Friday, July 20, 2012

ರಕ್ತದಾಟ...............

ಭಾರದುಸಿರು ಹಿಡಿದಿಡುವದೆಂತೆಂದೂ
ಗಂಟಲ ಸೆರೆಯ ತೆರೆದು
ಉಸಿರ ಬಿಟ್ಟೆ
ಬಾಯಿ ಮೂಗೆಲ್ಲ ಕೆಂಪು ರಕ್ತ

ಪಾಪದ ನೆತ್ತರ ಕಲೆ ಮೈಗಂಟಿದಾಗ
ಅದ ಸವರಿ ಅಂದೊಮ್ಮೆ ನಕ್ಕ
ಉಸಿರ ಕಟ್ಟಿಸಿದ
ವಿಜಯೋತ್ಸವದ
ನಗೆಯ ಫಲವೆಂಬಂತೆ
ಎದುರುಗಿದ್ದ ಕನ್ನಡಿ
ಪ್ರತಿರೂಪ ತೋರಿಸಿ
ಅಣಕಿಸಿ ನಗೆಯಾಡುತಿತ್ತು,

ಬೆಚ್ಚಿ ಬಿದ್ದೇನೂ ಒಂದು ದಿನ
ನನ್ನದೆ ರಕ್ತ ನೋಡಿದಾಗೆಂದು
ಗೊತ್ತಿರಲಿಲ್ಲ ನನಗೆ
ರಕ್ತದೋಕುಳಿ ಹರಿಸುವಾಗ
ಕೆಂಪ ನೋಡಿ
ಕೆಂಪಾಗಾಗಿ ರೋಷಗೊಳ್ಳುವಾಗ
ಆದರಿಂದು ಬೆಚ್ಚಿ ಬೆವರುತಿದ್ದೇನೆ
ಮೈಯೆಲ್ಲ ಕಮಟು ವಾಸನೆ
ಯಾರೂ ಇರಿಯದಿದ್ದರೂ
ಮೈಯೆಲ್ಲಾ ಆಳ ಸೀಳಿನ ನೋವು.

ಪಿತೂರಿಗಳು ಹೊಸದಲ್ಲ ನನಗೆ
ನರ ಮೀಟಿ ಉಸಿರು ನಿಲ್ಲಿಸಿದ್ದೆ
ಜೊತೆಗಾರರೆನಿಸಿಕೊಂಡ ನನ್ನವರನ್ನೆ
ಆಗೆಲ್ಲ ವಿಕೃತ ಅಟ್ಟಹಾಸ
ಕೈಯಲ್ಲಿ ಶೀಷೆಯ ಜೊತೆ ವಿಕಟಹಾಸ
ಆದರಿಂದೂ ನಿಮಿತ್ತ ಪಿತೂರಿಗೆ ಬಲಿ
ಗೆದ್ದು ಬಿಡುವ ಸಂಭವವೆ ಇಲ್ಲ
ಕಾರಣ ಇದು ವ್ಯಕ್ತಿ ಪಿತೂರಿಯಲ್ಲ
ನಾ ಮಾಡಿದ ಪಿತೂರಿಗಳ ಸಿಕ್ಕಿನೊಳಗೆ
ಫಲ ಉಣ್ಣೆಂಬ ವಿಧಿಯ ಆಟ-ಪಾಠ.

ಸುತ್ತಲೂ ಗಹಗಹಿಪ ನಗೂ
ಘೋರತೆ ಕಾಡಿದೆ ಇಂಚಿಂಚೂ ಮನದೊಳಗೆ
ಗಳಿಸಿದ್ದೂ ಒಂದು ಹಿಡಿಯೂ ಇಲ್ಲ
ಮಣ್ಣಲ್ಲಿ ಮಣ್ಣಾಗಿಸಲು
ನನ್ನ ಹಿಂದೂ ಮುಂದೂ ಯಾರಿಲ್ಲ
ತೊಟ್ಟು ವಿಷ ಕೂಡ ನನ್ನ ಅಮೃತ ಪಾನ
ಗಬ್ಬು ನಾರುವ ಪಾದಗಳು
ಹೆಜ್ಜೆ ಮರೆತಿದೆ, ಇನ್ನೆಲ್ಲಿಯದೂ ಅಮೃತ ಪಾನ?

ಸಾವಿನ ಅರ್ತನಾದವ ಕಂಡು
ಕುಣಿಯುತಿದ್ದೆ, ಮಚ್ಚೆತ್ತಿ ನಲಿಯುತಿದ್ದೆ
ಆದರಿಂದೂ ಸಾವಿಗಾಗಿ
ಮೊರೆಯಿಡುತಿದ್ದರೂ ಅದು ದೂರ ದೂರ
ರಕ್ತ ಮೈಯೊಳಗೆ ಕೊಳೆತು ನಾರುತ್ತಿದೆ
ಜೀವಂತವಿದ್ದೂ ಸತ್ತಂತೆ
ಸಾವಿಗೂ ವಾಕರಿಕೆ ನನ್ನ ಮೈ ಮುಟ್ಟಲೂ.

ಮೈತೊಳೆದು ಶುಚಿಯಾಗಿಸಿ
ರಕ್ತವರೆಸಿ ಕೆಂಪಡಗಿಸಿ
ಸಾವ ಸ್ವಾಗತಿಸಬೇಕಿದೆ

ಕೊನೆಯ ಸಾರಿಯೆಂದು
ಮತ್ತದೆ ಹಳೆ ಪಿತೂರಿ ಹೆಣೆದೂ
ಹೊಸ ತಯಾರಿಯೊಂದಿಗೆ!!!!

ನನ್ನ ಹೆಜ್ಜೆ ನಾನೇರಿದ ಮೆಟ್ಟಿಲು

ಜೀವನದ ಎತ್ತರಕ್ಕೇರಿ
ನೋಡಬೇಕಾದುದು ಹತ್ತಿ ಬಂದ
ಮೆಟ್ಟಲುಗಳನ್ನಲ್ಲ,
ಹಿಂತುರಿಗಿ ನೋಡಬೇಕಾದ್ದು
ನಡೆದು ಬಂದ
ಹೆಜ್ಜೆ ಗುರುತುಗಳನ್ನಲ್ಲ,

ಬದಲಾಗಿ
ಅರ್ಥೈಸಿಕೊಳಬೇಕಾದ್ದು
ನನ್ನೆತ್ತರಕ್ಕೇರಲು
ಸಹಕರಿಸುವದರೊಂದಿಗೆ
ಆ ಮೆಟ್ಟಲುಗಳು, ಹೆಜ್ಜೆಗಳು
ನನಗಾಗಿ ಸಹಿಸಿಕೊಂಡ
ನನ್ನದೆ ಭಾರವನ್ನ.

ಭಾರ ಹೊರುವದಕ್ಕೆ ನಾ
ಸಿದ್ದನಾಗಿರುವಾಗ,
ಅವುಗಳು
ಇನ್ನಾದರೂ ಹಗುರಾಗಲಿ
ತಂಪಾಗಿ ಹಸಿರಾಗಲಿ.

Tuesday, July 10, 2012

"ಈಗ"- ಈಗ್ಲೆ ಅಲ್ಲಾಂದ್ರೂ ನೋಡ್ದೆ ಇರ್ಬೇಡಿ.


"ಈಗ" ನೊಣವೆ ಹೀರೋ ಆಗಿ ಕಾಣಿಸಿಕೊಂಡ ಚಿತ್ರ ಭರ್ಜರಿ ಯಶಸ್ಸಿನೊಂದಿಗೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸು ಸೂಕ್ತವಾಗಿದೆ ಮತ್ತು ಒಂದದ್ಬುತ ಪರಿಕಲ್ಪನೆಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯೂ ಹೌದು.ರಾಜಮೌಳಿಯವರ ಎಲ್ಲಾ ಹಿಂದಿನ ಯಶಸ್ವಿ ಚಿತ್ರಗಳನ್ನೆಲ್ಲ ಮೀರಿಸಿ ಈ ಚಿತ್ರ ನಿಂತಿದೆ ಅಂದರೂ ಅತಿಶಯೋಕ್ತಿಯಲ್ಲ.ಒಂದರೆಕ್ಷಣವೂ ಪ್ರೇಕ್ಷಕನ ಚಿತ್ತ ಚಿತ್ರದಿಂದ ದೂರ ಸರಿಯದಂತೆ ಹಿಡಿದಿಡುವ ರಾಜಮೌಳಿಯ ಗಟ್ಟಿ ನಿರ್ದೇಶನ, ಸುದೀಪ್ ರ ಪೂರ್ಣ ಪ್ರಮಾಣದ ಅದ್ಬುತ ಅಭಿನಯ, ಅತ್ಯದ್ಭುತ ಗ್ರಾಫಿಕ್ ತಂತ್ರಜ್ಞಾನದ ಬಳಕೆ,ಕೀರವಾಣಿಯವರ ಉತ್ತಮ ಸಂಗೀತ, "ಈಗ"ವನ್ನೂ ಶ್ರೀಮಂತಗೊಳಿಸಿದೆ. ಎಲ್ಲೂ ಅನಾವಶ್ಯಕವಾಗಿ ಎಳೆದುಕೊಳ್ಳದೆ, ಕಥೆಗೆ ಎಷ್ಟು ಬೇಕೋ ಅಷ್ಟಷ್ಟೆ ಸೂಕ್ತವೆನಿಸುವ ದೃಶ್ಯ ಸಂಯೋಜನೆಯೊಂದಿಗೆ ಎರಡೇ ಎರಡೂ ಉತ್ತಮ ದೃಶ್ಯ ಪರಿಕಲ್ಪನೆಯ ಜೊತೆಗಿರುವ ಹಾಡೂಗಳೊಂದಿಗೆ ಈ ಚಿತ್ರವೂ 2 ಘಂಟೆಯ ಸಮಯದಲ್ಲಿ ಉತ್ತಮ ಮನರಂಜನೆ ಸವಿಯನ್ನು ಕೊಡುವದೂ ಖಂಡಿತಾ ಮತ್ತೂ ಈ ಸವಿ ಬಹುದಿನದ ಮಟ್ಟಿಗೆ ಉಳಿದುಕೊಳ್ಳುವದೂ ಕೂಡ ಸತ್ಯ.

ಸುದೀಪ್ ಪೂರ್ಣ ಪ್ರಮಾಣದ, ಬಹುಶಃ ಹಿಂದಿನೆಲ್ಲಾ ಚಿತ್ರದ ಅಭಿನಯವನ್ನೂ ಮೀರಿಸಿದ ಅಭಿನಯ ಈ ಚಿತ್ರದಲ್ಲಿ ಬಂದಿದೆ ಎಂಬುದು ಚಿತ್ರ ನೋಡುಗ ಕಾಣುತ್ತಲೆ ಸುದೀಪ್ ರನ್ನೂ ಅರ್ಥೈಸಿಕೊಂಡು ರಾಜ್ ಮೌಳಿ ಸುದೀಪರನ್ನೂ ಈ ಮಟ್ಟಿಗೆ ಬಳಸಿಕೊಂಡಿರೋದು ಕೂಡ ಚಿತ್ರ ನೋಡಿ ಮುಗಿಸಿದ ಪ್ರೇಕ್ಷಕ ಮೆಚ್ಚುವ ಅಂಶಗಳಲ್ಲೊಂದು. ಇತ್ತೀಚೆಗೆ ಕನ್ನಡದ ಒಂದು ಸಂಘಟನೆ ಸುದೀಪ್ ರಿಗೆ 'ಅಭಿನವ ಚಕ್ರವರ್ತಿ' ಬಿರುದನ್ನೂ ಕೊಟ್ಟಿದ್ದೂ ನೆನಪಾಗಿ ಈ ಬಿರುದಿಗೆ ಸುದೀಪ್ ಸೂಕ್ತವಾದ ವ್ಯಕ್ತಿ ಹೌದೆನ್ನುವ ಅನುಮೋದನೆಯನ್ನೂ ಚಿತ್ರ ನೋಡಿದ ಪ್ರೇಕ್ಷಕನಲ್ಲಿ ಈ ಚಿತ್ರದ ಸುದೀಪ್ ಪಾತ್ರ ಮೂಡಿಸುತ್ತದೆ. ಕನ್ನಡದಲ್ಲೆ ಭಾಷೆಯಲ್ಲೆ ಪ್ರಾರಂಭವಾಗುವ ಚಿತ್ರ ಪ್ರಾರಂಭದಲ್ಲೆ ಪ್ರೇಕ್ಷಕನನ್ನೂ ಚಿತ್ರದತ್ತ ಸೆಳೆದು ಬಿಡುತ್ತೆ, ತದ ನಂತರ ಪ್ರೇಕ್ಷಕನ ಚಿತ್ತವೆಲ್ಲ ಚಿತ್ರದಲ್ಲೆ ತೊಡಗಿ ಬಣ್ಣದ ಚಿತ್ತಾರವ ಕಣ್ಣು ತುಂಬಿಕೊಳ್ಳುವಂತೆ ಮಾಡುತ್ತದೆ.ರಾಜ್ ಮೌಳಿಯವರ ಈ ವಿಶಿಷ್ಟ ಪರಿಕಲ್ಪನೆಯನ್ನೂ ಯಾವೂದೇ ಹಾಲಿವುಡ್ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ನೋಡಿ ತನ್ನದಾಗಿಸಿಕೊಳ್ಳುವ ಅವಕಾಶವನ್ನೂ ಮಿಸ್ ಮಾಡ್ಕೊಳ್ಳದೆ ಇರುವದು ಉತ್ತಮ ಎಂಬುದನ್ನು ತಿಳಿಯಪಡಿಸುವದಕ್ಕಾಗಿ ಹಿಂಗೊಂದು ಬರಹ.

ಡೈನೋಸಾರ್ , ಆನಕೊಂಡ, ಆನೆ, ಹುಲಿ, ಸಿಂಹ, ಇಲಿ, ಮೊಲ, ನಾಯಿ ಇಂಥಹ ಪ್ರಾಣಿಗಳನ್ನೆಲ್ಲಾ ಬಳಸಿಕೊಂಡು ಚಿತ್ರಗಳೂ ಮೂಡಿಬಂದಿದ್ದು ನಾವೂ ನೋಡಿರುವಂತದ್ದೆ. ಬಹುಶಃ ಮೊದಲ ಭಾರಿಗೆ ಒಂದೆ ಚಪ್ಪಾಳೆ ಏಟಿಗೆ ಹೊಸಕಿ ಬಿಡಬಹುದಾದ, ಬರೀಯ ಕಣ್ಣ ದೃಷ್ಟಿಯ ಗಮನಕ್ಕೂ ಗಮನಿಸದ ಹೊರತಾಗಿ ಬರದ ನೊಣವೊಂದು ಚಿತ್ರದ ಹೀರೋವಾಗಿ ಕಾಣಿಸಿಕೊಂಡು ವಿಲನ್ ಮೇಲೆ ರಿವೇಂಜ್ ತೀರಿಸುವಂತ ಪರಿಕಲ್ಪನೆ ಹೇಗಿದ್ದೀತೂ???ಹೇಗೆ ನೊಣವೊಂದು ಸಂಭಾಷಿಸಬಹುದು?? ನೊಣವೊಂದು ಏನು ಮಹಾ ಕಾಟ ಕೊಡಲು ಸಾಧ್ಯ?? ಇಂತಹ ಕುತೂಹಲಗಳೆ "ಈಗ" ಚಿತ್ರದತ್ತ ಆ ಮೂಲಕ ಚಿತ್ರಮಂದಿರದತ್ತ ನನ್ನ ಸೆಳೆದಿದ್ದು.ನನ್ನೆಲ್ಲ ಕುತೂಹಲದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರವಂತೂ ಅದ್ಬುತ.ನೊಣವೆ ಹಾಸ್ಯ ಪಾತ್ರವಾಗಿ ಪ್ರೇಕ್ಷಕನನ್ನೂ ನಕ್ಕೂ ನಗಿಸಲೂಬಹುದೂ ಎಂಬುದೂ ಕೂಡ ಕಂಡುಕೊಂಡಾಗ ರಾಜಮೌಳಿಯ ನಿರ್ದೇಶನಕ್ಕೆ ಮನಸ್ಸಲ್ಲೆ ಒಂದು ಶಭಾಸ್ ಅಂದಿದ್ದೆ.ಇಂತದ್ದೊಂದು ಕಾನ್ಸೆಪ್ಟ್ ಹುಟ್ಟಿಸಿ ಅದಕ್ಕೆ ಸುದೀಪ್ ಸೂಕ್ತ ನಟ ಎಂಬುದಾಗಿ ರಾಜಮೌಳಿ ಆರಿಸಿದ್ದನ್ನ ನೋಡಿದರೆ ರಾಜಮೌಳಿಯವರಲ್ಲಿರುವ ಆ ನಿರ್ದೇಶಕನಿಗೆ ಒಂದು ಸಲಾಂ ನೀಡಲೇಬೇಕು.ಒಂದು ಮಿನಿಯೇಚರ್ ಆರ್ಟಿಷ್ಟ್ ಆಗಿ ಕಂಡುಬರುವ ಚಿತ್ರದ ನಾಯಕಿ ಶಮಂತಾ ಅವರ ಪಾತ್ರವೂ ಗಮನ ಸೆಳೆಯುವಂತದ್ದು.ಚಿತ್ರದ ಮೊದಲ ಕೆಲವೆ ಕೆಲವೂ ನಿಮಿಷಗಳಲ್ಲಿ ಚಿತ್ರದ ನಾಯಕನಾಗಿ ಕಂಡು ಬರುವ ನಾನಿ ಅವರ ಪಾತ್ರ ಗಮನಸೆಳೆಯುತ್ತಲೆ ಕೊನೆಗೊಂಡು ನೊಣ ಚಿತ್ರವನ್ನೂ ಆವರಿಸಿಕೊಂಡು ಬಿಡುತ್ತೆ.ಸೆಂಥಿಲ್ ಅವರ ಉತ್ತಮ ಕ್ಯಾಮಾರ ವರ್ಕ್ ಕೂಡ ಚಿತ್ರವನ್ನು ದೃಶ್ಯ ಕಾವ್ಯವಾಗಿ ಮೂಡಿಸುತ್ತೆ.

ಒಂದೊಳ್ಳೆ ಚಿತ್ರ "ಈಗ" ಅನ್ನುವದರಲ್ಲಿ ಎರಡೂ ಮಾತಿಲ್ಲ,ಚಿತ್ರದ ದೃಶ್ಯಗಳಲ್ಲಿ ಒಂದು ಸೂಜಿ ಬಿದ್ದರೂ, ನೀರು ಹಾಯಿಸುವ ಪೈಪ್ ಎಡವಿದರೂ ಇಂತಹ ಸಣ್ಣ ಪುಟ್ಟ ಹಲವು ಘಟನೆಗಳೂ ನಡೆದರೂ ಕೂಡ ಅದು ಕಥೆಯ ಹೊರತಾಗಿದ್ದು ಅಲ್ಲ ಬದಲಾಗಿ ಅದೊಂದು ಸಕಾರಣಕ್ಕೆ, ಇಂತಹುಗಳೆ "ಈಗ" ನಿರ್ದೇಶಕನ ಗಟ್ಟಿತನ.ಕಮರ್ಷಿಯಲ್ ಎಲಿಮೆಂಟ್ಸ್ ಗಳೂ ಬೇಕೆಂದು ಇಲ್ಲ ಸಲ್ಲದ್ದನ್ನೂ ಸೇರಿಸದೆ ಒಂದೊಳ್ಳೆ ಕಮರ್ಷಿಯಲ್ ಚಿತ್ರವಾಗಿ "ಈಗ" ಮೂಡಿಬಂದಿರುವದನ್ನು ಕಾಣಬಹುದು.ಒಟ್ಟಿನಲ್ಲಿ ಕುಟುಂಬ ಸಮೇತವಾಗಿ ಚಿತ್ರವನ್ನೂ ಅಸ್ವಾದಿಸಬಹುದಾದದ್ದು, ಅದರಲ್ಲೂ ಮುಖ್ಯವಾಗಿ ಮನೆಮಂದಿ ಮಕ್ಕಳ ಜೊತೆ ಈ ಚಿತ್ರವನ್ನೂ ನೋಡಿದಲ್ಲಿ ಇನ್ನಷ್ಟು ರುಚಿಯಾಗಬಲ್ಲುದಾದ ಚಿತ್ರವಿದು.ನೊಣದ ಆಟಾಟೋಪ ಮಕ್ಕಳನ್ನೂ ಕೂಡ ತನ್ನತ್ತ ಸೆಳೆಯಬಲ್ಲುದು. ಹಾಗಿದ್ದರೆ ಮತ್ಯಾಕೆ ತಡ, ಈಗ ಚಿತ್ರವನ್ನೂ ಈಗಲೇ ಅಲ್ಲದಿದ್ರೂ ನೋಡ್ದೆ ಇರ್ಬೇಡಿ.

Friday, July 6, 2012

ಹುಟ್ಟು-ಸಾವೂ ಜೊತೆಗೆ ಹಿಡಿ ಬದುಕು.

ದಿನದ ಬೆಳಕಿನ  ಹುಟ್ಟು
ಕತ್ತಲೆ ಎಂಭ ಸಾವಿನ ಜೊತೆ ದಿನಾಂತ್ಯಗೊಂಡಂತೆ
ಜೀವದ ಹುಟ್ಟಿನ ಜೊತೆ ಮಗದೊಂದು ಹುಟ್ಟಿದೆ
ಅದು ಆ ಜೀವದ ಸಾವು.


ಹುಟ್ಟಿಗಾಗಿ ಸಂಭ್ರಮಿಸಿದಾಗಲೆಲ್ಲ ಮರೆತಿದ್ದು
ಜೊತೆಗೆ ಹುಟ್ಟಿದ ಸಾವಿಗೂ ಸಂಭ್ರಮಿಸುತ್ತೆವೆಂದು.
ಸಂಭ್ರಮ ಬರೀಯ ಹುಟ್ಟಿಗಾಗಿ ಅಷ್ಟೆ
ಸಾವೂ ವಾಸ್ತವ ಆದರೂ ಸಂಭ್ರಮದಿಂದ ದೂರ ದೂರ.


ಪ್ರತಿ ವರುಷ ಮತ್ತೆ ಮತ್ತೆ ಜನಿಸುವದಲ್ಲ ಸತ್ಯ
ವಾಸ್ತವ ಅಷ್ಟಷ್ಟೆ ಬದುಕ ಕಳೆದು ಸಾವ ಕಡೆ ನಡೆಯುವದು.
ಜನುಮ ದಿನದ ಸಂಭ್ರಮಾಚರಣೆ ಎಂದರೆ???
ಸಾವ ಪಯಣ  ಹಾದಿಯ ಒಂದೊಂದೆ ಮೆಟ್ಟಲೇರಿ
ವಿರಮಿಸಿ ಸಂಭ್ರಮಿಸಿ ಮತ್ತೆ ಮುನ್ನುಗ್ಗಲು
ಸಂಭ್ರಮಿಸಿ ಸ್ಪೂರ್ತಿ ಪಡೆಯುವ ಆಚರಣೆ


ಹುಟ್ಟು,ಬದುಕು,ಸಾವೂ ಒಬ್ಬರಿಗೊಬ್ಬರೂ ಸಂಬಂಧಿತರೂ
ಆದರೂ ಬದುಕೊಂದನ್ನೂ ಬಿಟ್ಟು ಉಳಿದೆರಡರ ಮೇಲೆ
ಜೀವದ ಹಿಡಿತ ಶೂನ್ಯ.


ಬದುಕೆಂದರೆ ಅದು ಸಾವು ನೀಡಿದ ಭಿಕ್ಷೆ
ಹುಟ್ಟು ನೀಡಿದ ಕರುಣೆ.
ಸಾವ ನೆನಪಿನ ಕೊಡುಗೆ....
ವಾಸ್ತವದರಿವು,ಚಂದದ ಬದುಕು
ಹುಟ್ಟಿನ ಕರುಣೆಗೊಂದು ಸಂಭ್ರಮದ ಅರ್ಥ.




Thursday, July 5, 2012

ವೇರ್ ಆರ್ ಯೂ ಸಂಪಾದಕೀಯಾ??????

ಕನ್ನಡಪ್ರಭದ ಸಂಪಾದಕರೂ ಆದ ವಿಶ್ವೇಶ್ ಭಟ್ ರವರು ಇತ್ತೀಚೆಗೆ ಆರೆಷ್ಟ್ ಆಗಿದ್ದರೂ.ಮಾಧ್ಯಮಗಳಲ್ಲಿ ಅದು ದೊಡ್ಡ ಸುದ್ದಿಯೆ ಆಗಿಲ್ಲ ಬಿಡಿ, ಬದಲಾಗಿ ರವಿ ಬೆಳೆಗೆರೆಯವರಿಗೆ ಆಹಾರ ಸಿಕ್ಕಿಂದಂತಾಗಿತ್ತು.ಇರಲಿ!!! ಇವತ್ತೂ ಮೀಡೀಯಾ ಅನ್ನುವದೂ ಕೆಲವೂ ಮೂಲಭೂತ ಹಿತಾಸಕ್ತಿಗಳ ಕೈಗೆ ಸಿಕ್ಕಿ ನಲುಗುತ್ತಿದೆಯೋ ಅನ್ನುವದೂ ಯಾಕೋ ಪದೆ ಪದೆ ಬರುವ ಸಂದೇಹ.ಹೀಗಿರಬೇಕಾದರೇನೆ ಮೀಡಿಯಾ ವಿಷಯ ಬಂದಾಗ ಯಾಕೋ ಮತ್ತೆ ಮತ್ತೆ ನೆನಪಾಗೋದು ಇತ್ತೀಚೆಗೆ ಮಂಕಾಗಿ ಕುಳಿತಿರುವ ಸಂಪಾದಕೀಯಾ ಬ್ಲಾಗ್. ವಿಷಯ ಸತ್ಯಾ ಸತ್ಯತೆಯನ್ನೂ ಎಳೆದು ತರುತಿದ್ದ ರೀತಿಯೆ ಅಂತಿದ್ದ ಬ್ಲಾಗ್ ನೆನಪಾಗೋದು ಸಹಜವೆ ಹೌದು. ವರ್ತಮಾನ , ಕಾಲಂ ೯ ಅನ್ನುವ ಬ್ಲಾಗ್ ಗಳೂ ಇದ್ದರೂ ಕೂಡ ಸಂಪಾದಕೀಯ ನೆನಪಾಗೋದು ಯಾಕೆಂದರೆ ಮೀಡೀಯಾದೊಳಗಿನ ಹುಳುಕುಗಳನ್ನು ಎಳೆತರುವದಕ್ಕೆ ಪ್ರಾಧಾನ್ಯತೆ ಕೊಟ್ಟುದುದರಿಂದ.ಇದೊಂದು ತರ ಭೂತಕನ್ನಡಿಯೊಳಗಿನ ಹುಳುಕಿನ ಕಣಗಳನ್ನು ಹುಡುಕುವ ಕನ್ನಡಿಯಾಗಿತ್ತೂ.ಸಂಪಾದಕೀಯ ಮಂಕಾದ ದಿನಗಳಿಂದ ಮೀಡೀಯಾ ಹೇಳಿದ್ದೆ ನಿಜ ಎಂದು ನಂಬುವ ಪರಿಸ್ಥಿತಿಗೂ ಒಗ್ಗದೆ ಈ ಕಡೆ ಅದರೊಳಗಿನ ಹುಳುಕುಗಳನ್ನೂ ಪರಾಂಬರಿಸಲೂ ಆಗದೆ ನನ್ನಂತವನೂ ಮಂಕು. ಕೆಲವೊಂದು ಹುಳುಕುಗಳೂ ನಮ್ಮರಿವಿಗೆ ಬಂದರೂ ಬಿಚ್ಚಿಲಿಡಲಾಗದ ಪರಿಸ್ಥಿತಿ, ನೇರಾ ನೇರಾ ಎದುರು ಹಾಕಿಕೊಳ್ಳಲಾಗದ ನಮ್ಮೊಳಗಿನ ಕಪಟತನ,ಸ್ವಾರ್ಥತೆಯ ಮೆರೆಯುವಿಕೆ ಅಂತಲಾದರೂ ಅಂದುಕೊಳ್ಳೋಣವೆ??.ಇರಬಹುದು.


ಅನಾಮಿಕನಾಗಿದ್ದೂಕೊಂಡೆ ಸಂಪಾದಕೀಯಾ ಬ್ಲಾಗ್ ತೆರೆದಿಟ್ಟ ಸತ್ಯಗಳೆಲ್ಲವೂ ನಿರ್ಭಿಯತೆಯಿಂದ ಕೂಡಿದ್ದೂ ಮತ್ತು ವಾಸ್ತವ ಸತ್ಯಗಳಾಗಿತ್ತು.ಬಹುಶಃ ಆ ಅನಾಮಿಕತನ ಈ ಶಕ್ತಿಯನ್ನೂ ಅದರ ಬ್ಲಾಗ್ ನಿರ್ವಾಹಕನೀಗೆ ಕೊಟ್ಟಿರಬಹುದು, ನಾನೂ ಯಾವಾಗಲೂ ಹೇಳುತಿದ್ದ ಮತ್ತು ನಂಬಿಕೊಂಡಿದ್ದು.... ಮೀಡಿಯಾ ತನ್ನ ಹಿಂದಿರುವ ಕೈಗಳನ್ನೂ ತೋರಿಸದೆ ಆ ಮೀಡಿಯಾ ವಿಷಯಗಳು ಗ್ರಾಸಗೊಳ್ಳಲಾರವೂ ಎಂದು. ಆದರೆ ಇದೂ ಸಂಪೂರ್ಣ ಸುಳ್ಳು ಎಂಬುದನ್ನೂ ತೋರಿಸಿಕೊಟ್ಟಿದ್ದೂ ಸಂಪಾದಕೀಯಾ!!! ಕಾರಣ ವಿಷಯ ಸಾರಯುತವಾಗಿದ್ದಾಗ ವಿಷಯ ಪ್ರಾಮುಖ್ಯತೆ ಪಡೆಯುವದೆ ಹೊರತಾಗಿ ಅದರ ಹಿಂದಿರುವ ಕೈಗಳು ಕೇವಲ ಮೆಚ್ಚುವದಕ್ಕೆ ತಿಳಿದುಕೊಳ್ಳುವ ಕುತೂಹಲಕ್ಕಾಗಿ ಮಾತ್ರ ಸೀಮಿತಗೊಳ್ಳುತ್ತದೆ. ಸಂಪಾದಕೀಯದಿಂದ ನಾನು ಈಗಲೂ ನಿರೀಕ್ಷಿಸೋದು ಅದು ತೆರೆದಿಡಬಹುದಾದ ಸತ್ಯಗಳಿಗೆ ಮತ್ತೂ ಚರ್ಚೆಗಳಿಗಾಗಿಯೆ ಹೊರತು ಅದರ ಹಿಂದಿರುವ ಕೈಗಳನ್ನೂ ನೋಡುವದಕ್ಕಾಗಿಯಲ್ಲ. ಆದರೇನೂ ಮಾಡೋಣ ಇದು ಹಂಬಲವಾಗಿ ಉಳಿದಿದೆ ಹಾಗೂ ಈ ಹಂಬಲ ಅಳಿಯದೆ ಇರುತ್ತೆ ಕೂಡ.

೨೨ ಡಿಸೆಂಬರ್ 2011 ನಲ್ಲಿ ತನ್ನ ಒಂದು ವರುಷವನ್ನು ಪೂರೈಸುದುದಕ್ಕಾಗಿ ಸಂಪಾದಕೀಯದಲ್ಲಿ ಒಂದು ಪೋಷ್ಟ್ ಬೀಳುತ್ತೆ ಇದಾದ ನಂತರ ಕೊನೆಯ ಪೋಷ್ಟ್ ಕಂಡಿದ್ದು ೨ ಫೆಬ್ರವರಿ ೨೦೧೨. ಅಲ್ಲಿಂದ ನಂತರ ಒಂದೆ ಒಂದು ಪೋಷ್ಟ್ ಬಿದ್ದಿಲ್ಲ!!! ಕಾರಣಗಳೂ ಗೊತ್ತಿಲ್ಲ.ವರುಷದ ಪೋಷ್ಟಲ್ಲಿ ಸಂಪಾದಕೀಯನೆ ಹೇಳಿಕೊಂಡಂತೆ "ಸಾರ್ವಜನಿಕ ವಿಮರ್ಶೆ, ಟೀಕೆ, ಟಿಪ್ಪಣಿಗಳಿಂದ ಮೀಡಿಯಾ ಕ್ಷೇತ್ರವೊಂದು ಹೊರಗೆ ಉಳಿಯಬಾರದು ಎಂಬುದು ನಮ್ಮ ಕಾಳಜಿಯಾಗಿತ್ತು. ಆತ್ಮವಿಮರ್ಶೆ-ವಿಮರ್ಶೆಗಳಿಲ್ಲದ ಕ್ಷೇತ್ರಗಳು ಸರ್ವಾಧಿಕಾರದ ರೋಗವನ್ನು, ಮೂಲಭೂತವಾದಿ ಗುಣಗಳನ್ನು ಆವಾಹಿಸಿಕೊಂಡುಬಿಡುತ್ತವೆ. ಅದು ಸಮಾಜಕ್ಕೆ ಯಾವತ್ತೂ ಅಪಾಯಕಾರಿ. ಮೀಡಿಯಾವನ್ನು ಮೀಡಿಯಾಗಳೇ ವಿಮರ್ಶಿಸುವ ಆರೋಗ್ಯಕರ ಪರಿಪಾಠವೂ ಎಲ್ಲೂ ಕಾಣದ ಹಿನ್ನೆಲೆಯಲ್ಲಿ ನಾವು ಒಂದು ಸಣ್ಣ ಪ್ರಯತ್ನ ಶುರು ಮಾಡಿದೆವು".ಎಂದು ತನ್ನುದ್ದೇಶವನ್ನೂ ತಿಳಿಸುತ್ತಾ...........
"ಒಂದು ಸಮಾಧಾನದ ಸಂಗತಿಯೆಂದರೆ ಎಷ್ಟೋ ಸಂದರ್ಭಗಳಲ್ಲಿ ನಾವು ಬರೆದದ್ದು, ನೀವು ಬರೆದದ್ದು ಸಂಬಂಧಪಟ್ಟವರನ್ನು ನೇರವಾಗಿ ತಲುಪಿದವು. ಕ್ರಿಯೆಗೆ ಪ್ರತಿಕ್ರಿಯೆಗಳು ಆರಂಭಗೊಂಡವು. ಸಣ್ಣಪುಟ್ಟ ಬದಲಾವಣೆಗಳು ನಮ್ಮ ಕಣ್ಣೆದುರಿಗೇ ಘಟಿಸಿದವು. ಸಂಪಾದಕೀಯದ ಚರ್ಚೆಗಳು ಮೀಡಿಯಾ ಸಂಸ್ಥೆಗಳ ಮ್ಯಾನೇಜ್ ಮೆಂಟ್ ಸಭೆಗಳಲ್ಲೂ ಚರ್ಚೆಯಾಗತೊಡಗಿದವು.
ಇದೆಲ್ಲ ನಡೆಯುತ್ತಿದ್ದಂತೆ ನಮ್ಮ ಜವಾಬ್ದಾರಿಗಳೂ ಹೆಚ್ಚುತ್ತ ಹೋದವು. ಈ ಒಂದು ವರ್ಷದಲ್ಲಿ ನಾವು ಬರೆದ ಒಂದೇ ಒಂದು ಲೇಖನವನ್ನೂ ಡಿಲೀಟ್ ಮಾಡಿಲ್ಲ. ವೈಯಕ್ತಿಕ ತೇಜೋವಧೆ, ಕಪೋಲ ಕಲ್ಪಿತ ಆರೋಪಗಳು, ಪೂರ್ವಾಗ್ರಹ ಪೀಡಿತ ನಿಲುವುಗಳಿಂದ ಮುಕ್ತವಾಗಿಯೇ ಬರೆದ ಪರಿಣಾಮ ನಾವು ಬರೆದ ಯಾವುದನ್ನೂ ಹಿಂದಕ್ಕೆ ಪಡೆದುಕೊಳ್ಳುವಂಥ ಸಂದರ್ಭವೇ ಸೃಷ್ಟಿಯಾಗಲಿಲ್ಲ. ಈ ಎಚ್ಚರ ಮತ್ತು ಪ್ರಜ್ಞೆ ಇದ್ದ ಪರಿಣಾಮವಾಗಿಯೇ ಇದನ್ನು ನೀವು ನಿಮ್ಮದೆಂದು ಭಾವಿಸಿದಿರಿ. ಸದಾ ನಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರಿ.
ಮೀಡಿಯಾ ವಿಶ್ಲೇಷಣೆ ಒಮ್ಮೊಮ್ಮೆ ಮಗ್ಗುಲು ಬದಲಿಸಿ ಸಾಮಾಜಿಕ ಸಮಸ್ಯೆಗಳ ಕುರಿತ ಸಾಕಷ್ಟು ಚರ್ಚೆಗಳೂ ಇಲ್ಲಿ ನಡೆದಿವೆ. ಒಮ್ಮೊಮ್ಮೆ ಇದು ಪ್ರಜ್ಞಾಪೂರ್ವಕವಾಗಿಯೂ, ಮತ್ತೆ ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿಯೂ ನಡೆದಿದೆ. ಒಟ್ಟು ಫಲಿತ ಸಮಾಧಾನ ತಂದಿದೆ. ಕಪಟ ಜ್ಯೋತಿಷಿಗಳ ವಿರುದ್ಧ ನಡೆದ ಅಭಿಯಾನ, ಮಲ ಹೊರುವ ಪದ್ಧತಿ ವಿರುದ್ಧ ನಡೆದ ಜಾಗೃತಿ ಕಾರ್ಯ, ಮಡೆಸ್ನಾನ-ಪಂಕ್ತಿಬೇಧ-ಪ್ರಾಣಿಬಲಿ-ಭ್ರಷ್ಟಾಚಾರ ಇತ್ಯಾದಿ ವಿಷಯಗಳ ಕುರಿತ ಚರ್ಚೆಯೂ ಆರೋಗ್ಯಕರವಾಗಿ ನಡೆಯಿತು. ಕೆಲವೊಮ್ಮೆ ನಾವು ಬರೆದದ್ದನ್ನು ಆ ಕ್ಷಣಕ್ಕೆ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಓದುಗರು ಕ್ರಮೇಣ ಹೌದು, ನೀವು ಬರೆದಿದ್ದು ಸರಿಯಾಗಿತ್ತು ಎಂದು ಒಪ್ಪಿಕೊಂಡದ್ದನ್ನು ನಾವು ಗಮನಿಸಿದ್ದೇವೆ". ಎಂದೂ ತನ್ನ ಸಫಲತೆಯನ್ನೂ ಈ ತೆರನಾಗಿ ಈ ಪೋಷ್ಟ್ ತೆರೆದಿಡುತ್ತದೆ.

ಮೀಡಿಯಾ ಕುರಿತು ಸಾಕಷ್ಟು ಚರ್ಚೆಗಳನ್ನೂ ಮಾಡಿದ್ದೇವೆ ಇತರ ವಿಷಯಗಳನ್ನೂ ಕೈಗೆತ್ತಿಕೊಳ್ಳುತ್ತೇವೆ ಆದರೆ ನಮ್ಮ ಅದ್ಯತೆ ಮೀಡಿಯಾ ಅಗಿರುತ್ತದೆ ಅಂದ ಸಂಪಾದಕೀಯದ ಆ ಪೋಷ್ಟಿನಲ್ಲಿ ನನ್ನಂತವ ಕಂಡ ನಿರೀಕ್ಷೆಗಳೂ ಹಲವಾರೂ!!!, ಆದರೆ  ೨ ತಿಂಗಳ ನಂತರದಲ್ಲಿ ಯಾಕೋ ಸಂಪಾದಕೀಯಾ ಪತ್ತೆನೆ ಇಲ್ಲ, ಹೀಗಾಗಬಾರದಿತ್ತು. ಆದರೆ ಒಂದಂತೂ ಸತ್ಯ ಸಂಪಾದಕೀಯಾ ಹುಟ್ಟು ಹಾಕಿದ ಚರ್ಚೆಗಳೂ ಅದು ಸೂಚಿಸಿದ ದೃಷ್ಟಿಕೋನ ಸಾಯಲ್ಲ. ಮತ್ತೆ ಕೊಡವೆದ್ದು ಬಾ ಸಂಪಾದಕೀಯಾ ಅನ್ನುತ್ತಲೆ ಈ ತೆರನಾದ ಶಕ್ತಿಯುತ ಪರ್ಯಾಯ ಮಾಧ್ಯಮ ಸಮಾಜದ ಒಳಿತಿಗಾಗಿ ಇನ್ನಷ್ಟೂ ಮತ್ತಷ್ಟೂ ಹುಟ್ಟಲಿ ಅನ್ನುವದನ್ನೂ ಆಶಿಸೋಣ.


ಕೊನೆ ಪಂಚ್:-"ಸಂಪಾದಕೀಯದ ಗಂಭೀರ ಲೇಖನಗಳನ್ನು ಪುಸ್ತಕರೂಪದಲ್ಲಿ ತರುವ ಯೋಜನೆಯೂ ಇದೆ. ಇದಕ್ಕಾಗಿ ಪ್ರಕಾಶಕರ ಬೆಂಬಲವನ್ನು ಯಾಚಿಸುತ್ತಿದ್ದೇವೆ. ಪ್ರಕಾಶಕರು ಮುಂದೆ ಬಂದಲ್ಲಿ ಈ ಕಾರ್ಯವೂ ನಡೆಯಲಿದೆ."
-ಸಂಪಾದಕೀಯ.
ಪುಸ್ತಕ ಬಿಡುಗಡೆಯ ದಿನವಾದರೂ ತಮ್ಮ ಮುಖಾರವಿಂದದ ದರ್ಶನ, ಆ ಕೀ ಬೋರ್ಡ್ ಕುಟ್ಟುವಿಕೆಯ ಕೈಗಳ ಸ್ಪರ್ಷವನ್ನು ನಿರೀಕ್ಷಿಸಬಹುದೇನೊ??.ಸಂಪಾದಕೀಯ ಎಚ್ಚರ!!!ಆ ದಿನ ನಿಮ್ಮ ಕೈ ಬೆಚ್ಚಗಾಗಿಸುವ ಜನರೂ ಇರಬಹುದು :)


ಸಂಪಾದಕೀಯಾ ಬ್ಲಾಗ್ ಕೊಂಡಿಗೆ ಇಲ್ಲಿ ಕ್ಲಿಕ್ಕಿಸಿ

Wednesday, July 4, 2012

Jump Towards the joy :) -----------------------------------

ನೊಂದಿದೆ ಮನವೆಂದು
ಹೊಟ್ಟೆಗೆ ಹಿಟ್ಟಿಲ್ಲದೆ ಕೂರಕ್ಕಾಗುತ್ತಾ??
ನಂಬಿಕೆಯ ಕಳಕೊಂಡ ಮೇಲೆ
ಸಂಬಂಧವ ಪೊರೆಯಲಿಕ್ಕಾಗುತ್ತಾ??
ಅನಗತ್ಯ ಬಂಧನವ ಕಳಚಿ
ನಭಕ್ಕೆ ಜಿಗಿಯಲು
ಗಟ್ಟಿ ನಿರ್ಧಾರವ ತಳೆಯದೆ
ಕೊರಗುವದಕ್ಕಾಗುತ್ತಾ?
ದುಗುಡವ ಸರಿಸಿ.....
ನೆಮ್ಮದಿಯತ್ತ ನೆಗೆಯ ಬೇಕು ನಾ
ಇದ್ದುದನ್ನು ಉಳಿಸಿಕೊಂಡಾದರೂ ಸೈ.
ಕಡಿದುಕೊಂಡಾದರೂ ಸೈ.


Tuesday, July 3, 2012

ಗೆಳೆಯನಿಗೆ ಒಲಿದ ಪಿ ಸಾಯಿನಾಥ್ ಪ್ರಶಸ್ತಿ ಮೂಲಕ ಪತ್ರಿಕೋದ್ಯಮದತ್ತ ಸಣ್ಣದೊಂದು ನಿರೀಕ್ಷೆ!!!

ಹಿಂದಿ, ಒರಿಯಾ ಮತ್ತು ತೆಲುಗು ಭಾಷೆಗೆ ಒಲಿದ ಪಿ. ಸಾಯಿನಾಥ್ ಪ್ರಶಸ್ತಿ ಈ ಸಾರಿ ಕನ್ನಡಕ್ಕೆ ಲಭಿಸಿದೆ. ಕೃಷಿ ರಂಗದಲ್ಲಿ ಆಕ್ಟಿವಿಸಂ ಜೊತೆ ಜೊತೆಗೆ ಬರಹ ಮೂಲಕವಾಗಿ ಕೆಲಸ ಮಾಡುತ್ತಿರುವ ಗಾಯತ್ರಿ ಹಾಗೂ ಮಲ ಹೊರುವ ಪದ್ದತಿಯ ವಿರುದ್ದ ಕೆಲಸ ಮಾಡುತ್ತಿರುವ ಪತ್ರಕರ್ತ ಸಂಶೋಧಕ ಮಿತ್ರ ದಯಾನಂದ್ ಮಡಿಲಿಗೆ ಈ ಪ್ರಶಸ್ತಿ ಸಂದಿದೆ. ದಾಖಲೆ ಕಾನೂನಿನ ಮೂಲಕ ಸತ್ತೆ ಹೋಗಿದೆ ಎಂದು ತೋರಿಸಲ್ಪಟ್ಟ ಮಲ ಹೊರುವ ಪದ್ದತಿಯು ಇನ್ನೂ ಜೀವಂತವಿರುವದನ್ನು ತೋರಿಸಿಕೊಟ್ಟ ದಯಾನಂದ್ ಹಾಗೂ ಬಳಗದವರ ಕಾರ್ಯವೈಖರಿಯನ್ನು ಹತ್ತಿರದಲ್ಲೆ ಬಲ್ಲೆನಾದ್ದುದ್ದರಿಂದ ಪಿ. ಸಾಯಿನಾಥ್ ಪ್ರಶಸ್ತಿಯ ಆಶಯಗಳಿಗೆ ಪೂರಕವಾದ ವ್ಯಕ್ತಿಗಳಿವರು ಅನ್ನುವದರಲ್ಲಿ ಎರಡು ಮಾತಿಲ್ಲ. ನಾನು ದೂರದಿಂದಲೆ ನೋಡಿ ಗೌರವಿಸುತಿದ್ದ ಮೇರು ವ್ಯಕ್ತಿ ದೇವನೂರು ಮಹಾದೇವ್ ಅವರು ಈ ಪ್ರಶಸ್ತಿಯನ್ನು ಕೊಡಮಾಡಿದ್ದು ಕೂಡ ಹೆಮ್ಮೆಯ ವಿಷಯವೆ ಸರಿ.


"ಪುಸ್ತಕ ಕೊಳ್ಳಲು ಬೇಕಾದ 300 ರೂ ಇಲ್ಲದ ಜರ್ನಲಿಸಂ ಕಲಿಕೆಯ ದಿನಗಳಲ್ಲಿ ರೂಮಿಂದ ರೂಮಿಗೆ ಸರಿದಾಡುತಿದ್ದ ಹಾಗೂ ಕೆಲವೋಮ್ಮೆ ಕದ್ದು ಓದುತಿದ್ದ ಪುಸ್ತಕ ಅಂದ್ರೆ ಪಿ. ಸಾಯಿನಾಥ್ ಅವರ "Everybody loves a good drought " ಪುಸ್ತಕ. ಸುಮಾರು ೩೪ ಬಾರಿ ಮುದ್ರಣಗೊಂಡು ಹಲವಾರು ಭಾಷೆಗೆ ಅನುವಾದಗೊಂಡಿರುವ ಈ ಪುಸ್ತಕ ಪತ್ರಿಕೋದ್ಯಮ ಮಂದಿಗೆ ದಾರಿ ತೋರುವ ಒಂದು ಪಠ್ಯ ಅಂದರೆ ತಪ್ಪಿಲ್ಲ, ಜರ್ನಲಿಷ್ಟ್ ಅಂತಾದರೆ ಪಿ ಸಾಯಿನಾಥ್ ತರದಲ್ಲಿ ಮುಂದುವರಿಯಬೇಕು", ದಯಾ ಯಾವತ್ತೂ ಹೇಳುತಿದ್ದ ಮಾತಿದು.ತನ್ನ ಮುಂದಿನ ನಡೆಯನ್ನೂ ಆಯ್ದುಕೊಂಡಿದ್ದು ಈ ನಿಟ್ಟಿನಲ್ಲೆ, ಬಹುಶಃ ತನ್ನ ಮಾರ್ಗದರ್ಶಿಯ ಹೆಸರಲ್ಲೆ ಇರುವ ತನ್ನ ಮಾರ್ಗದರ್ಶಿ ಪುಸ್ತಕದಿಂದಾಗಿ ಬಂದ ದುಡ್ಡಲ್ಲೆ ಹುಟ್ಟಿರುವ ಪಿ. ಸಾಯಿನಾಥ್ ಪ್ರಶಸ್ತಿ ತನಗೆ ಮುಂದೊಂದು ದಿನ ಸಿಗಲಿದೆಯೆಂದು ನಿರೀಕ್ಷೆ ಮಾಡಿರಲಾರರು.ಇಂತಿರಬೇಕಾದರೂ ಹುಡುಕಿಕೊಂಡು ಬಂದ ಪ್ರಶಸ್ತಿಯನ್ನ ಪಡೆಯುವ ಗೆಳೆಯನ ಖುಷಿಯಲ್ಲಿ ನಾವೂ ಭಾಗಿಯಾಗಿರಬೇಕಿದ್ದದ್ದೂ ಕರ್ತವ್ಯ ಅನಿಸಿಯೆ ಜುಲೈ 1 ಪತ್ರಿಕೋದ್ಯಮ ದಿನದ ಆ ಸುಂದರ ಕಾರ್ಯಕ್ರಮದಲ್ಲಿ ನಾವೂ ಭಾಗಿಯಾಗಿದ್ದೂ ಹಾಗೂ ದೇವನೂರು ಮಹಾದೇವ್ ಹಾಗೂ ಪಿ ಸಾಯಿನಾಥ್ ಅವರಂತಹ ಲೆಜೆಂಡ್ ಗಳನ್ನು ಕಣ್ತುಂಬಿಕೊಂಡಿದ್ದು.

ಯಾವುದೋ ಒಂದು ಮಾಧ್ಯಮ ಸಂಸ್ಥೆಗೆ ಸೇರಿಕೊಂಡು ದುಡಿದು ಸಂಪಾದನೆ ಮಾಡುವಂತದ್ದು ಅತ್ಯಂತ ಸೇಫ್ ವೇ ಫಾರ್ ಲೀಡಿಂಗ್ ಲೈಫ್ ಅಂತ ತಿಳುಕೊಂಡು ಹೆಜ್ಜೆ ಇಡುತ್ತಿರುವ ಪತ್ರಕರ್ತರ ಬಳಗಾನೆ ದೊಡ್ಡದು. ಹೀಗಿರಬೇಕಾದರೆ ಪ್ರೀ ಲಾನ್ಸ್ ಜರ್ನಲಿಸಂ ಮೂಲಕ ತಾನು ಮಾಡ ಹೊರಟಿರುವ ಕಾರ್ಯಗಳಿಗೆ ಎಲ್ಲೂ ತೊಡಕಾಗದಂತೆ ಹೇಳಬೇಕಾದ ಮಾತು ಕಟ್ಟುಪಾಡುಗಳಿಗೊಳಪಟ್ಟು ಮರೆಯಾಗಬಾರದೆಂಬ ಸ್ಪಷ್ಟತೆಯೊಳಗೆ ಹಣದ ಮೋಹವ ಬದಿಗಿಟ್ಟು ಸಾಮಾಜಿಕ ದೃಷ್ಟಿಕೋನದೊಂದಿಗೆ ಆಕ್ಟಿವಿಸಂ ಜೊತೆ ಜೊತೆಗೆ ಕೆಲಸ ಮಾಡುವ ಪತ್ರಕರ್ತರ ಬಳಗ ಬೆರಳೆಣಿಕೆಯಷ್ಟು.ದಯಾ ಆರಿಸಿಕೊಂಡಿದ್ದು ಪ್ರೀ ಲಾನ್ಸ್ ಜರ್ನಲಿಸಂ ಅನ್ನು. ಪಿ ಸಾಯಿನಾಥ್ ಹೇಳುವಂತೆ ಅವರೂ ಕೂಡ ೧೩ ವರುಷ ಮಾಡಿದ್ದು ಪ್ರೀ ಲಾನ್ಸ್ ಜರ್ನಲಿಸಂನನ್ನೆ.ಬಹುಶಃ ಇವತ್ತು ಕೋರ್ಟ್ ಸರ್ಕಾರಕ್ಕೆ ಸಫಾಯಿ ಕರ್ಮಾಚಾರಿ ವಿಷಯದಲ್ಲಿ ಅಧಿಕಾರಿ ಬಳಗವನ್ನು ಮ್ಯಾನ್ ಹೋಲ್ಗಳ ಒಳಗಿಳಿದು ಚಿತ್ರಿಕರಿಸಿ ಅಂತ ಛೀಮಾರಿ ಹಾಕುತ್ತಿರುವದರ ಹಿಂದೆ ದಯಾ ಮತ್ತು ಅವರ ಬಳಗದವರ ಶ್ರಮ ದೊಡ್ಡದು.ತಾರ್ಕಿಕವಾಗಿ ಅಂತ್ಯ ಕಾಣುವವರೆಗೆ ನಾವೂ ಈ ಬಗ್ಗೆ ಮುಂದುವರಿಯಲೆ ಬೇಕಾಗಿದೆ ರಾಘೂ, ಯಾಕೋ ನನ್ನ ಸುಖ ಸಂತೋಷಗಳಿಗಾಗಿ ಆ ಜನಗಳ ಕಷ್ಟಗಳನ್ನೂ ಅವರುಗಳ ಜೊತೆಗೆ ಇದ್ದೂ ನಮ್ಮವ ಅನಿಸಿಕೊಂಡ ಮೇಲೆ ಬಿಟ್ಟು ಕೊಡಲಾಗುತ್ತಿಲ್ಲ. ಕನಿಷ್ಟ ೩ ರಿಂದ ೪ ವರುಷ ನಾನು ನನ್ನ ಬಳಗ ಈ ನಿಟ್ಟಲ್ಲಿ ಕೆಲಸ ಮಾಡಲೇಬೇಕು ಅನ್ನುವ ದಯಾ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಪ್ರತಿಕ್ರಿಯೆಗಂತ ಉಳಿಯೋದು ಒಂದು ಮೆಚ್ಚುಗೆಯ ನೋಟವಷ್ಟೆ. ಈ ಪ್ರಶಸ್ತಿ ನನ್ನ ಟೀಂ ಗೆ ಸಂದಿದ ಗೌರವ ಅನ್ನುತ್ತಲೆ ನನ್ನ ಜವಬ್ದಾರಿ ಬದ್ದತೆ ಕಾಯ್ದುಕೊಳ್ಳುವಲ್ಲಿ ಈ ಪ್ರಶಸ್ತಿ ಸಹಕಾರಿಯಾಗಲಿದೆ ಅನ್ನುವ ದಯಾ ಮಾತುಗಳಲ್ಲಿ ನನಗೆ ಕಾಣುವದು ಸಂತಸಕ್ಕಿಂತಲೂ ಮಿಗಿಲಾದದ್ದೂ ಪಿ ಸಾಯಿನಾಥ್ ಅವರೆಡೆಗಿರುವ ಗೌರವದ ಗುರು ಸಮರ್ಪಣಾ ಭಾವ ಹಾಗೂ ಸರಳತೆ.

ಸಂಪಾದಕೀಯ, ವರ್ತಮಾನದಂತ ಬ್ಲಾಗ್ ಮೂಲಕ ಸಣ್ಣದಾಗಿ ತೊಡಗಿಕೊಂಡು ಎಲ್ಲಾ ಮಹತ್ತರ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಕ್ಕೆ ತನ್ನ ಕೆಲಸ ಕಾರ್ಯಗಳನ್ನೂ ತಲುಪಿಸುವಲ್ಲಿ ದಯಾ ಯಶಸ್ವಿಯಾಗಿದ್ದು ನಮಗೆಲ್ಲರೀಗೂ ಗೊತ್ತೆ ಇರುವಂತದ್ದೂ ಅಷ್ಟೇ ಏಕೆ ಪೇಸ್ ಬುಕ್ ಅಂತ ಸಾಮಾಜಿಕ ತಾಣವನ್ನು ಮಾಧ್ಯಮವಾಗಿ ಬಳಸಿಕೊಂಡು CNN-IBN ಅಂತ ರಾಷ್ಟ್ರೀಯಾ ಛಾನಲ್ಗಳಿಗೆ ಈ ಮಲಹೊರುವ ಪದ್ದತಿ ಇಶ್ಯೂ ಅನ್ನು ತೆಗೆದುಕೊಂಡು ಹೋಗಿ ಚರ್ಚೆಯನ್ನು ಹುಟ್ಟು ಹಾಕಿದವರೂ ದಯಾ. ಕೆಂಡಸಂಪಿಗೆ ಎಂಬ ಬ್ಲಾಗಿನಲ್ಲಿ ರಸ್ತೆ ನಕ್ಷತ್ರ ಅನ್ನೋ ಕಾಲಂ ಮೂಲಕ ಹಲವು ಲೈಫುಗಳನ್ನು ಕಟ್ಟಿ ಕೊಟ್ಟ ದಯಾ, ನಮ್ಮನ್ನೆ ನಾಚಿಸುವಂತೆ ಮಾಡಿದ್ದೂ ನಾವೆಂತ ಸಮಾಜದಲ್ಲಿದ್ದೇವೆ ಅನ್ನುವ ಯೋಚನೆಗೆ ತೆರೆದಿಟ್ಟಿದ್ದು ಹಳೆಯ ಮಾತು. ಪ್ರಶಸ್ತಿ ದಿನದ ಸಂತೋಷಕ್ಕೆ ಉಡುಗೋರೆ ಅಂತಲೋ ಏನೋ ಅದೆ "ರಸ್ತೆ ನಕ್ಷತ್ರ" ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಹೃದಯರೊಬ್ಬರು ಕೇಳಿಕೊಂಡಿದ್ದು ದಯಾ ಸಮ್ಮತಿ ಸೂಚಿಸಿದ್ದು ನಡೆಯಿತು.ಗೆಳೆಯರಾಗಿ ನಾವುಗಳು ಖುಷಿಪಡಲು ಇಷ್ಟಿಷ್ಟೆ ಹಿಡಿಯಾದ ವಿಷಯಗಳೆ ಸಾಕು.ಯಾವನಿಗೊತ್ತು ರಸ್ತೆ ನಕ್ಷತ್ರ ಬದುಕುಗಳ ತೆರೆದಿಡುವ ದಯಾರ ಹಿಂದಿರುವ ಕಳಕಳಿಯು ಇನ್ನೆಷ್ಟು ಬದುಕುಗಳಿಗೆ ಆಸರೆಯಾಗಬಲ್ಲದೋ ಏನೊ?. ಇವೆಲ್ಲವನ್ನೂ ಹೇಳಿದ ಕಾರಣ ಇಷ್ಟೆ, ದಯಾ ಒಬ್ಬ ಪತ್ರಕರ್ತನಾಗಿ ತನ್ನ ಆಶಯಗಳಿಗೆ ಮಾಧ್ಯಮವನ್ನು ಬಳಸಿಕೊಂಡ ರೀತಿ ಅಚ್ಚರಿಪಡಿಸುವಂತದ್ದೂ.ಯಾವುದೇ ಮಾಧ್ಯಮವಾಗಲಿ ಬಳಸಿಕೊಳ್ಳುವಂತೆ ಬಳಸಿಕೊಂಡರೆ ವಿಷಯ ತಲುಪಬೇಕಾದ್ದಲ್ಲಿ ತಲುಪುತ್ತದೆ ಅನ್ನುವದನ್ನು ಮೇಲಿನೆಲ್ಲವುದರಿಂದ ನಾನು ದಯಾರನ್ನ ನೋಡಿ  ತಿಳಿದುಕೊಂಡೆ ಅನ್ನುವದು ಸತ್ಯ

ಮಾಧ್ಯಮ ಚೌಕಟ್ಟಿನೊಳಗೆ ಇದ್ದುಕೊಂಡು ಹಲವು ಉತ್ತಮ ಕೆಲಸ ಮಾಡುವ ಪತ್ರಕರ್ತರೂ ಇಲ್ಲವೆಂದಲ್ಲ.ಆದರೆ ಮಾಧ್ಯಮ ಸಂಸ್ಥೆಗೆ ಈ ಬಗ್ಗೆ ಎಷ್ಟೂ ಕಾಳಾಜಿ ಇರುತ್ತೆ ಅನ್ನುವದೂ, ವರುಷಾನುಗಟ್ಟಲೆ ನ್ಯಾಯಾಲಯ ಸುತ್ತಾಟ ನ್ಯಾಯ ಕೊಡಿಸುವಲ್ಲಿನ ಬದ್ಧತೆಯನ್ನೂ ಈ ಸಂಸ್ಥೆಗಳೂ ಎಷ್ಟರ ಮಟ್ಟಿಗೆ ಹೊಂದಿವೆ ಎಂಬುದರ ಮೇಲೆ ಪತ್ರಕರ್ತರ ಈ ತೆರನಾದ ಕೆಲಸ ನಿರ್ಧಾರಗೊಳ್ಳುತ್ತದೆ. ಈ ತರದ ಸಂಸ್ಥೆಗಳ ಸಂಖ್ಯೆಯು ಹಾಗೂ ಈ ತರನಾದ ಮನೋಭಾವ ಹೊಂದಿರುವ ಪತ್ರಕರ್ತರ ಬಳಗನೂ ವಿರಳವಾಗುತ್ತಿದೆ ಅನ್ನುವದೂ ಸತ್ಯ.ಈ ರೀತಿಯಲ್ಲಿ ಬದಲಾವಣೆಯನ್ನು ನಿರಿಕ್ಷಿಸಿದಾಗ ದಯಾ ಮೂಲಕ, ಗಾಯತ್ರಿ ಅವರ ಮೂಲಕ ಕನ್ನಡದ ಮೊತ್ತ ಮೊದಲ ಪಿ ಸಾಯಿನಾಥ್ ಪ್ರಶಸ್ತಿ ಮೂಲಕ ಕೊಂಚವಾದರೂ ಬದಲಾವಣೆಯತ್ತ ಇವುಗಳು ಸ್ಪೂರ್ತಿಯಾಗಬಲ್ಲುದೇನೊ?ಈ ರೀತಿಯ ಒಂದು ಆಶಾವಾದವನ್ನು ಇಟ್ಟು ಕೊಳ್ಳಬಹುದೇನೊ!!!. ಬಹುಶಃ ಪಿ. ಸಾಯಿನಾಥ್ ಪ್ರಶಸ್ತಿಯಲ್ಲದೆ ಬೇರಾವುದೇ ಮೀಡಿಯಾ ಪ್ರಶಸ್ತಿ ಬಗ್ಗೆ ಮೇಲಿನ ಆಶಾವಾದವನ್ನು ತೋರ್ಪಡಿಸಿದ್ದರೆ ಅಭಾಸವೆನಿಸುತಿತ್ತು. ಆದರೆ ಪಿ. ಸಾಯಿನಾಥ್ ಪತ್ರಿಕೋದ್ಯಮದ ಮಂದಿಯ ದಾರಿದೀಪ.ಆ ಪ್ರಶಸ್ತಿಗೆ ಸಲ್ಲುವ ಗೌರವ ಅಂತದ್ದೂ ಅನ್ನುವದೂ ನಮ್ಮೆಲ್ಲರಿಗೂ ತಿಳಿದ ವಿಚಾರ. ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರು ಈ ಪ್ರಶಸ್ತಿಯು ಪ್ರತಿ ವರುಷ ಸಿಗುವಂತೆ ಕನ್ನಡಕ್ಕೆ ಅನುವಾದಗೊಂಡಿರುವ "Everybody loves a good drought "(ಬರ ಅಂದ್ರೆ ಎಲ್ಲಾರೀಗೂ ಇಷ್ಟ)ಪ್ರತಿಗೆ ಸಾಯಿನಾಥ್ ಅವರಿಗೆ  ಕೊಡಬೇಕಾಗಿದ್ದ ಗೌರವಧನದ ಮೂಲಕ ಕರ್ನಾಟಕದಲ್ಲಿ ಸ್ಥಾಪಿತಗೊಳ್ಳುತ್ತಿದೆ ಅಂದಿದ್ದು ಕನ್ನಡದ ಪತ್ರಿಕೋದ್ಯಮಕ್ಕೆ ಒಂದು ಟಾನಿಕ್ ಆಗಿ ಒದಗಲಿ. ಬಡವರ ಹಸಿವೂ, ಕಷ್ಟ, ಸಾಮಾಜಿಕ ದೃಷ್ಟಿಕೋನದಡಿಯಲ್ಲಿ ಎಲ್ಲಾ ಪತ್ರಕರ್ತರೂ ತಮ್ಮನ್ನೂ ತಾವೂ ತೊಡಗಿಸಿಕೊಳ್ಳುವಲ್ಲಿ  ಇದು ಸಹಕಾರಿಯಾಗಲೆಂದು ಆಶಿಸೋಣ.


ಚಿತ್ರ ಕೃಪೆ:-ಅವಧಿ
 ಅವಧಿಯಲ್ಲಿ ಪ್ರಕಟವಾದ ಈ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ