Thursday, November 1, 2012

ಏನ ಬರೀಯಲಿ ರಾಜ್ಯೋತ್ಸವದ ಬಗ್ಗೆ?

ಕಾವೇರಿ ಬಗ್ಗೆ ಬರಿಯೋದಾ? ಉತ್ತರ ಕರ್ನಾಟಕದ ಬಗ್ಗೆ ಬರೀಯೋದಾ? ಕರ್ನಾಟಕ ಸರ್ಕಾರದ ನಾಡು ನುಡಿಯ ಪರ/ ವಿರೋಧ ಬಗ್ಗೆ ಬರಿಯೋದಾ? ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿ, ಹೈದರಾಬಾದ್ ನಿಜಾಮಗಿರಿ ಬಗ್ಗೆ ಬರಿಯೋದಾ?ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಬರಿಯೋದಾ?ಕರಾವಳಿ ಕರ್ನಾಟಕದ ಬಗ್ಗೆ ಬರಿಯೋದಾ?ಮೈಸೂರು ಸಂಸ್ಥಾನ, ವಿಜಯನಗರದ ಬಗ್ಗೆ ಬರಿಯೋದಾ?ಹೊಸದಾಗಿ ಹುಟ್ಟಿದ ಉತ್ತರ ಕರ್ನಾಟಕ ರಾಜ್ಯ, ಹಳೆಯದಾಗಿ ಹುಟ್ಟಿ ಮುಸುಲಾದ ಕೊಡಗೂ ರಾಜ್ಯದ ಕೂಗೂಗಳ ಬಗ್ಗೆ ಬರೀಯೋದಾ?ಕನ್ನಡ ಭಾಷೆ ಬಗ್ಗೆ ಬರಿಯೋದಾ? ಕರ್ನಾಟಕ ಹಾಗೂ ಕನ್ನಡ ನುಡಿಸಿರಿಗಳನ್ನು ಎತ್ತಿ ಹಿಡಿದ ಕವಿ ಬರಹಗಾರರೂ ಗಣ್ಯರ ಬಗ್ಗೆ ಬರೀಯೋದಾ?ಕನ್ನಡ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಸಂಘಟನೆಗಳ ಬಗ್ಗೆ ಪರ/ವಿರೋಧಗಳ ಬಗ್ಗೆ ಬರೀಯೋದಾ?ಏನ ಬರೀಯಲಿ ಕನ್ನಡ ರಾಜ್ಯೋತ್ಸವದ ಬಗ್ಗೆ? ಹೀಗೆಂದು ಕೇಳಿದ್ದೆ ಗೆಳೆಯನೋರ್ವ ರಾಜ್ಯೋತ್ಸವಕ್ಕೊಂದು ಅಕ್ಷರಗಳ ಕೊಡುಗೆಯೊಂದನ್ನೂ ನೀಡೆಂದಾವಾಗ.ಬರೀ ಸಂಭ್ರಮವನ್ನಷ್ಟೆ ಬರೆಯುವದೂ ನನಗೆ ಸಾಧ್ಯವಿಲ್ಲವೆಂದಾಗ ಇಂತಹದೊಂದು ದ್ವಂದ್ವ ನನ್ನೊಳಗೆ ಕಾಡತೊಡಗಿತು.

ವೈವಿಧ್ಯತೆಯಲ್ಲಿ ಏಕತೆ ಅನ್ನೋದು ದೇಶದ ಮೂಲಮಂತ್ರವಾಗಿದ್ದರೂ ಕೂಡ ಅದೇನೆಂದೂ ತಿಳಿಯಲೂ ದೇಶದ ಉದ್ದಗಲಕ್ಕೂ ತಿರುಗಬೇಕಾದ ಅವಶ್ಯಕತೆಯಿಲ್ಲ ಕರ್ನಾಟಕವನ್ನೊಮ್ಮೆ ಸುತ್ತಿದರೆ ಅದರ ಸ್ಥೂಲ ಪರಿಚಯ ದಕ್ಕಬಲ್ಲುದು. ಸಾಂಸ್ಕೃತಿಕವಾಗಿ,ಭೌಗೋಳಿಕವಾಗಿ,ಜೀವನ ಕ್ರಮಗಳಲ್ಲಿ,ಆಹಾರ ಶೈಲಿಗಳಲ್ಲಿ ಹೀಗೆ ಪ್ರತಿಯೊಂದರಲ್ಲೂ ವೈವಿಧ್ಯತೆಯನ್ನು ಹೊಂದಿರುವ ರಾಜ್ಯ ನಮ್ಮದೂ. ಇಷ್ಟೆಲ್ಲಾ ವೈವಿಧ್ಯತೆಗಳೂ ಇದ್ದರೂ ಭಾವನೀಯವಾಗಿ ಒಟ್ಟಾಗಿ ಹಿಡಿದಿಡಬಹುದಾದ್ದು ಎಂದರೆ ಅದು ನಮ್ಮ ನುಡಿ, ಅದೆ ಕನ್ನಡ.ಬ್ಯಾರಿ, ತುಳು,ಕೊಡವ, ಲಂಬಾಣಿ, ಕೊಂಕಣಿ,ಅಲ್ಲದೆ ಇತರ ರಾಜ್ಯದ ಭಾಷೆಗಳ ಭಾಷಿಕರೂ ಈ ರಾಜ್ಯದಲ್ಲಿ ಇದ್ದರೂ ಕೂಡ ಕನ್ನಡ ಎಂಬ ಐಕ್ಯ ಮಂತ್ರ ಇವರೆಲ್ಲರನ್ನೂ ಒಂದುಗೂಡಿಸಿದೆ ಅಂದರೆ ತಪ್ಪಿಲ್ಲ (ಈ ಮಾತಿನ ಬಗ್ಗೆ ನನ್ನಲ್ಲೆ ಕೆಲ ಭಿನ್ನಾಭಿಪ್ರಾಯ ಇದ್ದು ಸದ್ಯಕ್ಕೆ ಐಕ್ಯ ಮಂತ್ರ ಕನ್ನಡವೆ ಅನ್ನುತ್ತಾ ಮುಂದುವರಿಯುವೆ).ಕನ್ನಡ ಎಲ್ಲಾ ಭಾಷೆಗಳ ರೀತಿಯಲ್ಲಿ ಪ್ರಾದೇಶಿಕವಾಗಿ ಪರಿಸರಕ್ಕೆ ಅನುಗುಣವಾಗಿ ಮಾತನಾಡುವ ಶೈಲಿಗಳು ಬೇರೆ ಬೇರೆ ಯಾಗಿ ವೈವಿಧ್ಯತೆ ಹೊಂದಿದ್ದನ್ನೂ ನೋಡುತಿದ್ದೇವೆ, ಅದೆಷ್ಟರ ಮಟ್ಟಿಗೆ ಅಂದರೆ ದಾವಣಗೆರೆ ಕನ್ನಡ ಹರಿಹರದ್ದಲ್ಲ, ಹರಿಹರದ ಕನ್ನಡ ರಾಣಿಬೆನ್ನೂರಿನದ್ದಲ್ಲ ಆದರೆ ಈ ಊರುಗಳು ಬೆಸೆದಿರೋದು ಬರೀಯ ೫೦ ಕಿ ಮೀ ಮದ್ಯದಂತರದಲ್ಲಿ.ಹುಬ್ಬಳ್ಳಿ- ಧಾರವಾಡ ಕನ್ನಡ, ಶಿವಮೊಗ್ಗ ಕನ್ನಡ, ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಮೈಸೂರು ಕನ್ನಡ, ಬೆಂಗಳೂರ ಕನ್ನಡ, ಬಯಲು ಸೀಮೆ ಕನ್ನಡ,ಬೀದರ್ ಕನ್ನಡ ಹೀಗೆ ತರೇವಾರಿ ಕನ್ನಡ ರಾಜ್ಯದ ಉದ್ದಗಲಕ್ಕೂ ಇದೆ.ಹತ್ತಿರದ ರಾಜ್ಯ ಭಾಷೆಗಳ ಪ್ರಭಾವವೂ ಕನ್ನಡ ಭಾಷಿಕರ ಮೇಲೆ ಭಾಷೆಯ ಮೇಲಾಗಿದೆ ಅದು ರಾಜ್ಯದ ರಾಜಧಾನಿ ಬೆಂಗಳೂರನ್ನು ಹೊರತಾಗಿಸಿಲ್ಲ.ಇಲ್ಲೊಂದು ಸೂಕ್ಷ್ಮ ವಿಚಾರವನ್ನೂ ಪ್ರಸ್ತಾಪಿಸಲು ಇಚ್ಚಿಸುತ್ತೇನೆ.ಕನ್ನಡ ನಮ್ಮುಸಿರು ನಿಜ ಆದರೆ ಕರ್ನಾಟಕದೊಳಗಿನ ಇತರ ಭಾಷೆಯ ತುಚ್ಚೀಕರಣ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಸಲ್ಲದೂ, ಇದರ ಅಪಾಯ ತುಚ್ಚೀಕರಿಸುವ ಭಾಷೆಯಿಂದಲೂ ಹೆಚ್ಚಾಗಿ ಕನ್ನಡಕ್ಕೆ ಆಗುವ ಸಂಭವಗಳಿವೆ, ತಲ ತಲಾಂತರದಿಂದ ಕನ್ನಡ ಜೊತೆಗೆ ಈ ಭಾಷೆಗಳು ಅಸ್ತಿತ್ವ ಉಳಿಸಿಕೊಂಡು ಬಂದುದರಿಂದ ಅದನ್ನೂ ಗೌರವಿಸುವದನ್ನೂ ರೂಢಿಸಿಕೊಳ್ಳುವದು ಕನ್ನಡ ಭಾಷೆಯ ಒಳಿತಿನ ದೃಷ್ಟಿಯಿಂದ ಒಳ್ಳೆಯದು.ಉದಾಹರಣೆಗೆ ತುಳು ಭಾಷೆಯನ್ನೆ ತೆಗೆದುಕೊಳ್ಳೋಣ, ಕನ್ನಡದಂತೆ ಇದೂ ಒಂದು ದ್ರಾವಿಡ ಭಾಷೆ, ಒಂದು ವಾದದ ಪ್ರಕಾರ ಕೆಲವೊಂದು ಪುರಾವೆಗಳ ಪ್ರಕಾರ ತುಳು ಕೂಡ ಲಿಪಿ ಹೊಂದಿದ ಭಾಷೆ, ಮಲೆಯಾಳಿ ಭಾಷೆಯ ಲಿಪಿ ತುಳು ಭಾಷೆ ಲಿಪಿಯ ಎರವಲೂ ಕಾಲ ಕ್ರಮೇಣ ನಶಿಸುತ್ತಾ ಬಂದಿರುವ ಈ ಭಾಷೆ ಕೇವಲ ಆಡುಭಾಷೆಯಾಗಿ ಮಾರ್ಪಟ್ಟು ಅಸ್ತಿತ್ವ ಉಳಿಸಿಕೊಂಡಿದೆ.ಹೀಗಿರಬೇಕಾದಲ್ಲಿ ಈ ತುಳು ಮೇಲಿನ ದೌರ್ಜನ್ಯ ಕನ್ನಡ ಭಾಷೆಯ ಹೇರಿಕೆಯಿಂದಾಗಿದೆ ಎಂಭ ವಾದವೂ ಹಿಂದಿನಿಂದಲೂ ಕೇಳಿ ಬರುತ್ತಿದೆ, ಇಂತಹ ವಾದಗಳೂ ಈ ಪರಿಯ ಅನುಮಾನಗಳೂ ಮುಂದೊಂದು ದಿನ ನಮ್ಮಯ ಸಮಗ್ರತೆಗೆ ಹೊಡೆತ ಕೊಡುವಂತದ್ದೂ.ಆದುದರಿಂದ ಕನ್ನಡವೆಂಬ ಮೂಲ ಮಂತ್ರದೊಳಗೆ ಕರ್ನಾಟಕದ ಸಮಗ್ರತೆ ಉಳಿಯಲು ಈ ರೀತಿಯ ಉಳಿದೆಲ್ಲಾ ಭಾಷೆಗೆ ಗೌರವಿಸುತ್ತಾ ಎಲ್ಲರೊಂದೊಳಗಾಗಿ ಎತ್ತರಕ್ಕೆ ಬೆಳೆಯುವದೇ ಆಗಿರುತ್ತದೆ, ಆದಷ್ಟೂ ಈ ರೀತಿಯ ಅನುಮಾನಗಳನ್ನೂ ಪರಿಹರಿಸುತ್ತಾ ಎಲ್ಲವನ್ನೂ ಬೆಳೆಸುತ್ತಾ ಬೆಳೆಯುವದೆ ಆಗಿರುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ತುಂಗಭದ್ರಾ, ನೇತ್ರಾವತಿ, ಕಾವೇರಿ,ಅಘನಾಶಿನಿ, ಕುಮಾರಧಾರ, ಫಲ್ಗುಣಿ,ಕಬಿನಿ, ಕಾಳಿ, ಗುರುಪುರ ನದಿ,ಕೇದಕ, ಅರ್ಕಾವತಿ,ಘಟಪ್ರಭಾ, ಮಲಪ್ರಭ,ಯಗಚಿ ನದಿ,ಹೇಮಾವತಿ,ಸೌಪರ್ಣಿಕಾ,ವಾರಾಹಿ,ವರದ,ಶಿಂಶಾ,ಶಾಂಭವಿ,ಶಾಲ್ಮಲಾ,ಶರಾವತಿ, ಕೃಷ್ಣ, ಭೀಮಾ ಹೀಗೆ ಸುಂದರ ಹೆಸರನ್ನೂ ಹೊಂದಿರುವ ಈ ನಾಡಿನ ನದಿಗಳೂ ತನ್ನ ಸುತ್ತಲೂ ಒಂದು ಜನಜೀವನವನ್ನೂ ಈ ನಾಡಿನ ಸುಂದರತೆಯನ್ನೂ ಪೊರೆಯುತ್ತಾ ಬಂದಿದೆ. ನಾಡಿನ ಜಲದ ವಿಷಯ ಬಂದಾಗ ಕಾವೇರಿ ಕೃಷ್ಣೆಗಷ್ಟೆ ನಮ್ಮಯ ಕಾಳಾಜಿಗಳು ಸೀಮಿತವಾಗದೆ ಎಲ್ಲ ನದಿಗಳೂ ಕೂಡ ಮುಖ್ಯವೆ ಅಗಿರಬೇಕಿದೆ. ಜೀವನದಿಯೆಂಬ ಹೆಸರೂ ಎಲ್ಲಾ ನದಿಗಳೀಗೂ ಅನ್ವಯವಾಗುವಂತದ್ದೂ ಕಾರಣ ಜೀವ ಸಂಕುಲವನ್ನೂ ಎಲ್ಲಾ ನದಿಯೂ ಪೊರೆಯುವಂತದ್ದೆ ಆಗಿರುವದರಿಂದ.ಒಂದಷ್ಟೂ ವಿಶಾಲ ಮನೋಭಾವನೆಗಳು ನಾಡಿನ ಜಲ ಸಂರಕ್ಷಣೆಯ ವಿಷಯದಲ್ಲಿ ನಮ್ಮೆಲ್ಲರಲ್ಲೂ ಆಗಿರಬೇಕಿರುವದು ಅವಶ್ಯಕ.ನದಿಗಳ ವಿಷಯ ಬಂದಾಗಲೆಲ್ಲ ನನಗೆ ನೆನಪಿಗೆ ಬರೋದು ನಮ್ಮೂರ ನದಿ ನೇತ್ರಾವತಿ, ನೇತ್ರಾವತಿ ನದಿಗೆ ಬಂದು ಕೂಡುವ ಕುಮಾರಧಾರ ಸಂಗಮ ಸ್ಥಳ ಉಪ್ಪಿನಂಗಡಿ.ನೇತ್ರಾವತಿಯೊಳ ಬಿದ್ದಿದ್ದೇನೆ ಎದ್ದೀದ್ದೇನೆ ಮನ ತನು ತಣಿಸಿದ್ದೇನೆ ದಡದ ಜಾತ್ರೆ ಸಂಭ್ರಮಗಳನ್ನೂ ನೋಡಿದ್ದೇನೆ,ಕೆಂಪಾಗಿ ರೌದ್ರವಾಗುವದನ್ನೂ ಕಂಡಿದ್ದೇನೆ ಇವೆಲ್ಲದರ ಜೊತೆ ಜೊತೆಗೆ ನನ್ನ ಬದುಕನ್ನೂ ಕಟ್ಟಿಕೊಂಡಿದ್ದೇನೆ ಆದ್ದರಿಂದ ಜೀವ ನದಿಯೆಂಬುದನ್ನು ಯಾವುದೋ ಒಂದು ನದಿಗೆ ಸೀಮೀತವಾಗಿರಿಸುವದು ತಪ್ಪು ಎಂಬುದು ನನ್ನ ಆಕ್ಷೇಪ, ಬಹುಶಃ ಇದು ನದಿ ಪಾತ್ರದಲ್ಲಿರುವ ಮಂದಿಯೆಲ್ಲರದೂ, ಅದ ಕಂಡೆ ಬೆಳೆದ ಮಂದಿಯೆಲ್ಲರದೂ ಅಭಿಪ್ರಾಯಗಳಾಗಿರಬಹುದು.ಅದೇನೆ ಇರಲಿ ನಾಡಿನ ಸಮಗ್ರತೆಯ ದೃಷ್ಟಿಯಿಂದ ಜಲವೆನ್ನುವ ಎಲ್ಲವೂ ಪ್ರಾಮುಖ್ಯತೆ ಪಡೆಯುವಂತದ್ದೂ ಎಂಬುದನ್ನಷ್ಟೆ ನಾ ಹೇಳ ಬಯಸಿರುವದು.ಪ್ರಾಕೃತಿಕ ರಮ್ಯತೆಗೆ ನಾಡಿನ ಸುಂದರತೆಗೆ ಈ ನದಿಗಳ ಪಾತ್ರ ಬಹಳ ದೊಡ್ಡದು. 

ನಮ್ಮೂರು ತೆಕ್ಕಾರು ೭೦೦ ರಿಂದ ೮೦೦ ಮನೆ ಹೊಂದಿದ ಸುಂದರ ಹಳ್ಳಿ, ನಾ ನನ್ನ ಹಳ್ಳಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸುದಕ್ಕೆ ಕಾರಣವಿದೆ.ಸರಾಸರಿ ಮನೆಯೊಂದರಂತೆ ಒಬ್ಬರೂ ನನ್ನನ್ನು ಸೇರಿಸಿ ಬೆಂಗಳೂರು ಹಾಗೂ ಇತರ ಮಹಾ ನಗರವನ್ನೂ ಸೇರಿಕೊಂಡಿದ್ದೇವೆ.ಕಾರಣವಿಷ್ಟೆ ಮೂಲ ನೆಲೆಯಲ್ಲಿ ಉದ್ಯೋಗವಕಾಶಗಳಿಲ್ಲ, ನನ್ನ ಹಳ್ಳಿಯೊಂದರದೆ ಈ ಪರಿಸ್ಥಿತಿಯಾದರೆ ರಾಜ್ಯದ ಪೂರ್ತಿ ಪರಿಸ್ಥಿತಿಯೂ ಬೇರೆಯದಾಗಿಲ್ಲ, ಮಂಗಳೂರು, ಮೈಸೂರು,ಹುಬ್ಬಳ್ಳಿ, ಗುಲ್ಬರ್ಗಾ,ಶಿವಮೊಗ್ಗ ಹೀಗೆ ಎಲ್ಲಾ ಪಟ್ಟಣಗಳು ಬೆಂಗಳೂರಂತೆ ಬೆಳೆದಲ್ಲಿ(ನಾ ಹೇಳುತ್ತಿರುವದು ಉದ್ಯೋಗವಕಾಶದ ನೆಲೆಯಲ್ಲಿ)ರಾಜ್ಯದ ಕ್ಷಿಪ್ರ ಬೆಳವಣಿಗೆಗೆ ಸಹಕಾರಿಯಾಗಬಲ್ಲುದು.ಮೈಸೂರು, ಶಿವಮೊಗ್ಗೆ, ಮಂಗಳೂರು,ಒಂದಷ್ಟೂ ಹುಬ್ಬಳ್ಳಿ ಈ ನಿಟ್ಟಲ್ಲಿ ಬೆಳೆಯುತಿದ್ದರೂ ಗುಲ್ಬಾರ್ಗಾ ಬೀದರ್ ಬಿಜಾಪುರ ಬಾಗಲಕೋಟೆ ಮುಂತಾದ ನಗರಗಳನ್ನೂ ನೋಡಿದಲ್ಲಿ ಇಲ್ಲಿ ಪ್ರಾಥಮಿಕ ಮೂಲ ಸೌಲಭ್ಯ ಪೂರೈಸುವಲ್ಲೆ ಪೂರ್ತ ಯಶಸ್ಸು ನಾವು ಕಂಡುಕೊಂಡಿಲ್ಲ.ಈ ನಿಟ್ಟಲ್ಲಿ ಯೋಚಿಸಿದಾಗ ರಾಜಕೀಯ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತದೆ ಇದರ ಪರಿಣಾಮಗಳೆ ಆಗಾಗೆ ನಮ್ಮಯ ಸಮಗ್ರತೆಯ ಮದ್ಯೆ ಹುಟ್ಟುವ ಅಪಸ್ವರಗಳು.ಅಪಾಯ ಎದುರುಗೊಂಡಾಗ ತಂತ್ರ ಹೂಡುತ್ತಾ ಕೂರುವ ಬದಲು ಕರ್ನಾಟಕವನ್ನೂ ಉತ್ತರ ದಕ್ಷಿಣ ಎಂಬುದಾಗಿ ವಿಭಜಿಸಿಕೊಳ್ಳದೆ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ರಾಜಕೀಯ ಇಚ್ಚಾ ಶಕ್ತಿಗಳು ಕೆಲಸ ಕೈಗೊಳ್ಳುವ ಕೈಂಕರ್ಯ ತೊಟ್ಟಲ್ಲಿ ಕರ್ನಾಟಕಕ್ಕೆ ಒಳಿತು.ಅದರೆ 2700 ಕನ್ನಡ ಶಾಲೆಯನ್ನು ಮುಚ್ಚಲು ಹೊರಟ ರಾಜಕೀಯ ಇಚ್ಚಾಶಕ್ತಿಯ ಎದುರು ಇದು ಸಾಧ್ಯವೇ?ಯಕ್ಷ ಪ್ರಶ್ನೆ ಅಂದರೆ ಇದೆ ಇರಬೇಕು.

ನಾವು ಸ್ನೇಹಪರರೂ ಬಹಳ ಬೇಗ ಎಲ್ಲರೊಳಗೆ ಒಂದಾಗಿ ಬಿಡುತ್ತೇವೆ ,ಹೌದು ಇದು ಒಳ್ಳೆಯದೆ ಆದರೆ ಎಲ್ಲರೊಂದಿಗೆ ಒಂದಾಗಿ ಬಿಡುವುದೆಂದರೆ ನಾವೂ ನಮ್ಮನ್ನೂ ಕೊಂದುಕೊಂಡು ಅವರಾಗುವದಲ್ಲ.ಕೆಲವೊಮ್ಮೆ ಅತೀ ಒಳ್ಳೆಯದೂ ಕೆಟ್ಟದ್ದೆ ಮಾಡುತ್ತದೆ, ಮೊನ್ನೆ ಹೀಗೆ ತರಕಾರಿ ಪಡೆಯಲೆಂದು ಹೋಗಿದ್ದೆ ಅಂಗಡಿಯವ ತಮಿಳಿನಲ್ಲಿ ಮಾತಾಡಿಸಿದ ನಾನು ಕನ್ನಡದಲ್ಲೆ ಉತ್ತರಿಸಿದೆ, ಅಯ್ಯೋ ನೀವೂ ಕನ್ನಡ ಕಲಿತು ಬಿಟ್ಟೀರಾ?ಎಂದ, ನಾ ಕಲಿಯುವದೆಲ್ಲಿಂದ ಬಂತು ನಾ ಕನ್ನಡದವನೆ ಅಂದರೂ ಅವ ಒಪ್ಪಲೂ ರೆಡಿ ಇರಲೇ ಇಲ್ಲ. ಹೂಂ ಇದು ಹೀಗಾದರಾಗಲ್ಲ ಎಂದೆನಿಸಿ ನಾನು ತುಸು ವರಸೆ ಬದಲಿಸಿದೆ ನಾ ಪರಭಾಷಿಕ ಸರಿ ನೀನು? ನಾನು ಇದೇ ಊರು ಅಂದಿದ್ದ, ಹಾಗಿದ್ದ ಮೇಲೆ ನೀ ತಾನೆ ಕನ್ನಡ ಕಲಿಸಬೇಕಿರೋದು ,ಅದಕ್ಕಾಗಿ ನೀನು ಕನ್ನಡದಲ್ಲಿ ಮಾತಾಡಬೇಕು ತಾನೆ ಬದಲಾಗಿ ನಾ ಕನ್ನಡದಲ್ಲೆ ಮಾತಾಡಿಸಿದ್ರೂ ತಮಿಳಲ್ಲಿ ಮಾತಾಡ್ತೀಯಲ್ಲೊ ಮಾರಾಯ? ಇಲ್ಲೆ ಹುಟ್ಟಿದ್ದು ಅಂತಿ ಕನ್ನಡಕ್ಕಾಗಿ ಇಷ್ಟಾದ್ರೂ ಮಾಡ್ಬಾರ್ದಾ ಅಂದಿದ್ದೆ.ಪೆಚ್ಚಾಗಿ ನೀವೂ ನೋಡಕ್ಕೆ ತಮಿಳಿಯನ್ ತರ ಕಂಡ್ರಿ ಅದುಕ್ಕೆ ತಮಿಳಲ್ಲಿ ಮಾತಾಡಿಸಿದೆ, ಅವರ ಭಾಷೆಯಲ್ಲಿ ಮಾತನಾಡಿ ಆತ್ಮೀಯತೆ ಕುದುರಿಸಿಕೊಂಡ್ರೆ ವ್ಯಾಪಾರ ಕುದುರುತ್ತೆ ಅನ್ನೋದು ನಮ್ ಅನುಭವ ಸ್ವಾಮಿ ಅಂದ, ಅಯ್ಯೊ ಅಂದ್ಕೊಂಡು ಅವನಿಗೆ ಕಾಣುವಂತೆ ತಲೆ ಚಚ್ಕೊಂಡು ದುಡ್ಡೆಣಿಸಿ ಕೊಟ್ಟು ಮುಂದುವರಿದೆ, ಪೆಚ್ಚಾಗಿ ನೋಡೋ ಅವನ ದೃಷ್ಟಿ ನನ್ನ ಒಂದಷ್ಟು ದೂರ ಹಿಂಬಾಲಿಸಿತ್ತು. ನಾವೂ ಬದಲಾಗಬೇಕಿರೋದು ಇಲ್ಲಿಯೆ, ನುಡಿಯ ಬಗ್ಗೆ ,ನಮ್ಮಯ ಬಗ್ಗೆ ನಮ್ಮೊಳಗಿರುವ ಕೀಳರಿಮೆಯ ತೊಡೆದು ಹಾಕುತ್ತಾ ಕನ್ನಡ ಬೆಳೆಸಬೇಕಿದೆ, ದಿನ ನಿತ್ಯದ ಕಾರ್ಯಗಳಿಗೆ ನಮಗಾತ್ಮೀಯವಾದ ಕನ್ನಡವನ್ನೂ ಉಪಯೋಗಿಸುತ್ತಲೆ ಬಂದಲ್ಲಿ ಪರಿಸರವೂ ಕನ್ನಡ ಮಯವಾಗುತ್ತೆ ಆ ಮೂಲಕ ನಾವೂ ಬೆಳೆಯುತ್ತೇವೆ, ಹೀಗಿರಬೇಕಾದರೆ ಇಷ್ಟು ಸುಲಭದ ಕೆಲಸ ಮಾಡುವದರಲ್ಲಿ ನಾವೂ ಎಡವಬಾರದೂ ಅಲ್ಲವೆ?, ಈ ಮೂಲಕ ಪರಭಾಷಿಕರೂ ಕನ್ನಡ ಕಲಿಯುವಂತಾದರೆ ಒಳಿತೂ ನಮಗೆ ಅಲ್ಲವೆ, ಜ್ಞಾನದ ದೃಷ್ಟಿಯಿಂದ ಎಲ್ಲಾ ಭಾಷೆ ಕಲಿಯೋಣ ಆದರೆ ನಾವೆ ಬೇರೆ ಭಾಷಿಗರಾಗಿ ಬದಲಾಗೋದು ನಮ್ಮನ್ನೂ ನಾವೇ ಕೊಂದುಕೊಂಡಂತೆ ಸರಿ.

ರಾಜ್ಯ ಭಾಷೆ ನಮ್ಮಯ ಬಗ್ಗೆ ಬರೆಯುತ್ತಾ ಕೂತರೆ ಕೊನೆ ಎಲ್ಲಿ? ಬರೆಯುವದಿದೆ ಸಾಕಷ್ಟೂ , ಒಂದಷ್ಟೂ ಚಿಂತನೆಗೆ ನಾವೇ ತೆರೆದುಕೊಳ್ಳಬೇಕೂ ಅನ್ನೊದು ನನ್ನ ಆಶಯವಾದುದರಿಂದ ಸಂಕ್ಷಿಪ್ತ ರೂಪದಲ್ಲೆ ಕೆಲವನ್ನೂ ಕಟ್ಟಿಕೊಟ್ಟಿರುವೆ, ಬರೆಯುವದೂ ಮೂಲ ಉದ್ದೇಶ ಅಲ್ಲವಾದುದರಿಂದ ಇದಿಷ್ಟನ್ನೆ ಹೇಳಿದ್ದೇನೆ, ಕೊನೆಯದಾಗಿ ಬರೆಯುವದೂ ಇಷ್ಟೆ... ಕನ್ನಡ ಚಿಂತನೆ , ಸಂಭ್ರಮಗಳೂ ರಾಜ್ಯೋತ್ಸವ ದಿನಕ್ಕೆ ನವೆಂಬರ್ ತಿಂಗಳಿಗಷ್ಟೆ ಸೀಮಿತವೇ? ಅದು ಪ್ರತಿ ದಿನವಿರಲಿ ಅನ್ನುವದೂ ಎಲ್ಲರ ಅಭಿಪ್ರಾಯ,ಆದರೆ ರಾಜ್ಯೋತ್ಸವದ ಈ ದಿನ ಇಲ್ಲದಿದ್ದರೆ ಕನ್ನಡ ದಿನಗಳೆ ನಮ್ಮದಾಗಿರಲಿ ಎಂದು ಹೇಳುವದಕ್ಕೆ ನಾವೂ ಮುಂದೆ ಬರುತಿದ್ದೆವಾ?ಕನ್ನಡ ಚಿಂತನೆ ಅವಲೋಕನಗಳಿಗೆ ಇಷ್ಟೊಂದು ತೆರೆದುಕೊಳ್ಳುತಿದ್ದೇವಾ?ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳೂ,ಯಾರು ಮರೆಯಲಿ ಬಿಡಲಿ ಕನ್ನಡಕ್ಕಾಗಿ ಪ್ರತಿದಿನ ಚಿಂತಿಸುವ ಮನಸ್ಸು ಇದ್ದೇ ಇದೆ ಇದರ ಹೊರತಾಗಿಯೂ ಕನ್ನಡಕ್ಕೊಂದು ಹಬ್ಬ, ಆ ಮೂಲಕ ಒಂದಷ್ಟೂ ನಾಡು ನುಡಿಯ ಚಿಂತನೆ, ಸಂಭ್ರಮದೊಳಗೆ ಕನ್ನಡದ ಹೊರತಾದವರನ್ನೂ ಸೇರಿಸಿಕೊಂಡು ಸಂಭ್ರಮಿಸಿ ಖುಷಿ ಹಂಚಿಕೊಂಡರೆ ತಪ್ಪೇನೂ ಇಲ್ಲ,ಈ ಮೂಲಕವೂ ಕನ್ನಡಿಗರ ಹೃದಯ ವೈಶಾಲ್ಯ ಹೊರ ಜಗತ್ತಿಗೆ ಪಸರಿಸಿದಲ್ಲಿ ಒಳಿತು ಕನ್ನಡಕ್ಕೆ ಅ ಮೂಲಕ ಕನ್ನಡ ಜನತೆಗೆ.ಈ ಕಾರಣಕ್ಕಾಗಿ ರಾಜ್ಯೋತ್ಸವದ ಈ ದಿನ ಸಂಭ್ರಮಿಸುತಿದ್ದೇನೆ,ಹಂಚಿಕೊಳ್ಳುವ ಆಶಯದಿಂದ ಎಲ್ಲರೀಗೂ ಸಂಭ್ರಮದ 57ನೇ ವರುಷದ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ ಖುಷಿಯಿಂದ ಮುಗಿಸುತಿದ್ದೇನೆ . ಧನ್ಯವಾದಗಳು... :)

No comments:

Post a Comment