ಅಮ್ಮನ ಸೆರಗಂಚು ಹಿಡಿದು
ಅಪ್ಪನಿಂಬ ಜೊತೆ ಜಗವ ನೋಡುವ ಕಾಲದಲ್ಲಿ
ಅಪ್ಪನ ಎದೆ ತುಂಬಾ ನನ್ನ ಪುಟ್ಟ ಕೈ ಬಳಸಿ
ಆತನ ನೇವರಿಪ ತೋಳಲ್ಲಿ ನಾ ನಿದ್ರಿಸಲು
ಅಪ್ಪ ಪಟ್ಟ ಸಂತ್ರುಪ್ತಿಯ ಆಳ ತಿಳಿಯಲು
ನಾನೂ ಅಪ್ಪನಾಗಬೇಕಾಯಿತು.
ನನ್ನಯ ತುಂಟಾಟಗಳು ಹದ್ದು ಮೀರಿದಾಗ
ಅಮ್ಮನ ಒಂದೇಟಿನ
ಬಿಸಿ ನನ್ನ ತಾಕಲು
ರಂಪುಗೊಂಡ ನನ್ನ ಅಳುವನ್ನು
ಕೋಪಗೊಂಡ ಅಮ್ಮನ ಬೈಗುಳದಾರ್ಭಟವನ್ನು
ಸಹಿಸಿ
ಸಂತೈಸಿ ತನ್ನ ಮಾತನ್ನು ನುಂಗಿ ನಗೆ ಬೀರಿದ್ದು………
ಜಾತ್ರೆ
ಯಾತ್ರೆಗಳಲ್ಲಿ
ನನ್ನ
ಮಗುವಿಗಾಗಿ ಇದಿರಲಿ ಎಂದು
ಜೋಬು
ತಡಕಾಡಿ ಕೊಂಡ ಆಟಿಕೆಯಲ್ಲಿ
ನನ್ನಾಟವ
ಕಂಡು ಜೊತೆಯಾಟವಾಡುತ್ತಾ
ತಾನೂ
ಮಗುವಾಗಿದ್ದು….
ಒಂದಷ್ಟು ದೂರದ ನಡೆಗೆ
ನನ್ನ ಕಾಲು ಸೋಲಬಹುದೆಂಬ ಕಾಳಾಜಿಗೆ
ತನ್ನ ತಲೆ ಮೇಲೆ ಕೂರಿಸಿ
ದೇವರೆಂದು ನನ್ನ ಕೊಂಡಾಡಿ
ನನ್ನ ಹೊತ್ತೊಯ್ಯುತ್ತಿದ್ದಿದ್ದು…….
ನನ್ನ ಗದರಿಸಿದ್ದು, ಬೆದರಿಸಿದ್ದು
ತದ ನಂತರ ಸಂಕಟ ಪಟ್ಟು
ನನ್ನ ಮುದ್ದಾಡಿದ್ದು..
ಅಡುಗೆ ಮನೆಯ ಡಬ್ಬಗಳ ತಡಕಾಡಿ
ನನ್ನ ಬಾಯಿಗೆ ಸಿಹಿ ತುರುಕಿ
ಪಟ್ಟ ಸಂಕಟಕ್ಕೊಂದು ಪರಿಹಾರವೆಂಬಂತೆ
ನನ್ನ ಸಿಹಿಯನ್ನೆ ರುಚಿಸಿಕೊಂಡಿದ್ದು…
ನನ್ನಯ ಕುಡಿಗಳ ಆಟ ಪಾಠಗಳು
ಇಂತಹ ಇನ್ನಷ್ಟು,ಬಹಳಷ್ಟನ್ನು
ನೆನಪಿಸುವ ಮಸ್ತಕದಲ್ಲಿ ಮಾಸದೆ
ನಡೆಯಲ್ಲಿ ಅಚ್ಚುಗೊಂಡ
ಅಪ್ಪನೊಂದಿಗಿನ
ನನ್ನ ಬಾಲ್ಯ.
ನನ್ನಪ್ಪ
ನನ್ನ ದಾರಿದೀಪ
ನನ್ನಯ
ಕುಡಿಗಳಿಗೂ ನಾನೆ ಆದರ್ಶ ಎಂಬ ಎಚ್ಚರ
ನಾನು
ನನ್ನಪ್ಪನಂತಿರಬೇಕೆಂಬ ಪ್ರಜ್ನೆಯನ್ನು ಅಳಿಯಲು ಬಿಡುತಿಲ್ಲ
ಅಪ್ಪ
ಪದಗಳೆ ಇಲ್ಲದ ವರ್ಣನೆ, ಎಣಿಕೆ ಕಾಣದ ಲೆಕ್ಕ
ಈ
ಪರಿಯ ಅಪರಿಮಿತ ಅಮಿತತೆಯ ತಿಳಿಯಲು
ನಾನೂ
ಅಪ್ಪನಾಗಬೇಕಾಯಿತು.