ಸಮಾಜದಲ್ಲಿ ಕೀಳು ಮೇಲು ಎಂಬುದನ್ನು ಸೃಷ್ಟಿಸಿದ್ದೆ ಒಂದು ಕಾಲಘಟ್ಟದಲ್ಲಿ ಬ್ರಾಹ್ಮಣ ಪಂಗಡಗಳು ಎಂಬುದು ಸರ್ವ ವಿಧಿತ.ತನ್ನ ಪೌರೋಹಿತಶಾಹಿ ನೀತಿಯನ್ನು ಹೇರುತ್ತಾ ಸಮಾಜವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಅಧಿಕಾರಶಾಹಿತ್ವ ಮೆರೆಯಲು ಬ್ರಾಹ್ಮಣ್ಯ ನೀತಿಯನ್ನು ಹೇರುತ್ತಾ ಹೋಗಿದ್ದು ಕೂಡ ಸತ್ಯ.ಆದರೆ ಇಂದಿನ ದಿನಗಳಲ್ಲಿ ಬ್ರಾಹ್ಮಣ್ಯ ಎಂಬುದು ಒಂದು ಜಾತೀಯ ಪಂಗಡಕ್ಕೆ ಸೀಮೀತವಾಗಿ ಉಳಿದಿಲ್ಲ, ಈ ಜಾತಿ ಸನ್ನಿಗಳು ಹೆಮ್ಮರವಾಗಿ ಬೆಳೆದು ನಿಂತಿದೆ.ವಿಜ್ಞಾನ, ತಂತ್ರಜ್ಞಾನ ಯುಗದಲ್ಲೂ ಜಾತಿಯ ಸನ್ನಿಗೆ ಆ ಮೂಲಕ ಡಂಬಾಚಾರಕ್ಕೆ ಕೊರತೆ ಏನು ಇಲ್ಲ. ಆದರೆ ಇಂತದೆ ಮೇಲ್ಜಾತಿಯೆಂದು ಕರೆಸಿಕೊಳ್ಳುವ ಬ್ರಾಹ್ಮಣ ಪಂಗಡಕ್ಕೆ ಸೇರಿದವನೊಬ್ಬ ಜಾತಿಯತೆಯಿಂದ ಬೇಸತ್ತು ಮನುಷ್ಯ ಮಾತ್ರನಾಗಿ ಇರುತ್ತೇನೆ ಎಂಬ ನೀತಿಗೆ ಬದ್ಧನಾಗಿ ಬದುಕು ನಡೆಸುವಾಗ, ಸಮಾಜ ಎಂಬುದು ಆತನನ್ನ ಜಾತಿಯಿಂದ ಹೊರತಾಗಿ ನೋಡಲು ಇಚ್ಚೆ ಪಡುವದೆ ಇಲ್ಲ.ಆ ಮಟ್ಟಿಗೆ ಜಾತಿಕತೆ ಸಮಾಜವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದರೆ ತಪ್ಪಿಲ್ಲ. ಈ ಪರಿಸ್ಥಿತಿ ಬ್ರಾಹ್ಮಣ ಹುಡುಗ ಅಂತ ಕರೆಸಿಕೊಳ್ಳೊ ಅವನಿಗಷ್ಟೆ ಸೀಮಿತವಾಗಿ ಅಲ್ಲದಿದ್ದರೂ, ಆತನ ಜಾತಿಯೆ ಇವೆಲ್ಲದಕ್ಕೂ ಮೂಲವಾದುದರಿಂದ ಇತರರಿಗಿಂತ ಆತನಿಗೆ ಜಾತಿಯತೆ ಹೊರತಾಗಿ ಮನುಷ್ಯ ಮಾತ್ರನಾಗಿ ತನ್ನ ಗುರುತಿಸಿಕೊಳ್ಳೊದು ಒಂದು ಸವಾಲೆ ಸರಿ.
ಸಮಾಜದ ಮಾತುಗಳು ಒತ್ತಟ್ಟಿಗಿರಲಿ ತನ್ನದೆ ಕುಟುಂಬದ ತನ್ನವರೆ ಅನಿಸಿಕೊಂಡವರ ಸಂಪ್ರದಾಯಿಕ ಕಟ್ಟುಪಾಡುಗಳ ಹೇರಿಕೆಯನ್ನು ಇತ್ತ ಕಡೆ ಸ್ವೀಕರಿಸಲು ಆಗದೆ ತ್ಯಜಿಸಲು ಆಗದೆ ಅವನೊಳಗೆ ನಡೆಯುವ ತೊಳಲಾಟಗಳ ಭಾದೆಯು ಕೂಡ ಅಲ್ಪವಾದುದೇನಲ್ಲ. ಅರಿವಿನ ತಿಳುವಳಿಕೆಯಿಂದ ಒಡಮೂಡಿದ ತನ್ನದೆ ಆದ ನೀತಿಗಳನ್ನು ಪರಿಪಾಲಿಸುವಲ್ಲಿ ಕೂಡ ಆತ ತನ್ನಲ್ಲೆ ದೊಡ್ಡ ಘರ್ಷಣೆಗೆ ಎದುರುಗೊಳ್ಳಬೇಕು ಎನ್ನುವದು ವಾಸ್ತವ.ಇವೆಲ್ಲವಕ್ಕೂ ಕಾರಣ ಆತ ಗುರುತಿಸಿಕೊಂಡ ಜಾತಿ.ಈ ಸಮೀಕರಣದೊಳಗೆ ತನ್ನ ನೀತಿಯನ್ನು ಬಿಟ್ಟು ಕೊಡದೆ ಹೊಂದಿಕೊಳ್ಳಲು ನಡೆಸಬಹುದಾದ ಒಂದಷ್ಟು ಅಡ್ಜೆಷ್ಟ್ ಮೆಂಟ್ ಕ್ರಿಯೆಗಳೂ ಕೂಡ “ನೋಡಲ್ಲಿ ಅವ ಇನ್ನೂ ಅಲ್ಲೆ ಇದ್ದಾನೆ ಅವನೊಳಗಿನ ಜಾತಿ ಸತ್ತಿಲ್ಲ”ಅನ್ನೊ ಕುಹಕಗಳನ್ನ , ಅಪಹಾಸ್ಯಗಳನ್ನ ಅನಿವಾರ್ಯವಾಗಿ ಎದುರುಗೊಳ್ಳಬೇಕಾಗುತ್ತೆ.
ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲ ಇದು ಒಂದು ತರ ಜೊತೆ ಜೊತೆಗೆ ಇರುವಂತದ್ದು ಎನ್ನೋ ವಾದ ಒಂದು ಕಡೆ ಇದೆ.ಒಂದು ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಇದು ಸೂಕ್ತವೆ ಆಗಿದ್ದರು ಮೇಲೆ ಹೇಳಿದಂತೆ ಇವತ್ತು ಬ್ರಾಹ್ಮಣ್ಯ ಎನ್ನುವದು ಈ ಒಂದು ಜಾತಿಗೆ ಸೀಮಿತವಾಗಿ ಉಳಿದಿಲ್ಲ ಅನ್ನುವದು ಕೂಡ ಅಷ್ಟೆ ವಾಸ್ತವ. ಇದಕ್ಕೆ ಕಾರಣೀಭೂತರಾರು ಎಂಬುದಕ್ಕೆ ಮತ್ತೆ ಸಿಗುವ ಉತ್ತರ ಕೂಡ ಬ್ರಾಹ್ಮಣ ಪುರೋಹಿತಶಾಹಿ ವರ್ಗ ಎನ್ನುವದು ಹೌದಾದರು ಜಾತೀಯತೆಯಿಂದ ಹೊರತಾಗಿ ಯೋಚಿಸುವ ಆತನಿಗೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವ ಎಂಭ ಕಾರಣಕ್ಕೆ ಮನುಷ್ಯ ಸಂವೇದಿತನದಿಂದ ಸಮಾಜವನ್ನು ಎದುರುಗೊಳ್ಳಲು ಈ ಪ್ರಮೇಯಗಳನ್ನ ಬಿಡಿಸಿಕೊಂಡು ನಿಲ್ಲಲೇಬೇಕಾಗುತ್ತೆ.ಆದರೆ ಈ ಎಲ್ಲಾ ಸವಾಲುಗಳನ್ನು ತನ್ನದಾಗಿಸಿಕೊಂಡು ಸಮಾಜಮುಖಿಯಾಗಿ ಮುನುಷ್ಯರನ್ನ ಮನುಷ್ಯರಂತೆ ಕಾಣುವ ಬಯಸುವ ಮಂದಿಗಳೆಷ್ಟು? ಅನ್ನೋದು ಪ್ರಶ್ನೆಯಾಗೆ ಉಳಿದು ಬಿಡುತ್ತೆ, ಬಹುಶಃ ಈ ಬಳಗ ಇನ್ನೂ ಅಲ್ಪ ಮಟ್ಟದ್ದೆ.ಹುಟ್ಟಿನಿಂದ ಹೇರಿಕೆ ಮೂಲಕ ಆಪೋಶನಗೊಂಡ ನೀತಿಗಳನ್ನು ತಿರಸ್ಕರಿಸಿ ನಿಲ್ಲವದು ಬಹಳ ಮಂದಿಗೆ ಕಷ್ಟ, ಇನ್ನೂ ವಿಸ್ತರಿಸುವದಾದರೆ ತನ್ನ ಎರವಲು ಪಡೆದ ನೀತಿಗಳಲ್ಲಿ ಹಲವಷ್ಟು ಎಡವಟ್ಟುಗಳಿವೆ ಎಂಬುದರ ಅರಿವು ಕೂಡ ಬಾರದಷ್ಟು ಹೇರಿಕೆಯ ಕಟ್ಟುಪಾಡುಗಳನ್ನೊಳಗೊಂಡ ಸಂಸ್ಕೃತಿ ಎಂದು ಕರೆಸಿಕೊಳ್ಳೊ ಸಂಪ್ರದಾಯಗಳು ಅತನನ್ನು ಜಾತಿಯತೆಯೊಳಗಿನ ಕೂಪದಲ್ಲಿ ಮುಳುಗಿಸಿರುತ್ತದೆ.ನಿಜವಾಗಿ ಮುಳುಗಿರುವದು ತನ್ನೊಳಗಿನ ಮಾನವೀಯ ಸಂವೇದನೆಗಳು ಎಂಬುದರ ಅರಿವು ಬಾರದಷ್ಟು ತಡೆಯೊಡ್ಡುವದು ಆತನಲ್ಲಿ ಆಪೋಶನಗೊಂಡು ಹೆಮ್ಮರವಾಗಿ ನಿಂತ ಜಾತೀಯತೆ ಎಂಭ ಕಾರ್ಕೋಟಕ ವಿಷ.
ಇನ್ನೂ ಕೆಲವರು ಒಡಂಬಡಿಕೆಗೆ ಮಾನವೀಯತೆಯ ನೆಲೆಗಟ್ಟಿನ ಸೋಗಿನಲ್ಲಿ ನಾವೆಲ್ಲರೂ ಒಂದು ಎನ್ನುತ್ತಾ ,ಏರು ಪೇರುಗಳನ್ನು ಸರಿ ಪಡಿಸುತ್ತೇವೆ ಎನ್ನುತ್ತಾ ಮುನ್ನಡೆಯುವವರು ಇದ್ದಾರೆ. ಇದು ಹೇಗೆ ಅಂದರೆ ದೇವನೂರು ಮಹಾದೇವ ಅವರು ಹೇಳುವಂತೆ ರೋಟರಿ ಸಂಸ್ಕೃತಿಯ ತರ.ರೋಟರಿಯವರಿಗೆ ಏಸಿ ರೂಮಿನಲ್ಲಿ ಐಷಾರಾಮಿ ಹೋಟೆಲಲ್ಲಿ ಕುಳಿತು ಬಡವರ ಬಗ್ಗೆ ಚಿಂತೆ ಮಾಡುವದಕ್ಕೆ ಬಡವರು ಬೇಕು. ಅಂದರೆ ಬಡವ ಇದ್ದಲ್ಲಿ ಇವರ ಸೇವೆ ಆ ಮೂಲಕ ಸಂಸ್ಥೆ ಜೀವಂತ.ಅದೆ ತರನೆ ಸಮಾಜದ ಏರು ಪೇರು ಅಸ್ಪ್ರಶ್ಯತೆಯಂತ ನೀತಿಗಳು ಇದ್ದಲ್ಲಿ ಮಾತ್ರ ಇವರುಗಳ ರಾಜಕೀಯ ಆಕಾಂಕ್ಷೆಗಳ ಜೀವಂತಿಕೆ. ಗಮನಿಸಬೇಕಾದ ಒಂದು ಅಂಶವೆಂದರೆ ಮಾನವೀಯತೆ ಜೊತೆ ಆದರ್ಶವೆಂಬುದು ಕೂಡ ಜೊತೆಗೆ ತಳುಕು ಹಾಕಿಕೊಳ್ಳುತ್ತದೆ. ಆದರ್ಶ ಮೆರೆಯೋದಕ್ಕಾಗೆ ಸಮಾಜಸುಧಾರಣೆ ಅನ್ನೋದನ್ನ ಮಾನವೀಯತೆ ಅನ್ನೋ ನೆಲೆಯಲ್ಲಿ ನೋಡೋದು ಕಷ್ಟನೆ ಸರಿ. ಅದು ಮಾನವ ಕಾಳಜಿಯ ಸೋಗು ಅಷ್ಟೆ. ಮಾನವೀಯತೆಯೆ ಮೊದಲ್ಗೊಂಡು ಅದು ಇತರರಿಗೆ ಮಾನವೀಯತೆಯ ನಿಟ್ಟಿನಿಂದ ಆದರ್ಶವಾಗಿ ಕಂಡರೆ ಅದು ಬೇರೆ ಮಾತು.
ಇವೆಲ್ಲದರ ಹೊರತಾಗಿ ಒಂದಂತೂ ಸತ್ಯ, ಬ್ರಾಹ್ಮಣ ಅಂತ ಸಮಾಜದಿಂದ ಕರೆಸಿಕೊಂಡ ಮಾತ್ರಕ್ಕೆ ಆತ ಬ್ರಾಹ್ಮಣನಾಗಬೇಕಾದ್ದಿಲ್ಲ, ಜಾತೀಯ ಬಂಧನಗಳನ್ನು ಬಿಡಿಸಿಕೊಂಡು ಆತನೂ ಮಾನವನಾಗಬಲ್ಲ, ಆದರೆ ಅವನಿಗೆ ಬೇಡದ ಆತನ ಜಾತಿ ಸಮಾಜಕ್ಕೆ ಬೇಕಿರುತ್ತದೆ.ಆತ ಯಾವ ಜಾತಿಗೂ ನಾ ಒಳಪಟ್ಟವನಲ್ಲ ಎಂಬುದನ್ನು ಎಷ್ಟೆ ಬೊಬ್ಬಿರುದು ಅಂದರು ಸಮಾಜಕ್ಕದು ಕೇಳಿಸುವದೆ ಇಲ್ಲ. ಆತನ ಜಾತಿಯಿಂದ ನಡೆದ ದುರಾಚಾರಗಳು, ಸಮಾಜದ ಏರು ಪೇರುಗಳಿಗೆ ಕಾರಾಣಿಭೂತರಾದ ಆತನ ಹಿರಿಯಿಕರ ಮೂಲಕ ಬಳವಳಿಯೆಂಬಂತೆ ಅವನಿಗೆ ಗೊತ್ತಿಲ್ಲದೆಯೆ ಅದರ ಪಾಪವನ್ನು ಅವನುಣ್ಣುತ್ತಿರಬೇಕು. ಜಾತಿ ಬಂಧನದಿಂದ ಬಿಡಿಸಿಕೊಂಡ ಆತನೂ ಜಾತಿಯ ಕಾರಣದಿಂದ ತನ್ನದಲ್ಲದ ತಪ್ಪಿಗೆ ಪಾಪವೆಂಬಂತೆ ತುಚ್ಚ ಮಾತುಗಳು, ದೃಷ್ಟಿಗಳನ್ನು ಎದುರಿಸಬೇಕಾಗುತ್ತೆ. ಹಾಗಿದ್ದಾಗ ಆತನಿಗೆ ಉಳಿದಿರುವ ದಾರಿ ಎಂದರೆ ಇದೆಲ್ಲವನ್ನೂ ಸಹಿಸುತ್ತೆಲೆ ಜಾತಿಯ ಸೋಗಲಾಡಿತನವನ್ನು ದಾಟಿ ಮನುಷ್ಯನಾಗಿ ಎಲ್ಲಾ ಕಠಿಣ ಹಾದಿಯನ್ನು ದಾಟಿ ಕ್ರಮಿಸುವದಕ್ಕೆ ತನ್ನಿಂದಾದ ಪ್ರಯತ್ನ ಪಡೋದೆ ಆಗಿರುತ್ತದೆ.ಅತನ ಮನಸ್ಸು ಪರಿಶುದ್ದವಾಗಿದ್ದಲ್ಲಿ ಜಾತಿ ಧರ್ಮದಿಂದ ಹೊರತಾಗಿ ಒಂದಲ್ಲ ಒಂದು ದಿನ ಎಲ್ಲರೀಗೂ ಸಲ್ಲುವವನಾಗುತ್ತಾನೆ ಅನ್ನೊ ನಂಬಿಕೆಯೆ ಆತನ ದಾರಿದೀಪವಾಗಬೇಕು.ತನ್ನ ಜಾತಿಯಿಂದ ಅವಮಾನಿತ ಮಂದಿ ಬಳಗದ ಮುಂದು ತನ್ನ ಅವಮಾನ ತೃಣ ಮಾತ್ರದ್ದು ಎಂಬ ಸತ್ಯದ ಅರಿವು ಇರಬೇಕಷ್ಟೆ.
ಚಿತ್ರ ಕೃಪೆ:-ಅವಧಿ
ಚಿತ್ರ ಕೃಪೆ:-ಅವಧಿ