Thursday, July 26, 2012

ಬದುಕ ಮುಂದಿನ ಹೆಜ್ಜೆ


ಬಾಲ್ಯವೆಂಬುದು ಸೈಕಲ್ ಚಕ್ರ
ಹಿಡಿಕೋಲನ್ನೆ ಸಾಧನವಾಗಿಸಿ
ಓಡಿಸುವದೂ ಸಲೀಸಾಗಿ.
ಆದರೆ ಬೆಳೆಯುತ್ತಾ ಬಂದು ನಿಂತಿದೆ ಬದುಕು
ಹೋಲಿಸಬಹುದಾದ ಲಾರಿ ಚಕ್ರಕ್ಕೆ
ಓಡಿಸಬೇಕೂ ಬರೀಯ ಕೈಯನ್ನೆ ಸಾಧನವಾಗಿಸಿ
ಬದುಕನ್ನೆ ಮುಡುಪಾಗಿಸಿ.



ಮದುವೆಯೆಂಬ ಇಳಿಜಾರು ಮುಂದಿದೆ
ಸೈಕಲ್ ಚಕ್ರವನ್ನಾದರೆ ದಕ್ಕಿಸಿಬಿಡುತಿದ್ದೆ, ಆದರೆ
ಸಲೀಸಲ್ಲ ಲಾರಿ ಚಕ್ರ ಇಳಿಜಾರಿನಲ್ಲಿ ಇಳಿಬಿಡೋದು
ವೇಗ ನಿಯಂತ್ರಿಸಲು ಗೋಡೆ ಕಟ್ಟೆಗಳಿರಬೇಕು ,.
ನಿಯಂತ್ರಣವಿಲ್ಲದೆ, ಚಕ್ರದೊಂದು ದಿಕ್ಕು
ನಾನೋಂದು ದಿಕ್ಕಿಗೆ ಹೊರಳುವದನ್ನು ತಡೆಯಲು
ಎಡತಾಕುತ್ತಿರಬೇಕು ಹಿರಿಕರ ಮಾತಿನೊಲುಮೆಯನ್ನ.

ಗೋಡೆ ಕಟ್ಟೆಗಳೂ ಕೊಲ್ಲುವದಿಲ್ಲ
ಬದಲಾಗಿ ನೋವ ತಂದರೂ, ನಮ್ಮನ್ನೆ ತಿರುಚಿ
ನೆಟ್ಟಗೊಳಿಸಿ, ಸಂಬಂಧಗಳ ಅರಿವನ್ನು
ತಂದೀಯುವ ತಾಕತ್ತು ಅದರೊಳಗಿದೆ
ಇದು ನಮ್ಮ ನರವ್ಯೂಹದ ಒಳಹೊಕ್ಕಷ್ಟು....
ಮೊಳಕೆಯೊಡದೀತು ಹಸಿರ ಭವಿಷ್ಯದ ಬಾಳು

ಅಷ್ಟಕ್ಕೂ ನೋವಾದರೇನಂತೆ ನೆತ್ತಿ ಸವರಿ
ನೋವ ಹೀರಲು ನನ್ನದೆ ಜೀವವೊಂದು ಬರುವಾಗ
ಸ್ವೀಕರಿಸಬೇಕು ನಾಜೂಕಾಗಿ ಒರಟು ಮುರಿದು
ತೋರಬೇಕು ನಾಜೂಕುತನವನ್ನ ಇವಳೊಡೆ
ಕಾರಣ ಮುಂದೆ ನಾನವಳ ಕೂಸು,
ಅವಳೋ ತಾಯ ಪ್ರೀತಿಯನ್ನೀವ ನನ್ನದೆ ಜೀವ.

ಮಾತು ಸ್ವೀಕರಿಸುವ ಕಲೆಯರಿತಾಗ
ಯಾವೂದೋ ವ್ಯೂಹ,ಯಾರದ್ದೋ ನಡೆ
ಎಂಭ ಅನುಮಾನಗಳು ನನ್ನ ಎಡತಾಕುವದಿಲ್ಲ
ಹೊಸ ಬದುಕನ್ನೊಂದು ಮೆಚ್ಚುವಂತೆ ಬದುಕೋದಷ್ಟೆ
ಗುರಿಯಾದಾಗ ಮಾತಿನ ಅಪಮಾನಗಳಿಗೆ ಇಲ್ಲಿ ತಾವಿಲ್ಲ

ಇವಳೋ ಅಂಗೈ ಮೇಲೆ ಗುಲಾಬಿ ಹೂವ ಗಿಡ ನೆಟ್ಟಿದ್ದಾಳೆ
ಹೂವುಗಳನ್ನಷ್ಟೆ ಆಯ್ದು ಹೃದಯದಿ ಪೋಣಿಸುತ್ತಿರುವೆ
ಮುಳ್ಳುಗಳು ಇದೆಯೆಂದು ಹೂವ ತ್ಯಜಿಸುವದೆಂತು.
ಹೂವ ತುಂಬಾ ತುಂಬಿದ ಪ್ರೇಮದ ಘಮಲನ್ನೆ
ಬದುಕ ಪೂರ್ತಿ ಉಸಿರಾಡಿ ಬಿಡುತ್ತೇನೆ
ಮುಳ್ಳು ಚುಚ್ಚಿದರೆ ಆಸರೆಗೆ ಒಬ್ಬರೊಬ್ಬರಿದ್ದಾಗ
ಮುಳ್ಳಿನ ಬಗ್ಗೆ ಫಿಕರ್ ನಹಿ.

ಮನುಷತ್ವವೆಂಬೊ ಅಮಲೊಳಗೆ ಕೊಲ್ಲು ಬಡಿ
ಕಫಾಲ ಮೋಕ್ಷದ ಮಾತು ಬರದು ನನ್ನಿಂದ
ಬದುಕೆಂಬ ಲಾರಿ ಚಕ್ರಕ್ಕೆ ತೇರ ಕಟ್ಟಿ
ಅದರಲ್ಲಿ ಇವಳನ್ನೆ ಕೂರಿಸಿ ಬದುಕ ನಡೆಸಿ ಬಿಡುತ್ತೇನೆ
ಅದ ನೋಡಿ,ಮನತುಂಬುತ್ತಾ ,
ಹೊಸ ಬದುಕಿಗೆ ಮುನ್ನುಡಿಯನಿತ್ತ
ಕಟ್ಟೆ ಗೋಡೆಗಳು ನೆಮ್ಮದಿಯ ಉಸಿರಾಡಲಿ.
ಆ ನೆಮ್ಮದಿಯಲ್ಲೆ ನನ್ನ ನೆಮ್ಮದಿಯನ್ನ ದಕ್ಕಿಸಿಕೊಳುವೆ.

No comments:

Post a Comment