆಂದು ಊರಿಗೆ ಕಾಲಿಡಲಿ ಎಂದು ತನ್ನ ಬಗ್ಗೆ ಕೀಳು ಭಾವ ತಳೆಯುತ್ತದೆ ಮನಸ್ಸು ಇನ್ನೊಮ್ಮೆ.ಆದರೂ ಹೊರಟೆ ಬಿಟ್ಟ ಊರಿಗೆ ಬರೋಬ್ಬರಿ ಎಂಟು ವರ್ಷಗಳ ನಂತರ.
                   ಮುಂಜಾನೆಯ ಬಸ್ಸಿನಲ್ಲಿ ಪುಟ್ಟಪ್ಪ ಬಂದು ಮಾರಿಬೈಲಿನ ಧರೆಗಿಳಿದಾಗ ಹರಡಿದ ಇಡೀ ಭೂ ಲೋಕದ ಸ್ವರ್ಗದಂತೆ ಕಾಣುತಿತ್ತು.ಬೆಟ್ಟ ಗುಡ್ಡಗಳನ್ನು ಮೋಡಗಳು ಚುಂಬಿಸುತಿತ್ತು.ಹಕ್ಕಿ ಪಕ್ಕಿಗಳ ಚಿಲಿಪಿಲಿ ಕಿವಿಗೆ ಹಿತವಾದ ಮುದ ನೀಡುತಿತ್ತು.ಕಾಡು ಹೂವುಗಳಿಂದ ಹೊರಟ ಸುಗಂದಯುತ ಪರಿಮಳವು ತನುಮನಕ್ಕೆ ಹೊಸ ಚೈತನ್ಯವನ್ನು ತುಂಬುವಂತಿತ್ತು.ಆದರೆ ಪುಟ್ಟಪ್ಪನಿಗೆ ಅದ್ಯಾವುದರ ಗಮನವಿಲ್ಲ.ಅಣ್ಣ ,ಹೆಂಡತಿ,ಮಗಳನ್ನು ನೋಡುವ ತವಕ ಮನದಲ್ಲಿ ಆವರಿಸಿತು.ಮೊದಲು ಅಣ್ಣನನ್ನು ನೋಡಿ ಆಮೇಲೆ ತನ್ನ ಮನೆಗೆ ಹೋಗೋಣ ಎಂದು ನಿರ್ಧರಿಸಿ ಹೊರಟ ಪುಟ್ಟಪ್ಪ ಕಳಚಿದ ಕೊಂಡಿಯ ಹುಡುಕಿ.
                      ಮಾರಿಬೈಲಿನ ಬೀದಿಯಲ್ಲಿ ಕುರುಚಲು ಗಡ್ಡ, ಕಾವಿ ತೊಟ್ಟ ಪುಟ್ಟಪ್ಪನನ್ನು ಯಾರು ಗುರುತು ಹಿಡಿಯುವಂತಿರಲಿಲ್ಲ. ಅಪರೂಪಕ್ಕೆ ಭಿಕ್ಷೆ ಬೇಡಿಕೊಂಡು ಬರುವ ಸಾಧುಗಳಂತೆ ಈ ಸನ್ಯಾಸಿ ಇರಬಹುದೆಂಬ ಭಾವ ತೆಳೆದಂತಿತ್ತು ಊರವರು.ವೆಂಕಟ ಗೌಡರ ಮನೆ ಮುಂದೆ ಪುಟ್ಟಪ್ಪ ಬಂದಾಗ ಮನೆಯೊಳಗಿನಿಂದ ಓರ್ವ ಅಪರಿಚಿತ ಗಂಡಸು ಹೊರ ಬಂದು ತನ್ನ ಪಕ್ಕದಲ್ಲೇ ಹಾದು ಹೋದಾಗ, ಬಹುಶಃ ಮನೆ ಮಾರಟವಾಗಿರಬೇಕು ಎಂದುಕೊಂಡ.ಆದರೂ ಒಮ್ಮೆ ವಿಚಾರಿಸಿ ನೋಡೋಣ ಎಂದು ಮನೆಯ ಅಂಗಳಕ್ಕೆ ಕಾಲಿರಿಸಿದಾಗ, ಅಂಗಳದ ಮೂಲೆಯಲ್ಲಿ ಪುಟ್ಟ ಬಾಲಕನೊಬ್ಬ ಆಡುತಿದ್ದ.ಜಗುಲಿಯಲ್ಲಿ ಸುಮಾರು ಹದಿನೈದು-ಹದಿನಾರು ಪ್ರಾಯದ ಹೆಣ್ಮಗಳು ದುಂಡು ಮಲ್ಲಿಗೆಯ ಹಾರವನ್ನು ಕಟ್ಟುತಿದ್ದಳು.ಆ ಮುಗ್ಧ ಮುಖವನ್ನು ಪುಟ್ಟಪ್ಪನ ಕಣ್ಣುಗಳು ತನ್ನ ಮಗಳು ರಾಣಿಯೆಂದು ಗುರುತಿಸಿದವು.ಎಷ್ಟು ಬೆಳೆದಿದ್ದಾಳೆ ನನ್ನ ಮಗಳು ಎಂದು ಆಶ್ಚರ್ಯದಿಂದ ನೋಡುತಿದ್ದ ಪುಟ್ಟಪ್ಪನನ್ನು ನೋಡಿ ರಾಣಿ, ಏನು ಬೇಕಾಗಿತ್ತು ಸ್ವಾಮಿಗಳೇ...?ರಾಣಿಯ ಮಾತುಗಳಿಂದ ಎಚ್ಚೆತ್ತ ಪುಟ್ಟಪ್ಪನ ಗಂಟಲಿಂದ ಮೆಲ್ಲನೆ,ವೆಂಕಟಗೌಡರು.......ಎಂಬ ಶಬ್ದ ಹೊರಬಂತು.

ಹೋ, ದೊಡ್ದಪ್ಪನಾ....! ಅವರಿಲ್ಲ.
ಎಲ್ಲೋಗಿದ್ದಾರೆ ಪುಟ್ಟಿ,ಮರು ಪ್ರಶ್ನೆ ಪುಟ್ಟಪ್ಪನಿಂದ.
ಆರು ವರ್ಷ ಆಯಿತು ,ತೀರಿ ಹೋಗಿ,
ಒಮ್ಮೆಲೇ ಅನಾಥನಾದೆ ಅನಿಸಿತು ಪುಟ್ಟಪ್ಪನಿಗೆ.ಅಷ್ಟರಲ್ಲಿ, ಯಾರೇ ಅದು....? ಎಂದು ಒಳಗಿನಿಂದ ಹೊರ ಬಂದ ಕಮಲಿನಿಯನ್ನು ನೋಡಿ ಅಣ್ಣನನ್ನು ಕಳೆದುಕೊಂಡು ಮರುಗುತಿದ್ದ ಮನಸ್ಸಿಗೆ ಸ್ವಲ್ಪಮಟ್ಟಿನ ತಂಗಾಳಿ ಬೀಸಿದಂತಾಯಿತು.ತನ್ನ ಸಂಗಾತಿಯನ್ನು ನೋಡಿ ಅನಾಥ ಭಾವ ಕಡಿಮೆಯಾಗುತ್ತಿದೆ ಎನ್ನುವಾಗಲೇ, ಅಲ್ಲೇ ಆಡಿಕೊಂಡಿದ್ದ ಪುಟ್ಟ ಬಾಲಕ, ಅಮ್ಮ...ಅಮ್ಮ...ಅಪ್ಪ ಎಲ್ಲಿ ಹೊದ್ರಮ್ಮ ಈಗ...?ಎಂದು ಓದಿ ಬಂದು ಕಮಲಿನಿಯನ್ನು ಅಪ್ಪಿ ಹಿಡಿಯಿತು.ಪುನಹಃ ಅನಾಥನಾದ ಪುಟ್ಟಪ್ಪ.ಗುಡುಗು-ಮಿಂಚು,ಬಿರುಗಾಳಿ ಎಲ್ಲವೂ ಒಮ್ಮೆಲೇ ದಾಳಿ ಇಟ್ಟವು ಮನದೊಳಗೆ.ಒಂದೆರಡು ಹನಿಗಳು ಜಾರಿ ಭೂಮಿಯನ್ನು ಮುತ್ತಿಟ್ಟವು. ಏನು ನುಡಿಯದೆ ಹಿಂತಿರುಗಿದ ಪುಟ್ಟಪ್ಪ.ಅರ್ಥವಾಗಲಿಲ್ಲ ಈ ಸ್ವಾಮಿಯ ನಡವಳಿಕೆ ಎಂಬಂತೆ ಆಶ್ಚರ್ಯದಿಂದ ರಾಣಿ ಮತ್ತು ಕಮಲಿನಿ ನೋಡುತ್ತಾ ನಿಂತರು.ಬೇಲಿ ಬದಿಯಲ್ಲಿ ಮಲಗಿದ್ದ ಕಾಳು, ಪುಟ್ಟಪ್ಪನ ನಿಯತ್ತಿನ ನಾಯಿ ಆತನ ನಿರ್ಗಮನವನ್ನು ತಲೆಯೆತ್ತಿ ನೋಡಿ, ತನಗೆ ಸಂಭಂದವಿಲ್ಲವೆಂಬಂತೆ ಪುನಹಃ ಮಲಗಿತು.ಇಷ್ಟರವರೆಗೆ ತನ್ನ ಕುಟುಂಬವನ್ನು ನೋಡಬೇಕು ಎಂದು ಹಂಬಲಿಸುತಿದ್ದ ಪುಟ್ಟಪ್ಪನಿಗೆ ಪ್ರಥಮ ಬಾರಿಗೆ ಸಾಯಬೇಕು ಎನಿಸಿತು.ಆದರೆ ಸನ್ಯಾಸಿಯಾದವನು ಸಂಭದಗಳಿಗಾಗಿ ಸಾಯುವದು ಎಷ್ಟು ಸಮಂಜಸ...?
                           ಜೀವ ಇದ್ದಷ್ಟು ಕಾಶಿಯಲ್ಲೇ ಬೇಡಿ ಬದುಕುವದು ಎಂದು ಹೊರಟ ಪುಟ್ಟಪ್ಪನಿಗೆ ಅಣ್ಣನ ಸಮಾದಿಗೆ ನಮನ ಸಲ್ಲಿಸಬೇಕೆನಿಸಿತು.ಹೆಚ್ಚಾಗಿ ಹನುಮನ ಗುಡಿಯ ಹಿಂದಿನ ಗುಡ್ಡದಲ್ಲಿ ಸಮಾದಿ ಕಟ್ಟುವದು.ಭಾರವಾದ ಮನಸ್ಸಿನಿಂದ ಗುಡ್ಡ ಹತ್ತಿ ಅಣ್ಣನ ಸಮಾಧಿಯ ಮುಂದೆ ನಿಂತ ಪುಟ್ಟಪ್ಪನ ರಕ್ತ ಹೆಪ್ಪುಗಟ್ಟಿದಂತೆ ಆಯಿತು.ವೆಂಕಟಗೌಡರ ಸಮಾಧಿಯ ಪಕ್ಕದ ಸಮಾಧಿಯಯಾ ಮೇಲೆ ದಿ/ಪುಟ್ಟಪ್ಪ ಗೌಡ,ನಮ್ಮನ್ನು ಅಗಲಿದ ನಿಮಗೆ ಚಿರಶಾಂತಿ ಕೋರುವ ಕಮಲಿನಿ ಮತ್ತು ಮಕ್ಕಳು, ಎಂದು ದಪ್ಪ ಅಕ್ಷರದಲ್ಲಿ ಬರೆದಿತ್ತು.ಇಡೀ ದೇಹಕ್ಕೆ ಎಲ್ಲೆಡೆ ಇಂದಲೂ ಮುಳ್ಳು ಚುಚ್ಚಿದಂತಾಯಿತು ಪುಟ್ಟಪ್ಪನಿಗೆ.ಮೂಕನಾದ, ಮಾತೇ ಮರೆತಂತಾಯಿತು,ಬಾಯಿ ಒಣಗಿ, ಬೆವರು ಪುಟ್ಟಪ್ಪನನ್ನು ಆವರಿಸಿತು,ಗರಬಡಿದವನಂತೆ ತನ್ನ ಸಮಾಧಿಯನ್ನು ನೋಡುತ್ತಾ ನಿಂತಿದ್ದ ಪುಟ್ಟಪ್ಪನನ್ನು ಕಂಡು ಇನ್ನೊಂದು ಸಮಾಧಿ ಕಟ್ಟುತಿದ್ದ ಗಾರೆ ತನಿಯ, ಏನು ಸ್ವಾಮಿಗಳೇ ...? ಗೌಡ್ರ ಪರಿಚಯದವರಾ...? ಅವರ ತಮ್ಮ ಪುಟ್ಟೇ ಗೌಡ್ರು ಊರು ಬಿಟ್ರಲ್ಲ, ಮರುದಿನ ಅವರ ಹೆನ ಮಾರಿಕಣಿವೆಯಲ್ಲಿ ಸಿಕ್ತಲ್ಲ....!ಅದೇ ಕೊರಗಲ್ಲಿ ಶಿವನ ಪಾದ ಸೇರಿದರು ಪಾಪ.ಎಂದು ಪುಟ್ಟಪ್ಪನಿಗೆ ವಿವರಿಸಿದ.ತನಿಯನ ಮುಖವನ್ನೇ ತುಸು ಹೊತ್ತು ಪ್ರಶ್ನಾರ್ತಕವಾಗಿ ನೋಡಿದ ಪುಟ್ಟಪ್ಪ.ಹಂಗ್ಯಾಕೆ ನೋಡ್ತಿದ್ದಿರ ಸ್ವಾಮಿಗಳೇ, ತನಿಯನ ಮಾತುಗಳಿಂದ ಎಚ್ಚೆತ್ತ ಪುಟ್ಟಪ್ಪ ಗುಡ್ಡ ಇಳಿದು ಹನುಮನಿಗೆ ನಮಸ್ಕರಿಸುವ ಭಂಗಿಯಲ್ಲಿ ನಿಂತು ಹೊರಟ ಕಾಶಿಗೆ ಪುನಹಃ ಕೆಲ ನಿಮಿಷಗಳ ಹಿಂದೆ ಸಾಯಬೇಕೆಂದು ಯೋಚಿಸಿದ ಪುಟ್ಟಪ್ಪ ಊರವರ ಮನಸ್ಸಿನಲ್ಲಿ ಯಾವತ್ತೋ ಸತ್ತಿದ್ದ.ಜೀವನವೇ ನಶ್ವರವೆನಿಸಿತು ಪುಟ್ಟಪ್ಪನಿಗೆ.ಮಾರಿಬೈಲು, ತನ್ನ ಹೆಂಡತಿ,ಮಗಳು, ನಿಯತ್ತಿನ ನಾಯಿ ಕಾಳು,ತನ್ನ ಬದುಕು,ತನ್ನ ಅಸ್ತಿತ್ವ ಎಲ್ಲವೂ ಬದಲಾಗಿದೆ......!ಎಂದೆನಿಸಿತು ಪುಟ್ಟಪ್ಪನಿಗೆ.
    
      ಜುಲೈ ೭,೨೦೧೧ ನೇ ದಿನಾಂಕದ ತರಂಗ ಪುಟ ಸಂಖ್ಯೆ ೧೦ ರಲ್ಲಿ ಪ್ರಕಟಿಸಲ್ಪಟ್ಟಿದೆ.
********************************************************************************************


No comments:

Post a Comment