ಆ ದಿವಸಗಳ್ಯಾಕೊ ನನ್ನವೂ ಎನಿಸುತಿರಲಿಲ್ಲ. ಇದ್ದುದರಲ್ಲೆ ಖುಷಿ ಹುಡುಕಲು ಹೊರಟಾಗಲೆ, ಕಷ್ಟಗಳ ಅರಿವುಗಳು ನಮ್ಮ ಅರಿವಿಗೆ ಬಂದಾವಾಗಲೆ, ಜೀವನದ ಬೇರೆ ಬೇರೆ ಕವಲುಗಳು ಗೋಚರಿಕೆಗೆ ಬಂದು ಬದುಕು ಪಕ್ವತೆ ಪಡೆಯುವುದಂತೆ.ಬಹುಶಃ ನಾ ಆ ದಿನಗಳಲ್ಲಿ ಇದ್ದಿರಬೇಕು. ಜೇಬಲ್ಲಿ ೧೬ ರುಪಾಯಿ ಬಸ್ ಚಾರ್ಜ್ ಗೆ ಇಲ್ಲವೆಂದು ಮನೆ ಕಡೆ ತಿಂಗಳು ಗಟ್ಟಲೆ ಹೆಜ್ಜೆ ಹಾಕದೆ ಪೇಪರ್ ಹಾಸಿ ಕೆಲಸದ ಜಾಗದಲ್ಲೆ ಮಲಗಿರುತಿದ್ದ ದಿನಗಳವು ,ಇತರರ ಟಿಫಿನ್ ಬಾಕ್ಸ್ ಕಡೆ ಆಸೆಯಿಂದ ನೋಡಿ ಅವರು ನನ್ನ ದೃಷ್ಟಿಗೆ ಬೆಚ್ಚಿ ಹಂಚಿಕೊಳ್ಳೋ ಅನ್ನ ತಿಂಡಿಗಾಗಿ ಹಾತೊರೆಯುತಿದ್ದ ದಿನಗಳವೂ,ನೆಮ್ಮದಿ ಮಾಗಿದ ಕ್ಷಣಗಳಲ್ಲೆ ನೆಮ್ಮದಿಯ ಹುಡುಕ ಹೊರಟ ದಿನಗಳವು,ಅತ್ಮ ಸ್ಥೈರ್ಯವೆ ಬರಿದಾದ ದಿನಗಳಲ್ಲಿ ಅದುಕ್ಕಾಗೆನೆ ಹುಡುಕಾಡಿದ ದಿನಗಳವು,ಆ ದಿನಗಳ ಮೆಟ್ಟಿ ನಿಂತು ಸಫಲತೆಯ ಕಂಡುಕೊಂಡಾಗಲೆ ಅನುಭವಗಳ ಕಲಿಸಿಕೊಟ್ಟ ಪಾಠದ ಪರಿಧಿಯೊಳಗೆ ನಾ ಸಣ್ಣವನಾಗಿ ನನ್ನೆತ್ತರಕ್ಕೆ ಬೆಳೆದು ನಿಂತಿದ್ದು. ಬೆಳೆದೆ..... ಬೆಳೆಯುತ್ತಿದ್ದೇನೆ.....ಹೇಗೆಂದರೆ ಕುಸಿಯುತ್ತಾ ಮತ್ತೆದ್ದೂ ನಿಲ್ಲೂತ್ತ, ಆದರೆ ಮೊದ ಮೊದಲ ಕಷ್ಟಗಳು ಕಟ್ಟಿ ಕೊಟ್ಟ ಪಾಠದ ಬುತ್ತಿಯು ಎದುರಿಗೆ ದುತ್ತೆಂದೂ ಎದ್ದು ನಿಲ್ಲುವ ಅದೆಷ್ಟೋ ಕಷ್ಟಗಳನ್ನೂ ಸುಖದಿ ಎದುರಿಸುವ ಪಾಠವ ಹೇಳಿಕೊಟ್ಟಿದೆ, ಜೀವನ ಕವಲುಗಳ ಒಂದು ಮುಗ್ಗುಲನ್ನೂ ೧೪ ವರುಷಗಳ ಹಿಂದೆನೆ ಬದಲಾಯಿಸಿಯಾಗಿತ್ತು.ಈಗ ಜೀವನಗಳ ಮುಗ್ಗುಲುಗಳನ್ನೂ ಬದಲಾಯಿಸುವ ಪ್ರೌಢ ನಾನು, ಕಷ್ಟಗಳಿಗೆ ನನ್ನದೆ ಚಾಠಿ ಬೀಸುವ ತಂತ್ರಗಳ ಹೆಣೆದುಕೊಂಡ ತಂತ್ರಗಾರ,ಅದಕ್ಕಾಗೆ ನಾ ಸುಖಿ ಎಂಬುದನ್ನು ಎದೆ ತಟ್ಟಿ ಹೇಳುವ ಇಚ್ಚೆ.
ಮಡಿವಾಳ ಮಾರ್ಕೇಟಿನ ಪೆಟ್ಟಿ ಅಂಗಡಿಯಲ್ಲಿ ಅಪರಾತ್ರಿ ಬನ್ ಪ್ಲಾಸ್ಟೀಕ್ ಕಫ್ ಟೀ ಸವಿದು ಹೊಟ್ಟೆ ತುಂಬಿಸುತ್ತಾ ಇದ್ದ ದಿನಗಳೂ,ಮಾಲ್ ಸುತ್ತಿ, ರೆಷ್ಟೋರೆಂಟ್ ಹೊಕ್ಕು, ಕಡಾಯಿ ಮಸಾಲ, ರೋಟಿ, ಪಿಜ್ಜಾ, ಬರ್ಗರ್ ಅನ್ನುತ್ತಾ ತಿನ್ನುವ ಈ ಕಾಲದ ವ್ಯತ್ಯಾಸದ ತುಲನೆಯೊಳಗೆ, ಕಷ್ಟಗಳೊಳಗಿನ ಹಸಿವಿಗೆ ಸಿಕ್ಕ ಬನ್ನಿನ ರುಚಿಯ ಮುಂದೆ ಈ ಪ್ರತಿಷ್ಟಿತ ರುಚಿಯು ಯಾಕೋ ಸಪ್ಪೆ ಸಪ್ಪೆ. ದುಡಿಮೆಯ ಸಾರ್ಥಕತೆ ಹಸಿವ ನೀಗುವ ಆ ಟೀ ಬನ್ನಿನಲ್ಲಿದ್ದಷ್ಟೂ ಇವುಗಳಿಲ್ಲವೇನೂ ಅನಿಸುತ್ತಲೆ ಹೊಟ್ಟೆಯೆಲ್ಲ ಭಾರ ಭಾರ.ಕಳಕೊಂಡಿದ್ದೇನನ್ನೂ ಕಷ್ಟಗಳನ್ನೋ???? ಸಂತೋಷ ನೆಮ್ಮದಿಗಳನ್ನೋ??? ಉತ್ತರದ ಹುಡುಕಾಟ ನಡೆದೆ ಇದೆ.ಮತ್ತದೆ ಜೀವನದ ಕವಲಿನಲ್ಲಿ ನಾ ಸುಖಿ ಎಂದು ಎದೆ ತಟ್ಟಿ ಹೇಳಿಕೊಂಡಿದ್ದು ಸಿನಿಕತನ ಅನಿಸಿಬಿಡುತ್ತೆ.ಬದುಕೆ ಒಂದು ಜಂಜಾಟವೆಂಬ ವಾಸ್ತವಕ್ಕೆ ಮರಳುತ್ತೇನೆ ತುಸು ಹೊತ್ತಿನಲ್ಲೆ ಹಾಗೆ ಮುಗ್ಗುಲ ಬದಲಿಸುವದು ನನ್ನ ಅನಿವಾರ್ಯವೂ ಹೌದು.
೧೫೦೦ ರೂಗಳನ್ನೂ ದಾಟದ ಸಂಪಾದನೆಯ ದಿನಗಳಲ್ಲೂ ೩ ಅಂಕೆಯ ಮುಂದೆ ೪ ಸೊನ್ನೆಗಳಿರುವ ಈ ದಿನಗಳ ಸಂಪಾದನೆಯಲ್ಲೂ ನಡೆಸಿದ್ದು ಬದುಕನ್ನೆ.ಪ್ರತಿಷ್ಟೆ ಅನುಕೂಲಗಳನ್ನೂ ಈ ದಿನಗಳ ಸಂಪಾದನೆಯೂ ತಂದಿತೆ ಹೊರತಾಗಿ ಇಂಚಿಂಚಾಗಿ ನೆಮ್ಮದಿ, ಆರೋಗ್ಯ,ಜೀವ ಚೈತನ್ಯಗಳನ್ನೂ ಕಬಳಿಸುತ್ತಾ ಸಾಗಿದೆ ಅನ್ನುವದೂ ನನ್ನ ಮಟ್ಟಿಗಂತೂ ನಿಜ.ಚೈತನ್ಯ ತುಂಬ ಬಹುದಾದರೆ ಅದೊಂದೆ ಕೈಲಾದಷ್ಟೂ ಇತರರ ಕಷ್ಟಗಳನ್ನೂ ನೀಗಿಸುವದು, ಇಲ್ಲೊಂದು ಜಿಜ್ಞಾಸೆ ಅನಿವಾರ್ಯ ಕಷ್ಟಗಳನ್ನೂ ನೀಗಿಸಬೇಕೆ?? ಕಷ್ಟವೆಂದಲ್ಲವಕ್ಕೂ ಸ್ಪಂದಿಸಬೇಕೆ???ಕಷ್ಟಗಳು ಬದುಕನ್ನು ಪಕ್ವತೆಗೊಳಿಸುವಂತದ್ದೂ, ಕಷ್ಟಗಳ ಅನುಭವ ಪಡೆಯದೆ ಆತ ಮೌಲ್ಯತೆಗಳ ಪಡೆಯಲಾರ ಎಂಬುದು ನನ್ನನುಭವಕ್ಕೆ ಹೊಳೆಯುತಿದ್ದಂತೆ ಇತರರ ಅನಿವಾರ್ಯ ಕಷ್ಟಗಳಿಗಷ್ಟೆ ಸ್ಪಂದಿಸೋದು ಸರಿಯೆಂಬ ನನ್ನದೆ ನಿಲುವುಗಳಿಗೆ ಬಂದು ನಿರಾಳನಾಗುತ್ತಿರುತ್ತೇನೆ.ಇತರರ ಕಷ್ಟಗಳಿಗೆ ಸ್ಪಂದಿಸೋದೆಂದರೆ ನನ್ನ ಕಷ್ಟಗಳಿಗೆ ಸ್ಪಂದನೆಯಾಗಬಲ್ಲರೂ ಇತರರೂ ಎಂಬ ನಿರೀಕ್ಷೆ, ಸ್ವಾರ್ಥತೆ ಇರಬಹುದೆ ನನ್ನೊಳಗೆ?ಕಷ್ಟಗಳ ನಿರೀಕ್ಷೆಯೊಳಗೆ ಜೀವನವಿರುತ್ತೋ?? ಹೆಚ್ಚಿನೆಲ್ಲಾ ಸಂದರ್ಭಗಳಿಗೆ ಮನಸಿಗೆ ತಾಕುವಂತೆ ಈ ವಿಚಾರಗಳು ಕಾಡುತ್ತೆ.ಏನಾದರಾಗಲಿ ಈ ವಿಚಾರದಲ್ಲಿ ಆದರ್ಶ ಮೇರೈಕೆಗೆ ಒತ್ತು ಕೊಡುತ್ತಿಲ್ಲವಲ್ಲ ಅನ್ನೋ ನೆಮ್ಮದಿಯನ್ನ ಬಲತ್ಕಾರವಾಗಿ ತಂದುಕೊಳ್ಳುತ್ತೇನೆ.ಒಂದಿನಿತು ಸಂತೋಷ ಪಡೆಯಲು.
ಹಸಿವು ......ಬಹುಶಃ ಇರೋದು ಇದೊಂದೆ ಜಾತಿ.ಅದನ್ನೂ ಅನಿವಾರ್ಯವಾಗಿ ಎಲ್ಲವೂ ಇದ್ದು ನಾ ಒಪ್ಪಿಕೊಂಡಿದ್ದು ನನ್ನ ಜೀವನದ ಒಂದು ಮಜಲಿನಲ್ಲಿ.ನನ್ ಧರ್ಪಕ್ಕೊ, ಸ್ವಾಭಿಮಾನಕ್ಕೊ, ಅಹಂಕಾರಕ್ಕೋ ಯಾವುದಕ್ಕೋ ಒಂದಕ್ಕೆ ಕಟ್ಟು ಬಿದ್ದು. ಈ ದಿನಗಳಲ್ಲಿ ಹಿಂತುರಿಗಿ ನೋಡಿದಾಗ ಅದುವೆ ನನ್ನ ಜೀವನದ ಮಹತ್ತರ ಮಜಲಾಗಿ ಗೋಚರಿಸುವದನ್ನ ಅಷ್ಟೆ ಆಶ್ಚರ್ಯ ಚಕಿತನಾಗಿ ನೋಡುತಿದ್ದೇನೆ, ನನ್ನೊಳಗಿನ ಹಮ್ಮು ಬಿಮ್ಮು ಜಾತೀಯತೆಯನ್ನು ಕೊಚ್ಚಿ ತೊಳೆದ ದಿನಗಳವು.ಆ ದಿನಗಳೂ ಕಾಠೀಣ್ಯತೆಯಿಂದ ಕೂಡಿತ್ತಾದರೂ,ಅದರಿಂದಾಗಿ ಕಳೆದಿದ್ದೂ ಏನೂ ಇಲ್ಲ ಬದಲಾಗಿ ಆ ದಿನಗಳಿಂದ ಪಡೆದಿದ್ದೆ ಹೆಚ್ಚು, ಎಲ್ಲಕ್ಕಿಂತ ಮುಖ್ಯವಾಗಿ ಜೀವನದ ಒಂದು ಮುಗ್ಗುಲಿನ ತಳಪಾಯದ ಪಾಠವನ್ನು ಅನುಭವದಿಂದ ಪಡಕೊಂಡಿರುವ ದಿನಗಳವು. ಅದಕ್ಕಾಗಿ ನಾನೆಷ್ಟೆ ಎತ್ತರಕ್ಕೆ ಏರಿದರೂ ಮಗಿಚಿ ಬಿದ್ದರೂ ಎರಡನ್ನೂ ಸಮಾನಾಗಿ ಸ್ವೀಕರಿಸುತ್ತಾ ಆ ದಿನಗಳನ್ನ ಮೆಲುಕು ಹಾಕುತ್ತಿರುತ್ತೇನೆ, ಕಾರಣ ಆ ದಿನಗಳಲ್ಲಿ ಅಡಗಿದ ಅದೆಷ್ಟೋ ನೀತಿ ಪಾಠಗಳನ್ನೂ ಜೀವನದ ಬೇರೆ ಬೇರೆ ಕವಲುಗಳಲ್ಲಿ ಬೇರೆ ಬೇರೆ ದಾರಿಯ ಸೂಚಿಸುವ ಸವಾಲನ್ನು ಎದುರಿಸುವ ಪಾಠಗಳು ಆ ಪಠ್ಯದಲ್ಲಿ ಇದೆಯೆಂದು. ಕಷ್ಟಗಳನ್ನು ಹಂಚ್ಕೋಬಾರದು ಅಂತಾರೆ, ಆದರೆ ಕಷ್ಟದ ಹಿನ್ನಲೆಯಿಂದ ಪಡೆದ ಸುಖವನ್ನು ಹಾಗೂ ಪಾಠಗಳನ್ನೂ ಹಂಚ್ಕೋಬಹುದು ಎಂಬುದು ನನ್ನ ನಂಬಿಕೆ.ಇಲ್ಲಿ ಹಂಚ್ಕೊಂಡಿದ್ದು ಹಣ ಮತ್ತು ಜೀವನದ ಕೆಲ ಮುಗ್ಗುಲುಗಳೂ ಅಷ್ಟೆ,ಇದೆ ತೆರನಾದವೂ, ಬೇರೆ ತೆರನಾದವೂ ಬೇರೆ ಬೇರೆನೆ ತೆರದಲ್ಲಿ ಎಲ್ಲರ ಜೀವನದಲ್ಲೂ ಲಭ್ಯ. ಕಷ್ಟಗಳೂ ಜೀವನ ಮಾರ್ಗದರ್ಶಿ ಎಂದು ತಿಳಿದು ಅವುಗಳನ್ನೂ ಸುಖಿಸೋದು ಕಲಿಯೋಣ, ಅಷ್ಟಕ್ಕೂ ಉಪ್ಪಿಲ್ಲದೆ ರುಚಿ ಹುಟ್ಟೋದು ಸಾಧ್ಯನಾ??