ಅದೊಂದು ಪಯಣದ ಹರಳು ಕಲ್ಲಿನ ಹಾದಿಯಲ್ಲಿ ಜೋಪಾನವಾಗಿ ಅಂಗೈ ಹಿಡಿದು ನಿನ್ನ ಕರೆದೊಯ್ಯುತ್ತಿರುವಾಗ ಅಯಾಸದಿಂದ ನೀನು ಉಸ್ಸಂತ ಉಸಿರೆತ್ತಿ ಕೂತಿದ್ದೆ,ಚಪ್ಪಲಿ ಇಲ್ಲದ ಕಾಲ ತುಂಬಾ ಬೊಬ್ಬೆಗಳ ಮರೆಮಾಚಿ ಮಣ್ಣು ಮೆತ್ತಿಕೊಂಡಿದ್ದೆ,ನೀರ ಉಣಿಸಿ ದಾಹ ತೀರಿಸೋಣವೆಂದು,ಅಲ್ಲೆ ಪಕ್ಕದಲ್ಲೆ ಕಲ್ಲು ಬಂಡೆ ಮೇಲೆ ಕೂರಿಸಿ ಹಳ್ಳದ ಕಡೆಗೋಡಿ ತೆಕ್ಕೆ ಎಲೆಯನ್ನೆ ಬಟ್ಟಲು ಮಾಡಿ ಹರಿಯುವ ಆ ನೀರನ್ನು ತುಂಬಿಕೊಂಡು ಬರುತ್ತಿರಬೇಕಾದರೆನೆ ಎಕ್ಕದ ಹೂವೊಂದನ್ನು ಕಿತ್ತು ತಂದಿದ್ದೆ, ಇನ್ನೇನೂ ನೀರು ಕುಡಿದು ದಾಹ ತೀರಿ ನಿನ್ನ ಮುಖದಲ್ಲಿ ನಗು ಒಸರುತ್ತೆ ಅನ್ನೋ ಹೊತ್ತಲ್ಲೆ ಎಕ್ಕದ ಹೂವ ಫಟ್ ಅನಿಸಿ ತುದಿ ಮುರುದು ಬಟ್ಟಲು ತುದಿಯನ್ನೂ ನಿನ್ನ ಮೂಗುತಿಯಾಗಿಸಿ ನಿನ್ನ ಮುಗುಳ್ನಗೆಗೆ ಕಾದಿದ್ದೆ, ಒಸರಿದ ಮೂಗುತಿಯೊಂದಿಗಿನ ಆ ನಿನ್ನ ನಗು ನನ್ನ ಮನ ತುಂಬಿ ಅಯಾಸ ನೀಗಿತ್ತು.
ಹಾದಿ ಹತ್ತಿರದ್ದೇನಲ್ಲ, ಸಾಗಬೇಕಾದ ದೂರ ಬಹಳಿಷ್ಟಿತ್ತು ಅಲ್ವಾ?ಒಂದು ಅರ್ಧ ದಾರಿಯಷ್ಟೆ ಕ್ರಮಿಸಿಯಾಗಿತ್ತು, ದಾರಿಯುದ್ದಕ್ಕೂ ನೀನು ಕೇಪುಳ ಹೂವ ಕೊಯ್ದು ತುಟಿಗಾನಿಸಿ ಸಿಹಿ ಚೀಪಿ ಎತ್ತೆಸಿದದ್ದನ್ನೆ ಆಯ್ದೂಕೊಂಡು ನಿನಗೆ ಗೊತ್ತಿಲ್ಲದಂತೆ ಚೀಲ ತುಂಬಿಸಿದ್ದೆ,ಹಾರವಾಗಿ ಪೋಣಿಸುವದಕ್ಕಾ ಎತ್ತಿ ಆಯ್ದುಕೊಂಡಿದ್ದು??ಏನಕ್ಕೆ ಅನ್ನೋದು ನನಗೆ ಗೊತ್ತಿರಲಿಲ್ಲ ಆದರೂ ನಿನ್ನ ಹಿಂದೆಯೆ ನಿನ್ನ ಹೆಜ್ಜೆಯಾನಿಸಿ ನಡೆಯೋದು, ಕಠಿಣ ಹಾದಿಯಲ್ಲಿ ಕೈ ಹಿಡಿದು ನಡೆಯೋದು, ನಿನ್ನ ಜೊತೆ ಜೊತೆಯಾಗಿದ್ದುದೆ ಮುದ ಕೊಡುತಿದ್ದ ಕ್ಷಣಗಳವೂ, ಕಲ್ಲು ದಾರಿ ಮುಗಿದು ಗದ್ದೆ ಏರಿ ಮೇಲೆ ಮುಂದಿನ ದಾರಿ ಅಂದಾಗ ಮತ್ತೆ ಅದೆ ಜೋತಾಟ ಸಮತೋಲಿತ ನಡಿಗೆ,ಏರಿ ಪಕ್ಕದ ಎರಡೂ ಬದಿಯ ನೀರ ಮಿಳಿತದ ಗಾಳಿ ಪಾದದಿಂದಲೆ ಚಳಿಯೇರಿಸುತಿತ್ತು ದೇಹ ತುಂಬಾ.ನಿನಗೆಲ್ಲಿತ್ತೋ ಆ ಶಕ್ತಿ ಮೈಯೆಲ್ಲಾ ಗಾಳಿ ತುಂಬಿದಂತೆ ಓಡೆ ಬಿಟ್ಟೆ ನಾನೂ ನಿನ್ನ ಅನಿರೀಕ್ಷಿತ ಈ ನಡಿಗೆಯ ಹಿಂಬಾಲಿಸಿ ಸಮತೋಲನ ತಪ್ಪಿ ಗದ್ದೆ ಕೆಸರಲ್ಲಿದ್ದೆ, ಮೈ ಮುಖದ ಕೆಸರು ತುಂಬಿ ಕಣ್ಣೊರೆಸಿಕೊಂಡು ನಿನ್ನೆದುರು ನಿಂತಾಗಲೆ ನೀ ನನ್ನ ನೋಡಿ ಹೊಟ್ಟೆ ತುಂಬಾ ಬಿದ್ದೂ ಬಿದ್ದೂ ನಕ್ಕಿದ್ದು.ನಾನೂ ನಕ್ಕೆನಾ?ಉಹೂಂ ನೆನಪಿಲ್ಲ.
ಹಾದಿ ಕ್ರಮಿಸುತಿದ್ದಂತೆ ಅದೆಕೊ ನೀನೂ ಚೂರು ಚೂರು ಬದಲಾಗುತ್ತಾ ನಡೆದೆ, ಆಯಾಸವಿರಬೇಕೆಂದೂ ನಾನೂ ಸುಮ್ಮನಾದೆ,ಚೇಪೆ ಕಾಯಿ ಕಿತ್ತು ಹಸಿವ ನೀಗಿಸ ನಾ ಹೊರಟೆ ನೀನು ತಿಂದಿದ್ದು ಕಾಲು ಎಸೆದಿದ್ದು ಮುಕ್ಕಾಲು ಯಾಕೊ ಆ ಎಸೆತ ನನ್ನ ಮುಖಕ್ಕೆ ಎಸೆದಂಗಿತ್ತು.ಆದರೂ ನಿನ್ನ ಮೊಗದಲ್ಲಿ ಕಿರು ನಗು,ಅದ ನೋಡಿ ಸಂಶಯಕ್ಕೆ ಮದ್ದಿಲ್ಲವೆಂದು ನನಗೆ ನಾನೆ ಅಂದುಕೊಂಡೆ ಕಾರಣ ನಿನ್ನ ನಗೆಯಲ್ಲಿ ನನಗೆ ಕಪಠ ಕಾಣೋ ಕಠೋರತೆ ಬಂದಿರಲಿಲ್ಲ.ನೀನೊಮ್ಮೆ ಎಡವಿದೆ ಮಾಮೂಲಿನಂತೆ ಕೈ ಚಾಚಿದೆ ಇಲ್ಲಾ ನನ್ನತ್ತ ನೀನು ತಿರುಗಿಯೂ ನೋಡಲಿಲ್ಲ, ಏನಾಯ್ತೂ ನಿನಗೆ?? ಊಹೂಂ ಅರ್ಥವಾಗುತ್ತಿಲ್ಲ, ಬಹಳಷ್ಟು ಕ್ರಮಿಸಿದ ಹಾದಿ ಮುಂದೆ ಕಿಂಚಿತ್ತೂ ಆದರೆ ಅದೂ ಧೀರ್ಘವಾಗಿ ಅನಿಸತೊಡಗಿತು, ಹೀಗಿರಬೇಕಾದರೆನೆ ನಾವು ಆ ಡಾಂಬಾರು ರಸ್ತೆ ತಲುಪಿದ್ದು ಅಲ್ಲಿ ನಮಗಾಗಿ ಕಾರೊಂದು ಕಾಯುತಿದ್ದುದು ನೀನು ನಾನು ಅದನೇರಿದ್ದು, ಸಾಗಿದ ಕಾರು ಯಾರದೋ ಮನೆಯಂಗಳದಲ್ಲಿ ನಿಂತಿದ್ದು,ನೀನು ಜಿಂಕೆಯಂತೆ ಕಣ್ಣಂಚನ್ನು ಸರಿದು ಮನೆಯೊಳು ಸೇರಿದ್ದೆ,ನಾನಿನ್ನೂ ಅಂಗಳದಲ್ಲಿ ಒಂದು ತಿಳಿಯದೆ ಬಾನ ದಿಟ್ಟಿಸಿ ನಿಂತಿದ್ದೆ, ನಾವೂ ಈ ಊರ ತೊರೆಯೋಣ ಎಲ್ಲಾದರೂ ದೂರ ಹೋಗಿ ಹೊಸ ಜೀವನ ಪ್ರಾರಂಭಿಸೋಣ,ನನ್ನ ಹೊಸ ಜೀವನಕ್ಕೆ ಸಾಥ್ ಕೊಡುತ್ತೀಯಾ? ಎಂದಾಗ ದೂಸ್ರಾ ಮಾತಾಡದೆ ಉಟ್ಟ ಬಟ್ಟೆಲೆ ನಿನ್ ಜೊತೆ ಹೊರಟು ನಿಂತಿದ್ದೆ ನಿನ್ನಂಗೆ, ಆದರೆ ಇಲ್ಲೇನಾಗ್ತಿದೆ ನಾನು ಪರಕೀಯಾ ಎಂಬ ಭಾವನೆ ಅದಾಕೆ ನನ್ನೊಳಗೆ ಗಿರಕಿ ಹೊಡಿತಿದೆ ಉಹೂಂ ತಿಳಿಯದೆ ನಿಂತೆ ಇದ್ದೆ.ಸುಮ್ಮನೆ ಹಂಗೆಲ್ಲಾ ಭಾವನೆಗಳೂ ಹುಟ್ಟಲಾರವೂ ಎಂದುಕೊಳ್ಳುತ್ತಿರಬೇಕಾದರೆನೆ ಮತ್ತೆ ಕಿಲ ಕಿಲ ನಿನ್ನ ನಗೂ ಸಾಥ್ ಗೆ ಮತ್ತೊಂದು ಗಂಡು ಗಡಸು ನಗು ಕಿವಿಗೆ ರಪ್ಪಂತ ಬಡಿದಿದ್ದು, ಆಗಲೆ ನನಗೆ ಮಿಂಚಿನ ಆಘಾತ ನಿಂತಲ್ಲೆ ಗರ ಬಡಿದು, ಮನೆ ಹೊರಗೆ ಬಂದ ನೀನು ಸಂಪೂರ್ಣ ಬದಲಾಗಿದ್ದೆ , ಲಂಗ ದಾವಣಿ ಬದಲಾಗಿ ಜೀನ್ಸ್ ಟೀ ಶರ್ಟ್ ಚಪ್ಪಲಿ ಇಲ್ಲದ ಪಾದಕ್ಕೆ ಹೈಹೀಲ್ಡ್ ಆಕ್ರಮಿಸಿತ್ತು,ನಿನ್ನಾಸರೆಗೆ ಅವನ ತೋಳ್ಗಳಿತ್ತು,ಈತನನ್ನೂ ಸೇರಿಸೋದಕ್ಕೆ ಸಹಕರಿಸಿದ್ದಕ್ಕೆ ಥ್ಯಾಂಕ್ಸ್ ಎಂಬ ಒಂದೆ ಪದವಾಖ್ಯವನ್ನುಸುರಿ ಮತ್ತೆ ಕಾರೇರಿದ್ದಿ ಮುಂದಿನ ಪಯಣಕ್ಕೆ ನೀ ಆತನ ಜೊತೆ ಸಿದ್ದಗೊಂಡಿದ್ದಿ, ನಾನೂ ಗುಡುಗು ಬಡಿಸಿಕೊಂಡವನಂತೆ ಹೆಜ್ಜೆಯ ಮರೆತು ಅದಾರದೊ ಮನೆಯಂಗಳದಲ್ಲೆ ಕುಸಿದಿದ್ದೆ,ಕಾರು ಸ್ಟಾರ್ಟ್ ಆಗೋ ಭರದಲ್ಲಿ ರಾಚಿದ ದೂಳು ಮತ್ತೆ ಮುಖ ಸವರಿತ್ತು.ನಾನು ನನ್ನ ಗುರುತನ್ನೆ ಮರೆತ ಕ್ಷಣ.ಆ ಪರಿಸ್ಥಿತಿಯಲ್ಲೂ ಗಟ್ಟಿಯಾದ ಒಂದು ನಿರ್ಧಾರ ಮೂಡಿದ್ದು ಏನೆಂದರೆ ನಾನಿನ್ನೂ ಏಮಾರಬಾರದೂ ಈ ಏಮಾರುವಿಕೆಯ ಶಕೆ ನನ್ನ ಜೀವನದಲ್ಲಿ ಇಂದಿಗೆ ಕೊನೆಯಾಗಬೇಕು!!!.ಚೀಲದಲ್ಲಿ ಇವಳು ಚೀಪಿ ಎಸೆದಿದ್ದನ್ನೂ ಆಯ್ದು ಇಟ್ಟುಕೊಂಡಿದ್ದ ಕೇಪುಳದ ಕೆಂಪು ಹೂವು ಬಾಡಿ ಮುರುಟಿ ಕಪ್ಪಗಾಗಿತ್ತು.
ಎಲ್ಲೋ ಸೈಕಲ್ ಬೆಲ್ ಸದ್ದು ಕಿವಿಗೆ ಬಿದ್ದು ಮತ್ತೆ ಸ್ಥಬ್ದ ಒಂದರೆಕ್ಷಣದಲ್ಲಿ ಮನೆ ಕಾಲಿಂಗ್ ಬೆಲ್ಲು ರಿಂಗಣಿಸತೊಡಗಿತು.ಹೌದು ಅದು ನಸುಕು ನಾನಿಷ್ಟೂ ಹೊತ್ತು ಕಂಡಿದ್ದು ಕನಸು, ಹಾಲಿನವನೂ ಬಂದು ಸೈಕಲ್ ಬೆಲ್ ಹೊಡಿಯೋದು ನಾನು ಎದ್ದು ಮನೆಕೆಳಗಿಳಿದು ಬಂದು ಹಾಲು ಪಡೆದು ಬರೋದು ಪದ್ದತಿ, ಇವತ್ಯಾಕೋ ನಾ ಬಾರದ್ದನ್ನು ಕಂಡು ಮನೆ ಬಾಗಿಲಿಗೆ ಬಂದು ಬೆಲ್ ಹೊಡೆದಿದ್ದ, ದಡಬಡಾಯಿಸಿ ಹೊದಿಕೆ ಬಿಸುಟು ಹಂಗಂಗೆ ಬೆಡ್ ಮೇಲೆ ಹರವಿ ಎದ್ದು ಹಾಲಿನವನನ್ನ ಎದುರುಗೊಂಡಿದ್ದೆ.ಅಯ್ಯೋ ಕನಸೂ ಕೂಡ ಏಮಾರೋದೆ ಬೀಳುತ್ತಲ್ಲ, ಹಳ್ಳಿಗನಾಗೆ ಗುರುತಿಸೋದು ನನ್ನ ಕನಸುಗಳಿಗೂ ಇಷ್ಟನೆ ಅಲ್ವಾ ಎಂದು ನೆನೆದು ನಸು ನಗುತ್ತಾ, ನಸುಕಿನಲ್ಲಿ ಬಿದ್ದ ಕನಸು ನನಸಾಗುತ್ತೆ ಅನ್ನೋದು ಯಾರೋ ಹೇಳಿದ್ದು ನೆನಪಾಗಿ...... ನನಸಾಗೊದಿದ್ದರೆ ಕನಸಿನ ಕೊನೆ ನಾ ಏಮಾರುವ ನನ್ನ ಜೀವನದ ಶಕೆ ಇಲ್ಲಿಗೆ ಕೊನೆಯಾಗಲಿ ಎಂಬ ಕನಸ ನಿರ್ಧಾರವೆ ನನಸಾಗಲಿ ಎಂದೆಣಿಸುತ್ತಾ ಜಗ್ ತುಂಬಾ ನೀರೆತ್ತಿ ಮುಖಕ್ಕೆ ಚಿಮುಕಿಸಿದೆ.ವಾಸ್ತವಕ್ಕೆ ಕೊಂಚ ಕೊಂಚವೆ ಹಿಂದುರಿಗಿದೆ ಕನಸ ಕೊನೆಗೆ ಹೊರಳಿದಂತೆ.
ಚಿತ್ರ ಕೃಪೆ :- ಗೂಗಲ್
No comments:
Post a Comment