Friday, September 30, 2011

ವೈಧಿಕ.

ಜಾತೀಯತೆ ತಾಳ ಮೇಳಗಳ ಜೊತೆ ಪ್ರಕೃತಿ ಮತ್ತು ಪರಿಸ್ಥಿತಿ ಕಲಿಸುವ ಪಾಠ -ವೈಧಿಕ.

ಮೇಲೊಂದು ಕಟ್ಟಿಗೆ ಹೊರೆ,ಕಂಕುಳಕ್ಕೆ ತೂಗು ಹಾಕಿರುವ ಕತ್ತಿ,ಅಷ್ಟಿದ್ದರು ಕೈ ಬೀಸಿ ಬಿರು ಬೀಸನೆ ನಡೆಯುತಿದ್ದ ಚೋಮನ ನಡಿಗೆಯು ಒಮ್ಮೆಲೆ ಸ್ಥಭ್ದವಾಗಿ ಗಪ್ಪನೆ ನಿಂತಿದ್ದ.ಎದುರಿಗೆ ಕಚ್ಚೆ ಉಟ್ಟುಕೊಂಡು ಹೆಗಲಿಗೆ ಶಾಲು ಹಾಕಿ ಒಂದು ಜೋಳಿಗೆ ತೂಗು ಹಾಕಿಕೊಂಡು ತನ್ನ ಜನೀವಾರವನ್ನು ನೇವರಿಸುತ್ತ ಕೋಪದಿಂದ ನಿಂತಿದ್ದ ಸುಬ್ರಾಯ ಭಟ್ಟರನ್ನು ಕಂಡು. ಸುಬ್ರಾಯ ಭಟ್ಟರು ಹೆಗಡೆ ಹಳ್ಳಿಯ ಪೌರೋಹಿತ್ಯ ಕುಟುಂಬದವರು,ಪರ ಜಾತಿಯವರು ಎದುರಿಗೆ ಸಿಕ್ಕಲ್ಲಿ ಮೈಲಿಗೆ ಅಂತ ಬೊಬ್ಬಿರುದು ಬಯ್ಯ ನಿಲ್ಲುವ ವೈಧಿಕ.ಅಂತವರ ಎದುರು ಹೊಲೇರು ಅಂತ ಕರೆಸಿಕೊಳ್ಳುವ ಚೋಮ ನಿಂತಿದ್ದ,ಇನ್ನೇನನ್ನುತ್ತಾನೊ ಈ ಬ್ರಾಹ್ಮಣ ಎಲ್ಲಿ ಶಾಪ ಹಾಕಿ ಬಿಡುತ್ತಾನೊ ಅನ್ನೊ ಭಯದಿಂದ ಸುಬ್ರಾಯ ಭಟ್ಟ ಬಾಯಿ ತೆಗೆಯುವ ಮೊದಲೆ,ಮುಬ್ಬು ಕತ್ಲಲ್ವೆ!!!!!ಹಟ್ಟಿ ಬೇಗ ಸೇರ್ಕೊಂಡ್ಬಿಡೋಣ ಅಂಬೋ ಅವಸರ್ದಾಗೆ ಗೊತ್ತಾಗ್ಲಿಲ್ಲ ಬುದ್ದಿಯೋರ ಎಂದು ಪ್ರತ್ಯುತ್ತರಕ್ಕು ಕಾಯದೆ ಮುಂದಡಿ ಇರಿಸಿದ್ದ ಆ ದಿನ ಚೋಮ.ಸುಬ್ರಾಯ ಭಟ್ಟ ಬಾಯಲ್ಲೇ ಗೊಣಗುತ್ತ ಮನೆ ಕಡೆ ಹೊಂಟಿತ್ತು.

ಹೆಗಡೆ ಹಳ್ಳಿ ಮಡಿಕೇರಿಯ ಸೋಮವಾರ ಪೇಟೆಯಿಂದ ಒಂದು 10 ಮೈಲಿ ದೂರವಿರುವ ಹಳ್ಳಿ.ಹಳ್ಳಿಯ ಹಿಂದಡಿ ಸುಂದರ ಕುಮಾರ ಪರ್ವತದ ರಮಣೀಯ ದೃಶ್ಯ.ಆ ಊರು ಹೆಚ್ಚಿನ ಬ್ರಾಹ್ಮಣ ಕುಟುಂಬಗಳನ್ನು ಹೊಂದಿದ್ದು ಆ ಕುಟುಂಬಗಳ ಅಡಿಕೆ ತೋಟ ಮುಂತಾದುವದರಲ್ಲಿ ದುಡಿಯಲು ಬಂದ ಒಂದಷ್ಟು ಸಮಾಜದಲ್ಲಿ ಕೆಳ ಜಾತಿಗಳು ಎಂದು ಕರೆಯಲ್ಪಡುವ ಕುಟುಂಬಗಳು,ಒಂದಷ್ಟು ಮುಸ್ಲಿಂ ಕುಟು೦ಬಗಳು,ಬ್ರಿಟಿಷರ ಕಾಲದಿಂದ ನೆಲೆ ನಿಂತ ಒಂದೆರಡು ಕ್ರೈಸ್ತ ಕುಟುಂಬ.ಇತರೆ ಮಧ್ಯಮ ಜಾತಿ ಕುಟುಂಬಗಳು ಹೊಂದಿದ್ದ ಒಂದು ಸಣ್ಣ ಊರು ಅದು.ಊರಿನಲ್ಲೊಂದು ದೇಗುಲ.ಅದರ ಅರ್ಚಕರೆ ಈ ಸುಬ್ರಾಯ ಭಟ್ಟರು.ಊರ ಮಂದಿಯಿಂದ ಜಾತೀಯ ಹೆದರಿಕೆಗೊ, ಭಕ್ತಿ ಭಾವಕ್ಕೊ ಏನೋ ಒಟ್ಟಿನಲ್ಲಿ ಗೌರವಕ್ಕೆ ಪಾತ್ರರಾಗಿದ್ದವರು.ಆ ಊರಿಗೊಂದು ಏಕೋಪಾಧ್ಯಯ ಕಿರಿಯ ಪ್ರಾಥಮಿಕ ಶಾಲೆ.ಅದರ ಮೆಸ್ತರೆ ದೂರದ ಸುಳ್ಯದ ನಾವಡರು. ಜಾತಿಯಲ್ಲಿ ಅವರು ಬ್ರಾಹ್ಮಣರೆ ಆದರು ಆ ತನವನ್ನು ಸಂಸ್ಕಾರದಲ್ಲಿ ತನ್ನದಾಗಿಸಿ ಅಚಾರದಲ್ಲಿ ಮಾನವತೆ ಮೆರೆಯುವವರು. ಅದಕ್ಕೆ ಕಾರಣಗಳು ಇತ್ತು. ಅವರ ತಂದೆ ಮಿಲಿಟರಿಯಲ್ಲಿ ಇದ್ದವರು ತನ್ನೊಬ್ಬಳೆ ಮಗಳನ್ನು ತನ್ನ ಆತ್ಮೀಯ ಕೊರಗಪ್ಪ ಗೌಡರ ಮಗ ವಿವೇಕನಿಗೆ ಕೈಯೇರೆದು ಮದುವೆ ಮಾಡಿದ್ದರು,ಯಾರೊ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಾನು ಒಬ್ಬ ವೇದ ಪುರಾಣಗಳು ತಿಳಿದುಕೊಂಡ ನಿಮ್ಮ ಪ್ರಕಾರದ ಅಚ್ಚ ಬ್ರಾಹ್ಮಣ ಏನು ಮಾಡಬೇಕಿತ್ತೊ ಅದನ್ನೇ ಮಾಡಿದ್ದೇನೆ, ನನಗೆಂದು ನನ್ನ ಸಂಸ್ಕೃತಿ ಜಾತೀಯತೆಯನ್ನು ಎಲ್ಲೂ ಕಲಿಸಿಲ್ಲ ತಾವಿನ್ನು ತೆರಳಬಹುದು ಅಂದು ಮುಖಕ್ಕೆ ಹೊಡೆದಂತೆ ನುಡಿದಿದ್ದರು,ಇಂತವರ ಮಗನಾದ ನಾವಡರ ವಿಚಾರಗಳು ಈ ತೆರವಾಗೆ ಇದ್ದು,ಟಿ ಸಿ ಹೆಚ್ ಕಲಿಕೆಯ ನಂತರ ಆರಿಸಿ ಬಂದ ಕೆಲಸದ ನಿಮಿತ್ತ ಈ ಹೆಗಡೆ ಹಳ್ಳಿ ಬಂದು ಸೇರಿದ್ದರು.

ಮೊದಲಿಗೆ ನಾವಡರಿಗೆ ಬ್ರಾಹ್ಮಣರೆ ಹೆಚ್ಚಾಗಿದ್ದ ಆ ಊರಿನಲ್ಲಿ ಇವರು ಬ್ರಾಹ್ಮಣರೆಂಬ ಕಾರಣಕ್ಕೆ ಅದ್ದೂರಿ ಸ್ವಾಗತವೆ ದೊರಕಿತ್ತು.ಹಲವು ಕುಟುಂಬಗಳು ತಮ್ಮ ಮನೆಯಲ್ಲಿರಲು ಆಹ್ವಾನ ಕೊಟ್ಟರು ಅದೆಲ್ಲವನ್ನು ಪ್ರೀತಿ ಇಂದಲೆ ನಿರಾಕರಿಸಿ ನಾವಡರು ಶಾಲೆಯ ಒಂದು ಕೋಣೆಯನ್ನು ತನ್ನದಾಗಿಸಿ ಅಲ್ಲಿಯೇ ಬಿಡಾರ ಹೂಡಿದ್ದರು.ಶಾಲೆ ಮುಗಿದ ನಂತರ ಒಂದು ಸಣ್ಣ ರೇಡಿಯೋ ಕಿವಿ ತಿರುವಿ, ಸೀಮೆ ಎಣ್ಣೆ ಸ್ಟೋವ್ ಹಚ್ಚಿ ಟೀ ಮಾಡಿ ಕುಡಿದು ಅಲ್ಲಿನ ಕೋಡಗನ ಬೆಟ್ಟಕ್ಕೆ ನಡೆದು ಕತ್ತಲಾಗುವವರೆಗೆ ಅಲ್ಲಿಂದ ಕಾಣುವ ಪ್ರಕೃತಿ ಸೌಂದರ್ಯ ಆಸ್ವಾದಿಸಿ ಮನೆ ತಲುಪುತ್ತಿರುವದಷ್ಟೆ ಆ ದಿನಗಳ ಅವರ ಹವ್ಯಾಸಗಳಾಗಿತ್ತು.ಮುಂದೆ ಈ ಹವ್ಯಾಸಗಳಿಗೆ ಅವರಿಗೆ ಜೊತೆಯಾಗಿದ್ದು ಆ ಊರಿನ ಚಾರಣಿಗರ ಮಾರ್ಗದರ್ಶಿಯಾಗಿ ಕೆಲಸ ಮಾಡುತಿದ್ದ ರಾಮಣ್ಣ.ಜೀವನೋಪಾಯಕ್ಕಾಗಿ ಇವನು ಒಂದು ಸಣ್ಣ ಅಂಗಡಿಯನ್ನು ದೇಗುಲದ ಪಕ್ಕ ಇಟ್ಟುಕೊಂಡು ದೇಗುಲದಲ್ಲಿ ಪೂಜೆ ಕೈಗೊಳ್ಳಲು ಬೇಕಾದ ಸಾಮಗ್ರಿ ಮತ್ತು ಕುಮಾರ ಪರ್ವತದಿಂದ ಇಳಿದು ಬರುವ ಚಾರಣಿಗಳನ್ನೆ ನಂಬಿಕೊಂಡು ವ್ಯಾಪಾರ ವಹಿವಾಟು ನಡೆಸುತಿದ್ದ.ತಾನು ಚಾರಣಿಗರ ಜೊತೆ ತೆರಳಬೇಕಾದಾಗ ಅಂಗಡಿಯನ್ನು ತನ್ನ ಬಾವ ಮೈದುನ ತನಿಯನ ಸುಪರ್ದಿಗೆ ವಹಿಸುತಿದ್ದ,ಹೀಗಿದ್ದ ರಾಮಣ್ಣನಿಗೆ ತನ್ನೂರಿನ ಮೇಸ್ತ್ರ ಈ ಹವ್ಯಾಸಗಳು ಆಸಕ್ತಿ ಕೆರಳಿಸಿದ್ದವು,ಹಾಗು ಅವರ ಈ ಆಸಕ್ತಿಗಳಿಗೆ ಅವನು ಜೊತೆಯಾಗಿದ್ದ.ಮುಂದೆ ಹೀಗೆ ಇವರು ರಜಾ ದಿನಗಳಲ್ಲಿ ಕಾಡು ಸುತ್ತುವದು,ತಿಂಗಳಿಗೊಮ್ಮೆ ಪರ್ವತ ಏರುವದು,ಬೇಟೆ,ತೊರೆ ಬದಿ ಬಿಡಾರ ಹೂಡಿ ಅಡಿಗೆ ಮಾಡಿ ತಿಂದು ತೇಗುವದು ಮುಂತಾದ ಹವ್ಯಾಸಗಳು ಮುಂದುವರಿದಿತ್ತು,ಇವರ ಜೊತೆ ರಾಮಣ್ಣನಲ್ಲದೆ ಚೋಮ , ಮಾದ,ಸಿದ್ದರ ಹುಡುಗ ಪರಮ,ಅಣ್ಣು ಪೂಜಾರಿ ಮಗ ನೋಣಯ ಹೀಗೆ ಬಹಳಷ್ಟು ಸಾಥಿಗಳು ದೊರಕಿದ್ದರು.ಮೊದ ಮೊದಲು ನಾವಡರು ಬ್ರಾಹ್ಮಣರೆಂಬ ಕಾರಣಕ್ಕೆ ಹಿಂದೆ ಸರಿಯುತಿದ್ದ ಇವರುಗಳು ಕ್ರಮೇಣ ಇವರು ತೋರಿಸುತಿದ್ದ ಪ್ರೀತಿ ಅಪ್ಯಾತೆಗಳಿಗೆ ಮಾರು ಹೋಗಿದ್ದರು,ಇದಲ್ಲದೆ ಹೆಚ್ಚಿನ ಬ್ರಾಹ್ಮಣ ಮಕ್ಕಳೇ ತುಂಬಿದ್ದ ಆ ಶಾಲೆಯಲ್ಲಿ ನಾವಡರಿಂದಾಗಿ ಉಳಿದ ಜಾತಿಯ ಮಕ್ಕಳು ಕೂಡ ಹೆಚ್ಚು ಹೆಚ್ಚು ಬರ ತೊಡಗಿದರು.

ನಾವಡರ ಈ ಎಲ್ಲ ಕಾರ್ಯಗಳಿಂದಾಗಿ ಹೆಚ್ಚಿನ ಚಿಂತೆಗೊಳಗಾದವರು ಎಂದರೆ ಆ ಊರಿನ ಜಾತಿ ಅಧಿಪತ್ಯದ ಮೂಲಕ ಅಳುತಿದ್ದ ಬ್ರಾಹ್ಮಣ ಕುಟುಂಬಗಳು ಅದರಲ್ಲೂ ಆ ದಳದ ನಾಯಕ ಸುಬ್ರಾಯ ಭಟ್ಟರು.ಈ ಪುಡಗೊಸಿ ಬ್ರಾಹ್ಮಣ ವೇಷದಾರಿ ನಾವಡ ಶಾಲೆಯನ್ನು ಹಾಗು ನಮ್ಮ ಮಕ್ಕಳನ್ನು ಮೈಲಿಗೆ ಮಾಡ ಹೊರಟಿದ್ದಾನೆ!!!! ಎಂದು ಬಹಿರಂಗವಾಗಿಯೆ ದೇವಳದ ಅಂಗಳದಲ್ಲಿ ಸೇರಿದ್ದ ಬ್ರಾಹ್ಮಣ ಸಮುದಾಯದವರೊಡನೆ ತನ್ನ ಅಸಮಧಾನ ತೋಡಿಕೊಂಡಿದ್ದರು.ತದ ನಂತರ ಒಂದು ಅಘೋಷಿತ ಬಹಿಷ್ಕಾರ ನಾವಡರ ಮೇಲೆ ಬ್ರಾಹ್ಮಣ ಕುಟುಂಬಗಳು ಹೇರಿದ್ದವು.ಇವೆಲ್ಲವೂ ನಾವಡರಿಗೆ ವಿಧಿತವಾಗಿ ತಿಳಿದರು ಕೂಡ ಅವಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮೌನಕ್ಕೆ ಶರಣಾಗಿದ್ದರು.ಹೀಗಿರಬೇಕಾದರೆ ಅದೇ ಊರಿನ ಗಾಣಿಗ ಸಮಾಜಕ್ಕೆ ಸೇರಿದ ಅರುಣಳನ್ನು ತನ್ನ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿಯೇ ಮದುವೆಯಾದರು.ಅರುಣಳಾ ಮನೆ ಅಂಗಳದ ಮೂಲಕವೇ ಕೊಡುಕಲ್ಲ ಮೇಲೆ ಹೋಗುವ ದಾರಿ ಇದ್ದುದರಿಂದಲೊ ಏನೊ ಅವರಲ್ಲಿ ಕೊಡು ಕಲ್ಲಿನ ಕೃಪೆ ಇಂದ ಪ್ರೀತಿ ಉಕ್ಕಿತ್ತು, ನಾವ್ಯಾಕೆ ಮದುವೆಯಾಗಬಾರದು? ಎಂಭ ಮೊದಲ ಪ್ರಸ್ತಾಪ ನಾವಡರಿಂದಲೆ ಬಂದಿತ್ತು.ಅಚ್ಚರಿಯೊಂದಿಗೆ ಹೂಂ....... ಅನ್ನೋ ಪ್ರತಿಕ್ರಿಯೆಯೊಂದಿಗೆ ಅರುಣ ನಾಚಿ ನಿಂತಿದ್ದಳು.ಇಷ್ಟೆ!! ವಿಷಯ ನಾಡಿಗರ ಮೂಲಕ ತನ್ನ ತಂದೆಗೆ ರವಾನೆ ಆಯಿತು,ಮಗನ ಇಚ್ಚೆಯ ಮುಂದೆ ಉಳಿದಿದ್ದೆಲ್ಲ ಅವರಿಗೆ ಗೌಣವಾಗಿರಬೇಕಾದರೆ ಸಂತೋಷದಿಂದಲೆ ಅವರ ಸಮ್ಮತಿ ಕೂಡ ದೊರಕಿತ್ತು,ಊರ ಜನರಿಗೆ ಅಚ್ಚರಿ ಆದರು ನಾವಡರ ಯಾವುದೇ ಕಾರ್ಯವು ಸಂತೋಷದ್ದೆ ಆಗಿರುತ್ತದೆಂಬ ಅದಮ್ಯ ವಿಶ್ವಾಸವು ಇದ್ದುದರಿಂದ ಜನ ಸಂಭ್ರಮ ಪಟ್ಟರು.ಅಸಹ್ಯ ಪಟ್ಟುಕೊಂಡವರು ಅದೆ ಬ್ರಾಹ್ಮಣ ಪಂಗಡದವರು ಹಾಗು ದೇಗುಲ ಅರ್ಚಕ ಸುಬ್ರಾಯ ಭಟ್ಟರು.ನಾವಡರ ಈ ನಿರ್ಧಾರ ಅವರಿಗೆ ಘೋಷಿತ ಬಹಿಷ್ಕಾರ ಮತ್ತು ನಾವಡರಿಗೆ ದೇಗುಲ ಪ್ರವೇಶ ನಿಷಿದ್ದ ಅನ್ನುವ ಕಟ್ಟಪ್ಪಣೆಗಳು ಸುಬ್ರಾಯ ಭಟ್ಟರಿಂದ ಬಂದಿತ್ತು.ಅದೆಲ್ಲವನ್ನು ಮೌನವಾಗಿಯೆ ಸ್ವೀಕರಿಸಿದ ಊರ ಜನ ಶಾಲಾ ಮೈದಾನದಲ್ಲೆ ಚಪ್ಪರ ಹಾಕಿ ನಾವಡರ ಮತ್ತು ಅರುಣಲ ಮದುವೆಯನ್ನು ಸುಸೂತ್ರವಾಗಿ ನೆರವೇರಿಸಿದ್ದರು,ಊರ ಬ್ರಾಹ್ಮಣರ ಹೊರತಾಗಿ, ಜನ ಜಾತ್ರೆಯೆ ನೆರೆದಿತ್ತು,ನಾವಡರ ತಂದೆ ಖುದ್ದು ಹಾಜರಿದ್ದು ಮಂಗಳ ಕಾರ್ಯ ನೆರವೇರಿಸಿದ್ದರು.ಮದುವೆ ಮುಗಿಸಿದ ಮರುದಿನದ ಬೆಳಿಗ್ಗೆ ಅರುಣ ಕೊಡುಕಲ್ಲ ಕಡೆ ಮುಖ ಮಾಡಿ ತನ್ನ ಬಾಲ್ಯ ವಿವಾಹ ,ಒಂದೆ ವರ್ಷದಲ್ಲಿ ತೀರಿಕೊಂಡ ಆ ಬಾಲ್ಯ ಗಂಡ,ಮದುವೆ ಅಂದರೇನು ಅರಿತುಕೊಳ್ಳಲಾಗದ ವಯಸಲ್ಲಿ ವಿಧವೆ ಪಟ್ಟ,ಇದೆಲ್ಲವೂ ಗೊತ್ತಿದ್ದೂ ತನ್ನ ಮತ್ತೆ ಕೈ ಹಿಡಿಯಲು ಮುಂದೆ ಬಂದ ನಾವಡರು ಈ ಎಲ್ಲವನ್ನ ಯೋಚಿಸುತಿದ್ದಳು!!,ಕೊಡುಕಲ್ಲು ಹಾಗು ಅದರ ಹಿಂದಿನ ಕುಮಾರ ಪರ್ವತದ ಮುಸುಕಿದ್ದ ಮಂಜು ಮೆಲ್ಲನೆ ಕರಗುತ್ತಾ ಸೂರ್ಯ ಕಿರಣಗಳು ಅವುಗಳ ನಡುವೆ ನಗುತಿದ್ದವು.

ಸುಬ್ರಾಯ ಭಟ್ಟರ ಮಗಳು ಕಾವ್ಯ, ತನ್ನ ಪ್ರೌಡ ಶಿಕ್ಷಣ ಮುಗಿಸಿ ಸೋಮವಾರ ಪೇಟೆಯಲ್ಲಿ ಪದವಿ ಪೂರ್ವ ಕಾಲೇಜ್ ನಲ್ಲಿ ವಿಧ್ಯಾಭ್ಯಾಸ ಮುಂದುವರಿಸಿದ್ದಳು. ಪಿ ಯು ಸಿ ಮುಗಿದ ಕೂಡಲೆ ಮಗಳಿಗೊಂದು ಮದುವೆ ಮಾಡುವ ಯೋಚನೆ ಸುಬ್ರಾಯಭಟ್ಟ ಹಾಗು ಪತ್ನಿ ಸುಶೀಲ ಅಮ್ಮನದು.ಅದಕ್ಕಾಗಿ ದೂರದ ಮೈಸೂರಿನ ಅಡಿಗರ ಮಗ ಪೌರೋಹಿತ್ಯ ವೃತ್ತಿಯಲ್ಲೇ ಇರುವ ವಾಸುದೇವ ಅನ್ನುವ ವರನನ್ನು ಗೊತ್ತು ಮಾಡಿದ್ದರು.ಆದರೆ ಪಿ ಯು ಸಿ ಮುಗಿಸಿದ ಕಾವ್ಯ ತಾನು ಪದವಿ ಶಿಕ್ಷಣ ಪಡೆಯಲೆಬೇಕೆಂದು ದುಂಬಾಲು ಬಿದ್ದಿದ್ದರಿಂದ ಅನಿವಾರ್ಯವಾಗಿ ಒಪ್ಪಿದ್ದರು ಸುಬ್ರಾಯ ಭಟ್ಟರು.ದೂರದ ಮೈಸೂರ್ ನಲ್ಲೆ ಒಂದು ವಿದ್ಯಾರ್ಥಿನಿ ನಿಲಯಕ್ಕೆ ಸೇರ್ಪಡಿಸಿ ಕಾಲೇಜ್ ಸೇರಿಸಿ ಬಂದಿದ್ದರು.ಕಾವ್ಯ ಓದಿನಲ್ಲಿ ಜಾಣೆ,ಅವಳು ಸೇರಿದ ಕಾಲೇಜ್ ಪ್ರಭಾವವೋ ಏನೋ!!! ಪ್ರಬುದ್ದಳಾಗುತ್ತ ಸಾಗಿದ್ದಳು,ಹಲವಾರು ವಿಚಾರ ಬಗ್ಗೆ ಲೇಖನಗಳನ್ನು ಬರೆಯುತ್ತ ,ಹಲವಾರು ಸಾಮಾಜಿಕ ವಿಷಯಗಳ ಗೋಷ್ಠಿಗಳಲ್ಲಿ ಭಾಗವಹಿಸುತ್ತ ಉತ್ತಮ ವಾಗ್ಮಿಯಾಗಿಯೂ ಆಗಿ ರೂಪುಗೊಂಡಿದ್ದಳು.ಪದವಿ ಶಿಕ್ಷಣ ಮುಗಿಸಿ ಅದೆ ವಾಸುದೇವನ ಪ್ರಸ್ತಾಪ ಮನೆ ಇಂದ ಬಂದರು ಕೂಡಾ ಲೆಕ್ಕಿಸದೆ ತನ್ನ ಇಷ್ಟದ ಎಂ ಎಸ್ ಡಬ್ಲು ಉನ್ನತ ಶಿಕ್ಷಣಕ್ಕೆ ಸೇರಿಕೊಂಡಳು.ಆ ಮೂಲಕ ಸಾಮಾಜಿಕವಾಗಿ ತಾನು ಗುರುತಿಸಿಕೊಳ್ಳಬೇಕೆಂಬ ಹಾಗು ಸಮಾಜಕ್ಕೆ ನೆರವಾಗಬೇಕೆಂಬ ಉತ್ಕಟ ಹಂಬಲ ಅವಳದಿತ್ತು.ಹೀಗಿರಬೇಕಾದರೆ ತನ್ನ ಈ ಹಂತದಲ್ಲಿ ಪರಿಚಯವಾದ ಪೀಟರ್ ಇವಳ ಈ ಕನಸಿಗೆ ಬೆನ್ನೆಲುಬಾಗಿ ನಿಂತ.ಪೀಟರ್ ದೂರದ ಅಮೆರಿಕೆಯ ಕ್ಯಾಲಿಫೋರ್ನಿಯದವ,ವಿಶ್ವದಾದ್ಯಂತ ಸಾಮಾಜಿಕ ಕಾರ್ಯಗಳಿಗಾಗಿ ಎನ್ ಜಿ ಓ ಗಳನ್ನೂ ಸ್ಥಾಪಿಸಿದ್ದ.ಬದುಕು ಮತ್ತು ಮಾನವತೆ ಎಂಭ ವಿಚಾರ ಗೋಷ್ಠಿಗೆ ಆ ಕಾಲೇಜ್ ನವರು ಇವನನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿದ್ದರು.8 ದಿನ ನಡೆದ ಆ ಗೋಷ್ಠಿಯಲ್ಲಿ ಅವನ ವಿಚಾರಗಳು ಅನುಭವಗಳು ಕಾವ್ಯಳನ್ನು ಅತಿಯಾಗಿ ಸೆಳೆಯಿತು,ಪೀಟರ್ಗೂ ಅಷ್ಟೆ ಕಾವ್ಯಳು ಗೋಷ್ಠಿಯಲ್ಲಿ ಎತ್ತುತ್ತಿದ್ದ ಪ್ರಶ್ನೆ,ಕೆಲವೊಂದು ವಿಚಾರ ಮಂಡನೆಗಳ ಶೈಲಿ ನೋಡಿ,ತಾನೆಲ್ಲು ಕಾವ್ಯಳಂತ ಪ್ರತಿಭೆಯನ್ನು ಈ ಹಿಂದೆ ಕಂಡಿಲ್ಲ ಎಂದು ಎಲ್ಲರೆದುರೆ ಹೇಳಿದ್ದ.ತದ ನಂತರ ಇವರುಗಳ ನಡುವೆ ಫೋನ್,ಇಮೇಲ್ ಮುಂತಾದವು ಸಾಮಾನ್ಯವಾಗಿತ್ತು, ಹೆಚ್ಚಿನೆಲ್ಲ ವಿಚಾರಗಳು ತಮ್ಮ ವಿಷಯಾಧಾರಿತವಾಗೆ ಇರುತಿದ್ದವು.ಹೀಗೆ ಮುಂದುವರಿದ ಕಾವ್ಯಳ ವಿದ್ಯಾಭ್ಯಾಸ ಒಂದು ದಿನ ಕೊನೆಗೊಳ್ಳುತ್ತದೆ. ಕೂಡಲೆ ಪೀಟರ್ ನಿಂದ ತನ್ನ ಸಂಸ್ಥೆಗೆ ಸಂಭಂದ ಪಟ್ಟ ಒಂದು ರಿಸರ್ಚ್ಗೆ ಸಂಬಂಧಿಸಿದಂತೆ ಮುಕ್ತ ಆಹ್ವಾನ ಬರುತ್ತದೆ.ಖುಷಿ ಇಂದಲೆ ತನ್ನ ವಿದ್ಯಾರ್ಥಿನಿ ನಿಲಯವನ್ನು ಖಾಲಿ ಮಾಡಿ ತನ್ನ ಸಹಪಾಠಿಗಳನ್ನೆಲ್ಲ ಬೀಳ್ಕೊಟ್ಟು ಹೆಗಡೆ ಹಳ್ಳಿ ತನ್ನ ಮನೆಗೆ ತಲುಪಿದ್ದಳು ಕಾವ್ಯ.

ಮನೆಯಲ್ಲಿ ಸಂಭ್ರಮವೋ ಸಂಭ್ರಮ,ಶುಶೀಲ ಅಮ್ಮನಂತೂ ಮಗಳಿಗೆ ಇಷ್ಟವಾದ ಅಡುಗೆ ತಯಾರಿಕೆಯಲ್ಲಿ ಮುಳುಗಿದ್ದರು.ಸುಬ್ರಾಯ ಭಟ್ಟರು ಅಡಿಗರ ಮನೆಗೆ ಫೋನಾಯಿಸಿದ್ದರು , ಮಗ ವಾಸುದೇವನನ್ನು ಕರಕೊಂಡು ಊರ ಕಡೆ ಬಂದು ಹೋಗಿ ಎಂಬ ಆಮಂತ್ರಣವನ್ನು ನೀಡಿದ್ದರು.ವಾಸುದೇವ ಇನ್ನು ಮದುವೆಯಾಗದೆ ಕುಂತಿದ್ದ ಕಾರಣ ಕಾವ್ಯಗಾಗಿ ಅಲ್ಲ,ಬ್ರಾಹ್ಮಣ ಅದರಲ್ಲೂ ಪೌರೋಹಿತ್ಯ ವೃತ್ತಿಯವನಿಗೆ ಹೆಣ್ಣು ಸಿಗುತ್ತಿರಲಿಲ್ಲ.ಆದರೆ ಸುಬ್ರಾಯ ಭಟ್ಟರಿಗೆ ಅದೆಲ್ಲ ಯೋಚನೆಗೆ ಬರುತ್ತಿರಲಿಲ್ಲ.ಏನಾದರಾಗಲಿ ಈ ಸಾರಿ ಮದುವೆ ಮುಗಿಸಿಯೆ ತೀರಬೇಕೆಂದು ಧೃಡ ಸಂಕಲ್ಪ ತೊಟ್ಟಿದ್ದರು ಹಾಗು ಈ ಬಗ್ಗೆ ನಿನ್ನ ಮಗಳಿಗೂ ತಿಳಿಹೇಳು ಎಂದು ಶುಶೀಲ ಅಮ್ಮನಿಗೂ ಎಚ್ಚರಿಸಿದ್ದರು.ಈ ವಿಷಯ ಕಾವ್ಯಳಿಗೆ ತನ್ನ ಅಮ್ಮನ ಮೂಲಕ ತಿಳಿದಾಗ ನಿಜವಾಗಿಯೂ ಧೃತಿ ಕೆಟ್ಟು ಕುಳಿತಿದ್ದಳು.ಅವಳ ಕಣ್ಣೆದುರು ಇದ್ದುದು ಒಂದೆ ಅದು ತಾನು ಕಟ್ಟಿಕೊಳ್ಳುವ ಭವಿಷ್ಯ,ತನ್ನ ತಂದೆ ನೋಡಿದ ವರ ಈ ನಿಟ್ಟಿನಲ್ಲಿ ಯಾವುದಕ್ಕೂ ನಿಲುಕದವನು ಆಗಿದ್ದ,ಜೀವ ಬಿಟ್ಟೆನೆಯೆ ಹೊರತಾಗಿ ಈ ಮದುವೆಗೆ ಒಪ್ಪಿಗೆ ನೀಡಲಾರೆ ಅನ್ನುವ ನಿರ್ಧಾರಕ್ಕೆ ಬಂದಿದ್ದಳು.ಆದರೆ ತನ್ನ ತಂದೆ ತಾಯಿಗೆ ಇದ ತಿಳಿಸುವದೆ೦ತು ......? ದಿಕ್ಕು ತೋಚದಾಗಿತ್ತು ಕಾವ್ಯಳಿಗೆ.ಹೀಗಿರಬೇಕಾದರೆ ಅಡಿಗರ ಆಗಮನವಾಗಿತ್ತು ಮಗ ವಾಸುದೇವನೊಂದಿಗೆ.ಹುಡುಗಿ ನೋಡುವ ಶಾಸ್ತ್ರ ನಡೆಯಿತು ತದ ನಂತರ ಅಡಿಗರು ಏನಮ್ಮ ಈ ಮದುವೆಗೆ ನಿನ್ನ ಒಪ್ಪಿಗೆಯೂ?ಎಂದು ಕಾವ್ಯಳ ಮುಂದೆ ಪ್ರಶ್ನೆ ಇಟ್ಟಿದ್ದರು.ಹೂಂ...........ಒಪ್ಪಿಗೆ ಆದರೆ ಒಂದು ಶರತ್ತಿನ ಮೇಲೆ ಅಂದು ಪ್ರತಿಕ್ರಿಯೆ ತಿಳಿಯುವದಕ್ಕಾಗಿ ಎಲ್ಲರ ಮುಖವನ್ನೊಮ್ಮೆ ನೋಡಿದಳು.ಸುಬ್ರಾಯ ಭಟ್ಟರು ಏನು ತಿಳಿಯದೆ ಮಗಳ ಈ ಮಾತನ್ನು ಕೇಳಿ ಪ್ರತಿಕ್ರಿಯಿಸಲು ಆಗದೆ ಅಡಿಗರ ಮುಖ ನೋಡಿ,ಕಷ್ಟದಿಂದ ನಗು ಮೊಗದ ನಾಟಕವನ್ನಾಡಿದರು,ಅದೇನಮ್ಮ?ಹೇಳು.................!!!!!ಅಡಿಗರು ಮಾತು ಮುಂದುವರಿಸಿದ್ದರು.ಏನಿಲ್ಲ ನನಗೊಂದು ರಿಸರ್ಚ್ ಮಾಡಬೇಕಿದೆ ಅದಕ್ಕಾಗಿ ಅಮೆರಿಕೆಗೆ ಹೋಗಬೇಕು ಒಂದೆರಡು ವರ್ಷ ಅಷ್ಟೆ.ಆಮೇಲೆ ಮದುವೆ ಇಟ್ಟುಕೊಂಡರೆ ನನ್ನದೇನು ಅಭ್ಯಂತರವಿಲ್ಲ,ನಿಮಗೆ ಭರವಸೆ ಇಲ್ಲಾಂದ್ರೆ ಈಗಲೇ ನಿಶ್ಚಿತಾರ್ಥ ಬೇಕಾದರೆ ಮುಗಿಸಿ.ತಾನು ಅದಾಗಲೆ ಈ ಬಗ್ಗೆ ಒಪ್ಪಿಗೆ ಸೂಚಿಸಿರುವದರಿಂದ ಅನಿವಾರ್ಯತೆಗೆ ಸಿಲುಕಿದ್ದೇನೆ.ದಯವಿಟ್ಟು ಒಪ್ಪಿಕೊಳ್ಳಿ ಎಂದು ಬೀಸುವ ದೊಣ್ಣೆ ಏಟು ತಪ್ಪಿಸಿಕೊಳ್ಳಲು ಒಂದು ನಾಟಕವಾಡಿದ್ದಳು ಕಾವ್ಯ.ಸುಬ್ರಾಯ ಭಟ್ಟರು ಸುಮ್ನಿರು ನೀನು.......!! ಅಮೇರಿಕೆಯು ಇಲ್ಲ ಎಂತದು ಇಲ್ಲ,ತೆಪ್ಪಗೆ ಮದುವೆ ಆಗಬೇಕು ಅಷ್ಟೇ ಅಂತ ಅಬ್ಬರಿಸಿದ್ದರು.ಅಡಿಗರು ಒಂದು ನಿಮಿಷ ತೆಪ್ಪಗಾಗಿ ಸುಬ್ರಾಯ ಭಟ್ಟರಲ್ಲಿ ಬಹಳ ಏನು ವಯಸ್ಸು ಇಬ್ಬರಿಗೂ ಆಗಿಲ್ಲ.30- 31 ವರುಷಕ್ಕೆ ಈಗ ಮದುವೆಯಾಗುವದು ಮಾಮೂಲಿ .ನಮಗೂ ನಮ್ಮ ಸೊಸೆ ಅಮೆರಿಕೆಯಲ್ಲಿ ಇದ್ದು ಬಂದವಳು ಅನ್ನೊ ಹೆಮ್ಮೆ ಇರುತ್ತದೆ.ಹಾಗೆ ಅಗಲಿ ಬಿಡಮ್ಮ.ಅಷ್ಟಕ್ಕೂ 2 ವರುಷಗಳ ಮಾತು ತಾನೆ.ಹಾಗೆ ಆಗಲಿ ಬಿಡಮ್ಮ,ನಿಶ್ಚಿತಾರ್ಥ ಈಗಲೆ ಮುಗಿಸಿ ಬಿಡೋಣ ಅಂದರು.ಬೀಗರೆ ಹೀಗನ್ನಬೇಕಾದರೆ ಸುಬ್ರಾಯ ಭಟ್ಟರು ಮೌನರಾಗಿದ್ದರು,ಹಾಗೆ ಮುಂದಿನ ಕೆಲವೆ ಘಂಟೆಯಲ್ಲಿ ಆ ಊರಿನ ಬ್ರಾಹ್ಮಣ ಸಮುದಾಯದವರ ಎದುರು ವಾಸುದೇವ ಮತ್ತು ಕಾವ್ಯರುಗಳ ನಿಶ್ಚಿತಾರ್ಥ ನೆರವೇರಿತ್ತು.ಕಾರ್ಯಕ್ರಮ ಮುಗಿಸಿ ತೆರಳಬೇಕಾದರೆ ವಾಸುದೇವ ಕಾವ್ಯಳ ಮೊಗ ನೋಡಿ ಕಿರು ನಗೆ ಬೀರಿದ್ದ,ಕಾವ್ಯಳು ನಗೆ ತಡೆಯಲಾಗದೆ ಜೋರಾಗೆ ನಕ್ಕಿದ್ದಳು.ಅವಳಿಗೆ ಹರಕೆಯ ಕುರಿಯಂತೆ ಅವನ ಮೊಗ ಕಂಡಿತ್ತು,ಒಂದು ಸಣ್ಣ ಆತಂಕದೊಂದಿಗೆ ಏನನ್ನೊ ನೆನೆಸುತ್ತ ಹಾಗೆಲ್ಲ ಆಗಲಾರದು ಎಂದು ತನಗೆ ತಾನೇ ಸಮಾಧಾನ ಪಟ್ಟಿದ್ದೆಂದರೆ ಅದು ಆ ಹೊತ್ತಿನಲ್ಲಿ ಶುಶೀಲ ಅಮ್ಮ ಮಾತ್ರ.

ಹೀಗೆ ಅಮೆರಿಕ ಸೇರಿದ ಕಾವ್ಯ ಮೊದ ಮೊದಲಿಗೆ ತಿಂಗಳಿಗೆ ಒಮ್ಮೆಯಾದರು ಮನೆಗೆ ಫೋನಾಯಿಸುತಿದ್ದಳು.ಪತ್ರ ಬರೆಯುತಿದ್ದಳು.ಶುಶೀಲ ಅಮ್ಮನಿಗೆ ಮಗಳು ದೂರದಲ್ಲಿ ಇದ್ದಾಳೆ ಅನ್ನುವದೆ ದುಃಖದ ವಿಷಯವಾಗಿತ್ತು,ಮಗಳನ್ನು ನೆನಸಿ ಒಬ್ಬರೆ ಕೂತು ಅಳುತಿದ್ದರು ಕ್ರಮೇಣ ಪರಿಸ್ಥಿತಿಗೆ ಹೊಂದಿಕೊಂಡರು.ಅಡಿಗರು ಅವಾಗಾವಾಗ ಬಂದು ಹೋಗುತಿದ್ದರು,ಸುಬ್ರಾಯ ಭಟ್ಟರ ಅದೆ ವೈದಿಕತೆ ಮುಂದುವರಿದಿತ್ತು.ತನ್ನ ಮಗಳು ಅಮೆರಿಕೆಯಲ್ಲಿರುವದು ಊರಿಗೆ ಹೆಮ್ಮೆಯ ವಿಚಾರ ಅಂತ ಅವರೆ ಹೇಳಿಕೊಳ್ಳುತಿದ್ದರು.ಅದ್ಯಾಕೋ ಅವರ ಹೀಯಾಳಿಕೆ ನುಡಿಗಳಲ್ಲಿ ನಾಡಿಗರು ಅಗತ್ಯವಾಗಿ ಬಂದು ಹೋಗುತಿದ್ದರು.ಅದೆಲ್ಲವನ್ನು ಕಿವಿಗೆ ಹಾಕಿಕೊಳ್ಳದ ನಾಡಿಗರು ಮಾತ್ರ ಅದೇ ಚೋಮ,ರಾಮಣ್ಣ,ನೋಣಯ ಮುಂತಾದವರ ಒಡಗೂಡಿ ಪ್ರಕೃತಿ ಜೊತೆ ಲೀನವಾಗಿ ಅರುಣಳೊಂದಿಗಿನ ಸುಖ ಸಂಸಾರದಲ್ಲಿ ಮುಳುಗಿದ್ದರು.ಹೀಗಿರಬೇಕಾದರೆನೆ ಒಂದು ದಿನ ಪೋಸ್ಟ್ ಮ್ಯಾನ್ ವಸಂತ ಸುಬ್ರಾಯ ಭಟ್ಟರ ಮನೆ ಬಾಗಿಲು ಬಡಿದದ್ದು ಹಾಗು ಆ ಪತ್ರ ನೀಡಿದ್ದು.ಸುಬ್ರಾಯ ಭಟ್ಟರು ಕಾರ್ಯ ನಿಮಿತ್ತ ಸೋಮವಾರ ಪೇಟೆಗೆ ಹೋದುದರಿಂದ ಪತ್ರ ಪಡೆದ ಶುಶೀಲಮ್ಮ ಅದ ಓದಲು ತಿಳಿಯದೆ ವಸಂತನಲ್ಲೇ ಓದಲು ಹೇಳಿದರು.ಪತ್ರ ಕಾವ್ಯ ಬರೆದುದಾಗಿತ್ತು...............!!!!!!!!.ಆ ದಿನದ ಮುಬ್ಬು ಕತ್ತಲ ಸಂಜೆ ಭಟ್ಟರ ಆಗಮನವಾಗಿತ್ತು,ದೀಪಗಳ ಬೆಳಗದೆ ಇದ್ದ ತನ್ನ ಮನೆಯನ್ನು ನೋಡಿ ಅಚ್ಚರಿ ಪಟ್ಟಿದ್ದರು.ಶುಶೀ ........ಎಂದು ಕೂಗುತ್ತ ದೀಪ ಬೆಳಗಿದ್ದರು ಭಟ್ಟರು,ಪಡಸಾಲೆಯ ಕಂಬದ ಬದಿ ಕುಸಿದು ಕೂತಿದ್ದ ಶುಶೀಲ ಅಮ್ಮನನ್ನು ಅವರ ಮಡುಗಟ್ಟಿದ ದುಃಖದ ಮೊಗ ನೋಡಿ ಗಾಬರಿ ಇಂದ ಏನಾಯ್ತು ಶುಶೀ.........ಅಂದಿದ್ದರು.ತಡೆಯದ ದುಃಖದೊಂದಿಗೆ ಭಟ್ಟರನ್ನು ಅಪ್ಪಿ ಹಿಡಿದು ಅವರ ಕೈಯಲ್ಲಿ ಕಾವ್ಯಳ ಪತ್ರವನ್ನು ಇರಿಸಿದ್ದರು.ಭರದಿಂದಲೆ ಪತ್ರ ಬಿಡಿಸಿ ಓದಿದ್ದರು ಭಟ್ಟರು.ಪತ್ರದ ಒಕ್ಕಣೆ ಹೀಗಿತ್ತು.
"ಅಪ್ಪಾ.........ಹೇಗಿದ್ದೀರಿ?,ಅಮ್ಮನನ್ನ ನಿಮ್ಮನ್ನು ಇನ್ನು ಮುಂದೆ ಜೀವನ ಪೂರ್ತಿ ಮಿಸ್ ಮಾಡ್ಕೊತೀನಿ. ಕಾರಣ ಇಷ್ಟೇ ನಾನು ನಿಮ್ಮ ಜಾತಿಯ ವಾದಗಳ ಹಿಡಿತಕ್ಕೆ ಸಿಕ್ಕಿ ಒದ್ದಾಡುವದಕ್ಕೆ ಮನಸಿಲ್ಲ,ಅದೆಲ್ಲವನ್ನು ಮೆಟ್ಟಿ ನಿಂತು ಬಡವರ ಹಸಿವು ನೀಗಿಸಬೇಕೂಂತ ಹೊರಟವಳು ನಾನಪ್ಪ.ನಾನಿಲ್ಲಿ ಒಂದು ಎನ್ ಜಿ ಓ ಪ್ರಾರಂಭಿಸಿದ್ದೇನೆ ಅದ ಮೂಲಕ ಹಲವು ದೇಶಗಳ ಹಳ್ಳಿಯ ಜನಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ನನ್ನ ಉದ್ದೇಶ.ಬೇಸರಿಸದಿರಪ್ಪ ನೀನು ನೋಡಿದ ಆ ಹುಡುಗ ನನ್ನ ಈ ನಿರ್ಧಾರಗಳಿಗೆ ಬೆಂಬಲಿಸಲಾರ,ಆ ಮಟ್ಟಿನ ತಿಳುವಳಿಕೆಗಳು ಅವನಿಗಿರದು,ಅದಕ್ಕಾಗಿ ನಾನು ಈ ದಿನ ಇಲ್ಲಿಯೆ ನನ್ನ ಗೆಳೆಯ ಪೀಟರ್ ಅನ್ನುವವನ ಜೊತೆ ವಿವಾಹವಾಗಿದ್ದೇನೆ.ನಿನ್ನ ಬ್ಯಾಂಕ್ ಖಾತೆಗೆ ೨೦ ಲಕ್ಷ ನಗದನ್ನು ಹಾಕಿರುತ್ತೇನೆ.ಮುಂದೆ ಬೇಕಾದಲ್ಲಿ ಇಷ್ಟವಿದ್ದಲ್ಲಿ ತಿಳಿಸಬಹುದು.ದುಖಿಃಸದಿರಿ,ಒಂದು ವೇಳೆ ನಿಮಗೆ ಮನಶಾಂತಿ ಬೇಕಿದ್ದಲ್ಲಿ ನನ್ನ ತಿಥಿ ನೆರವೇರಿಸಿ ನಿಮ್ಮ ಪ್ರಕಾರ ಶ್ರಾದ್ದ ಕ್ರಿಯೆಯನ್ನು ನಡೆಸಬಹುದು.ವೈಧಿಕತನದಿಂದಲೆ ನಿಮಗೆ ಸಂತೋಷ ಸಿಗುವದಾದರೆ ಹೀಗೆ ಮಾಡಲು ನನ್ನ ಅಭ್ಯಂತರವಿಲ್ಲ.ನಾನು ನಿಮ್ಮ ಮಗಳಾಗಿಯೆ ಇರುತ್ತೇನೆ.ಆದರೆ ಮತ್ತೆ ನಿಮ್ಮಲ್ಲಿಗೆ ಹಿಂದಿರುಗಲಾರೆ, ಜೀವನದ ನಿರ್ಧಾರಘಟ್ಟಗಳೆ ಹಾಗಲ್ಲವೇನಪ್ಪ?ಇತರರಿಗೆ ದುಖಃವಾದರೂ ಸೈ ಒಳ್ಳೆ ಕಾರ್ಯದಲ್ಲಿ ಮುಂದುವರಿಯಬೇಕೆಂದು ನೀನೆ ಕಲಿಸಿರುವುದು ತಾನೆ.ನಿನ್ನ ದೃಷ್ಟಿಯಲ್ಲಿ ನಿನ್ನ ವೈಧಿಕತನವೆ ದೊಡ್ಡದು ಆದರೆ ನನಗೆ ಬಡವರ ಹಸಿವ ನೀಗೀಸೋದೆ ವೈಧಿಕತನ, ನಾನು ಅಮ್ಮ ನಿನ್ನನ್ನೂ ನೆನೆದು ಬರೀಯ ಅಳುತಿದ್ದೇನೆ, ಕಣ್ಣಿರ ಒಂದೆರಡು ಹನಿ    ಪತ್ರದಲ್ಲು ಕಾಣಬಹುದು,ದೇವರ ಕೋಣೆ ಅಂತ ಏನೂ ಇಲ್ಲಪ್ಪ ಇಲ್ಲಿ ,ನನ್ನ ಬೆಡ್ಡಿನ ಮೇಲೆ ನಿಮ್ಮ ಪೊಟೋ ತೂಗು ಹಾಕಿರುವೆ, ಮಲಗುವಾಗಲೆಲ್ಲ ನಿಮ್ಮಗಳ ಬೆಚ್ಚಗಿನ ಕೈ ನನ್ನ ತಟ್ಟುತ್ತಿರುವಂತೆ ಭಾಸವಾಗುತ್ತೆ, ಅದೆ ಭಾವನೆಗಳಲ್ಲಿ ಬದುಕುವೆ, ಮುಂದೆ ಬರೆಯಲಾಗುತ್ತಿಲ್ಲ ಪಪ್ಪ, ಅಮ್ಮನನ್ನೂ..................!!!ಮುಂದೆ ಪತ್ರವೂ ಏನೊಂದು ವಿಷಯಗಳಿಲ್ಲದೆ ಖಾಲಿಯಾಗಿತ್ತು, ಇದ್ದರು ಭಟ್ಟರು ಓದಲಾಗುತ್ತಿರಲಿಲ್ಲ, ಪತ್ರ ಓದಿದ ಎದೆಗೆ ಯಾರೊ ರಭಸದಿಂದ ಚಾಕು ಇರಿದಂತಾಗಿತ್ತು ಭಟ್ಟರೀಗೆ!!!!!,ಅಲ್ಲೇ ಕುಸಿದು ಕೂತಿದ್ದರು,ಆ ದಿನ ರಾತ್ರಿ ದಂಪತಿಗಳಿಬ್ಬರು ಇಹ ಲೋಕದ ಪರಿವೆಯೆ ಇಲ್ಲದೆ ಮಲಗಿದ್ದರು,ಅವರಿಂದ ನಿದ್ರೆ ಅದೆಷ್ಟೋ ಮಾರು ದೂರ ಮಲಗಿತ್ತು!!!!!!!!.ಈ ವಿಷಯ ಕಾಳ್ಗಿಚ್ಚಿನಂತೆ ಪೋಸ್ಟ್ ಮ್ಯಾನ್ ವಸಂತನಿಂದಾಗಿ ಊರಲ್ಲಿ ಹಬ್ಬಿತ್ತು.ಹೆಚ್ಚಿನವರು ಕನಿಕರಿಸತೊಡಗಿದ್ದರು.ಅದು ಹೇಗೋ ಅಡಿಗರಿಗೂ ವಿಷಯ ತಿಳಿದಿತ್ತು,ಸುಬ್ರಾಯ ಭಟ್ಟ ತನ್ನ ಮಗನ ಭವಿಷ್ಯಕ್ಕೆ ಕೊಳ್ಳಿ ಇಟ್ಟವ ಅಂತ ಜರೆದು ಊರ ದೇಗುಲದಲ್ಲಿ ಬ್ರಾಹ್ಮಣ ಸಮುದಾಯದ ಪಂಚಾಯತಿ ಸೇರಿಸಿದ್ದರು ಅಡಿಗರು.ಬ್ರಾಹ್ಮಣ ಸಮುದಾಯದ ನಿರ್ಧಾರದಂತೆ ಇಷ್ಟೆಲ್ಲಾ ನಡೆದ ಮೇಲೆ ಭಟ್ಟರು ಪೂಜೆ ನಡೆಸಲು ಯೋಗ್ಯರಲ್ಲ.ಇನ್ನು ಮುಂದೆ ಈ ದೇಗುಲದ ಅರ್ಚಕರು ಅಡಿಗರ ಮಗ ವಾಸುದೇವ ಅನ್ನುವದು ನಿರ್ಧಾರ ಆಯಿತು.ಸುಟ್ಟ ಬರೆ ಮೇಲೆ ಉಪ್ಪು ಸುರಿದಂತ ಅನುಭವ ಭಟ್ಟರದ್ದು.ಯಾಕೊ ತಾನು ಪರಕೀಯ, ಏಕಾಂಗಿ ಅನಿಸತೊಡಗಿತ್ತು.ತೀರ ಭಟ್ಟರಿಗೆ ನಾವಡರು ನೆನಪಾಗಿ ಅವರ ಮನೆ ಮುಂದೆ ಮೊತ್ತ ಮೊದಲು ನಿಂತಿದ್ದರು ಆಚಾರ್ಯ ಸುಬ್ರಾಯ ಭಟ್ಟರು.ನಾವಡರು ಅತ್ಮೀಯತೆ ಇಂದಲೆ ಸ್ವಾಗತಿಸಿದ್ದರು,ಅವರ ಅತ್ಮೀಯತೆಯನ್ನು ನೋಡಿ ದುಖಃದಿಂದ ಭಟ್ಟರ ಬಾಯಿಂದ ಹೊರಟ ಒಂದೆ ಮಾತು "ಸಾಧ್ಯವಾದರೆ ಕ್ಷಮಿಸಿ ಬಿಡು ನಾವಡ"!!!!!ಅಷ್ಟೇ .........! ಹಿಂತುರಿಗಿ ನೋಡದೆ ತನ್ನ ಮನೆ ದಾರಿ ಹಿಡಿದಿದ್ದರು ಭಟ್ಟರು.

ಇತ್ತೀಚಿಗೆ ಭಟ್ಟರು ಮನೆ ಬಿಟ್ಟು ಹೊರಬರುವದೆ ಅಪರೂಪವಾಗಿ ಬಿಟ್ಟಿತ್ತು.ಸುಶೀಲಮ್ಮ ಇದೆ ವ್ಯಥೆಯಲ್ಲಿ ಕೊರಗಿ ಕೊರಗಿ ಕೃಶರಾಗಿದ್ದರು.ನಾವಡರು ಆಗಾಗ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು,ಅವರ ಮನೆಗೆ ಬೇಕಾದ ಅಗತ್ಯ ಸಾಮಾಗ್ರಿ ಎಲ್ಲವನ್ನು ರಾಮಣ್ಣ ವಾರ ವಾರ ಕೊಟ್ಟು ಹೋಗುತಿದ್ದ.ಇಷ್ಟೆಲ್ಲಾ ನಡೆದ ಒಂದು ವರುಷದ ಒಳಗಾಗಿ ಶುಶೀಲಮ್ಮ ಇದೆ ಕೊರಗಲ್ಲಿ ಪ್ರಾಣ ಬಿಟ್ಟಿದ್ದರು.ಹೆಣಕ್ಕೆ ಹೆಗಲು ಕೊಟ್ಟವರು ಇದೆ ಚೋಮ,ಮಾದ, ನೋಣಯ್ಯ ಹಾಗು ನಾವಡರು.ತೂತು ಮಡಿಕೆ ಹಿಡಿದುಕೊಂಡು ಮುಂದೆ ಸಾಗುತಿದ್ದ ಭಟ್ಟರಲ್ಲಿ ಕಾಡುತಿದ್ದುದು ಒಂದೇ ಪ್ರಶ್ನೆ,ತಾನು ದಿನ ನಿತ್ಯ ಪೂಜೆಗಯ್ಯುತಿದ್ದ ದೇವಿ ನನ್ನ ಕೈಬಿಟ್ಟಳೆ!!!!!ಇದೆಲ್ಲ ಕಳೆದ ನಂತರ ಇವರಿಗೆ ನಾವಡರ ಹೆಂಡತಿ ಅರುಣ ತಂದು ಕೊಡುವ ಎರಡು ಹೊತ್ತಿನ ಊಟವೆ ಪರಮಾನ್ನವಾಗಿತ್ತು, ಮನೆ ಕೆಲಸವನ್ನು ಇದೆ ಚೋಮನ ಹೆಂಡತಿ ಪಾರ್ವತಿ ಮಾಡಿ ಮುಗಿಸುತಿದ್ದಳು,ದಿನವು 2 ಬಾರಿ ನಾವಡರು ಬಂದು ವಿಚಾರಿಸತೊಡಗಿದರು,ಭಟ್ಟರ ತೋಟದ ಕೆಲಸವನ್ನು ನೋಣಯ ಅಚ್ಚು ಕಟ್ಟಾಗಿ ಮುಗಿಸುತಿದ್ದ.ಇಷ್ಟೆಲ್ಲಾ ಆದರು ಕೂಡ ಒಂದು ಕಾಲದ ಬ್ರಾಹ್ಮಣ ಸಮುದಾಯದ ನೇತ್ರತ್ವ ವಹಿಸಿದ್ದ ಇವರನ್ನು ಯಾವೊಬ್ಬ ಬ್ರಾಹ್ಮಣನು ಹೇಗಿದ್ದೀರಿ? ಎಂದು ವಿಚಾರಿಸಲು ಇವರತ್ತ ಸುಳಿಯಲಿಲ್ಲ.ಜಾತೀಯತೆಯ ಹುಂಬತನ ನನ್ನನ್ನು ಹೇಗೆ ಮೂಡನನನ್ನಾಗಿಸಿತ್ತು!!,ನಾನು ಎಷ್ಟೆಲ್ಲಾ ಎಲ್ಲಾ ಇದ್ದು ಕಳಕೊಂಡೆ?ನನ್ನವರು ಯಾರು?ಪರಕೀಯರು ಯಾರು? ತಿಳಿದುಕೊಳ್ಳಲು ನನ್ನ 65 ವಯಸ್ಸು ಸಾಕಾಗಲಿಲ್ಲ ಅಲ್ಲವೆ ?ಅದ್ಯಾಕೆ ಈ ಎರಡು ವರ್ಷ ಇವೆಲ್ಲವನ್ನೂ ನನಗೆ ಕಲಿಸಿಕೊಡುತ್ತಿದೆ!!!!!?ಸಾವಿರಾರು ಉತ್ತರ ದೊರಕದ ಪ್ರಶ್ನೆಗಳನ್ನ ಪ್ರಶ್ನಿಸುತ್ತಲೆ ತನ್ನ ಏಕಾಂತವನ್ನು ಕಳೆಯುತಿದ್ದರು ಭಟ್ಟರು.ಅದೇನು ಅನಿಸಿತೊ ಏನೊ ಒಂದು ದಿನ ಮುಂಜಾನೆಯೆ ಎದ್ದ ಭಟ್ಟರು ಸೋಮವಾರ ಪೇಟೆ ಕಡೆ ಬಹಳ ತಿಂಗಳುಗಳ ನಂತರ ಹೆಜ್ಜೆ ಹಾಕಿದ್ದರು.ಸಂಜೆ ವಾಪಸಾದ ಮೇಲೆ ನಾವಡರನ್ನು ಕರೆಸಿ ಒಂದು ವಿಲ್ ಬರೆದಿಟ್ಟಿದ್ದೇನೆ ನನ್ನ ಮರಣದ ನಂತರ ಇದ ಓದತಕ್ಕದ್ದು ಅಂತ ಅವ್ರ ಕೈಗೆ ಇಟ್ಟಿದ್ದರು ಭಟ್ಟರು.ಇದಾದ ಮೂರೆ ವಾರಗಳಲ್ಲಿ ಭಟ್ಟರು ಕೂಡ ಇಹ ಲೋಕದ ಯಾತ್ರೆ ಮುಗಿಸಿ ಪರ ಲೋಕದ ಕಡೆ ಹೆಜ್ಜೆ ಹಾಕಿದ್ದರು,ಯಥಾ ಪ್ರಕಾರ ನಾವಡರು ಮುಂದೆ ನಿಂತು ಮಗನಾಗಿ ಎಲ್ಲ ಕಾರ್ಯಗಳನ್ನು ಪೂರೈಸಿ ಕಷ್ಟದಿಂದ ಕಾವ್ಯಳ ವಿಳಾಸ ಪತ್ತೆ ಹಚ್ಚಿ ವಿಷಯಗಳನ್ನು ತಿಳಿಸುವ ಸಲುವಾಗಿ ಒಂದು ಪತ್ರ ಗೀಚಿ ಸುಮ್ಮನಾಗಿದ್ದರು.

ಇದೆಲ್ಲ ಆಗಿ ೬ ವರುಷ ಕಳೆದಿದೆ.ಈಗ ಹಗ್ಗಡೆ ಹಳ್ಳಿಗೆ ಒಂದು ಸುಸಜ್ಜಿತ ರಸ್ತೆ ಇದೆ ,ಕಿರಿಯ ಪ್ರಾಥಮಿಕ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಾಗಿದೆ.ಫ್ರೌಢ ಹಾಗು ಪದವಿ ಪೂರ್ವ ಕಾಲೇಜ್ ಇದೆ.ಗ್ರಂಥಾಲಯ,ಅರೋಗ್ಯ ಕೇಂದ್ರ ,ಸಮುದಾಯ ಭವನ.ಕುಡಿಯುವ ನೀರು ಹೀಗೆ ಎಲ್ಲ ಸೌಲಭ್ಯವನ್ನು ಪಡೆದಿದೆ.ಇವೆಲ್ಲ ಕೆಲಸಗಳ ನಡುವೆ ಒಂದು ಬೋರ್ಡ್ ತಗುಲಿ ಹಾಕಿಕೊಂಡಿದೆ.ಎಲ್ಲ ಬೋರ್ಡ್ ನಲ್ಲೂ ಇರುವ ಒಂದು ಸಾಮಾನ್ಯ ಪದ "ಕೊಡುಗೆ ದಿ||ಸುಶೀಲ ಸುಬ್ರಾಯ ಭಟ್ಟರ ಸ್ಮಾರಕ ಟ್ರಷ್ಠ್ "ಎಂಬುದು. ಹೌದು ಸುಬ್ರಾಯ ಭಟ್ಟರ ವಿಲ್ ನಲ್ಲಿ ತನ್ನ ಸಕಲ ಚರಾಚರ ಅಸ್ತಿಯನ್ನು ಊರ ಜನಕ್ಕೆ ದಾನ ಮಾಡಿದ್ದರು, ಅದ ಪರಭಾರೆ ನಡೆಸುವ ಅಧಿಕಾರವನ್ನು ನಾವಡರಿಗೆ ಬಿಡಲಾಗಿತ್ತು.ಆ ಮೂಲಕ "ದಿ||ಸುಶೀಲ ಸುಬ್ರಾಯ ಭಟ್ಟರ ಸ್ಮಾರಕ ಟ್ರಷ್ಠ್" ರೂಪು ಪಡೆದು ತನ್ನ ಕೆಲಸ ಪ್ರಾರಂಭಿಸಿತ್ತು.ಮುಂದಿನ ವರ್ಷಗಳಲ್ಲಿ 15 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಸಿದ್ದತೆಯಲ್ಲೂ ತೊಡಗಿತ್ತು. ಈ ಮೂಲಕ ಸುಬ್ರಾಯ ಭಟ್ಟರ ವೈಧಿಕತನ ಮೆರೆದಿತ್ತು.ಇದೆಲ್ಲದರ ಹಿಂದೆ ಬಲವಾಗಿ ನಿಂತಿದ್ದು ಇದೆ ನಾವಡರು, ಚೋಮ, ರಾಮಣ್ಣ, ನೋಣಯ ಅಲ್ಲದೆ ದೂರದ ಊರಿನಲ್ಲಿದ್ದು ಅರ್ಥಿಕ ಹಾಗು ಆಡಳಿತಾತ್ಮಕ ಬೆನ್ನೆಲುಬಾಗಿ ನಿಂತವರು ಇದೆ ಸುಬ್ರಾಯ ಭಟ್ಟರ ಮಗಳು ಕಾವ್ಯ.ಮೂಕ ಸಾಕ್ಷಿಯಾಗಿ ನಿಂತು ಮಂಜಿನಾಟದಲ್ಲಿ ತಲ್ಲಿನವಾಗಿದ್ದು ಅದೆ ಕೊಡು ಕಲ್ಲ ಗುಡ್ಡ , ಹಾಗು ಅದರ ಹಿಂದಿನ ಕುಮಾರ ಪರ್ವತ.

Wednesday, September 28, 2011

ಪ್ರೀಯ ಭಗತ್ ಗೆ ಜನುಮ ದಿನದ ಶುಭಾಶಯಗಳು.

ನಾವೇನೋ ಸಾದಿಸಿ ಬಿಡುತ್ತೇವೆ,ನಮ್ಮಿ ನಡೆ ಅದೆಷ್ಟೋ ಜನರಿಗೆ ಸ್ಪೂರ್ತಿಯಾಗುತ್ತದೆ,ಇದರಿಂದ ನಾವು ಅಂದುಕೊಂಡಿದ್ದು ಪಡೆಯುವಲ್ಲಿ ನೆರವಾಗುತ್ತದೆ, ನಾವು ಇತಿಹಾಸ ಪುಠ ಸೇರುತ್ತೇವೆ,ಇದೆ ಅಲ್ಲವೇ ಭಗತ್........? ನಿನ್ನ ಸಾವನ್ನು ಎದುರು ನೋಡುತಿದ್ದಾವಾಗ ನಿನ್ನ ಮನಸಲ್ಲಿ ಇದ್ದದ್ದು.ನೀನು ನೇಣು ಕಂಭ ಏರುವ ಮೊದಲು ಅಲ್ಲಿ ಸೇರಿದ್ದ ದೇಶವಾಸಿ ಗಳನ್ನೂ ಹಾಗು ನೆರದಿದ್ದ ಮಕ್ಕಳನ್ನು ಉದ್ದೇಶಿಸಿ ಹೇಳಿದಂತ.... "ನನ್ನ ಪ್ರಿಯ ದೇಶವಾಸಿಗಳೇ... ಈ ನಮ್ಮ ಬಲಿದಾನ ವ್ಯರ್ಥವಲ್ಲ.ಒಬ್ಬ ಭಗತ್ ನೇಣು ಕಂಭ ಏರಬಹುದು.ಆದರೆ ಈ ನನ್ನ ಭಾರತದ ಅಸಂಖ್ಯ ಯುವ ಭಗತ್ ಗಳು ಅಖಂಡ ಭಾರತದ ಸ್ವಾತಂತ್ರ್ಯಕನಸನ್ನು ನನಸಾಗಿಸುವ ಕಾಲ ದೂರವಿಲ್ಲ.ಒಬ್ಬಭಗತ್ ಬಲಿದಾನ ಈ ಮಕ್ಕಳಿಗೆ ಸ್ವಚಂದ ದೇಶವನ್ನು ಕಟ್ಟಿ ಕೊಡುತ್ತದೆ ಎಂದಾದ ಮೇಲೆ ನೇಣು ನನ್ನ ಪಾಲಿನ ಸೌಭಾಗ್ಯ",ನಿನ್ನ ಆಶಯಗಳು ಮೇಲಿನಂತೆಯೇ ಇದ್ದವು ಅನ್ನುವದನ್ನು ನಿನ್ನ ಈ ವಾಖ್ಯಗಳು ನಿರೂಪಿಸುತ್ತವೆ ಅಲ್ಲವೇ.ನೀನಂದು ಕೊಂಡಂತೆ ಭಾರತ ಸ್ವಾತಂತ್ರ್ಯವನ್ನೇನೋ ಪಡೆಯಿತು ಆದರೆ ನಿನಗೆ ಗೊತ್ತಿದೆಯೇ ಭಗತ್......?,ನಿನ್ನ ಅಂತವರ ಅದೆಷ್ಟೋ ಬಲಿದಾನಗಳು , ನಿನ್ನ ವಿಚಾರಗಳು ಉದ್ದೇಶ ಪೂರ್ವಕವಾಗಿಯೇ ಇತಿಹಾಸ ದಿಂದ ಮರೆಯಾಗಿತ್ತು,ಪಕ್ಷ ರಾಜಕಾರಣ ಇದಕ್ಕೆ ಕಾರಣವಾಗಿತ್ತು,ಅದು ಇಂದಿಗೂ ಮುಂದುವರಿದಿದೆ ಭಗತ್.......,ನೀನೊಬ್ಬನೇ ಅಲ್ಲ ನಿನ್ನ ಹಾಗೆ ಹಲವಷ್ಟು ಮಂದಿ ಮರೆಯಾಗಿದ್ದಾರೆ.ನಾವೇನಿದ್ದರೂ ನಮ್ಮ ಶಾಲಾ ಕಲಿಕೆ ಇಂದ ತಿಳಿದುಕೊಂಡಿದ್ದು ನಿನ್ನ ಬಗ್ಗೆಯ ಒಂದೆರಡು ಸಾಲುಗಳನ್ನಷ್ಟೇ.ಉಳಿದೆಲ್ಲವನ್ನೂ ನಾವಾಗಿ ಸಂಗ್ರಹಿಸಿ ಓದಿದ ವಿಚಾರಗಳಿ೦ದಲೆ  ನಿನ್ನ ಬಗ್ಗೆ ಹೆಚ್ಚಿನದನ್ನು ತಿಳಿದು ಕೊಂಡಿದ್ದು ಅಂದರೆ ನಂಬಲೇಬೇಕು ಭಗತ್...... ನೀನು ನಿನ್ನ ಬಾಲ್ಯದಲ್ಲಿ ಆಟಿಕೆ ಪಿಸ್ತೂಲನ್ನು ಮಣ್ಣಲ್ಲಿ ಹೂತು ಈ ಪಿಸ್ಥುಲ್ ಮರವಾಗಿ ಬಹಳಷ್ಟು ಪಿಸ್ತೂಲನ್ನು ಕೊಡುತ್ತದೆ, ಆ ಪಿಸ್ತುಲುಗಳಿಂದ ಬ್ರಿಟಿಷರನ್ನು ಓಡಿಸುತಿದ್ದೇನೆ ಅನ್ನುತಿದ್ದಿಯಂತೆ.....? , ಈಗ ಇದ ಕೇಳಿ ರೋಮಾಂಚನ!!!! ಆಗುತ್ತಿದೆ ನಮಗೆ.ಅಷ್ಟಕ್ಕೂ ನೀನು ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದ್ದೆ ೧೩ ನೆ ವಯಸ್ಸಿನಲ್ಲಿ ಅಲ್ಲವ? ನೀನು ಹಾಗಾದರೆ ಆವಾಗಲೇ ಪ್ರೌಡ ನಾಗಿದ್ದೆ ಅಂತಾಯ್ತು,ನೀನು ಕನಸಿದ ಸ್ವಚಂದ ಭಾರತದ ೧೩ ನೆ ವಯಸ್ಸಿನ ಎಳೆ ಕುಸುಗಳಿಗೆ ದೇಶದ ಬಗ್ಗೆ ಅರಿವು ಬದಿಗಿರಲಿ ತನ್ನ ಬಗ್ಗೆ ಅರಿವನ್ನು ಸಂಪಾದಿಸುವಲ್ಲಿ ಒದ್ದಾಡುತ್ತಿವೆ!!!!! ಅನ್ನುವದನ್ನು ತಿಳಿದು ಬೇಸರಿಸದಿರು.ನಮಗೀಗ ಅರಿವಾಗುತ್ತಿದೆ ಭಗತ್,ನಿನ್ನ ವಯಸ್ಸು , ನಿನ್ನ ಪರಿಸ್ಥಿತಿ ಮತ್ತು ನಿನ್ನ ಉತ್ಕಟ ದೇಶ ಪ್ರೇಮ ದಿಂದಾಗಿ ನೀನು ಕ್ರಾಂತಿಕಾರಿ ನಿಲುವಿಗೆ ಬಹಳ ಸುಲಭದಲ್ಲಿ ಜಾರಿದೆ ಎಂದು.ಆದರೆ ನನ್ನ ಕಲಿಕೆಯ ಇತಿಹಾಸ ನಿನ್ನ ತೀವ್ರಗಾಮಿ ಅಂತ ಕರೆದು ಸುಮ್ಮನಾಗಿತ್ತು!!!.ನಿನ್ನ ೨೪ ನೆ ವಯಸ್ಸಲ್ಲೇ ನೇಣು ಕಂಭ ದೇಶಕ್ಕಾಗಿ ಎದುರು ನೋಡಿದೆಯಲ್ಲ,ನಿನ್ನಂತವರ ಚಿಂತನೆಗಳು ನಮ್ಮ ೨೪ ವರ್ಷದ ನಂತರ ನಮಗೆ ದೊರೆಯಲು ಪ್ರಾರಂಭ ವಾಗಿದ್ದು,ಹೌದು ಭಗತ್... ನೀನಿದನ್ನ ನಂಬಲೇ ಬೇಕು,ನಿನ್ನ ಹಾಗು ಸಂಗಡಿಗರ ಬಲಿದಾನಗಳು ಸ್ವಾರ್ಥ ರಾಜಕಾರಣಕ್ಕೆ ಉಪಯೋಗವಾಗಿದೆ,ನಿನ್ನ ಕನಸಿನ ನಿಜ ಅರ್ಥದ ಸ್ವಾತಂತ್ರ್ಯ ನಮಗಿನ್ನು ದೊರೆತಿಲ್ಲ.ನಿನ್ನ ಕೀರ್ತಿಯನ್ನು ಕಂಡು ನಡುಗಿದ ಬ್ರಿಟಿಷರು ನಿನ್ನನ್ನು ನಿನ್ನ ಸಂಗಡಿಗರನ್ನು ಹುತಾತ್ಮರು ಎಂದು ಘೋಷಿಸಿದ್ದರು,ಆದರೆ ನಿನ್ನದೇ ಸ್ವಾತಂತ್ರ್ಯ ಭಾರತದಲ್ಲಿ ನಿನ್ನ ಜನ್ಮ ದಿನವನ್ನು ನೆನಪಿಸುವ ಒಂದು ಸಣ್ಣ ಕಾರ್ಯಕ್ರಮವು ಇಲ್ಲ.ಆದ್ರೆ ಒಂದಷ್ಟು ಬದಲಾವಣೆ ಸ್ವಾತಂತ್ರ್ಯ ಬಂದ ಆರು ದಶಕಗಳ ನಂತರ ನಡೆಯುತ್ತಿದೆ.ದೇಶದಲ್ಲಿನ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯುವಕರು ಜಾಗೃತಿ ಗೋಳ್ಳುತಿದ್ದಾರೆ,ಅಣ್ಣಾ ಹಜಾರೆ ಅಂತ ಗಾಂಧಿ ಮತ್ತು ನಿಮ್ಮೆಲ್ಲ ಹೋರಟಗಾರನ್ನು ಸಮಾನವಾಗಿ ಗೌರವಿಸುವಂತ ವ್ಯಕ್ತಿಗಳ ಮಾರ್ಗದರ್ಶನ ನಮಗೆ ಲಭಿಸುತ್ತಿದೆ, ಬ್ರಷ್ಟರೆಲ್ಲ ಜೈಲು ಪಾಲಾಗುತ್ತಿದ್ದಾರೆ.ನಿಜ ಅರ್ಥದ ಸ್ವಾತಂತ್ರ್ಯ ಪಡೆಯಲು ಚಿಂತನೆಗಳು ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡುತ್ತಿದೆ,ನಿನ್ನ ಅರ್ಥದ ಸ್ವಚಂದ ಸ್ವಾತಂತ್ರ್ಯದ ಸವಿಯು ದೇಶಕ್ಕೆ ದೊರಕುವ ಕಾಲ ಹತ್ತಿರವಾಗುತ್ತಿದೆ ವೆಂಬುದನ್ನು ಕೇಳಿ ಸದ್ಯಕ್ಕೆ ಖುಷಿ ಪಡು ಭಗತ್.......ಅದೇನೇ ಇರಲಿ ಈ ದಿನ ೧೦೪ ನೆ ವರುಷದ ಜನ್ಮ ದಿನವನ್ನು ಆಚರಿಸಿ ಕೊಳ್ಳುತ್ತಿದ್ದಿಯ.ನಿನಗೆ ಪ್ರೀತಿ ತುಂಬಿದ ಜನುಮ ದಿನದ ಶುಭಾಶಯಗಳು.ಇನ್ಕಿಲಾಬ್ ಜಿಂದಾಬಾದ್ ನಿನ್ನ ವಾಕ್ಯ ನಮ್ಮದಾಗಿಸಿದ್ದೇವೆ ಮುಂದೆಯೂ ಇರುತ್ತದೆ ಆ ಮೂಲಕ ನೀನು ನಮ್ಮೊಳಗೇ ಅಮರ.

ಇಂತೂ ನಿನ್ನ ಪ್ರೀಯ ದೇಶವಾಸಿಗಳ ಪರವಾಗಿ.

Friday, September 23, 2011

ಮುಂಜಾವಿನ ಚಾನೆಲ್ ಕಿರಿ ಕಿರಿ.


ತಿರುವಿದ ಚಾನೆಲ್ ಗಳೆಲ್ಲ  ತುಂಬಿತ್ತು ಜ್ಯೋತಿಷ್ಯ ಕಿರಿ ಕಿರಿ,
ಮುಂಜಾವಿನ ಮನದ ನೀನಾದ ಮರೆಸುವಂತೆ !!
ಸುತ್ತಲಿನ ಮನೆ ಎಲ್ಲರ ಟಿ ವಿ ಒದರುತಿತ್ತು ದಿನ ಭವಿಷ್ಯ ತರಾ ತರಿ,
ಮನದ ದುಗುಡವ ಮತ್ತೆ ಬಡಿದೆಬ್ಬಿಸುವಂತೆ!!
ದಿನ ವಿಶೇಷ,ವಾರ ಭವಿಷ್ಯ!
ಹುಟ್ಟಿದ ದಿನಾಂಕ,ನಕ್ಷತ್ರ,ಘಳಿಗೆ,!
ರಾಹು ಕೇತು ವಿಚಿತ್ರ ಗ್ರಹ ಸಂಗಮ,!
ಚಂದ್ರನೂ,ಸೂರ್ಯನೂ ಗ್ರಹವಾದ ಪರಿ,!
ಯೋಚಿಸ ಬಿದ್ದೆ ತಲೆ ಕೆಟ್ಟು ,ಒಂದು ಗುಟುಕು ಕಾಫಿ ಹೀರಿ.!!!!!!!!!!!

Tuesday, September 20, 2011

ಕಣ್ಣೀರ ಹನಿಯಲೂ ಶಾಖವಾದ ಕಂಬಾರರ ಸಾಹಿತ್ಯ-ಕಂಬಾರರ ಭಾಷೆ ಗರಡಿ ಮನೆಯ ಸ್ತಬ್ಧ ಚಿತ್ರದಂತೆ.

ಅಂಜಲಿ ರಾಮಣ್ಣ, ಬೆಂಗಳೂರು ಬರೆದ ಥಟ್ಸ್ ಕನ್ನಡದಲ್ಲಿ ಪ್ರಕಟವಾದ ಚಂದ್ರಶೇಕರ ಕಂಬಾರರ ಬಗ್ಗೆ ಬರೆದ ಲೇಖನ ಅವರಿಗೆ ಜ್ನ್ಯಾನ ಪೀಠ ಪ್ರಶಸ್ತಿ ದೊರಕಿದ ಈ ಶುಭ ಸಂದರ್ಬದಲ್ಲಿ ನಿಮಗಾಗಿ.(ಪತ್ರಿಕೆಯ ಹೆಸರನ್ನೇ ಬಳಸಿ ಪ್ರಕಟಿಸುವದರಲ್ಲಿ  ತಪ್ಪಿಲ್ಲ ಅಂದುಕೊಂಡಿರುವೆ,ತಪ್ಪಿದ್ದರೆ ಕ್ಸಮಿಸುತ್ತಿರಿ ಅನ್ನುವ ಭರವಸೆಯೊಂದಿಗೆ)



ಅದು ಕಂಬಾರರ ’ಜೈಸಿದ ನಾಯ್ಕ’ ನಾಟಕ. ಮೊದಲ ಬಾರಿಗೆ ರಂಗದ ಮೇಲೆ ತರಲಾಗ್ತಿತ್ತು. ಅದರಲ್ಲಿ ಬರೋದೇ ಎರಡು ಹೆಣ್ಣು ಪಾತ್ರ. ನಾನು ನಾಯಕಿ. ಗಂಗಾಧರಸ್ವಾಮಿಯವರ ನಿರ್ದೇಶನ. ಎರಡು ತಿಂಗಳುಗಳ ಕಾಲದ ಹಗಲಿರುಳಿನ ಅಭ್ಯಾಸ. ಆ ದಿನ ಪ್ರಥಮ ಪ್ರದರ್ಶನ ಮೈಸೂರಿನ ಕಲಾಮಂದಿರದಲ್ಲಿ. ಮೊದಲ ಸಾಲಿನ ಪ್ರೇಕ್ಷಕರಾಗಿ ಕುಳಿತ್ತಿದ್ದಾರೆ ಡಾ.ಚಂದ್ರಶೇಖರ ಕಂಬಾರ, ಕೀರ್ತಿನಾಥ ಕುರ್ತುಕೋಟಿ, ಡಾ.ಗಿರೀಶ್ ಕಾರ್ನಾರ್ಡ್ ಮತ್ತೆಲ್ಲಾ ಉತ್ತಮೋತ್ತಮರು. ಆಗ ಚೆಲುವಿನ ಅಹಂವುಳ್ಳ ಆತ್ಮ, ವಿಶ್ವಾಸದ ಉತ್ತುಂಗದಲ್ಲಿದ್ದ ವಯಸ್ಸದು ನೋಡಿ ಅದಕ್ಕೆ ಅವರ್ಯಾರೂ ನನ್ನ ಟಾರ್ಗೆಟ್ ವೀಕ್ಷಕರಲ್ಲ! ನಾಟಕದ ಕೊನೆ ಚಪ್ಪಾಳೆಗಳ ಸುರಿಮಳೆ. ಮೇಲೆದ್ದ ಕುರ್ತುಕೋಟಿಯವರು “ನೀನು ಧಾರವಾಡ್ದವಳೇನು?” ಅಂತ ಕೇಳಿದ್ರು ಅದಕ್ಕೆ ಕಂಬಾರರು “ಆಕೀ ಒಡೆಯರ್ರ ಮಗಳು ನೋಡ್ರೀ” ಅಂತ್ಹೇಳಿ ನಕ್ಕರು. ನನಗೆ ಹೆಮ್ಮೆಯೂ ಇಲ್ಲ ಹೆಚ್ಚುಗಾರಿಕೆಯೂ ಅಲ್ಲ. ಹರೆಯದ ಕೈಯಲ್ಲಿತ್ತಲ್ಲ ಬುದ್ಧಿ ಅಂದ್ಮೇಲೆ ಯಾವುದರ ಬೆಲೆತಾನೇ ತಿಳಿದೀತು?

ಬಣ್ಣ ಕಳಚಿತು. ಕಣ್ಣ್ತುಂಬಾ ನಿದ್ದೆಯೂ ಆಯ್ತು. ಮಾರನೆಯ ಸಂಜೆ ಖಾಲೀ ಖಾಲೀ. ನಾಟಕ ತಾಲೀಮು ಇಲ್ಲವಲ್ಲ?! ಆಗ ನನ್ನೊಳಗೆ ಆವಾಹನೆಯಾಗಿದ್ದು ಕಂಬಾರರ “ಅಕ್ಕಕ್ಕು ಹಾಡುಗಳೇ”. “ಬರಗಾಲ ಬಂತೆಂದು ಬರವೇನೋ ಹಾಡಿಗೆ, ಮನಸಿಗೆ ನಿನ್ನ ಕನಸಿಗೆ; ಹರಿಯುವ ಹಾಡನ್ನ ಕತ್ತಲ್ಲಿ ಅಮುಕದೆ ಬಿಡಬೇಕೋ ತಮ್ಮ ಬಯಲಿಗೆ....” ಓಹ್, ಇದನ್ನು ಹಾಡಾಗಿಸಿದ ದೇವರಲ್ಲವೇ ನೆನ್ನೆ ನನ್ನೆದುರು ಇದ್ದದ್ದು? ತಡಾವಾಗಾದ ಜ್ಞಾನೋದಯಕ್ಕೆ ಮರುಕವೇ ಶಿಕ್ಷೆ. ಆಗ ಮನೆಯಲ್ಲಿ ವೆರಾಂಡದಿಂದ ಅಡುಗೆ ಕೋಣೆಯವರೆಗೂ ಪುಸ್ತಕವೇ ಆಸ್ತಿ ಆಗಿದ್ದರೂ ಎಲ್ಲೂ ಕಂಬಾರರ ಒಂದು ವಾಕ್ಯವೂ ಸಿಗದ್ದು. ಅಮ್ಮನಿಗೆ ದುಂಬಾಲು ಬಿದ್ದೆ. ಲೈಬ್ರರಿಯಿಂದ ಅದೇನೆನೋ ಲೇಖನಗಳು ಮನೆಗೆ ಬಂದವು. ಲ್ಯಾಂಡ್ಸ್ಡೌನ್ ಕಟ್ಟಡದ ಮಳಿಗೆಗಳನ್ನೂ ಸುತ್ತಿದ್ದಾಯ್ತು, ಪ್ರಸಾರಾಂಗವನ್ನೂ ಇಣುಕಿದ್ದಾಯ್ತು. ಆದರೂ ಸಮಾಧಾನವಿಲ್ಲ. “ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋ ಹಾಂಗ ಹಾಡಬೇಕೋ ತಮ್ಮ ಹಾಡಬೇಕು; ಆಕಾಶದಂಗಳ ಬೆಳದಿಂಗಳೂ ಕೂಡಾ ಕಂಗಾಲಾಗುವ ಹಾಡು ಹಾಡಬೇಕೋ....” ಹೀಗೇ ನಿರಂತರವಾಗಿ ಹಾಡ್ಕೋತಾ ಹಾಡ್ಕೋತಾ ಕಂಬಾರರ ಪದಗಳೊಂದಿಗೆ ಪ್ರೀತಿಗೆ ಬಿದ್ದೆ. ಅವರ ಅಕ್ಷರದೆಡೆಗಿನ ನನ್ನ ಮೋಹ ಕಾಡುಕುದುರೆಯಂತೆ.ಅದ್ಯಾವ ಲೋಕದಲ್ಲಿ ನನ್ನ ಪಯಣ? : “ಮುಗಿಲಿನಿಂದ ಜಾರಿಬಿದ್ದ ಉಲ್ಕೀ ಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತ” ನನ್ನನ್ನು “ಏಳಕೊಳ್ಳ ತಿಳ್ಳೀ ಆಡಿ ಕಳ್ಳೆಮಳ್ಳೆ ಆಡಿಸಿ ಕೆಡವಿತ್ತ...” ಆಮೆಲೆ ಸಿಕ್ಕಿದ್ದು “ಮರೆತೇನಂದರ ಮರೆಯಲಿ ಹೆಂಗಾ ಮಾವೊತ್ಸೆ ತುಂಗಾ” ಅಂತಿದ್ದ ಕಂಬಾರರು. “ಸೊನ್ನಿಗೆ ಆಕಾರ ಬರೆದೇನಂದಿ, ಬಯಲಿಗೆ ಗೋಡೆ ಕಟ್ಟೇನಂದಿ......ಮರೆಯಲಿ ಹೆಂಗಾ ಮಾವೊತ್ಸೆ ತುಂಗಾ” ಸಾಲುಗಳು ನನ್ನೆಲ್ಲಾ ಅಂತಃಸತ್ತ್ವವನ್ನು ಪ್ರತಿಫಲಿಸುತ್ತಿತ್ತು ಆ ದಿನಗಳಲ್ಲಿ. ಮತ್ತೊಮ್ಮೆ ರಂಗದ ದಿನಗಳು. ಕಂಬಾರರ ಕರಿಮಾಯಿ ತಾಯೇ ಸಾಲುಗಳನ್ನು, ಬಿ.ಜಯಶ್ರೀ ಧ್ವನಿಪೆಟ್ಟಿಗೆಯ ಕಂಚು ಉಜ್ಜಿತೆಂದರೆ ಆಹಾ, ಅದ್ಯಾವ ಲೋಕದಲ್ಲಿ ನನ್ನ ಪಯಣ? “ಗುಂಡ ತೇಲಿಸಿದೆವ್ವ ಬೆಂಡ ಮುಳುಗಿಸಿದಿ; ಗಂಡಗಂಡರನೆಲ್ಲ ಹೆಂಡಿರ ಮಾಡಿ....ಸಾವಿರದ ಶರಣವ್ವ ಕರಿಮಾಯಿ ತಾಯೇ....” ಸಾಲುಗಳ ಮುತ್ತುದುರಿಸುತ್ತಾ ಭಾಷಣಗಳಲ್ಲಿ ಮೇಜುಗುದ್ದುತ್ತಿದ್ದ ದಿನಗಳವು. ಇವರ ಮತ್ತೊಂದು ಪದ್ಯ “ಗಿಣಿರಾಮ ಹೇಳಿತು” ಅದಕ್ಕೆ ಬಿ.ವಿ ಕಾರಂತರ ಸಂಗೀತ “ಗಿಣಿರಾಮ ಹೇಳಿದ ರೇಪಿನ ಕಥೆಯೊಂದ; ರಾಮಾ ಹರಿ ರಾಮಾ, ಮಾನಭಂಗಿತಳಾಗಿ ಕನಸೊಂದು ಬಿದ್ದಿದೆ; ರಾಮಾ ಹರಿ ರಾಮಾ” ಅಂತ ಕಾರಂತರು ಹಾಡ್ತಿದ್ದರೆ ಅದೆಲ್ಲಿರುತ್ತಿತ್ತೋ ನನ್ನ ಕಣ್ಣೀರು ಝುಳು ಝುಳು ಹರೀತಿತ್ತು.ಚುಂಚದ ಹಕ್ಕಿ ಗಕ್ಕನೆ ಹಾರಿ ಬಂತು : ಹೀಗೆ ಒಂದೊಂದು ಕಣ್ಣೀರಿನ ಹನಿಯಲ್ಲೂ ಕಂಬಾರರ ಸಾಹಿತ್ಯ, ಭಾಷೆ ಎಲ್ಲವೂ ನನ್ನೊಳಗೇ ಶಾಖವಾಗ್ತಾ ಹೋಯ್ತು. “ಸ್ವಂತಚಿತ್ರ ಬರೆಯೋದು ಕಷ್ಟವಲ್ಲ ಮಿತ್ರ”, "ಇಬ್ಬರ ತಕರಾರಿಗೆ ಹುಟ್ಟಿ ಹಲವರ ತಕರಾರಲ್ಲಿ ಬೆಳೆದವರು ನಾವು ತಕರಾರಿನವರು” ಎನ್ನುತ್ತಾ ಕಥೆಗೆ ಶುರುವಿಟ್ಟ ಕಂಬಾರರು, “ನನ್ನ ಮನದಾಗರೆ ಇದು ಏನ ಬೆಳೆದೈತಿ? ತುಂಬ ಮಲ್ಲೀಗಿ ಹೂಬಳ್ಳಿ; ಉದುರೀಸಿ ನಿನ್ನ ಪಾತಾಳ ತುಳುಕಲಿ” ಎಂದೆನ್ನುವ ಅರಗೊಡ್ಡಿಯ ಪ್ರೇಮಗೀತೆಯಾಗಿಸತೊಡಗಿದರು ನನ್ನನ್ನು. ಋಷ್ಯಶೃಂಗನ ನಾಟಕೀಯತೆಯಲ್ಲಿ “ಅಪ್ಪ ಸೂತ್ರಧಾರ ಕೇಳೋ ಕನಸ ಕಂಡಿನೆ, ಸುಖದ ನೋವ ಸದ್ದ ಮಾಡಿ ಹೆಂಗ ಹೇಳಲೆ” ಎಂದು ಉನ್ಮಾದಕ್ಕೆ ತಳ್ಳುತ್ತಾ, ಕಲೆಗಾರಣ್ಣನ ಲಾವಣಿಯಲ್ಲಿ “ಇಷ್ಟೆ ಕಣ್ಣಿನ ಇಷ್ಟಿಷ್ಟೆ ಚುಂಚದ ಹಕ್ಕಿ ಗಕ್ಕನೆ ಹಾರಿ ಬಂತು ಮೇಲಕ್ಕೆ ಕೆಳಕ್ಕೆ ರೆಂಬೆ ರೆಂಬೆಗೆ, ಕೊಂಬೆ ಕೊಂಬೆಗೆ ಸೋಂಕಿನ ಸೊಗಸ ಬೀರುತ, ಕಲೆಗಾರನ ಕಲ್ಪನೆಗೆ ಶರಣೆನ್ನಿರಿ” ಎಂದು ಕುಣಿಸುತ್ತಾ, “ವ್ಯರ್ಥಗಳ ಸಮರ್ಥಿಸಿಕೊಳ್ಳುತ್ತಾ, ಅಪಾರ್ಥದಲ್ಲಿ ಅರ್ಥಗಳ ಸೃಷ್ಟಿಸುತ್ತಾ, ಇಲ್ಲಾ ರಾಮಾಯಣದ ಮಹಿಮೆ ಜಪಿಸುತ್ತಾ” ಗೋದೂ ತಾಯಾಗಿಸಿ ನನ್ನೊಡನೆ ನನ್ನನ್ನು ಇಬ್ಬರಾಗಿಸಿ “ರೆಕ್ಕೆಯೊಳಗಿನ ಹಕ್ಕಿಯ ಥರ ನಮ್ಮ ನೆರಳುಗಳನ್ನೇ ಮೈಗೂ ಮನಸ್ಸಿಗೂ ಸುತ್ತಿಕೊಂಡು ಉರಿವ ಬೆಂಕಿಯ ಬಳಿ ಕೂತೆವು” ಎಂದೆಂದುಕೊಳ್ಳುವಂತೆ ಮಾಡಿಟ್ಟರು. ನಾನು ಒಳಗೇ ಹೇಳುತ್ತಾ ಹೋದೆ ಅವರದೇ ನುಡಿಯಾಗಿ “ಒಂದಾನೊಂದು ಕಾಲದಲ್ಲಿ ಏಸೊಂದ ಮುದವಿತ್ತಾ, ಮುದಕೊಂದು ಹದವಿತ್ತಾ, ಹದಕ ಹಂಗಾಮಿತ್ತಾ, ಅದಕೊಂದ ಶಿವನ ಲಗಾಮಿತ್ತಾ” “ನಾನೀಗ ನನ್ನ ಖಾಸಗಿಯನ್ನು ಕಾಣಬೇಕು. ಮಾತಾಡಬೇಕು ಅದರೊಂದಿಗೆ ನಿಜ ನೋಡಬೇಕು, ಶಬ್ದವೇ ಶಬ್ದವೆ ತೋರು ನಿಜವನ್ನ,ನನ್ನಳತೆಯ ಮನುಷ್ಯನಳತೆಯ ಸತ್ಯವನ್ನ.” “ಜೋಲಿ ತಪ್ಪಿದ ಪೋರಿ ಬಿದ್ದಾಳ ತೆಕ್ಕೀಗಿ, ಸಂದ ಉಳಿಯದ ಹಾಂಗ ಒಂದಾಗಿ ಮೈಮುರದಾ” ಅನ್ನೋ ಹಾಗೆ ನನ್ನನ್ನು ಜೀವನದೊಳಗೆ ಒಂದು ಮಾಡಿ “ಮಂದಾರ ಮರದಲ್ಲಿ ಪಾರ್ವತಿ ಹಣ್ಣು ತಿಂದದ್ದೇ ದೇವಲೋಕಕ್ಕೂ ಬಂತು ಹಸಿವಿನ ಬಾಧೆ” ಅದಕ್ಕೇ, “ಹಾವಲ್ಲ ಅದು ಹಗ್ಗ ಎನ್ನುವರು ಕೆಲಮಂದಿ ಹಗ್ಗದಲ್ಲೂ ಹರ್ಷ ಚಿಮ್ಮುವಾಕೆ ಈ ಮಾಯೆ” ಎನ್ನುವ ಅರಿವು ನನಗೆ ಮೂಡಿಸಿದ್ದು ಈ ಸೂರ್ಯ ಶಿಖರನ ಸಾಹಿತ್ಯ. “ಲೂಟಿ ಮಾಡಾಕ ಬಂದ ಮಾಟಗಾರೇನ ಸುಖದ ಶಿಖರದ ಮ್ಯಾಲ ಹತ್ತಿನಿಂತಾನ ಇಕ್ಕಟ್ಟೀನ ಬಿಕ್ಕಟ್ಟೆಲ್ಲಾ ಒಟ್ಟಿಗಿ ದೂರ ಮಾಡಿದ್ದ” “ಯಾರವ್ವ ಈ ಚೆಲುವ ತಂತಾನೆ ರಂಜಿಸುವ ಸೂರ್ಯನ ಥರ ಹೊಳೆಯುವ” ಅಂತ ಮನಸ್ಸಿನಲ್ಲೇ ನಾನು ಮುಲುಗುತ್ತಿರುವಾಗಲೇ ನಾಳಿನ ಸತ್ಯವನ್ನು ಇಂದೇ ಬಯಲಾಗಿಸಿಕೊಟ್ಟದ್ದು ಅವರ ಮಾತು ““ಅಜ್ಜ ಅಜ್ಜಿಗೆ ಬೇಜಾರು ನೆನಪೂ ಬೋರು, ಕುರುಡ ಮುದುಕ ಕೈಯಾಡಿಸಿ ಹುಡುಕುತ್ತಾನೆ ಎಲ್ಲಿದ್ದೀಯೆ ಮುದುಕಿ ಎಲ್ಲಿದ್ದೀಯೆ?”

“ಸಿಟಿಯ ಕಗ್ಗತ್ತಲೆಯಿಂದ ಪಾರಾಗಲು ಯತ್ನಿಸಿದವರ ಹಾಡು” “ಕೀಟ್ಸನ ಸಾವನ್ನು ನೆನೆದು-ಒಣಗುತ್ತಿತ್ತು ಗಿಡ ತೊಟಕು ನೀರು ಸಹ ಯಾರೂ ಹನಿಸಲಿಲ್ಲ ಸತ್ತಮೇಲೆ ಕಣ್ಣೀರ ಸುರಿಸಿದರು ವಿಧಿಯ ಆಟವೆಲ್ಲ” ಇಂದಿಗೂ ಬದಲಾಗದ “ದಿನಪತ್ರಿಕೆಯ ಸುದ್ಧಿ ಹಣೆಬರಹ “ಅಲ್ಲಿರುವ ನೆಲ, ನೀರು ಹಳದಿ, ಮುಗಿಲೂ ಹಳದಿ, ಜನ ನಕ್ಕರೂ ಹಳದಿ, ಏನು ಮಂದಿ! “ ಈ ನಡುವೆ ನಾವಿದ್ದೇವೆ-ಅದೇ ರಂಗಭೂಮಿ ಮತ್ತು ನಾನು, ಆಪಾದಿಸುತ್ತಾ, ಸಮರ್ಥಿಸಿಕೊಳ್ಳುತ್ತಾ ಪರಸ್ಪರ ನೋವಿನಲ್ಲಿ ಬೆರಳಾಡಿಸುತ್ತಾ....” ಹೀಗೆಲ್ಲಾ ಹೃದಯಕಾಂತಿಗೆ ಸೂರ್ಯನಾಗಿ ದಿಕ್ಕು ತೋರಿಸಿದ ನನ್ನ ಪ್ರೀತಿಯ ಕಂಬಾರರಿಗೆ ಜ್ಞಾನಪೀಠ ಸನ್ಮಾನವಾಗಿದೆ. 8 ಕವನ ಸಂಕಲನ, 22 ನಾಟಕ, 3 ಬೃಹತ್ ಕಾದಂಬರಿಗಳು, ಎಷ್ಟೆಷ್ಟೋ ಕಥೆಗಳು, ಚಿತ್ರಗಳು ಹಾಡುಗಳು ಇನ್ನೂ ಏನೇನೋ ಇವೆಯಂತೆ ಅವರ ಹೆಮ್ಮೆಯ ಮುಡಿಗೆ, ಆದರೆ ನನಗೆ ಮಾತ್ರ ಚಂದ್ರಶೇಖರ ಕಂಬಾರರ ಬರವಣಿಗೆ, ಭಾಷೆ, ಭಾವವೆಂದರೆ ಗರಡಿ ಮನೆಯ ಸ್ತಬ್ಧ ಚಿತ್ರದಂತೆ. ನನ್ನಂತರಂಗದಂತೆ. ಶ್ರೀರಾಮಚಂದ್ರನ ಧರ್ಮದಂತೆ, ಸೀತೆಯ ನಿಷ್ಠೆಯಂತೆ.

ಊರಿನ ಮುದ್ದು, ಮನೆಯವರ ಕಣ್ಮಣಿ, ಮುಂದೊಂದು ದಿನ ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯಾದರೂ ಅಮ್ಮನಿಗೆ ಮಾತ್ರ ಮಗು “ನನ್ನ ಬಂಗಾರ” ತಾನೆ? ಹಾಗೇ, ಬೇಂದ್ರೆ ಅಜ್ಜನ ನಂತರ ಭಾಷೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟವರು ಕಂಬಾರರು ಅಂತ ಪಂಡಿತರು ಹೇಳುತ್ತಿದ್ದರೂ ನನಗೆ ಮಾತ್ರ ತೀರ್ಥರೂಪು “ನನ್ನ ಕಂಬಾರರು” ಅಷ್ಟೆ. ಅದಕ್ಕೆ ಒಂದಷ್ಟು ದಿನಗಳ ಹಿಂದೆ ಪಾಂಡಿತ್ಯ ಪ್ರಖರರೊಬ್ಬರೊಂದಿಗೆ ಸರಿಸುಮಾರು ಯುದ್ಧವನ್ನೇ ಮಾಡಿದ್ದೆ. ಅವರ ಪ್ರಕಾರ ಇಂಗ್ಲಿಷಿಗೆ ಅಸಾಧ್ಯವೆಂಬುದೇ ಇಲ್ಲ! ನಾನು ಕೇಳಿದ್ದು ಸಣ್ಣ ಪ್ರಶ್ನೆಯಷ್ಟೆ, ಕಂಬಾರರ “ಗೌತಮ ಕಂಡ ಪ್ರಥಮ ದರ್ಶನ” ಪದ್ಯದ ಈ ಸಾಲುಗಳನ್ನು ಇಂಗ್ಲಿಷಿಗೆ ತನ್ನಿ ಅಂತ “ಗದಬಡಿಸಿ ಗದಬಡಿಸಿದವನೆ ಹುಡುಕಾಡಿ, ಹುಡುಕಾಡಿದವನೆ ಕೊನೆಗೆ ಹಾಸಿಗೆಗೆ ಬಂದು ನೋಡುತ್ತೇನೆ: ನನ್ನ ಪಾಲಿನ ಹುಡುಗಿ ಇದಕೆ ಹಾಸುಗೆಯಾಗಿ, ಅರೆಗಣ್ಣ ತುದಿಯ ಸೂರು ಜತಿಯಗುಂಟ ಸ್ವರ್ಗದುಯ್ಯಾಲೆ ಕಟ್ಟಿದಹಲ್ಯೆ.” “ತಪ್ಪಿದ್ದರೆ ಕ್ಷಮಿಸಿ ನಾನು ಅಧಮಳು” ಅಂದರೂ ಉತ್ತಮರ ಸಿಟ್ಟು ಇಂದಿಗೂ ಇಳಿದಿಲ್ಲ!ಕನ್ನಡವೆಂದರೆ ಕಂಬಾರರು ಅಷ್ಟೆ : ಅಂದಹಾಗೆ, ಆ ದಿನ ಬಾಗಿಲು ತೆರೆದಾಗ ಅಯ್ಯರ್ ಮಾಮ ಜೋರಾಗಿ ನಗುತ್ತಾ ಒಳಬಂದರು. ಮಾಮಿಗೆ ಸಂಕೋಚ. ಸೆರಗು ಸರಿ ಮಾಡ್ಕೊಳ್ಳುತ್ತಾ ಗಂಡ ಆಗಲೇ ಪಟ್ಟಾಂಗ ಹಾಕಿಕೊಂಡಿದ್ದ ಸೋಫಾ ಮೆಲೆ ಕುಳಿತರು. ಸೌಜನ್ಯಕ್ಕೆ “ತೊಟ್ಟು ಹಾಲು ಕೊಡಲೇ” ಎಂದೇ. ಅಷ್ಟೇ ಸಾಕು ಮಾಮಾ ತಮಿಳು ಮಿಶ್ರಿತ ಇಂಗ್ಲಿಷ್ನಲ್ಲಿ ಹೇಳ್ತಾ ಹೋದರು “ಕೆಳಜಾತಿಯ ತಮಿಳರಿಗೆ ನಾಲಿಗೆ ಹೊರಳದೆ ತಮಿಳನ್ನು ಅಪಭ್ರಂಶಗೊಳಿಸಿದರು. ಅದೇ ಕನ್ನಡವಾಯ್ತು. ಪಾಲು ಹಾಲಾಯ್ತು. ಇಲ್ಲದಿದ್ದರೆ ಕನ್ನಡಕ್ಕೆ ಸ್ವಂತ ಅಸ್ತಿತ್ತ್ವವೆ ಇಲ್ಲ. ಅದು ಭಾಷೆಯೇ ಅಲ್ಲ. ನಿನಗೆ ಗೊತ್ತಾ? ಸರಸ್ವತಿ ತಮಿಳರ ದೇವತೆ” ಹೀಗೆ ಇನ್ನೂ ಏನೇನೋ. ನನಗೆ ಅದೆಲ್ಲಾ ತಿಳಿಯೋಲ್ಲ. ನನಗೆ ಕನ್ನಡವೆಂದರೆ ಶಾಲೆಯಲ್ಲಿ ಮುದ್ದಣನ ಶ್ರೀಮತಿ ಸ್ವಯಂವರ ಹೇಳಿಕೊಟ್ಟ ಪದ್ಮಾ ಮಿಸ್ ಮತ್ತು ಚಂದ್ರಶೇಖರ ಕಂಬಾರರು ಅಷ್ಟೆ! ಮಾಮಿಗೆ ಮುಜುಗರವಾಗ್ತಿತ್ತು. ಹಿರಿಯರನ್ನು ಹೀಗೆಳೆಯುವುದು ನಮ್ಮ ಸಂಸ್ಕೃತಿಯಲ್ಲ್ವಲ್ಲಾ? ಅದಕ್ಕೆ ವಾತಾವರಣ ತಿಳಿ ಮಾಡಲು, ಒಳಗೆ ಹೋಗಿ ಮಾಡಿದ್ದ ಹೆಸರುಬೇಳೆ ಕೋಸಂಬರಿಯನ್ನು ಬಟ್ಟಲುಗಳಿಗೆ ಹಾಕಿ ತಂದುಕೊಟ್ಟೆ. ತತ್ಕ್ಷಣ ಮಾಮಾ “ಅರೆ, ಇದು ತಮಿಳರ ತಿಂಡಿ. ನೀನು ಹೇಗೆ ಕಲಿತೆ?” ಅಂದು ಬಿಡೋದೇ? ಸಿಟ್ಟು ಕ್ರೂರ ಸೂರ್ಯನಂತೆ ನೆತ್ತಿ ಸುಡುತ್ತಿದ್ದರೂ, ನಾನು ಪ್ರತಿಭಟಿಸಲಿಲ್ಲ. ಇತ್ತೀಚೆಗೆ ಕಂಬಾರರೇ ನನ್ನ ಮೌನಕ್ಕೂ ಕನ್ನಡದಲ್ಲಿ ಮಾತನಾಡುವ ಸೊಗಡನ್ನು ಪರಿಚಯಿಸಿಕೊಟ್ಟಿದ್ದಾರೆ. ಹಾಗಾಗಿ ನನ್ನ ನಾಳೆಗಳು ಅವರೇ ಹೇಳಿದಂತೆ ಸಂಸ್ಕೃತಿಯಿಂದ ವಿಸ್ಮೃತಿಗೊಳ್ಳಲಾರದೆಂಬ ಭರವಸೆಯಿದೆ, ಹೇಗೆಂದಿರಾ? ಅವರ ಶಿವಾಪುರದ ಪ್ರತಿಮೆಗಳಲ್ಲಿ ಒಂದಾದ ಪದ್ಯ ಸಾಲುಗಳು ಕೇಳುತ್ತ್ವೆ “ಬೇಕಾದಷ್ಟು ಕನಸುಗಳಿವೆಯಲ್ಲಾ ಬದುಕಕ್ಕೆ ಇನ್ನೇನು ಬೇಕು ಗೆಳತಿ...?” ಹೀಗೆ ಕಂಡ ಕನಸೊಂದು ಇಂದು ನನಸಾಗಿದೆ. ಕಂಬಾರರ ಪಾದಕ್ಕೆರಗಿ ಪೀಠದ ಜ್ಞಾನ ಸ್ಫಟಿಕದಂತೆ ಸ್ಫುರಿಸಿದೆ. ಜ್ಞಾನಪೀಠದ ಔನತ್ಯವನ್ನು ಹೆಚ್ಚಿಸಿರುವ ಹಿರಿಯರ ಚರಣಸ್ಪರ್ಶಿಸುತ್ತಿರುವ ಈ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಕಂಬಾರರು ಹಾದುಹೋದದ್ದು ಹೀಗೆ!(ಕೃಪೆ:-ಧಟ್ಸ್ ಕನ್ನಡ)

ಪತ್ರಿಕೋದ್ಯಮದ ಒಳಗಿನ ಬ್ರಷ್ಟಾಚಾರಗಳು ಉಳಿದೆಲ್ಲವುಗಳಂತೆ ಅಷ್ಟು ಸುಲಭದಲ್ಲಿ ಸಮಾಜದ ಮುಂದೆ ಬರಲಾರದು.

ಪತ್ರಿಕೋದ್ಯಮ ಇದು ಪ್ರಜಾಪಭುತ್ವ  ವ್ಯವಸ್ಥೆಯಲ್ಲಿ ಅತ್ಯಂತ ಪ್ರಭಲ, ಸಂವಿಧಾನದ  ನಾಲ್ಕನೆ ಅಂಗವೇನೋ ಎಂಬಂತೆ ಬೆಳೆದು ನಿಂತಿದೆ.ದೇಶದ ಅದೆಷ್ಟೋ ಬ್ರಷ್ಟಾಚಾರವನ್ನು  ಬೆಳೆಕಿಗೆ ತಂದು ಪರಿಣಾಮಕಾರಿ ಜನಾಭಿಪ್ರಾಯ ರೂಪಿಸಿ ಆ ಮೂಲಕ ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಹಾಗು ಜನಜಾಗೃತಿ ರೂಪಿಸುವಲ್ಲಿ ಸಹಕಾರಿಯಾಗಿದೆ.ಬ್ರಷ್ಟಾಚಾರದ  ಬೆಳೆಕಿಗೆ ಹಾಗು  ಅದ  ಸಮಾಜಕ್ಕೆ ತಿಳಿಸುವಲ್ಲಿ ಇಂದಿನ ಪತ್ರಿಕೆ ಹಾಗು ದೃಶ್ಯ ಮಾಧ್ಯಮಗಳು ಸಹಕಾರಿಯಾಗಿದೆ ಅಂದರೆ ಉಳಿದ ವಿಹಿತಗಳು ಇದರಿಂದ ಆಗಿಲ್ಲವೆಂಬುದು ಅಲ್ಲ.ನಾನು ಇಲ್ಲಿ  ಹೇಳ ಬಯಸಿರುವದು ಬ್ರಷ್ಟಚಾರದ ವಿರುದ್ದ ಮಾಧ್ಯಮಗಳ ಸಮರದ ನೈತಿಕತೆಯನ್ನು ಪ್ರಶ್ನಿಸುವ ನಿಟ್ಟಿನದ್ದು  ಆದುದರಿಂದ ಮಾಧ್ಯಮದ ಇತರ ವಿಹಿತಗಳ ಬಗ್ಗೆ ಪ್ರಸ್ತಾಪಿಸುತ್ತಿಲ್ಲ.ಅತ್ಯಂತ ಸಾಮಾನ್ಯನಲ್ಲಿ ಸಾಮಾನ್ಯನಾದ ಈ ದೇಶದ ಪ್ರಜೆ ನಾನು,ಪತ್ರಿಕೋದ್ಯಮದ ಬಗ್ಗೆ ಗೌರವ  ಹೊಂದಿರುವವನು,ದೇಶದ ಒಟ್ಟು ಪತ್ರಿಕೋದ್ಯಮದ ಬಗ್ಗೆ ಮಾತನಾಡುವ ಅಷ್ಟು ತಿಳುವಳಿಕೆಗಳು ನನ್ನಲ್ಲಿ ಇಲ್ಲ.ಆದರೆ ನನ್ನ ಕನ್ನಡ ಪತ್ರಿಕೋದ್ಯಮದ ಬಗ್ಗೆ ಒಂದಷ್ಟು ಸಂಶಯ ಅಸಹನೀಯತೆಗಳು ನನ್ನಲ್ಲಿ ಇತ್ತೀಚಿಗೆ  ಬೆಳೆಯುತ್ತಿದೆ.ಆ ಮೂಲಕ ಉತ್ತರಗಳೇ ದೊರಕದ ಹಲವು ಪ್ರಶ್ನೆಗಳು ಬ್ರಷ್ಟಾಚರವನ್ನು  ಬೆಳೆಕಿಗೆ ತರುತ್ತೇವೆ ಎಂದು ಸೋಗಲಾಡಿತನವನ್ನು ಹೊತ್ತುಕೊಂಡ ಪತ್ರಿಕೋದ್ಯಮದ ಮೇಲೆ ಮೂಡಿದೆ.

ಇತ್ತೀಚಿಗೆ ಕರ್ನಾಟಕದಲ್ಲಿ ಬೆಳಕಿಗೆ ಬಂದ ಭೂ ಹಗರಣ ,ಗಣಿ ಹಗರಣಗಳಲ್ಲೀ ಪತ್ರಿಕೋದ್ಯಮದ ಒಂದಷ್ಟು ಮಂದಿಯ ಪಾಲ್ಗೊಳ್ಳುವಿಕೆ ಇದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.ಆ ಮೂಲಕ ಪತ್ರಿಕೋದ್ಯಮದ ಮಂದಿಯೇ ಪತ್ರಿಕೋದ್ಯಮ ಅಂತಹ ಪವಿತ್ರ ಕ್ಷೇತ್ರಕ್ಕೆ ಮಸಿಬಳಿದಿರುವದು ದುರಂತ.ಆದರೆ ನನ್ನ ವಿಚಾರಗಳು ಈ ನಿಟ್ಟಿನದ್ದಲ್ಲ.ರಾಜಕೀಯ ,ಜನಸಾಮಾನ್ಯ ,ಯಾಕೆ ನಿನ್ನೆ ರಾಜೀನಾಮೆಯನ್ನು ಕೊಟ್ಟಂತ ಲೋಕಾಯುಕ್ತರನ್ನು ಬಿಡದ ಬ್ರಷ್ಟಚಾರಿಕೆಯ ಮಾಹಿತಿ ಒದಗಿಸಿದ ಪತ್ರಿಕೋಧ್ಯಮ ತನ್ನದೇ  ಮಂದಿಯ ತನ್ನದೇ ಕ್ಷೇತ್ರದ ಬ್ರಷ್ಟಚಾರಿ  ಹುಳುಗಳನ್ನು ಸಮಾಜದ ಎದುರು ನಿಲ್ಲಿಸುವದನ್ನು ಮರೆತಿದೆ ಯಾಕೆ?ಈ ಬಗ್ಗೆ ಬೆರಳೆಣಿಕೆ ವರದಿಗಳು ಬಂದಿರಬಹುದು ಆದರೆ ಪ್ರಜಾವಾಣಿ  ಇಬ್ಬರನ್ನು ನೇರ ನೇರ ಹೆಸರು ಕೊಟ್ಟು ಕರೆದು ವರದಿ ಕೊಟ್ಟಿದ್ದು ಬಿಟ್ಟರೆ ಉಳಿದ ವರದಿಗಳೆಲ್ಲ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ!!!!!!!!!!! ಬೇರೆ ಕ್ಷೇತ್ರದ ಬ್ರಷ್ಟರನ್ನು ಹೆಸರು ಹಾಗು ಒಂದಿಷ್ಟು ಅಡ್ಡ ಹೆಸರಿತ್ತು ತೆಜೋವದೆ ನಡೆಸಿ ಅವರ ಪ್ರಕರಣವನ್ನು ಬೆಳಕಿಗೆ ತರುವ ಮಾಧ್ಯಮಗಳು ತನ್ನದೇ ಮಂದಿಯನ್ನು ಹೆಸರು ಕೊಟ್ಟು ಪ್ರಸ್ತಾಪಿಸುವದಕ್ಕು ಹಿಂಜರಿಯುತ್ತಿರುವದು ಯಾಕೆ?ಅಷ್ಟಕ್ಕೂ ಪ್ರಜಾವಾಣಿ ವರದಿಯಲ್ಲಿ ಇದ್ದ ಇಬ್ಬರೇ ಪತ್ರಿಕೋದ್ಯಮದಲ್ಲಿ ಬ್ರಷ್ಟರು ಉಳಿದವರೆಲ್ಲ ಸಾಚಾಗಳು ಅಂದರೆ ನಂಬುವದು ಸಾಧ್ಯವೇ?ರೆಡ್ಡಿಗಳ ಮನೆ ಮುಂದು ಸಿ ಬಿ ಐ ಮಂದಿ ವಾಹನಗಳಿಂದ ಇಳಿಯುತಿದ್ದಂತೆ ವರದಿ ಶುರು ಹಚ್ಚಿಕೊಂಡ ಪತ್ರಿಕೋಧ್ಯಮ ಅದೇ ಭಯದಿಂದ ದಿನ ದೂಡುತ್ತ ಇರುವ ಕೆಲವು ಪತ್ರಿಕೋದ್ಯಮ ಮಂದಿಯನ್ನು ಸಮಾಜದ ಎದುರು ತೆರೆದಿಡಲು ಮನಸ್ಸು ಮಾಡದೇ ಇರುವದು  ಯಾಕೆ?ಯಾಕೆ ಭೂ ಹಗರಣ ಮತ್ತು ಗಣಿ ಹಗರಣದ ನಂತರವೇ ತನ್ನಲ್ಲಿರುವ ಪತ್ರಿಕೋದ್ಯಮದ ಬ್ರಷ್ಟ ಕ್ರಿಮಿಗಳು ಪತ್ರಿಕೊಧ್ಯಮದ ಮಂದಿಗೆ ಅರಿವಿಗೆ ಬಂದಿದ್ದು, ಈ ಮೊದಲು ಹಾಗಾದರೆ ಇವರೆಲ್ಲ ಸಾಚಗಳೇ?ಇಲ್ಲ ಪತ್ರಿಕೋಧ್ಯಮ ಮಂದಿಗೆ ಇವೆಲ್ಲ ಗೊತ್ತೇ ಇದೆ ಬೇಕಂತಲೇ ಮುಚ್ಚಿಟ್ಟಿರುವದು ಸ್ಪಷ್ಟ.ನಿನ್ನೆಯಷ್ಟೇ ಮಾಧ್ಯಮ ಬ್ರಷ್ಟಚಾರವನ್ನು ಸಮಾಜ ಏಕೆ ಅರಗಿಸಿಕೊಳ್ಳುತ್ತಿದೆ? ಎಂಬ ಬ್ಲಾಗ್ ಬರಹ ಓದಿದೆ.ಬರೆದವರು ಓರ್ವ ಪತ್ರಕರ್ತ.ತನ್ನ ಹೆಸರನ್ನು ಪ್ರಕಟಿಸುವದಕ್ಕು ಸ್ವಾತಂತ್ರ್ಯ ಕಳೆದುಕೊಂಡ ಪತ್ರಕರ್ತನ  ಬಗ್ಗೆ  ಹಾಗು ಇಂತಹ ವಾತಾವರಣ ನಿರ್ಮಿತಗೊಳಿಸಿದ  ಪತ್ರಿಕೋದ್ಯಮದ ಬಗ್ಗೆ ಖೇದವಿದೆ.ಆದರೆ ಈ ಪತ್ರಿಕೋದ್ಯಮವು ಪ್ರಜಾಪ್ರಭುತ್ವವನ್ನು ಕಾಯುವ ಬೆಳೆಸುವ ನೈತಿಕತೆ ಹೊಂದಿರುವವರು ಅನ್ನುವದು ಈ ನಿಟ್ಟಿನಲ್ಲಿ ಯೋಚಿಸಿದವಾಗ ಕುಚೋದ್ಯ ದಂತೆ ಕಂಡು ಬರುವದು ಪ್ರಜಾಪ್ರಭುತ್ವದ ವಿಪರ್ಯಾಸ!!!!!!!!!!.ಯಾವುದೇ ಸಮಾಜ ಬ್ರಷ್ಟಚಾರವನ್ನು ಅರಗಿಸಿಕೊಳ್ಳುವದಿಲ್ಲ.ಆದರೆ ಮಾಧ್ಯಮ ಬ್ರಷ್ಟಾಚಾರವನ್ನು  ಮಾಧ್ಯಮಗಳೆ ಸರಿಯಾಗಿ ಸಮಾಜಕ್ಕೆ ತಲುಪಿಸುವಲ್ಲಿ, ಹಾಗು ಆ ಮೂಲಕ  ಜನಾಭಿಪ್ರಾಯ ರೂಪಿಸುವಲ್ಲಿ ವಿಫಲ ಗೊಂಡಿದೆ ಅಂದರೆ ತಪ್ಪಿಲ್ಲ.
 ವಾಕ್ ಸ್ವಾತಂತ್ರ್ಯ ಪತ್ರಕರ್ತರಿಗೆ ದೊರೆಯಲಿ.
ಮೊದಲೇ ಹೇಳಿದಂತೆ ಪತ್ರಿಕೋದ್ಯಮದಲ್ಲಿ ಗೌರವ ಇರಿಸಿದವ ನಾನು.ಪತ್ರಿಕಾರಂಗದಲ್ಲಿ ಬೇಕಾಬಿಟ್ಟಿ ಬರೆಯುವದು ಸಾಧ್ಯವಿಲ್ಲವೆಂದು ಅಂದುಕೊಂಡವ.ಸೂಕ್ತ ಆಧಾರಗಳು ಇದ್ದಾಗಲೂ ಸಮಾಜದ ಮುಂದೆ ತಮ್ಮ ಮಿತ್ರರ ಬ್ರಷ್ಟ ವಿವರಗಳನ್ನು ಸಮಾಜದ ಮುಂದೆ ಇರಿಸಲು ದ್ವಂದ್ವ ನೀತಿ ಅನುಸರಿತ್ತಿರುವದನ್ನು ಬಿಡಬೇಕು.ತನ್ನ ಕಣ್ಣಿಗೆ ಬೆಣ್ಣೆ,ಇತರರ ಕಣ್ಣಿಗೆ ಸುಣ್ಣ ವೆಂಬ ನೀತಿ ಎಷ್ಟು ಸರಿ?.ಪತ್ರಿಕಾರಂಗ ಪತ್ರಿಕೊಧ್ಯಮದ ನೀತಿಯನ್ನು ಮರೆತಿರುವದು ಸಲ್ಲ.ಇಲ್ಲಿ ಪತ್ರಕರ್ತರು ಈ ಬಗ್ಗೆ ವರದಿ ಬಿತ್ತರಿಸಲು ರೆಡಿ ಇಲ್ಲವೆಂಬುದು ಅಲ್ಲ.ಎಷ್ಟೋ ಸಜ್ಜನ ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಇದ್ದಾರೆ.ಆದರೆ ಪತ್ರಿಕಾ ಆಡಳಿತ ಮಂದಿಗಳು ಅವರ ದ್ವಂದ ನೀತಿಗಳಿಂದ ಹೇಳಬೇಕಾದ್ದನ್ನು ಜನರ ಮುಂದೆ ಹೇಳಲಾಗದೆ ಒದ್ದಾಡುತಿದ್ದಾರೆ!!!!!.ನಿನ್ನ ವಿಷಯ ನಾನು ತರಲ್ಲ ನನ್ನ ವಿಷಯ ನೀನು ತರಬೇಡ ಎಂಬ ಪ್ರೊಟೆಕ್ಟ್ ನೀತಿಗಳನ್ನು ತಮ್ಮದಾಗಿಸಿಕೊಂಡಿರುವ ಪತ್ರಿಕೆಗಳೇ ಹೆಚ್ಚು.ನೇರ ನೇರ ವಿಷಯ ಪ್ರಸ್ತಾಪಿಸಿ ರಿಸ್ಕ್ ತೆಗೆದುಕೊಳ್ಳಲು ಯಾರು ಬಯಸುತ್ತಿಲ್ಲ,ಯಾಕೆಂದರೆ ಪತ್ರಿಕೋದ್ಯಮದ ಖಡ್ಗ ವೆಂಬ ಅಸ್ತ್ರ ಇಬ್ಬರಲ್ಲೂ ಇದೆ.ಆದುದರಿಂದ ಪತ್ರಿಕೋದ್ಯಮದ ಒಳಗಿನ ಬ್ರಷ್ಟಾಚಾರಗಳು ಉಳಿದೆಲ್ಲವುಗಳಂತೆ ಅಷ್ಟು ಸುಲಭದಲ್ಲಿ ಸಮಾಜದ ಮುಂದೆ ಬರಲಾರದು.ಗುಮ್ಮನಂತೆ ಭಾಸವಗುತ್ತಿರುವ ಕನ್ನಡ ಪತ್ರಿಕೋದ್ಯಮ ಈ ಎಲ್ಲ ಮಜಲುಗಳನ್ನು ದಾಟಿ ತನ್ನ ಮನೆ ಕಸ ಗುಡಿಸಿ ಸ್ವಚ ಗೊಳಿಸಲಿ, ಯಾವತ್ತಾದರೂ ಸತ್ಯ ಹೊರಗೆ ಬಂದೆ ಬರುತ್ತದೆ,ಪತ್ರಿಕೋದ್ಯಮದಲ್ಲೂ ಪತ್ರಿಕಾ ಸ್ವಾತಂತ್ರ್ಯ ಮೆರೆಯುತ್ತದೆ ಎಂಬ ಆಶಯಗಳನ್ನು ಇಟ್ಟುಕೊಂಡು ಮುಂದುವರಿಯುವದು ಅಷ್ಟೇ ಸದ್ಯಕ್ಕೆ ನಮ್ಮ ಮುಂದಿರುವ ದಾರಿ.

ನಿಮ್ಮವ..................
ರಾಘವೇಂದ್ರ ತೆಕ್ಕಾರ್ 

Friday, September 16, 2011

" ಹುಟ್ಟುಗುಣ ಸುಟ್ಟರು ಹೋಗುವದಿಲ್ಲ"!!!!!ಯಾಕೆಂದರೆ ಅದು ಮನುಜಗುಣ.


ಸಮಾಜದಲ್ಲಿ ತಮಗೇನು ಅರಿವಿಲ್ಲದಿದ್ದರೂ ತಮ್ಮ ಪೊಳ್ಳು ವಾದಗಳಲ್ಲಿ ಇನ್ನೊಬ್ಬರನ್ನು ಹಳಿಯುತ್ತಾ ವಿಕೃತ ಸಂತೋಷ ಪಡುವ ಒಂದಷ್ಟು ಮಂದಿ ಸಿಗುತ್ತಾರೆ.ಆ ಸಾಲಲ್ಲೇ ಗುರುತಿಸಿಕೊಳ್ಳುವ ನನ್ನ ಒಬ್ಬ ಗೆಳೆಯನು ಇದ್ದಾನೆ.ಯಾರನ್ನಾದರು ದುಷಿಸದಿದ್ದರೆ ಆ ದಿನ ಸುಖ ನಿದ್ರೆ ಪಡೆಯಲಾರ.ಇತ್ತೀಚಿಗೆ ಅದೇ ನನ್ನ ಗೆಳೆಯ ಸಮಾಜದ ಒಂದು ವರ್ಗದ ಬಗ್ಗೆ ಮಾತನಾಡುತ್ತ ಅವರನ್ನು ಅವಹೇಳಿಸುತ್ತ ಅವರ "ಹುಟ್ಟು ಗುಣ ಸುಟ್ಟರು ಹೋಗುವದಿಲ್ಲ"ಎಂಬ ಗಾದೆ ಮಾತು ಮೂಲಕ ತನ್ನನ್ನು ತಾನೇ ಸಮರ್ತಿಸಿಕೊಳ್ಳುತಿದ್ದ.ಸರಿ ಗೆಳೆಯ ಹಂಗಾದರೆ ನಿನ್ನ ಪ್ರಕಾರ ಹುಟ್ಟು ಗುಣ ಅಂದರೇನು?ಅಂತ ಒಂದು ಪ್ರಶ್ನೆ ಅವನ ಮುಂದೆ ಇಟ್ಟೆ.ಅದೇ ಅವ್ರ ಜಾತಿ, ಮತ ಧರ್ಮ ಅದರಿಂದ ಕಲಿತ ಪಾಠ ಮುಂತಾದುವು ಎಂದು ತನ್ನ ವಿತಂಡ ವಾದವನ್ನು ನನ್ನೆದುರು ಮಂಡಿಸಿ ವಾಗ್ವಾದಕ್ಕೆ ಇಳಿದ.ಅಲ್ಲ ಗೆಳೆಯ ಜಾತಿ ಮತ ಧರ್ಮ ಇವುಗಳು ಹುಟ್ಟು ಗುಣ ಅನ್ನುವದಕ್ಕೆ ಎತ್ತಣ ಸಂಭದ ಒದಗಿಸುವದು?ಇವೆಲ್ಲದರ ಮುಂಚಿನ ಕ್ರಿಯೆಯೇ ಹುಟ್ಟು ಅಲ್ಲವೇ?ಎಂಬ ನನ್ನ ಅಧಿಕಪ್ರಸಂಗಿತನವನ್ನು ಅವನೊಂದಿಗೆ ಮುಂದುವರಿಸಿದೆ.ಈಗ ಆ ನನ್ನ ಗೆಳೆಯ ತನ್ನ ಅಲ್ಪ ಜ್ಯಾನದ ವೈಜ್ಞಾನಿಕ ತಿಳುವಳಿಕೆ ಇಂದ ವಿವರಿಸುವ ಮೂರ್ಖ ಪ್ರಯತ್ನಕ್ಕೆ ಕೈ ಹಾಕಿದ!!!!!!ಅವನ ವಾದ ಹೀಗಿತ್ತು, ಗಂಡು-ಹೆಣ್ಣು ಕ್ರಿಯೆ ಇಂದ ನಮ್ಮ ಹುಟ್ಟು ಅಂದರೆ ಅವರಿಬ್ಬರ ಜೀನ್ಸ್ ಮಿಳಿತವು ಹುಟ್ಟಿಗೆ ಕಾರಣವಾಗುತ್ತದೆ ಎಂದ!!!!!!ಅವರಿಬ್ಬರ ಗುಣಗಳು ಹುಟ್ಟುವ ಮಗುವಿನಲ್ಲಿ ಬರುತ್ತದೆ ಎಂಬ ವಾದಕ್ಕೆ ಇಳಿದಿದ್ದನ್ನು ಮನಗಂಡು ಅರ್ದದಲ್ಲೇ ಬಾಯಿ ಹಾಕಿ ಹಾಗಾದರೆ ಜೀನ್ಸ್ ಅನ್ನುವದು ಧರ್ಮ, ಜಾತಿ,ಮತಗಳಿಂದ ರುಪುಗೊಂಡಿದ್ದೆ!!!!!!!?ಅರ್ಥವಾಗಲಿಲ್ಲ ಅಂದೆ.ಅವನಿಗೂ ತನ್ನ ವಾದದ ಅರ್ಥ ತಿಳಿಯದಾಗಿ ತಲೆ ಸವರುತ್ತ ಕೋಪದಿಂದ ಹೋಗಿ ಹೋಗಿ ನಿನ್ನಂತ ಮೂಲಭೂತವಾದಿ ಜೊತೆ ಮಾತಾಡ್ತಿನಲ್ಲ!.......ಸುಮ್ಮನೆ ವ್ಯರ್ಥ ಕಾಲಹರಣ ಸ್ಟುಪಿಡ್......!!!!!!!ಅಂತ ನನ್ನನ್ನು ಬೈದು ತನ್ನ ಕೆಲಸದಲ್ಲಿ ಮಗ್ನನಾದ.ಮುಖದಲ್ಲಿ ಅಸಹನೆ ಮಡುಗಟ್ಟಿತ್ತು.ನನ್ನನ್ನು ಮೂಲಭೂತವಾದಿ ಅಂತ ಸಂಬೋದಿಸಿ,ನನ್ನಲ್ಲೇ ವಿಚಾರಮಂಥನ ಕೈಗೊಳ್ಳಲು ವಿಷಯ ಒದಗಿಸಿದ ಗೆಳೆಯನ ಮೊಗನೋಡಿ ಸಣ್ಣ ಕಿರು ನಗೆ ಬೀರಿ ಸುಮ್ಮನಾಗಿದ್ದೆ.ಆಗ ಕಾಡುತಿದ್ದ ವಿಚಾರ ಇಷ್ಟೇ ಹುಟ್ಟುಗುಣ ಅಂದರೇನು?

            ನನ್ನ ಪ್ರಕಾರ ಹುಟ್ಟು ಗುಣ ಅನ್ನುವದು ಮನುಜ ಗುಣ.ಅದೆಂದರೆ ಅಳುವದು,ನಗುವದು, ಕೋಪಿಸುವದು,ಸಂಕೋಚಿಸುವದು,ಸಂತೋಷ ಪಡುವದು,ನೆಮ್ಮದಿ ಬಯಸುವದು ಇತ್ಯಾದಿ.ಇತರ ಪ್ರಾಣಿಗಳಿಗಿಂತ ಸ್ವಲ್ಪ ಬುದ್ದಿವಂತಿಕೆಯನ್ನು ಹೊಂದಿರುವ ಮನುಷ್ಯ ಪ್ರಾಣಿಯ ಸಾಮಾನ್ಯ ಚಟುವಟಿಕೆಗಳು ಅಂತಲೂ ಕರೆಯಬಹುದು.ಮುಂದೆ ಬೆಳೆಯುತ್ತ ವಿಚಾರ ಸಂಮಿಳಿತಗಳಿಂದ ತನ್ನ ಬುದ್ದಿವಂತಿಕೆಯನ್ನು ಬೆಳೆಸುತ್ತಾ ಮುಂದುವರಿಯುತ್ತಾನೆ.ಒಳ್ಳೆಯ ವಿಚಾರಗಳನ್ನು ತನ್ನದಾಗಿಸಿಕೊಂಡರೆ ಸಮಾಜದ ಉತ್ತಮ ಮನುಜನಾಗುತ್ತಾನೆ.ನಮ್ಮಲ್ಲಿ ನಿಜ ಅರ್ಥದ ಮನುಷ್ಯ ಗುಣಗಳು ಬೆಳೆಯಬೇಕಾದರೆ ವಿಚಾರದ ಆಯ್ಕೆಯಲ್ಲಿ ಸ್ವಲ್ಪ ಚ್ಯೂಸಿ ಆಗಿರಬೇಕು, ಒಳ್ಳೆಯ ಪರಿಸರ ನಮ್ಮದಿರಬೇಕು ಅಷ್ಟೇ.ಮನುಜ ಗುಣಗಳ ಸಂವೇದನೆಯನ್ನು ಅರಿತುಕೊಂಡು ನಡೆಯುವವ ನೆಮ್ಮದಿ ಪಡೆದು ಮಾದರಿಯಾಗಿ ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ,ಅದೇ ಮನುಜ ಗುಣಗಳ ಸಂವೇದನೆಯನ್ನು ಅರಿಯಲಾಗದೆ ಅದ ಮರೆತು ನಡೆವವ ಜೀವನದ ದಿಕ್ಕನ್ನು ಕಳೆದುಕೊಂಡು ಒಂದಷ್ಟು ಜನರ ದ್ವೇಷ,ತಾತ್ಸಾರ ತನ್ನದಾಗಿಸಿಕೊಂಡು ಪ್ರೀತಿ ವಿಶ್ವಾಸ ಕಳೆದು ಕೊಂಡು ತನ್ನ ನೆಮ್ಮದಿಯ ಬಾಳಿಗೂ ಭಂಗ ತಂದುಕೊಂಡು ಸಮಾಜ ಕಂಟಕನಾಗಿ ಸಮಾಜದಲ್ಲೇ ಇರುತ್ತಾನೆ ಆದರೆ ನಿಜ ಅರ್ಥದ ಮನುಷ್ಯನಾಗಿ ಅಲ್ಲ.

                               ನಾನು ಇಲ್ಲಿ ವಿವರಿಸುತ್ತಿರುವ ಮಾನವ ಗುಣ ನಮ್ಮೆಲ್ಲರಲ್ಲಿಯು ಇರುವಂತದ್ದೆ ಅಲ್ಲದೆ ಅವುಗಳು ಆಗಾಗ್ಯೆ ಬೆಳಕಿಗೂ ಬರುತ್ತಿರುತ್ತದೆ .ಒಂದು ಕ್ರೌರ್ಯ ಅಥವಾ ಒಂದು ಅಫಘಾತ ನಮ್ಮ ಕಣ್ಣೆದುರು ನಡೆಯುತ್ತಿರುತ್ತದೆ ಅಂದುಕೊಳ್ಳಿ,ನಮೆಗೆ ಗೊತ್ತಿಲ್ಲದಂತೆ ನಮ್ಮ ಹೃದಯಾಂತರಾಳ ದಿಂದ ಹೊರಡುವ ನೋವಿನ ಉದ್ಗಾರ ಅಥವಾ ಅದ ನೋಡಲಾಗದೆ ಮುಖಕ್ಕೆ ಅಡ್ಡವಾಗಿ ಕೈ ಹಿಡಿಯುವದು ಇಂತಹ ಒಂದು ಕ್ರಿಯೆ ನಡೆದುಬಿಡುತ್ತದೆ.ಯಾರೋ ಒಬ್ಬರು ಕಷ್ಟಕಾಲದಲ್ಲಿ ನೆರವಾದಾವಾಗ ಕಣ್ಣಂಚಿನಲ್ಲಿ ಒಂದು ಕೃತಜ್ಞತಾ ಪೂರ್ವಕ ಒಂದು ಹನಿ ಕಣ್ಣೀರ ಪನಿ ಮೂಡುತ್ತದೆ ಅಲ್ಲವೇ?ಹಸಿವಾದವನಿಗೆ ಒಂದು ಹೊತ್ತಿನ ಊಟ ಕೊಟ್ಟಾಗ ಮನಸ್ಸಿಗಾಗುವ ಸಂತೋಷ?ಹೀಗೆ ಬೇಕಾದಷ್ಟು ಮಾನವ ಗುಣ ನಮ್ಮಲ್ಲಿ ಗೋಚರವಾಗದೆ ಹುದುಗಿರುತ್ತದೆ.ಮನಸ್ಸಿನಾಳದಲ್ಲಿರುವ ಮಾನವೀಯ ಸಂವೇದನೆಯನ್ನು ಬಡಿದೆಬ್ಬಿಸಬೇಕು, ಅದ ಅರ್ಥಿಸಿಕೊಂಡು ನಡೆದರೆ,ನೆಮ್ಮದಿ,ಸಂತೋಷದ,ಸೌಹಾರ್ದಯುತ ಜೀವನ ನಮ್ಮದಾಗುತ್ತದೆ.ಆ ಮೂಲಕ ಸಮಾಜವು ಸುಧಾರಿಸುತ್ತದೆ.ಮಾನವಗುಣಗಳಿಗೆ ಇರುವ ಧರ್ಮ ಪ್ರಕೃತಿ,ಅದರ ಜಾತಿ ಹಸಿವು ಅಷ್ಟೇ.ಹೌದು"ಹುಟ್ಟುಗುಣ ಸುಟ್ಟರು ಹೋಗುವದಿಲ್ಲ"!!!!!ಯಾಕೆಂದರೆ ಅದು ಮನುಜಗುಣ.

Wednesday, September 14, 2011

ಅಶ್ರಫ್ ಮಂಜ್ರಾಬಾದ್ ಸಕಲೇಶಪುರ ನಿಮಗೆ ನನ್ನ ಗೌರವ ಪೂರ್ವಕ ವಂದನೆಗಳು.

ಅಶ್ರಫ್ ಮಂಜ್ರಾಬಾದ್ ಸಕಲೇಶಪುರ.
ಸಾಮಜಿಕ ಸ್ವಾಸ್ತ್ಯದ ಕಳಕಳಿ ಇಂದ ಫೇಸ್ ಬುಕ್ ಅಂತ ಅಂತರ್ಜಾಲದ ಕೆಲವೊಂದು ಗ್ರೂಪ್ ಗಳು ಹೇಗೆ ಸಮಾಜಕ್ಕೆ ಮಾರಕವಾಗುತ್ತಿದೆ ಅನ್ನುವದನ್ನು ಎತ್ತಿ ಹಿಡಿಯಲು ಇಲ್ಲೇ  ಬರೆದ "ಫೇಸ್ ಬುಕ್ ಗೆ ಹಲವಾರು ಮುಖಗಳಿವೆ ಎಂಬ ಎಚ್ಚರ ಇದ ಬಳಸುವ ಮುಂದು ನಮಗಿರಲಿ" ಲೇಖನವನ್ನು ವಿಶ್ವ ಕನ್ನಡ ನ್ಯೂಸ್ ನ ಪ್ರಧಾನ ಸಂಪಾದಕರು ಅಶ್ರಫ್ ಮಂಜ್ರಾಬಾದ್ ಸಕಲೇಶಪುರ ಅವರು ಸ್ವ ಇಚ್ಛೆ ಇಂದ  ನನ್ನ ಸಂಪರ್ಕಿಸಿ ನಾನು ನಿಮ್ಮ ಲೇಖನವನ್ನು ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಪ್ರಕಟಿಸುತ್ತೇನೆ ಎಂದಾಗ ಖುಷಿ ಇಂದಲೇ ಒಪ್ಪಿಗೆ ಕೊಟ್ಟಿದ್ದೆ. ಅವರು ಪ್ರಕಟಿಸಿಯೂ ಇದ್ದಾರೆ.ಆ ಮೂಲಕ ಇದನ್ನು ಇನ್ನಷ್ಟು ಜನಕ್ಕೆ ತಲಿಪಿಸುವದರಲ್ಲಿ ಸಾಥ್ ಕೊಟ್ಟಿದ್ದಾರೆ,ಅವರ ಸಾಮಾಜಿಕ ಕಳಕಳಿಗೆ ಅಭಾರಿಯಾಗಿದ್ದೇನೆ. ಸಮಾಜ ಸ್ವಾಸ್ಥ್ಯತೆಗೆ ಧಕ್ಕೆ ತರುವಂತಹ ಎಲ್ಲ ವಿಚಾರಗಳ ವಿರುದ್ದ ಇಂತಹ ಹೆಗಲಿಗೆ ಹೆಗಲು ಕೊಟ್ಟು ನಡೆಯುವ ಕೆಲಸಗಳು ನಡೆಯಲಿ.ಅಶ್ರಫ್ ಮಂಜ್ರಾಬಾದ್ ಸಕಲೇಶಪುರ ನಿಮಗೆ ನನ್ನ ಗೌರವ ಪೂರ್ವಕ ವಂದನೆಗಳು.

ನಿಮ್ಮವ..................
ರಾಘವೇಂದ್ರ ತೆಕ್ಕಾರ್.

Tuesday, September 13, 2011

ಫೇಸ್ ಬುಕ್ ಗೆ ಹಲವಾರು ಮುಖಗಳಿವೆ ಎಂಬ ಎಚ್ಚರ ಇದ ಬಳಸುವ ಮುಂದು ನಮಗಿರಲಿ.

ಮಾರ್ಕ್ ಎಲಿಟ್ಟೋ ಜುಕೆರ್ಬೇರ್ಗ್
Face Book. ಇದು ಎಲ್ಲರಿಗೆ ಗೊತ್ತಿರುವದೆ.ಮಾರ್ಕ್ ಎಲಿಟ್ಟೋ ಜುಕೆರ್ಬೇರ್ಗ್ ಅನ್ನುವ ಕಂಪ್ಯೂಟರ್ ಪ್ರೋಗ್ರಮ್ಮೆರ್ ಒಬ್ಬ ತನ್ನ ಸಹಪಾಟಿಗಳೊಂದಿಗೆ ಮೊದಲಿಗೆ ಕಂಡುಕೊಂಡಿದ್ದು.ಹವಾರ್ಡ್ ವಿಶ್ವವಿದ್ಯಾನಿಲಯದವರಿಗಷ್ಟೇ ಸೀಮಿತವಾಗಿದ್ದ ಈ ಅಂತರ್ಜಾಲ ತಾಣ ನಂತರ ಸಾರ್ವತ್ರಿಕವಾಗಿ ಈಗ ಹೆಮ್ಮರವಾಗಿ ಬೆಳೆದು ನಿಂತಿದ್ದನ್ನು ನೋಡುತಿದ್ದೇವೆ.ಯುವಜನತೆ ಇದರತ್ತ ಮುಗಿಬೀಳುವದನ್ನ ನೋಡುತಿದ್ದೇವೆ.ನನಗೆ ಫೇಸ್ ಬುಕ್ ಹಲವಷ್ಟು ಗೆಳೆಯರು ಇನ್ನೇನು ಅವರೆಲ್ಲ ಸಿಗುವದೆ ಇಲ್ಲವೆಂಬವರನ್ನು ಮತ್ತೆ ಕಾಣಸಿಗುವಂತೆ ಮಾಡಿದೆ. ಹೊಸ ಗೆಳೆಯರು ದೊರಕುವಂತೆ ಮಾಡಿದೆ. ಹಲವಷ್ಟು ಮಾಹಿತಿಗಳು ದೊರಕಿದೆ.ಸಾಮಾಜಿಕ ತಾಣವಾಗಿರುವ ಇಲ್ಲಿ ನನ್ನ ಸಾಮಜಿಕ ಕಳಕಳಿಯ  ದೃಷ್ಟಿಕೋನಗಳನ್ನು ಪ್ರಚುರ ಪಡಿಸಲು ವೇದಿಕೆ ಕೊಟ್ಟಿದೆ.ದೊರದಲ್ಲಿರುವ ಗೆಳೆಯರ ಜೊತೆ ಹರಟೆ ಹೊಡೆಯಲು ಅನುಕೂಲ ಮಾಡಿ ಕೊಟ್ಟಿದೆ. ಮನದ ದುಗುಡ ಕಳೆಯಲು ಸಹಕಾರಿಯಾಗಿದೆ.ವ್ಯರ್ಥ ಕಾಲಹರಣ ಅಂತ ಒಮ್ಮೊಮ್ಮೆ ಅನ್ದುಕೊಂಡಿದ್ದಿದೆ.ಅದು ಕೆಲವೊಮ್ಮೆ ಹೌದು ಕೂಡ.ಆದರೆ ಬಳಸುವಂತೆ ಬಳಸಿದರೆ ಫೇಸ್ ಬುಕ್ ಕೂಡ ವ್ಯರ್ತವಾಗಲಾರದು ಅನ್ನುವದು ನನ್ನ ಅಭಿಪ್ರಾಯ.ಫೇಸ್ ಬುಕ್ ಬಗ್ಗೆ ಹೀಗೆ ಅಭಿಪ್ರಾಯ ಹೊಂದಿದ್ದ ನನಗೆ ಕೆಲ ದಿನಗಳ ಹಿಂದೆ ನನಗೊಗ್ಗದ ಹಾಗು ಫೇಸ್ ಬುಕ್ ನ ಮತ್ತೊಂದು ಮುಖ ಪರಿಚಯ ಆಯಿತು.ಅದು ಕಲಿಸಿದ ಅನುಬವವೆ ಈ ಲೇಖನಕ್ಕೆ ಮೂಲ ಕಾರಣ.


ಹೀಗೆ ಒಂದು ದಿನ ಪರಿಚಯದವರು ಸಿಗುತ್ತಾರೋ ವೆಂಬ ಕುತೂಹಲದೊಂದಿಗೆ ಫೇಸ್ ಬುಕ್ ನ ಗೆಳೆಯರ ಅಂಕಣಗಳಲ್ಲಿ ಜಾಲಾಡುತಿದ್ದೆ. ಒಂದು ಆಕರ್ಷಕ ಹೆಸರು ವೆಲ್ ವಿಷರ್ ಅನ್ನುವ ಹೆಸರನ್ನು ನೋಡಿದೆ ಇವನ್ಯಾರು ಎಂಬ ಕುತೂಹಲದಿಂದ ಫ್ರೆಂಡ್ ರಿಕ್ವೆಸ್ಟ್ ಕಳಿಸಿದೆ ಮರುಕ್ಷಣದಲ್ಲೇ ಅಪ್ಪ್ರೋವ್ ಕೂಡ ಆಯಿತು.ಅವ ಯಾರು ಅನ್ನುವದನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದ ನಾನು ಅವನ ಪ್ರೊಫೈಲ್ ನಲ್ಲಿ ಯಾವುದೇ ಮಾಹಿತಿ ಸಿಗದೇ ನಿರಾಶನಾಗಿ ಲಾಗ್ ಔಟ್ ಮಾಡಿದ್ದೆ.ಆದರೆ ಮರುದಿನ ಲಾಗ್ ಇನ್ ಅದಾವಾಗ ಇದೆ ವೆಲ್ ವಿಷರ್ ನನ್ನನ್ನು ಒಂದು ಗ್ರೌಪ್ಗೆ ಸೇರಿಸಿದ್ದ, ಹೆಸರು ಸ್ನೇಹ ಸಂವಾದ.ಹೆಸರು ನೋಡಿ ಕುಶಿಯೋ ಕುಶಿ ಫೇಸ್ ಬುಕ್ ಗೆ ಹೇಳಿ ಮಾಡಿಸಿದ ಹೆಸರು. ಸದಸ್ಯರು ೨೫೦೦ ಕ್ಕೂ ಮೇಲ್ಪಟ್ಟವರಿದ್ದರು.ಸ್ನೇಹ ಜೀವಿಯಾದ ನನಗೆ ಇನ್ನಸ್ಟು ಸ್ನೇಹಿತರು ದೊರಕುವರೆಂಬ ಬರವಸೆಯೊಂದಿಗೆ ಅಲ್ಲಿ ಚರ್ಚೆಗೆ ತಂದಿದ್ದ ವಿಚಾರಗಳನ್ನು ಓದುತ್ತ ಸಾಗಿದೆ.ಗ್ರೂಪ್ ಸೇರುವಾಗ ಇದ್ದ ಕುಶಿ ಅಲ್ಲಿನ ಕೆಲವೇ ಕೆಲವು ಪೋಸ್ಟ್ಗಳನ್ನು  ಓದಿದ ತಕ್ಷಣವೇ ಜರ್ರಂತ ಇಳಿದಿತ್ತು. ನನ್ನ ಧರ್ಮವೇ ಶ್ರೇಷ್ಟ ಉಳಿದೆಲ್ಲವೂ ಕಾಲ ಕಸದಂತೆ ಎಂದು  ಸಂಬೋದಿಸಿದ ಕಾಮ್ಮೆಂಟ್ಗಳು ,ಪೋಸ್ಟ್ಗಳು .ಗಾಂಧಿ ಮತ್ತು ಗೋಡ್ಸೆ ಯನ್ನು ಒಂದೇ ತಕ್ಕಡಿಯಲ್ಲಿ ತೂಗುವ ವಿಕೃತ ಮನಸ್ಥಿತಿಗಳು.ಟೆರರಿಸ್ಟ್ ಸಮರ್ತಿಸಿಕೊಳ್ಳುವ ಕಾಮ್ಮೆನ್ತುಗಳು.ಒಂದಷ್ಟು ಒಳ್ಳೆ ವಿಚಾರಗಳು ಪೇಜ್ ಕೊನೆಯಲ್ಲಿ ಯಾವುದೇ ಚರ್ಚೆಗಳಿಲ್ಲದೆ ಅನಾತವಾಗಿ ಬಿದ್ದಿರುವದು.ಅವಾಚ್ಯ ಶಬ್ದಗಳ ಬೈದಾಟ.ರಾಜಕೀಯ ವಿಷಯಗಳಲ್ಲೂ ಜಾತಿಯತೆಯ ಅಬ್ಬರ.ವ್ಯಕ್ತಿಗತ ಹೀಯಳಿಕೆಗಳು,ಒಂದ ಎರಡ ಅರ್ಧ ಘಂಟೆಯಲ್ಲೇ ಹುಚ್ಚನಾಗಿದ್ದೆ.ಗ್ರೂಪ್ ಬಿಟ್ಟು ಹೊರಬರಬೇಕು ಎಂಬ ಮನಸ್ಸು ಬಂದರು ಕೂಡ,(ಬಹುಶಃ ಅವತ್ತು ಹಾಗೆ ಮಾಡಿದ್ದರೆ ಒಳ್ಳೆಯದಿತ್ತು ಅಂತ ಈಗ ಅನ್ನಿಸುತ್ತಿದೆ.)ಇಂಥ ಚಟುವಟಿಕೆ ಒಲ್ಲದ ನಾನು ಅಲ್ಲಿನ ಪರಿಸ್ಥಿತಿ ಸುದಾರಿಸುವಲ್ಲಿ ಸಣ್ಣ ಪ್ರಯತ್ನವನ್ನು ತೋರದೆ ಹೊರಬರುವದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರ ಕಾಣದಾಗಿ ಅಲ್ಲಿಯೇ ಒಂದಷ್ಟು ದಿನವಿದ್ದು ಗ್ರೂಪ್ ಸುದಾರಿಸುವ ಹುಂಬ ನಿರ್ದಾರಕ್ಕೆ ಅಣಿಯಾದೆ. ಇದನ್ನೇ ಹೇಳುವದೇನೋ ತಾನೇ ಗುಣಿ ತೋಡಿದ ಹಳ್ಳಕ್ಕೆ ಬೀಳುವದು ಎಂದು.ಒಟ್ಟಿನಲ್ಲಿ ನನಗೆ ಗೊತ್ತಿಲ್ಲದಂತೆ ಸ್ನೇಹ ಸಂವಾದವೆಂಬ ಗುಣಿಗೆ ಬಿದ್ದೆ.
ಸರಿ ಮರುದಿವಸದಿಂದ ಈ ನಿಟ್ಟಿನಲ್ಲಿ ಪ್ರಯತ್ನಗಳು ಅಲ್ಲೇ ಸಿಕ್ಕಿದ ಸಹೃದಯ ಮಿತ್ರರೋಡಗುಡಿ ನಡಯಿತು. ಇದು ಸ್ನೇಹಕ್ಕಿರುವ (ನಾವು ತಿಳಿದುಕೊಂಡಂತೆ)ತಾಣ ಇಲ್ಲಿ ಧರ್ಮ ಜಾತಿಗೆ ಅದ ಮೂಲಕ ಕಚ್ಚಾಟಕ್ಕೆ ಆಸ್ಪದ ಬೇಡ ಯಾರು ಈ ಬಗ್ಗೆ ಇಲ್ಲಿ ಮಾತನಾಡುವದು ಬೇಡ ಹೀಗೆ ನಿರ್ದರಿಸಿ ಆ ಬಗ್ಗೆ ಪೋಸ್ಟ್ ಮಾಡಿದೆವು.ಹಾಗು ಅದನ್ನು ಆ ವಿಚಾರಗಳ ಚರ್ಚೆಯ ಎಲ್ಲ ಪೋಸ್ಟ್ನಲ್ಲಿ ಲಗತ್ತಿಸಿದೆವು. ಆದರೆ ಮರುದಿನವೇ ಆ ಪೋಸ್ಟ್ ಅಲ್ಲಿಂದ ಮಾಯವಾಗಿತ್ತು.ಮೊದಲ ಬಾರಿಗೆ ಅಡ್ಮಿನ್ ಬಗ್ಗೆ ಗುಮಾನಿ ಹುಟ್ಟಿತ್ತು.ಸ್ವಲ್ಪ ದಿನ ನೋಡೋಣವೆಂದು ಅಡ್ಮಿನ್ ಗೆ  ಕೆಲವೊಂದು ಕಾಮೆಂಟ್ ಗಳಲ್ಲೇ ಎಚ್ಚರಿಸುತ್ತ ಮನುಜರಾಗಿ ಅನ್ನುವ ನೀತಿ ಪಾಠ ವನ್ನು ಧರ್ಮ ಕರ್ಮ ಅಂತ ಮುಳುಗಿಹೊದವರಿಗೆ ಎಚ್ಚರಿಸುತ್ತಾ ಸಾಗಿದೆವು.ಅಲ್ಲಿನ ಕೆಲ ಸಹೃದಯ ನನ್ನ ಮಿತ್ರರು ಅವರದೇ ರೀತಿಯಲ್ಲಿ ಎಚ್ಚರಿಸ ಪ್ರಾರಂಬಿಸಿದರು.ದಿನ ಕಳೆದಂತೆ ಫೇಕ್ ಪ್ರೊಫೈಲ್ ಅದ ಮೂಲಕ ಕೀಳು ಮಟ್ಟದ ಸಂಭಾಷಣೆಯಲ್ಲಿ ತೊಡಗುವ ಮಂದಿ ,ಯಾರು ಧರ್ಮಚರ್ಚೆಗೆ ಅಡ್ಡಿಯಗುತ್ತರೋ ಅವರಿಗೆ ಏನೋ ಪಟ್ಟ ಕಟ್ಟಿ ಹೀಯಾಳಿಸುವದು ಇಂತದ್ದನ್ನು ತಡೆಯಲು ನನ್ನೊಬ್ಬ ಮಿತ್ರ ಅಂತಹ ಮಂದಿಯನ್ನು ನಿಗ್ರಹಿಸಲು ಸ್ನೇಹಮಯ ವಾತಾವರಣ ರೂಪಿಸಲು ಅಂತ ಮಂದಿಯನ್ನು ಎತ್ತಿ ತೋರಿಸಲು ಬ್ಲಾಕ್ ಲಿಸ್ಟ್ ಡಾಕುಮೆಂಟ್ ಮಾಡಿದರು .ಅದಕ್ಕೆ ನಮ್ಮದೊಂದಿಷ್ಟು ಮಂದಿಯ ಸಹಕಾರವು ಇತ್ತು.ಇದರ ಮೂಲಕ ಒಂದಷ್ಟು ಹಿಡಿತ ಸಿಕ್ಕರೂ ಕೂಡ ಫೇಕ್ ಪ್ರೊಫೈಲ್ ತಡೆಯುವ ನಿಟ್ಟಿನಲ್ಲಿ ಯಶಸ್ವಿ ಆಗಲಿಲ್ಲ.ಈ ಮದ್ಯೆ ಗ್ರೌಪಿನ ಅಡ್ಮಿನ್ ಜೊತೆ ನೇರ ನೇರ ಚರ್ಚೆಗೆ ಇಳಿದ ನಾನು ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂಬುದನ್ನು ಅಡ್ಮಿನ್ಗೆ ತಿಳಿಹೇಳಲು ಹೊರಟೆ.ಅದಕ್ಕೆ ಇಲ್ಲಿ ಆಗುತ್ತಿರುವದೆಲ್ಲ ಸರಿ. ನಿಮಗೆ ಇಷ್ಟವಿದ್ದರೆ ಇರಬಹುದು ಇಲ್ಲಾಂದ್ರೆ ಜಾಗ ಖಾಲಿ ಮಾಡಿ, ನಾವು ಸತ್ಯವನ್ನು ಕಂಡುಕೊಳ್ಳುತಿದ್ದೇವೆ ಎಂಬ ಹಾಸ್ಯಾಸ್ಪದ ಉತ್ತರ ಸಿಕ್ಕಿತು.ಅಂದರೆ ಒಂದು ಸಾಮಾಜಿಕ ತಾಣದ ಒಂದು ಗುಂಪಿನ ಅಡ್ಮಿನ್ಗೆ ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಯಾವುದೇ ಇಚ್ಛೆ ಇಲ್ಲವೆಂಬುದು ಸ್ಪಷ್ಟ ಆಯಿತು.ಅದಕ್ಕಾಗಿ ಕೆಲವು ಕಠಿಣ ಪ್ರಶ್ನೆ ಅಡ್ಮಿನ್ ಮುಂದಿರಿಸಿದೆ ಅದಕ್ಕೆ ಉತ್ತರ ಕೊನೆಗೂ ಸಿಗಲೇ ಇಲ್ಲ.ಸ್ನೇಹ ಬಯಕೆ ಇಂದ ಗ್ರೂಪ್ ಒಳಬರುವ ಯುವಜನತೆ ದ್ವೇಷ ಬಾವನೆಯನ್ನು ತನ್ನದಾಗಿಸಿಕೊಂಡು ಮನುಷತ್ವವವೆ ಮರೆಯಾಗುತ್ತಿರುವದು ಸಮಾಜದ ಸ್ವಾಸ್ತ ಕೆಡಲು ಈ ಗ್ರೂಪ್ ದೊಡ್ಡ ಕೊಡುಗೆಯನ್ನೇ ನೀಡುತ್ತದೆ ವೆಂಬ ನಿರ್ಧಾರ ತಳೆಯಲು ನಮಗೆ ಪುರಾವೆಗಳನ್ನು ಒದಗಿಸುತ್ತಿತ್ತು.ಈ ಬಗ್ಗೆ ಸಹೃದಯ ಮಿತ್ರರೆಲ್ಲ ಸೇರಿ ಚರ್ಚಿಸಬೇಕು ಅಂತಿರುವಾಗಲೇ ಬ್ಲಾಕ್ ಲಿಸ್ಟ್ ಎಂಬ ಸಂಸ್ಕೃತಿ ಗ್ರೌಪಿನಲ್ಲಿ ಹುಟ್ಟುಹಾಕಿ ಗ್ರುಪಿನ ಸ್ವಾಸ್ಥತೆ ಅದ ಮೂಲಕ ಸಮಾಜದ ಸ್ವಾಸ್ಥತೆ ಕಾಪಾಡ ಹೊರಟ ಗೆಳೆಯನನ್ನು ಗ್ರೌಪಿನಿಂದ ಹೊರದಬ್ಬಲಾಯಿತು ಅಲ್ಲದೆ ಬೆದರಿಕೆ ಮೆಸೇಜ್ ಅನುಬವವನ್ನು ಪಡೆಯುವಂತೆ ಆಯಿತು.ಅಲ್ಲಿಗೆ ಓಹೋ!!! ಈ ಗ್ರೂಪ್ ಆಶಯ ಸ್ನೇಹವಲ್ಲ ಬೇರೇನೋ ಇದೆ ಅನ್ನುವದು ಮನದಟ್ಟುಗೊಳಿಸಿತು.

ಗ್ರೂಪ್ ಅಡ್ಮಿನ್ ವೆಲ್ ವಿಷರ್ ನ ಈ ನಡೆಯನ್ನು ಸಹೃದಯ ಬಾಂದವರೆಲ್ಲ ಸೇರಿ ಖಂಡಿಸಿದೆವು.ಸ್ನೇಹ ಸಂವಾದ ರೀತಿ ನೀತಿಗಳನ್ನು ಮುಂದೆ ಬಂದು ತಿಳಿಸುವಂತೆ ಅಡ್ಮಿನ್ಗೆ ಮನವಿಯನ್ನು ಮಾಡಿದೆವು.ಆ ಮನವಿಗೂ ಅಡ್ಮಿನ್ನ ಪುರಸ್ಕಾರ ದೊರೆಯಲಿಲ್ಲ.ಆಗ ಅವನ ಬಗ್ಗೆ ಮಾಹಿತಿ ಕಲೆ ಹಾಕಲು ನಿಂತೆವು.ಸಿಕ್ಕಿದ ಮಾಹಿತಿಗಳು ನಿಜವಾಗಿಯೂ ಆಘಾತಕಾರಿಯಾಗಿತ್ತು.
ವೆಲ್ ವಿಷರ್ ಅನ್ನುವದು ಒಂದಷ್ಟು ಧರ್ಮಪ್ರಚಾರಕರು ಧರ್ಮ ಪ್ರಚಾರದ ಉದ್ದೇಶ ಹೊಂದೆ ರಚಿಸಿದ ಅಡ್ಮಿನ್ ಆಗಿದ್ದ.ಸ್ನೇಹ ಸಂವಾದ ವೆಂಬ ಗ್ರೂಪ್ ಹೆಸರು ಜನರನ್ನು ಆಕರ್ಷಿಸುವ ಸಲುವಾಗಿ ಇಡಲಾಗಿತ್ತು.ಅದಕ್ಕಾಗಿ ಅಲ್ಲಿ ಮಾನವೀಯ ಸಂವೇದನ ಪೋಸ್ಟ್ಗಳು ಮಾಯವಾಗುತಿದ್ದವು.ಸಿಕ್ಕಿದ ಮಾಹಿತಿಗಳನ್ನು ಸಂಬಂದ ಪಟ್ಟವರಿಗೆ ಒಪ್ಪಿಸಿ ಸಮಾಜದ ಸ್ವಾಸ್ತ ಕಾಪಾಡುವಲ್ಲಿ ಇತ್ತ  ಗಮನ ಹರಿಸಿ ಎಂಬ ಮಾಹಿತಿಯನ್ನು ಕೊಟ್ಟಿದ್ದೇವೆ.ಒಂದಷ್ಟು ಫೇಕ್ ಪ್ರೊಫೈಲ್ ಮಾಹಿತಿ ಬಹಿರಂಗ ಗೊಂಡಿತು. ಇತರ ಧರ್ಮಗಳನ್ನು ಕೀಳಾಗಿ ಸಂಬೋದಿಸುವದನ್ನು ನೋಡಿಯೇ ಅದ ತಡೆಯಲು ಈ ದಾರಿಯನ್ನು ತನ್ನದಾಗಿಸಿ ಕೊಂಡಿದ್ದರು.ಅಲ್ಲದೆ ಈ ಗ್ರೂಪ್ ಅಡ್ಮಿನ್ ಮಂದಿಯೇ ಇದೆ ತರದ ಇನ್ನಸ್ಟು ಧರ್ಮ ಪ್ರಚಾರಕ ಗ್ರೂಪ್ ಹೊಂದಿದ್ದಾರೆ ಎಂಬ ಮಾಹಿತಿ ಸಿಕ್ಕಿತು.


ಅಷ್ಟಕ್ಕೂ ನಾವಲ್ಲಿ ಪ್ರತಿಪಾದಿಸಿದ್ದು ಧರ್ಮ ವಿರೋದಿ ನೀತಿಯಲ್ಲ.ಧರ್ಮಗಳ ಬಗ್ಗೆ ಸಹ್ಯವಾಗಿ ಚರ್ಚೆಗಳು ಸಾಮಜಿಕ  ತಾಣದಲ್ಲಿ ನಡೆಯುವದು ಸಾದ್ಯವಿಲ್ಲ ಅನ್ನುವದನ್ನು ಅಲ್ಲಿನ ಸ್ಥಿತಿ ಗತಿ ನೋಡಿ ಮನಗಂಡು ಅದರದೇ ಆದ ವೇದಿಕೆಯಲ್ಲಿ ಚರ್ಚಿಸುವದು ಉತ್ತಮ .ಸಾಮಾಜಿಕ ತಾಣಗಳು ಇದಕ್ಕೆ ವೇದಿಕೆಯಲ್ಲ.ಪರಸ್ಪರ ಧರ್ಮ ದೂಷಣೆ ದ್ವೇಷ ಬಾವಕ್ಕೆ ನಾಂದಿ ಹಾಡುತ್ತದೆ ಧರ್ಮದ ಅಮಲಿನಲ್ಲಿ ಮಾನವೀಯ ಮೌಲ್ಯಗಳು ಮರೆಯಾಗದಿರಲಿ ಎಂಬುದಾಗಿತ್ತು.ಹೇಳಿ ನಾವು ದಿನವು ನೋಡುವಂತ ಫೇಸ್ ಬುಕ್ ನಲ್ಲಿ ಇಂತ  ಸಮಾಜ ಸ್ವಾಸ್ತ್ಯ ಕೆಡಿಸುವಂತ ಚಟುವಟಿಕೆಗಳು ಎಷ್ಟು ಸಮಂಜಸ?ನಾವು ಹಳಿಗೆ ಬಿದ್ದಿರುವದು ಫೇಸ್ ಬುಕ್ ನ ಒಂದು ಗ್ರೌಪ್ನಲ್ಲಿ.ಇನ್ನು ಇಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆ ಇನ್ನೆಷ್ಟೋ!!ಇವತ್ತು ಫೇಸ್ ಬುಕ್,ಟ್ವಿಟ್ಟರ್ ಮುಂತಾದ ಸಾಕಸ್ಟು ಅಂತರ್ಜಾಲದ ತಾಣಗಳು ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರ ತನಕ ಸುಲಭವಾಗಿ ಕೈಗೆ ನಿಲುಕುತ್ತಿದೆ.ಯುವ ಜನತೆಯಂತು ಇಂತ ತಾಣಗಳಿಗೆ ಫಿಧಾ ಆಗಿದ್ದಾರೆ.ಇಲ್ಲಿ ನಡೆಯುವ ಅನಾಗರಿಕ ಚಟುವಟಿಕೆಗಳಿಗೆ ಕಡಿವಾಣದ ಅಗತ್ಯವಿದೆ.ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸಿದರೆ ಸ್ವಲ್ಪ ಮಟ್ಟಿನಲ್ಲಿ ಇಂತ ಚಟುವಟಿಕೆಗಳನ್ನು ತಡೆಯಬಹುದೇನೋ?ಒಟ್ಟಿನಲ್ಲಿ ಫೇಸ್ ಬುಕ್ ಗೆ ಹಲವಾರು ಮುಖಗಳಿವೆ ಎಂಬ ಎಚ್ಚರ ಇದ ಬಳಸುವ ಮುಂದು ನಮಗಿರಲಿ.
ನಿಮ್ಮವ.............
ರಾಘವೇಂದ್ರ ತೆಕ್ಕಾರ್ 

Friday, September 9, 2011

ನನ್ನ ಸಹೋದರ ವಿಘ್ನೇಶ್ ತೆಕ್ಕಾರ್ ಬರೆದ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ ಸಣ್ಣ ಕಥೆ ನಿಮಗಾಗಿ.

ಎಲ್ಲವೂ ಬದಲಾಗಿದೆ..............!

-     ವಿಘ್ನೇಶ್ ,ತೆಕ್ಕಾರ್ 
           ಮಾರಿ ಕಣಿವೆಯ ಕಂದರದೊಳಗಿಂದ  ನವಿಲೊಂದು ಕುಯ್ಯೋ ........ ಕುಯ್ಯೋ ಎಂದು ಕೂಗಿದಾಗ ಪುಟ್ಟಪ್ಪ ಅಂಜಿ ಅಳುಕಿ ಬಿದ್ದ.ಆತ ಆಷಾಡದ ಹನಿ ಕಡಿಯದ ಮಳೆಯಲ್ಲಿ ದತ್ತ ಕಾಡಿನಲ್ಲಿ ,ನಡುರಾತ್ರಿಯಲ್ಲಿ ನಡೆಯುತಿದ್ದ ಅನ್ನುವದಕ್ಕಿಂತ ಓಡುತಿದ್ದ ಅನ್ನುವದೆ ಸಮಂಜಸ.ಗುಳಿ ಬಿದ್ದ ಕಣ್ಣುಗಳಲ್ಲಿ ಅವ್ಯಕ್ತ ಆತಂಕ,ಮೈಯಲ್ಲಿ ಸಣ್ಣಗೆ ನಡುಕ,ಮುಂದೇನು...........?ಎಂಬ ದುಗುಡ ತುಂಬಿದ ಮನ,ಕಲ್ಲು-ಮುಳ್ಳು ,ಹಾವು-ಚೇಳುಗಳನ್ನೂ ಲೆಕ್ಕಿಸದೆ ವೇಗವಾಗಿ ಓಡುವ ಕಾಲುಗಳು,ವರುಣನ ರಕ್ಷಣೆಗೆ ಕಂಬಳಿ ಹೊದ್ದು ,ಕೈಯಲ್ಲಿ ರಕ್ತ ಸಿಕ್ತ ಚಾಕುವಿನ ಜೊತೆ ಪಲಾಯನ ಗೈಯುತಿದ್ದ ಪುಟ್ಟಪ್ಪನಿಗೆ ನವಿಲ ಕೂಗೊಂದು ಯಮಲೋಕದ ರಣ ಕಹಳೆಯಂತೆ ಕೇಳಿತು.  
               ಕಾಡು ದಾಟಿ ಟಾರು ರೋಡು ತಲುಪಿದ ಪುಟ್ಟಪ್ಪ ಬಂದ ಕಾಟದ ಲಾರಿಯೋ ಅಥವಾ ಮರಳು ಸಾಗಿಸುವ ಲಾರಿಯಲ್ಲಿ ಆದಷ್ಟು ಬೇಗ ಜಾಗ ಖಾಲಿ ಮಾಡಬೇಕು ಅಂದುಕೊಳ್ಳುತ್ತಿರುವಾಗಲೇ ಸಿಂಗಾರಿ ಪೇಟೆ ಕಡೆಯ ಇಳಿಜಾರಿನಲ್ಲಿ ಲಾರಿಯೊಂದು ಬರುವ ಸದ್ದು ಕೇಳತೊಡಗಿತು.ಲಾರಿಯ ಸದ್ದು ಕಿವಿಗೆ ಬಿದ್ದ ತಕ್ಷಣ ಕೈಯಲ್ಲಿದ್ದ ಚಾಕುವನ್ನು ಅಂಗಿ ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು ಸನ್ನದ್ದನಾದ ಪುಟ್ಟಪ್ಪ.ಗಾಡ ಕತ್ತಲೆಯಲ್ಲಿ ಮಿಂಚುವ ಮಿಂಚಂತೆ ಬೆಳಕು ಬೀರುತ್ತಾ,ರಸ್ತೆಯಲ್ಲಿದ್ದ ಮಳೆ ನೀರನ್ನು ಚಿಮ್ಮಿಸುತ್ತಾ ಬಂದ ಲಾರಿಗೆ ಕೈ ಅಡ್ಡ ಹಾಕಿದ ಪುಟ್ಟಪ್ಪನನ್ನು ಕಂಡು ಸ್ವಲ್ಪ ಮುಂದೆ ಹೋಗಿ ಬುರ್ರ್ಎಂದು ನಿಂತಿತು ಲಾರಿ.ಡ್ರೈವರ್ ತಲೆ ಹೊರ ಹಾಕಿ,ಏನು ಪುಟ್ಟೇ ಗೌಡ್ರೆ ,ಯಾವ ಕಡೆ ಹೊಂಟ್ರಿ ಈ ಕತ್ತಲಾಗೆ?ಎಂದು ಕೇಳಿದ.ಮೊದಲೇ ಹೆದರಿದ್ದ ಪುಟ್ಟಪ್ಪನಿಗೆ ಯಾರಪ್ಪ ಇವನು ನನ್ನ ಪರಿಚಯ ಇರೋನು ಎಂದೆನಿಸಿ ಮನಸಿನಲ್ಲಿ ಭಯದ ಎಳೆಯೊಂದು ಚಿಗುರಿತು.ಉತ್ತರ ಬಾರದಿದ್ದಾಗ ಲಾರಿ ಡ್ರೈವರ್, ಯಾರಂತ ಗೊತ್ತಾಗಿಲ್ವಾ ಗೌಡ್ರೆ , ನಾನು ಸಿದ್ದ ಗೌಡ್ರೆ.ಸಿದ್ದ ಎಂಬ ಹೆಸರು ಕೇಳಿದ ಕೂಡಲೇ ಮನದ ಆತಂಕ ಸರಿದು, ಓ ಸಿದ್ದ ನೀನಾ..?ಯಾವ ಕಡೆ ಹೊರಟೆ ಮಾರಾಯ ..? ಎಂಬ ಮಾತು ಬಂತು ಪುಟ್ಟಪ್ಪನ ಬಾಯಲ್ಲಿ.ತಮಿಳುನಾಡು ಗೌಡ್ರೇ,ನೀವ್...ಎಲ್ಲಿಗೆ..?  ಪುಟ್ಟಪ್ಪ ತಡವರಿಸುತ್ತಾ ..ಆಂ..ಆಂ..  ಹಾಂ ಬೆಂಗಳೂರಲ್ಲಿ ಪರಿಚಯದವರೋಬ್ರು ತೀರಿಕೊಂಡರು ಅಂತ ಸುದ್ದಿ ಬಂತು.ಹಾಗಾಗಿ ಹೊರಟೆ ಕತ್ಲಲ್ಲಿ.ಹಂಗಾರೆ ಹತ್ತಿ ಗಾಡಿ ಬೇಗ, ಕಾಡು ದಾರಿ ಕಳ್ದು ಬಿಟ್ಟರೆ ಅಮ್ಯಾಗೆ ತೊಂದ್ರೆ-ಗಿಂದ್ರೆ ಏನಾಗಕಿಲ್ಲ, ಲೇ ಸರಿ ವಸಿ ಇತ್ತ ಕಡೆಗೆ ... ಎಂದು ಕ್ಲಿನರಿಗೆ ಒದರಿದ ಸಿದ್ದ. ನಿದ್ದೆ ಕಣ್ಣಿ ನಲ್ಲೂ ಬನ್ನಿ ಬನ್ನಿ ಗೌಡ್ರೇ , ಎಂದು ತನ್ನ ಕೊಳಕು ಹಲ್ಲುಗಳನ್ನು ಕಿಸಿಯುತ್ತ ಸ್ವಾಗತಿಸಿದ ಕ್ಲಿನರ್ ಪುಟ್ಟಪ್ಪನನ್ನ.ಹೊರಟಿತು ಲಾರಿ ಪುಟ್ಟಪ್ಪನ ಗುರಿ ತಪ್ಪಿದ ದಿಗಂತದೆಡೆಗೆ..!
              ಮಾರಿಬೈಲು ಮಲೆನಾಡ ದಿವ್ಯ ಸೋವ್ದರ್ಯದ ನಡುವಿನಲ್ಲಿ ಮೂವತ್ತು ನಲವತ್ತು ಮನೆಗಳ ಹಳ್ಳಿ.ಸುತ್ತಲು ಬೆಟ್ಟ-ಗುಡ್ಡ,ತೊರೆ-ಜಲಪಾತ,ಆಕಾಶದೆತ್ತರ ಬೆಳೆದು ನಿಂತ ನಿತ್ಯಹರಿದ್ವರ್ಣದ ಕಾಡು.ಬಹುತೇಕ ಹೊರ ಪ್ರಪಂಚದಿಂದ ಮುಕ್ತವಾದ ಹಳ್ಳಿ.ಜನರು ಸ್ವಲ್ಪವಾದರೂ ಅದುನಿಕತೆಯ ವ್ಯಭವ ನೋಡಲು ಸಹ ಎಂಟು ಮೈಲು ದೂರದ ಸಿನ್ಗಾರಪೇಟೆಗೆ ಹೋಗಬೇಕು.ವೆಂಕಟ ಗೌಡರು ಊರ ಮುಖಂಡರು.ಒಂದಷ್ಟು ಶಿವಳ್ಳಿ ಬ್ರಾಹ್ಮಣರು,ಗೌಡ ಸಾರಸ್ವತರು , ಘಟ್ಟದ ಕೆಳಗಿನ ಬಿಲ್ಲವರು,ಮುಸ್ಲಿಂ ಸಾಬರು,ಒಂದೆರಡು ಹರಿಜನ ಕುಟುಂಬಗಳು ಸೇರಿ ಕೊಂಡು ನೂರರಿಂದ ಇನ್ನುರರವರೆಗೆ ಜನಸಂಖ್ಯೆ.ಕೃಷಿ ,ಬೇಟೆ,ಕಾಡು ಉತ್ಪನ್ನಗಳ ಸಂಗ್ರಹ ಜನರ ಪ್ರಮುಖ ಉದ್ಯೋಗ.ಕಾಡು ಪ್ರಾಣಿಗಳಿಂದ ಬೆಳೆ ಹಾನಿ,ಕೋಮುಗಳ ಒಳಗೆ ಜಗಳ,ಆತನನ್ನು ಕಂಡರೆ ಈತನಿಗಾಗದು,ಇಂತಹ ಸನ್ನಿವೇಶಗಳು ಸರ್ವೇ ಸಾಮಾನ್ಯ.ಜೊತೆಗೆ ಬಡತನದ ಭದ್ರ ಮುಷ್ಠಿ.ಆದರು ಭಕ್ತಿಯ ಪರಕಾಷ್ಟೆತಗೆ ಒಂದು ಹನುಮನ ಗುಡಿ. ಮುಸ್ಲಿಮರ ಮಸೀದಿ ಒಂದಿತ್ತು.ಒಟ್ಟಿನಲ್ಲಿ ದಾರಿದ್ರ್ಯ ದಲ್ಲೂ ನೆಮ್ಮದಿಯ ಜೀವನ.
             ನೆಮ್ಮದಿಗೆ ಭಂಗ ಬರುವಂತೆ ಆ ರಾತ್ರಿ ಮರಿಬೈಲುನ ಜನರಲ್ಲಿ ಜೀವದ ಭಯ ಹುಟ್ಟಿತ್ತು.ಪುಟ್ಟಪ್ಪ ಗೌಡ ಊರ ಮುಖಂಡ ವೆಂಕಟ ಗೌಡರ  ಏಕೈಕ ತಮ್ಮ.ಹುಟ್ಟಿ ಬೆಳೆದು ನಿಂತ ಮೇಲೆ ಒಮ್ಮೆಯು ,ಜಮೀನು,ಗದ್ದೆಯ ಕಡೆಗೆ ಮುಖ ಹಾಕಿದವನಲ್ಲ.ಹೋಗಲಿ, ಒಂದು ದಿನ ಮನೆಯಲ್ಲಿ ತಿಂದ ತಟ್ಟೆಗೆ ನೀರು ಮುಟ್ಟಿಸಿದವನಲ್ಲ.ಕೂತು ತಿಂದು ಸಾಲ ಮಾಡಿ ಕಳೆಯುವದು ಬಿಟ್ಟು ಸಾಸಿವೆಯಷ್ಟು ಕೆಟ್ಟ ಚಾಳಿ ಇಲ್ಲ.ಒಂದೆರಡು ಬಾರಿ ಅಣ್ಣನ ಜವಾಬ್ಧಾರಿ ಎಂದು ಪುಟ್ಟಪ್ಪ ಮಾಡಿದ ಸಾಲ ತೀರಿಸಿ ಸುಸ್ತಾದ ವೆಂಕಟ ಗೌಡರು ತಮ್ಮನನ್ನು ಕರೆದು ಬುದ್ದಿ ಹೇಳಿದರು ಹುಟ್ಟು ಬುದ್ದಿ,ಹಂದಿ ಯಾವತ್ತಾದರೂ ಕೆಸರಲ್ಲಿ ಹೊರಲಾದುವದು ನಿಲ್ಲಿಸಿತೇ.....!!?ಎಂಬಂತಿದ್ದ ಪುಟ್ಟಪ್ಪ.ಮಾಡುವೆ ಮಾಡಿ, ಒಂದು ಮನೆ ಕಟ್ಟಿ ಕೊಡಿ ಸರಿ ಹೋದಾನು,ಸ್ವಲ್ಪ ಜವಾಬ್ಧಾರಿ ಬಂದೀತು,ಎಂಬ ಯಾರದ್ದೋ ಮಾತು ಕೇಳಿ ವೆಂಕಟ ಗೌಡರು ಬಯಲು ಸೀಮೆಯ ಕಮಲಿನಿ ಎಂಬ ಹೆಣ್ಣನ್ನು ತಂದು ಪುಟ್ಟಪ್ಪನಿಗೆ ಕಟ್ಟಿದರು ಆತನ ಒಳ್ಳೆ ಬುದ್ದಿ ಕಾಲು ಮುದುರಿಕೊಂಡು ಮೂಲೆಯಲ್ಲಿ ಬಿದ್ದಿತ್ತು.ಈ ಬಾರಿ ಬಡ್ಡಿ ಅಬ್ದುಲ್ಲ ಕೈ ಇಂದ ಎರಡು ಸಾವಿರ ಸಾಲ ತೆಗೊಂಡು ಜೂಜಾಡಿ ಕಳೆದಿದ್ದ ಪುಟ್ಟಪ್ಪ.ವೆಂಕಟ ಗೌಡರಿಗೆ ವಿಷಯ ತಿಳಿದಿದ್ದರೂ ಅವನ ಉಸಾಬರಿಯೇ ಬೇಡ ಎಂದು ಸುಮ್ಮನಿದ್ದರು.ಆದರೆ ಇದೆ ಸಾಲ ಪುಟ್ಟಪ್ಪನಿಗೆ ಮುಳುವಾಗಬೇಕೆ........?
            ಕೊಟ್ಟ ಸಾಲ ಹಿಂದಕ್ಕೆ ಪಡೆಯಲು ಅಬ್ಧುಲ್ಲ ಸಾಬ ವಾರಕ್ಕೆರಡು ಬಾರಿ ಪುಟ್ಟಪ್ಪನ ಮನೆ ಬಾಗಿಲು ತಟ್ಟಿದರು ಕಮಲಿನಿಯೇ ಬಾಗಿಲು ತೆರೆದು,ಅವರಿಲ್ಲ,ಸಿಂಗಾರ ಪೇಟೆಗೆ ಹೋಗಿದ್ದಾರೆ, ಎಂಬ ಉತ್ತರವೇ ಕಾದಿರುತಿತ್ತು.ಈ ಮೂರೂ ಕಾಸಿನ ಗೌಡ ಪೇಟೆಯಲ್ಲಿ ಏನು ಕಡ್ಧು ಗುಡ್ಡೆ ಹಾಕ್ತಾನೆ....?ಅನ್ನೋ ಯೋಚನೆ ಸಾಬನ ಮನಸಿನಲ್ಲಿ ಮೂಡಿದರೂ, ಇನ್ನೊದು ಸಾರಿ ಬರೋಣವೆಂದು ಹಿಂದೆ ಹೋಗಿದ್ದು ಒಂದೈವತ್ತು ಭಾರಿ ಆಗಿರಬಹುದು.ಆದರೆ ಈ ಭಾರಿ ಹಗಲು ಹೊತ್ತು ಬಿಟ್ಟು ರಾತ್ರಿ ಹೊತ್ತು ಮನೆಯಲ್ಲೇ ಇರ್ತಾನೆ ಅಂತ ಗೊತ್ತಾಗಿ ಅಬ್ದುಲ್ಲ ಸಾಬ ಆ ರಾತ್ರಿ ಪುಟ್ಟಪ್ಪನ ಮನೆ ಮುಂದೆ ಬಂದ.ಕಂಠ ಮುಟ್ಟ ಕುಡಿದು ನಿಲ್ಲಲು ಕೂರಲು ಆಗದೆ ಇನ್ನು ಮಲಗಲು ಅಟ್ಟನೆ ಮಾಡುತ್ತಿರಬೇಕಾದರೆ ಸಾಬನ ಆಗಮನವಾದದ್ದು  ಪುಟ್ಟಪ್ಪನಿಗೆ ಸರಿ ಕಾಣಲಿಲ್ಲ.ಏನು ಸಾಬರೇ..... ಹೊತ್ತು ಗೊತ್ತು ಇಲ್ವಾ ಸಾಲ ವಸೂಲಿಗೆ..........?ಹೋಗಿ ಹೋಗಿ ಹೊತ್ತರೆ ಬನ್ನಿ.ಎಂದು ಪುಟ್ಟಪ್ಪ ಜಾರಿಕೊಳ್ಳುವದರಲ್ಲಿಯೇ........ಏನು ಗೌಡ್ರೆ....?ದೊಡ್ಡ ಗೌಡ್ರ ಮುಖ ನೋಡಿ ಸಾಲ ಕೊಟ್ರೆ ನೀವ್ ಹಿಂಗಾ ಮಾಡೋದು.......?ನೋಡಿ ಗೌಡ್ರೆ.. ಇವತ್ತು ಹಣ ಕೊಡದೆ ಹೋಗಾಕಿಲ್ಲ ನಾನು.ನೀವ್ ಏನ್ ಮಾಡ್ತಿರೋ ಮಾಡಿ.ಅಂತ ತುಸು ಕೋಪದಿಂದಲೇ ಅಬ್ಬರಿಸಿದ ಸಾಬ.ನೋಡು ಸಾಬ ಇವತ್ತು ಹಣ ಇಲ್ಲ.ಇದ್ದರು ಇವತ್ತು ಕೊಡಲ್ಲ, ಎಂದು ಧಿಮಾಕಿನಿಂದಲೇ ಉತ್ತರ ಕೊಟ್ಟ ಪುಟ್ಟಪ್ಪ.ಅಬ್ದುಲ್ಲ ಸಾಬನಿಗಂತೂ ಅಲೆದು ಅಲೆದು ಬಳಲಿದ್ದರಿಂದ ಎಲ್ಲಿಲ್ಲದ ಕೋಪ ಉಕ್ಕಿ ಬಂದು , ಏನೋ ಗೌಡ...? ಒಳ್ಳೆ ಜನ ಅಂತ ಸಾಲ ಕೊಟ್ರೆ , ಹಲ್ಕಟ್ ತರ ನಂಗೆ ಧಿಮಾಕು ತೋರಿಸ್ತಿಯಾ?ಇವತ್ತು ಹಣ ಕೊಡಲೇ ಬೇಕು.ನಿನ್ನ ಮನೆನಾದ್ರು ಮಾರು,ಹೆಂಡ್ತಿನಾದ್ರು ಅಥವಾ  ಮಗಳನಾದ್ರು ಮಾರು, ಎಂದು ಆರ್ಭಟಿಸಿದ.ಸಕಲ ಚಟದ ದಾಸನಾಗಿದ್ದರು ಸಾಲಕಾಗಿ ಸಾಬ ಆಡಿದ ಮಾತುಗಳಿಂದ ಕೆಂಡಾಮಂಡಲನಾದ ಪುಟ್ಟಪ್ಪ ಅಲ್ಲೇ ಇದ್ದ ಅಡಿಕೆ ಹೆರೆಸುವ ಚಾಕು ತೆಗೆದು ಅಬ್ದುಲ್ಲ ಸಾಬನ ಕಿಬ್ಬೊಟ್ಟೆಗೆ ಇರಿದೆ ಬಿಟ್ಟ.ಹಟಾತ್ ಧಾಳಿ ಇಂದ ಸಾಬ ತತ್ತರಿಸಿ ನೆಲಕ್ಕೆ ಕುಸಿದು ಬಿದ್ದು ಅಂಗಳದ ಕೆಸರಲ್ಲಿ ಹೊರಳಾಡುತ್ತಾ , ಮರಿಬೈಲನ್ನು ನಿದ್ದೆ ಇಂದ ಏಳಿಸುವಂತೆ ಚೀರತೊಡಗಿದ.ಪುಟ್ಟಪ್ಪನಿಗೆ ತನ್ನಿಂದಾದ ಅನಾಹುತದ ಅರಿವಾಗಿ ತಲೆಗೆ ಹತ್ತಿದ್ದ ಕಳ್ಳ ಭಟ್ಟಿಯ ಅಮಲು ಜರ್ರನೆ ಇಳಿ ಇತು.ಸಾಬನ ಚಿರಾಟಕ್ಕೆ ಪಕ್ಕದ ಅಣ್ಣನ ಮನೆಯಲ್ಲಿ ದೀಪ ಹೊತ್ತಿತು.ಅಣ್ಣ ಬಂದರೆ ನನಗೆ ಉಳಿಗಾಲವಿಲ್ಲವೆಂದೆನಿಸಿ ಅಲ್ಲೇ ಕಿಟಕಿಗೆ ನೀತು ಹಾಕಿದ್ದ ಕಂಬಳಿಯನ್ನು ಹನಿ ಮಳೆಯ ರಕ್ಷಣೆಗೆ ಹೊದ್ದು ಪಕ್ಕದ ಕಾಡಲ್ಲಿ ಮಾಯವಾದ ಪುಟ್ಟಪ್ಪ.ಪುಟ್ಟಪ್ಪನ ಈ ಓಟದ ಬಗೆ ಅರಿಯದೆ ಅವನ ನಿಯತ್ತಿನ ನಾಯಿ ಕಾಳು ಸರಪಳಿ ಜಗ್ಗಿ ಬೊಗಳತೊಡಗಿತು.
     ಸಿದ್ದನ ಸಹಾಯದಿಂದ ಬೆಂಗಳೂರು ಬಂದಿಳಿದ ಪುಟ್ಟಪ್ಪನಿಗೆ ಮೊದಲಿನಿಂದಲೂ ಬೆಂಗಳುರನ್ನೊಮ್ಮೆ ನೋಡಬೇಕೆಂಬ ಆಸೆ ಇತ್ತು. ಆ ಅಸೆ ಇಂದು ಫಲಿಸಿದರೂ ಅನುಭವಿಸುವ ಸ್ಥಿತಿ ಪುಟ್ಟಪ್ಪನದ್ದಾಗಿರಲಿಲ್ಲ.ಕಿಸೆಯಲ್ಲಿ ನಯಾಪೈಸೆಗೂ ಗತಿ ಇಲ್ಲ, ಹೊಟ್ಟೆಯಲ್ಲಿ ಕದನ ವಿರಾಮ ಮುರಿದು ಹಸಿವು ಯುದ್ದ ಹೂಡಿದೆ.ಇವೆಲ್ಲದರ ನಡುವೆ ಎಲ್ಲಿ ಜೈಲು ಪಾಲಾಗುತ್ತೇನೋ ಎಂಬ ಅಂಜಿಕೆ.ರೈಲ್ವೆ ಸ್ಟೇಷನ್ ಹತ್ತಿರ ಬಂದಾಗ ಎಲ್ಲಿಗೋ ಹೊರಡುತಿದ್ದ ರೈಲು ಪುಟ್ಟಪ್ಪನ ಕಣ್ಣಿಗೆ ಬೀಳುತ್ತದೆ. ದೇವರು ನಡೆಸಿದಂತಾಗಲಿ ಎಂದು ಊರ ಹನುಮನಿಗೆ ಪ್ಲಾಟ್ ಫಾರಂನಿಂದಲೇ ಕೈ ಮುಗಿದು ಜನರಲ್ ಕಂಪಾರ್ಟ್ಮೆಂಟ್ ಗೆ ಕಾಲಿರಿಸಿದ.ಉತ್ತರ ಭಾರತದ ಕಡೆಗೆ ಹೋಗುವ ಆ ರೈಲಿನಲ್ಲಿ ಪುಟ್ಟಪ್ಪ ಮೂಕ.ಎಲ್ಲೆಡೆ ಹಿಂದಿಯದ್ದೆ ಕಾರುಬಾರು.ಎಡೆ ಸೀಳಿದರು ಅ,ಆ,ಇ,ಈ ಇಲ್ಲದ ಪುಟ್ಟಪ್ಪ ಬೆಪ್ಪನಾಗಿದ್ದ.ರೈಲಿನಲ್ಲಿ ತಿಂಡಿ, ಊಟ ಎಲ್ಲವೂ ಸಿಗುತ್ತದೆ ಎಂದು ಪುಟ್ಟಪ್ಪ ಯಾರಿಂದಲೋ ತಿಳಿದಿದ್ದ.ಆದರೆ ಅವಕ್ಕೆಲ್ಲ ಪ್ರತ್ಯೇಕ ಹಣ ತೆರಬೇಕೆಂದು ತನ್ನ ಸ್ವಂತ ಅನುಭವದಿಂದ ಇಂದು ತಿಳಿಯಿತು ಪುಟ್ಟಪ್ಪನಿಗೆ.
             ಅಂತು ಉತ್ತರ ಭಾರತದ ಪ್ರಸಿದ್ದ ತೀರ್ಥಕ್ಷೇತ್ರ ಕಾಶಿಯಲ್ಲಿ ಬಂದು ಬಿದ್ದ ಪುಟ್ಟಪ್ಪನಿಗೆ ಅಂದಿನಿಂದ ನಿಜ ಜೀವನದ ಮುಖಾಮುಖಿ.ನಾನೊಬ್ಬನಿದ್ದೇನೆ ಎಂದು ಚುರುಗುಟ್ಟುವ ಉದರ,ಖಾಲಿಯಾದ ಜೇಬಲ್ಲಿ  ಕುಣಿದಾಡುವ ದಾರಿದ್ರ್ಯ , ತನ್ನ ಪಾಡಿಗೆ ಕಾರಣವಾದ ದೇವರನ್ನು ಶಪಿಸುವ ಮನಸ್ಸು,ಮತ್ತೊಮ್ಮೆ ಕಾಪಾಡು ತಂದೆ ಎಂದು ಅದೇ ದೇವರನ್ನು ಮೊರೆಯಿಡುವ ಅದೇ ಮನಸ್ಸು. ಮಾರಿಬೈಲಿನ ಗೌಡರ ತಮ್ಮನೆಂಬ ಸ್ಥಾನ, ಅಂತಸ್ತು ಎಲ್ಲವೂ ಮಂಜಾಗಿ ಕರಗಿಹೋಯಿತು,ಸಾಲಮಾಡಿ ಮೋಜು ಮಾಡುತಿದ್ದಾಗ ಗೊತ್ತಿಲ್ಲದ ಹಣದ ಮೌಲ್ಯ ಇಂದು ಅರಿವಿಗೆ ಬರುತ್ತಿದೆ.ಹೊಟ್ಟೆಗಾಗಿ ಕಾಶಿಯಲ್ಲಿ ಭಕ್ತಾದಿಗಳು ತಮ್ಮ ಹಿರಿಯರಿಗೆ ಹಾಕಿದ ಪಿಂಡದ ಅನ್ನವನ್ನೇ ಕದ್ದು ತಿಂದು ಯೋಗಿಯಾದ ಪುಟ್ಟಪ್ಪ.ಬಯಸದೆ ವಿಧಿಯ ಬಂದಿಯಾದ.
                   ಮಾರಿಬೈಲು ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತಿದೆ.ಒಂದು ಶಾಲೆ,ಪ್ರಾಥಮಿಕ ಆರೋಗ್ಯ ಕೇಂದ್ರ, ದಿನಕ್ಕೆರಡು ಬಾರಿ ಬಂದು ಹೋಗುವ ಸರ್ಕಾರಿ ಬಸ್ಸು, ಹೀಗೆ ಮೂಲ ಸೌಕರ್ಯಗಳು  ಮರಿಬೈಲಿನತ್ತ ಮುಖ ಮಾಡುತ್ತಿವೆ.ಶೋಲಾ ಅರಣ್ಯಗಳ ತಪ್ಪಲಿನ ಮಾರಿಬೈಲಿನ ಸೌ೦ದರ್ಯಕ್ಕೆ ಮಾರುಹೋಗಿ ವಿಹಾರಕ್ಕೆ,ಚಾರಣಕ್ಕೆ ಬರುವವರು ಹೆಚ್ಚಾಗಿದ್ದಾರೆ.ಪ್ರವಾಸಿಗರನ್ನು ಸುಲಿದು ಹಣ ಮಾಡುವ ಜನರು ಹೆಚ್ಚಾಗಿದ್ದಾರೆ. ಮಾರಿಬೈಲಿನ ಆಧುನಿಕತೆಯ ಓಟದೊಡನೆ ಅಬ್ದುಲ್ಲ ಸಾಬನ ಕಿಬ್ಬೊಟ್ಟೆಯ ಗಾಯವು ಮಾಸಿದೆ.ಜೋತೆಗೆ ಕಮಲಿನಿಗೆ ಗಂಡನ ನೆನಪು ಕೂಡ.
                  ಮಾರಿಬೈಲು ಬದಲಾಗುತಿದ್ದಂತೆ ಊರು,ಸಂಬಂಧಗಳೆಲ್ಲವನ್ನು ಶಿಕ್ಷೆಗೆ ಹೆದರಿ ಓದಿ ಬಂದು ಹೊಟ್ಟೆಗಾಗಿ ಕಾವಿತೊಟ್ಟ ಪುಟ್ಟಪ್ಪನಿಗು ಊರ ನೆನಪು ಕಾಡುತ್ತಿದೆ.ಅಪರಾದಿಯಾಗಿ ಪರಾರಿಯಾದವನಿಗೆ ಕಾಶಿಯಲ್ಲಿ ನೈಜ ಜೀವನದ ಸತ್ಯ ದರ್ಶನವಾದಾಗ ತನಗೆ ನೆರವಾದ ಅಣ್ಣ ದೇವರಂತೆ ಕಾಣುತ್ತಾರೆ, ತಾನು ಕೊಟ್ಟ ಕಷ್ಟ-ದುಃಖಗಳನ್ನೂ ನುಂಗಿ ತನ್ನ ಜೊತೆ ಸಂಸಾರ ನಡೆಸಿದ ಹೆಂಡತಿ ತ್ಯಾಗಿಯಾಗಿ ಕಾಣುತ್ತಾಳೆ,ಮನೆ ಬಿಟ್ಟಾಗ ಎಂಟು ವರ್ಷದ ಮಗಳು ರಾಣಿಯ ಮುಗ್ಧವಾದ ಕಣ್ಣುಗಳು ಪುಟ್ಟಪ್ಪನನ್ನು ಪದೇ ಪದೇ ಕಾಡುತ್ತದೆ.ಒಮ್ಮೆ ಊರಿಗೆ ಹೋಗಿ ಎಲ್ಲರನ್ನು ನೋಡಿಕೊಂಡು ಬರಬೇಕೆಂಬ ಮಹದಾಸೆ ಮೊಳೆಯುತ್ತದೆ ಪುಟ್ಟಪ್ಪನಲ್ಲಿ ಕೆಲವೊಮ್ಮೆ, ಆದರೆ ಯಾವ ಮುಖ ಹೊತ್ತು, ಏನು ಸಾಧಿಸಿದವನೆಂದು ಊರಿಗೆ ಕಾಲಿಡಲಿ ಎಂದು ತನ್ನ ಬಗ್ಗೆ ಕೀಳು ಭಾವ ತಳೆಯುತ್ತದೆ ಮನಸ್ಸು ಇನ್ನೊಮ್ಮೆ.ಆದರೂ ಹೊರಟೆ ಬಿಟ್ಟ ಊರಿಗೆ ಬರೋಬ್ಬರಿ ಎಂಟು ವರ್ಷಗಳ ನಂತರ.
                   ಮುಂಜಾನೆಯ ಬಸ್ಸಿನಲ್ಲಿ ಪುಟ್ಟಪ್ಪ ಬಂದು ಮಾರಿಬೈಲಿನ ಧರೆಗಿಳಿದಾಗ ಹರಡಿದ ಇಡೀ ಭೂ ಲೋಕದ ಸ್ವರ್ಗದಂತೆ ಕಾಣುತಿತ್ತು.ಬೆಟ್ಟ ಗುಡ್ಡಗಳನ್ನು ಮೋಡಗಳು ಚುಂಬಿಸುತಿತ್ತು.ಹಕ್ಕಿ ಪಕ್ಕಿಗಳ ಚಿಲಿಪಿಲಿ ಕಿವಿಗೆ ಹಿತವಾದ ಮುದ ನೀಡುತಿತ್ತು.ಕಾಡು ಹೂವುಗಳಿಂದ ಹೊರಟ ಸುಗಂದಯುತ ಪರಿಮಳವು ತನುಮನಕ್ಕೆ ಹೊಸ ಚೈತನ್ಯವನ್ನು ತುಂಬುವಂತಿತ್ತು.ಆದರೆ ಪುಟ್ಟಪ್ಪನಿಗೆ ಅದ್ಯಾವುದರ ಗಮನವಿಲ್ಲ.ಅಣ್ಣ ,ಹೆಂಡತಿ,ಮಗಳನ್ನು ನೋಡುವ ತವಕ ಮನದಲ್ಲಿ ಆವರಿಸಿತು.ಮೊದಲು ಅಣ್ಣನನ್ನು ನೋಡಿ ಆಮೇಲೆ ತನ್ನ ಮನೆಗೆ ಹೋಗೋಣ ಎಂದು ನಿರ್ಧರಿಸಿ ಹೊರಟ ಪುಟ್ಟಪ್ಪ ಕಳಚಿದ ಕೊಂಡಿಯ ಹುಡುಕಿ.
                      ಮಾರಿಬೈಲಿನ ಬೀದಿಯಲ್ಲಿ ಕುರುಚಲು ಗಡ್ಡ, ಕಾವಿ ತೊಟ್ಟ ಪುಟ್ಟಪ್ಪನನ್ನು ಯಾರು ಗುರುತು ಹಿಡಿಯುವಂತಿರಲಿಲ್ಲ. ಅಪರೂಪಕ್ಕೆ ಭಿಕ್ಷೆ ಬೇಡಿಕೊಂಡು ಬರುವ ಸಾಧುಗಳಂತೆ ಈ ಸನ್ಯಾಸಿ ಇರಬಹುದೆಂಬ ಭಾವ ತೆಳೆದಂತಿತ್ತು ಊರವರು.ವೆಂಕಟ ಗೌಡರ ಮನೆ ಮುಂದೆ ಪುಟ್ಟಪ್ಪ ಬಂದಾಗ ಮನೆಯೊಳಗಿನಿಂದ ಓರ್ವ ಅಪರಿಚಿತ ಗಂಡಸು ಹೊರ ಬಂದು ತನ್ನ ಪಕ್ಕದಲ್ಲೇ ಹಾದು ಹೋದಾಗ, ಬಹುಶಃ ಮನೆ ಮಾರಟವಾಗಿರಬೇಕು ಎಂದುಕೊಂಡ.ಆದರೂ ಒಮ್ಮೆ ವಿಚಾರಿಸಿ ನೋಡೋಣ ಎಂದು ಮನೆಯ ಅಂಗಳಕ್ಕೆ ಕಾಲಿರಿಸಿದಾಗ, ಅಂಗಳದ ಮೂಲೆಯಲ್ಲಿ ಪುಟ್ಟ ಬಾಲಕನೊಬ್ಬ ಆಡುತಿದ್ದ.ಜಗುಲಿಯಲ್ಲಿ ಸುಮಾರು ಹದಿನೈದು-ಹದಿನಾರು ಪ್ರಾಯದ ಹೆಣ್ಮಗಳು ದುಂಡು ಮಲ್ಲಿಗೆಯ ಹಾರವನ್ನು ಕಟ್ಟುತಿದ್ದಳು.ಆ ಮುಗ್ಧ ಮುಖವನ್ನು ಪುಟ್ಟಪ್ಪನ ಕಣ್ಣುಗಳು ತನ್ನ ಮಗಳು ರಾಣಿಯೆಂದು ಗುರುತಿಸಿದವು.ಎಷ್ಟು ಬೆಳೆದಿದ್ದಾಳೆ ನನ್ನ ಮಗಳು ಎಂದು ಆಶ್ಚರ್ಯದಿಂದ ನೋಡುತಿದ್ದ ಪುಟ್ಟಪ್ಪನನ್ನು ನೋಡಿ ರಾಣಿ, ಏನು ಬೇಕಾಗಿತ್ತು ಸ್ವಾಮಿಗಳೇ...?ರಾಣಿಯ ಮಾತುಗಳಿಂದ ಎಚ್ಚೆತ್ತ ಪುಟ್ಟಪ್ಪನ ಗಂಟಲಿಂದ ಮೆಲ್ಲನೆ,ವೆಂಕಟಗೌಡರು.......ಎಂಬ ಶಬ್ದ ಹೊರಬಂತು.

ಹೋ, ದೊಡ್ದಪ್ಪನಾ....! ಅವರಿಲ್ಲ.
ಎಲ್ಲೋಗಿದ್ದಾರೆ ಪುಟ್ಟಿ,ಮರು ಪ್ರಶ್ನೆ ಪುಟ್ಟಪ್ಪನಿಂದ.
ಆರು ವರ್ಷ ಆಯಿತು ,ತೀರಿ ಹೋಗಿ,
ಒಮ್ಮೆಲೇ ಅನಾಥನಾದೆ ಅನಿಸಿತು ಪುಟ್ಟಪ್ಪನಿಗೆ.ಅಷ್ಟರಲ್ಲಿ, ಯಾರೇ ಅದು....? ಎಂದು ಒಳಗಿನಿಂದ ಹೊರ ಬಂದ ಕಮಲಿನಿಯನ್ನು ನೋಡಿ ಅಣ್ಣನನ್ನು ಕಳೆದುಕೊಂಡು ಮರುಗುತಿದ್ದ ಮನಸ್ಸಿಗೆ ಸ್ವಲ್ಪಮಟ್ಟಿನ ತಂಗಾಳಿ ಬೀಸಿದಂತಾಯಿತು.ತನ್ನ ಸಂಗಾತಿಯನ್ನು ನೋಡಿ ಅನಾಥ ಭಾವ ಕಡಿಮೆಯಾಗುತ್ತಿದೆ ಎನ್ನುವಾಗಲೇ, ಅಲ್ಲೇ ಆಡಿಕೊಂಡಿದ್ದ ಪುಟ್ಟ ಬಾಲಕ, ಅಮ್ಮ...ಅಮ್ಮ...ಅಪ್ಪ ಎಲ್ಲಿ ಹೊದ್ರಮ್ಮ ಈಗ...?ಎಂದು ಓದಿ ಬಂದು ಕಮಲಿನಿಯನ್ನು ಅಪ್ಪಿ ಹಿಡಿಯಿತು.ಪುನಹಃ ಅನಾಥನಾದ ಪುಟ್ಟಪ್ಪ.ಗುಡುಗು-ಮಿಂಚು,ಬಿರುಗಾಳಿ ಎಲ್ಲವೂ ಒಮ್ಮೆಲೇ ದಾಳಿ ಇಟ್ಟವು ಮನದೊಳಗೆ.ಒಂದೆರಡು ಹನಿಗಳು ಜಾರಿ ಭೂಮಿಯನ್ನು ಮುತ್ತಿಟ್ಟವು. ಏನು ನುಡಿಯದೆ ಹಿಂತಿರುಗಿದ ಪುಟ್ಟಪ್ಪ.ಅರ್ಥವಾಗಲಿಲ್ಲ ಈ ಸ್ವಾಮಿಯ ನಡವಳಿಕೆ ಎಂಬಂತೆ ಆಶ್ಚರ್ಯದಿಂದ ರಾಣಿ ಮತ್ತು ಕಮಲಿನಿ ನೋಡುತ್ತಾ ನಿಂತರು.ಬೇಲಿ ಬದಿಯಲ್ಲಿ ಮಲಗಿದ್ದ ಕಾಳು, ಪುಟ್ಟಪ್ಪನ ನಿಯತ್ತಿನ ನಾಯಿ ಆತನ ನಿರ್ಗಮನವನ್ನು ತಲೆಯೆತ್ತಿ ನೋಡಿ, ತನಗೆ ಸಂಭಂದವಿಲ್ಲವೆಂಬಂತೆ ಪುನಹಃ ಮಲಗಿತು.ಇಷ್ಟರವರೆಗೆ ತನ್ನ ಕುಟುಂಬವನ್ನು ನೋಡಬೇಕು ಎಂದು ಹಂಬಲಿಸುತಿದ್ದ ಪುಟ್ಟಪ್ಪನಿಗೆ ಪ್ರಥಮ ಬಾರಿಗೆ ಸಾಯಬೇಕು ಎನಿಸಿತು.ಆದರೆ ಸನ್ಯಾಸಿಯಾದವನು ಸಂಭದಗಳಿಗಾಗಿ ಸಾಯುವದು ಎಷ್ಟು ಸಮಂಜಸ...?
                           ಜೀವ ಇದ್ದಷ್ಟು ಕಾಶಿಯಲ್ಲೇ ಬೇಡಿ ಬದುಕುವದು ಎಂದು ಹೊರಟ ಪುಟ್ಟಪ್ಪನಿಗೆ ಅಣ್ಣನ ಸಮಾದಿಗೆ ನಮನ ಸಲ್ಲಿಸಬೇಕೆನಿಸಿತು.ಹೆಚ್ಚಾಗಿ ಹನುಮನ ಗುಡಿಯ ಹಿಂದಿನ ಗುಡ್ಡದಲ್ಲಿ ಸಮಾದಿ ಕಟ್ಟುವದು.ಭಾರವಾದ ಮನಸ್ಸಿನಿಂದ ಗುಡ್ಡ ಹತ್ತಿ ಅಣ್ಣನ ಸಮಾಧಿಯ ಮುಂದೆ ನಿಂತ ಪುಟ್ಟಪ್ಪನ ರಕ್ತ ಹೆಪ್ಪುಗಟ್ಟಿದಂತೆ ಆಯಿತು.ವೆಂಕಟಗೌಡರ ಸಮಾಧಿಯ ಪಕ್ಕದ ಸಮಾಧಿಯಯಾ ಮೇಲೆ ದಿ/ಪುಟ್ಟಪ್ಪ ಗೌಡ,ನಮ್ಮನ್ನು ಅಗಲಿದ ನಿಮಗೆ ಚಿರಶಾಂತಿ ಕೋರುವ ಕಮಲಿನಿ ಮತ್ತು ಮಕ್ಕಳು, ಎಂದು ದಪ್ಪ ಅಕ್ಷರದಲ್ಲಿ ಬರೆದಿತ್ತು.ಇಡೀ ದೇಹಕ್ಕೆ ಎಲ್ಲೆಡೆ ಇಂದಲೂ ಮುಳ್ಳು ಚುಚ್ಚಿದಂತಾಯಿತು ಪುಟ್ಟಪ್ಪನಿಗೆ.ಮೂಕನಾದ, ಮಾತೇ ಮರೆತಂತಾಯಿತು,ಬಾಯಿ ಒಣಗಿ, ಬೆವರು ಪುಟ್ಟಪ್ಪನನ್ನು ಆವರಿಸಿತು,ಗರಬಡಿದವನಂತೆ ತನ್ನ ಸಮಾಧಿಯನ್ನು ನೋಡುತ್ತಾ ನಿಂತಿದ್ದ ಪುಟ್ಟಪ್ಪನನ್ನು ಕಂಡು ಇನ್ನೊಂದು ಸಮಾಧಿ ಕಟ್ಟುತಿದ್ದ ಗಾರೆ ತನಿಯ, ಏನು ಸ್ವಾಮಿಗಳೇ ...? ಗೌಡ್ರ ಪರಿಚಯದವರಾ...? ಅವರ ತಮ್ಮ ಪುಟ್ಟೇ ಗೌಡ್ರು ಊರು ಬಿಟ್ರಲ್ಲ, ಮರುದಿನ ಅವರ ಹೆನ ಮಾರಿಕಣಿವೆಯಲ್ಲಿ ಸಿಕ್ತಲ್ಲ....!ಅದೇ ಕೊರಗಲ್ಲಿ ಶಿವನ ಪಾದ ಸೇರಿದರು ಪಾಪ.ಎಂದು ಪುಟ್ಟಪ್ಪನಿಗೆ ವಿವರಿಸಿದ.ತನಿಯನ ಮುಖವನ್ನೇ ತುಸು ಹೊತ್ತು ಪ್ರಶ್ನಾರ್ತಕವಾಗಿ ನೋಡಿದ ಪುಟ್ಟಪ್ಪ.ಹಂಗ್ಯಾಕೆ ನೋಡ್ತಿದ್ದಿರ ಸ್ವಾಮಿಗಳೇ, ತನಿಯನ ಮಾತುಗಳಿಂದ ಎಚ್ಚೆತ್ತ ಪುಟ್ಟಪ್ಪ ಗುಡ್ಡ ಇಳಿದು ಹನುಮನಿಗೆ ನಮಸ್ಕರಿಸುವ ಭಂಗಿಯಲ್ಲಿ ನಿಂತು ಹೊರಟ ಕಾಶಿಗೆ ಪುನಹಃ ಕೆಲ ನಿಮಿಷಗಳ ಹಿಂದೆ ಸಾಯಬೇಕೆಂದು ಯೋಚಿಸಿದ ಪುಟ್ಟಪ್ಪ ಊರವರ ಮನಸ್ಸಿನಲ್ಲಿ ಯಾವತ್ತೋ ಸತ್ತಿದ್ದ.ಜೀವನವೇ ನಶ್ವರವೆನಿಸಿತು ಪುಟ್ಟಪ್ಪನಿಗೆ.ಮಾರಿಬೈಲು, ತನ್ನ ಹೆಂಡತಿ,ಮಗಳು, ನಿಯತ್ತಿನ ನಾಯಿ ಕಾಳು,ತನ್ನ ಬದುಕು,ತನ್ನ ಅಸ್ತಿತ್ವ ಎಲ್ಲವೂ ಬದಲಾಗಿದೆ......!ಎಂದೆನಿಸಿತು ಪುಟ್ಟಪ್ಪನಿಗೆ.
    
      ಜುಲೈ ೭,೨೦೧೧ ನೇ ದಿನಾಂಕದ ತರಂಗ ಪುಟ ಸಂಖ್ಯೆ ೧೦ ರಲ್ಲಿ ಪ್ರಕಟಿಸಲ್ಪಟ್ಟಿದೆ.
********************************************************************************************


Thursday, September 8, 2011

ಸೀನಿಯರ್ ಸಿಟಿ ಜನ್ ಕ್ಲಬ್ಹ್ ವತಿ ಇಂದ ಹೀಗೊಂದು ಕಾರ್ಯಕ್ರಮ.ಸದುಪಯೋಗ ನಿಮ್ಮದಾಗಲಿ.

60 ವರ್ಷ ಮೇಲ್ಪಟ್ಟ ನಾಗರಿಕರಿಗಾಗಿ ಮೇ.10 ರಿಂದ ಮೇ.25 ರವರೆಗೆ ನಾರಾಯಣ ಹೃದಯಾಲಯದಲ್ಲಿ ಸೀನಿಯರ್ ಸಿಟಿಜನ್ ಕ್ಲಬ್ ವತಿಯಿಂದ ರಿಯಾಯಿತಿ ದರದಲ್ಲಿ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದೆ. ನಗರದ ಮೂರು ಕೇಂದ್ರಗಳಲ್ಲಿ ತಪಾಸಣೆ ನಡೆಯಲಿದೆ.

ಸಾಮಾನ್ಯ ದೈಹಿಕ ಪರೀಕ್ಷೆ, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆ ನಡೆಸಲಾಗುತ್ತದೆ. ವೃದ್ಧರು ಮಾನಸಿಕ ಖಿನ್ನತೆಯಿಂದ ಹೊರಬರಬೇಕು. ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯಗಳು ಲಭ್ಯವಿದ್ದರೂ, ಅಗತ್ಯ ಮಾಹಿತಿಯ ಕೊರತೆ ಎದುರಾಗಿದೆ. ಆದ್ದರಿಂದ ಜನರಿಗೆ ಈ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ನಮ್ಮ ಕ್ಲಬ್ ಮಾಡಿಕೊಂಡು ಬಂದಿದೆ ಎಂದು ಸೀನಿಯರ್ ಸಿಟಿಜನ್ ಕ್ಲಬ್ ನ ಹಿರಿಯ ಸದಸ್ಯರು ಹೇಳಿದರು.

ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ವಿವರಗಳನ್ನು ಪಡೆಯಲು ಸಂಪರ್ಕಿಸಿ:
ಸೀನಿಯರ್ ಸಿಟಿಜನ್ ಕ್ಲಬ್ ಕಚೇರಿ
ನಂ.9, ಹೀರಾಚಂದ್ ರಸ್ತೆ,
ಕಾಕ್ಸ್ ಟೌನ್, ಬೆಂಗಳೂರು
ದೂರವಾಣಿ ಸಂಖ್ಯೆ: (080) 2548 8612

(ಕೃಪೆ :- ಧಟ್ಸ್ ಕನ್ನಡ)

Sunday, September 4, 2011

ಗಮ್ಯದೆಡೆಗೆ ಪಯಣ

ಧರ್ಮ, ಜಾತಿ, ಮುಂತಾದವು ನಮಗೆ ಅವಶ್ಯಕವೆ? ಅಂತ ಇಲ್ಲೇ ಹಿಂದೊಮ್ಮೆ ನನ್ನ ವಿಚಾರಗಳನ್ನು ಬರೆದಿದ್ದೆ.ಇದೇನಪ್ಪ ಇವ್ನು ಧರ್ಮ ಜಾತಿಯತೆಗೆ ಒಳಪಡದ ತಾಣ ಅಂತ ಟಾಗ್ ಹಾಕಿಕೊಂಡು ಅದೇ ವಿಚಾರ ಗಳನ್ನೂ ಚರ್ಚಿಸುತ್ತಿದ್ದಾನೆ ಅಂತ ಅಂದುಕೊಳ್ಳಬೇಡಿ,ಆ ಮಾತುಗಳಿಗೆ ಬದ್ದನಾಗಿಯೇ ನನ್ನ ವಿಚಾರಗಳನ್ನು ಪ್ರಸ್ತುತ ಪಡಿಸುತಿದ್ದೇನೆ.ಏನು ಮಾಡುವದು ಜಾತಿ ಧರ್ಮ ಮುಂತಾದ ಸಂಕೋಲೆಗಳಿಂದ ಹೊರಬಂದು ಮನುಜ ಮತ ನಮ್ಮದು ಎನ್ನಲು ಇದ್ದ ವ್ಯವಸ್ತೆಯ ನಡುವೆಯೇ ಹೋರಾಟ ನಡಿಬೇಕಲ್ಲ.ಅದಕ್ಕಾಗಿ ಧರ್ಮ ಜಾತಿ ಸಂಪ್ರದಾಯ ಇಂತ ಶಬ್ದಗಳು ಬಳಕೆಗೆ ಬರಬೇಕಾಗುತ್ತದೆ ಆದರೆ ವಿಚಾರಗಳು ಇವುಗಳಿಂದ ಹೊರತಾಗಿರಬೇಕು ಅನ್ನುವ ಆಶಯ ನನ್ನದು. 

ಯಾವುದೇ ಧರ್ಮಗಳು ದೇವರಿಂದ ಹೊರತಾಗಿಲ್ಲ.ದೇವರೇ ಇಲ್ಲ ಅನ್ನುವ ನಾಸ್ತಿಕವಾದಿಗಳು ಹಾಗಾದರೆ ಯಾವದೇ ಧರ್ಮಕ್ಕೆ ಸೇರಿದವರು ಅಲ್ಲ ಅಂತವೇ!!!!!!!!!?ವಿಷಯ ಜಟಿಲವಾಗಿದೆ ಅನ್ನಿಸುತ್ತಿಲ್ಲವೇ ಮುಂದೆ ಈ ಬಗ್ಗೆ ನನ್ನ ವಿಚಾರಗಳನ್ನು ತಿಳಿಸುತ್ತಾ ಮುಂದುವರಿಯುತ್ತೇನೆ.ನಾಸ್ತಿಕರನ್ನು ವಿಚಾರ ಅರಗಿಸಿಕೊಂಡವರು ಅನ್ನಬಹುದ!!!!!!!!!,ಬಹುಶಃ ಇದು ದೊಡ್ಡ ಮಾತು. ನನ್ನನ್ನು ನಾಸ್ತಿಕ ಅಂತ ನನ್ನ ಗೆಳೆಯರು ಛೆಡಿಸುವದುಂಟು.ನಾನು ವಿಚಾರಗಳನ್ನು ತಿಳಕೊಂಡ ಪಂಡಿತನಲ್ಲ, ಹಾಗಾದರೆ ನಾನು ಯಾವ ಧರ್ಮಕ್ಕೂ ಸೇರಿದವ ಅಲ್ಲವೇ?!!!!!!!!!!! ಅಲ್ಲವೆಂದು ಆದರೆ ನಾನು ಯಾರು?!!!!!!!! ಯಾಕೆಂದರೆ ನಮ್ಮ ಸಮಾಜದಲ್ಲಿ ಧರ್ಮದ ಐಡೆಂಟಿಟಿ ಇಲ್ಲದವರು ಯಾರು ಇಲ್ಲ.ಹುಟ್ಟಿನಿಂದಲೇ ಅದು ತನ್ನ ಜೊತೆ ಬಂದಿರುತ್ತದೆ ,ಹಾಗಾದರೆ ನಾಸ್ತಿಕನಾದ ನಾನು ಯಾವ ಧರ್ಮದವ?!!!!!!!!!! ಪ್ರಶ್ನೆ ಕಾಡುವದು ಸಹಜ ಅಲ್ವೇ?

ಕೆಲವೊಂದು ಧರ್ಮಕ್ಕೆ ಏಕ ದೇವರು, ಇನ್ನೊಂದಕ್ಕೆ ೩ ದೇವರು,ಇನ್ನು ಕೆಲವಕ್ಕೆ ಕೊಟ್ಯನು ಕೋಟಿ ದೇವರುಗಳು.ಮತ್ತು ಧರ್ಮದಿಂದ ಧರ್ಮಕ್ಕೆ ದೇವರನ್ನು ಪೂಜಿಸುವ ರೀತಿಯಲ್ಲಿನ ವ್ಯತ್ಯಾಸಗಳು , ಇವುಗಳ ಬಗ್ಗೆ ಅನಾವಶ್ಯಕ ಚರ್ಚೆಗಳು ತಲೆಮಾರಿನಿಂದಲೂ ಹಾಗು ಈಗಲೂ ನಡೆಯುತ್ತಿರುವದು ನೋಡುತಿದ್ದೇವೆ. ಅಂದರೆ ದೇವರು ಅನ್ನುವ ದೃಷ್ಟಿಕೋನ ಬದಲಾಗಬೇಕಿದೆ.ಶಿವ,ಬ್ರಹ್ಮ,ವಿಷ್ಣು,ಅಲ್ಲ,ಯೇಸು,ಮಹಾವೀರ ಹೀಗೆ ಎಲ್ಲ ದೇವರು ಆಯಾಯ ಧರ್ಮಗಳಿಗೆ ಮಾತ್ರ ಸೀಮಿತ ಅನ್ನುವ ದೃಷ್ಟಿ ಕೊನವೇ ಬದಲಾಗಬೇಕಿದೆ!!!.ಧರ್ಮದ ನಿಜವಾದ ಉದ್ದೇಶ ಹಾಗು ಕಳಕಳಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ!!!.ನಮ್ಮ ದೃಷ್ಟಿಕೋನ ಬದಲಿಸಲು ಎಲ್ಲ ಧರ್ಮಗಳ ಸ್ವಲ್ಪ ತಿಳುವಳಿಕೆ ಸಾಕು. ಮನಸ್ಸು ವಿಶಾಲತೆಯನ್ನು ಹೊಂದಿರಬೇಕು ಅಷ್ಟೇ!!!!.ಅಷ್ಟಕ್ಕೂ ದೇವರು ಅಂದರೇನು!!!!?ದೇವರು ಅಂದರೆ ಒಂದು ಶಕ್ತಿ,ಅದಕ್ಕೆ ರೂಪವಿಲ್ಲ,ಆಕಾರವಿಲ್ಲ,ಅದು ನಮ್ಮಲ್ಲೇ ನಮ್ಮ ಸುತ್ತಲು ಇರುವಂತದ್ದು.ದೇವರ ಕಡೆ ನಡೆಯುವಂತದ್ದು ಅಂದರೆ ಸತ್ಯ ,ಜ್ಯಾನದ ಕಡೆಗೆ ನಡೆಯುವ ಹಾದಿ.ಅದನ್ನೇ ಪೂಜೆ ಪ್ರಾರ್ಥನೆ ಅನ್ನುವದು.ಎಲ್ಲಾ ಧರ್ಮದ ದೇವರ ಕಲ್ಪನೆಯೂ ಇದೆ ಅಂದರೆ ಬೌತಿಕವಾಗಿ ಕಾಣದ ಅಗೋಚರ ವಸ್ತು.ಇದೇನಪ್ಪ ಮೂರ್ತಿ ಪೂಜೆ ಮಾಡುವ ಹಿಂದೂ ಧರ್ಮದಲ್ಲಿ ಹುಟ್ಟಿ ದೇವರು ಆಕಾರವಿಲ್ಲದವನು ಅನ್ನುತ್ತಾನೆ ಇವನು ಅನ್ನುವ ಪ್ರಶ್ನೆ ನಿಮ್ಮದೇ ಹಾಗಾದರೆ ಮುಂದೆ ಓದಿ.

ಮೂರ್ತಿ ಪೂಜೆ ಶಂಕಾಚಾರ್ಯರು ಹಿಂದೂ ಸನಾತನ ಧರ್ಮಕ್ಕೆ ತಂದಿದ್ದು.ಇದಕ್ಕಿಂತಲೂ ಮುಂಚೆ ಅಗ್ನಿಯ ಉಪಾಸನೆ ಹಾಗು ಆ ಮುಲಕ ದೇವರಿಗೆ ಹವಿಸ್ಸನ್ನು ಅರ್ಪಿಸುವ ಕ್ರಮವಿತ್ತು.ಅದು ಅತಿರೇಕಕ್ಕೆ ತಲುಪಿ ಯಜ್ಞ ಯಾಗದಿಗಳ ಮುಲಕ ನರಬಲಿ,ಪ್ರಾಣಿಬಲಿ ವರೆಗೆ ತಲುಪಿತೋ ಅವಾಗ ಜನ ಭೌದ ಮತದತ್ತ ಹೋಗತೊಡಗಿದರು.ಆಗ ಶಂಕರಾಚಾರ್ಯರು ಸನಾತನ ಧರ್ಮದ ಉಳಿವಿಗಾಗಿ ಮೂರ್ತಿ ಪೂಜೆ ತಂದಿದ್ದು.ಅದು ಕೂಡ ತೀರ ಮುಡತೆಯತ್ತ ಈಗ ತಿರುಗುತ್ತಿರುವದು ವಿಪರ್ಯಾಸವೇ ಸರಿ.ಹಾಗಾದರೆ ಶಂಕರಾಚಾರ್ಯರು ಭೌದ ಮತದತ್ತ ಜನ ಹೋಗದಂತೆ ತಡೆಯಲು ಮೂರ್ತಿ ಪೂಜೆ ಬಳಕೆಗೆ ಯಾವ ಉದ್ದೇಶದಿಂದ ತಂದಿರಬಹುದು ಎಂಬುದನ್ನು ತಿಳಿಯಲು ಹೊರಟಾಗಲೇ ದೇವರು ಅನ್ನುವ ಕಾನ್ಸೆಪ್ಟ್ ಬಿಚ್ಚಿಕೊಳ್ಳುವದು.ಮೂರ್ತಿ ಪೂಜೆಗಿಂತ ಮೊದಲು ಅಗ್ನಿಯನ್ನು ಪೂಜಿಸುತಿದ್ದರು ಯಾಕೆ?ಮೂಲ ಅಗ್ನಿ ಅನ್ನುವದು ನಿರಾಕರ, ಕಣ್ಣಿಗೆ ಕಾಣದ್ದು.ಅದಕ್ಕೆ ಯಾವಾಗ ಮಾಧ್ಯಮಗಳನ್ನು ಕಲ್ಪಿಸಿಕೊಡುತ್ತೆವೋ ಅವಾಗ ಅದು ಬೆಂಕಿ ರೂಪ ತಾಳುವದು.ಆ ಬೆಂಕಿಯ ರೂಪ ಹಲವು ಆದರೆ ಮೂಲ ಮಾತ್ರ ಒಂದೇ.ಅದೇ ರೀತಿ ದೇವರು ಅನ್ನುವ ನಿರಾಕಾರ ,ಕಣ್ಣಿಗೆ ಕಾಣದ ಶಕ್ತಿಯನ್ನು ಪುಜಿಸಲಿರುವ ಮಾಧ್ಯಮವಾಗಿ ಮೂರ್ತಿ ಪೂಜೆ ಜಾರಿಯಾಗಿತ್ತು.ತನ್ಮೂಲಕ ಪೂರ್ಣ ಜ್ಯಾನ,ಸತ್ಯದ ಅರಿವನ್ನು ಪಡೆಯಲು ಅದರದೇ ಅದ ಪೂಜಾ ಕ್ರಮ ರೂಪುಗೊಂಡಿತ್ತು .ಇದು ಹಿಂದೂ ಧರ್ಮ ಬಗ್ಗೆ ಆದರೆ, ಇಸ್ಲಾಂ ದೇವರು ನಿರಾಕರ ಅನ್ನುತ್ತ ಆ ನಿರಾಕರತೆಯನ್ನೇ ಪೂಜಿಸುತ್ತಾರೆ.ಕ್ರಿಸ್ತಿಯನ್ನ್ ಧರ್ಮಕ್ಕೆ ಬಂದರೆ ಪ್ರಭುವಿನ ರೂಪವಾಗಿ ನನ್ನನ್ನು ಪೂಜಿಸಿ ಅಂತ ಕ್ರಿಸ್ತ ನಿರಾಕರತೆಯತ್ತ ಬೆಟ್ಟು ಮಾಡುತ್ತಾನೆ.ಹೀಗೆ ಎಲ್ಲ ಧರ್ಮ ಕೂಡ ದೇವರನ್ನುವದನ್ನು ನಶ್ವರ ದತ್ತ ಬೆಟ್ಟು ಮಾಡುತ್ತದೆ.ಅಂದರೆ ಎಲ್ಲ ಧರ್ಮದ ದೇವರು ಒಬ್ಬನೇ ಅಂತಾಯ್ತು.

ಇನ್ನು ದೇವರು ನಂಬಿಕೆಯಲ್ಲಿ ಆಸ್ತಿಕರು, ನಾಸ್ತಿಕರು ಅಂದವಾಗ ಇವರನ್ನು ವಿಶ್ಲೇಷಿಸುವದು ಎಂತು.ನನ್ನ ಪ್ರಕಾರ ಕೆಳಗಿನಂತೆ
ಎಲ್ಲರೂ ಏನನ್ನೋ ಯಾವಾಗಲು ಹುಡುಕಾಡುತ್ತಲೇ ಇರುತ್ತಾರೆ.ಅದು ವಸ್ತುಗಳನ್ನೂ ಅಥವ ವಸ್ತುವಲ್ಲದ ಮಾನಸಿಕ ವಿಚಾರ ಇರಬಹುದು!!ಈ ನಿರಂತರವಾದ ಹುಡುಕುವಿಕೆಯ ಉದ್ದೇಶ ಶಾಂತಿಯನ್ನು ಸಮಾಧಾನವನ್ನೂ ಹಾಗು ಸಂತೋಷವನ್ನು ನಮ್ಮದಾಗಿಸಿಕೊಳ್ಳುವದು.ತಪ್ಪು ಒಪ್ಪುಗಳ ಆಲೋಚನೆ ಇದರ ಜೊತೆಯಲ್ಲಿ ಪ್ರಾಪಂಚಿಕವಾದ ವ್ಯವಹಾರಿಕ ಚಿಂತನೆ.ಇವುಗಳ ನಡುವೆ ಸಂಧಿಘ್ದತೆ ವಿಪ್ಲವಗಳು ವಿವಾದಗಳು ಸಂಘರ್ಷಗಳ ಸರಮಾಲೆ!!!ಇವಲ್ಲವನ್ನೂ ದಾಟಿ ಹೋದರೆ ಮತ್ತೆ ನಾನು ಯಾರು ಎಂಬ ಪ್ರಶ್ನೆ ನಿರಂತರವಾಗಿ ಕಾಡುವುದು.ಇವಲ್ಲವೂ ನಶ್ವರ ನಾನು ಎನ್ನುವುದು ದೇಹ ದೇಶ ಕಾಲ ವನ್ನೂ ಮೀರಿರುವಂಥದ್ದು ಎಂಬ ಸತ್ಯದ ಕಡೆಗೆ ಪ್ರಯಾಣ ನಮಗೆ ಅರಿವಿದ್ದೋ ಇಲ್ಲದೆಯೋ ನಡೆಯುತ್ತಲೇ ಇರುತ್ತದೆ!!!!!ಈ ಅರಿವಿಗೆ ಧರ್ಮದ ನೆಲಗಟ್ಟಿನಲ್ಲಿ ಸಾಗುವವರನ್ನು ಆಸ್ತಿಕರು ಹಾಗು ತಮ್ಮದೇ ವಿದಾನದಲ್ಲಿ ಪ್ರಕೃತಿ ಶಕ್ತಿ ಯನ್ನು ನಂಬಿಕೊಂಡು ಸಾಗುವವರನ್ನು ನಾಸ್ತಿಕರು ಅನ್ನಬಹುದು.ಅಂದರೆ ಇಬ್ಬರ ಪಯಣವು ಒಂದೇ ಗಮ್ಯದೆಡೆಗೆ.ಸಾಗುವ ದಾರಿಯಲ್ಲಿ ಯಾಡವಟ್ಟು ಮಾಡಿಕೊಳ್ಳುವ ಸಂಭವ ಎರಡು ದಾರಿಯಲ್ಲಿವೆ.ನಾಸ್ತಿಕರಾಗಲಿ, ಅಸ್ತಿಕರಾಗಲಿ ಒಂದು ಶಕ್ತಿಯನ್ನು ನಂಬುವದು ಸತ್ಯ.ಅದು ದೇವರು ಅಂತ ಹೆಸರಿರುವದು ಅಗಬೇಕಂತಿಲ್ಲ. ನಾನು ಯಾರು ಅನ್ನುವದಕ್ಕೆ ಉತ್ತರ ಸಿಕ್ಕಿದಲ್ಲಿ ಅದು ಮೋಕ್ಷ ಅಥವಾ ಪಯಣದ ಕೊನೆ.ಅವ ಕಂಡುಕೊಂಡ ವಿಚಾರಗಳ ಸಾರವೇ ಅವನ ಆತ್ಮ.ಆತ್ಮದ ಮರುಹುಟ್ಟು ಅಂದರೆ ಅವನ ವಿಚಾರಗಳ ಮರು ಹುಟ್ಟು ಅನ್ನುವದು ಅರ್ಥ.ಇವೆಲ್ಲ ಗೊಂದಲಗಳ ನಿವಾರಣೆಗೆ ಮೊದಲು ಮನುಜರಾಗಬೇಕಾಗುತ್ತದೆ.ಕವಿ ಕುವೆಂಪು ರವರ ವಿಶ್ವ ಮಾನವ ಸಂದೇಶ ಇವುಗಳನ್ನೆಲ್ಲ ಸಾದಿಸುವದಿಕ್ಕಿರುವ ಸುಲಭ ಪರಿಹಾರ.ಮುಂದೆ ಈ ಬಗ್ಗೆ ಸಾದ್ಯವಾದರೆ ಬರೆದುಕೊಳ್ಳುತ್ತೇನೆ. 

ನಿಮ್ಮವ...............
ರಾಘವೇಂದ್ರ ತೆಕ್ಕಾರ್