Friday, September 30, 2011

ವೈಧಿಕ.

ಜಾತೀಯತೆ ತಾಳ ಮೇಳಗಳ ಜೊತೆ ಪ್ರಕೃತಿ ಮತ್ತು ಪರಿಸ್ಥಿತಿ ಕಲಿಸುವ ಪಾಠ -ವೈಧಿಕ.

ಮೇಲೊಂದು ಕಟ್ಟಿಗೆ ಹೊರೆ,ಕಂಕುಳಕ್ಕೆ ತೂಗು ಹಾಕಿರುವ ಕತ್ತಿ,ಅಷ್ಟಿದ್ದರು ಕೈ ಬೀಸಿ ಬಿರು ಬೀಸನೆ ನಡೆಯುತಿದ್ದ ಚೋಮನ ನಡಿಗೆಯು ಒಮ್ಮೆಲೆ ಸ್ಥಭ್ದವಾಗಿ ಗಪ್ಪನೆ ನಿಂತಿದ್ದ.ಎದುರಿಗೆ ಕಚ್ಚೆ ಉಟ್ಟುಕೊಂಡು ಹೆಗಲಿಗೆ ಶಾಲು ಹಾಕಿ ಒಂದು ಜೋಳಿಗೆ ತೂಗು ಹಾಕಿಕೊಂಡು ತನ್ನ ಜನೀವಾರವನ್ನು ನೇವರಿಸುತ್ತ ಕೋಪದಿಂದ ನಿಂತಿದ್ದ ಸುಬ್ರಾಯ ಭಟ್ಟರನ್ನು ಕಂಡು. ಸುಬ್ರಾಯ ಭಟ್ಟರು ಹೆಗಡೆ ಹಳ್ಳಿಯ ಪೌರೋಹಿತ್ಯ ಕುಟುಂಬದವರು,ಪರ ಜಾತಿಯವರು ಎದುರಿಗೆ ಸಿಕ್ಕಲ್ಲಿ ಮೈಲಿಗೆ ಅಂತ ಬೊಬ್ಬಿರುದು ಬಯ್ಯ ನಿಲ್ಲುವ ವೈಧಿಕ.ಅಂತವರ ಎದುರು ಹೊಲೇರು ಅಂತ ಕರೆಸಿಕೊಳ್ಳುವ ಚೋಮ ನಿಂತಿದ್ದ,ಇನ್ನೇನನ್ನುತ್ತಾನೊ ಈ ಬ್ರಾಹ್ಮಣ ಎಲ್ಲಿ ಶಾಪ ಹಾಕಿ ಬಿಡುತ್ತಾನೊ ಅನ್ನೊ ಭಯದಿಂದ ಸುಬ್ರಾಯ ಭಟ್ಟ ಬಾಯಿ ತೆಗೆಯುವ ಮೊದಲೆ,ಮುಬ್ಬು ಕತ್ಲಲ್ವೆ!!!!!ಹಟ್ಟಿ ಬೇಗ ಸೇರ್ಕೊಂಡ್ಬಿಡೋಣ ಅಂಬೋ ಅವಸರ್ದಾಗೆ ಗೊತ್ತಾಗ್ಲಿಲ್ಲ ಬುದ್ದಿಯೋರ ಎಂದು ಪ್ರತ್ಯುತ್ತರಕ್ಕು ಕಾಯದೆ ಮುಂದಡಿ ಇರಿಸಿದ್ದ ಆ ದಿನ ಚೋಮ.ಸುಬ್ರಾಯ ಭಟ್ಟ ಬಾಯಲ್ಲೇ ಗೊಣಗುತ್ತ ಮನೆ ಕಡೆ ಹೊಂಟಿತ್ತು.

ಹೆಗಡೆ ಹಳ್ಳಿ ಮಡಿಕೇರಿಯ ಸೋಮವಾರ ಪೇಟೆಯಿಂದ ಒಂದು 10 ಮೈಲಿ ದೂರವಿರುವ ಹಳ್ಳಿ.ಹಳ್ಳಿಯ ಹಿಂದಡಿ ಸುಂದರ ಕುಮಾರ ಪರ್ವತದ ರಮಣೀಯ ದೃಶ್ಯ.ಆ ಊರು ಹೆಚ್ಚಿನ ಬ್ರಾಹ್ಮಣ ಕುಟುಂಬಗಳನ್ನು ಹೊಂದಿದ್ದು ಆ ಕುಟುಂಬಗಳ ಅಡಿಕೆ ತೋಟ ಮುಂತಾದುವದರಲ್ಲಿ ದುಡಿಯಲು ಬಂದ ಒಂದಷ್ಟು ಸಮಾಜದಲ್ಲಿ ಕೆಳ ಜಾತಿಗಳು ಎಂದು ಕರೆಯಲ್ಪಡುವ ಕುಟುಂಬಗಳು,ಒಂದಷ್ಟು ಮುಸ್ಲಿಂ ಕುಟು೦ಬಗಳು,ಬ್ರಿಟಿಷರ ಕಾಲದಿಂದ ನೆಲೆ ನಿಂತ ಒಂದೆರಡು ಕ್ರೈಸ್ತ ಕುಟುಂಬ.ಇತರೆ ಮಧ್ಯಮ ಜಾತಿ ಕುಟುಂಬಗಳು ಹೊಂದಿದ್ದ ಒಂದು ಸಣ್ಣ ಊರು ಅದು.ಊರಿನಲ್ಲೊಂದು ದೇಗುಲ.ಅದರ ಅರ್ಚಕರೆ ಈ ಸುಬ್ರಾಯ ಭಟ್ಟರು.ಊರ ಮಂದಿಯಿಂದ ಜಾತೀಯ ಹೆದರಿಕೆಗೊ, ಭಕ್ತಿ ಭಾವಕ್ಕೊ ಏನೋ ಒಟ್ಟಿನಲ್ಲಿ ಗೌರವಕ್ಕೆ ಪಾತ್ರರಾಗಿದ್ದವರು.ಆ ಊರಿಗೊಂದು ಏಕೋಪಾಧ್ಯಯ ಕಿರಿಯ ಪ್ರಾಥಮಿಕ ಶಾಲೆ.ಅದರ ಮೆಸ್ತರೆ ದೂರದ ಸುಳ್ಯದ ನಾವಡರು. ಜಾತಿಯಲ್ಲಿ ಅವರು ಬ್ರಾಹ್ಮಣರೆ ಆದರು ಆ ತನವನ್ನು ಸಂಸ್ಕಾರದಲ್ಲಿ ತನ್ನದಾಗಿಸಿ ಅಚಾರದಲ್ಲಿ ಮಾನವತೆ ಮೆರೆಯುವವರು. ಅದಕ್ಕೆ ಕಾರಣಗಳು ಇತ್ತು. ಅವರ ತಂದೆ ಮಿಲಿಟರಿಯಲ್ಲಿ ಇದ್ದವರು ತನ್ನೊಬ್ಬಳೆ ಮಗಳನ್ನು ತನ್ನ ಆತ್ಮೀಯ ಕೊರಗಪ್ಪ ಗೌಡರ ಮಗ ವಿವೇಕನಿಗೆ ಕೈಯೇರೆದು ಮದುವೆ ಮಾಡಿದ್ದರು,ಯಾರೊ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಾನು ಒಬ್ಬ ವೇದ ಪುರಾಣಗಳು ತಿಳಿದುಕೊಂಡ ನಿಮ್ಮ ಪ್ರಕಾರದ ಅಚ್ಚ ಬ್ರಾಹ್ಮಣ ಏನು ಮಾಡಬೇಕಿತ್ತೊ ಅದನ್ನೇ ಮಾಡಿದ್ದೇನೆ, ನನಗೆಂದು ನನ್ನ ಸಂಸ್ಕೃತಿ ಜಾತೀಯತೆಯನ್ನು ಎಲ್ಲೂ ಕಲಿಸಿಲ್ಲ ತಾವಿನ್ನು ತೆರಳಬಹುದು ಅಂದು ಮುಖಕ್ಕೆ ಹೊಡೆದಂತೆ ನುಡಿದಿದ್ದರು,ಇಂತವರ ಮಗನಾದ ನಾವಡರ ವಿಚಾರಗಳು ಈ ತೆರವಾಗೆ ಇದ್ದು,ಟಿ ಸಿ ಹೆಚ್ ಕಲಿಕೆಯ ನಂತರ ಆರಿಸಿ ಬಂದ ಕೆಲಸದ ನಿಮಿತ್ತ ಈ ಹೆಗಡೆ ಹಳ್ಳಿ ಬಂದು ಸೇರಿದ್ದರು.

ಮೊದಲಿಗೆ ನಾವಡರಿಗೆ ಬ್ರಾಹ್ಮಣರೆ ಹೆಚ್ಚಾಗಿದ್ದ ಆ ಊರಿನಲ್ಲಿ ಇವರು ಬ್ರಾಹ್ಮಣರೆಂಬ ಕಾರಣಕ್ಕೆ ಅದ್ದೂರಿ ಸ್ವಾಗತವೆ ದೊರಕಿತ್ತು.ಹಲವು ಕುಟುಂಬಗಳು ತಮ್ಮ ಮನೆಯಲ್ಲಿರಲು ಆಹ್ವಾನ ಕೊಟ್ಟರು ಅದೆಲ್ಲವನ್ನು ಪ್ರೀತಿ ಇಂದಲೆ ನಿರಾಕರಿಸಿ ನಾವಡರು ಶಾಲೆಯ ಒಂದು ಕೋಣೆಯನ್ನು ತನ್ನದಾಗಿಸಿ ಅಲ್ಲಿಯೇ ಬಿಡಾರ ಹೂಡಿದ್ದರು.ಶಾಲೆ ಮುಗಿದ ನಂತರ ಒಂದು ಸಣ್ಣ ರೇಡಿಯೋ ಕಿವಿ ತಿರುವಿ, ಸೀಮೆ ಎಣ್ಣೆ ಸ್ಟೋವ್ ಹಚ್ಚಿ ಟೀ ಮಾಡಿ ಕುಡಿದು ಅಲ್ಲಿನ ಕೋಡಗನ ಬೆಟ್ಟಕ್ಕೆ ನಡೆದು ಕತ್ತಲಾಗುವವರೆಗೆ ಅಲ್ಲಿಂದ ಕಾಣುವ ಪ್ರಕೃತಿ ಸೌಂದರ್ಯ ಆಸ್ವಾದಿಸಿ ಮನೆ ತಲುಪುತ್ತಿರುವದಷ್ಟೆ ಆ ದಿನಗಳ ಅವರ ಹವ್ಯಾಸಗಳಾಗಿತ್ತು.ಮುಂದೆ ಈ ಹವ್ಯಾಸಗಳಿಗೆ ಅವರಿಗೆ ಜೊತೆಯಾಗಿದ್ದು ಆ ಊರಿನ ಚಾರಣಿಗರ ಮಾರ್ಗದರ್ಶಿಯಾಗಿ ಕೆಲಸ ಮಾಡುತಿದ್ದ ರಾಮಣ್ಣ.ಜೀವನೋಪಾಯಕ್ಕಾಗಿ ಇವನು ಒಂದು ಸಣ್ಣ ಅಂಗಡಿಯನ್ನು ದೇಗುಲದ ಪಕ್ಕ ಇಟ್ಟುಕೊಂಡು ದೇಗುಲದಲ್ಲಿ ಪೂಜೆ ಕೈಗೊಳ್ಳಲು ಬೇಕಾದ ಸಾಮಗ್ರಿ ಮತ್ತು ಕುಮಾರ ಪರ್ವತದಿಂದ ಇಳಿದು ಬರುವ ಚಾರಣಿಗಳನ್ನೆ ನಂಬಿಕೊಂಡು ವ್ಯಾಪಾರ ವಹಿವಾಟು ನಡೆಸುತಿದ್ದ.ತಾನು ಚಾರಣಿಗರ ಜೊತೆ ತೆರಳಬೇಕಾದಾಗ ಅಂಗಡಿಯನ್ನು ತನ್ನ ಬಾವ ಮೈದುನ ತನಿಯನ ಸುಪರ್ದಿಗೆ ವಹಿಸುತಿದ್ದ,ಹೀಗಿದ್ದ ರಾಮಣ್ಣನಿಗೆ ತನ್ನೂರಿನ ಮೇಸ್ತ್ರ ಈ ಹವ್ಯಾಸಗಳು ಆಸಕ್ತಿ ಕೆರಳಿಸಿದ್ದವು,ಹಾಗು ಅವರ ಈ ಆಸಕ್ತಿಗಳಿಗೆ ಅವನು ಜೊತೆಯಾಗಿದ್ದ.ಮುಂದೆ ಹೀಗೆ ಇವರು ರಜಾ ದಿನಗಳಲ್ಲಿ ಕಾಡು ಸುತ್ತುವದು,ತಿಂಗಳಿಗೊಮ್ಮೆ ಪರ್ವತ ಏರುವದು,ಬೇಟೆ,ತೊರೆ ಬದಿ ಬಿಡಾರ ಹೂಡಿ ಅಡಿಗೆ ಮಾಡಿ ತಿಂದು ತೇಗುವದು ಮುಂತಾದ ಹವ್ಯಾಸಗಳು ಮುಂದುವರಿದಿತ್ತು,ಇವರ ಜೊತೆ ರಾಮಣ್ಣನಲ್ಲದೆ ಚೋಮ , ಮಾದ,ಸಿದ್ದರ ಹುಡುಗ ಪರಮ,ಅಣ್ಣು ಪೂಜಾರಿ ಮಗ ನೋಣಯ ಹೀಗೆ ಬಹಳಷ್ಟು ಸಾಥಿಗಳು ದೊರಕಿದ್ದರು.ಮೊದ ಮೊದಲು ನಾವಡರು ಬ್ರಾಹ್ಮಣರೆಂಬ ಕಾರಣಕ್ಕೆ ಹಿಂದೆ ಸರಿಯುತಿದ್ದ ಇವರುಗಳು ಕ್ರಮೇಣ ಇವರು ತೋರಿಸುತಿದ್ದ ಪ್ರೀತಿ ಅಪ್ಯಾತೆಗಳಿಗೆ ಮಾರು ಹೋಗಿದ್ದರು,ಇದಲ್ಲದೆ ಹೆಚ್ಚಿನ ಬ್ರಾಹ್ಮಣ ಮಕ್ಕಳೇ ತುಂಬಿದ್ದ ಆ ಶಾಲೆಯಲ್ಲಿ ನಾವಡರಿಂದಾಗಿ ಉಳಿದ ಜಾತಿಯ ಮಕ್ಕಳು ಕೂಡ ಹೆಚ್ಚು ಹೆಚ್ಚು ಬರ ತೊಡಗಿದರು.

ನಾವಡರ ಈ ಎಲ್ಲ ಕಾರ್ಯಗಳಿಂದಾಗಿ ಹೆಚ್ಚಿನ ಚಿಂತೆಗೊಳಗಾದವರು ಎಂದರೆ ಆ ಊರಿನ ಜಾತಿ ಅಧಿಪತ್ಯದ ಮೂಲಕ ಅಳುತಿದ್ದ ಬ್ರಾಹ್ಮಣ ಕುಟುಂಬಗಳು ಅದರಲ್ಲೂ ಆ ದಳದ ನಾಯಕ ಸುಬ್ರಾಯ ಭಟ್ಟರು.ಈ ಪುಡಗೊಸಿ ಬ್ರಾಹ್ಮಣ ವೇಷದಾರಿ ನಾವಡ ಶಾಲೆಯನ್ನು ಹಾಗು ನಮ್ಮ ಮಕ್ಕಳನ್ನು ಮೈಲಿಗೆ ಮಾಡ ಹೊರಟಿದ್ದಾನೆ!!!! ಎಂದು ಬಹಿರಂಗವಾಗಿಯೆ ದೇವಳದ ಅಂಗಳದಲ್ಲಿ ಸೇರಿದ್ದ ಬ್ರಾಹ್ಮಣ ಸಮುದಾಯದವರೊಡನೆ ತನ್ನ ಅಸಮಧಾನ ತೋಡಿಕೊಂಡಿದ್ದರು.ತದ ನಂತರ ಒಂದು ಅಘೋಷಿತ ಬಹಿಷ್ಕಾರ ನಾವಡರ ಮೇಲೆ ಬ್ರಾಹ್ಮಣ ಕುಟುಂಬಗಳು ಹೇರಿದ್ದವು.ಇವೆಲ್ಲವೂ ನಾವಡರಿಗೆ ವಿಧಿತವಾಗಿ ತಿಳಿದರು ಕೂಡ ಅವಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮೌನಕ್ಕೆ ಶರಣಾಗಿದ್ದರು.ಹೀಗಿರಬೇಕಾದರೆ ಅದೇ ಊರಿನ ಗಾಣಿಗ ಸಮಾಜಕ್ಕೆ ಸೇರಿದ ಅರುಣಳನ್ನು ತನ್ನ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿಯೇ ಮದುವೆಯಾದರು.ಅರುಣಳಾ ಮನೆ ಅಂಗಳದ ಮೂಲಕವೇ ಕೊಡುಕಲ್ಲ ಮೇಲೆ ಹೋಗುವ ದಾರಿ ಇದ್ದುದರಿಂದಲೊ ಏನೊ ಅವರಲ್ಲಿ ಕೊಡು ಕಲ್ಲಿನ ಕೃಪೆ ಇಂದ ಪ್ರೀತಿ ಉಕ್ಕಿತ್ತು, ನಾವ್ಯಾಕೆ ಮದುವೆಯಾಗಬಾರದು? ಎಂಭ ಮೊದಲ ಪ್ರಸ್ತಾಪ ನಾವಡರಿಂದಲೆ ಬಂದಿತ್ತು.ಅಚ್ಚರಿಯೊಂದಿಗೆ ಹೂಂ....... ಅನ್ನೋ ಪ್ರತಿಕ್ರಿಯೆಯೊಂದಿಗೆ ಅರುಣ ನಾಚಿ ನಿಂತಿದ್ದಳು.ಇಷ್ಟೆ!! ವಿಷಯ ನಾಡಿಗರ ಮೂಲಕ ತನ್ನ ತಂದೆಗೆ ರವಾನೆ ಆಯಿತು,ಮಗನ ಇಚ್ಚೆಯ ಮುಂದೆ ಉಳಿದಿದ್ದೆಲ್ಲ ಅವರಿಗೆ ಗೌಣವಾಗಿರಬೇಕಾದರೆ ಸಂತೋಷದಿಂದಲೆ ಅವರ ಸಮ್ಮತಿ ಕೂಡ ದೊರಕಿತ್ತು,ಊರ ಜನರಿಗೆ ಅಚ್ಚರಿ ಆದರು ನಾವಡರ ಯಾವುದೇ ಕಾರ್ಯವು ಸಂತೋಷದ್ದೆ ಆಗಿರುತ್ತದೆಂಬ ಅದಮ್ಯ ವಿಶ್ವಾಸವು ಇದ್ದುದರಿಂದ ಜನ ಸಂಭ್ರಮ ಪಟ್ಟರು.ಅಸಹ್ಯ ಪಟ್ಟುಕೊಂಡವರು ಅದೆ ಬ್ರಾಹ್ಮಣ ಪಂಗಡದವರು ಹಾಗು ದೇಗುಲ ಅರ್ಚಕ ಸುಬ್ರಾಯ ಭಟ್ಟರು.ನಾವಡರ ಈ ನಿರ್ಧಾರ ಅವರಿಗೆ ಘೋಷಿತ ಬಹಿಷ್ಕಾರ ಮತ್ತು ನಾವಡರಿಗೆ ದೇಗುಲ ಪ್ರವೇಶ ನಿಷಿದ್ದ ಅನ್ನುವ ಕಟ್ಟಪ್ಪಣೆಗಳು ಸುಬ್ರಾಯ ಭಟ್ಟರಿಂದ ಬಂದಿತ್ತು.ಅದೆಲ್ಲವನ್ನು ಮೌನವಾಗಿಯೆ ಸ್ವೀಕರಿಸಿದ ಊರ ಜನ ಶಾಲಾ ಮೈದಾನದಲ್ಲೆ ಚಪ್ಪರ ಹಾಕಿ ನಾವಡರ ಮತ್ತು ಅರುಣಲ ಮದುವೆಯನ್ನು ಸುಸೂತ್ರವಾಗಿ ನೆರವೇರಿಸಿದ್ದರು,ಊರ ಬ್ರಾಹ್ಮಣರ ಹೊರತಾಗಿ, ಜನ ಜಾತ್ರೆಯೆ ನೆರೆದಿತ್ತು,ನಾವಡರ ತಂದೆ ಖುದ್ದು ಹಾಜರಿದ್ದು ಮಂಗಳ ಕಾರ್ಯ ನೆರವೇರಿಸಿದ್ದರು.ಮದುವೆ ಮುಗಿಸಿದ ಮರುದಿನದ ಬೆಳಿಗ್ಗೆ ಅರುಣ ಕೊಡುಕಲ್ಲ ಕಡೆ ಮುಖ ಮಾಡಿ ತನ್ನ ಬಾಲ್ಯ ವಿವಾಹ ,ಒಂದೆ ವರ್ಷದಲ್ಲಿ ತೀರಿಕೊಂಡ ಆ ಬಾಲ್ಯ ಗಂಡ,ಮದುವೆ ಅಂದರೇನು ಅರಿತುಕೊಳ್ಳಲಾಗದ ವಯಸಲ್ಲಿ ವಿಧವೆ ಪಟ್ಟ,ಇದೆಲ್ಲವೂ ಗೊತ್ತಿದ್ದೂ ತನ್ನ ಮತ್ತೆ ಕೈ ಹಿಡಿಯಲು ಮುಂದೆ ಬಂದ ನಾವಡರು ಈ ಎಲ್ಲವನ್ನ ಯೋಚಿಸುತಿದ್ದಳು!!,ಕೊಡುಕಲ್ಲು ಹಾಗು ಅದರ ಹಿಂದಿನ ಕುಮಾರ ಪರ್ವತದ ಮುಸುಕಿದ್ದ ಮಂಜು ಮೆಲ್ಲನೆ ಕರಗುತ್ತಾ ಸೂರ್ಯ ಕಿರಣಗಳು ಅವುಗಳ ನಡುವೆ ನಗುತಿದ್ದವು.

ಸುಬ್ರಾಯ ಭಟ್ಟರ ಮಗಳು ಕಾವ್ಯ, ತನ್ನ ಪ್ರೌಡ ಶಿಕ್ಷಣ ಮುಗಿಸಿ ಸೋಮವಾರ ಪೇಟೆಯಲ್ಲಿ ಪದವಿ ಪೂರ್ವ ಕಾಲೇಜ್ ನಲ್ಲಿ ವಿಧ್ಯಾಭ್ಯಾಸ ಮುಂದುವರಿಸಿದ್ದಳು. ಪಿ ಯು ಸಿ ಮುಗಿದ ಕೂಡಲೆ ಮಗಳಿಗೊಂದು ಮದುವೆ ಮಾಡುವ ಯೋಚನೆ ಸುಬ್ರಾಯಭಟ್ಟ ಹಾಗು ಪತ್ನಿ ಸುಶೀಲ ಅಮ್ಮನದು.ಅದಕ್ಕಾಗಿ ದೂರದ ಮೈಸೂರಿನ ಅಡಿಗರ ಮಗ ಪೌರೋಹಿತ್ಯ ವೃತ್ತಿಯಲ್ಲೇ ಇರುವ ವಾಸುದೇವ ಅನ್ನುವ ವರನನ್ನು ಗೊತ್ತು ಮಾಡಿದ್ದರು.ಆದರೆ ಪಿ ಯು ಸಿ ಮುಗಿಸಿದ ಕಾವ್ಯ ತಾನು ಪದವಿ ಶಿಕ್ಷಣ ಪಡೆಯಲೆಬೇಕೆಂದು ದುಂಬಾಲು ಬಿದ್ದಿದ್ದರಿಂದ ಅನಿವಾರ್ಯವಾಗಿ ಒಪ್ಪಿದ್ದರು ಸುಬ್ರಾಯ ಭಟ್ಟರು.ದೂರದ ಮೈಸೂರ್ ನಲ್ಲೆ ಒಂದು ವಿದ್ಯಾರ್ಥಿನಿ ನಿಲಯಕ್ಕೆ ಸೇರ್ಪಡಿಸಿ ಕಾಲೇಜ್ ಸೇರಿಸಿ ಬಂದಿದ್ದರು.ಕಾವ್ಯ ಓದಿನಲ್ಲಿ ಜಾಣೆ,ಅವಳು ಸೇರಿದ ಕಾಲೇಜ್ ಪ್ರಭಾವವೋ ಏನೋ!!! ಪ್ರಬುದ್ದಳಾಗುತ್ತ ಸಾಗಿದ್ದಳು,ಹಲವಾರು ವಿಚಾರ ಬಗ್ಗೆ ಲೇಖನಗಳನ್ನು ಬರೆಯುತ್ತ ,ಹಲವಾರು ಸಾಮಾಜಿಕ ವಿಷಯಗಳ ಗೋಷ್ಠಿಗಳಲ್ಲಿ ಭಾಗವಹಿಸುತ್ತ ಉತ್ತಮ ವಾಗ್ಮಿಯಾಗಿಯೂ ಆಗಿ ರೂಪುಗೊಂಡಿದ್ದಳು.ಪದವಿ ಶಿಕ್ಷಣ ಮುಗಿಸಿ ಅದೆ ವಾಸುದೇವನ ಪ್ರಸ್ತಾಪ ಮನೆ ಇಂದ ಬಂದರು ಕೂಡಾ ಲೆಕ್ಕಿಸದೆ ತನ್ನ ಇಷ್ಟದ ಎಂ ಎಸ್ ಡಬ್ಲು ಉನ್ನತ ಶಿಕ್ಷಣಕ್ಕೆ ಸೇರಿಕೊಂಡಳು.ಆ ಮೂಲಕ ಸಾಮಾಜಿಕವಾಗಿ ತಾನು ಗುರುತಿಸಿಕೊಳ್ಳಬೇಕೆಂಬ ಹಾಗು ಸಮಾಜಕ್ಕೆ ನೆರವಾಗಬೇಕೆಂಬ ಉತ್ಕಟ ಹಂಬಲ ಅವಳದಿತ್ತು.ಹೀಗಿರಬೇಕಾದರೆ ತನ್ನ ಈ ಹಂತದಲ್ಲಿ ಪರಿಚಯವಾದ ಪೀಟರ್ ಇವಳ ಈ ಕನಸಿಗೆ ಬೆನ್ನೆಲುಬಾಗಿ ನಿಂತ.ಪೀಟರ್ ದೂರದ ಅಮೆರಿಕೆಯ ಕ್ಯಾಲಿಫೋರ್ನಿಯದವ,ವಿಶ್ವದಾದ್ಯಂತ ಸಾಮಾಜಿಕ ಕಾರ್ಯಗಳಿಗಾಗಿ ಎನ್ ಜಿ ಓ ಗಳನ್ನೂ ಸ್ಥಾಪಿಸಿದ್ದ.ಬದುಕು ಮತ್ತು ಮಾನವತೆ ಎಂಭ ವಿಚಾರ ಗೋಷ್ಠಿಗೆ ಆ ಕಾಲೇಜ್ ನವರು ಇವನನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿದ್ದರು.8 ದಿನ ನಡೆದ ಆ ಗೋಷ್ಠಿಯಲ್ಲಿ ಅವನ ವಿಚಾರಗಳು ಅನುಭವಗಳು ಕಾವ್ಯಳನ್ನು ಅತಿಯಾಗಿ ಸೆಳೆಯಿತು,ಪೀಟರ್ಗೂ ಅಷ್ಟೆ ಕಾವ್ಯಳು ಗೋಷ್ಠಿಯಲ್ಲಿ ಎತ್ತುತ್ತಿದ್ದ ಪ್ರಶ್ನೆ,ಕೆಲವೊಂದು ವಿಚಾರ ಮಂಡನೆಗಳ ಶೈಲಿ ನೋಡಿ,ತಾನೆಲ್ಲು ಕಾವ್ಯಳಂತ ಪ್ರತಿಭೆಯನ್ನು ಈ ಹಿಂದೆ ಕಂಡಿಲ್ಲ ಎಂದು ಎಲ್ಲರೆದುರೆ ಹೇಳಿದ್ದ.ತದ ನಂತರ ಇವರುಗಳ ನಡುವೆ ಫೋನ್,ಇಮೇಲ್ ಮುಂತಾದವು ಸಾಮಾನ್ಯವಾಗಿತ್ತು, ಹೆಚ್ಚಿನೆಲ್ಲ ವಿಚಾರಗಳು ತಮ್ಮ ವಿಷಯಾಧಾರಿತವಾಗೆ ಇರುತಿದ್ದವು.ಹೀಗೆ ಮುಂದುವರಿದ ಕಾವ್ಯಳ ವಿದ್ಯಾಭ್ಯಾಸ ಒಂದು ದಿನ ಕೊನೆಗೊಳ್ಳುತ್ತದೆ. ಕೂಡಲೆ ಪೀಟರ್ ನಿಂದ ತನ್ನ ಸಂಸ್ಥೆಗೆ ಸಂಭಂದ ಪಟ್ಟ ಒಂದು ರಿಸರ್ಚ್ಗೆ ಸಂಬಂಧಿಸಿದಂತೆ ಮುಕ್ತ ಆಹ್ವಾನ ಬರುತ್ತದೆ.ಖುಷಿ ಇಂದಲೆ ತನ್ನ ವಿದ್ಯಾರ್ಥಿನಿ ನಿಲಯವನ್ನು ಖಾಲಿ ಮಾಡಿ ತನ್ನ ಸಹಪಾಠಿಗಳನ್ನೆಲ್ಲ ಬೀಳ್ಕೊಟ್ಟು ಹೆಗಡೆ ಹಳ್ಳಿ ತನ್ನ ಮನೆಗೆ ತಲುಪಿದ್ದಳು ಕಾವ್ಯ.

ಮನೆಯಲ್ಲಿ ಸಂಭ್ರಮವೋ ಸಂಭ್ರಮ,ಶುಶೀಲ ಅಮ್ಮನಂತೂ ಮಗಳಿಗೆ ಇಷ್ಟವಾದ ಅಡುಗೆ ತಯಾರಿಕೆಯಲ್ಲಿ ಮುಳುಗಿದ್ದರು.ಸುಬ್ರಾಯ ಭಟ್ಟರು ಅಡಿಗರ ಮನೆಗೆ ಫೋನಾಯಿಸಿದ್ದರು , ಮಗ ವಾಸುದೇವನನ್ನು ಕರಕೊಂಡು ಊರ ಕಡೆ ಬಂದು ಹೋಗಿ ಎಂಬ ಆಮಂತ್ರಣವನ್ನು ನೀಡಿದ್ದರು.ವಾಸುದೇವ ಇನ್ನು ಮದುವೆಯಾಗದೆ ಕುಂತಿದ್ದ ಕಾರಣ ಕಾವ್ಯಗಾಗಿ ಅಲ್ಲ,ಬ್ರಾಹ್ಮಣ ಅದರಲ್ಲೂ ಪೌರೋಹಿತ್ಯ ವೃತ್ತಿಯವನಿಗೆ ಹೆಣ್ಣು ಸಿಗುತ್ತಿರಲಿಲ್ಲ.ಆದರೆ ಸುಬ್ರಾಯ ಭಟ್ಟರಿಗೆ ಅದೆಲ್ಲ ಯೋಚನೆಗೆ ಬರುತ್ತಿರಲಿಲ್ಲ.ಏನಾದರಾಗಲಿ ಈ ಸಾರಿ ಮದುವೆ ಮುಗಿಸಿಯೆ ತೀರಬೇಕೆಂದು ಧೃಡ ಸಂಕಲ್ಪ ತೊಟ್ಟಿದ್ದರು ಹಾಗು ಈ ಬಗ್ಗೆ ನಿನ್ನ ಮಗಳಿಗೂ ತಿಳಿಹೇಳು ಎಂದು ಶುಶೀಲ ಅಮ್ಮನಿಗೂ ಎಚ್ಚರಿಸಿದ್ದರು.ಈ ವಿಷಯ ಕಾವ್ಯಳಿಗೆ ತನ್ನ ಅಮ್ಮನ ಮೂಲಕ ತಿಳಿದಾಗ ನಿಜವಾಗಿಯೂ ಧೃತಿ ಕೆಟ್ಟು ಕುಳಿತಿದ್ದಳು.ಅವಳ ಕಣ್ಣೆದುರು ಇದ್ದುದು ಒಂದೆ ಅದು ತಾನು ಕಟ್ಟಿಕೊಳ್ಳುವ ಭವಿಷ್ಯ,ತನ್ನ ತಂದೆ ನೋಡಿದ ವರ ಈ ನಿಟ್ಟಿನಲ್ಲಿ ಯಾವುದಕ್ಕೂ ನಿಲುಕದವನು ಆಗಿದ್ದ,ಜೀವ ಬಿಟ್ಟೆನೆಯೆ ಹೊರತಾಗಿ ಈ ಮದುವೆಗೆ ಒಪ್ಪಿಗೆ ನೀಡಲಾರೆ ಅನ್ನುವ ನಿರ್ಧಾರಕ್ಕೆ ಬಂದಿದ್ದಳು.ಆದರೆ ತನ್ನ ತಂದೆ ತಾಯಿಗೆ ಇದ ತಿಳಿಸುವದೆ೦ತು ......? ದಿಕ್ಕು ತೋಚದಾಗಿತ್ತು ಕಾವ್ಯಳಿಗೆ.ಹೀಗಿರಬೇಕಾದರೆ ಅಡಿಗರ ಆಗಮನವಾಗಿತ್ತು ಮಗ ವಾಸುದೇವನೊಂದಿಗೆ.ಹುಡುಗಿ ನೋಡುವ ಶಾಸ್ತ್ರ ನಡೆಯಿತು ತದ ನಂತರ ಅಡಿಗರು ಏನಮ್ಮ ಈ ಮದುವೆಗೆ ನಿನ್ನ ಒಪ್ಪಿಗೆಯೂ?ಎಂದು ಕಾವ್ಯಳ ಮುಂದೆ ಪ್ರಶ್ನೆ ಇಟ್ಟಿದ್ದರು.ಹೂಂ...........ಒಪ್ಪಿಗೆ ಆದರೆ ಒಂದು ಶರತ್ತಿನ ಮೇಲೆ ಅಂದು ಪ್ರತಿಕ್ರಿಯೆ ತಿಳಿಯುವದಕ್ಕಾಗಿ ಎಲ್ಲರ ಮುಖವನ್ನೊಮ್ಮೆ ನೋಡಿದಳು.ಸುಬ್ರಾಯ ಭಟ್ಟರು ಏನು ತಿಳಿಯದೆ ಮಗಳ ಈ ಮಾತನ್ನು ಕೇಳಿ ಪ್ರತಿಕ್ರಿಯಿಸಲು ಆಗದೆ ಅಡಿಗರ ಮುಖ ನೋಡಿ,ಕಷ್ಟದಿಂದ ನಗು ಮೊಗದ ನಾಟಕವನ್ನಾಡಿದರು,ಅದೇನಮ್ಮ?ಹೇಳು.................!!!!!ಅಡಿಗರು ಮಾತು ಮುಂದುವರಿಸಿದ್ದರು.ಏನಿಲ್ಲ ನನಗೊಂದು ರಿಸರ್ಚ್ ಮಾಡಬೇಕಿದೆ ಅದಕ್ಕಾಗಿ ಅಮೆರಿಕೆಗೆ ಹೋಗಬೇಕು ಒಂದೆರಡು ವರ್ಷ ಅಷ್ಟೆ.ಆಮೇಲೆ ಮದುವೆ ಇಟ್ಟುಕೊಂಡರೆ ನನ್ನದೇನು ಅಭ್ಯಂತರವಿಲ್ಲ,ನಿಮಗೆ ಭರವಸೆ ಇಲ್ಲಾಂದ್ರೆ ಈಗಲೇ ನಿಶ್ಚಿತಾರ್ಥ ಬೇಕಾದರೆ ಮುಗಿಸಿ.ತಾನು ಅದಾಗಲೆ ಈ ಬಗ್ಗೆ ಒಪ್ಪಿಗೆ ಸೂಚಿಸಿರುವದರಿಂದ ಅನಿವಾರ್ಯತೆಗೆ ಸಿಲುಕಿದ್ದೇನೆ.ದಯವಿಟ್ಟು ಒಪ್ಪಿಕೊಳ್ಳಿ ಎಂದು ಬೀಸುವ ದೊಣ್ಣೆ ಏಟು ತಪ್ಪಿಸಿಕೊಳ್ಳಲು ಒಂದು ನಾಟಕವಾಡಿದ್ದಳು ಕಾವ್ಯ.ಸುಬ್ರಾಯ ಭಟ್ಟರು ಸುಮ್ನಿರು ನೀನು.......!! ಅಮೇರಿಕೆಯು ಇಲ್ಲ ಎಂತದು ಇಲ್ಲ,ತೆಪ್ಪಗೆ ಮದುವೆ ಆಗಬೇಕು ಅಷ್ಟೇ ಅಂತ ಅಬ್ಬರಿಸಿದ್ದರು.ಅಡಿಗರು ಒಂದು ನಿಮಿಷ ತೆಪ್ಪಗಾಗಿ ಸುಬ್ರಾಯ ಭಟ್ಟರಲ್ಲಿ ಬಹಳ ಏನು ವಯಸ್ಸು ಇಬ್ಬರಿಗೂ ಆಗಿಲ್ಲ.30- 31 ವರುಷಕ್ಕೆ ಈಗ ಮದುವೆಯಾಗುವದು ಮಾಮೂಲಿ .ನಮಗೂ ನಮ್ಮ ಸೊಸೆ ಅಮೆರಿಕೆಯಲ್ಲಿ ಇದ್ದು ಬಂದವಳು ಅನ್ನೊ ಹೆಮ್ಮೆ ಇರುತ್ತದೆ.ಹಾಗೆ ಅಗಲಿ ಬಿಡಮ್ಮ.ಅಷ್ಟಕ್ಕೂ 2 ವರುಷಗಳ ಮಾತು ತಾನೆ.ಹಾಗೆ ಆಗಲಿ ಬಿಡಮ್ಮ,ನಿಶ್ಚಿತಾರ್ಥ ಈಗಲೆ ಮುಗಿಸಿ ಬಿಡೋಣ ಅಂದರು.ಬೀಗರೆ ಹೀಗನ್ನಬೇಕಾದರೆ ಸುಬ್ರಾಯ ಭಟ್ಟರು ಮೌನರಾಗಿದ್ದರು,ಹಾಗೆ ಮುಂದಿನ ಕೆಲವೆ ಘಂಟೆಯಲ್ಲಿ ಆ ಊರಿನ ಬ್ರಾಹ್ಮಣ ಸಮುದಾಯದವರ ಎದುರು ವಾಸುದೇವ ಮತ್ತು ಕಾವ್ಯರುಗಳ ನಿಶ್ಚಿತಾರ್ಥ ನೆರವೇರಿತ್ತು.ಕಾರ್ಯಕ್ರಮ ಮುಗಿಸಿ ತೆರಳಬೇಕಾದರೆ ವಾಸುದೇವ ಕಾವ್ಯಳ ಮೊಗ ನೋಡಿ ಕಿರು ನಗೆ ಬೀರಿದ್ದ,ಕಾವ್ಯಳು ನಗೆ ತಡೆಯಲಾಗದೆ ಜೋರಾಗೆ ನಕ್ಕಿದ್ದಳು.ಅವಳಿಗೆ ಹರಕೆಯ ಕುರಿಯಂತೆ ಅವನ ಮೊಗ ಕಂಡಿತ್ತು,ಒಂದು ಸಣ್ಣ ಆತಂಕದೊಂದಿಗೆ ಏನನ್ನೊ ನೆನೆಸುತ್ತ ಹಾಗೆಲ್ಲ ಆಗಲಾರದು ಎಂದು ತನಗೆ ತಾನೇ ಸಮಾಧಾನ ಪಟ್ಟಿದ್ದೆಂದರೆ ಅದು ಆ ಹೊತ್ತಿನಲ್ಲಿ ಶುಶೀಲ ಅಮ್ಮ ಮಾತ್ರ.

ಹೀಗೆ ಅಮೆರಿಕ ಸೇರಿದ ಕಾವ್ಯ ಮೊದ ಮೊದಲಿಗೆ ತಿಂಗಳಿಗೆ ಒಮ್ಮೆಯಾದರು ಮನೆಗೆ ಫೋನಾಯಿಸುತಿದ್ದಳು.ಪತ್ರ ಬರೆಯುತಿದ್ದಳು.ಶುಶೀಲ ಅಮ್ಮನಿಗೆ ಮಗಳು ದೂರದಲ್ಲಿ ಇದ್ದಾಳೆ ಅನ್ನುವದೆ ದುಃಖದ ವಿಷಯವಾಗಿತ್ತು,ಮಗಳನ್ನು ನೆನಸಿ ಒಬ್ಬರೆ ಕೂತು ಅಳುತಿದ್ದರು ಕ್ರಮೇಣ ಪರಿಸ್ಥಿತಿಗೆ ಹೊಂದಿಕೊಂಡರು.ಅಡಿಗರು ಅವಾಗಾವಾಗ ಬಂದು ಹೋಗುತಿದ್ದರು,ಸುಬ್ರಾಯ ಭಟ್ಟರ ಅದೆ ವೈದಿಕತೆ ಮುಂದುವರಿದಿತ್ತು.ತನ್ನ ಮಗಳು ಅಮೆರಿಕೆಯಲ್ಲಿರುವದು ಊರಿಗೆ ಹೆಮ್ಮೆಯ ವಿಚಾರ ಅಂತ ಅವರೆ ಹೇಳಿಕೊಳ್ಳುತಿದ್ದರು.ಅದ್ಯಾಕೋ ಅವರ ಹೀಯಾಳಿಕೆ ನುಡಿಗಳಲ್ಲಿ ನಾಡಿಗರು ಅಗತ್ಯವಾಗಿ ಬಂದು ಹೋಗುತಿದ್ದರು.ಅದೆಲ್ಲವನ್ನು ಕಿವಿಗೆ ಹಾಕಿಕೊಳ್ಳದ ನಾಡಿಗರು ಮಾತ್ರ ಅದೇ ಚೋಮ,ರಾಮಣ್ಣ,ನೋಣಯ ಮುಂತಾದವರ ಒಡಗೂಡಿ ಪ್ರಕೃತಿ ಜೊತೆ ಲೀನವಾಗಿ ಅರುಣಳೊಂದಿಗಿನ ಸುಖ ಸಂಸಾರದಲ್ಲಿ ಮುಳುಗಿದ್ದರು.ಹೀಗಿರಬೇಕಾದರೆನೆ ಒಂದು ದಿನ ಪೋಸ್ಟ್ ಮ್ಯಾನ್ ವಸಂತ ಸುಬ್ರಾಯ ಭಟ್ಟರ ಮನೆ ಬಾಗಿಲು ಬಡಿದದ್ದು ಹಾಗು ಆ ಪತ್ರ ನೀಡಿದ್ದು.ಸುಬ್ರಾಯ ಭಟ್ಟರು ಕಾರ್ಯ ನಿಮಿತ್ತ ಸೋಮವಾರ ಪೇಟೆಗೆ ಹೋದುದರಿಂದ ಪತ್ರ ಪಡೆದ ಶುಶೀಲಮ್ಮ ಅದ ಓದಲು ತಿಳಿಯದೆ ವಸಂತನಲ್ಲೇ ಓದಲು ಹೇಳಿದರು.ಪತ್ರ ಕಾವ್ಯ ಬರೆದುದಾಗಿತ್ತು...............!!!!!!!!.ಆ ದಿನದ ಮುಬ್ಬು ಕತ್ತಲ ಸಂಜೆ ಭಟ್ಟರ ಆಗಮನವಾಗಿತ್ತು,ದೀಪಗಳ ಬೆಳಗದೆ ಇದ್ದ ತನ್ನ ಮನೆಯನ್ನು ನೋಡಿ ಅಚ್ಚರಿ ಪಟ್ಟಿದ್ದರು.ಶುಶೀ ........ಎಂದು ಕೂಗುತ್ತ ದೀಪ ಬೆಳಗಿದ್ದರು ಭಟ್ಟರು,ಪಡಸಾಲೆಯ ಕಂಬದ ಬದಿ ಕುಸಿದು ಕೂತಿದ್ದ ಶುಶೀಲ ಅಮ್ಮನನ್ನು ಅವರ ಮಡುಗಟ್ಟಿದ ದುಃಖದ ಮೊಗ ನೋಡಿ ಗಾಬರಿ ಇಂದ ಏನಾಯ್ತು ಶುಶೀ.........ಅಂದಿದ್ದರು.ತಡೆಯದ ದುಃಖದೊಂದಿಗೆ ಭಟ್ಟರನ್ನು ಅಪ್ಪಿ ಹಿಡಿದು ಅವರ ಕೈಯಲ್ಲಿ ಕಾವ್ಯಳ ಪತ್ರವನ್ನು ಇರಿಸಿದ್ದರು.ಭರದಿಂದಲೆ ಪತ್ರ ಬಿಡಿಸಿ ಓದಿದ್ದರು ಭಟ್ಟರು.ಪತ್ರದ ಒಕ್ಕಣೆ ಹೀಗಿತ್ತು.
"ಅಪ್ಪಾ.........ಹೇಗಿದ್ದೀರಿ?,ಅಮ್ಮನನ್ನ ನಿಮ್ಮನ್ನು ಇನ್ನು ಮುಂದೆ ಜೀವನ ಪೂರ್ತಿ ಮಿಸ್ ಮಾಡ್ಕೊತೀನಿ. ಕಾರಣ ಇಷ್ಟೇ ನಾನು ನಿಮ್ಮ ಜಾತಿಯ ವಾದಗಳ ಹಿಡಿತಕ್ಕೆ ಸಿಕ್ಕಿ ಒದ್ದಾಡುವದಕ್ಕೆ ಮನಸಿಲ್ಲ,ಅದೆಲ್ಲವನ್ನು ಮೆಟ್ಟಿ ನಿಂತು ಬಡವರ ಹಸಿವು ನೀಗಿಸಬೇಕೂಂತ ಹೊರಟವಳು ನಾನಪ್ಪ.ನಾನಿಲ್ಲಿ ಒಂದು ಎನ್ ಜಿ ಓ ಪ್ರಾರಂಭಿಸಿದ್ದೇನೆ ಅದ ಮೂಲಕ ಹಲವು ದೇಶಗಳ ಹಳ್ಳಿಯ ಜನಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ನನ್ನ ಉದ್ದೇಶ.ಬೇಸರಿಸದಿರಪ್ಪ ನೀನು ನೋಡಿದ ಆ ಹುಡುಗ ನನ್ನ ಈ ನಿರ್ಧಾರಗಳಿಗೆ ಬೆಂಬಲಿಸಲಾರ,ಆ ಮಟ್ಟಿನ ತಿಳುವಳಿಕೆಗಳು ಅವನಿಗಿರದು,ಅದಕ್ಕಾಗಿ ನಾನು ಈ ದಿನ ಇಲ್ಲಿಯೆ ನನ್ನ ಗೆಳೆಯ ಪೀಟರ್ ಅನ್ನುವವನ ಜೊತೆ ವಿವಾಹವಾಗಿದ್ದೇನೆ.ನಿನ್ನ ಬ್ಯಾಂಕ್ ಖಾತೆಗೆ ೨೦ ಲಕ್ಷ ನಗದನ್ನು ಹಾಕಿರುತ್ತೇನೆ.ಮುಂದೆ ಬೇಕಾದಲ್ಲಿ ಇಷ್ಟವಿದ್ದಲ್ಲಿ ತಿಳಿಸಬಹುದು.ದುಖಿಃಸದಿರಿ,ಒಂದು ವೇಳೆ ನಿಮಗೆ ಮನಶಾಂತಿ ಬೇಕಿದ್ದಲ್ಲಿ ನನ್ನ ತಿಥಿ ನೆರವೇರಿಸಿ ನಿಮ್ಮ ಪ್ರಕಾರ ಶ್ರಾದ್ದ ಕ್ರಿಯೆಯನ್ನು ನಡೆಸಬಹುದು.ವೈಧಿಕತನದಿಂದಲೆ ನಿಮಗೆ ಸಂತೋಷ ಸಿಗುವದಾದರೆ ಹೀಗೆ ಮಾಡಲು ನನ್ನ ಅಭ್ಯಂತರವಿಲ್ಲ.ನಾನು ನಿಮ್ಮ ಮಗಳಾಗಿಯೆ ಇರುತ್ತೇನೆ.ಆದರೆ ಮತ್ತೆ ನಿಮ್ಮಲ್ಲಿಗೆ ಹಿಂದಿರುಗಲಾರೆ, ಜೀವನದ ನಿರ್ಧಾರಘಟ್ಟಗಳೆ ಹಾಗಲ್ಲವೇನಪ್ಪ?ಇತರರಿಗೆ ದುಖಃವಾದರೂ ಸೈ ಒಳ್ಳೆ ಕಾರ್ಯದಲ್ಲಿ ಮುಂದುವರಿಯಬೇಕೆಂದು ನೀನೆ ಕಲಿಸಿರುವುದು ತಾನೆ.ನಿನ್ನ ದೃಷ್ಟಿಯಲ್ಲಿ ನಿನ್ನ ವೈಧಿಕತನವೆ ದೊಡ್ಡದು ಆದರೆ ನನಗೆ ಬಡವರ ಹಸಿವ ನೀಗೀಸೋದೆ ವೈಧಿಕತನ, ನಾನು ಅಮ್ಮ ನಿನ್ನನ್ನೂ ನೆನೆದು ಬರೀಯ ಅಳುತಿದ್ದೇನೆ, ಕಣ್ಣಿರ ಒಂದೆರಡು ಹನಿ    ಪತ್ರದಲ್ಲು ಕಾಣಬಹುದು,ದೇವರ ಕೋಣೆ ಅಂತ ಏನೂ ಇಲ್ಲಪ್ಪ ಇಲ್ಲಿ ,ನನ್ನ ಬೆಡ್ಡಿನ ಮೇಲೆ ನಿಮ್ಮ ಪೊಟೋ ತೂಗು ಹಾಕಿರುವೆ, ಮಲಗುವಾಗಲೆಲ್ಲ ನಿಮ್ಮಗಳ ಬೆಚ್ಚಗಿನ ಕೈ ನನ್ನ ತಟ್ಟುತ್ತಿರುವಂತೆ ಭಾಸವಾಗುತ್ತೆ, ಅದೆ ಭಾವನೆಗಳಲ್ಲಿ ಬದುಕುವೆ, ಮುಂದೆ ಬರೆಯಲಾಗುತ್ತಿಲ್ಲ ಪಪ್ಪ, ಅಮ್ಮನನ್ನೂ..................!!!ಮುಂದೆ ಪತ್ರವೂ ಏನೊಂದು ವಿಷಯಗಳಿಲ್ಲದೆ ಖಾಲಿಯಾಗಿತ್ತು, ಇದ್ದರು ಭಟ್ಟರು ಓದಲಾಗುತ್ತಿರಲಿಲ್ಲ, ಪತ್ರ ಓದಿದ ಎದೆಗೆ ಯಾರೊ ರಭಸದಿಂದ ಚಾಕು ಇರಿದಂತಾಗಿತ್ತು ಭಟ್ಟರೀಗೆ!!!!!,ಅಲ್ಲೇ ಕುಸಿದು ಕೂತಿದ್ದರು,ಆ ದಿನ ರಾತ್ರಿ ದಂಪತಿಗಳಿಬ್ಬರು ಇಹ ಲೋಕದ ಪರಿವೆಯೆ ಇಲ್ಲದೆ ಮಲಗಿದ್ದರು,ಅವರಿಂದ ನಿದ್ರೆ ಅದೆಷ್ಟೋ ಮಾರು ದೂರ ಮಲಗಿತ್ತು!!!!!!!!.ಈ ವಿಷಯ ಕಾಳ್ಗಿಚ್ಚಿನಂತೆ ಪೋಸ್ಟ್ ಮ್ಯಾನ್ ವಸಂತನಿಂದಾಗಿ ಊರಲ್ಲಿ ಹಬ್ಬಿತ್ತು.ಹೆಚ್ಚಿನವರು ಕನಿಕರಿಸತೊಡಗಿದ್ದರು.ಅದು ಹೇಗೋ ಅಡಿಗರಿಗೂ ವಿಷಯ ತಿಳಿದಿತ್ತು,ಸುಬ್ರಾಯ ಭಟ್ಟ ತನ್ನ ಮಗನ ಭವಿಷ್ಯಕ್ಕೆ ಕೊಳ್ಳಿ ಇಟ್ಟವ ಅಂತ ಜರೆದು ಊರ ದೇಗುಲದಲ್ಲಿ ಬ್ರಾಹ್ಮಣ ಸಮುದಾಯದ ಪಂಚಾಯತಿ ಸೇರಿಸಿದ್ದರು ಅಡಿಗರು.ಬ್ರಾಹ್ಮಣ ಸಮುದಾಯದ ನಿರ್ಧಾರದಂತೆ ಇಷ್ಟೆಲ್ಲಾ ನಡೆದ ಮೇಲೆ ಭಟ್ಟರು ಪೂಜೆ ನಡೆಸಲು ಯೋಗ್ಯರಲ್ಲ.ಇನ್ನು ಮುಂದೆ ಈ ದೇಗುಲದ ಅರ್ಚಕರು ಅಡಿಗರ ಮಗ ವಾಸುದೇವ ಅನ್ನುವದು ನಿರ್ಧಾರ ಆಯಿತು.ಸುಟ್ಟ ಬರೆ ಮೇಲೆ ಉಪ್ಪು ಸುರಿದಂತ ಅನುಭವ ಭಟ್ಟರದ್ದು.ಯಾಕೊ ತಾನು ಪರಕೀಯ, ಏಕಾಂಗಿ ಅನಿಸತೊಡಗಿತ್ತು.ತೀರ ಭಟ್ಟರಿಗೆ ನಾವಡರು ನೆನಪಾಗಿ ಅವರ ಮನೆ ಮುಂದೆ ಮೊತ್ತ ಮೊದಲು ನಿಂತಿದ್ದರು ಆಚಾರ್ಯ ಸುಬ್ರಾಯ ಭಟ್ಟರು.ನಾವಡರು ಅತ್ಮೀಯತೆ ಇಂದಲೆ ಸ್ವಾಗತಿಸಿದ್ದರು,ಅವರ ಅತ್ಮೀಯತೆಯನ್ನು ನೋಡಿ ದುಖಃದಿಂದ ಭಟ್ಟರ ಬಾಯಿಂದ ಹೊರಟ ಒಂದೆ ಮಾತು "ಸಾಧ್ಯವಾದರೆ ಕ್ಷಮಿಸಿ ಬಿಡು ನಾವಡ"!!!!!ಅಷ್ಟೇ .........! ಹಿಂತುರಿಗಿ ನೋಡದೆ ತನ್ನ ಮನೆ ದಾರಿ ಹಿಡಿದಿದ್ದರು ಭಟ್ಟರು.

ಇತ್ತೀಚಿಗೆ ಭಟ್ಟರು ಮನೆ ಬಿಟ್ಟು ಹೊರಬರುವದೆ ಅಪರೂಪವಾಗಿ ಬಿಟ್ಟಿತ್ತು.ಸುಶೀಲಮ್ಮ ಇದೆ ವ್ಯಥೆಯಲ್ಲಿ ಕೊರಗಿ ಕೊರಗಿ ಕೃಶರಾಗಿದ್ದರು.ನಾವಡರು ಆಗಾಗ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು,ಅವರ ಮನೆಗೆ ಬೇಕಾದ ಅಗತ್ಯ ಸಾಮಾಗ್ರಿ ಎಲ್ಲವನ್ನು ರಾಮಣ್ಣ ವಾರ ವಾರ ಕೊಟ್ಟು ಹೋಗುತಿದ್ದ.ಇಷ್ಟೆಲ್ಲಾ ನಡೆದ ಒಂದು ವರುಷದ ಒಳಗಾಗಿ ಶುಶೀಲಮ್ಮ ಇದೆ ಕೊರಗಲ್ಲಿ ಪ್ರಾಣ ಬಿಟ್ಟಿದ್ದರು.ಹೆಣಕ್ಕೆ ಹೆಗಲು ಕೊಟ್ಟವರು ಇದೆ ಚೋಮ,ಮಾದ, ನೋಣಯ್ಯ ಹಾಗು ನಾವಡರು.ತೂತು ಮಡಿಕೆ ಹಿಡಿದುಕೊಂಡು ಮುಂದೆ ಸಾಗುತಿದ್ದ ಭಟ್ಟರಲ್ಲಿ ಕಾಡುತಿದ್ದುದು ಒಂದೇ ಪ್ರಶ್ನೆ,ತಾನು ದಿನ ನಿತ್ಯ ಪೂಜೆಗಯ್ಯುತಿದ್ದ ದೇವಿ ನನ್ನ ಕೈಬಿಟ್ಟಳೆ!!!!!ಇದೆಲ್ಲ ಕಳೆದ ನಂತರ ಇವರಿಗೆ ನಾವಡರ ಹೆಂಡತಿ ಅರುಣ ತಂದು ಕೊಡುವ ಎರಡು ಹೊತ್ತಿನ ಊಟವೆ ಪರಮಾನ್ನವಾಗಿತ್ತು, ಮನೆ ಕೆಲಸವನ್ನು ಇದೆ ಚೋಮನ ಹೆಂಡತಿ ಪಾರ್ವತಿ ಮಾಡಿ ಮುಗಿಸುತಿದ್ದಳು,ದಿನವು 2 ಬಾರಿ ನಾವಡರು ಬಂದು ವಿಚಾರಿಸತೊಡಗಿದರು,ಭಟ್ಟರ ತೋಟದ ಕೆಲಸವನ್ನು ನೋಣಯ ಅಚ್ಚು ಕಟ್ಟಾಗಿ ಮುಗಿಸುತಿದ್ದ.ಇಷ್ಟೆಲ್ಲಾ ಆದರು ಕೂಡ ಒಂದು ಕಾಲದ ಬ್ರಾಹ್ಮಣ ಸಮುದಾಯದ ನೇತ್ರತ್ವ ವಹಿಸಿದ್ದ ಇವರನ್ನು ಯಾವೊಬ್ಬ ಬ್ರಾಹ್ಮಣನು ಹೇಗಿದ್ದೀರಿ? ಎಂದು ವಿಚಾರಿಸಲು ಇವರತ್ತ ಸುಳಿಯಲಿಲ್ಲ.ಜಾತೀಯತೆಯ ಹುಂಬತನ ನನ್ನನ್ನು ಹೇಗೆ ಮೂಡನನನ್ನಾಗಿಸಿತ್ತು!!,ನಾನು ಎಷ್ಟೆಲ್ಲಾ ಎಲ್ಲಾ ಇದ್ದು ಕಳಕೊಂಡೆ?ನನ್ನವರು ಯಾರು?ಪರಕೀಯರು ಯಾರು? ತಿಳಿದುಕೊಳ್ಳಲು ನನ್ನ 65 ವಯಸ್ಸು ಸಾಕಾಗಲಿಲ್ಲ ಅಲ್ಲವೆ ?ಅದ್ಯಾಕೆ ಈ ಎರಡು ವರ್ಷ ಇವೆಲ್ಲವನ್ನೂ ನನಗೆ ಕಲಿಸಿಕೊಡುತ್ತಿದೆ!!!!!?ಸಾವಿರಾರು ಉತ್ತರ ದೊರಕದ ಪ್ರಶ್ನೆಗಳನ್ನ ಪ್ರಶ್ನಿಸುತ್ತಲೆ ತನ್ನ ಏಕಾಂತವನ್ನು ಕಳೆಯುತಿದ್ದರು ಭಟ್ಟರು.ಅದೇನು ಅನಿಸಿತೊ ಏನೊ ಒಂದು ದಿನ ಮುಂಜಾನೆಯೆ ಎದ್ದ ಭಟ್ಟರು ಸೋಮವಾರ ಪೇಟೆ ಕಡೆ ಬಹಳ ತಿಂಗಳುಗಳ ನಂತರ ಹೆಜ್ಜೆ ಹಾಕಿದ್ದರು.ಸಂಜೆ ವಾಪಸಾದ ಮೇಲೆ ನಾವಡರನ್ನು ಕರೆಸಿ ಒಂದು ವಿಲ್ ಬರೆದಿಟ್ಟಿದ್ದೇನೆ ನನ್ನ ಮರಣದ ನಂತರ ಇದ ಓದತಕ್ಕದ್ದು ಅಂತ ಅವ್ರ ಕೈಗೆ ಇಟ್ಟಿದ್ದರು ಭಟ್ಟರು.ಇದಾದ ಮೂರೆ ವಾರಗಳಲ್ಲಿ ಭಟ್ಟರು ಕೂಡ ಇಹ ಲೋಕದ ಯಾತ್ರೆ ಮುಗಿಸಿ ಪರ ಲೋಕದ ಕಡೆ ಹೆಜ್ಜೆ ಹಾಕಿದ್ದರು,ಯಥಾ ಪ್ರಕಾರ ನಾವಡರು ಮುಂದೆ ನಿಂತು ಮಗನಾಗಿ ಎಲ್ಲ ಕಾರ್ಯಗಳನ್ನು ಪೂರೈಸಿ ಕಷ್ಟದಿಂದ ಕಾವ್ಯಳ ವಿಳಾಸ ಪತ್ತೆ ಹಚ್ಚಿ ವಿಷಯಗಳನ್ನು ತಿಳಿಸುವ ಸಲುವಾಗಿ ಒಂದು ಪತ್ರ ಗೀಚಿ ಸುಮ್ಮನಾಗಿದ್ದರು.

ಇದೆಲ್ಲ ಆಗಿ ೬ ವರುಷ ಕಳೆದಿದೆ.ಈಗ ಹಗ್ಗಡೆ ಹಳ್ಳಿಗೆ ಒಂದು ಸುಸಜ್ಜಿತ ರಸ್ತೆ ಇದೆ ,ಕಿರಿಯ ಪ್ರಾಥಮಿಕ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಾಗಿದೆ.ಫ್ರೌಢ ಹಾಗು ಪದವಿ ಪೂರ್ವ ಕಾಲೇಜ್ ಇದೆ.ಗ್ರಂಥಾಲಯ,ಅರೋಗ್ಯ ಕೇಂದ್ರ ,ಸಮುದಾಯ ಭವನ.ಕುಡಿಯುವ ನೀರು ಹೀಗೆ ಎಲ್ಲ ಸೌಲಭ್ಯವನ್ನು ಪಡೆದಿದೆ.ಇವೆಲ್ಲ ಕೆಲಸಗಳ ನಡುವೆ ಒಂದು ಬೋರ್ಡ್ ತಗುಲಿ ಹಾಕಿಕೊಂಡಿದೆ.ಎಲ್ಲ ಬೋರ್ಡ್ ನಲ್ಲೂ ಇರುವ ಒಂದು ಸಾಮಾನ್ಯ ಪದ "ಕೊಡುಗೆ ದಿ||ಸುಶೀಲ ಸುಬ್ರಾಯ ಭಟ್ಟರ ಸ್ಮಾರಕ ಟ್ರಷ್ಠ್ "ಎಂಬುದು. ಹೌದು ಸುಬ್ರಾಯ ಭಟ್ಟರ ವಿಲ್ ನಲ್ಲಿ ತನ್ನ ಸಕಲ ಚರಾಚರ ಅಸ್ತಿಯನ್ನು ಊರ ಜನಕ್ಕೆ ದಾನ ಮಾಡಿದ್ದರು, ಅದ ಪರಭಾರೆ ನಡೆಸುವ ಅಧಿಕಾರವನ್ನು ನಾವಡರಿಗೆ ಬಿಡಲಾಗಿತ್ತು.ಆ ಮೂಲಕ "ದಿ||ಸುಶೀಲ ಸುಬ್ರಾಯ ಭಟ್ಟರ ಸ್ಮಾರಕ ಟ್ರಷ್ಠ್" ರೂಪು ಪಡೆದು ತನ್ನ ಕೆಲಸ ಪ್ರಾರಂಭಿಸಿತ್ತು.ಮುಂದಿನ ವರ್ಷಗಳಲ್ಲಿ 15 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಸಿದ್ದತೆಯಲ್ಲೂ ತೊಡಗಿತ್ತು. ಈ ಮೂಲಕ ಸುಬ್ರಾಯ ಭಟ್ಟರ ವೈಧಿಕತನ ಮೆರೆದಿತ್ತು.ಇದೆಲ್ಲದರ ಹಿಂದೆ ಬಲವಾಗಿ ನಿಂತಿದ್ದು ಇದೆ ನಾವಡರು, ಚೋಮ, ರಾಮಣ್ಣ, ನೋಣಯ ಅಲ್ಲದೆ ದೂರದ ಊರಿನಲ್ಲಿದ್ದು ಅರ್ಥಿಕ ಹಾಗು ಆಡಳಿತಾತ್ಮಕ ಬೆನ್ನೆಲುಬಾಗಿ ನಿಂತವರು ಇದೆ ಸುಬ್ರಾಯ ಭಟ್ಟರ ಮಗಳು ಕಾವ್ಯ.ಮೂಕ ಸಾಕ್ಷಿಯಾಗಿ ನಿಂತು ಮಂಜಿನಾಟದಲ್ಲಿ ತಲ್ಲಿನವಾಗಿದ್ದು ಅದೆ ಕೊಡು ಕಲ್ಲ ಗುಡ್ಡ , ಹಾಗು ಅದರ ಹಿಂದಿನ ಕುಮಾರ ಪರ್ವತ.

Wednesday, September 28, 2011

ಪ್ರೀಯ ಭಗತ್ ಗೆ ಜನುಮ ದಿನದ ಶುಭಾಶಯಗಳು.

ನಾವೇನೋ ಸಾದಿಸಿ ಬಿಡುತ್ತೇವೆ,ನಮ್ಮಿ ನಡೆ ಅದೆಷ್ಟೋ ಜನರಿಗೆ ಸ್ಪೂರ್ತಿಯಾಗುತ್ತದೆ,ಇದರಿಂದ ನಾವು ಅಂದುಕೊಂಡಿದ್ದು ಪಡೆಯುವಲ್ಲಿ ನೆರವಾಗುತ್ತದೆ, ನಾವು ಇತಿಹಾಸ ಪುಠ ಸೇರುತ್ತೇವೆ,ಇದೆ ಅಲ್ಲವೇ ಭಗತ್........? ನಿನ್ನ ಸಾವನ್ನು ಎದುರು ನೋಡುತಿದ್ದಾವಾಗ ನಿನ್ನ ಮನಸಲ್ಲಿ ಇದ್ದದ್ದು.ನೀನು ನೇಣು ಕಂಭ ಏರುವ ಮೊದಲು ಅಲ್ಲಿ ಸೇರಿದ್ದ ದೇಶವಾಸಿ ಗಳನ್ನೂ ಹಾಗು ನೆರದಿದ್ದ ಮಕ್ಕಳನ್ನು ಉದ್ದೇಶಿಸಿ ಹೇಳಿದಂತ.... "ನನ್ನ ಪ್ರಿಯ ದೇಶವಾಸಿಗಳೇ... ಈ ನಮ್ಮ ಬಲಿದಾನ ವ್ಯರ್ಥವಲ್ಲ.ಒಬ್ಬ ಭಗತ್ ನೇಣು ಕಂಭ ಏರಬಹುದು.ಆದರೆ ಈ ನನ್ನ ಭಾರತದ ಅಸಂಖ್ಯ ಯುವ ಭಗತ್ ಗಳು ಅಖಂಡ ಭಾರತದ ಸ್ವಾತಂತ್ರ್ಯಕನಸನ್ನು ನನಸಾಗಿಸುವ ಕಾಲ ದೂರವಿಲ್ಲ.ಒಬ್ಬಭಗತ್ ಬಲಿದಾನ ಈ ಮಕ್ಕಳಿಗೆ ಸ್ವಚಂದ ದೇಶವನ್ನು ಕಟ್ಟಿ ಕೊಡುತ್ತದೆ ಎಂದಾದ ಮೇಲೆ ನೇಣು ನನ್ನ ಪಾಲಿನ ಸೌಭಾಗ್ಯ",ನಿನ್ನ ಆಶಯಗಳು ಮೇಲಿನಂತೆಯೇ ಇದ್ದವು ಅನ್ನುವದನ್ನು ನಿನ್ನ ಈ ವಾಖ್ಯಗಳು ನಿರೂಪಿಸುತ್ತವೆ ಅಲ್ಲವೇ.ನೀನಂದು ಕೊಂಡಂತೆ ಭಾರತ ಸ್ವಾತಂತ್ರ್ಯವನ್ನೇನೋ ಪಡೆಯಿತು ಆದರೆ ನಿನಗೆ ಗೊತ್ತಿದೆಯೇ ಭಗತ್......?,ನಿನ್ನ ಅಂತವರ ಅದೆಷ್ಟೋ ಬಲಿದಾನಗಳು , ನಿನ್ನ ವಿಚಾರಗಳು ಉದ್ದೇಶ ಪೂರ್ವಕವಾಗಿಯೇ ಇತಿಹಾಸ ದಿಂದ ಮರೆಯಾಗಿತ್ತು,ಪಕ್ಷ ರಾಜಕಾರಣ ಇದಕ್ಕೆ ಕಾರಣವಾಗಿತ್ತು,ಅದು ಇಂದಿಗೂ ಮುಂದುವರಿದಿದೆ ಭಗತ್.......,ನೀನೊಬ್ಬನೇ ಅಲ್ಲ ನಿನ್ನ ಹಾಗೆ ಹಲವಷ್ಟು ಮಂದಿ ಮರೆಯಾಗಿದ್ದಾರೆ.ನಾವೇನಿದ್ದರೂ ನಮ್ಮ ಶಾಲಾ ಕಲಿಕೆ ಇಂದ ತಿಳಿದುಕೊಂಡಿದ್ದು ನಿನ್ನ ಬಗ್ಗೆಯ ಒಂದೆರಡು ಸಾಲುಗಳನ್ನಷ್ಟೇ.ಉಳಿದೆಲ್ಲವನ್ನೂ ನಾವಾಗಿ ಸಂಗ್ರಹಿಸಿ ಓದಿದ ವಿಚಾರಗಳಿ೦ದಲೆ  ನಿನ್ನ ಬಗ್ಗೆ ಹೆಚ್ಚಿನದನ್ನು ತಿಳಿದು ಕೊಂಡಿದ್ದು ಅಂದರೆ ನಂಬಲೇಬೇಕು ಭಗತ್...... ನೀನು ನಿನ್ನ ಬಾಲ್ಯದಲ್ಲಿ ಆಟಿಕೆ ಪಿಸ್ತೂಲನ್ನು ಮಣ್ಣಲ್ಲಿ ಹೂತು ಈ ಪಿಸ್ಥುಲ್ ಮರವಾಗಿ ಬಹಳಷ್ಟು ಪಿಸ್ತೂಲನ್ನು ಕೊಡುತ್ತದೆ, ಆ ಪಿಸ್ತುಲುಗಳಿಂದ ಬ್ರಿಟಿಷರನ್ನು ಓಡಿಸುತಿದ್ದೇನೆ ಅನ್ನುತಿದ್ದಿಯಂತೆ.....? , ಈಗ ಇದ ಕೇಳಿ ರೋಮಾಂಚನ!!!! ಆಗುತ್ತಿದೆ ನಮಗೆ.ಅಷ್ಟಕ್ಕೂ ನೀನು ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದ್ದೆ ೧೩ ನೆ ವಯಸ್ಸಿನಲ್ಲಿ ಅಲ್ಲವ? ನೀನು ಹಾಗಾದರೆ ಆವಾಗಲೇ ಪ್ರೌಡ ನಾಗಿದ್ದೆ ಅಂತಾಯ್ತು,ನೀನು ಕನಸಿದ ಸ್ವಚಂದ ಭಾರತದ ೧೩ ನೆ ವಯಸ್ಸಿನ ಎಳೆ ಕುಸುಗಳಿಗೆ ದೇಶದ ಬಗ್ಗೆ ಅರಿವು ಬದಿಗಿರಲಿ ತನ್ನ ಬಗ್ಗೆ ಅರಿವನ್ನು ಸಂಪಾದಿಸುವಲ್ಲಿ ಒದ್ದಾಡುತ್ತಿವೆ!!!!! ಅನ್ನುವದನ್ನು ತಿಳಿದು ಬೇಸರಿಸದಿರು.ನಮಗೀಗ ಅರಿವಾಗುತ್ತಿದೆ ಭಗತ್,ನಿನ್ನ ವಯಸ್ಸು , ನಿನ್ನ ಪರಿಸ್ಥಿತಿ ಮತ್ತು ನಿನ್ನ ಉತ್ಕಟ ದೇಶ ಪ್ರೇಮ ದಿಂದಾಗಿ ನೀನು ಕ್ರಾಂತಿಕಾರಿ ನಿಲುವಿಗೆ ಬಹಳ ಸುಲಭದಲ್ಲಿ ಜಾರಿದೆ ಎಂದು.ಆದರೆ ನನ್ನ ಕಲಿಕೆಯ ಇತಿಹಾಸ ನಿನ್ನ ತೀವ್ರಗಾಮಿ ಅಂತ ಕರೆದು ಸುಮ್ಮನಾಗಿತ್ತು!!!.ನಿನ್ನ ೨೪ ನೆ ವಯಸ್ಸಲ್ಲೇ ನೇಣು ಕಂಭ ದೇಶಕ್ಕಾಗಿ ಎದುರು ನೋಡಿದೆಯಲ್ಲ,ನಿನ್ನಂತವರ ಚಿಂತನೆಗಳು ನಮ್ಮ ೨೪ ವರ್ಷದ ನಂತರ ನಮಗೆ ದೊರೆಯಲು ಪ್ರಾರಂಭ ವಾಗಿದ್ದು,ಹೌದು ಭಗತ್... ನೀನಿದನ್ನ ನಂಬಲೇ ಬೇಕು,ನಿನ್ನ ಹಾಗು ಸಂಗಡಿಗರ ಬಲಿದಾನಗಳು ಸ್ವಾರ್ಥ ರಾಜಕಾರಣಕ್ಕೆ ಉಪಯೋಗವಾಗಿದೆ,ನಿನ್ನ ಕನಸಿನ ನಿಜ ಅರ್ಥದ ಸ್ವಾತಂತ್ರ್ಯ ನಮಗಿನ್ನು ದೊರೆತಿಲ್ಲ.ನಿನ್ನ ಕೀರ್ತಿಯನ್ನು ಕಂಡು ನಡುಗಿದ ಬ್ರಿಟಿಷರು ನಿನ್ನನ್ನು ನಿನ್ನ ಸಂಗಡಿಗರನ್ನು ಹುತಾತ್ಮರು ಎಂದು ಘೋಷಿಸಿದ್ದರು,ಆದರೆ ನಿನ್ನದೇ ಸ್ವಾತಂತ್ರ್ಯ ಭಾರತದಲ್ಲಿ ನಿನ್ನ ಜನ್ಮ ದಿನವನ್ನು ನೆನಪಿಸುವ ಒಂದು ಸಣ್ಣ ಕಾರ್ಯಕ್ರಮವು ಇಲ್ಲ.ಆದ್ರೆ ಒಂದಷ್ಟು ಬದಲಾವಣೆ ಸ್ವಾತಂತ್ರ್ಯ ಬಂದ ಆರು ದಶಕಗಳ ನಂತರ ನಡೆಯುತ್ತಿದೆ.ದೇಶದಲ್ಲಿನ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯುವಕರು ಜಾಗೃತಿ ಗೋಳ್ಳುತಿದ್ದಾರೆ,ಅಣ್ಣಾ ಹಜಾರೆ ಅಂತ ಗಾಂಧಿ ಮತ್ತು ನಿಮ್ಮೆಲ್ಲ ಹೋರಟಗಾರನ್ನು ಸಮಾನವಾಗಿ ಗೌರವಿಸುವಂತ ವ್ಯಕ್ತಿಗಳ ಮಾರ್ಗದರ್ಶನ ನಮಗೆ ಲಭಿಸುತ್ತಿದೆ, ಬ್ರಷ್ಟರೆಲ್ಲ ಜೈಲು ಪಾಲಾಗುತ್ತಿದ್ದಾರೆ.ನಿಜ ಅರ್ಥದ ಸ್ವಾತಂತ್ರ್ಯ ಪಡೆಯಲು ಚಿಂತನೆಗಳು ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡುತ್ತಿದೆ,ನಿನ್ನ ಅರ್ಥದ ಸ್ವಚಂದ ಸ್ವಾತಂತ್ರ್ಯದ ಸವಿಯು ದೇಶಕ್ಕೆ ದೊರಕುವ ಕಾಲ ಹತ್ತಿರವಾಗುತ್ತಿದೆ ವೆಂಬುದನ್ನು ಕೇಳಿ ಸದ್ಯಕ್ಕೆ ಖುಷಿ ಪಡು ಭಗತ್.......ಅದೇನೇ ಇರಲಿ ಈ ದಿನ ೧೦೪ ನೆ ವರುಷದ ಜನ್ಮ ದಿನವನ್ನು ಆಚರಿಸಿ ಕೊಳ್ಳುತ್ತಿದ್ದಿಯ.ನಿನಗೆ ಪ್ರೀತಿ ತುಂಬಿದ ಜನುಮ ದಿನದ ಶುಭಾಶಯಗಳು.ಇನ್ಕಿಲಾಬ್ ಜಿಂದಾಬಾದ್ ನಿನ್ನ ವಾಕ್ಯ ನಮ್ಮದಾಗಿಸಿದ್ದೇವೆ ಮುಂದೆಯೂ ಇರುತ್ತದೆ ಆ ಮೂಲಕ ನೀನು ನಮ್ಮೊಳಗೇ ಅಮರ.

ಇಂತೂ ನಿನ್ನ ಪ್ರೀಯ ದೇಶವಾಸಿಗಳ ಪರವಾಗಿ.

Friday, September 23, 2011

ಮುಂಜಾವಿನ ಚಾನೆಲ್ ಕಿರಿ ಕಿರಿ.


ತಿರುವಿದ ಚಾನೆಲ್ ಗಳೆಲ್ಲ  ತುಂಬಿತ್ತು ಜ್ಯೋತಿಷ್ಯ ಕಿರಿ ಕಿರಿ,
ಮುಂಜಾವಿನ ಮನದ ನೀನಾದ ಮರೆಸುವಂತೆ !!
ಸುತ್ತಲಿನ ಮನೆ ಎಲ್ಲರ ಟಿ ವಿ ಒದರುತಿತ್ತು ದಿನ ಭವಿಷ್ಯ ತರಾ ತರಿ,
ಮನದ ದುಗುಡವ ಮತ್ತೆ ಬಡಿದೆಬ್ಬಿಸುವಂತೆ!!
ದಿನ ವಿಶೇಷ,ವಾರ ಭವಿಷ್ಯ!
ಹುಟ್ಟಿದ ದಿನಾಂಕ,ನಕ್ಷತ್ರ,ಘಳಿಗೆ,!
ರಾಹು ಕೇತು ವಿಚಿತ್ರ ಗ್ರಹ ಸಂಗಮ,!
ಚಂದ್ರನೂ,ಸೂರ್ಯನೂ ಗ್ರಹವಾದ ಪರಿ,!
ಯೋಚಿಸ ಬಿದ್ದೆ ತಲೆ ಕೆಟ್ಟು ,ಒಂದು ಗುಟುಕು ಕಾಫಿ ಹೀರಿ.!!!!!!!!!!!

Tuesday, September 20, 2011

ಕಣ್ಣೀರ ಹನಿಯಲೂ ಶಾಖವಾದ ಕಂಬಾರರ ಸಾಹಿತ್ಯ-ಕಂಬಾರರ ಭಾಷೆ ಗರಡಿ ಮನೆಯ ಸ್ತಬ್ಧ ಚಿತ್ರದಂತೆ.

ಅಂಜಲಿ ರಾಮಣ್ಣ, ಬೆಂಗಳೂರು ಬರೆದ ಥಟ್ಸ್ ಕನ್ನಡದಲ್ಲಿ ಪ್ರಕಟವಾದ ಚಂದ್ರಶೇಕರ ಕಂಬಾರರ ಬಗ್ಗೆ ಬರೆದ ಲೇಖನ ಅವರಿಗೆ ಜ್ನ್ಯಾನ ಪೀಠ ಪ್ರಶಸ್ತಿ ದೊರಕಿದ ಈ ಶುಭ ಸಂದರ್ಬದಲ್ಲಿ ನಿಮಗಾಗಿ.(ಪತ್ರಿಕೆಯ ಹೆಸರನ್ನೇ ಬಳಸಿ ಪ್ರಕಟಿಸುವದರಲ್ಲಿ  ತಪ್ಪಿಲ್ಲ ಅಂದುಕೊಂಡಿರುವೆ,ತಪ್ಪಿದ್ದರೆ ಕ್ಸಮಿಸುತ್ತಿರಿ ಅನ್ನುವ ಭರವಸೆಯೊಂದಿಗೆ)



ಅದು ಕಂಬಾರರ ’ಜೈಸಿದ ನಾಯ್ಕ’ ನಾಟಕ. ಮೊದಲ ಬಾರಿಗೆ ರಂಗದ ಮೇಲೆ ತರಲಾಗ್ತಿತ್ತು. ಅದರಲ್ಲಿ ಬರೋದೇ ಎರಡು ಹೆಣ್ಣು ಪಾತ್ರ. ನಾನು ನಾಯಕಿ. ಗಂಗಾಧರಸ್ವಾಮಿಯವರ ನಿರ್ದೇಶನ. ಎರಡು ತಿಂಗಳುಗಳ ಕಾಲದ ಹಗಲಿರುಳಿನ ಅಭ್ಯಾಸ. ಆ ದಿನ ಪ್ರಥಮ ಪ್ರದರ್ಶನ ಮೈಸೂರಿನ ಕಲಾಮಂದಿರದಲ್ಲಿ. ಮೊದಲ ಸಾಲಿನ ಪ್ರೇಕ್ಷಕರಾಗಿ ಕುಳಿತ್ತಿದ್ದಾರೆ ಡಾ.ಚಂದ್ರಶೇಖರ ಕಂಬಾರ, ಕೀರ್ತಿನಾಥ ಕುರ್ತುಕೋಟಿ, ಡಾ.ಗಿರೀಶ್ ಕಾರ್ನಾರ್ಡ್ ಮತ್ತೆಲ್ಲಾ ಉತ್ತಮೋತ್ತಮರು. ಆಗ ಚೆಲುವಿನ ಅಹಂವುಳ್ಳ ಆತ್ಮ, ವಿಶ್ವಾಸದ ಉತ್ತುಂಗದಲ್ಲಿದ್ದ ವಯಸ್ಸದು ನೋಡಿ ಅದಕ್ಕೆ ಅವರ್ಯಾರೂ ನನ್ನ ಟಾರ್ಗೆಟ್ ವೀಕ್ಷಕರಲ್ಲ! ನಾಟಕದ ಕೊನೆ ಚಪ್ಪಾಳೆಗಳ ಸುರಿಮಳೆ. ಮೇಲೆದ್ದ ಕುರ್ತುಕೋಟಿಯವರು “ನೀನು ಧಾರವಾಡ್ದವಳೇನು?” ಅಂತ ಕೇಳಿದ್ರು ಅದಕ್ಕೆ ಕಂಬಾರರು “ಆಕೀ ಒಡೆಯರ್ರ ಮಗಳು ನೋಡ್ರೀ” ಅಂತ್ಹೇಳಿ ನಕ್ಕರು. ನನಗೆ ಹೆಮ್ಮೆಯೂ ಇಲ್ಲ ಹೆಚ್ಚುಗಾರಿಕೆಯೂ ಅಲ್ಲ. ಹರೆಯದ ಕೈಯಲ್ಲಿತ್ತಲ್ಲ ಬುದ್ಧಿ ಅಂದ್ಮೇಲೆ ಯಾವುದರ ಬೆಲೆತಾನೇ ತಿಳಿದೀತು?

ಬಣ್ಣ ಕಳಚಿತು. ಕಣ್ಣ್ತುಂಬಾ ನಿದ್ದೆಯೂ ಆಯ್ತು. ಮಾರನೆಯ ಸಂಜೆ ಖಾಲೀ ಖಾಲೀ. ನಾಟಕ ತಾಲೀಮು ಇಲ್ಲವಲ್ಲ?! ಆಗ ನನ್ನೊಳಗೆ ಆವಾಹನೆಯಾಗಿದ್ದು ಕಂಬಾರರ “ಅಕ್ಕಕ್ಕು ಹಾಡುಗಳೇ”. “ಬರಗಾಲ ಬಂತೆಂದು ಬರವೇನೋ ಹಾಡಿಗೆ, ಮನಸಿಗೆ ನಿನ್ನ ಕನಸಿಗೆ; ಹರಿಯುವ ಹಾಡನ್ನ ಕತ್ತಲ್ಲಿ ಅಮುಕದೆ ಬಿಡಬೇಕೋ ತಮ್ಮ ಬಯಲಿಗೆ....” ಓಹ್, ಇದನ್ನು ಹಾಡಾಗಿಸಿದ ದೇವರಲ್ಲವೇ ನೆನ್ನೆ ನನ್ನೆದುರು ಇದ್ದದ್ದು? ತಡಾವಾಗಾದ ಜ್ಞಾನೋದಯಕ್ಕೆ ಮರುಕವೇ ಶಿಕ್ಷೆ. ಆಗ ಮನೆಯಲ್ಲಿ ವೆರಾಂಡದಿಂದ ಅಡುಗೆ ಕೋಣೆಯವರೆಗೂ ಪುಸ್ತಕವೇ ಆಸ್ತಿ ಆಗಿದ್ದರೂ ಎಲ್ಲೂ ಕಂಬಾರರ ಒಂದು ವಾಕ್ಯವೂ ಸಿಗದ್ದು. ಅಮ್ಮನಿಗೆ ದುಂಬಾಲು ಬಿದ್ದೆ. ಲೈಬ್ರರಿಯಿಂದ ಅದೇನೆನೋ ಲೇಖನಗಳು ಮನೆಗೆ ಬಂದವು. ಲ್ಯಾಂಡ್ಸ್ಡೌನ್ ಕಟ್ಟಡದ ಮಳಿಗೆಗಳನ್ನೂ ಸುತ್ತಿದ್ದಾಯ್ತು, ಪ್ರಸಾರಾಂಗವನ್ನೂ ಇಣುಕಿದ್ದಾಯ್ತು. ಆದರೂ ಸಮಾಧಾನವಿಲ್ಲ. “ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋ ಹಾಂಗ ಹಾಡಬೇಕೋ ತಮ್ಮ ಹಾಡಬೇಕು; ಆಕಾಶದಂಗಳ ಬೆಳದಿಂಗಳೂ ಕೂಡಾ ಕಂಗಾಲಾಗುವ ಹಾಡು ಹಾಡಬೇಕೋ....” ಹೀಗೇ ನಿರಂತರವಾಗಿ ಹಾಡ್ಕೋತಾ ಹಾಡ್ಕೋತಾ ಕಂಬಾರರ ಪದಗಳೊಂದಿಗೆ ಪ್ರೀತಿಗೆ ಬಿದ್ದೆ. ಅವರ ಅಕ್ಷರದೆಡೆಗಿನ ನನ್ನ ಮೋಹ ಕಾಡುಕುದುರೆಯಂತೆ.ಅದ್ಯಾವ ಲೋಕದಲ್ಲಿ ನನ್ನ ಪಯಣ? : “ಮುಗಿಲಿನಿಂದ ಜಾರಿಬಿದ್ದ ಉಲ್ಕೀ ಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತ” ನನ್ನನ್ನು “ಏಳಕೊಳ್ಳ ತಿಳ್ಳೀ ಆಡಿ ಕಳ್ಳೆಮಳ್ಳೆ ಆಡಿಸಿ ಕೆಡವಿತ್ತ...” ಆಮೆಲೆ ಸಿಕ್ಕಿದ್ದು “ಮರೆತೇನಂದರ ಮರೆಯಲಿ ಹೆಂಗಾ ಮಾವೊತ್ಸೆ ತುಂಗಾ” ಅಂತಿದ್ದ ಕಂಬಾರರು. “ಸೊನ್ನಿಗೆ ಆಕಾರ ಬರೆದೇನಂದಿ, ಬಯಲಿಗೆ ಗೋಡೆ ಕಟ್ಟೇನಂದಿ......ಮರೆಯಲಿ ಹೆಂಗಾ ಮಾವೊತ್ಸೆ ತುಂಗಾ” ಸಾಲುಗಳು ನನ್ನೆಲ್ಲಾ ಅಂತಃಸತ್ತ್ವವನ್ನು ಪ್ರತಿಫಲಿಸುತ್ತಿತ್ತು ಆ ದಿನಗಳಲ್ಲಿ. ಮತ್ತೊಮ್ಮೆ ರಂಗದ ದಿನಗಳು. ಕಂಬಾರರ ಕರಿಮಾಯಿ ತಾಯೇ ಸಾಲುಗಳನ್ನು, ಬಿ.ಜಯಶ್ರೀ ಧ್ವನಿಪೆಟ್ಟಿಗೆಯ ಕಂಚು ಉಜ್ಜಿತೆಂದರೆ ಆಹಾ, ಅದ್ಯಾವ ಲೋಕದಲ್ಲಿ ನನ್ನ ಪಯಣ? “ಗುಂಡ ತೇಲಿಸಿದೆವ್ವ ಬೆಂಡ ಮುಳುಗಿಸಿದಿ; ಗಂಡಗಂಡರನೆಲ್ಲ ಹೆಂಡಿರ ಮಾಡಿ....ಸಾವಿರದ ಶರಣವ್ವ ಕರಿಮಾಯಿ ತಾಯೇ....” ಸಾಲುಗಳ ಮುತ್ತುದುರಿಸುತ್ತಾ ಭಾಷಣಗಳಲ್ಲಿ ಮೇಜುಗುದ್ದುತ್ತಿದ್ದ ದಿನಗಳವು. ಇವರ ಮತ್ತೊಂದು ಪದ್ಯ “ಗಿಣಿರಾಮ ಹೇಳಿತು” ಅದಕ್ಕೆ ಬಿ.ವಿ ಕಾರಂತರ ಸಂಗೀತ “ಗಿಣಿರಾಮ ಹೇಳಿದ ರೇಪಿನ ಕಥೆಯೊಂದ; ರಾಮಾ ಹರಿ ರಾಮಾ, ಮಾನಭಂಗಿತಳಾಗಿ ಕನಸೊಂದು ಬಿದ್ದಿದೆ; ರಾಮಾ ಹರಿ ರಾಮಾ” ಅಂತ ಕಾರಂತರು ಹಾಡ್ತಿದ್ದರೆ ಅದೆಲ್ಲಿರುತ್ತಿತ್ತೋ ನನ್ನ ಕಣ್ಣೀರು ಝುಳು ಝುಳು ಹರೀತಿತ್ತು.ಚುಂಚದ ಹಕ್ಕಿ ಗಕ್ಕನೆ ಹಾರಿ ಬಂತು : ಹೀಗೆ ಒಂದೊಂದು ಕಣ್ಣೀರಿನ ಹನಿಯಲ್ಲೂ ಕಂಬಾರರ ಸಾಹಿತ್ಯ, ಭಾಷೆ ಎಲ್ಲವೂ ನನ್ನೊಳಗೇ ಶಾಖವಾಗ್ತಾ ಹೋಯ್ತು. “ಸ್ವಂತಚಿತ್ರ ಬರೆಯೋದು ಕಷ್ಟವಲ್ಲ ಮಿತ್ರ”, "ಇಬ್ಬರ ತಕರಾರಿಗೆ ಹುಟ್ಟಿ ಹಲವರ ತಕರಾರಲ್ಲಿ ಬೆಳೆದವರು ನಾವು ತಕರಾರಿನವರು” ಎನ್ನುತ್ತಾ ಕಥೆಗೆ ಶುರುವಿಟ್ಟ ಕಂಬಾರರು, “ನನ್ನ ಮನದಾಗರೆ ಇದು ಏನ ಬೆಳೆದೈತಿ? ತುಂಬ ಮಲ್ಲೀಗಿ ಹೂಬಳ್ಳಿ; ಉದುರೀಸಿ ನಿನ್ನ ಪಾತಾಳ ತುಳುಕಲಿ” ಎಂದೆನ್ನುವ ಅರಗೊಡ್ಡಿಯ ಪ್ರೇಮಗೀತೆಯಾಗಿಸತೊಡಗಿದರು ನನ್ನನ್ನು. ಋಷ್ಯಶೃಂಗನ ನಾಟಕೀಯತೆಯಲ್ಲಿ “ಅಪ್ಪ ಸೂತ್ರಧಾರ ಕೇಳೋ ಕನಸ ಕಂಡಿನೆ, ಸುಖದ ನೋವ ಸದ್ದ ಮಾಡಿ ಹೆಂಗ ಹೇಳಲೆ” ಎಂದು ಉನ್ಮಾದಕ್ಕೆ ತಳ್ಳುತ್ತಾ, ಕಲೆಗಾರಣ್ಣನ ಲಾವಣಿಯಲ್ಲಿ “ಇಷ್ಟೆ ಕಣ್ಣಿನ ಇಷ್ಟಿಷ್ಟೆ ಚುಂಚದ ಹಕ್ಕಿ ಗಕ್ಕನೆ ಹಾರಿ ಬಂತು ಮೇಲಕ್ಕೆ ಕೆಳಕ್ಕೆ ರೆಂಬೆ ರೆಂಬೆಗೆ, ಕೊಂಬೆ ಕೊಂಬೆಗೆ ಸೋಂಕಿನ ಸೊಗಸ ಬೀರುತ, ಕಲೆಗಾರನ ಕಲ್ಪನೆಗೆ ಶರಣೆನ್ನಿರಿ” ಎಂದು ಕುಣಿಸುತ್ತಾ, “ವ್ಯರ್ಥಗಳ ಸಮರ್ಥಿಸಿಕೊಳ್ಳುತ್ತಾ, ಅಪಾರ್ಥದಲ್ಲಿ ಅರ್ಥಗಳ ಸೃಷ್ಟಿಸುತ್ತಾ, ಇಲ್ಲಾ ರಾಮಾಯಣದ ಮಹಿಮೆ ಜಪಿಸುತ್ತಾ” ಗೋದೂ ತಾಯಾಗಿಸಿ ನನ್ನೊಡನೆ ನನ್ನನ್ನು ಇಬ್ಬರಾಗಿಸಿ “ರೆಕ್ಕೆಯೊಳಗಿನ ಹಕ್ಕಿಯ ಥರ ನಮ್ಮ ನೆರಳುಗಳನ್ನೇ ಮೈಗೂ ಮನಸ್ಸಿಗೂ ಸುತ್ತಿಕೊಂಡು ಉರಿವ ಬೆಂಕಿಯ ಬಳಿ ಕೂತೆವು” ಎಂದೆಂದುಕೊಳ್ಳುವಂತೆ ಮಾಡಿಟ್ಟರು. ನಾನು ಒಳಗೇ ಹೇಳುತ್ತಾ ಹೋದೆ ಅವರದೇ ನುಡಿಯಾಗಿ “ಒಂದಾನೊಂದು ಕಾಲದಲ್ಲಿ ಏಸೊಂದ ಮುದವಿತ್ತಾ, ಮುದಕೊಂದು ಹದವಿತ್ತಾ, ಹದಕ ಹಂಗಾಮಿತ್ತಾ, ಅದಕೊಂದ ಶಿವನ ಲಗಾಮಿತ್ತಾ” “ನಾನೀಗ ನನ್ನ ಖಾಸಗಿಯನ್ನು ಕಾಣಬೇಕು. ಮಾತಾಡಬೇಕು ಅದರೊಂದಿಗೆ ನಿಜ ನೋಡಬೇಕು, ಶಬ್ದವೇ ಶಬ್ದವೆ ತೋರು ನಿಜವನ್ನ,ನನ್ನಳತೆಯ ಮನುಷ್ಯನಳತೆಯ ಸತ್ಯವನ್ನ.” “ಜೋಲಿ ತಪ್ಪಿದ ಪೋರಿ ಬಿದ್ದಾಳ ತೆಕ್ಕೀಗಿ, ಸಂದ ಉಳಿಯದ ಹಾಂಗ ಒಂದಾಗಿ ಮೈಮುರದಾ” ಅನ್ನೋ ಹಾಗೆ ನನ್ನನ್ನು ಜೀವನದೊಳಗೆ ಒಂದು ಮಾಡಿ “ಮಂದಾರ ಮರದಲ್ಲಿ ಪಾರ್ವತಿ ಹಣ್ಣು ತಿಂದದ್ದೇ ದೇವಲೋಕಕ್ಕೂ ಬಂತು ಹಸಿವಿನ ಬಾಧೆ” ಅದಕ್ಕೇ, “ಹಾವಲ್ಲ ಅದು ಹಗ್ಗ ಎನ್ನುವರು ಕೆಲಮಂದಿ ಹಗ್ಗದಲ್ಲೂ ಹರ್ಷ ಚಿಮ್ಮುವಾಕೆ ಈ ಮಾಯೆ” ಎನ್ನುವ ಅರಿವು ನನಗೆ ಮೂಡಿಸಿದ್ದು ಈ ಸೂರ್ಯ ಶಿಖರನ ಸಾಹಿತ್ಯ. “ಲೂಟಿ ಮಾಡಾಕ ಬಂದ ಮಾಟಗಾರೇನ ಸುಖದ ಶಿಖರದ ಮ್ಯಾಲ ಹತ್ತಿನಿಂತಾನ ಇಕ್ಕಟ್ಟೀನ ಬಿಕ್ಕಟ್ಟೆಲ್ಲಾ ಒಟ್ಟಿಗಿ ದೂರ ಮಾಡಿದ್ದ” “ಯಾರವ್ವ ಈ ಚೆಲುವ ತಂತಾನೆ ರಂಜಿಸುವ ಸೂರ್ಯನ ಥರ ಹೊಳೆಯುವ” ಅಂತ ಮನಸ್ಸಿನಲ್ಲೇ ನಾನು ಮುಲುಗುತ್ತಿರುವಾಗಲೇ ನಾಳಿನ ಸತ್ಯವನ್ನು ಇಂದೇ ಬಯಲಾಗಿಸಿಕೊಟ್ಟದ್ದು ಅವರ ಮಾತು ““ಅಜ್ಜ ಅಜ್ಜಿಗೆ ಬೇಜಾರು ನೆನಪೂ ಬೋರು, ಕುರುಡ ಮುದುಕ ಕೈಯಾಡಿಸಿ ಹುಡುಕುತ್ತಾನೆ ಎಲ್ಲಿದ್ದೀಯೆ ಮುದುಕಿ ಎಲ್ಲಿದ್ದೀಯೆ?”

“ಸಿಟಿಯ ಕಗ್ಗತ್ತಲೆಯಿಂದ ಪಾರಾಗಲು ಯತ್ನಿಸಿದವರ ಹಾಡು” “ಕೀಟ್ಸನ ಸಾವನ್ನು ನೆನೆದು-ಒಣಗುತ್ತಿತ್ತು ಗಿಡ ತೊಟಕು ನೀರು ಸಹ ಯಾರೂ ಹನಿಸಲಿಲ್ಲ ಸತ್ತಮೇಲೆ ಕಣ್ಣೀರ ಸುರಿಸಿದರು ವಿಧಿಯ ಆಟವೆಲ್ಲ” ಇಂದಿಗೂ ಬದಲಾಗದ “ದಿನಪತ್ರಿಕೆಯ ಸುದ್ಧಿ ಹಣೆಬರಹ “ಅಲ್ಲಿರುವ ನೆಲ, ನೀರು ಹಳದಿ, ಮುಗಿಲೂ ಹಳದಿ, ಜನ ನಕ್ಕರೂ ಹಳದಿ, ಏನು ಮಂದಿ! “ ಈ ನಡುವೆ ನಾವಿದ್ದೇವೆ-ಅದೇ ರಂಗಭೂಮಿ ಮತ್ತು ನಾನು, ಆಪಾದಿಸುತ್ತಾ, ಸಮರ್ಥಿಸಿಕೊಳ್ಳುತ್ತಾ ಪರಸ್ಪರ ನೋವಿನಲ್ಲಿ ಬೆರಳಾಡಿಸುತ್ತಾ....” ಹೀಗೆಲ್ಲಾ ಹೃದಯಕಾಂತಿಗೆ ಸೂರ್ಯನಾಗಿ ದಿಕ್ಕು ತೋರಿಸಿದ ನನ್ನ ಪ್ರೀತಿಯ ಕಂಬಾರರಿಗೆ ಜ್ಞಾನಪೀಠ ಸನ್ಮಾನವಾಗಿದೆ. 8 ಕವನ ಸಂಕಲನ, 22 ನಾಟಕ, 3 ಬೃಹತ್ ಕಾದಂಬರಿಗಳು, ಎಷ್ಟೆಷ್ಟೋ ಕಥೆಗಳು, ಚಿತ್ರಗಳು ಹಾಡುಗಳು ಇನ್ನೂ ಏನೇನೋ ಇವೆಯಂತೆ ಅವರ ಹೆಮ್ಮೆಯ ಮುಡಿಗೆ, ಆದರೆ ನನಗೆ ಮಾತ್ರ ಚಂದ್ರಶೇಖರ ಕಂಬಾರರ ಬರವಣಿಗೆ, ಭಾಷೆ, ಭಾವವೆಂದರೆ ಗರಡಿ ಮನೆಯ ಸ್ತಬ್ಧ ಚಿತ್ರದಂತೆ. ನನ್ನಂತರಂಗದಂತೆ. ಶ್ರೀರಾಮಚಂದ್ರನ ಧರ್ಮದಂತೆ, ಸೀತೆಯ ನಿಷ್ಠೆಯಂತೆ.

ಊರಿನ ಮುದ್ದು, ಮನೆಯವರ ಕಣ್ಮಣಿ, ಮುಂದೊಂದು ದಿನ ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯಾದರೂ ಅಮ್ಮನಿಗೆ ಮಾತ್ರ ಮಗು “ನನ್ನ ಬಂಗಾರ” ತಾನೆ? ಹಾಗೇ, ಬೇಂದ್ರೆ ಅಜ್ಜನ ನಂತರ ಭಾಷೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟವರು ಕಂಬಾರರು ಅಂತ ಪಂಡಿತರು ಹೇಳುತ್ತಿದ್ದರೂ ನನಗೆ ಮಾತ್ರ ತೀರ್ಥರೂಪು “ನನ್ನ ಕಂಬಾರರು” ಅಷ್ಟೆ. ಅದಕ್ಕೆ ಒಂದಷ್ಟು ದಿನಗಳ ಹಿಂದೆ ಪಾಂಡಿತ್ಯ ಪ್ರಖರರೊಬ್ಬರೊಂದಿಗೆ ಸರಿಸುಮಾರು ಯುದ್ಧವನ್ನೇ ಮಾಡಿದ್ದೆ. ಅವರ ಪ್ರಕಾರ ಇಂಗ್ಲಿಷಿಗೆ ಅಸಾಧ್ಯವೆಂಬುದೇ ಇಲ್ಲ! ನಾನು ಕೇಳಿದ್ದು ಸಣ್ಣ ಪ್ರಶ್ನೆಯಷ್ಟೆ, ಕಂಬಾರರ “ಗೌತಮ ಕಂಡ ಪ್ರಥಮ ದರ್ಶನ” ಪದ್ಯದ ಈ ಸಾಲುಗಳನ್ನು ಇಂಗ್ಲಿಷಿಗೆ ತನ್ನಿ ಅಂತ “ಗದಬಡಿಸಿ ಗದಬಡಿಸಿದವನೆ ಹುಡುಕಾಡಿ, ಹುಡುಕಾಡಿದವನೆ ಕೊನೆಗೆ ಹಾಸಿಗೆಗೆ ಬಂದು ನೋಡುತ್ತೇನೆ: ನನ್ನ ಪಾಲಿನ ಹುಡುಗಿ ಇದಕೆ ಹಾಸುಗೆಯಾಗಿ, ಅರೆಗಣ್ಣ ತುದಿಯ ಸೂರು ಜತಿಯಗುಂಟ ಸ್ವರ್ಗದುಯ್ಯಾಲೆ ಕಟ್ಟಿದಹಲ್ಯೆ.” “ತಪ್ಪಿದ್ದರೆ ಕ್ಷಮಿಸಿ ನಾನು ಅಧಮಳು” ಅಂದರೂ ಉತ್ತಮರ ಸಿಟ್ಟು ಇಂದಿಗೂ ಇಳಿದಿಲ್ಲ!ಕನ್ನಡವೆಂದರೆ ಕಂಬಾರರು ಅಷ್ಟೆ : ಅಂದಹಾಗೆ, ಆ ದಿನ ಬಾಗಿಲು ತೆರೆದಾಗ ಅಯ್ಯರ್ ಮಾಮ ಜೋರಾಗಿ ನಗುತ್ತಾ ಒಳಬಂದರು. ಮಾಮಿಗೆ ಸಂಕೋಚ. ಸೆರಗು ಸರಿ ಮಾಡ್ಕೊಳ್ಳುತ್ತಾ ಗಂಡ ಆಗಲೇ ಪಟ್ಟಾಂಗ ಹಾಕಿಕೊಂಡಿದ್ದ ಸೋಫಾ ಮೆಲೆ ಕುಳಿತರು. ಸೌಜನ್ಯಕ್ಕೆ “ತೊಟ್ಟು ಹಾಲು ಕೊಡಲೇ” ಎಂದೇ. ಅಷ್ಟೇ ಸಾಕು ಮಾಮಾ ತಮಿಳು ಮಿಶ್ರಿತ ಇಂಗ್ಲಿಷ್ನಲ್ಲಿ ಹೇಳ್ತಾ ಹೋದರು “ಕೆಳಜಾತಿಯ ತಮಿಳರಿಗೆ ನಾಲಿಗೆ ಹೊರಳದೆ ತಮಿಳನ್ನು ಅಪಭ್ರಂಶಗೊಳಿಸಿದರು. ಅದೇ ಕನ್ನಡವಾಯ್ತು. ಪಾಲು ಹಾಲಾಯ್ತು. ಇಲ್ಲದಿದ್ದರೆ ಕನ್ನಡಕ್ಕೆ ಸ್ವಂತ ಅಸ್ತಿತ್ತ್ವವೆ ಇಲ್ಲ. ಅದು ಭಾಷೆಯೇ ಅಲ್ಲ. ನಿನಗೆ ಗೊತ್ತಾ? ಸರಸ್ವತಿ ತಮಿಳರ ದೇವತೆ” ಹೀಗೆ ಇನ್ನೂ ಏನೇನೋ. ನನಗೆ ಅದೆಲ್ಲಾ ತಿಳಿಯೋಲ್ಲ. ನನಗೆ ಕನ್ನಡವೆಂದರೆ ಶಾಲೆಯಲ್ಲಿ ಮುದ್ದಣನ ಶ್ರೀಮತಿ ಸ್ವಯಂವರ ಹೇಳಿಕೊಟ್ಟ ಪದ್ಮಾ ಮಿಸ್ ಮತ್ತು ಚಂದ್ರಶೇಖರ ಕಂಬಾರರು ಅಷ್ಟೆ! ಮಾಮಿಗೆ ಮುಜುಗರವಾಗ್ತಿತ್ತು. ಹಿರಿಯರನ್ನು ಹೀಗೆಳೆಯುವುದು ನಮ್ಮ ಸಂಸ್ಕೃತಿಯಲ್ಲ್ವಲ್ಲಾ? ಅದಕ್ಕೆ ವಾತಾವರಣ ತಿಳಿ ಮಾಡಲು, ಒಳಗೆ ಹೋಗಿ ಮಾಡಿದ್ದ ಹೆಸರುಬೇಳೆ ಕೋಸಂಬರಿಯನ್ನು ಬಟ್ಟಲುಗಳಿಗೆ ಹಾಕಿ ತಂದುಕೊಟ್ಟೆ. ತತ್ಕ್ಷಣ ಮಾಮಾ “ಅರೆ, ಇದು ತಮಿಳರ ತಿಂಡಿ. ನೀನು ಹೇಗೆ ಕಲಿತೆ?” ಅಂದು ಬಿಡೋದೇ? ಸಿಟ್ಟು ಕ್ರೂರ ಸೂರ್ಯನಂತೆ ನೆತ್ತಿ ಸುಡುತ್ತಿದ್ದರೂ, ನಾನು ಪ್ರತಿಭಟಿಸಲಿಲ್ಲ. ಇತ್ತೀಚೆಗೆ ಕಂಬಾರರೇ ನನ್ನ ಮೌನಕ್ಕೂ ಕನ್ನಡದಲ್ಲಿ ಮಾತನಾಡುವ ಸೊಗಡನ್ನು ಪರಿಚಯಿಸಿಕೊಟ್ಟಿದ್ದಾರೆ. ಹಾಗಾಗಿ ನನ್ನ ನಾಳೆಗಳು ಅವರೇ ಹೇಳಿದಂತೆ ಸಂಸ್ಕೃತಿಯಿಂದ ವಿಸ್ಮೃತಿಗೊಳ್ಳಲಾರದೆಂಬ ಭರವಸೆಯಿದೆ, ಹೇಗೆಂದಿರಾ? ಅವರ ಶಿವಾಪುರದ ಪ್ರತಿಮೆಗಳಲ್ಲಿ ಒಂದಾದ ಪದ್ಯ ಸಾಲುಗಳು ಕೇಳುತ್ತ್ವೆ “ಬೇಕಾದಷ್ಟು ಕನಸುಗಳಿವೆಯಲ್ಲಾ ಬದುಕಕ್ಕೆ ಇನ್ನೇನು ಬೇಕು ಗೆಳತಿ...?” ಹೀಗೆ ಕಂಡ ಕನಸೊಂದು ಇಂದು ನನಸಾಗಿದೆ. ಕಂಬಾರರ ಪಾದಕ್ಕೆರಗಿ ಪೀಠದ ಜ್ಞಾನ ಸ್ಫಟಿಕದಂತೆ ಸ್ಫುರಿಸಿದೆ. ಜ್ಞಾನಪೀಠದ ಔನತ್ಯವನ್ನು ಹೆಚ್ಚಿಸಿರುವ ಹಿರಿಯರ ಚರಣಸ್ಪರ್ಶಿಸುತ್ತಿರುವ ಈ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಕಂಬಾರರು ಹಾದುಹೋದದ್ದು ಹೀಗೆ!(ಕೃಪೆ:-ಧಟ್ಸ್ ಕನ್ನಡ)

ಪತ್ರಿಕೋದ್ಯಮದ ಒಳಗಿನ ಬ್ರಷ್ಟಾಚಾರಗಳು ಉಳಿದೆಲ್ಲವುಗಳಂತೆ ಅಷ್ಟು ಸುಲಭದಲ್ಲಿ ಸಮಾಜದ ಮುಂದೆ ಬರಲಾರದು.

ಪತ್ರಿಕೋದ್ಯಮ ಇದು ಪ್ರಜಾಪಭುತ್ವ  ವ್ಯವಸ್ಥೆಯಲ್ಲಿ ಅತ್ಯಂತ ಪ್ರಭಲ, ಸಂವಿಧಾನದ  ನಾಲ್ಕನೆ ಅಂಗವೇನೋ ಎಂಬಂತೆ ಬೆಳೆದು ನಿಂತಿದೆ.ದೇಶದ ಅದೆಷ್ಟೋ ಬ್ರಷ್ಟಾಚಾರವನ್ನು  ಬೆಳೆಕಿಗೆ ತಂದು ಪರಿಣಾಮಕಾರಿ ಜನಾಭಿಪ್ರಾಯ ರೂಪಿಸಿ ಆ ಮೂಲಕ ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಹಾಗು ಜನಜಾಗೃತಿ ರೂಪಿಸುವಲ್ಲಿ ಸಹಕಾರಿಯಾಗಿದೆ.ಬ್ರಷ್ಟಾಚಾರದ  ಬೆಳೆಕಿಗೆ ಹಾಗು  ಅದ  ಸಮಾಜಕ್ಕೆ ತಿಳಿಸುವಲ್ಲಿ ಇಂದಿನ ಪತ್ರಿಕೆ ಹಾಗು ದೃಶ್ಯ ಮಾಧ್ಯಮಗಳು ಸಹಕಾರಿಯಾಗಿದೆ ಅಂದರೆ ಉಳಿದ ವಿಹಿತಗಳು ಇದರಿಂದ ಆಗಿಲ್ಲವೆಂಬುದು ಅಲ್ಲ.ನಾನು ಇಲ್ಲಿ  ಹೇಳ ಬಯಸಿರುವದು ಬ್ರಷ್ಟಚಾರದ ವಿರುದ್ದ ಮಾಧ್ಯಮಗಳ ಸಮರದ ನೈತಿಕತೆಯನ್ನು ಪ್ರಶ್ನಿಸುವ ನಿಟ್ಟಿನದ್ದು  ಆದುದರಿಂದ ಮಾಧ್ಯಮದ ಇತರ ವಿಹಿತಗಳ ಬಗ್ಗೆ ಪ್ರಸ್ತಾಪಿಸುತ್ತಿಲ್ಲ.ಅತ್ಯಂತ ಸಾಮಾನ್ಯನಲ್ಲಿ ಸಾಮಾನ್ಯನಾದ ಈ ದೇಶದ ಪ್ರಜೆ ನಾನು,ಪತ್ರಿಕೋದ್ಯಮದ ಬಗ್ಗೆ ಗೌರವ  ಹೊಂದಿರುವವನು,ದೇಶದ ಒಟ್ಟು ಪತ್ರಿಕೋದ್ಯಮದ ಬಗ್ಗೆ ಮಾತನಾಡುವ ಅಷ್ಟು ತಿಳುವಳಿಕೆಗಳು ನನ್ನಲ್ಲಿ ಇಲ್ಲ.ಆದರೆ ನನ್ನ ಕನ್ನಡ ಪತ್ರಿಕೋದ್ಯಮದ ಬಗ್ಗೆ ಒಂದಷ್ಟು ಸಂಶಯ ಅಸಹನೀಯತೆಗಳು ನನ್ನಲ್ಲಿ ಇತ್ತೀಚಿಗೆ  ಬೆಳೆಯುತ್ತಿದೆ.ಆ ಮೂಲಕ ಉತ್ತರಗಳೇ ದೊರಕದ ಹಲವು ಪ್ರಶ್ನೆಗಳು ಬ್ರಷ್ಟಾಚರವನ್ನು  ಬೆಳೆಕಿಗೆ ತರುತ್ತೇವೆ ಎಂದು ಸೋಗಲಾಡಿತನವನ್ನು ಹೊತ್ತುಕೊಂಡ ಪತ್ರಿಕೋದ್ಯಮದ ಮೇಲೆ ಮೂಡಿದೆ.

ಇತ್ತೀಚಿಗೆ ಕರ್ನಾಟಕದಲ್ಲಿ ಬೆಳಕಿಗೆ ಬಂದ ಭೂ ಹಗರಣ ,ಗಣಿ ಹಗರಣಗಳಲ್ಲೀ ಪತ್ರಿಕೋದ್ಯಮದ ಒಂದಷ್ಟು ಮಂದಿಯ ಪಾಲ್ಗೊಳ್ಳುವಿಕೆ ಇದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.ಆ ಮೂಲಕ ಪತ್ರಿಕೋದ್ಯಮದ ಮಂದಿಯೇ ಪತ್ರಿಕೋದ್ಯಮ ಅಂತಹ ಪವಿತ್ರ ಕ್ಷೇತ್ರಕ್ಕೆ ಮಸಿಬಳಿದಿರುವದು ದುರಂತ.ಆದರೆ ನನ್ನ ವಿಚಾರಗಳು ಈ ನಿಟ್ಟಿನದ್ದಲ್ಲ.ರಾಜಕೀಯ ,ಜನಸಾಮಾನ್ಯ ,ಯಾಕೆ ನಿನ್ನೆ ರಾಜೀನಾಮೆಯನ್ನು ಕೊಟ್ಟಂತ ಲೋಕಾಯುಕ್ತರನ್ನು ಬಿಡದ ಬ್ರಷ್ಟಚಾರಿಕೆಯ ಮಾಹಿತಿ ಒದಗಿಸಿದ ಪತ್ರಿಕೋಧ್ಯಮ ತನ್ನದೇ  ಮಂದಿಯ ತನ್ನದೇ ಕ್ಷೇತ್ರದ ಬ್ರಷ್ಟಚಾರಿ  ಹುಳುಗಳನ್ನು ಸಮಾಜದ ಎದುರು ನಿಲ್ಲಿಸುವದನ್ನು ಮರೆತಿದೆ ಯಾಕೆ?ಈ ಬಗ್ಗೆ ಬೆರಳೆಣಿಕೆ ವರದಿಗಳು ಬಂದಿರಬಹುದು ಆದರೆ ಪ್ರಜಾವಾಣಿ  ಇಬ್ಬರನ್ನು ನೇರ ನೇರ ಹೆಸರು ಕೊಟ್ಟು ಕರೆದು ವರದಿ ಕೊಟ್ಟಿದ್ದು ಬಿಟ್ಟರೆ ಉಳಿದ ವರದಿಗಳೆಲ್ಲ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ!!!!!!!!!!! ಬೇರೆ ಕ್ಷೇತ್ರದ ಬ್ರಷ್ಟರನ್ನು ಹೆಸರು ಹಾಗು ಒಂದಿಷ್ಟು ಅಡ್ಡ ಹೆಸರಿತ್ತು ತೆಜೋವದೆ ನಡೆಸಿ ಅವರ ಪ್ರಕರಣವನ್ನು ಬೆಳಕಿಗೆ ತರುವ ಮಾಧ್ಯಮಗಳು ತನ್ನದೇ ಮಂದಿಯನ್ನು ಹೆಸರು ಕೊಟ್ಟು ಪ್ರಸ್ತಾಪಿಸುವದಕ್ಕು ಹಿಂಜರಿಯುತ್ತಿರುವದು ಯಾಕೆ?ಅಷ್ಟಕ್ಕೂ ಪ್ರಜಾವಾಣಿ ವರದಿಯಲ್ಲಿ ಇದ್ದ ಇಬ್ಬರೇ ಪತ್ರಿಕೋದ್ಯಮದಲ್ಲಿ ಬ್ರಷ್ಟರು ಉಳಿದವರೆಲ್ಲ ಸಾಚಾಗಳು ಅಂದರೆ ನಂಬುವದು ಸಾಧ್ಯವೇ?ರೆಡ್ಡಿಗಳ ಮನೆ ಮುಂದು ಸಿ ಬಿ ಐ ಮಂದಿ ವಾಹನಗಳಿಂದ ಇಳಿಯುತಿದ್ದಂತೆ ವರದಿ ಶುರು ಹಚ್ಚಿಕೊಂಡ ಪತ್ರಿಕೋಧ್ಯಮ ಅದೇ ಭಯದಿಂದ ದಿನ ದೂಡುತ್ತ ಇರುವ ಕೆಲವು ಪತ್ರಿಕೋದ್ಯಮ ಮಂದಿಯನ್ನು ಸಮಾಜದ ಎದುರು ತೆರೆದಿಡಲು ಮನಸ್ಸು ಮಾಡದೇ ಇರುವದು  ಯಾಕೆ?ಯಾಕೆ ಭೂ ಹಗರಣ ಮತ್ತು ಗಣಿ ಹಗರಣದ ನಂತರವೇ ತನ್ನಲ್ಲಿರುವ ಪತ್ರಿಕೋದ್ಯಮದ ಬ್ರಷ್ಟ ಕ್ರಿಮಿಗಳು ಪತ್ರಿಕೊಧ್ಯಮದ ಮಂದಿಗೆ ಅರಿವಿಗೆ ಬಂದಿದ್ದು, ಈ ಮೊದಲು ಹಾಗಾದರೆ ಇವರೆಲ್ಲ ಸಾಚಗಳೇ?ಇಲ್ಲ ಪತ್ರಿಕೋಧ್ಯಮ ಮಂದಿಗೆ ಇವೆಲ್ಲ ಗೊತ್ತೇ ಇದೆ ಬೇಕಂತಲೇ ಮುಚ್ಚಿಟ್ಟಿರುವದು ಸ್ಪಷ್ಟ.ನಿನ್ನೆಯಷ್ಟೇ ಮಾಧ್ಯಮ ಬ್ರಷ್ಟಚಾರವನ್ನು ಸಮಾಜ ಏಕೆ ಅರಗಿಸಿಕೊಳ್ಳುತ್ತಿದೆ? ಎಂಬ ಬ್ಲಾಗ್ ಬರಹ ಓದಿದೆ.ಬರೆದವರು ಓರ್ವ ಪತ್ರಕರ್ತ.ತನ್ನ ಹೆಸರನ್ನು ಪ್ರಕಟಿಸುವದಕ್ಕು ಸ್ವಾತಂತ್ರ್ಯ ಕಳೆದುಕೊಂಡ ಪತ್ರಕರ್ತನ  ಬಗ್ಗೆ  ಹಾಗು ಇಂತಹ ವಾತಾವರಣ ನಿರ್ಮಿತಗೊಳಿಸಿದ  ಪತ್ರಿಕೋದ್ಯಮದ ಬಗ್ಗೆ ಖೇದವಿದೆ.ಆದರೆ ಈ ಪತ್ರಿಕೋದ್ಯಮವು ಪ್ರಜಾಪ್ರಭುತ್ವವನ್ನು ಕಾಯುವ ಬೆಳೆಸುವ ನೈತಿಕತೆ ಹೊಂದಿರುವವರು ಅನ್ನುವದು ಈ ನಿಟ್ಟಿನಲ್ಲಿ ಯೋಚಿಸಿದವಾಗ ಕುಚೋದ್ಯ ದಂತೆ ಕಂಡು ಬರುವದು ಪ್ರಜಾಪ್ರಭುತ್ವದ ವಿಪರ್ಯಾಸ!!!!!!!!!!.ಯಾವುದೇ ಸಮಾಜ ಬ್ರಷ್ಟಚಾರವನ್ನು ಅರಗಿಸಿಕೊಳ್ಳುವದಿಲ್ಲ.ಆದರೆ ಮಾಧ್ಯಮ ಬ್ರಷ್ಟಾಚಾರವನ್ನು  ಮಾಧ್ಯಮಗಳೆ ಸರಿಯಾಗಿ ಸಮಾಜಕ್ಕೆ ತಲುಪಿಸುವಲ್ಲಿ, ಹಾಗು ಆ ಮೂಲಕ  ಜನಾಭಿಪ್ರಾಯ ರೂಪಿಸುವಲ್ಲಿ ವಿಫಲ ಗೊಂಡಿದೆ ಅಂದರೆ ತಪ್ಪಿಲ್ಲ.
 ವಾಕ್ ಸ್ವಾತಂತ್ರ್ಯ ಪತ್ರಕರ್ತರಿಗೆ ದೊರೆಯಲಿ.
ಮೊದಲೇ ಹೇಳಿದಂತೆ ಪತ್ರಿಕೋದ್ಯಮದಲ್ಲಿ ಗೌರವ ಇರಿಸಿದವ ನಾನು.ಪತ್ರಿಕಾರಂಗದಲ್ಲಿ ಬೇಕಾಬಿಟ್ಟಿ ಬರೆಯುವದು ಸಾಧ್ಯವಿಲ್ಲವೆಂದು ಅಂದುಕೊಂಡವ.ಸೂಕ್ತ ಆಧಾರಗಳು ಇದ್ದಾಗಲೂ ಸಮಾಜದ ಮುಂದೆ ತಮ್ಮ ಮಿತ್ರರ ಬ್ರಷ್ಟ ವಿವರಗಳನ್ನು ಸಮಾಜದ ಮುಂದೆ ಇರಿಸಲು ದ್ವಂದ್ವ ನೀತಿ ಅನುಸರಿತ್ತಿರುವದನ್ನು ಬಿಡಬೇಕು.ತನ್ನ ಕಣ್ಣಿಗೆ ಬೆಣ್ಣೆ,ಇತರರ ಕಣ್ಣಿಗೆ ಸುಣ್ಣ ವೆಂಬ ನೀತಿ ಎಷ್ಟು ಸರಿ?.ಪತ್ರಿಕಾರಂಗ ಪತ್ರಿಕೊಧ್ಯಮದ ನೀತಿಯನ್ನು ಮರೆತಿರುವದು ಸಲ್ಲ.ಇಲ್ಲಿ ಪತ್ರಕರ್ತರು ಈ ಬಗ್ಗೆ ವರದಿ ಬಿತ್ತರಿಸಲು ರೆಡಿ ಇಲ್ಲವೆಂಬುದು ಅಲ್ಲ.ಎಷ್ಟೋ ಸಜ್ಜನ ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಇದ್ದಾರೆ.ಆದರೆ ಪತ್ರಿಕಾ ಆಡಳಿತ ಮಂದಿಗಳು ಅವರ ದ್ವಂದ ನೀತಿಗಳಿಂದ ಹೇಳಬೇಕಾದ್ದನ್ನು ಜನರ ಮುಂದೆ ಹೇಳಲಾಗದೆ ಒದ್ದಾಡುತಿದ್ದಾರೆ!!!!!.ನಿನ್ನ ವಿಷಯ ನಾನು ತರಲ್ಲ ನನ್ನ ವಿಷಯ ನೀನು ತರಬೇಡ ಎಂಬ ಪ್ರೊಟೆಕ್ಟ್ ನೀತಿಗಳನ್ನು ತಮ್ಮದಾಗಿಸಿಕೊಂಡಿರುವ ಪತ್ರಿಕೆಗಳೇ ಹೆಚ್ಚು.ನೇರ ನೇರ ವಿಷಯ ಪ್ರಸ್ತಾಪಿಸಿ ರಿಸ್ಕ್ ತೆಗೆದುಕೊಳ್ಳಲು ಯಾರು ಬಯಸುತ್ತಿಲ್ಲ,ಯಾಕೆಂದರೆ ಪತ್ರಿಕೋದ್ಯಮದ ಖಡ್ಗ ವೆಂಬ ಅಸ್ತ್ರ ಇಬ್ಬರಲ್ಲೂ ಇದೆ.ಆದುದರಿಂದ ಪತ್ರಿಕೋದ್ಯಮದ ಒಳಗಿನ ಬ್ರಷ್ಟಾಚಾರಗಳು ಉಳಿದೆಲ್ಲವುಗಳಂತೆ ಅಷ್ಟು ಸುಲಭದಲ್ಲಿ ಸಮಾಜದ ಮುಂದೆ ಬರಲಾರದು.ಗುಮ್ಮನಂತೆ ಭಾಸವಗುತ್ತಿರುವ ಕನ್ನಡ ಪತ್ರಿಕೋದ್ಯಮ ಈ ಎಲ್ಲ ಮಜಲುಗಳನ್ನು ದಾಟಿ ತನ್ನ ಮನೆ ಕಸ ಗುಡಿಸಿ ಸ್ವಚ ಗೊಳಿಸಲಿ, ಯಾವತ್ತಾದರೂ ಸತ್ಯ ಹೊರಗೆ ಬಂದೆ ಬರುತ್ತದೆ,ಪತ್ರಿಕೋದ್ಯಮದಲ್ಲೂ ಪತ್ರಿಕಾ ಸ್ವಾತಂತ್ರ್ಯ ಮೆರೆಯುತ್ತದೆ ಎಂಬ ಆಶಯಗಳನ್ನು ಇಟ್ಟುಕೊಂಡು ಮುಂದುವರಿಯುವದು ಅಷ್ಟೇ ಸದ್ಯಕ್ಕೆ ನಮ್ಮ ಮುಂದಿರುವ ದಾರಿ.

ನಿಮ್ಮವ..................
ರಾಘವೇಂದ್ರ ತೆಕ್ಕಾರ್ 

Friday, September 16, 2011

" ಹುಟ್ಟುಗುಣ ಸುಟ್ಟರು ಹೋಗುವದಿಲ್ಲ"!!!!!ಯಾಕೆಂದರೆ ಅದು ಮನುಜಗುಣ.


ಸಮಾಜದಲ್ಲಿ ತಮಗೇನು ಅರಿವಿಲ್ಲದಿದ್ದರೂ ತಮ್ಮ ಪೊಳ್ಳು ವಾದಗಳಲ್ಲಿ ಇನ್ನೊಬ್ಬರನ್ನು ಹಳಿಯುತ್ತಾ ವಿಕೃತ ಸಂತೋಷ ಪಡುವ ಒಂದಷ್ಟು ಮಂದಿ ಸಿಗುತ್ತಾರೆ.ಆ ಸಾಲಲ್ಲೇ ಗುರುತಿಸಿಕೊಳ್ಳುವ ನನ್ನ ಒಬ್ಬ ಗೆಳೆಯನು ಇದ್ದಾನೆ.ಯಾರನ್ನಾದರು ದುಷಿಸದಿದ್ದರೆ ಆ ದಿನ ಸುಖ ನಿದ್ರೆ ಪಡೆಯಲಾರ.ಇತ್ತೀಚಿಗೆ ಅದೇ ನನ್ನ ಗೆಳೆಯ ಸಮಾಜದ ಒಂದು ವರ್ಗದ ಬಗ್ಗೆ ಮಾತನಾಡುತ್ತ ಅವರನ್ನು ಅವಹೇಳಿಸುತ್ತ ಅವರ "ಹುಟ್ಟು ಗುಣ ಸುಟ್ಟರು ಹೋಗುವದಿಲ್ಲ"ಎಂಬ ಗಾದೆ ಮಾತು ಮೂಲಕ ತನ್ನನ್ನು ತಾನೇ ಸಮರ್ತಿಸಿಕೊಳ್ಳುತಿದ್ದ.ಸರಿ ಗೆಳೆಯ ಹಂಗಾದರೆ ನಿನ್ನ ಪ್ರಕಾರ ಹುಟ್ಟು ಗುಣ ಅಂದರೇನು?ಅಂತ ಒಂದು ಪ್ರಶ್ನೆ ಅವನ ಮುಂದೆ ಇಟ್ಟೆ.ಅದೇ ಅವ್ರ ಜಾತಿ, ಮತ ಧರ್ಮ ಅದರಿಂದ ಕಲಿತ ಪಾಠ ಮುಂತಾದುವು ಎಂದು ತನ್ನ ವಿತಂಡ ವಾದವನ್ನು ನನ್ನೆದುರು ಮಂಡಿಸಿ ವಾಗ್ವಾದಕ್ಕೆ ಇಳಿದ.ಅಲ್ಲ ಗೆಳೆಯ ಜಾತಿ ಮತ ಧರ್ಮ ಇವುಗಳು ಹುಟ್ಟು ಗುಣ ಅನ್ನುವದಕ್ಕೆ ಎತ್ತಣ ಸಂಭದ ಒದಗಿಸುವದು?ಇವೆಲ್ಲದರ ಮುಂಚಿನ ಕ್ರಿಯೆಯೇ ಹುಟ್ಟು ಅಲ್ಲವೇ?ಎಂಬ ನನ್ನ ಅಧಿಕಪ್ರಸಂಗಿತನವನ್ನು ಅವನೊಂದಿಗೆ ಮುಂದುವರಿಸಿದೆ.ಈಗ ಆ ನನ್ನ ಗೆಳೆಯ ತನ್ನ ಅಲ್ಪ ಜ್ಯಾನದ ವೈಜ್ಞಾನಿಕ ತಿಳುವಳಿಕೆ ಇಂದ ವಿವರಿಸುವ ಮೂರ್ಖ ಪ್ರಯತ್ನಕ್ಕೆ ಕೈ ಹಾಕಿದ!!!!!!ಅವನ ವಾದ ಹೀಗಿತ್ತು, ಗಂಡು-ಹೆಣ್ಣು ಕ್ರಿಯೆ ಇಂದ ನಮ್ಮ ಹುಟ್ಟು ಅಂದರೆ ಅವರಿಬ್ಬರ ಜೀನ್ಸ್ ಮಿಳಿತವು ಹುಟ್ಟಿಗೆ ಕಾರಣವಾಗುತ್ತದೆ ಎಂದ!!!!!!ಅವರಿಬ್ಬರ ಗುಣಗಳು ಹುಟ್ಟುವ ಮಗುವಿನಲ್ಲಿ ಬರುತ್ತದೆ ಎಂಬ ವಾದಕ್ಕೆ ಇಳಿದಿದ್ದನ್ನು ಮನಗಂಡು ಅರ್ದದಲ್ಲೇ ಬಾಯಿ ಹಾಕಿ ಹಾಗಾದರೆ ಜೀನ್ಸ್ ಅನ್ನುವದು ಧರ್ಮ, ಜಾತಿ,ಮತಗಳಿಂದ ರುಪುಗೊಂಡಿದ್ದೆ!!!!!!!?ಅರ್ಥವಾಗಲಿಲ್ಲ ಅಂದೆ.ಅವನಿಗೂ ತನ್ನ ವಾದದ ಅರ್ಥ ತಿಳಿಯದಾಗಿ ತಲೆ ಸವರುತ್ತ ಕೋಪದಿಂದ ಹೋಗಿ ಹೋಗಿ ನಿನ್ನಂತ ಮೂಲಭೂತವಾದಿ ಜೊತೆ ಮಾತಾಡ್ತಿನಲ್ಲ!.......ಸುಮ್ಮನೆ ವ್ಯರ್ಥ ಕಾಲಹರಣ ಸ್ಟುಪಿಡ್......!!!!!!!ಅಂತ ನನ್ನನ್ನು ಬೈದು ತನ್ನ ಕೆಲಸದಲ್ಲಿ ಮಗ್ನನಾದ.ಮುಖದಲ್ಲಿ ಅಸಹನೆ ಮಡುಗಟ್ಟಿತ್ತು.ನನ್ನನ್ನು ಮೂಲಭೂತವಾದಿ ಅಂತ ಸಂಬೋದಿಸಿ,ನನ್ನಲ್ಲೇ ವಿಚಾರಮಂಥನ ಕೈಗೊಳ್ಳಲು ವಿಷಯ ಒದಗಿಸಿದ ಗೆಳೆಯನ ಮೊಗನೋಡಿ ಸಣ್ಣ ಕಿರು ನಗೆ ಬೀರಿ ಸುಮ್ಮನಾಗಿದ್ದೆ.ಆಗ ಕಾಡುತಿದ್ದ ವಿಚಾರ ಇಷ್ಟೇ ಹುಟ್ಟುಗುಣ ಅಂದರೇನು?

            ನನ್ನ ಪ್ರಕಾರ ಹುಟ್ಟು ಗುಣ ಅನ್ನುವದು ಮನುಜ ಗುಣ.ಅದೆಂದರೆ ಅಳುವದು,ನಗುವದು, ಕೋಪಿಸುವದು,ಸಂಕೋಚಿಸುವದು,ಸಂತೋಷ ಪಡುವದು,ನೆಮ್ಮದಿ ಬಯಸುವದು ಇತ್ಯಾದಿ.ಇತರ ಪ್ರಾಣಿಗಳಿಗಿಂತ ಸ್ವಲ್ಪ ಬುದ್ದಿವಂತಿಕೆಯನ್ನು ಹೊಂದಿರುವ ಮನುಷ್ಯ ಪ್ರಾಣಿಯ ಸಾಮಾನ್ಯ ಚಟುವಟಿಕೆಗಳು ಅಂತಲೂ ಕರೆಯಬಹುದು.ಮುಂದೆ ಬೆಳೆಯುತ್ತ ವಿಚಾರ ಸಂಮಿಳಿತಗಳಿಂದ ತನ್ನ ಬುದ್ದಿವಂತಿಕೆಯನ್ನು ಬೆಳೆಸುತ್ತಾ ಮುಂದುವರಿಯುತ್ತಾನೆ.ಒಳ್ಳೆಯ ವಿಚಾರಗಳನ್ನು ತನ್ನದಾಗಿಸಿಕೊಂಡರೆ ಸಮಾಜದ ಉತ್ತಮ ಮನುಜನಾಗುತ್ತಾನೆ.ನಮ್ಮಲ್ಲಿ ನಿಜ ಅರ್ಥದ ಮನುಷ್ಯ ಗುಣಗಳು ಬೆಳೆಯಬೇಕಾದರೆ ವಿಚಾರದ ಆಯ್ಕೆಯಲ್ಲಿ ಸ್ವಲ್ಪ ಚ್ಯೂಸಿ ಆಗಿರಬೇಕು, ಒಳ್ಳೆಯ ಪರಿಸರ ನಮ್ಮದಿರಬೇಕು ಅಷ್ಟೇ.ಮನುಜ ಗುಣಗಳ ಸಂವೇದನೆಯನ್ನು ಅರಿತುಕೊಂಡು ನಡೆಯುವವ ನೆಮ್ಮದಿ ಪಡೆದು ಮಾದರಿಯಾಗಿ ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ,ಅದೇ ಮನುಜ ಗುಣಗಳ ಸಂವೇದನೆಯನ್ನು ಅರಿಯಲಾಗದೆ ಅದ ಮರೆತು ನಡೆವವ ಜೀವನದ ದಿಕ್ಕನ್ನು ಕಳೆದುಕೊಂಡು ಒಂದಷ್ಟು ಜನರ ದ್ವೇಷ,ತಾತ್ಸಾರ ತನ್ನದಾಗಿಸಿಕೊಂಡು ಪ್ರೀತಿ ವಿಶ್ವಾಸ ಕಳೆದು ಕೊಂಡು ತನ್ನ ನೆಮ್ಮದಿಯ ಬಾಳಿಗೂ ಭಂಗ ತಂದುಕೊಂಡು ಸಮಾಜ ಕಂಟಕನಾಗಿ ಸಮಾಜದಲ್ಲೇ ಇರುತ್ತಾನೆ ಆದರೆ ನಿಜ ಅರ್ಥದ ಮನುಷ್ಯನಾಗಿ ಅಲ್ಲ.

                               ನಾನು ಇಲ್ಲಿ ವಿವರಿಸುತ್ತಿರುವ ಮಾನವ ಗುಣ ನಮ್ಮೆಲ್ಲರಲ್ಲಿಯು ಇರುವಂತದ್ದೆ ಅಲ್ಲದೆ ಅವುಗಳು ಆಗಾಗ್ಯೆ ಬೆಳಕಿಗೂ ಬರುತ್ತಿರುತ್ತದೆ .ಒಂದು ಕ್ರೌರ್ಯ ಅಥವಾ ಒಂದು ಅಫಘಾತ ನಮ್ಮ ಕಣ್ಣೆದುರು ನಡೆಯುತ್ತಿರುತ್ತದೆ ಅಂದುಕೊಳ್ಳಿ,ನಮೆಗೆ ಗೊತ್ತಿಲ್ಲದಂತೆ ನಮ್ಮ ಹೃದಯಾಂತರಾಳ ದಿಂದ ಹೊರಡುವ ನೋವಿನ ಉದ್ಗಾರ ಅಥವಾ ಅದ ನೋಡಲಾಗದೆ ಮುಖಕ್ಕೆ ಅಡ್ಡವಾಗಿ ಕೈ ಹಿಡಿಯುವದು ಇಂತಹ ಒಂದು ಕ್ರಿಯೆ ನಡೆದುಬಿಡುತ್ತದೆ.ಯಾರೋ ಒಬ್ಬರು ಕಷ್ಟಕಾಲದಲ್ಲಿ ನೆರವಾದಾವಾಗ ಕಣ್ಣಂಚಿನಲ್ಲಿ ಒಂದು ಕೃತಜ್ಞತಾ ಪೂರ್ವಕ ಒಂದು ಹನಿ ಕಣ್ಣೀರ ಪನಿ ಮೂಡುತ್ತದೆ ಅಲ್ಲವೇ?ಹಸಿವಾದವನಿಗೆ ಒಂದು ಹೊತ್ತಿನ ಊಟ ಕೊಟ್ಟಾಗ ಮನಸ್ಸಿಗಾಗುವ ಸಂತೋಷ?ಹೀಗೆ ಬೇಕಾದಷ್ಟು ಮಾನವ ಗುಣ ನಮ್ಮಲ್ಲಿ ಗೋಚರವಾಗದೆ ಹುದುಗಿರುತ್ತದೆ.ಮನಸ್ಸಿನಾಳದಲ್ಲಿರುವ ಮಾನವೀಯ ಸಂವೇದನೆಯನ್ನು ಬಡಿದೆಬ್ಬಿಸಬೇಕು, ಅದ ಅರ್ಥಿಸಿಕೊಂಡು ನಡೆದರೆ,ನೆಮ್ಮದಿ,ಸಂತೋಷದ,ಸೌಹಾರ್ದಯುತ ಜೀವನ ನಮ್ಮದಾಗುತ್ತದೆ.ಆ ಮೂಲಕ ಸಮಾಜವು ಸುಧಾರಿಸುತ್ತದೆ.ಮಾನವಗುಣಗಳಿಗೆ ಇರುವ ಧರ್ಮ ಪ್ರಕೃತಿ,ಅದರ ಜಾತಿ ಹಸಿವು ಅಷ್ಟೇ.ಹೌದು"ಹುಟ್ಟುಗುಣ ಸುಟ್ಟರು ಹೋಗುವದಿಲ್ಲ"!!!!!ಯಾಕೆಂದರೆ ಅದು ಮನುಜಗುಣ.

Wednesday, September 14, 2011

ಅಶ್ರಫ್ ಮಂಜ್ರಾಬಾದ್ ಸಕಲೇಶಪುರ ನಿಮಗೆ ನನ್ನ ಗೌರವ ಪೂರ್ವಕ ವಂದನೆಗಳು.

ಅಶ್ರಫ್ ಮಂಜ್ರಾಬಾದ್ ಸಕಲೇಶಪುರ.
ಸಾಮಜಿಕ ಸ್ವಾಸ್ತ್ಯದ ಕಳಕಳಿ ಇಂದ ಫೇಸ್ ಬುಕ್ ಅಂತ ಅಂತರ್ಜಾಲದ ಕೆಲವೊಂದು ಗ್ರೂಪ್ ಗಳು ಹೇಗೆ ಸಮಾಜಕ್ಕೆ ಮಾರಕವಾಗುತ್ತಿದೆ ಅನ್ನುವದನ್ನು ಎತ್ತಿ ಹಿಡಿಯಲು ಇಲ್ಲೇ  ಬರೆದ "ಫೇಸ್ ಬುಕ್ ಗೆ ಹಲವಾರು ಮುಖಗಳಿವೆ ಎಂಬ ಎಚ್ಚರ ಇದ ಬಳಸುವ ಮುಂದು ನಮಗಿರಲಿ" ಲೇಖನವನ್ನು ವಿಶ್ವ ಕನ್ನಡ ನ್ಯೂಸ್ ನ ಪ್ರಧಾನ ಸಂಪಾದಕರು ಅಶ್ರಫ್ ಮಂಜ್ರಾಬಾದ್ ಸಕಲೇಶಪುರ ಅವರು ಸ್ವ ಇಚ್ಛೆ ಇಂದ  ನನ್ನ ಸಂಪರ್ಕಿಸಿ ನಾನು ನಿಮ್ಮ ಲೇಖನವನ್ನು ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಪ್ರಕಟಿಸುತ್ತೇನೆ ಎಂದಾಗ ಖುಷಿ ಇಂದಲೇ ಒಪ್ಪಿಗೆ ಕೊಟ್ಟಿದ್ದೆ. ಅವರು ಪ್ರಕಟಿಸಿಯೂ ಇದ್ದಾರೆ.ಆ ಮೂಲಕ ಇದನ್ನು ಇನ್ನಷ್ಟು ಜನಕ್ಕೆ ತಲಿಪಿಸುವದರಲ್ಲಿ ಸಾಥ್ ಕೊಟ್ಟಿದ್ದಾರೆ,ಅವರ ಸಾಮಾಜಿಕ ಕಳಕಳಿಗೆ ಅಭಾರಿಯಾಗಿದ್ದೇನೆ. ಸಮಾಜ ಸ್ವಾಸ್ಥ್ಯತೆಗೆ ಧಕ್ಕೆ ತರುವಂತಹ ಎಲ್ಲ ವಿಚಾರಗಳ ವಿರುದ್ದ ಇಂತಹ ಹೆಗಲಿಗೆ ಹೆಗಲು ಕೊಟ್ಟು ನಡೆಯುವ ಕೆಲಸಗಳು ನಡೆಯಲಿ.ಅಶ್ರಫ್ ಮಂಜ್ರಾಬಾದ್ ಸಕಲೇಶಪುರ ನಿಮಗೆ ನನ್ನ ಗೌರವ ಪೂರ್ವಕ ವಂದನೆಗಳು.

ನಿಮ್ಮವ..................
ರಾಘವೇಂದ್ರ ತೆಕ್ಕಾರ್.