ಕುಂಟಾಲ ಚಿಗುರು, ನೇರಳೆ ಚಿಗುರು, ಎಂಜಿರದ ಚಿಗುರು,ಪೇರಳೆ ಚಿಗುರು,ಮಾದರಿ ಚಿಗುರು ಹೀಗೆ ಒಂದಷ್ಟು ಚಿಗುರು ತಂದು ಬೇಯಿಸಿ ಮಾಡಿದ ಚಟ್ನಿಯ ಜೊತೆ ಮರಳು ಮರಳಾದ ದನದ ತುಪ್ಪ ಸೇರಿಸಿ ಕಲಿಸಿದ ಅನ್ನದ ತುತ್ತ ತಿಂದ ಬಾಯಿ ರುಚಿ ಪೇಟೆಯ ಹೈ ಫೈ ಊಟವನ್ನೂ ಉಣ್ಣೆಂದಾವಾಗ ಒತ್ತಾಸೆಗೆ ಮಣಿದು ಹಸಿವ ನೀಗಿಸ ಸಲುವಾಗಿ ಅಷ್ಟೆ ಒಂದಷ್ಟನ್ನೂ ಕಷ್ಟದಿಂದ ತಿನ್ನುತ್ತೆ.ಮಜ್ಜಿಗೆ ಹುಳಿ, ಪುನಾರ್ಪುಳಿ ಸಾರು,ಕಾಯಿ ಸಾಂಬಾರ್, ದಾಳಿ ತೋವೆ,ಬೋಳು ಹುಳಿ ರುಚಿಕಟ್ಟಿನ ಎದುರು ನಾರ್ತ್, ಸೌತ್ ಇಂಡಿಯನ್ , ಚೈನೀಸ್ ಇತರ ತರೆವಾರಿ ವೆಚ್ಚಭರಿತ ಫೈವ್ ಸ್ಟಾರ್ ಹೋಟೇಲ್ ಊಟಗಳೂ ಕೂಡ ಸಪ್ಪೆ ಎನಿಸಿ ಬಿಡುತ್ತವೆ.ತರೇವಾರಿ ತಂಬಳಿಗಳು,ವಿಧವಿಧವಾದ ಚಟ್ನಿಗಳು,ಬಾಳೆದಿಂಡು, ಬಾಳೆಕಾಯಿ, ಕುಂಬಳಕಾಯಿ ಸಿಪ್ಪೆಯನ್ನೂ ಬಿಡದ ಪಲ್ಯಗಳು ಹೀಗೆ ತರೇವಾರಿ ಹಳ್ಳಿ ಊಟದ ಡಿಶ್ ಗಳು ಇತರ ಎಲ್ಲಾ ಆಧುನಿಕ ಸಸ್ಯಾಹಾರಿ ಊಟಗಳನ್ನೂ ಮೀರಿಸಿ ನಿಲ್ಲುತ್ತವೆ.ಪತ್ರೋಡೆ, ಪುಂಡಿ, ಗಟ್ಟಿ, ಸೆಕೆ ಉಂಡೆ,ಕೊಟ್ಟಿಗೆ, ಕಡುಬು,ನೀರ್ ದೋಸೆ,ಸೇಮಿಗೆ ಹೀಗೆ ವಿಧ ವಿಧವಾದ ಬ್ರೇಕ್ ಪಾಷ್ಟ್ ಅಕ್ಕಿ ತಿಂಡಿಗಳೂ ಕೂಡ ಕಡಿಮೆ ರುಚಿಕಟ್ಟಿದ್ದೆನಲ್ಲ,ಸೀಸನ್ ಗೆ ತಕ್ಕಂತೆ ಬದಲಾಗೋ ಈ ತಿಂಡಿಗಳು ಅರೋಗ್ಯದ ಕಡೆಗೆ ಗಮನ ಕೊಟ್ಟು ಸಂಪ್ರದಾಯಿಕವಾಗಿ ರೂಪುಗೊಂಡಂತವು ಎನ್ನುವದನ್ನು ನಾವು ಗಮನಿಸಬೇಕಾದ ಅವಶ್ಯಕತೆಗಳಲ್ಲೊಂದು. ಇದೆಲ್ಲವೂ ಕರಾವಳಿಯ ಊಟ ತಿಂಡಿಯ ಮೆನುಗಳ ಸ್ಯಾಂಪಲ್ಗಳು.
ಕರಾವಳಿಯ ಹಳ್ಳಿಗಳು ಎಂದರೆ ಸುಮ್ಮನೆ ಒಂದು ಎತ್ತರದ ಗುಡ್ಡ ಹತ್ತಿ ನೋಡಿದಲ್ಲಿ ಕಾಣಸಿಗುವ ಅಡಿಕೆ ತೆಂಗು ತೋಟಗಳು ಎಂದು ಮೇಲ್ನೋಟಕ್ಕೆ ಬಣ್ಣಿಸಬಹುದೇನೊ. ಆದರೆ ಆ ತೋಟದೊಳಗಿನ ಹಲಸು, ಮಾವು, ನುಗ್ಗೆ, ಗೇರು, ಬಿಂಬಳೆ, ಜಾಯಿಕಾಯಿ, ಬೇರು ಹಲಸು, ಅಮಟೆ, ಚಿಕ್ಕು, ನುಗ್ಗೆ, ಪಪಾಯ, ಸಾಂಬಾರ ಬೇವು ಮುಂತಾದ ಹಸಿರ ಸಮ್ಮೇಳನದೊಳಗೆ ದೊಡ್ಡ ಮರಗಳು ಆವರಿಸಿಕೊಂಡ ಕಾಳು ಮೆಣಸು, ವೀಳ್ಯದೆಲೆ ಬಳ್ಳಿಗಳು, ಮಟ್ಟಕೆಸ, ಸಿಹಿ ಗೆಣಸು, ಮರಗೆಣಸು, ನೇಗಿಲ ಗೆಣಸು, ಕೆಂಪು ಗೆಣಸು, ಬಿಳೆ ಗೆಣಸು, ಹೆಡಗೆ ಗೆಣಸು, ಪಂಜರ ಗಡ್ಡೆ, ಕರಿ ಕೆಸ, ಬಾಂಬೆ ಕೆಸ, ಊರ ಕೆಸ, ಬಿಳಿ ಕೆಸ, ಚೀಪು ಹೀಗೆ ಬೇರು ಬಿಟ್ಟ ಗೆಡ್ಡೆಗಳು ತೊಟದುದ್ದಕ್ಕೂ ಕಾಣ ಸಿಗುವಂತದ್ದೂ , ಇದೆಲ್ಲದರ ಉಪಯುಕ್ತತೆಯೂ ಬರೀಯ ಆರ್ಥಿಕ ವೃದ್ದಿಯಲ್ಲದೆ ಮೇಲೆ ಹೇಳಿದ ತಿಂಡಿ ತಿನಿಸು ಆಹಾರಗಳು ರೂಪುಗೊಳ್ಳಲು ಕಾರಣವಾಗಿದೆ ಅಂದರೆ ತಪ್ಪಿಲ್ಲ.ಎಲ್ಲಿ ನೋಡಿದರಲ್ಲಿ ಕಾಣಸಿಗುವ ಈರುಳ್ಳಿ, ಮೂಲಂಗಿ, ಟೊಮೆಟೋ, ಎಲೆಕೋಸು, ಹೂಕೋಸು, ಬಟಾಟೆಯ ಬಳಗದ ನಡುವೆ ಕರಾವಳಿಯ ಈ ಬೆಳೆಗಳು ವಿಶಿಷ್ಟವಾಗಿ ನಿಲ್ಲುತ್ತೆ ಮತ್ತು ಇದರಿಂದ ರೂಪಿತವಾದಂತ ಅಹಾರ ಪದಾರ್ಥಗಳು ವಿಶೇಷವಾಗಿ ನಮ್ಮ ರುಚಿಗೆ ಸಿಗುತ್ತೆ ಅನ್ನೊದು ನನ್ನ ಅನಿಸಿಕೆ ಮತ್ತು ಅನುಭವ.
ಬೇಸಿಗೆ ಉರಿ ಬಿಸಿಲಲ್ಲಿ ದೇಹ ತಂಪಾಗಿಸಲು ಒಂದೆಲಗ ಸೊಪ್ಪಿನ ಚಟ್ನಿ, ಶೀತ ಜ್ವರ ಶಮನ ಮಾಡಲು ಸಾಂಬಾರ್ ಬಳ್ಳಿ ಸೊಪ್ಪಿನ ತಂಬಳಿ,ದೇಹ ಬೆಚ್ಚಗಾಗಿಸಲು ಬಿದಿರ ಮೊಳಕೆ ಕಣಿಲೆಯ ವಿಧ ವಿಧವಾದ ತಿನಿಸು ಪಲ್ಯಗಳು ಇತ್ಯಾದಿ ತರೆವಾರಿ ಅಹಾರ ಪದಾರ್ಥಗಳು ವಾತಾವರಣದ ಏರು ಪೇರಿಗೆ ಅನುಗುಣವಾಗಿ ಕರಾವಳಿಗಳ ಮನೆ ಮನೆಯಲ್ಲಿ ದಿನಕ್ಕೊಂದು ರೀತಿಯಂತೆ ಮಾಮೂಲಿ ಬದನೆ, ಬೆಂಡೆ, ತೊಂಡೆ, ಹಾಗಲ, ಸವತೆ ಎಂಬ ಅದೇ ಹತ್ತಿಪ್ಪತ್ತು ತರಕಾರಿಗಳ ಬದಲಾಗಿ ಬೇಯುವಂತದ್ದು.ಹೆಚ್ಚಾಗಿ ಕೃಷಿ ಚಟುವಟಿಕೆಯಲ್ಲಿ ಇರುವ ಇಲ್ಲಿನ ಮಂದಿ ತಮ್ಮ ಕೆಲಸ ಮುಗಿದು ಹಿಂತಿರುಗುವ ದಾರಿಯಲ್ಲಿ ಸಿಗುವ ಮಾವಿನಕಾಯಿ, ಒಂದೆಲಗ, ಬಿಲ್ವಪತ್ರೆ, ಕವಲು ಕುಡಿ, ಮುಟ್ಟಿದರೆ ಮುನಿ ಕುಡಿ, ಕೆಂದಿಗೆ ಬಳ್ಳಿಯ ಚಿಗುರು, ಮುರುಗಲು ಕಾಯಿ, ಮಾವಿನ ಸೊಪ್ಪು, ಕರಡಿ ಸೊಪ್ಪು, ಮಜ್ಜಿಗೆ ಹುಲ್ಲು, ದೂರ್ವೆ ಹೀಗೆ ಕೈಗೆ ಸಿಕ್ಕಿದ ಎಲ್ಲವೂ ಸೊಗಸಾದ ಸಾಂಬಾರು, ಗೊಜ್ಜು, ಚಟ್ನಿ, ಪಲ್ಯಗಳಾಗಿ ರೂಪಿತವಾಗುತ್ತದೆ ಎಂಬುದು ತಿಳಿದಲ್ಲಿ ಈ ಬಗ್ಗೆ ಗೊತ್ತೆ ಇರದ ಪೇಟೆ ಮಂದಿ ಹುಬ್ಬೇರಿಸಿದರೆ ಆಶ್ಚರ್ಯವಿಲ್ಲ.(ಇನ್ನು ನಮೂನೆವಾರು ಸೆಂಡಿಗೆ ಹಪ್ಪಳ ಉಪ್ಪಿನಕಾಯಿಯ ಬಗ್ಗೆ ನಾನಿಲ್ಲಿ ಏನನ್ನೂ ಹೇಳಿಲ್ಲ, ಸಾಧ್ಯವಾದರೆ ಅವಕಾಶ ಸಿಕ್ಕಲ್ಲಿ ಇದನ್ನೂ ರುಚಿಸಿಯೆ ಅನುಭವಿಸೋದು ಒಳಿತು.)ಎಲ್ಲವೂ ವಿಷಮಯವಾದ ಈ ದಿನಗಳಲ್ಲಿ ಇಂತಹ ಹಲವು ಅಡವಿ ತರಕಾರಿಗಳು ದೇಹಕ್ಕೆ ಅರೋಗ್ಯವಲ್ಲದೆ ವಿಶಿಷ್ಟ ರುಚಿಯನ್ನು ನಮಗೊದಗಿಸುವದು ಖಂಡಿತ.ಒಂದಷ್ಟು ಜೇಬು ಬರಿದಾಗುವದನ್ನು ತಪ್ಪಿಸಬಹುದು.
ಹೌದು, 100 ರೂಪಾಯಿ ವೆಚ್ಚದಲ್ಲಿ ತಿಂಗಳೂ ಪೂರ್ತಿ ಹೊಟ್ಟೆ ತುಂಬಾ ಉಂಡೇನೂ ಮಗ, ನಿಮ್ ಪೇಟೆಯಲ್ಲಿ ಇದು ಸಾಧ್ಯಾನಾ? ಎಂದು ನನ್ನಮ್ಮ ನೀ ಬೆಂಗಳೂರಿಗೆ ಬಂದು ನನ್ ಜೊತೆ ಇದ್ದು ಬಿಡು ಎಂದಾಗ ಹೇಳಿದ ಮಾತು.ಹಳ್ಳಿ ಜೀವನನೇ ಹಾಗೆ, ಪರಸ್ಪರ ನೆರವಿಗೆ ನಿಲ್ಲುವ ಜನರಿರುತ್ತಾರೆ,ಊಟ ತಿಂಡಿಗೆ ಕೈ ಹಾಕಿದಲ್ಲಿ ಸೊಪ್ಪು ಸಗಡ ಏನಾದರೊಂದು ಇದ್ದೆ ಇರುತ್ತದೆ,ಆರೋಗ್ಯ ಕೆಟ್ಟಲ್ಲಿ ಹಿತ್ತಿಲಲ್ಲೆ ಮದ್ದಿನ ಕಣಜವಿರುತ್ತೆ,ಅಸ್ಪತ್ರೆ ಮದ್ದು ಮತ್ತೊಂದು ಅಪರೂಪದ ಮಾತು.ಎಲ್ಲಕ್ಕಿಂತ ಮುಖ್ಯವಾಗಿ ಜೀವನ ಅತ್ಯಂತ ನೆಮ್ಮದಿಯಿಂದ ಕೂಡಿರುತ್ತೆ. ಇಂತಹ ವಿಷಯಗಳು ಪೇಟೆ ಜೀವನಕ್ಕೆ ಒಗ್ಗಿ ಹೋದ ನನ್ನಂತವರಿಗೆ ಅಷ್ಟು ಸುಲಭಕ್ಕೆ ಅರ್ಥವಾಗುವದಿಲ್ಲ.ಸಂಪಾದನೆಯ ಮುಂದೆ ಎಲ್ಲವೂ ಗೌಣವೆಂಬ ಗುಣ ನಮಗೆ ನಾವೆ ಅಳವಡಿಸಿಕೊಂಡಿರಬೇಕಾದರೆ ಹಳ್ಳಿ-ಪಳ್ಳಿ ವಿಷಯಗಳು ತಲೆಗೆ ಹತ್ತೋದು ದೂರದ ಮಾತೆ ಸರಿ.ಆದರೂ ಹಳ್ಳಿಯಿಂದ ಬಂದ ನನ್ನಂತವರಿಗೆ ಅತ್ತ ಕಡೆ ಒಂದು ಸೆಳೆತವಿದ್ದೆ ಇದೆ, ಅಲ್ಲಿನ ವಿಶಿಷ್ಟ ಊಟ ತಿಂಡಿಯ ಪಾಲೂ ಈ ಸೆಳೆತಕ್ಕೊಂದು ಕಾರಣ.ಒಂದು ಸಲ ರುಚಿ ಕಂಡ ನಾಲಗೆ ಅಷ್ಟು ಸುಲಭವಾಗಿ ಆ ರುಚಿಯನ್ನೂ ಮರೆಯೋದು ಕಷ್ಟ. ಬಾಳೆ ಎಲೆಯೊಂದಕ್ಕೆ 1 ರೂಪಾಯಿ ಪೇಟೆಯಲ್ಲಿ ಕೊಡಬೇಕೆಂಬುದ ಕೇಳಿ ನಮ್ಮೂರ ಮಂದಿ ಗೊಳ್ಳಂತ ನಗ್ತಾರೆ ಅಂದರೆ ನಂಬಲೇಬೇಕು. ಅದೇನೆ ಇರಲಿ ಹಳ್ಳಿ ಎಂದು ಮೂದಲಿಸುವ ಪೇಟೆ ಮಂದಿಗೊಂದು ನಿಜ ವಿಷಯ ಹೇಳಲಾ??? ಮತ್ತೇನಿಲ್ಲ ಪೇಟೆ ಎಂದರೆ ಹಳ್ಳಿಗರಿಗೆ ಮಾಯಾಲೋಕವೇನೊ ಹೌದು ಆದರೆ ಆ ಮಾಯೆಯೊಳ ತಾಕಿದರೆ ಕಾಣೋದು ಪೇಟೆಯತ್ತ ಹಳ್ಳಿಗರಿಗಿರುವ ಅಗತ್ಯ ತಾತ್ಸರತನ. ನೀವೂ ತಾತ್ಸಾರ ಪದ ಪ್ರಯೋಗವನ್ನು ಒಪ್ಪದಿರಲೂಬಹುದು ಆದರೆ ನಿಮ್ಮ ಅನುಭವಕ್ಕೆ ಬಂದಲ್ಲಿ ಹೀಗೊಂದು ಭಾವನೆಯನ್ನೂ ಅಲ್ಲಗಳೆಯಲಾರಿರಿ.ಕರಾವಳಿ ಹಳ್ಳಿ ರುಚಿಯೆ ಅಂತದ್ದು ಕಾರಣ ಈ ರುಚಿಯೊಂದಿಗೆ ಇಲ್ಲಿನ ಸಂಸ್ಕೃತಿ ಮತ್ತು ಜೀವನಕ್ರಮದ ಬೆಸುಗೆಯಿದೆ.
ಇತ್ತೀಚಿಗಿನ ಒಂದು ತಿಂಗಳ ಕಾಲದ ಊರ ವಾಸ್ಥವ್ಯದ ಗುಂಗಿನಿಂದ ಇನ್ನೂ ಹೊರಬರದ ನಾನೂ ಅಲ್ಲಿನ ತಿಂಡಿ ಊಟದ ಸವಿಯನ್ನೂ ನೆನೆಸುತ್ತಲೆ ಬೆಂಗಳೂರ ಊಟ ತಿಂಡಿಯ ಸವಿಯುತಿದ್ದೇನೆ.ಬೆಂಗಳೂರ ಊಟ ತಕ್ಕ ಮಟ್ಟಿಗೆ ಮೊದಲಿನಿಂದ ಸವಿಯಾಗಿದೆ ಕಾರಣ ಗೊತ್ತಿರೋದೆ ಮೊದಲ ಭಾರಿಗೆ ಹೆಂಡತಿಯ ಕೈ ರುಚಿಯ ಭಾಗ್ಯ ನನ್ನದಾಗಿದೆ :).ಪತ್ನಿ ಊಟದ ಕೈ ರುಚಿ ಸಿಗದವರೀಗೆ ಬೇಗ ಸಿಗುವಂತಾಗಲಿ, ಸಿಕ್ಕವರೀಗೆ ಹೆಚ್ಚು ಹೆಚ್ಚು ಮನೆಯೂಟನೆ ಸಿಗುವಂತಾಗಲಿ ಎನ್ನುತ್ತಾ... ಸುಮಾರು 2 ತಿಂಗಳ ಕಾಲ ಏನೋಂದು ಬರೆಯದೆ ಸುಮ್ಮನಿದ್ದ ನಾನು ಈ ಮೂಲಕ ಬರೆಯಲು ಶುರು ಹಚ್ಚಿದ್ದೇನೆ, ನನಗೆ ಒಳ್ಳೆದಾಗಲಿ:), ಕರಾವಳಿ ಹಳ್ಳಿಯೂಟದ ಸವಿ ಒಂದಲ್ಲ ಒಂದು ದಿನ ಎಲ್ಲರೀಗೂ ದಕ್ಕಲಿ ಎಂದು ಶುಭ ಹಾರೈಸುತ್ತಾ, ಹೊಟ್ಟೆ ಹಸೀತಿದೆ, ಮನೆ ಕಡೆ ಹೆಜ್ಜೆ ಹಾಕ್ತಿದೇನೆ,ನಿಮ್ಮದೂ ಊಟ ಆಯ್ತಾ???
ಬೈ ಮತ್ತೆ ಸಿಗೋಣ
ನಿಮ್ಮವ.....
ರಾಘವೇಂದ್ರ ತೆಕ್ಕಾರ್.
ಇತ್ತೀಚಿಗಿನ ಒಂದು ತಿಂಗಳ ಕಾಲದ ಊರ ವಾಸ್ಥವ್ಯದ ಗುಂಗಿನಿಂದ ಇನ್ನೂ ಹೊರಬರದ ನಾನೂ ಅಲ್ಲಿನ ತಿಂಡಿ ಊಟದ ಸವಿಯನ್ನೂ ನೆನೆಸುತ್ತಲೆ ಬೆಂಗಳೂರ ಊಟ ತಿಂಡಿಯ ಸವಿಯುತಿದ್ದೇನೆ.ಬೆಂಗಳೂರ ಊಟ ತಕ್ಕ ಮಟ್ಟಿಗೆ ಮೊದಲಿನಿಂದ ಸವಿಯಾಗಿದೆ ಕಾರಣ ಗೊತ್ತಿರೋದೆ ಮೊದಲ ಭಾರಿಗೆ ಹೆಂಡತಿಯ ಕೈ ರುಚಿಯ ಭಾಗ್ಯ ನನ್ನದಾಗಿದೆ :).ಪತ್ನಿ ಊಟದ ಕೈ ರುಚಿ ಸಿಗದವರೀಗೆ ಬೇಗ ಸಿಗುವಂತಾಗಲಿ, ಸಿಕ್ಕವರೀಗೆ ಹೆಚ್ಚು ಹೆಚ್ಚು ಮನೆಯೂಟನೆ ಸಿಗುವಂತಾಗಲಿ ಎನ್ನುತ್ತಾ... ಸುಮಾರು 2 ತಿಂಗಳ ಕಾಲ ಏನೋಂದು ಬರೆಯದೆ ಸುಮ್ಮನಿದ್ದ ನಾನು ಈ ಮೂಲಕ ಬರೆಯಲು ಶುರು ಹಚ್ಚಿದ್ದೇನೆ, ನನಗೆ ಒಳ್ಳೆದಾಗಲಿ:), ಕರಾವಳಿ ಹಳ್ಳಿಯೂಟದ ಸವಿ ಒಂದಲ್ಲ ಒಂದು ದಿನ ಎಲ್ಲರೀಗೂ ದಕ್ಕಲಿ ಎಂದು ಶುಭ ಹಾರೈಸುತ್ತಾ, ಹೊಟ್ಟೆ ಹಸೀತಿದೆ, ಮನೆ ಕಡೆ ಹೆಜ್ಜೆ ಹಾಕ್ತಿದೇನೆ,ನಿಮ್ಮದೂ ಊಟ ಆಯ್ತಾ???
ಬೈ ಮತ್ತೆ ಸಿಗೋಣ
ನಿಮ್ಮವ.....
ರಾಘವೇಂದ್ರ ತೆಕ್ಕಾರ್.
3 comments: