ನಿಮ್ಮ ಸಣ್ಣ ಮೈಮುರಿತವೂ
ನೋವು-ಕದಲಿಕೆಯೂನನ್ನ ಹೃದಯ ಬಡಿತದ
ಏರಿಳಿತದಿಂದ ನನ್ನದೆ ಸನಿಹ
ಆದರೂ ಒಮ್ಮೊಮ್ಮೆ..........
ನನ್ನೊಳಗೆ ಇಬ್ಬಂದಿತನ!.
ನಿಮ್ಮೆದೆಗೆ ಕಿವಿಯಾನಿಸುತ್ತೇನೆ
ಮನದೇರಿಳಿತವ ಅರಿಯುತ್ತೇನೆ
ಆದಾಕೊ ಏನೋ ನಿಮ್ಮೊಂದಿಗೆ
ನನ್ನೆಲ್ಲಾ ಭಾವನೆಗಳು ತಾಳೆಯಾಗುತ್ತೆ
ನಿಮ್ಮ ಹೃದಯ ಬಡಿತದ ತಾಳದಲ್ಲೆ
ನಾನು ಮಿಡಿಯುತ್ತಿರುತ್ತೇನೆ.
ನನ್ನೊಳಗೆ ಆಗಾಗ್ಗೆ ಬೆಳೆವ
ಇಬ್ಬಂದಿತನದ ಬಗ್ಗೆ ಯೋಚಿಸುತ್ತೇನೆ
ಯಾಕೆಂದು ಉತ್ತರ ಸಿಗದಾಗ
ನಿಮ್ಮ ತೊಡೆಯನ್ನೆ ದಿಂಬಾಗಿಸಿ
ಹಿತ ನೇವರಿಕೆಯ ಆಸೆಯಲ್ಲಿ ಮಲಗಿರುತ್ತೇನೆ
ನಿರೀಕ್ಷೆಗೂ ಮೀರಿದ ತಂದೆ ಪ್ರೀತಿ
ಸಿಕ್ಕಾಗ ನನ್ನ ಕಣ್ಣು ಮನದ ತುಂಬಾ ಗಾಢ ನಿದ್ರೆ.
ನನ್ನ ಬಿಟ್ಟು ಹೆಜ್ಜೆ ಮುಂದಿಟ್ಟರೆ ಚಿಂತೆಯಿಲ್ಲ,
ನಾ ನಿರ್ಧರಿಸಿಯಾಗಿದೆ.........
ಕೈ ಆಸರೆ ಸಿಕ್ಕರೆ ಜೊತೆಗೆ ನಡೆಯುತ್ತೇನೆ
ಇಲ್ಲವಾದರೆ ನೀವು ನಡೆದ ಹೆಜ್ಜೆ ಗುರುತು
ಹುಡುಕಿ ಅದೆ ಹೆಜ್ಜೆ ಮೇಲೆ
ಹೆಜ್ಜೆಯಿಟ್ಟು ಹಿಂಬಾಲಿಸುತ್ತೇನೆ,
ನಾ ಬೆನ್ನು ಬಿದ್ದ ಬೀತಾಳನಲ್ಲ!
ನಕ್ಷತ್ರಿಕನಂತೂ ಅಲ್ಲವೇ ಅಲ್ಲ!
ನಾನು ನನಗಾಗಿ ನಿಮ್ಮ ಹಿಂಬಾಲಕ
ಎಚ್ಚರ ನಾನು ಅದರ ಗೊಡವೆ ನಿಮಗೆ ಬರದಷ್ಟು
ಹೆಜ್ಜೆ ಸದ್ದು ಅಹಿತವಾಗಿ ಮಾರ್ದನಿಸದಷ್ಟು.
ನಿಮ್ಮಲ್ಲಿ ನಾ ಮಗುವಾಗುವದ ಕಲಿತೆ
ಹಮ್ಮ ಬಿಮ್ಮುಗಳ ಬೀಸಿ ಎಸಿಯುವದ ಕಲಿತೆ
ನಾ ಮೌನದಲ್ಲೆ ನಿಮ್ಮೊಡೆ ಮಾತನಾಡಬಲ್ಲೆ
ಮನುಷ್ಯ ಸಂವೇದನತೆಗಳ ಅರಿಯಬಲ್ಲೆ
ಹೃದಯದೊಳಗೆ ಅದಾಕೊ ಒಂದು ಸ್ಥಾನ
ನಿಮಗಾಗಿ ಮೀಸಲಿಟ್ಟಾಗಿದೆ....!!!
ತಾಳೆಯಾಗುವ ನಮ್ಮೀರ್ವವ ಹೃದಯ ಬಡಿತವ
ಸಂಬಂಧಗಳೊಡೆ ವಿಶ್ಲೇಷಿಸಬಹುದಾದ್ದು
ಅಪ್ಪಟ ತಂದೆ- ಮಗನ ಪ್ರೀತಿ
ಇನ್ನೇನೂ ಬೇಕು,ಈ ಜನ್ಮಕ್ಕಿಷ್ಟು ಸಾಕು.
No comments:
Post a Comment